ಎಸ್. ಕುಮಾರ್ ಬರೆದ ರೆಹಮಾನ್ ಬಗೆಗಿನ ಲೇಖನ ಖುಷಿ ಕೊಡುವಂಥದ್ದು. ನವಿರಾದ ಶೈಲಿಯ ಲೇಖನವನ್ನು ಇಲ್ಲಿ ಹಾಕಿದ್ದೇವೆ. ಓದಿ ಅಭಿಪ್ರಾಯ ತಿಳಿಸಿ. ಇದು ಸ್ಲಂ ಡಾಗ್ ಮಿಲಿನೇರ್ ಗೆ ಆಸ್ಕರ್ ಬಂದ ಸಂದರ್ಭದಲ್ಲಿ ಬರೆದದ್ದು.

ನೀವು ನೋಡದ ರೆಹಮಾನ್
ದೇವ ದೂತ!
ಇದು ನಲುವತ್ತನಾಲ್ಕು ವರ್ಷಗಳ ಹಿಂದಿನ ಕತೆ. ತಮಿಳು ಸಂಗೀತ ಸಂಯೋಜಕ ಆರ್.ಕೆ.ಶೇಖರ್ ಮತ್ತು ಕಸ್ತೂರಿ ದಂಪತಿಗಳ ಮಡಿಲಲ್ಲಿ ಆಗಲೇ ಒಬ್ಬ ಮಗಳಿದ್ದಳು. ಅದೇ ಹೊತ್ತಿಗೆ ಅವರಿಗೊಂದು ಭವಿಷ್ಯನುಡಿ ಹೇಳಿತ್ತು. ನಿಮಗೊಬ್ಬ ಪುತ್ರ ಜನಿಸುತ್ತಾನೆ. ಆತನ ಹೆಸರು ಇಡೀ ಜಗತ್ತಲ್ಲೇ ಬೆಳಗುತ್ತದೆ. ಆತನೂ ಒಬ್ಬ ಸಂಗೀತಗಾರನಾಗುತ್ತಾನೆ. ಆತನ ಖ್ಯಾತಿ ಆಕಾಶದೆತ್ತರ ಮುಟ್ಟುತ್ತದೆ.
ಮರುವರ್ಷ ಶೇಖರ್ ಅವರಿಗೆ ಮಗ ಹುಟ್ಟಿದ! ಸಂಗೀತದ ವಾತಾವರಣವೇ ತುಂಬಿದ ಮನೆಯಲ್ಲಿ ಆ ಹುಡುಗ ಸ್ವರಗಳ ಜತೆ ಬೆಳೆಯಲಾರಂಭಿಸಿದ.

ನಾಲ್ಕು ವರ್ಷದವನಿದ್ದಾಗ ಒಮ್ಮೆ ಶೇಖರ್ ಮಗನನ್ನು ಖ್ಯಾತ ಸಂಗೀತ ನಿರ್ದೇಶಕ ಸುದರ್ಶನ್ ಬಳಿ ಕರೆದೊಯ್ದಿದ್ದರು. ಅವರು ಆಗಲೇ ಶೇಖರ್ ಪುತ್ರನ ಬಗ್ಗೆ ಕೇಳಿ ತಿಳಿದಿದ್ದರು. ಪುಟ್ಟ ಹುಡುಗನನ್ನು ನೋಡುತ್ತಿದ್ದಂತೆಯೇ ಶೇಖರ್‌ಗೆ ‘ನಿನ್ನ ಮಗ ಯಾವ ವಾದ್ಯವನ್ನಾದರೂ ನುಡಿಸಬಲ್ಲನಂತೆ. ಎಲ್ಲಿ ನೋಡೇ ಬಿಡೋಣ’ ಎಂದು ಹಾರ್ಮೋನಿಯಂನಲ್ಲಿ ಅತ್ಯಂತ ಕ್ಲಿಷ್ಟವಾದ ರಾಗವನ್ನು ನುಡಿಸಿದರು. ಹಾರ್ಮೋನಿಯಂ ಅನ್ನು ಮುಚ್ಚಿ ಹುಡುಗನತ್ತ ಸರಿಸಿದರು. ಶೇಖರ್ ಆತಂಕದಲ್ಲಿ ಮಗನತ್ತ ನೋಡಿದರು. ಆತ ಒಂದಿಷ್ಟೂ ಆತಂಕವಿಲ್ಲದೆ ಸುದರ್ಶನ್‌ರಂತೆ ನುಡಿಸಿ ಅಲ್ಲಿದ್ದವರನ್ನೆಲ್ಲಾ ಬೆರಗಾಗಿಸಿಬಿಟ್ಟ.
*****
ಭವಿಷ್ಯ ಸತ್ಯವಾಗಿದೆ. 1965 ರಲ್ಲಿ ಶೇಖರ್ ದಂಪತಿಗಳಿಗೆ ಹೇಳಲಾದ ಆ ಭವಿಷ್ಯದ ಮಾತು ಸತ್ಯವಾಗಿದೆ. ನಾಲ್ಕು ವರ್ಷದವನಿದ್ದಾಗಲೇ ಅನುಭವಿ ಸಂಗೀತ ನಿರ್ದೇಶಕನನ್ನು ಬೆರಗಾಗಿಸಿದ ಅಂದಿನ ದಿಲೀಪ್ ಕುಮಾರ್, ಇಂದಿನ ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ರೆಹಮಾನ್.

