ಮನ್ನಾಡೆಯವರು ಹಿಂದಿ, ಬಂಗಾಳಿ, ಮಲಯಾಳಂನಲ್ಲದೇ ಮನ್ನಾಡೆಯವರು ಕನ್ನಡ ಚಿತ್ರಗಳಲ್ಲೂ ಹಾಡಿದ್ದಾರೆ. ಅವುಗಳೆಂದರೆ “ಕಲಾವತಿ” ಚಿತ್ರದಲ್ಲಿನ “ಕುಹೂ ಕುಹೂ’ ಗೀತೆ, “ಮಾರ್ಗದರ್ಶಿ’ ಚಿತ್ರದ “ಕಣ್ಣಿಲ್ಲವೇನೋ ನೆಲಕಾಣದೇನೋ’ ಹಾಗು “ಕಲ್ಪವೃಕ್ಷ’ ದಲ್ಲಿ “ಜಯತೇ ಜಯತೇ’ ಗೀತೆಗಳು. ಮನ್ನಾಡೆಯವರಿಗೆ ಫಾಲ್ಕೆ ಸನ್ಮಾನ ಸಲ್ಲುತ್ತಿರುವ ಸಂದರ್ಭದಲ್ಲಿ ಮುರಳೀಧರ ಖಜಾನೆಯವರು ಬರೆದ ಲೇಖನವಿದು. ಆಗಾಗ್ಗೆ ಖಜಾನೆಯವರು ಸಾಂಗತ್ಯಕ್ಕೆ ಇನ್ನು ಮುಂದೆ ಬರೆಯಲಿದ್ದಾರೆ.

ಬಹಳ ತಡವಾಯಿತು ಎಂದು ಹೇಳುವ ಮೊದಲು ಕೇಂದ್ರ ಸರಕಾರ ಕೊನೆಗೂ ಭಾರತದ ಒಂದು ಅತ್ಯಮೂಲ್ಯ ಗಾಯಕನಿಗೆ ಸಿನಿಮಾ ಜಗತ್ತಿನ ಸರ್ವ ಶ್ರೇಷ್ಠ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಮನ್ನಾಡೆಯವರು ಸಿನಿಮಾ ಕ್ಷೇತ್ರಕ್ಕೆ ನೀಡಿದ ವೈಯಕ್ತಿಕ ಕೊಡುಗೆಗೆ ದಕ್ಕಿದ ಮಾನ-ಸಮ್ಮಾನವಿದು.

ಇಂಥ ಪ್ರಶಸ್ತಿ ದಕ್ಕುವುದೇ ಬಹಳ ತಡವಾಗಿ ಎಂಬ ಮಾತಿದೆ. ಆದರೆ ಮನ್ನಾಡೆಯವರ ಸಂದರ್ಭದಲ್ಲಿ ನಿಜವಾಗಲೂ ತಡವೇ. ಇದರಲ್ಲಿ ಎರಡು ಮಾತಿಲ್ಲ. ಮನ್ನಾಡೆಯವರು ಸಂಸ್ಥೆಯಂತೆ ಸಂಗೀತಕ್ಕೆ ದುಡಿದರು. ಎಲ್ಲ ಬಗೆಯ ರಸಗಳಲ್ಲೂ ಹಾಡಿದರು. ಹಾಸ್ಯವಿರಬಹುದು, ನಮ್ಮೊಳಗೆ ಕಾಡುವಂಥ ಭಾವನೆಗಳಿಗೆ ಜೀವ ತುಂಬುವುದಿರಬಹುದು, ವಿಷಾದ, ಒಲವಿನ ಹಾಗೂ ಶಾಸ್ತ್ರೀಯ ನೆಲೆಯ ಗೀತೆಗಳೆಲ್ಲವನ್ನೂ ಮಧುರವಾಗಿ ಹಾಡಿದರು. ನಿಜವಾಗಿಯೂ ಈ ಪ್ರಶಸ್ತಿ ಅವರಿಗೆ ಎಂದೋ ಸಿಗಬೇಕಿದ್ದ, ಆದರೆ ಚುಕ್ತಾವಾಗದೇ ಉಳಿದಿದ್ದ ಹಳೆಯ ಬಾಕಿ. ಈಗ ಸಂದಿದೆ. ಮನ್ನಾಡೆ, ಒಬ್ಬ ಶಾಸ್ತ್ರೀಯ ಸಂಗೀತಗಾರ. ಬರಿದೇ ಶಾಸ್ತ್ರೀಯ ಸಂಗೀತ ಕಲಿತದ್ದಷ್ಟೇ ಅವರ ಹೆಗ್ಗಳಿಕೆಯಲ್ಲ ; ಅದನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಜನಸಾಮಾನ್ಯನಿಗೆ ಮುಟ್ಟಿಸಿದ್ದು ಅವರ ಅಗ್ಗಳಿಕೆ.
mannadey

