ಟಿ.ಎನ್. ಬಾಲಕೃಷ್ಣ ಅಂದರೆ ಕನ್ನಡ ಚಿತ್ರರಂಗದ ನೆಚ್ಚಿನ ನಟ ಬಾಲಣ್ಣ ನಿಧನವಾದ ಸಂದರ್ಭದಲ್ಲಿ ಲೇಖಕ, ಪತ್ರಕರ್ತ ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬರೆದ ಲೇಖನವಿದು. ಪಾರ್ವತೀಶರು ಸಂಗ್ರಹಿಸಿ ಲಂಕೇಶ್ ಪ್ರಕಾಶನ ಹೊರತಂದಿರುವ “ಈ ನರಕ ಈ ಪುಲಕ” ಕೃತಿಯಲ್ಲಿ ಇಂಥ ಹಲವಾರು ಲೇಖನಗಳಿವೆ. ಕೃಪೆ ಅದೇ ಕೃತಿ.

ಬಾಲಕೃಷ್ಣ ತೀರಿಕೊಂಡಿದ್ದಾರೆ. ಕಳೆದ ಅರ್ಧ ಶತಮಾನದಿಂದ ನಮ್ಮೆಲ್ಲರ ಕಣ್ಣೆದುರಿಗಿದ್ದ ವ್ಯಕ್ತಿ ಬಾಲಕೃಷ್ಣ. ಕನ್ನಡ ಚಿತ್ರರಂಗ ಏನೂ ಇಲ್ಲದೇ ಬಣಗುಡುತ್ತಿದ್ದಾಗ ಕಲಾವಿದನಾಗಿ ಜೀವಿಸಲು ಯತ್ನಿಸಿದವರು ಬಾಲಕೃಷ್ಣ. ನಾವೆಲ್ಲ ಕನ್ನಡ ಚಿತ್ರಗಳಿಗಾಗಿ ಕಾತರಿಸುತ್ತಿದ್ದೆವು. ನಾನು ಹೈಸ್ಕೂಲಿನಲ್ಲಿದ್ದಾಗ ಬಾಲಕೃಷ್ಣ, ನರಸಿಂಹರಾಜು ಕನ್ನಡಿಗರನ್ನು ರಂಜಿಸುತ್ತಿದ್ದ ಕಲಾವಿದರು ; ಪ್ರಾಯದಲ್ಲಿದ್ದವರು. ಆಗ ಗುಬ್ಬಿ ಕಂಪನಿ ಇತ್ತು. ನಾನು ಗುಬ್ಬಿ ವೀರಣ್ಣನವರ ’ಸಂಪೂರ್ಣ ರಾಮಾಯಣ’ ನೋಡುವಷ್ಟರಲ್ಲಿ ನರಸಿಂಹರಾಜು, ಬಾಲಕೃಷ್ಣ, ರಾಜಕುಮಾರ್, ಅಯ್ಯರ್ ಆ ಕಂಪನಿಯನ್ನು ಬಿಟ್ಟು ಸಿನಿಮಾ ಮಾಡಲು ಯತ್ನಿಸುತ್ತಿದ್ದರು. ಅವರು ನಾಲ್ವರೂ ಸೇರಿ ಮಾಡಿದ ಕಪ್ಪುಬಿಳುಪು ಚಿತ್ರ “ರಣಧೀರ ಕಂಠೀರವ’ ನನಗೆ ಇನ್ನೂ ನೆನಪಿದೆ. ಕನ್ನಡಿಗರು ಆಗತಾನೇ ಚಿತ್ರ ನೋಡಲು ಪ್ರಾರಂಭಿಸಿದ್ದ ಕಾಲವದು ; ನಿರ್ಮಾಪಕರು ನಟರಿಗೆ ಅಷ್ಟಾಗಿ ಹಣ ಕೊಡುತ್ತಿರಲಿಲ್ಲ. ಹಂಚಿಕೆದಾರರು ನಿರ್ಮಾಪಕರಿಗೆ ಕೈ ಕೊಡುತ್ತಿದ್ದುದೆ ಹೆಚ್ಚು. ಆಗ ಚಿತ್ರ ಮಾಡುವ ಕಷ್ಟ ನೆನಸಿಕೊಂಡರೆ “ರಣಧೀರ ಕಂಠೀರವ’ವನ್ನು ರೂಪಿಸಿದ್ದು ನಿಜಕ್ಕೂ ಅದ್ಭುತ ಸಾಧನೆ ಎನ್ನಿಸುತ್ತದೆ.

