ಬೇಳೂರು ಸುದರ್ಶನರು ತಮ್ಮ ಅಂಕಣದಲ್ಲಿ ಕ್ಲೈಂಟ್ ಈಸ್ಟ್ ವುಡ್ ಬಗ್ಗೆ ಬರೆದಿದ್ದಾರೆ. ಅವನ ಗ್ರ್ಯಾಂಟ್ ಟೊರಿನೊ ಬಗ್ಗೆ. ಓದಿ ಹೇಳಿ.

ವಾಲ್ಟ್ ಕೋವಾಲ್‌ಸ್ಕಿ ಒಬ್ಬ ಜನಾಂಗೀಯವಾದಿ. ಕೊರಿಯಾದಲ್ಲಿ ಯುದ್ಧ ಮಾಡಿ ಬಂದು ಅಮೆರಿಕಾದಲ್ಲಿ ಫೋರ್ಡ್ ಮೋಟಾರ್ ಸಂಸ್ಥೆಯಲ್ಲಿ 50 ವರ್ಷ ಕೆಲಸ ಮಾಡಿದವನು. ಈಗ ಉದ್ಯಮವೆಲ್ಲ ಸತ್ತಿರುವ ಡೆಟ್ರಾಯಿಟ್ ನಗರದಲ್ಲಿ ವಾಸಿದ್ದಾನೆ. ಅವನ ಹೆಂಡತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದಾಳೆ. ತನ್ನ ಇಬ್ಬರೂ ಗಂಡುಮಕ್ಕಳನ್ನು ಅವನೇ ದೂರ ಇಟ್ಟಿದ್ದಾನೆ. ಆಗಾಗ ಬರುವ ಮೊಮ್ಮಕ್ಕಳು ಅವನಿಗೆ ಹೊಂದಿಕೆಯಾಗುವುದಿಲ್ಲ. ಅವನ ಗೆಳೆಯರೆಲ್ಲ ಬಹುತೇಕ ಸತ್ತೇಹೋಗಿದ್ದಾರೆ. 78ರ ಹರೆಯದ ವಾಲ್ಟ್ ಕೋವಾಲ್‌ಸ್ಕಿಗೆ ನಾಯಿಯೊಂದೇ ಸಂಗಾತಿ. ಅಕ್ಕಪಕ್ಕದಲ್ಲಿ ಮೊನ್ ಸಮುದಾಯದ ಜನರ ಮನೆಗಳು. ಲಾವೋಸ್‌ನಿಂದ ದೇಶಭ್ರಷ್ಟರಾಗಿ ಬಂದವರು. ಅವರ ದಿನಚರಿ, ಬದುಕಿನ ಶೈಲಿಯನ್ನು ಕಂಡರೆ ವಾಲ್ಟ್ ಕೋವಾಲ್‌ಸ್ಕಿಗೆ ಆಗೋದಿಲ್ಲ. ಅವನಿಗೆ ತುಂಬಾ ಕ್ರೇಜ್ ಅಂದ್ರೆ 1972 ರ ಮಾಡೆಲ್‌ನ ಗ್ರಾನ್ ಟೊರಿನೋ ಕಾರು. ಅದರ ಸುದ್ದಿಗೆ ಯಾರೂ ಹೋಗುವಂತಿಲ್ಲ.