ಸಂಗೀತವನ್ನು ಆತ್ಮಗತ ಮಾಡಿಕೊಂಡೇ ಹುಟ್ಟಿದಂತಿರುವ ರೆಹಮಾನ್ ಭಾರತದ ಹೆಮ್ಮೆಯ ಸಂಗೀತ ಪ್ರತಿಭೆ. ಕಳೆದ ಒಂದೂವರೆ ದಶಕದಲ್ಲಿ ನಾಲ್ಕು ರಾಷ್ಟ್ರೀಯ ಪುರಸ್ಕಾರಗಳು, 12 ಸ್ಕ್ರೀನ್ ಪ್ರಶಸ್ತಿ, 21 ಫಿಲ್ಮ್‌ಫೇರ್, ಪದ್ಮಶ್ರೀ ಮುಂತಾದ ಗೌರವಗಳು ರೆಹಮಾನ್ ಸಾಧನೆಯನ್ನು ಹೇಳುತ್ತವೆ.

ಆದರೆ ಅದಕ್ಕಿಂತ ಹೆಚ್ಚಿನ ಗೌರವವನ್ನು ಆತನ ಸಂಗೀತ ಕೇಳಿದ ಲಕ್ಷಾಂತರ ಹೃದಯಗಳು ನೀಡಿವೆ. ಭಾಷೆಯ ಮಿತಿಯೇ ಇಲ್ಲದ ಸಂಗೀತ ರೆಹಮಾನ್‌ರನ್ನು ದೇಶ-ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದೆ. ‘ಮೋಜಾರ್ಟ್ ಆಫ್ ಮದ್ರಾಸ್’ ಎಂದು ಹೆಮ್ಮೆಯಿಂದ ಕರೆದಿದೆ.
*****
rehman
ಕತೆ ಇನ್ನೂ ಇದೆ ಕೇಳಿ: ದಿಲೀಪ್ ಕುಮಾರನಿಗೆ ಒಂಭತ್ತು ವರ್ಷ ತುಂಬಿದಾಗ ತಂದೆ ಶೇಖರ್ ತೀರಿಕೊಂಡರು. ಅದೇ ದಿನ ಶೇಖರ್ ಸಂಗೀತ ನಿರ್ದೇಶಕರಾಗಿದ್ದ ಮೊದಲ ಚಿತ್ರ ಬಿಡುಗಡೆಯಾಗಿತ್ತು!