ಆಮೇಲೆ ನಾನು ಬಾಲಕೃಷ್ಣ ನಟಿಸಿದ ಅನೇಕ ಚಿತ್ರ ನೋಡಿದ್ದೇನೆ. ಬಾಲಕೃಷ್ಣ ನಟಿಸಿದ “ಕಣ್ತೆರೆದು ನೋಡು’ ಚಿತ್ರ ಅವರ ಪೂರ್ಣ ಪ್ರಮಾಣದ ವಿಡಂಬನೆ, ಗಾಂಭೀರ್ಯ, ಹಾಸ್ಯ-ಎಲ್ಲ ಕೂಡಿದ್ದ ಚಿತ್ರ. ಆಗ ಅದು ನನ್ನ ಮೆಚ್ಚಿನ ಚಿತ್ರವಾಗಿತ್ತು. ಆಮೇಲೆ ಬಾಲಕೃಷ್ಣ ಎಲ್ಲ ಮುಖ್ಯಚಿತ್ರಗಳಲ್ಲಿದ್ದಂತೆ ನೆನಪು ; ಹಾಸ್ಯ ದೃಶ್ಯಗಳು ಕೂಡ ನಮ್ಮ ಕಂಪನಿ ನಾಟಕದಿಂದ ಸಿನಿಮಾಕ್ಕೆ ಸಂದ ಬಳುವಳಿ.
balakrishna
ಹಾಸ್ಯ ದೃಶ್ಯಗಳಲ್ಲದೇ ಯಾವ ಕಂಪನಿ ನಾಟಕದ ಗಂಭೀರ ದೃಶ್ಯಗಳೂ ಪ್ರೇಕ್ಷಕರನ್ನು ಮುಟ್ಟುತ್ತಿರಲಿಲ್ಲ. ಸಿನಿಮಾದಲ್ಲೂ ಅದೇ ಕಾಣಿಸಿಕೊಂಡಿತು. ಬಾಲಕೃಷ್ಣ, ನರಸಿಂಹರಾಜು ಕನ್ನಡ ಚಿತ್ರಗಳ ಅವಿಭಾಜ್ಯ ಅಂಗವಾದರು. ಬಾಲಕೃಷ್ಣ ಸ್ವಲ್ಪ ಒರಟಾದ ಕಿಲಾಡಿ ಪಾತ್ರಧಾರಿಯಾದರೆ ನರಸಿಂಹರಾಜು ತುಂಬಾ ದುರ್ಬಲನಾದ ಪ್ರೀತಿಯ ವ್ಯಕ್ತಿಯಾಗಿರುತ್ತಿದ್ದರು. ಇವರಿಬ್ಬರೂ ನಮ್ಮ ಸಮಾಜದ ಎರಡು ಸ್ತರಗಳನ್ನು ಪ್ರತಿನಿಧಿಸಿದವರಂತೆ ಇರುತ್ತಿದ್ದರು. ಅವರ “ಕಣ್ತೆರೆದು ನೋಡು’ ಚಿತ್ರದ ಘಾಟಿಯಾದ ವಿಲ್ಲನ್ ಎಷ್ಟು ಆಕರ್ಷಕನೆಂದರೆ, ಆ ಚಿತ್ರದ “ಹೀರೋ’ ಸಪ್ಪೆಯಾಗಿ ಕಾಣುತ್ತಾನೆ. ಇದು ಬಾಲಕೃಷ್ಣರ ಅನಿವಾರ್ಯತೆ ತೋರುತ್ತದೆ. “ರಾಧಾರಮಣ’ ಚಿತ್ರದಿಂದ “ಯಮಕಿಂಕರ’ ಚಿತ್ರದವರೆಗೆ ಅರ್ಧ ಶತಮಾನದ ಕಾಲ ಹಬ್ಬಿರುವ ಈ “ಬಾಲಕೃಷ್ಣಾಯಣ’ದಲ್ಲಿ ನಾವು ವೈವಿಧ್ಯಮಯ ಸಾಧನೆ ನೋಡುತ್ತೇವೆ. “ಕನ್ಯಾದಾನ’ದ ಗೃಹಸ್ಥ ಇನ್ನೂ ನೆನಪಾಗುತ್ತಾನೆ. “ಸ್ಕೂಲ್ ಮಾಸ್ಟರ್’ ವ್ಯಕ್ತಿ ಹಾಸ್ಯದ ಬುಗ್ಗೆ ಉಕ್ಕಿಸುತ್ತಾನೆ. ಹಾಗೆಯೇ ಅನೇಕ ಪಾತ್ರಗಳು ಕಾಲಗರ್ಭದಲ್ಲಿ ಸೇರಿಹೋಗಿವೆ ; ನಮಗೆ ಕೂಡಲೇ ನೆನಪಾಗದೆ ಇರುವಷ್ಟು ಅಸ್ಪಷ್ಟವಾಗಿವೆ. “ಬೆಳ್ಳಿಮೋಡ’ದಲ್ಲಿ ಬಾಲಕೃಷ್ಣ ಏನಾಗಿದ್ದಾರೆ? “ಬಂಗಾರದ ಮನುಷ್ಯ’ದಲ್ಲಿನ ಅವರು ನೆನಪಾಗುತ್ತಾರೆಯೇ ? ಇವೆಲ್ಲ ಪ್ರಶ್ನೆ ಅಪ್ರಸ್ತುತ. ಯಾಕೆಂದರೆ ಒಬ್ಬ ಕಲಾವಿದ ಅನೇಕ ರೀತಿಯಲ್ಲಿ ತೋರಿಸಿಕೊಳ್ಳಬೇಕಾಗುತ್ತದೆ ; ಬದುಕು ಸಾಗಿಸಲು ಹಲವಾರು ರೂಪ ತಾಳಬೇಕಾಗುತ್ತದೆ.

