ಜಿ.ಎಸ್. ಭಾಸ್ಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಒಳ್ಳೆಯ ಛಾಯಾಗ್ರಾಹಕರು. ಬೆಳಕಿನ ಸಾಧ್ಯತೆಯನ್ನು ದುಡಿಸಿಕೊಳ್ಳುತ್ತಾ ಚಿತ್ರದ ಸನ್ನಿವೇಶಗಳಿಗೆ ಅರ್ಥ ಕಲ್ಪಿಸುವ ಬಗೆ ಅವರೊಳಗಿನದು. ಅನ್ವರ್ಥಕ ಎಂಬಂತೆ ತಮ್ಮೊಳಗೆ ಬೆಳಗುವ ಸೂರ್ಯನನ್ನು ಇಟ್ಟುಕೊಂಡು ಅವನನ್ನೇ ದುಡಿಸಿಕೊಂಡವರು ಎನ್ನುತ್ತಾರೆ ಪತ್ರಕರ್ತ ಮುರಳೀಧರ ಖಜಾನೆ.

ನನಗೆ ನೆನಪಿರುವಂತೆ 1992ರ ಸಂದರ್ಭ. ಪ್ರಸಿದ್ಧ ಚಿತ್ರ ನಿರ್ದೇಶಕಿ ಸಾಯಿ ಪರಾಂಜಪೆ ತಮ್ಮ “ಪಪೀಹಾ’ ಚಿತ್ರವನ್ನು ನಾಗಪುರ ಅರಣ್ಯ ಪ್ರದೇಶದಲ್ಲಿ ಚಿತ್ರಿಸಲು ಸಜ್ಜಾಗಿದ್ದರು. ತಂಡವೂ ಸಿದ್ಧವಾಗಿತ್ತು, ದುರದೃಷ್ಟವಶಾತ್, ಚಿತ್ರೀಕರಣ ಸ್ಥಳಕ್ಕೆ ಬರಬೇಕಿದ್ದ ಅವರ ಉಪಕರಣಗಳನ್ನು ಹೊತ್ತ ವಾಹನ ಅಪಘಾತಕ್ಕೆ ಒಳಗಾದ ಸುದ್ದಿ ಸಿಕ್ಕಿತು. ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳೇ ಇರಲಿಲ್ಲ. ಗುಡ್ಡಗಾಡು ಸಮುದಾಯದ ಕುರಿತಾದ ಚಿಕ್ಕ ಬಜೆಟ್‌ನ ಚಿತ್ರವದು. ಅಷ್ಟೇ ಅಲ್ಲ, ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಿ ಅದನ್ನು ಆಧರಿಸಿಯೇ ಚಿತ್ರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದರು.
bhaskar
ಸರಿ, ವಾಪಸು ಹೋಗುವಂತಿರಲಿಲ್ಲ. ಏನಾದರೂ ಆಗಲಿ ಎಂದು ಹೊಸ ಪ್ರಯತ್ನಕ್ಕೆ ಮುಂದಾದರು. ಅಲ್ಲೇ ಇದ್ದ ಯುವ ಕ್ಯಾಮೆರಾಮ್ಯಾನ್‌ಗೆ ಕರೆದು “ನಮ್ಮಲ್ಲಿ ಈಗ ಲಭ್ಯವಿರುವ ಉಪಕರಣಗಳಲ್ಲೇ ಚಿತ್ರೀಕರಣ ಶುರು ಮುಗಿಸೋಣ. ಒಂದುವೇಳೆ ಸಾಧ್ಯವಾಗದಿದ್ದರೆ ಈ ಯೋಜನೆಗೇ ಅಂತ್ಯ ಹಾಡೋಣ’ ಎಂದರು. ಈ ಯುವ ಕ್ಯಾಮೆರಾಮ್ಯಾನ್ ಇದ್ದ ಆಯ್ಕೆಗಳು ಎರಡೇ.