ಭಾರತೀಯ ಸಿನಿಮಾದಲ್ಲಿ ಒಬ್ಬ ಪ್ರಮುಖ ಹಿನ್ನೆಲೆ ಗಾಯಕನಾಗಿ ಮೆರೆದ ಮನ್ನಾಡೆಯವರು 1950 ರಿಂದ 70 ರಲ್ಲಿ ನಿಜವಾಗಿಯೂ ತಮ್ಮ ಮಧುರ ದನಿ ಮೂಲಕವೇ ಎಲ್ಲರನ್ನೂ ಆಕ್ರಮಿಸಿಕೊಂಡರು. ಸುಮಾರು 3,500 ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದರು. ಅದೂ ಬರಿಯ ಹಿಂದಿಯಲ್ಲಲ್ಲ ; ಬಂಗಾಳಿ, ಮಲಯಾಳಂ ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ. “ಪೂಚೋ ನ ಕೈಸೆ ಮೈನೆ ರೇನ್ ಬಿತಾಯೆ”, “ಎ ಮೆರೆ ವತನ್, ಎ ಮೆರೆ ಬಿಚಡೆ ಚಮನ್’, “ಪ್ಯಾರ್ ಹುವಾ, ಇಕರಾರ್ ಹುವಾ’, “ಲಗಾ ಚುನಾರಿ ಮೇ ದಾಗ್’, “ಎ ಮೆರಿ ಜೊಹರಾಜಬಿ’, “ಎ ಮೆರೆ ಪ್ಯಾರೆ ವತನ್’, “ಆಜಾ ಸನಮ್ ಮಧುರ ಚಾಂದಿನಿ ಮೇ ಹಂ’, “ದಿಲ್ ಕಾ ಹಾಲ್ #ನಾ ದಿಲ್ವಾಲೆ’, “ಯೇ ರಾತ್ ಭೀಗಿ ಭೀಗಿ’, “ಝನಕ್ ಝನಕ್ ತೆರಿ ಭಾಜೆ ಪೆಹಲಿಯಾ’, “ತೂ ಪ್ಯಾರ್ ಕಾ ಸಾಗರ್ ಹೈ”, “ಜಿಂದಗಿ ಕೈಸಿ ಹೈ ಪಹೆಲಿ’, “ಯಾರಿ ಹಿ ಇಮಾನ್ ಮೆರಾ’(ಚಿತ್ರ ಜಂಜೀರ್)-ಇಂಥ ಹಲವಾರು ಗೀತೆಗಳು ಕೇವಲ ಅವರ ಅಭಿಮಾನಿಗಳಿಗಷ್ಟೇ ಪ್ರಿಯವಾಗಿರಲಿಲ್ಲ. ಭಾರತೀಯ ಸಿನಿಮಾದ “ದ್ರೋಣಾಚಾರ್ಯ’ ಎಂಬಂತೆ ಅವರನ್ನು ಪರಿಗಣಿಸಿದ್ದ ಆ ಕಾಲದ ಹಲವು ಸಂಗೀತ ನಿರ್ದೇಶಕರಿಗೂ ಮೆಚ್ಚುಗೆಯಾಗಿದ್ದವು.

ಮನ್ನಾಡೆ ದೇಶದ ಹೆಸರಾಂತ ಶಾಸ್ತ್ರೀಯ ಗಾಯಕ ಭೀಮಸೇನ್ ಜೋಷಿಯವರೊಂದಿಗೆ ಹಾಡಿದ ಯುಗಳ ಗೀತೆ “ಕೇತಕಿ ಗುಲಾಬ್ ಜೂಹಿ’ಯೂ ವಿಶಿಷ್ಟವಾದುದೇ. ಅಲ್ಲದೇ, ಕಿಶೋರ್ ಕುಮಾರ್ ಅವರೊಂದಿಗೂ “ಶೋಲೆ’ಸಿನಿಮಾದಲ್ಲಿ ಹಾಡಿರುವ “ಯೇ ದೋಸ್ತಿ, ಹಮ್ ನಹಿ ತೋಡೆಂಗೆ’ ಹಾಗೂ “ಪಡೋಸನ್’ ಚಿತ್ರದ “ಏಕ್ ಚತುರ್ ನಾರ್’ ಅತ್ಯಂತ ಖುಷಿ ನೀಡುವಂಥವು.

ಅಚ್ಚರಿಯ ಮಾತುಗಳಲ್ಲ ಇವು. ಸುಮಾರು ಮೂರು ದಶಕಗಳಲ್ಲಿ ದಿಗ್ಗಜರಾದ ಮಹಮದ್ ರಫಿ, ಮುಕೇಶ್, ಕಿಶೋರ್ ಕುಮಾರ್ ಹಾಗೂ ತಲತ್ ಮೊಹಮೂದ್ ಅವರೊಂದಿಗೆ ಸೆಣಸಿದ್ದು ನಿಜ. ರಫಿ ಮತ್ತು ಮನ್ನಾಡೆ ಇಬ್ಬರೂ ಹಾಡಿದ ಚಿತ್ರಗಳಲ್ಲಿ ಸಹಜವಾಗಿ ರಫಿಯವರ ಹಾಡುಗಳ ಸಾರ್ವಭೌಮತ್ವವಿದ್ಧೇ ಇರುತ್ತಿತ್ತು. ಅದರ ಮಧ್ಯೆಯೂ ಮನ್ನಾಡೆಯವರ ಹಾಡುಗಳು ಕಾಣುತ್ತಿದ್ದವು, ಕೇಳಿಸುತ್ತಿದ್ದವು. ಮನ್ನಾಡೆಯವರು ಅದ್ಭುತ ಗಾಯಕನಲ್ಲ ಎಂಬುದಕ್ಕೆ ಕಾರಣಗಳೇ ಇಲ್ಲ. ಸ್ವತಃ ಕಿಶೋರ್ ಕುಮಾರಿಗೂ ಇವರನ್ನು ಕಂಡರೆ ಅಪಾರ ಗೌರವ. ಖ್ಯಾತ ಸಂಗೀತ ನಿರ್ದೇಶಕರಾದ ಕಲ್ಯಾಣಜಿ-ಆನಂದಜಿ ಅವರು ಮನೋಜ್‌ಕುಮಾರ್ ರ “ಉಪಕಾರ್’ಚಿತ್ರಕ್ಕೆ “ಕಸ್ಮೆ ವಾದೆ ಪ್ಯಾರ್ ವಫಾ ಸಬ್ ಬಾತೇ ಹೈ’ ಗೀತೆಯನ್ನು ಹಾಡಲು ಕಿಶೋರ್‌ಗೆ ಕೇಳಿದಾಗ, ಅವರೇ “ನನಗಿಂತ ಮನ್ನಾಡೆಯವರು ಈ ಹಾಡಿಗೆ ನ್ಯಾಯ ಒದಗಿಸಿಕೊಡಬಲ್ಲರು. ಅವರನ್ನು ಬಳಸಿಕೊಳ್ಳಿ’ ಎಂದು ಹೇಳಿದರಂತೆ.