ಇದರಿಂದ ದಿಲೀಪ್ ಕುಟುಂಬಕ್ಕೇನೂ ಪ್ರಯೋಜನವಾಗಲಿಲ್ಲ. ಬದಲಿಗೆ ಕಷ್ಟದ ದಿನಗಳು ಶುರುವಾದವು. ತಾಯಿ ಕಸ್ತೂರಿ ಹಗಲು ರಾತ್ರಿ ದುಡಿಯಬೇಕಾಯಿತು. ಅದೇ ಕುಟುಂಬದಲ್ಲಿ ಕಸ್ತೂರಿಯ ತಂದೆ-ತಾಯಿ ಜತೆಗೆ ಸಹೋದರಿಯರೂ ಇದ್ದರು. ಮಗ ದಿಲೀಪ್ ದುಡಿಯಲೇ ಬೇಕಿತ್ತು. ಮನೆಯಲ್ಲಿದ್ದ ಅಪ್ಪನ ಸಂಗೀತ ವಾದ್ಯಗಳನ್ನು ಬಾಡಿಗೆ ಕೊಟ್ಟರು. ಬಂದ ಹಣ ಕುಟುಂಬಕ್ಕೆ ಕೊಂಚ ನೆರವಾಯಿತು.
ದಿಲೀಪ್ 11 ವರ್ಷದವನಿದ್ದಾಗ ಶಾಲೆಗೆ ಹೋಗುವುದು ಕಡಿಮೆಯಾಯಿತು. ಹಣ ಸಿಗುತ್ತದೆ ಎಂಬ ಕಾರಣಕ್ಕೆ ಮಗನನ್ನು ತಾಯಿ ಕಸ್ತೂರಿ ಆಗಾಗ ಸಂಗೀತದ ರೆಕಾರ್ಡಿಂಗ್‌ಗೆ ಕಳಿಸುತ್ತಿದ್ದರು.

15ನೇ ವರ್ಷಕ್ಕೆ ಬರುವ ಹೊತ್ತಿಗೆ ಶಾಲೆಗೆ ಹೋಗುವುದು ಅಸಾಧ್ಯವಾಯಿತು. ಟಿವಿ ಶೋಗಳು, ಇತರೆ ಸಂಗೀತ ಕಾರ್‍ಯಕ್ರಮಗಳಲ್ಲಿ ಗಿಟಾರ್, ಪಿಯಾನೋ ನುಡಿಸುವುದಕ್ಕಾಗಿ ದಿಲೀಪ್ ಹೋಗುವುದು ಹೆಚ್ಚಾಯಿತು. ಇದು ಅನಿವಾರ್ಯವೂ ಆಗಿತ್ತು. ಕ್ಯಾನ್ಸರ್ ಪೀಡಿತ ತಾಯಿ, ತಂಗಿ ಮತ್ತು ತುಂಬಿದ ಕುಟುಂಬವನ್ನು ಸಲಹಬೇಕಿತ್ತು.

ಇತ್ತ ರೆಹಮಾನ್ ಸಂಗೀತ ಕಾರ್‍ಯಕ್ರಮಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ ವಾದ್ಯಗಳನ್ನು ನುಡಿಸುತ್ತಾ ಅಂದಿನ ಚಿಂತೆಯನ್ನು ನೀಗುತ್ತಿದ್ದ. ಅತ್ತ ತಾಯಿ, ಕಂಡ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಅಲೆದು ತನ್ನ ಬವಣೆಯನ್ನು ನೀಗುವಂತೆ ಪ್ರಾರ್ಥಿಸುತ್ತಿದ್ದರು.
*****
ಆ ದಿನವೂ ಬಂತು. ಸೂಫಿ ಸಂತ ಕರಿಮುಲ್ಲಾ ಶಾಹ್ ಕದಿರಿ ದಿಲೀಪ್ ಬದುಕಿನ ಬಹುದೊಡ್ಡ ತಿರುವಿನ ಸೂಚನೆ ಕೊಟ್ಟರು. ಇನ್ನು ಹತ್ತು ವರ್ಷಗಳಲ್ಲಿ ದಿಲೀಪ್ ಬದುಕು ಅಸಾಮಾನ್ಯ ಉನ್ನತಿಯನ್ನು ಕಾಣುತ್ತದೆಂದು ಹೇಳಿದರು.