“ಇಲ್ಲ ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮುಗಿಸಬೇಕು. ಇಲ್ಲವೇ ಇಡೀ ಯೋಜನೆ ಕೈ ಬಿಡಲು ಕಾರಣಕರ್ತನಾಗಬೇಕು’. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಗರಡಿಯಲ್ಲಿ ತರಬೇತಾದ ಆ ಯುವಕ “ರಿಸ್ಕ್’ ತೆಗೆದುಕೊಳ್ಳಲು ನಿರ್ಧರಿಸಿದ. ಒಂದು ಪುಟ್ಟ ಲೈಟು ಮತ್ತು ಕೆಲವು ಥರ್ಮೋಕೋಲ್ ತುಂಡುಗಳನ್ನು ಬಳಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾದ. ಅರಣ್ಯದಲ್ಲೇ ಪ್ರಕೃತಿ ದತ್ತವಾಗಿ ಲಭ್ಯವಾದ ಬೆಳಕಿನ ಸಾಧ್ಯತೆಯನ್ನೇ ದುಡಿಸಿಕೊಂಡು ಥರ್ಮೋಕೋಲ್ ಬಳಸಿಕೊಂಡು ಹಗಲಿನ ಬೆಳಕಿನ ವಿನ್ಯಾಸವನ್ನು ರೂಪಿಸಿಕೊಂಡ. ಮೂರು ಹಂತದಲ್ಲಿ ಒಂದೇ ಚಿತ್ರಿಕೆ (ಶಾಟ್) ಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಈ ಪುಟ್ಟ ಲೈಟ್ ಸಹಾಯಕ್ಕೆ ಬಂದಿತು. ಹಲವು ಅಡ್ಡಿಗಳ ಮಧ್ಯೆಯೂ ಹೊಸದನ್ನು ಹುಡುಕಿಕೊಂಡ. ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಳಸಿಕೊಂಡ…ಹೀಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ.

ಪರಿಶ್ರಮಕ್ಕೆ ಹಾಗೂ ಸೃಜನಶೀಲತೆಗೆ ಸಿಕ್ಕ ಮೌಲ್ಯ ಎಂಥದ್ದು ಗೊತ್ತೇ ? ಅದಕ್ಕಿಂತಲೂ ಹೆಚ್ಚಾಗಿ ಸ್ವತಃ ಆ ಯುವಕನಿಗೇ ಆ ಹೊತ್ತಿನಲ್ಲಿ ತಾನು ಕಷ್ಟಪಡುತ್ತಿರುವುದು ಆ ಹೊತ್ತನ್ನು ನಿಭಾಯಿಸಲಿಕ್ಕೆಂದೇ ತಿಳಿದಿದ್ದ. ಅದು ಹೊಸತಾದೀತು ಎನಿಸಿರಲಿಲ್ಲ. ಆದರೆ ಹಾಗೆ ಲಭ್ಯವಿದ್ದದ್ದನ್ನೆಲ್ಲಾ ಬಳಸಿಕೊಂಡು ಚಿತ್ರೀಕರಿಸಿದ ಚಿತ್ರಿಕೆಗೆ ವಿಮರ್ಶಕರಿಗೆ ಪ್ರಶಂಸೆ ವ್ಯಕ್ತವಾಯಿತು. ಇಡೀ ಚಿತ್ರವೂ ಅಪಾರ ಚರ್ಚೆಗೆ ಒಳಗಾಯಿತು, ಒಳ್ಳೆ ಅಭಿಪ್ರಾಯ ಕೇಳಿಬಂದಿತು. ಹಾಗೆ ದುಡಿದ ಯುವಕ ಜಿ.ಎಸ್. ಭಾಸ್ಕರ್. ನಂತರ ಸಾಯಿ ಪರಾಂಜಪೆಯವರ “ಸಾಜ್’ ಹಾಗೂ “ದಿಶಾ’ಗೆ ಸಿನಿಮಾಟೋಗ್ರಾಫರ್ ಆಗಿ ತಮ್ಮನ್ನು ತೊಡಗಿಸಿಕೊಂಡರು.