ಬಹಳಷ್ಟು ಮಂದಿ ಮನ್ನಾಡೆಯವರ ಸಮಕಾಲೀನರು ಇನ್ನಿಲ್ಲವಾಗಿರುವಾಗ, ಹೊಸ ತಲೆಮಾರು ಅವರ ಧ್ವನಿಯನ್ನು ಪರಿಚಯಿಸಿಕೊಳ್ಳಬೇಕಾದ ಅಗತ್ಯವನ್ನು ಸರಕಾರ ನೀಡಿದ ಪ್ರಶಸ್ತಿ ಒತ್ತಿ ಹೇಳುತ್ತದೆ. ಈ ನಿಟ್ಟಿನಲ್ಲಿ ಸರಕಾರ ಒಬ್ಬ ಹಿರಿಯ ಗಾಯಕನನ್ನು ಗೌರವಿಸುತ್ತಿರುವುದು ಸೂಕ್ತವೇ.
***
ಪ್ರಬೋಧ್ ಚಂದ್ರ ಡೇ, ಸಂಗೀತ ಕ್ಷೇತ್ರದಲ್ಲಿ ರಾರಾಜಿಸಿದ ಮನ್ನಾಡೆಯವರ ಮೂಲ ಹೆಸರು. ೧೯೧೯ ರ ಮೇ ೧ ರಂದು ಜನಿಸಿದ್ದು. ಬಾಲಕನಾಗಿದ್ದಾಗಲೇ ತನ್ನ ಚಿತ್ತದ ಭಿತ್ತಿಯನ್ನು ಸಂಗೀತದಿಂದಲೇ ಸಿಂಗರಿಸಿಕೊಂಡಿದ್ದ. ತನ್ನ ತಂದೆ ತಾಯಿಗಿಂತಲೂ ಚಿಕ್ಕಪ್ಪ ಕೃಷ್ಣಚಂದ್ರ ಡೇ (ಕೆ.ಸಿ. ಡೇ) “ಬಾಬು ಕಾಕಾ’ ಅವರ ಪ್ರಭಾವಕ್ಕೆ ಒಳದಾದದ್ದೇ ಹೆಚ್ಚು. ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಸಹಪಾಠಿಗಳನ್ನು ರಂಜಿಸುತ್ತಿದ್ದುದು ತಮ್ಮ ಗಾಯನದಿಂದಲೇ. ಕೆ.ಸಿ. ಡೇ ಹಾಗೂ ಉಸ್ತಾದ್ ದಬೀರ್ ಖಾನ್ ಇವರಿಗೆ ಸಂಗೀತ ಗುರುಗಳು.
rafi
ಕೋಲ್ಕತ್ತಾದ ವಿದ್ಯಾಸಾಗರ್ ಕಾಲೇಜಿನಿಂದ ಪದವೀಧರನಾದ ಮೇಲೆ ಅವರ ಎದುರಿದ್ದ ಕಠಿಣ ಸವಾಲೆಂದರೆ “ಬ್ಯಾರಿಸ್ಟರ್’ಆಗುವುದು ಅಥವಾ ಹಿನ್ನೆಲೆ ಗಾಯಕನಾಗುವುದು. ಬದುಕೇ ತನ್ನೊಳಗೆ ಸೆಳೆದುಕೊಂಡು ತನಗೆ ಬೇಕಾದಂತೆ ರೂಪಿಸುವ ಮೊದಲೇ ಮನ್ನಾಡೆ ತನ್ನ ಕನಸನ್ನು ಕಂಡಿದ್ದರು. ತನ್ನ ಕನಸನ್ನು ನಿಜಗೊಳಿಸುವಂಥ ಒಂದು ಕನಸಿನ ನಗರದ ತಲಾಶೆಯಲ್ಲಿದ್ದ ಮನ್ನಾಡೆಗೆ ಕೊನೆಗೂ ಅಂಥದೊಂದು ನಗರ ಸಿಕ್ಕೇ ಬಿಟ್ಟಿತು. ತನ್ನ ಚಿಕ್ಕಪ್ಪ ಕೆ.ಸಿ. ಡೇಯಂಥವರ ಸೆಳೆತದಿಂದ ಮುಕ್ತರಾಗಲು ಸಾಧ್ಯವಾಗಲೇ ಇಲ್ಲ. ಕೆ.ಸಿ. ಡೇ ಅವರೇ ತನ್ನ ಮಗನಂತಿದ್ದ ಮನ್ನಾಡೆಗೆ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಹಾರಲು ಸ್ವಾತಂತ್ರ್ಯ ಕೊಟ್ಟರು, ಅವಕಾಶ ಕಲ್ಪಿಸಿದರು. ಇವೆಲ್ಲದರ ಒಟ್ಟು ಪರಿಣಾಮ ಮನ್ನಾಡೆ ಹುಟ್ಟಿಕೊಂಡರು. ಕಾಲದೇಶವನ್ನು ಮೀರಿ ಸರ್ವಕಾಲಕ್ಕೂ ಮಧುರವನ್ನೇ ಅಡಗಿಸಿಕೊಂಡಂಥ ಹಾಡುಗಳ ಮೂಲಕವೇ ಮನ್ನಾಡೆ ಸುಮಾರು ಐದು ದಶಕಗಳ ಕಾಲ ಆಳಿದರು, ಈಗಲೂ ಆಳುತ್ತಿದ್ದಾರೆ.
ಬೋಲ್, ರಬೀಂದ್ರ ಸಂಗೀತ ಹಾಗೂ ಖ್ಯಾಲ್‌ಗಳಿಂದ ಯುವಕ ಮನ್ನಾಡೆ ರೂಪುಗೊಂಡಿದ್ದು. ಜತೆಗೆ ಅವರ ಚಿಕ್ಕಪ್ಪ ಟಪ್ಪ, ಠುಮ್ರಿ, ಭಜನ್ಸ್ ಹಾಗೂ ಕವಾಲಿಯನ್ನೂ ಪರಿಚಯಿಸಿದ್ದರು. ಸದಾ ಕಲಿಯುತ್ತಿರಲೇಬೇಕೆಂಬ ವಿನಯವನ್ನೂ ಕಲಿಸಿದ್ದರು. ಹಾಗಾಗಿ ಸಂಗೀತ ನಿರ್ದೇಶಕರಾದ ಮೇಲೂ ಮನ್ನಾಡೆ ಕಲಿಯುತ್ತಲೇ ಇದ್ದರು. ಅನಂತರ ಹಿಂದೂಸ್ತಾನಿ ಸಂಗೀತಗಾರ ಉಸ್ತಾದ್ ಅಮಾನ್ ಅಲಿಖಾನ್ ಹಾಗೂ ಅಬ್ದುಲ್ ರೆಹಮಾನ್ ಖಾನ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದರು.