ತಾನಾಯಿತು, ತನ್ನ ನಾಯಿಯಾಯಿತು, ಹಾಕಲು ಗುಂಡು, ಬಯಸಲು ಕಾರು; ಇಷ್ಟೇ ಕೋವಾಲ್‌ಸ್ಕಿ ಜಗತ್ತು. ಅವನ ವಿಕ್ಷಿಪ್ತ ನಡತೆಯನ್ನು ಇಷ್ಟಪಟ್ಟವರೇ ಇಲ್ಲ. ಇಂತಪ್ಪ ವಿಚಿತ್ರ ಮುದುಕನ ಪರಿಚಯದಿಂದ ಈ ಸಿನೆಮಾ ಆರಂಭವಾಗುತ್ತೆ ಅಂದಮೇಲೆ ಏನಿದ್ದೀತು ಈ ಸಿನೆಮಾದಲ್ಲಿ ಎಂಬ ಪ್ರಶ್ನೆ ಮೂಡುತ್ತೆ ಅಲ್ಲವೆ?
ನಾನೂ ಈ ಸಿನೆಮಾವನ್ನು ಸುಮ್ಮನೆ ಹಾಕಿ ಕೂತೆ. ಆದರೆ ಈ ಸಿನೆಮಾ ನಿಧನಿಧಾನವಾಗಿ ನನ್ನೆಲ್ಲ ಮೂಡನ್ನು ಆಕ್ರಮಿಸಿಕೊಂಡಿತು. ಕ್ಲೈಂಟ್ ಈಸ್ಟ್‌ವುಡ್ ಅಭಿಮಾನಿಗಳೇನು, ನೀವೂ ಅವನ ಅಭಿನಯವನ್ನು ಮೆಚ್ಚಿಕೊಳ್ಳಲೇಬೇಕು; ಹಾಗಿದೆ ಈ ಸಿನೆಮಾ.

ನೆರೆಯವರನ್ನು ಕಂಡರೆ ಹೇವರಿಸುತ್ತಿದ್ದ ಕೋವಾಲ್‌ಸ್ಕಿ ಒಂದು ಘಟನೆಗೆ ಸಿಲುಕಿ ಮೊನ್ ಸಮುದಾಯದ ಗೂಂಡಾಗಳಿಂದಲೇ ಅವರನ್ನೆಲ್ಲ ರಕ್ಷಿಸಬೇಕಾಗುತ್ತೆ. ಗೂಂಡಾಗಳ ಒತ್ತಾಯದಿಂದಲೇ ಕೋವಾಲ್‌ಸ್ಕಿಯ ಗ್ರಾನ್ ಟೊರಿನೋ ಕಾರನ್ನು ಕದಿಯುವ ಯತ್ನದಲ್ಲಿ ಸಿಕ್ಕಿಕೊಳ್ಳುವ ಬಚ್ಚಾ ಥಾವೋ ಸಹಾ ಕೋವಾಲ್‌ಸ್ಕಿ ಥರಾನೇ ವಿಕ್ಷಿಪ್ತ; ಹೆಚ್ಚು ಮಾತನಾಡಲಾರ; ಅನಿಸಿಕೆಗಳನ್ನು ವ್ಯಕ್ತಪಡಿಸಲಾರ.
gran torino
ಏನೋ ಆದದ್ದು ಆಗಿಹೋಯಿತು ಎಂದು ಕೋವಾಲ್‌ಸ್ಕಿ ಮತ್ತೆ ತನ್ನ ಮನೆಯೆಂಬೋ ಹುತ್ತದೊಳಗೆ ಸೇರಿಕೊಂಡ. ಆದರೆ ಮರುದಿನ ಬೆಳಗ್ಗೆ ನೋಡುತ್ತಾನೆ: ಮೊನ್ ಸಮುದಾಯದವರೆಲ್ಲ ಸಾಲುಸಾಲಾಗಿ ಬಂದು ಅವನ ಮನೆ ಮೆಟ್ಟಿಲುಗಳ ಮೇಲೆ ಹಣ್ಣು ಹಂಪಲುಗಳ ಬುಟ್ಟಿ, ಭಕ್ಷ್ಯ ಭೋಜ್ಯಗಳನ್ನು ತಂದಿಟ್ಟು ಹೋಗುತ್ತಿದ್ದಾರೆ! ಹೇಗೋ ಅವರನ್ನೆಲ್ಲ ಸಾಗಹಾಕಿದ ಕೋವಾಲ್‌ಸ್ಕಿಗೆ ಇನ್ನೂ ಒಂದು ಸನ್ನಿವೇಶ ಎದುರಾಯಿತು: ಕಾರು ಕದಿಯುವ ತಪ್ಪು ಮಾಡಿದ ಥಾವೋನನ್ನು ಅವನ ಮನೆಯವರು ಒಂದು ವಾರ ಕೊವಾಲ್‌ಸ್ಕಿ ಕೆಳಗೇ ದುಡಿಯುವ ಶಿಕ್ಷೆಗೆ ಗುರಿಮಾಡಿ ತಳ್ಳಿದ್ದಾರೆ! ಥಾವೋಗೆ ಕೆಲಸ ಕೊಡಬೇಕು ಎಂಬುದೇ ಕೋವಾಲ್‌ಸ್ಕಿಗೆ ದೊಡ್ಡ ತಲೆನೋವಾಯಿತು.