ಈಗ ಇದೇ ಭಾಸ್ಕರ್ ವಾಣಿಜ್ಯಾತ್ಮಕ ಹಾಗೂ ಪ್ರಯೋಗಾತ್ಮಕ ಚಿತ್ರ ನಿರ್ದೇಶಕರಿಗೆ ಬೇಕಾದವರು. ನಾಗೇಶ್ ಕುಕನೂರ್ ರ “ಹೈದರಾಬಾದ್ ಬ್ಲ್ಯೂಸ್’, ಗಿರೀಶ್ ಕಾಸರವಳ್ಳಿಯವರ “ಬಣ್ಣದ ವೇಷ’, “ತಬರನ ಕಥೆ’, ಸದಾನಂದ ಸುವರ್ಣರ “ಕುಬಿ ಮತ್ತು ಇಯಾಲ’, ಟಿ.ಎಸ್. ನಾಗಾಭರಣರ “ನಾಗಮಂಡಲ’, “ನೀಲಾ’, ಎಂ.ಎಸ್. ಸತ್ಯು ಅವರ “ಘಳಿಗೆ’, “ಇಜ್ಜೋಡು’, ರಮೇಶರ “ಆಕ್ಸಿಡೆಂಟ್’ಗೆ ಛಾಯಾಗ್ರಹಣ ಒದಗಿಸಿದರು. ರಿಚರ್ಡ್ ಅಟೆನ್ ಬರೋ ಅವರ “ಗಾಂಧಿ’ ಚಿತ್ರಕ್ಕೆ ಎ.ಕೆ. ಬೀರ್ ಅವರಿಗೆ ಎರಡನೇ ಘಟಕದಲ್ಲಿ ಸಹಾಯ ನೀಡಿದರು.

“ಇಜ್ಜೋಡು’ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿರುವ ಭಾಸ್ಕರ್, ಸದ್ಯಕ್ಕೆ ಯುವ ತಲೆಮಾರಿನಲ್ಲಿ ದೃಶ್ಯ ಸಾಕ್ಷರತೆಯನ್ನು ಬೆಳೆಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರರ್ಥ ದೃಶ್ಯ ಮಾಧ್ಯಮವಾದ ಛಾಯಾಗ್ರಹಣದ ಹೊಸ ಸಾಧ್ಯತೆ ಹಾಗೂ ದುಡಿಸಿಕೊಳ್ಳುವ ನೆಲೆಗಳತ್ತ ಮಾಹಿತಿ ನೀಡುವ ಕಾಯಕದಲ್ಲಿದ್ದಾರೆ. ಆ ಮೂಲಕ ಒಂದಿಷ್ಟು ಬೆಳಕು ಹೊತ್ತಿಸುವ ಪ್ರಯತ್ನ ಅವರದ್ದು. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮೈಸೂರು ಫಿಲಂ ಸೊಸೈಟಿ ಏರ್ಪಡಿಸಿದ್ದ “ಛಾಯಾಗ್ರಹಣದ ಪ್ರಶಂಸೆ’ ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಯುವ ತಲೆಮಾರಿನೊಂದಿಗೆ ಸಿನಿಮಾದಲ್ಲಿ ಒಬ್ಬ ಛಾಯಾಗ್ರಾಹಕನ ಪಾತ್ರ ಹಾಗೂ ಮೂಲಭೂತ ಪರಿಕಲ್ಪನೆಗಳನ್ನು ಹಂಚಿಕೊಂಡರು.
gs bhaskar
“ನನ್ನನ್ನು ಛಾಯಾಗ್ರಹಣ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿದ್ದ ಸಾಂಸ್ಕೃತಿಕ ವಾತಾವರಣವೇ ಹೊರತು ಮತ್ತೇನೂ ಅಲ್ಲ’ ಎಂದರು ಭಾಸ್ಕರ್ ಒಮ್ಮೆ ಸಂದರ್ಶನದಲ್ಲಿ. ಕೆ.ಕೆ. ಮಹಾಜನ್ ಅವರ ಶಿಷ್ಯ ಇವರು.