1940 ರಲ್ಲಿ ಕೆಸಿ ಡೇ ಅವರು ಹೊಸ ಅವಕಾಶಗಳತ್ತ ಮುಖ ಮಾಡಿ ಮುಂಬಯಿಗೆ ಹೊರಟರು. ಮನ್ನಾಡೆ ಸಹ ಅವರನ್ನು ಸೇರಿಕೊಂಡರು. ಇವರು ರೂಪಿಸಿದ್ದೇ ಮನ್ನಾಡೆಯ ನಿಜರೂಪ. 1942 ರಲ್ಲಿ ಇವರ ಸಂಗೀತ ನಿರ್ದೇಶನದಲ್ಲೇ ಮನ್ನಾಡೆಯವರಿಗೆ ಚೊಚ್ಚಲ ಅವಕಾಶ. “ತಮನ್ನಾ’ ಚಿತ್ರದ ಗೀತೆ. ಇದರಲ್ಲಿ ಮನ್ನಾಡೆಯವರೊಂದಿಗೆ ಸಿನಿಲೋಕಕ್ಕೆ ಪರಿಚಯವಾದ ಮತ್ತೊಬ್ಬರು ಗಾಯಕಿ ಸುರಯ್ಯಾ. ಈಕೆ ಅಲ್ಪವಧಿಯಲ್ಲೇ ಗಾಯಕಿಯಾಗಿ, ಅಭಿನೇತ್ರಿಯಾಗಿಯೂ ಜನಪ್ರಿಯರಾದರು. ಆದರೆ ಮನ್ನಾಡೆ ಒಂದಷ್ಟು ವರ್ಷಗಳ ಕಾಲ ಅಜ್ಞಾತವಾಸದಲ್ಲಿರಬೇಕಾಯಿತು. ಅಲ್ಲಿಯವರೆಗೂ ಕಾದದ್ದು ಅವರನ್ನು ತಾಳ್ಮೆಯೇ. ಬಹಳಷ್ಟು ವರ್ಷ ಹಿರಿಯ ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ದುಡಿಯಬೇಕಾಯಿತು. ಇಂಥ ಪರಿಸ್ಥಿತಿ ಅವರನ್ನು ಯಾವ ಹಂತಕ್ಕೆ ತಂದಿಟ್ಟಿತ್ತೆಂದರೆ ಒಮ್ಮೆ ವಾಪಸು ಕಲ್ಕತ್ತಾಕ್ಕೆ ಹೋಗಿ ವಕೀಲರಾಗುವುದೇ ಉಚಿತ ಎನಿಸಿತ್ತು. ಹಾಗೆ ಮಾಡಲಿಲ್ಲ.
mannadey 1
ಮನ್ನಾಡೆಯವರ ಪ್ರತಿಭೆ ಪ್ರಕಾಶಿಸಲು ಬಹಳ ಸಮಯವಾಗಲಿಲ್ಲ. ತಮನ್ನಾ ಮೂಲಕ ಪ್ರವೇಶಿಸಿ, ನಂತರ ವಿಜಯ್ ಭಟ್ಟ್ ಅವರ “ರಾಮರಾಜ್ಯ’ ಚಿತ್ರಕ್ಕೆ ಹಾಡಿದರು. ನಂತರ “ಮಶಾಲ್’ ಚಿತ್ರದಲ್ಲಿ…ಹೀಗೆ ಹೊಸ ದನಿಯನ್ನು ಜನ ಗುರುತಿಸತೊಡಗಿದರು, ಪ್ರಕಾಶಿಸತೊಡಗಿದರು. ಅವರ ಗಾಯನದ ಮಾಧುರ್ಯತೆ, ಶಾಸ್ತ್ರೀಯ ನೆಲೆ, ಅಚ್ಚುಕಟ್ಟಾದ ಗಾಯನ ಎಲ್ಲವೂ ಸಂಗೀತ ನಿರ್ದೇಶಕರನ್ನು ಸೆಳೆಯತೊಡಗಿತು.