ಬಾಲಕೃಷ್ಣ ತಮ್ಮ ವೃತ್ತಿಯ ಆರಂಭದಲ್ಲಿ ನಾಟಕಗಳ ಪೋಸ್ಟರ್ ಬರೆಯುವವರಾಗಿದ್ದುದು, ಹಾರ್ಮೋನಿಯಂ ನುಡಿಸುತ್ತಿದ್ದುದು, ಪರದೆ ಎಳೆಯುತ್ತಿದ್ದುದು, ಬಣ್ಣ ಹಚ್ಚುತ್ತಿದ್ದುದು ನೆನಪದಾಗ ಇವರಿಗೆ ಜೀವನ ಕಲಿಸಿದ ಅಸಂಖ್ಯ ವಿದ್ಯೆಗಳ ಬಗ್ಗೆ ಕುತೂಹಲವಾಗುತ್ತದೆ. ಹಾಗೆಯೇ ಒಬ್ಬ ಮನುಷ್ಯನ ಪ್ರತಿಭೆಯ ಬಗ್ಗೆ ಸೋಜಿಗವಾಗುತ್ತದೆ. ಪ್ರತಿಭೆ ಒಂದು ರೀತಿಯಲ್ಲಿ ಸಂಪತ್ತಿನ ಹಾಗೆ, ತಟಸ್ಥ ; ಅದು ತರಬೇತಿಗೊಳಗಾದರೆ ನಟನೆಗೂ ಆಗಬಹುದು, ಹಾರ್ಮೋನಿಯಂ ನುಡಿಸಲೂ ಆಗಬಹುದು. “ಅವನು ಕೊಟ್ಟ ಒಡವೆ ವಸ್ತು ನನಗೆ ಅವಗೆ ಗೊತ್ತು’ ಎಂಬ ಬೇಂದ್ರೆಯವರ ಮಾತು ಪ್ರತಿಭೆ ಎಂಬ ಒಡವೆಗೆ ಕೂಡ ಅನ್ವಯಿಸುತ್ತದೆ. ಪೋಸ್ಟರ್ ಬರೆಯಬಲ್ಲವರಾಗಿದ್ದ, ಅಭಿನಯಿಸಬಲ್ಲವರಾಗಿದ್ದ ಬಾಲಕೃಷ್ಣ ಮನಸ್ಸು ಮಾಡಿದ್ದರೆ ಕತೆ ಬರೆಯಬಹುದಿತ್ತು. ಬದುಕಿನ ಮರ್ಮಗಳು ಅವರಿಗೆ ಗೊತ್ತಿದ್ದವು.