“1970ರ ಹೊತ್ತದು. ಬಿ.ವಿ. ಕಾರಂತರಿಗೆ “ಚೋಮನದುಡಿ’ಚಿತ್ರಕ್ಕೆ ಸಹಾಯಕರಾಗಿದ್ದ ಗಿರೀಶ್ ಕಾಸರವಳ್ಳಿಯವರು ಪರಿಚಿತರಾದರು. ಆ ಪರಿಚಯವೇ ಬಹುಶಃ ಮೂವಿ ಕ್ಯಾಮೆರಾದತ್ತ ಮುಖ ಮಾಡಲು ಸಾಧ್ಯವಾಗಿದ್ದು. ಹಾಗಾಗಿ ಚಿತ್ರ ಜಗತ್ತಿನ ಕಡೆಗೆ ಹೊರಡಲು ಕಾರಣವಾದದ್ದು ಅವರೇ. ನಾನು ಛಾಯಾಗ್ರಹಣ ಕಲೆಯತ್ತ ತಳೆದ ಆಸಕ್ತಿಯನ್ನು ಕಂಡು “ನೀವು ಎಫ್ ಟಿ ಐ ಗೆ ಹೋಗಿ ಹೆಚ್ಚಿನದನ್ನು ಕಲಿಯಿರಿ’ ಎಂದು ಸಲಹೆ ನೀಡಿದರು. ಹಾಗೆ ಸೇರಿಕೊಂಡ ಇನ್‌ಸ್ಟಿಟ್ಯೂಟ್‌ನಲ್ಲಿ ಸುಬ್ರತೋ ಮಿತ್ರ, ಕೆ.ಕೆ. ಮಹಾಜನ್, ಎ.ಕೆ. ಬೀರ್ ರಂಥ ಮಹಾರಥರ ಕಾರ‍್ಯಾಗಾರಗಳಲ್ಲಿ ಸಾಕಷ್ಟು ಕಲಿತುಕೊಂಡೆ, ಸ್ಫೂರ್ತಿ ಪಡೆದೆ. ನನ್ನ ಕೋರ್ಸ್ ಮುಗಿದ ನಂತರ ಕೆ. ಕೆ. ಮಹಾಜನರ ಬಳಿ ದುಡಿಯಲೂ ನಿರ್ಧರಿಸಿ ಅವರಲ್ಲಿ ಬೇಡಿಕೆಯನ್ನು ಮಂಡಿಸಿದೆ. ಆಗ ಅವರಲ್ಲಿ ಹಲವರು ಸಹಾಯಕರಾಗಿ ದುಡಿಯುತ್ತಿದ್ದರು. ಹಾಗಾಗಿ “ಸ್ವಲ್ಪ ದಿನ ಕಾಯಬೇಕಾದೀತು’ ಎಂಬ ಉತ್ತರ ಅವರಿಂದ ಬಂದಿತು. ಸರಿ, ಎಂದು ಬೆಂಗಳೂರಿಗೆ ವಾಪಸ್ಸಾದೆ. ದೇವಧರ್‌ರ (ಶಂಕರನಾಗರ ಆಂಕ್ಸಿಡೆಂಟ್ ಪ್ರಸಿದ್ಧಿ ಬೆನ್ನಿಗಿದ್ದ ಕಾಲ)ಹೊಸ ಯೋಜನೆಗೆ ಸಹಕರಿಸಲು ನಿರ್ಧಾರವಾಗಿತ್ತು. ಅದೇ ಹೊತ್ತಿಗೆ ಎ.ಕೆ. ಬೀರ್ ಅವರಿಂದ ಒಂದು ಆಹ್ವಾನ ಸಿಕ್ಕಿತು. ಅದರಂತೆ ಅಟೆನ್ ಬರೋರ “ಗಾಂಧಿ’ಗೆ ಎರಡನೇ ಚಿತ್ರೀಕರಣ ಘಟಕದಲ್ಲಿ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಬೇಕಿತ್ತು. ಸಿಕ್ಕ ಅವಕಾಶ ಹೋಗಿ ಕಾರ‍್ಯ ನಿರ್ವಹಿಸಿದೆ. ಇದು ನನ್ನ ಪ್ರಯತ್ನದ ಅನಾವರಣಕ್ಕೆ ಸಿಕ್ಕ ಚೊಚ್ಚಲ ಅವಕಾಶ. ಅಷ್ಟೇ ಅಲ್ಲ, ಅಲ್ಲಿಂದಲೇ ನನ್ನ ನಿಜವಾದ ಕಲಿಕೆಯೂ ಆರಂಭವಾದದ್ದು’ ಎಂದು ನೆನಪಿಸಿಕೊಳ್ಳುತ್ತಾರೆ ಭಾಸ್ಕರ್.