ಹಾಗೇ ಆಯಿತು. ದಿಲೀಪ್ ಸಂಗೀತ ಬದುಕಿಗೆ ತಿರುವುಗಳು ಎದುರಾಗತೊಡಗಿದವು. ಸಂಗೀತ ಮೇಷ್ಟ್ರ ಒತ್ತಾಯಕ್ಕೆ ಮಣಿದು ಆಕ್ಸ್ ಫರ್ಡ್‌ನ ಟ್ರಿನಿಟಿ ಕಾಲೇಜ್‌ಗೆ ಸಂಗೀತದ ಸ್ಕಾಲರ್ ಶಿಪ್‌ಗೆ ಅರ್ಜಿ ಹಾಕಿದ. ಪಾಶ್ಚಾತ್ಯ ಸಂಗೀತ ಕಲಿಯಲು ಅಹ್ವಾನ ಬಂತು. ಅಲ್ಲಿಂದ ಮರಳಿ ಬಂದ ದಿಲೀಪ್ ನೂರಾರು ಜಾಹೀರಾತುಗಳಿಗೆ ಜಿಂಗಲ್ಸ್ ನುಡಿಸಿದರು. 1991ರಲ್ಲಿ ಮಣಿರತ್ನಂ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶಿಸುವ ಅವಕಾಶ ಕೊಟ್ಟರು.