ನಿಜ, ಸಂಗೀತ ನಿರ್ದೇಶಕರು ಮನ್ನಾಡೆಯವರ ನಿಜವಾದ ಸಾಮರ್ಥ್ಯ ಅರಿಯಲು ಸ್ವಲ್ಪ ಸಮಯ ತೆಗೆದುಕೊಂಡರು. ಅಷ್ಟೇ ಅಲ್ಲ, ಅವರು ಕಂಡುಕೊಂಡ ಮತ್ತೊಂದು ಸತ್ಯವೆಂದರೆ “ಮನ್ನಾಡೆ ಬರಿಯ ಶಾಸ್ತ್ರೀಯ ಟ್ಯೂನ್‌ಗಳಿಗಷ್ಟೇ ಅಲ್ಲ. ಅವರಲ್ಲಿ ಜನಪದದ ಲಯವಿದೆ ಎಂಬುದು. ಮನ್ನಾಡೆ ತಮ್ಮ ದನಿಯಿಂದ ಎಂಥ ಅಚ್ಚರಿಯನ್ನೂ ಸೃಷ್ಟಿಸುವಂತಿದ್ದರು. ಇದು ಸಂಗೀತ ನಿರ್ದೇಶಕರಿಗೆ ತಿಳಿಯುವಷ್ಟರ ಮಟ್ಟಿಗೆ ಮನ್ನಾಡೆ ಬಲು ದೂರ ಸಾಗಿದ್ದರು. ಆ ಸಂದರ್ಭದ ಮಾತೆಂದರೆ, “ಆ ಹೊತ್ತಿನ ಗಾಯಕರಲ್ಲಿ ಉಳಿದವರಿಗೆ ಹೋಲಿಸಿದರೆ ಇವರೇ ಬಹಳ ನಗಣ್ಯಕ್ಕೆ ಒಳಗಾಗಿದ್ದಂತೆ’. ಅದಕ್ಕೆ ಅವರ ಹಿಂಜರಿಕೆ, ಸಂಕೋಚ ಸ್ವಭಾವವೂ ಕಾರಣ ಎಂಬ ಮಾತೂ ಇದೆ. ಇದೇ ಅವರ ಪ್ರತಿಭೆಯ ಪ್ರಕಾಶಕ್ಕೂ ಅಡ್ಡಿಯಾಯಿತೆನ್ನಬಹುದು. ಆದರೆ ಇದೆಲ್ಲದರ ಒಟ್ಟೂ ಪರಿಣಾಮ ಮನ್ನಾಡೆಯವರ ಇನ್ನಷ್ಟು ಹಾಡುಗಳನ್ನು ಕೇಳದೇ ಕಳೆದುಕೊಂಡವರು ಸಂಗೀತ ಪ್ರೇಮಿಗಳು.

ಆದರೆ ಮನ್ನಾಡೆ ಈ ವಾದವನ್ನು ಒಪ್ಪಿಕೊಳ್ಳುವುದಿಲ್ಲ. ಈ ಹಿಂದೆ ಅವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ನನ್ನ ಅಭಿಪ್ರಾಯವನ್ನು ಒಪ್ಪಲಿಲ್ಲ. ಅವರು ಹೇಳಿದ್ದೇನೆಂದರೆ , “ನನಗೆ ಅತ್ಯುತ್ತಮ ಸಾಮರ್ಥ್ಯ ಹಾಗೂ ಪ್ರತಿಭೆ ಎರಡೂ ಇತ್ತು. ಒಂದು ಹಾಡನ್ನು ಹೆಚ್ಚು ಮಧುರಗೊಳಿಸಬಹುದಾದ ಸಾಧ್ಯತೆಗಳೂ ತಿಳಿದಿದ್ದವು. ರಫಿ ಮತ್ತು ಕಿಶೋರ್ ಸಹ ಸಮಾನ ಸಾಮರ್ಥ್ಯರೇ. ಆದರೂ, “ಅವರು ಮಾಡುವುದೆಲ್ಲವನ್ನೂ ನನಗೆ ಮಾಡಲು ಮನಸ್ಸಿರಲಿಲ್ಲ’. ಹಿನ್ನೆಲೆ ಗಾಯನದಂಥ ಕ್ಷೇತ್ರದಲ್ಲಿ ಸ್ವಲ್ಪ ಮಸುಕಾಗಿ ತೋರಲು ಇದೇ ನಿಜವಾದ ಕಾರಣ. ಮನ್ನಾಡೆ ಇಂದಿಗೂ ಕಿಶೋರ್ ಕುಮಾರ್‌ರ ಅಪ್ಪಟ ಅಭಿಮಾನಿ. ಅವರ ಪ್ರಕಾರ, “ಕಿಶೋರ್ ಕುಮಾರ್ ಒಬ್ಬ ಒಳ್ಳೆಯ ಕಲಾವಿದ ಹಾಗೂ ಅವರ ಧನಿ ಅಪ್ಟಟ ಮತ್ತು ವಿಶಿಷ್ಟವಾದದ್ದು. ಹಾಗೆಯೇ ರಫಿಯವರ ಹಾಡಿನ ಶೈಲಿ ವಿಭಿನ್ನವಾದುದು. ಆ ಗಾಯನ ಮಟ್ಟವೂ ಉನ್ನತವಾದುದು. ನನ್ನದೂ ಆ ಸ್ಕೇಲ್‌ಗೆ ಮುಟ್ಟಲಾರದು, ಆ ಔನ್ನತ್ಯವನ್ನು ತಲುಪಲಾರದು’ ಎನ್ನುತ್ತಾರೆ ಮನ್ನಾಡೆ. ನಿಜವಾಗಲೂ ಮನ್ನಾಡೆ ಸಹೃದಯಿ.