ಈ ಮೊದಲೇ ಹೇಳಿದಂತೆ ಭಾಸ್ಕರ್ ವಾಣಿಜ್ಯ ಚಿತ್ರಗಳಿಗೂ ದುಡಿದವರು, ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳಿಗೂ ಕ್ಯಾಮೆರಾ ಹಿಡಿದವರು. ನಂತರದ ಕಾಲದಲ್ಲಿ ತಮಗೆದುರಾದ ದೊಡ್ಡ ಸವಾಲುಗಳನ್ನು ಅವರೇ ಒಪ್ಪಿಕೊಳ್ಳುತ್ತಾರೆ. “ನಮ್ಮನ್ನು ನಾವು ವೈಭವೀಕರಿಸಿಕೊಳ್ಳಬೇಕಾದ ಅಗತ್ಯವಿದೆಯೇ ?’ ಎಂದು ಪ್ರಶ್ನಿಸುವ ಅವರು, “ನಾನು ವಾಸ್ತವವಾದಕ್ಕೆ ಹೊಂದುವವ, ವಾಸ್ತವವಾದಿ’ ಎನ್ನುತ್ತಾರೆ. ಒಂದುವೇಳೆ ಕಪ್ಪು ಬಿಳುಪು ಮತ್ತು ವರ್ಣಗಳ ಆಯ್ಕೆಯನ್ನು ಮುಂದಿಟ್ಟರೆ ಖಚಿತವಾಗಿ ಅವರು ಆರಿಸಿಕೊಳ್ಳುವುದು ಕಪ್ಪು ಬಿಳುಪನ್ನೇ. ಅದರಲ್ಲಿ ಅನುಮಾನಗಳಿಲ್ಲ.

“ವರ್ಣಗಳು ಅಥವಾ ಬಣ್ಣಗಳು ಅತ್ಯಂತ ಆಕರ್ಷಕವು. ಅವು ತಮ್ಮೊಳಗೆ ಶಕ್ತಿಯನ್ನು ಧರಿಸಿವೆ. ಆದರೆ ನಾನು ಕಪ್ಪು ಬಿಳುಪಿನಲ್ಲೇ ಹೆಚ್ಚು ಸುಖಿಯಾಗಿದ್ದೇನೆ. ಅದಕ್ಕೆ ಎರಡು ಕಾರಣಗಳೆಂದರೆ, ನಾನು ಛಾಯಾಗ್ರಹಣ ಕಲೆಯನ್ನು ಕಲಿತದ್ದು ಕಪ್ಪು ಬಿಳುಪಿನ ಮೂಲಕವೇ. ನನಗೆ ಕಲೆ ಅರ್ಥವಾಗಿದ್ದೂ ಆ ನೆಲೆಯಿಂದಲೇ. ಮತ್ತೊಂದು ಬಣ್ಣ ಎಂಬುದು ಇಂದಿಗೂ ನನಗೆ ಹೊಸದು. ಒಂದು ಬಗೆಯಲಿ ಅಪರಿಚಿತನಂತೆ’ ಎಂದು ಕಾರಣ ಮುಂದಿಡುತ್ತಾರೆ.

“ನನ್ನ ಅಭಿಪ್ರಾಯದಲ್ಲಿ ಇಂದಿಗೂ ನಾವಿನ್ನೂ ಬಣ್ಣಗಳ ಶೇ. ೨೦ ರಷ್ಟು ಸಾಧ್ಯತೆಯನ್ನೂ ಕಂಡಿಲ್ಲ, ಅಂದರೆ ದುಡಿಸಿಕೊಂಡಿಲ್ಲ. ಒಂದು ಚಿತ್ರಿಕೆಗೆ ಹೆಚ್ಚಿನ ಅರ್ಥವಂತಿಕೆ ತಂದುಕೊಡಬೇಕೆಂದರೆ ಮೊದಲು ಬಣ್ಣದ ಆಧ್ಯಾತ್ಮಿಕ ನೆಲೆಯನ್ನು ನಾವು ಶೋಧಿಸಿಕೊಳ್ಳಬೇಕು, ತಿಳಿದುಕೊಳ್ಳಬೇಕು, ನಮ್ಮೊಳಗೆ ತಂದುಕೊಳ್ಳಬೇಕು’.