ಸೂಫಿ ಸಂತರ ಮಾತು ಸತ್ಯವಾಗಿದ್ದನ್ನು ಕಂಡ ಕಸ್ತೂರಿ, ದಿಲೀಪ್ ಕುಮಾರ್ ಹಾಗೂ ಅವರ ಪೂರ್ಣ ಕುಟುಂಬ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿತು. ದಿಲೀಪ್ ಕುಮಾರ್ ಅಲ್ಲಾ ರಖ್ ರೆಹಮಾನ್ ಆದ.
*****
ರೋಜಾ ಚಿತ್ರ ಅದ್ಭುತ ಸಂಗೀತದ ಸವಿ ಉಣಿಸಿತು. ಅದೇ ಚಿತ್ರಕ್ಕೆ ರೆಹಮಾನ್‌ಗೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಡೆಲ್ಲಿ-೬ ವರೆಗೆ ಹಿಂದಿ, ತಮಿಳು, ತೆಲುಗು ಸೇರಿದಂತೆ ೧೦೨ ಚಿತ್ರಗಳಿಗೆ ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರ ಸೋತರೂ ರೆಹಮಾನ್ ನೀಡಿದ ಸಂಗೀತವನ್ನು ಜನ ಮರೆತಿಲ್ಲ. ಅಷ್ಟೇ ಅಲ್ಲ ರೆಹಮಾನ್ ಸಂಗೀತ ನೀಡಿದ್ದ ‘ದಿಲ್ ಸೆ’ ಚಿತ್ರದ ‘ಛಯ್ಯಾ ಛಯ್ಯಾ’ ಹಾಡು ನೋಡಿ ಮೆಚ್ಚಿದ ಲಾಯ್ಡ್ ವೆಬರ್ ತಮ್ಮ ‘ಬಾಂಬೆ ಡ್ರೀಮ್ಸ್’ ನಾಟಕಕ್ಕೆ ಸಂಗೀತ ನಿರ್ದೇಶಿಸಲು ಆಹ್ವಾನಿಸದರು. ಹೇ ಪಿಂಗ್ ನಿರ್ದೇಶನದ ಚೀನಿ ಚಿತ್ರ ‘ವಾರಿಯರ್‍ಸ್ ಆಫ್ ಹೆವನ್ ಅಂಡ್ ಅರ್ಥ್’, ಶೇಖರ್ ಕಪೂರ್ ನಿರ್ದೇಶನದ ಇಂಗ್ಲಿಷ್ ಚಿತ್ರ ‘ಎಲಿಜಬೆತ್ ಗೋಲ್ಡನ್ ಏಜ್’ ಚಿತ್ರಕ್ಕೆ ಸಂಗೀತ ನೀಡಿ ಅಂತಾರಾಷ್ಟ್ರೀಯ ಸಂಗೀತಾಸಕ್ತರಿಗೆ ತಮ್ಮ ಶೈಲಿಯ ಸಂಗೀತ ಸುಧೆ ಹರಿಸಿದರು. ಮುಂದಿನ ಒಂದು ವರ್ಷದಲ್ಲಿ ಇನ್ನೂ 11 ಚಿತ್ರಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ!
*****
ರೆಹಮಾನ್ ಸಂಗೀತವೆಂದರೆ ಪ್ರಯೋಗ. ಸಂಗೀತವನ್ನು ದೇವರೆಂದೇ ಭಾವಿಸುವ ರೆಹಮಾನ್ ದೇವರ ವಿವಿಧ ಅವತಾರಗಳ ಹಾಗೆ, ವಿವಿಧ ಶೈಲಿಯ ಸಂಗೀತವನ್ನು ನೀಡುತ್ತಾರೆ. ಅದರಲ್ಲಿ ದೇಶೀ ಸ್ಪರ್ಶವಿರುತ್ತದೆ. ಸ್ಥಳೀಯ ಛಾಪು ಇರುತ್ತದೆ. ಮೀನಾಕ್ಷಿ ಚಿತ್ರದಲ್ಲಿ ಪಕ್ಕಾ ಹೈದ್ರಾಬಾದಿ ಸಂಗೀತ ಕೇಳಿಸಿದರೆ, ರಂಗ್‌ದೇ ಬಸಂತಿ ‘ಭಲ್ಲೇ ಭಲ್ಲೇ’ ಬಾಂಗ್ರಾ ಗಮನ ಸೆಳೆಯುತ್ತದೆ. ಜೋಧಾ ಅಕ್ಬರ್ ಚಿತ್ರದಲ್ಲಿ ಮೊಘಲ್ ಕಾಲದ ಸೂಫಿ ಸಂಗೀತ ಕೇಳಿಸುತ್ತದೆ. ಹಾಗೆಯೇ ಯುವರಾಜ್‌ನಲ್ಲಿ ಪಾಶ್ಚಾತ್ಯ ಸಂಗೀತದ ಛಾಪು ಕಾಣಿಸುತ್ತದೆ. ರಂಗೀಲಾ, ಯುವ, ಕಾದಲನ್, ಬಾಂಬೆ, ಇರುವರ್, ದಿಲ್‌ಸೆ, ತಾಲ್ ಹೀಗೆ ಎಲ್ಲ ಚಿತ್ರಗಳದ್ದೂ ಒಂದೊಂದು ವಿಶೇಷ. ಡೆಲ್ಲಿ-೬ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾಗೆ ರೆಹಮಾನ್‌ರ ಈ ಗುಣದ ಬಗ್ಗೆ ಅಭಿಮಾನ. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ, ಭಾರತೀಯ ಶಾಸ್ತ್ರೀಯ ಸಂಗೀತ, ರೆಗ್ಗೆ, ಹಿಪ್-ಹಾಪ್, ರಾಕ್, ರ್‍ಯಾಪ್, ಬ್ಲೂಸ್, ಜಾಝ್, ಒಪೆರಾ, ಸೂಫಿ, ಜಾನಪದ, ಆಫ್ರಿಕನ್ ಜಾನಪದ ಸಂಗೀತ, ಅರೇಬಿಕ್ ಸಂಗೀತ… ಹೀಗೆ ರೆಹಮಾನ್‌ಗೆ ಗೊತ್ತಿಲ್ಲದೇ ಇರುವ ಸಂಗೀತ ಯಾವುದೂ ಇಲ್ಲ.