ಬಾಲಕೃಷ್ಣ ಬಡವರಾಗೇ ಇದ್ದರು. ಶ್ರೀಮಂತರಾಗುವ ಉದ್ದೇಶ ಕೂಡ ಅವರಿಗೆ ಇದ್ದಂತಿರಲಿಲ್ಲ. ಅಭಿಮಾನ್ ಸ್ಟುಡಿಯೋ ಮಾಡಲೆತ್ನಿಸಿದ ಬಾಲಕೃಷ್ಣರಲ್ಲಿ ಎಲ್ಲವನ್ನೂ ಒಟ್ಟುಗೂಡಿಸಿ, ಮನವೊಲಿಸಿ, ಸಾಕಷ್ಟು ಹಣ ಸಂಗ್ರಹಿಸಿ ಸ್ಟುಡಿಯೋ ರೂಪಿಸುವ ಸಿದ್ಧತೆ, ಏಕಾಗ್ರತೆ ಇರಲಿಲ್ಲ. ಅವರಿಗಿದ್ದ ಸ್ವಾಭಿಮಾನ ಮತ್ತು ಅನುಭವಕ್ಕೆ ತಕ್ಕಂತಹ ಮುತ್ಸದ್ಧಿತನ, ವ್ಯವಹಾರ ಜ್ಞಾನ ಇರಲಿಲ್ಲ. ಇದು ಅವರ ಪ್ರತಿಭೆಯ ಮಿತಿ ಮತ್ತು ಅರ್ಥಪೂರ್ಣತೆಯತ್ತ ನಮ್ಮ ಗಮನಹರಿಸಬೇಕು. ಕಿವುಡರಾದ ಮೇಲೂ ಅನುಭವದಿಂದ ಒಂದಿಷಟೂ ತಪ್ಪದೇ, ಟೈಮಿಂಗ್ ಹೆಚ್ಚು-ಕಮ್ಮಿ ಮಾಡದೆ ಸಂಭಾಷಣೆ ಹೇಳಬಲ್ಲವರಾಗಿದ್ದ ಬಾಲಕೃಷ್ಣ ಒಂದು ರೀತಿಯ ಏಕತಾನದ ಅಭಿವ್ಯಕ್ತಿಯನ್ನು , ಯಾಂತ್ರಿಕ ಅಭಿನಯವನ್ನು ಕೂಡ ಬೆಳೆಸಿಕೊಂಡರು. ಚಿತ್ರ ವಿಮರ್ಶೆ, ಚರ್ಚೆ, ಆಕ್ಷೇಪಣೆ ಇಲ್ಲದ ಪರಿಸರದಲ್ಲಿ ಎಲ್ಲ ವೃತ್ತಿ ಕಲಾವಿದರೂ ರೂಢಿಸಿಕೊಳ್ಳುವ ಜಡತ್ವ ಇದು ; ಇದರಿಂದ ಹೊರಬರಲು ಕಲಾವಿದನಾದವನಿಗೆ ಸ್ಫೂರ್ತಿ, ಹಣ, ಪ್ರೋತ್ಸಾಹ ಎಲ್ಲ ಬೇಕಾಗುತ್ತದೆ. ಹೊಸಹೊಸ ಪ್ರಯೋಗ ಮಾಡುವ ಕುಶಲತೆ, ಅದಕ್ಕೆ ಸಾಕಷ್ಟು ವೇಳೆ ಬೇಕಾಗುತ್ತವೆ ; ಸದಾ ಜೀವನ ಸಾಗಿಸಲು ಹೋರಾಡುತ್ತಿದ್ದ ಬಾಲಕೃಷ್ಣ ಈ ಮ್ಯಾನರಿಸಂಗಳಲ್ಲೇ ತಂಗುತ್ತಿದ್ದರು ; ನಟಿಸುವುದನ್ನು ಸುಲಭ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
narasihmaraju
ಬಾಲಕೃಷ್ಣ ಮಹಾ ಪ್ರತಿಭಾವಂತ, ಸೂಕ್ಷ್ಮಜ್ಞ, ಎಂಥ ಕ್ಲಿಷ್ಟ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಬಲ್ಲ ಜಟಿಲ ಮನುಷ್ಯ. ಇದರಿಂದಾಗಿಯೇ ಬಾಲಕೃಷ್ಣ ನಮ್ಮ “ಪತ್ರಿಕೆ’ಯ ಕಟ್ಟಾ ಅಭಿಮಾನಿಯಾಗಿದ್ದರೆಂದು ನನ್ನ ಊಹೆ. ಅವರು ಅಂತಿಂಥ ಅಭಿಮಾನಿಯಾಗಿರಲಿಲ್ಲ. “ಪತ್ರಿಕೆ’ ಸಿಕ್ಕಿದರೆ ಓದುವ, ಇಲ್ಲದಿದ್ದರೆ ಸುಮ್ಮನಿರುವ ಓದುಗರಾಗಿರಲಿಲ್ಲ. “ಪತ್ರಿಕೆ’ ಇಲ್ಲದಿದ್ದರೆ ಚಡಪಡಿಸುತ್ತಿದ್ದ ಬಾಲಕೃಷ್ಣ ಇದು ಬೆಂಗಳೂರಲ್ಲಿ ಬಿಡುಗಡೆಯಾಗುವ ಮಂಗಳವಾರ ಇದಕ್ಕಾಗಿ ಹುಡುಕಿಕೊಂಡು ಹೋಗುತ್ತಿದ್ದರು. ಅನೇಕ ವರ್ಷಗಳ ಬಳಿಕ ಈ ಬಗ್ಗೆ ಕೇಳಿದ ನಾನು ಬಾಲಕೃಷ್ಣರಿಗೆ ಒಂದು ಪತ್ರಿಕೆ ಪೋಸ್ಟ್ ಮಾಡಲು ಹೇಳಿದೆ-ಆದರೆ ಅದು ಗುರುವಾರ ತಲುಪುವಷ್ಟರಲ್ಲಿ ಬಾಲಕೃಷ್ಣ ಮಂಗಳವಾರವೇ ಓದಿಬಿಟ್ಟಿರುತ್ತಿದ್ದರು.