ಇಂಥ ಮನ್ನಾಡೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡದ್ದು ರಾಜ್‌ಕಪೂರರ “ಮೇರಾ ನಾಮ್ ಜೋಕರ್’ ಚಿತ್ರದ “ಏ ಭಾಯ್ ಝರಾ ದೇಕ್ ಕೆ ಚಲೋ’ ಹಾಡಿಗಾಗಿ. ಸಂಗೀತ ನಿರ್ದೇಶಕ ಶಂಕರ್ ಜೈಕಿಷನ್‌ರ ಅತ್ಯಂತ ಕ್ಲಿಷ್ಟ ಹಾಗೂ ಪ್ರಯೊಗಾತ್ಮಕವಾದ ಸಂಗೀತ ರಚನೆಯಾಗಿತ್ತು. ಆದರೆ ಮನ್ನಾಡೆಯವರ ತಮ್ಮ ದನಿಯ ಮೂಲಕ ಆ ಹಾಡನ್ನು ಎಷ್ಟೊಂದು ಸರಳ ಹಾಗೂ ಸುಂದರಗೊಳಿಸಿದರೆಂದರೆ ಎಲ್ಲರ ಬಾಯಲ್ಲೂ ಹರಿದಾಡುವಂತಾಗಿತ್ತು.

ಇಷ್ಟೆಲ್ಲದರ ಮಧ್ಯೆಯೂ ಇಂಥ ಮಹತ್ವದ ಗಾಯಕನ ಬದುಕಿನ ಪಥ ಸಿಕ್ಕಾಪಟ್ಟೆ ಏರುಪೇರು ಗತಿಯಲ್ಲಿ ಸಾಗಲಿಲ್ಲ. ಅವರ ಆಪ್ತವೆನಿಸುವ ದನಿ ಯುವ ನಾಯಕರಿಗೆ ಹೊಂದಲಾರದು ಎನ್ನಲಾಯಿತು. ಅವರ ಸಮಕಾಲೀನ ಗಾಯಕರಿಗೆ ಹೋಲಿಸಿದರೆ ಅತ್ಯಂತ ಪ್ರತಿಭಾವಂತ ಎನಿಸಿದರೂ ಹಲವು ಕಾರಣಗಳಿಂದ ಮುಂಚೂಣಿಯಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಅದೃಷ್ಟವೂ ಮನ್ನಾಡೆಯವರು ಹಿಂದುಳಿಯಲು ಕಾರಣ ಎಂಬ ಮಾತೂ ಇದೆ. ಶಂಕರ್ ಜೈಕಿಷನ್ ಅವರು, “ಶ್ರೀ 420’ ಯ ಎಲ್ಲ ಹಾಡುಗಳನ್ನೂ ವಹಿಸಿದಾಗ ಸಾಬೀತಾದ ಸಂಗತಿಯೆಂದರೆ ಮನ್ನಾಡೆಯವರು ತಮ್ಮ ದನಿಯಿಂದಲೇ ಚಿತ್ರದ ಯಶಸ್ಸಿನಲ್ಲಿ ಪಾಲುದಾರಿಕೆ ಪಡೆಯಬಹುದೆಂಬುದು. ಶಂಕರ್ ಜೈಕಿಷನ್ ಸ್ವತಃ ಇವರ ಸಾಮರ್ಥ್ಯಕ್ಕೆ ಮಾರುಹೋಗಿದ್ದರು. ಆದರೂ, ಸಿನಿಮಾಸಕ್ತರ ಅಭಿರುಚಿಯ ಹಿನ್ನೆಲೆಯಲ್ಲಿ “ಮೇರಾ ಜೂಟಾ ಹೈ ಜಪಾನಿ’ ಗೀತೆಯನ್ನು ಮುಕೇಶರಿಂದ ಹಾಡಿಸಲಾಯಿತು. ಆ ಹಾಡು ಎಷ್ಟೊಂದು ಜನಪ್ರಿಯವಾಯಿ ತೆಂದರೆ ಜನ ಮತ್ತೊಂದು ಗೀತೆಗೆ ಕಾಯುವಂತಾಯಿತು. ಅಲ್ಲದೇ, ರಾಜಕಪೂರರಿಗೆ ಮುಖೇಶರ ದನಿ ಸರಿಹೊಂದುತ್ತದೆ ಎನಿಸಿದಾಗ ಮನ್ನಾಡೆಯವರು ಹಿಂದೆ ಉಳಿಯಲೇಬೇಕಾಯಿತು. ರಾಜ್‌ಕಪೂರ್ ಸಿನಿಮಾಗಳಿಂದಲೇ ದೂರ ಉಳಿಯಬೇಕಾಯಿತು. ಈ ಮಧ್ಯೆಯೂ ಮನ್ನಾಡೆ ಆರ್.ಡಿ. ಬರ್ಮನ್‌ರಂಥ ಯುವ ಸಂಗೀತ ನಿರ್ದೇಶಕರೊಂದಿಗೂ ಹೆಜ್ಜೆ ಹಾಕಿ “ಆಯೋ ಕಹಾಂ ಸೇ ಘನಶ್ಯಾಂ’ ಗೀತೆಯನ್ನು ಹಾಡಿದರು. ಅದು ಬರ್ಮನ್‌ರ ಒಂದು ಒಳ್ಳೆಯ ಸೃಷ್ಟಿ.