ಚಿತ್ರ ನಿರ್ದೇಶಕ ಮತ್ತು ಛಾಯಾಗ್ರಾಹಕನ ನಡುವಿನ ಮಧುರ ಬಾಂಧವ್ಯ ಹೇಗಿರಬೇಕೆಂದು ಕೇಳಿದರೆ, “ಒಂದು ವೈವಾಹಿಕ ಸಂಬಂಧವಿದ್ದಂತೆ’ ಎಂದು ಹೋಲಿಕೆ ಹಿಡಿಯುತ್ತಾರೆ. ಅದೃಷ್ಟವಶಾತ್, ನಾನು ಕೆಲಸ ಮಾಡಿದ ಎಲ್ಲ ನಿರ್ದೇಶಕರು ಗೊಣಗದೇ ಚಿತ್ರಕಥೆಯನ್ನು ನನಗೆ ನೀಡುತ್ತಿದ್ದರು. ಬೆಳಕಿನ ವಿನ್ಯಾಸ ಮತ್ತು ಅದರ ಸಾಧ್ಯತೆಯನ್ನು ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಲು ನಡೆಸುವ ಪೂರ್ವ ಸಿದ್ಧತೆಗೆ ಅಗತ್ಯವಾಗಿ ನನಗೆ ಚಿತ್ರಕಥೆ ಬೇಕು’ ಎಂಬುದು ಅವರ ಬೇಡಿಕೆ.

ಪ್ರತಿಯೊಬ್ಬ ಛಾಯಾಗ್ರಾಹಕನೂ ಒಬ್ಬ ಚಿತ್ರ ನಿರ್ದೇಶಕನಾಗಲು ಬಯಸುತ್ತಾನೆ. ಆದರೆ ಭಾಸ್ಕರ್ ಇದಕ್ಕೆ ಅಪವಾದ. “ಒಬ್ಬ ಛಾಯಾಗ್ರಾಹಕನಾಗಿ ಅದರ ಅಭ್ಯಾಸದಲ್ಲಿ ತೊಡಗಿದ ನಾನೊಬ್ಬ ತಂತ್ರಜ್ಞನಾಗಿ ರೂಪುಗೊಂಡಿರುತ್ತೇನೆ. ಚಿತ್ರ ನಿರ್ಮಾಣ ಅಥವಾ ನಿರ್ದೇಶನಕ್ಕೆ ಸಂಬಂಧಿಸಿದಂತೆ ನನ್ನ ಪಾತ್ರಕ್ಕಿಂತ ಹೊರತಾಗಿ ಬಹಳಷ್ಟನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದು ಅನಿವಾರ‍್ಯವೂ ಹೌದು’ ಎಂಬುದು ಅವರ ಪ್ರತಿಪಾದನೆ.

ಹೀಗೆಲ್ಲಾ ಇದ್ದರೂ ಹಲವು ವೈರುಧ್ಯ ಸನ್ನಿವೇಶಗಳಲ್ಲೂ ಭಾಸ್ಕರ್ ದುಡಿದಿದ್ದಾರೆ. ಅವರೇ ಒಪ್ಪಿಕೊಳ್ಳುವಂತೆ “ಪಪೀಹಾ’ದ ಚಿತ್ರೀಕರಣವೇ ಎದುರಾದ ಮೊದಲ ಸವಾಲು. “ಬಣ್ಣದ ವೇಷ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಒಂದು ಕನಸಿನಂತಿರಬಹುದಾದ ಸನ್ನಿವೇಶದಲ್ಲಿ ಪ್ರಮುಖ ಪಾತ್ರವಾದ ಶಂಭುವನ್ನು ಬಹಳ ವಿಭಿನ್ನವಾಗಿ ಹಾಗೂ ಸಂತುಲಿತ ಅಭಿವ್ಯಕ್ತಿಯ ಮಾದರಿಯಂತೆ ಸೆರೆಹಿಡಿಯಬೇಕಿತ್ತು. ಅದು ಗಿರೀಶರ ಸೂಚನೆ ಮತ್ತು ನಿರೀಕ್ಷೆ. ಆಗ ನಾನು ನನ್ನ ಶಾಲೆಯಲ್ಲಿ ಕಲಿತದ್ದಕ್ಕಿಂತ ಭಿನ್ನವಾಗಿ ಕ್ಯಾಮೆರಾದ ಎದುರೇ ಲೈಟ್ ನ್ನು ಇಟ್ಟೆ. ಇದು ನನ್ನ ವೃತ್ತಿ ಜೀವನದಲ್ಲಿ ಮೊದಲು. ಆ ಚಿತ್ರಿಕೆಯ ಸೆರೆ ನನ್ನನ್ನು ೧೦ ವರ್ಷಗಳ ಮುಂದಕ್ಕೆ ತಳ್ಳಿತು. ಇಂಥದ್ದೇ ಮತ್ತೊಂದು ಸವಾಲು ಎದುರಾಗಿದ್ದು “ನಾಗಮಂಡಲ’ ಚಿತ್ರದ ಚಿತ್ರೀಕರಣದಲ್ಲಿ ಎಂದು ವಿವರಿಸುತ್ತಾರೆ.