ಬಾಲಕೃಷ್ಣರಂಥ ಹತ್ತಾರು ಅಭಿಮಾನಿಗಳನ್ನು ನಾನು ಬಲ್ಲೆ. ಬಾಲಕೃಷ್ಣ ಅವರು ತೀರಿಕೊಂಡಿರುವ ಈಗ ನಾನು ಅವರು ಈ ಪತ್ರಿಕೆಯಲ್ಲಿ ಕಂಡಿರಬಹುದಾದ ಅಂಶಗಳ ಬಗ್ಗೆ, ಆಯಸ್ಕಾಂತದ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ಸದಾ ಪ್ರಯೋಗ ಮಾಡುವ ಮನುಷ್ಯ ; ನಾನು ಬರೆದ ಶೈಲಿಗಿಮತ ಭಿನ್ನವಾಗಿ, ಗ್ರಹಿಕೆಯನ್ನು ಹೇಗೆ ಹೇಳಿದರೆ ಉತ್ತಮವಾಗುತ್ತೆ ಎಂದು ಪರದಾಡುವ ಮನುಷ್ಯ, ನಾನು ಬರೆಯುವುದರಲ್ಲಿನ ಅಡ್ಡಾದಿಡ್ಡಿ, ಸಡಿಲ ಶೈಲಿ ಅಥವಾ ಬಿಕ್ಕಟ್ಟಿನ ನಿರೂಪಣೆ ಎಲ್ಲರಿಗೂ ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ಜೀವಂತಿಕೆಯೇ ಎಲ್ಲದರ ಗುರಿ ; ಜೀವಂತಿಕೆಯಿಂದಿರಬೇಕು. ಅಗ್ಗದ ಬರವಣಿಗೆಯಾಗಬಾರದು, ಅನ್ನಿಸಿದ್ದನ್ನು ನೇರವಾಗಿ, ಸೂಕ್ಷ್ಮವಾಗಿ ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಇದು ಬಾಲಕೃಷ್ಣೃಇಗೆ ಹಿಡಿಸಿರಬಹುದು. ಬಾಲಕೃಷ್ಣ ಕಲಾವಿದ ; ಜಡತ್ವ, ನಿರ್ಜೀವತೆ, ಭಂಡತನ, ಅವರಿಗೆ ಸುಲಭವಾಗಿ ಗೊತ್ತಾಗುತ್ತಿತ್ತು. ನನ್ನನ್ನೆಂದೂ ನೋಡದ, ನನ್ನ ಕತೆ, ಕಾದಂಬರಿ ಓದಿರಲಾರದ ಬಾಲಕೃಷ್ಣ ಪತ್ರಿಕೆಯನ್ನು ಇಷ್ಟಾಗಿ ಹಚ್ಚಿಕೊಂಡಿದ್ದಕ್ಕೆ ಇನ್ನೊಂದು ಚಿಕ್ಕ ಕಾರಣವಿರಬಹುದು-“ಪತ್ರಿಕೆ’ಯಲ್ಲಿರುವುದು ನಾನು ಮಾತ್ರವಲ್ಲ, ಅದು ಅನೇಕರ ಗ್ರಹಿಕೆ ಮತ್ತು ಕರ್ನಾಟಕದ ಹಲವರ ಸ್ಪಂದನ.