ಆಧುನಿಕತೆಯ ಪರಿಣಾಮ ಮತ್ತು ಶಾಸ್ತ್ರೀಯ ಸಂಗೀತವೆಂಬುದು ಹಳೆಯ ಫ್ಯಾಷನ್ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ಕಾಲಿಡುತ್ತಿದ್ದಂತೆ ರಫೀ, ಮುಕೇರ್ಶ, ಕಿಶೋರ್ ಕುಮಾರ್ ರಂಥವರು (ಸಂಗೀತಕ್ಕಾಗಿಯೇ ಮನ್ನಾಡೆಯಂತೆ ಬದುಕಿದವರು) ಬಂದು ಜನಪ್ರಿಯರಾದರು. ಮನ್ನಾಡೆಯವರಲ್ಲಿ ಆಗ ಇದ್ದಂತೆಯೇ ಆ ಉತ್ಸಾಹ ಹಾಗೂ ಆತ್ಮವಿಶ್ವಾಸ ಇವರಲ್ಲೂ ಇತ್ತು.

ಬೇರೆಯವರು ಏಕೆ ? ಎಂಬ ಪ್ರಶ್ನೆ ಮನ್ನಾಡೆಯವರ ಜೀವನದಲ್ಲೂ ಕಾಡಿತ್ತು. ಒಂದು ಬೆಳಗ್ಗೆ ಅವರ ಚಿಕ್ಕಪ್ಪ ಕೆ.ಸಿ. ಡೇ ಅವರು, “ಮಹಮದ್ ರಫಿಯವರನ್ನು ಒಂದು ಹಾಡಲು ಕರೆ’ ಎಂದು ಮನ್ನಾಡೆಯವರಿಗೆ ಸೂಚಿಸಿದರು. ಆಗ ಮನ್ನಾಡೆ ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಿದ್ದ ಕಾಲ. ತನ್ನ ಚಿಕ್ಕಪ್ಪನೇ ಮದ್ದಾಗಬಹುದಾದ ಹಿತ್ತಲಗಿಡವನ್ನು ಮರೆತರೆಂದು ಬಹಳ ಬೇಸರವಾಯಿತು. ಎಲ್ಲ ಧೈರ್ಯವನ್ನೂ ತೆಗೆದುಕೊಂಡು ತಮ್ಮ ಚಿಕ್ಕಪ್ಪನವರನ್ನು “ನನ್ನನ್ನು ಏಕೆ ತಿರಸ್ಕರಿಸಿದಿರಿ” ಎಂದು ಕೇಳಿಯೇ ಬಿಟ್ಟರು. ಕೆ.ಸಿ. ಡೇ ತಾಳ್ಮೆ ಕಳೆದುಕೊಳ್ಳದೇ “ಈ ಹಾಡು ರಫಿಯವರ ದನಿಗೆ ಸರಿ ಹೊಂದುತ್ತದೆ, ನಿನಗಲ್ಲ’ ಎಂದು ಸ್ಪಷ್ಟ ಕಾರಣ ಕೊಟ್ಟರು. ಸರಿ, ಮಹಮದ್ ರಫಿ ಬಂದು ಹಾಡಿದ ಮೇಲೆ ತನ್ನ ಚಿಕ್ಕಪ್ಪನ ತರ್ಕ ಸರಿ ಎನಿಸಿತು ಮನ್ನಾಡೆಗೆ. ಆ ಹಾಡು ರಫಿಯವರ ದನಿಗೆ ಹೇಳಿ ಮಾಡಿಸಿದಂತಿತ್ತು. ಆಗ ಎಲ್ಲ ಸಂಗೀತ ನಿರ್ದೇಶಕರು ಮೊದಲು ಸಂಗೀತ ಸಂಯೋಜಿಸುತ್ತಿದ್ದರು. ನಂತರ ಆ ಸಂಯೋಜನೆ ಯಾರ ದನಿಗೆ ಹೊಂದಬಲ್ಲದು, ಯಾರ ದನಿಯಲ್ಲಿ ಹೆಚ್ಚು ಮಧುರವಾಗಿ ಮೂಡಿಬರಬಲ್ಲದು ಎಂದು ಆಲೋಚಿಸಿ ಆಯ್ಕೆ ಮಾಡುತ್ತಿದ್ದರು.