ಇವುಗಳೊಂದಿಗೆ ಸದಾ ಪ್ರಯೋಗ ಮಾಡುವುದರಿಂದಲೇ ಪ್ರತಿ ಚಿತ್ರದ ಸಂಗೀತವೂ ಕೇಳುಗನಿಗೆ ಆಪ್ತವಾಗುತ್ತದೆ.
ರೆಹಮಾನ್ ಪ್ರಯೋಗ ಇಷ್ಟಕ್ಕೆ ನಿಲ್ಲುವುದಿಲ್ಲ. ಗಾಯನದ ವಿಷಯದಲ್ಲೂ ಆತನದ್ದು ವಿಶೇಷವೇ. ಪ್ರತಿ ಬಾರಿ ಹೊಸ ಗಾಯಕ-ಗಾಯಕಿಯರನ್ನು ತಮ್ಮ ಸಂಗೀತದಲ್ಲಿ ಪರಿಚಯಿಸುತ್ತಾರೆ. ಗುರು ಚಿತ್ರದ “ಮಯ್ಯಾ ಮಯ್ಯಾ” ಹಾಡಿಗೆ ಕರೆತಂದಿದ್ದು ಕೆನಡಾ ಗಾಯಕಿ ಮರ್ಯೆಮ್ ಟೊಲ್ಲರ್, ಡೆಲ್ಲಿ-6 ಚಿತ್ರದ ” ದಿಲ್ ಗಿರಾ ದಫತನ್” ಹಾಡನ್ನು ಲಂಡನ್ನಿನ ಆಶ್ ಕಿಂಗ್ ನಿಂದ ಹಾಡಿಸಿದರು. ಶಿವಾಜಿ ಚಿತ್ರದ ” ಬಲ್ಲೇಲಕ್ಕಾ” ಹಾಡನ್ನು ಹಾಡಿದ್ದು ರೆಹಮಾನ್ ಸೋದರಿ ರೆಹಾನ. ಈಕೆ ಹಾಡುವುದನ್ನು ಬಿಟ್ಟು 17 ವರ್ಷವೇ ಆಗಿತ್ತು!
*****
ರೆಹಮಾನ ಸಂಗೀತದಲ್ಲಿ ಆಧ್ಯಾತ್ಮವಿದೆಯೇ? ಆತನ ಹಲವು ಚಿತ್ರಗಳಲ್ಲಿ ಭಕ್ತಿ ಪೂರ್ಣ ಸಂಗೀತ ಹೊರಹೊಮುತ್ತದೆ ಎಂಬುದು ಆತನ ಆಪ್ತರ ಅಭಿಪ್ರಾಯ. ಎಳ್ಳಷ್ಟೂ ಗರ್ವವಿಲ್ಲದ, ಈತನನ್ನು ಕೈಲಾಶ್ ಖೇರ್ ನಂಥ ಗಾಯಕರು, ” ದೇವರ ದೂತ”ನಂತೆ ಕಾಣುತ್ತಾರೆ.
***
ಸ್ಲಂ ಡಾಗ್ ಮಿಲಿನೇರ್ ಗೆ ಆಸ್ಕರ್ ಸ್ವೀಕರಿಸುವ ವೇಳೆ ರೆಹಮಾನ್ ಆಡಿದ ಮಾತುಗಳು ವಿದೇಶಿಯರಿಗೆ ಎಷ್ಟರ ಮಟ್ಟಿಗೆ ಮುಟ್ಟಿತೋ? ಆದರೆ ಆತನನ್ನು ಕಳೆದ 15 ವರ್ಷಗಳಿಂದ ಬಲ್ಲ ಅಭಿಮಾನಿಗಳನ್ನಂತೂ ಭಾವುಕರನ್ನಾಗಿ ಮಾಡಿತ್ತು.
“ಹಿಂದಿಯ ಅತ್ಯಂತ ಜನಪ್ರಿಯ ಡೈಲ್, ” ಮೇರೆ ಪಾಸ್ ಮಾ ಹೈ”. ನನ್ನ ಬಳಿ ತಾಯಿಯಲ್ಲದೆ ಮತ್ತೇನೂ ಇಲ್ಲ. ಆಕೆಯ ಆಶೀರ್ವಾದ ಇದೆ”.
” ಬದುಕು ಎಲ್ಲರ ಮುಂದೆ ದ್ವೇಷ ಮತ್ತು ಪ್ರೀತಿಯನ್ನು ಇಡುತ್ತದೆ. ನಾನು ಪ್ರೀತಿಯನ್ನು ಆರಿಸಿಕೊಂಡೆ, ಇಂದು ಇಲ್ಲಿದ್ದೇನೆ”.

Advertisements