ಬಾಲಕೃಷ್ಣ ಬಗ್ಗೆ ಬರೆಯುವಾಗ ಕಣ್ಣು ಹನಿಗೂಡುತ್ತಿವೆ ; ಈ ಬಾಲಕರಷ್ಣ, ನರಸಿಂಹರಾಜು ಅರಸೀಕೆರೆ, ಬೀರೂರು, ತಿಪಟೂರು ಕಡೆಯವರು, ಬಯಲು ಸೀಮೆಯ ರಂಗಮಂಚದಿಂದ ಬಂದವರು. ಹಿಂದುಳಿದ ಜನಾಂಗಕ್ಕೆ ಕಡು ಕಷ್ಟದಲ್ಲಿರುವ ಶೂದ್ರ ಜನಾಂಗಕ್ಕೆ ಸೇರಿದವರು ; ನಮ್ಮ ಜಾನಪದದ ಬಾಯಿಮಾತಿನ ಪರಂಪರೆಗೆ ಸೇರಿದವರು. ಜನಸಾಮಾನ್ಯರ ಬಳ್ಳಿ ಹೂಬಿಟ್ಟಂತೆ ಜನ್ಮ ತಾಳಿದವರು ಇವರೆಲ್ಲ.
ಇವರು ಹೋಗಿದ್ದರಿಂದ ನಮ್ಮ ಒಬ್ಬ ಅಭಿಮಾನಿ, ನನ್ನ ಪ್ರೀತಿಯ ವ್ಯಕ್ತಿ, ಕನ್ನಡ ಚಿತ್ರರಂಗದ ಒಂದು ಮುಖ್ಯ ಕೊಂಡಿ ಹೊರಟುಹೋದಂತಾಗಿದೆ. ಮದ್ರಾಸ್‌ನಲ್ಲಿ ಕಣ್ಣಿನ ಆಪರೇಷನ್ ಆಗಿ ನಾನು ಮಲಗಿದ್ದಾಗ ಬಂದು ಅಪ್ಪಿಕೊಂಡ ಬಾಲಕೃಷ್ಣರ ಬಿಸಿ ಇನ್ನೂ ನನ್ನ ಎದೆಮಿಡಿತವನ್ನು ಚುರುಕುಗೊಳಿಸುತ್ತಿದೆ.
lankesh
ಇನ್ನೇನು ಹೇಳಲಿ ? ಕುವೆಂಪು, ಬಾಲಕೃಷ್ಣರ ತರಹದ “ಪತ್ರಿಕೆ’ಯ ಅಭಿಮಾನಿಯಾಗಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಮ್ಮೆ ಪೋಸ್ಟ್‌ನಲ್ಲಿ “ಪತ್ರಿಕೆ’ ಅವರಿಗೆ ತಲುಪುವುದು ತಡವಾದಾಗ ಅವರು ಒದ್ದಾಡಿದ್ದನ್ನು ನೋಡಿದವರು ನನಗೆ ಹೇಳಿದರು. ಹಾಗೆಯೇ ವರ್ಷಗಟ್ಟಲೆ “ಪತ್ರಿಕೆ’ ಯನ್ನು ಓದಿ ಇಟ್ಟಿದ್ದರು ; ಅದನ್ನು ರದ್ದಿಗೆ ಹಾಕಬೇಕಾಗಿ ಬಂದಾಗ ತೇಜಸ್ವಿಯವರಿಗೆ, “”ಅಲ್ಲಯ್ಯ “ಪತ್ರಿಕೆ’ಯನ್ನು ನಾನು ಹೇಗೆ ಮಾರಲಿ” ಎಂದರಂತೆ.

ಬಾಲಕೃಷ್ಣರ ಅಭಿಮಾನ, ಕುವೆಂಪು ಅವರ ಅಕ್ಕರೆ ನನಗೆ ಅನೇಕ ಸೂಚನೆ, ಹಲಬಗೆಯ ಎಚ್ಚರಿಕೆ ಕೊಡುತ್ತದೆ. ಬದುಕುವ ಆಶೆಯನ್ನು ಕಳೆದುಕೊಂಡಿರುವಾಗ, ಎಂಥ ದುಗುಡದ ವೇಳೆಯಲ್ಲೂ ಇದು ಹುಮ್ಮಸ್ಸು ಹುಟ್ಟಿಸುತ್ತದೆ. (ಕೃಪೆ : ಲಂಕೇಶ್ ಪ್ರಕಾಶನ ಪ್ರಕಟಿಸಿರುವ “ಈ ನರಕ ಈ ಪುಲಕ” ಕೃತಿಯಿಂದ)

Advertisements