“ನಮಗೆ ನಾಗ ಮತ್ತು ರಾಣಿಯ ಪ್ರಣಯದ ಸನ್ನಿವೇಶವನ್ನು ಚಿತ್ರಿಸಬೇಕಾಗಿತ್ತು. ನಾವು ಮಾಡುವ ಅತ್ಯಂತ ಸಣ್ಣ ತಪ್ಪೂ ಇಡೀ ಸನ್ನಿವೇಶವನ್ನು ಅಶ್ಲೀಲಗೊಳಿಸಿಬಿಡುವ ಅಪಾಯ ಎದುರಿಗಿತ್ತು, ಆತಂಕವೂ ಸಹ. ನಾನೂ ಮತ್ತು ನಿರ್ದೇಶಕ ನಾಗಾಭರಣ ಇಬ್ಬರೂ ಚಿತ್ರೀಕರಣದ ಕೊನೇ ದಿನದವರೆಗೂ ಈ ಚಿತ್ರಿಕೆ (ಶಾಟ್) ಯನ್ನು ಮುಂದೂಡುತ್ತಲೇ ಬಂದೆವು. ಆ ಸಂದರ್ಭದಲ್ಲಿ ನಮ್ಮನ್ನು ಕಾಪಾಡಿದ್ದು ಕಲಾ ನಿರ್ದೇಶಕ ಶಶಿಧರ ಅಡಪ. ಅವನು ಸನ್ನಿವೇಶವನ್ನು ಕಟ್ಟಿಕೊಟ್ಟ ಬಗ್ಗೆ ನಮ್ಮ ಹಲವು ಸಂಕೀರ್ಣ ಸಂಗತಿಗಳನ್ನು ನಿವಾರಿಸಿತು, ಗೊಂದಲಗಳನ್ನು ಕಳೆಯಿತು’.

ಚಿತ್ರ ಜಗತ್ತಿನಲ್ಲಿ ಸ್ಥಿರ ಛಾಯಾಗ್ರಾಹಕರನ್ನು ಕಾಣುವ ಬಗೆ ಬಗ್ಗೆಯೇ ಭಾಸ್ಕರ್ ಬಹಳ ಖೇದ ವ್ಯಕ್ತಪಡಿಸುತ್ತಾರೆ. “ಆದರೆ, ನನಗೆ ಒಬ್ಬ ಸ್ಥಿರ ಛಾಯಾಗ್ರಾಹಕನೂ ಎಂಥ ಅದ್ಭುತಗಳನ್ನು ಸೃಷ್ಟಿಸಬಲ್ಲ ಎಂಬುದು ನಿಜವಾಗಲೂ ತಿಳಿದದ್ದು “ಇಜ್ಜೋಡು’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ. ನನ್ನ ಅದೃಷ್ಟ ನಿಮಾಯ್ ಘೋಷ್ ಇದಕ್ಕೆ ಕೆಲಸ ಮಾಡಿದವರು. ಘೋಷ್ ಎಲ್ಲರಿಗೂ ತಿಳಿದಂತೆಯೇ ಸತ್ಯಜಿತ್ ರೇ ಅವರ ಅಧಿಕೃತ ಛಾಯಾಗ್ರಾಹಕರಾಗಿದ್ದವರು. ಕಲಾವಿದರನ್ನು ಒಂದೇ ನಮೂನೆಯಲ್ಲಿ ಫೋಸು ಕೊಡುವಂತೆ ಕೇಳುವ ಬದಲು ಮತ್ತೆ ಸನ್ನಿವೇಶಗಳಲ್ಲಿ ಅಭಿನಯಿಸುವಂತೆ ಕೋರಿ ವಿಭಿನ್ನ ಕೋನಗಳಿಂದ ಚಿತ್ರಗಳನ್ನು ತೆಗೆದರು. ಅದು ನಿಮಾಯ್ ಘೋಷ್‌ರ ಸಾಧ್ಯತೆ. “ಇಲ್ಲಿಗೆ ಮಾತು ಸಾಕೇನೋ’ ಎಂದು ಮುಗಿಸಿದರು ಭಾಸ್ಕರ್.

Advertisements