ಮನ್ನಾಡೆಯವರಿಂದ ಮಾತ್ರ ಹಾಡಬಹುದಾಗಿದ್ದ ಹಾಡುಗಳೂ ಇದ್ದವು. ಅದೇ ಅವರ ವಿಶಿಷ್ಟತೆಗೆ ಸಿಕ್ಕ ಮನ್ನಣೆ. ಬಸಂತ್ ಬಹಾರ್‌ನ “ದೇಖಾ ಕಬೀರ್ ರೋಯಾ’ ಒಂದು ಅತ್ಯುತ್ತಮವಾದ ಉದಾಹರಣೆ. ಶಂಕರ್ ಜೈಕಿಷನ್‌ರ “ಚೋರಿ ಚೋರಿ’, ರೋಷನ್‌ರ “ಬರ‍್ಸಾತ್ ಕಿ ರಾತ್’, ಎಸ್.ಡಿ. ಬರ್ಮನ್ನರ “ಮೆರಿ ಸೂರತ್ ತೆರಿ ಆಂಖೆ’ ಎಲ್ಲವೂ ಸಂಗೀತ ಪ್ರೇಮಿಗಳ ಎಂದೂ ಮರೆಯದ ಸಂಗ್ರಹಗಳು.

ಮನ್ನಾಡೆಗೆ ಮನ್ನಣೆ ನೀಡಿದ ಸಂಗೀತ ನಿರ್ದೇಶಕರಾದ ಅನಿಲ್ ಬಿಸ್ವಾಸ್, ಸಲೀಲ್ ಚೌಧರಿಯಂಥವರು ಬದಿಗೆ ಸರಿದರು. ಹೇಮಂತ್‌ ಕುಮಾರ್‌ರಿಂದ ತಲತ್ ಮೊಹಮದ್‌ವರೆಗೆ ಬಂದ ಹೊಸ ಪ್ರತಿಭೆಗಳ ಪ್ರಕಾಶ ಹಿಂದೆ ರಫಿ, ನಂತರ ಕಿಶೋರ್‌ಕುಮಾರ್‌ರ ಮೇಲೂ ಮುಸುಕು ಎಳೆಯಲಾರಂಭಿಸಿತು. ಇದರ ನಡುವೆ ಮನ್ನಾಡೆ ನಗಣ್ಯರಾದರು.

ಇಂಥ ಬೆಳವಣಿಗೆಯಿಂದ ವಿಮುಖರಾಗದ ಮನ್ನಾಡೆ, ಸಂಗೀತ ಅಭ್ಯಾಸದಲ್ಲಿ ತೊಡಗಿದರು. ಆಗಾಗ್ಗೆ ಸಂಗೀತ ಸಂಯೋಜನೆಯಲ್ಲೂ ತೊಡಗಿಕೊಂಡರು. ಕಾಲದ ಜತೆಗೆ ಸೆಣಸಲು ಆರಂಭಿಸಿದರು. ಜತೆಗೆ ಭಜನ್ಸ್‌ಗಳನ್ನೂ ಹಾಡಲು ಶುರು ಮಾಡಿದರು.

“ಮೆಮೋರಿಸ್ ಕಮ್ ಅಲೈವ್ : ಆನ್ ಆಟೋಬಯಾಗ್ರಫಿ’ ಪುಸಕ್ತದಲ್ಲಿ ಮನ್ನಾಡೆ ಹಿಂದಿನದೆಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಎಲ್ಲದರ ಮಧ್ಯೆಯೂ ಹಿಂದಿ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕನಾಗಿ ಉಳಿದುಕೊಳ್ಳಲು ನಡೆಸಿದ ಹೋರಾಟ, ರಫಿ, ಮುಖೇಶ್, ಕಿಶೋರ್ ಕುಮಾರ್‌ರಂಥವರ ಮಧ್ಯೆಯ ಸೆಣಸು, ಬಂಗಾಳಿ ಚಿತ್ರ ಜಗತ್ತಿನಲ್ಲಿನ ಸಾಧನೆ, ಚಿತ್ರೇತರ ಸಂಗೀತದಲ್ಲಿ ಕೈಗೊಂಡ ಪಯಣ- ಇದೆಲ್ಲವೂ ಮನ್ನಾಡೆಯವರನ್ನು ಒಬ್ಬ ಅದ್ಭುತ ಗಾಯಕನೆಂದೇ ನಿರ್ವಿವಾದವಾಗಿ ಹೇಳುತ್ತದೆ.

ಪದ್ಮಶ್ರೀ, ಪದ್ಮಭೂಷಣ್, ಅಲ್ಲುದ್ದೀನ್ ಖಾನ್, ಲತಾಮಂಗೇಶ್ಕರ್ ಪ್ರಶಸಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಜೀವನ ಸಾಧನೆಗೆ ದೊರೆತಿವೆ. ಕೊನೆಗೂ ಕೇಂದ್ರ ಸರಕಾರ ನಿದ್ದೆಯಿಂದ ಎದ್ದು ಒಬ್ಬ ಅಪ್ರತಿಮ ಗಾಯಕನಿಗೆ ಫಾಲ್ಕೆ ಪ್ರಶಸ್ತಿ ನೀಡಿ ಇತಿಹಾಸದಲ್ಲಿ ಘಟಿಸಿ ಹೋಗಬಹುದಾದ ತಪ್ಪನ್ನು ಇಲ್ಲವಾಗಿಸಿತು ಎಂಬುದೇ ಸದ್ಯದ ಸಮಾಧಾನ.

Advertisements