ಕೊನೆಗೆ ಮೊನ್ ಸಮುದಾಯದ ಒಂದು ಪಾರ್ಟಿಗೆ ಹೋಗುವ ಕೋವಾಲ್‌ಸ್ಕಿ ಅಲ್ಲಿ ಮೊನ್ ಸಮುದಾಯದ ಶಮಾನ್ ( ಸಮುದಾಯದ ಧಾರ್ಮಿಕ ಗುರು ಅನ್ನಿ)ನ ಮಾತು ಕೇಳಿ ಯಾವುದೋ ಗುಪ್ತ ನೆನಪುಗಳ ಹುದುಲಿಗೆ ಸಿಕ್ಕಿಕೊಳ್ಳುತ್ತಾನೆ. `ನಿನ್ನ ಜೀವನದಲ್ಲಿ ಖುಷಿಯನ್ನೇ ಕಂಡಿಲ್ಲ’ ಎಂದು ಆ ಶಮಾನ್ ಹೇಳಿಬಿಟ್ಟಿದ್ದ.
ಹೀಗೆ ಕ್ರಮೇಣ ಮೊನ್ ಸಮುದಾಯದ ಪ್ರೀತಿಯ ಧಾರೆಯಲ್ಲಿ ಮೀಯುವ ಕೋವಾಲ್‌ಸ್ಕಿ, ಗೂಂಡಾಗಳ ವಿರುದ್ಧದ ತನ್ನ ಸಂಘರ್ಷವನ್ನು ಯಶಸ್ವಿಯಾಗಿ ಮುಗಿಸುವುದೇ ಈ ಸಿನೆಮಾದ ಕ್ಲೈಮ್ಯಾಕ್ಸ್. ಕೊನೆಯ ದೃಶ್ಯವೂ ನಿಮ್ಮನ್ನು ಕೊಂಚ ಅಚ್ಚರಿಗೆ ಕೆಡಹುವ ಸಾಧ್ಯತೆ ಇದೆ. ನೀವೇ ಸಿನೆಮಾ ನೋಡಿ ಅನುಭವಿಸಿ!

ಲಾವೋಸ್‌ನಿಂದ ಈ ಮೂರು ಲಕ್ಷ ಚಿಲ್ಲರೆ ಜನ ಯಾಕೆ ಅಮೆರಿಕಾಗೆ ವಲಸೆ ಬಂದರು ಎಂದು ಹುಡುಕಾಡಿದಾಗ ಈ ವಿವರಗಳು ಸಿಕ್ಕಿದವು: ಇವರೆಲ್ಲ ಅಮೆರಿಕಾ – ವಿಯೆಟ್ನಾಮ್ ಯುದ್ಧದ ಸಂದರ್ಭದಲ್ಲಿ ಅಮೆರಿಕನ್ನರ ಜೊತೆಗಿದ್ದವರು. ಆದ್ದರಿಂದಲೇ ವಿಯೆಟ್ನಾಮೀಯರು ಇವರನ್ನೆಲ್ಲ ಶಿಕ್ಷಿಸಲು, ಶೋಷಿಸಲು ಶುರು ಮಾಡುತ್ತಾರಂತೆ. ಅದಕ್ಕೇ ಅರ್ಧಕ್ಕರ್ಧ ಜನ ಅಮೆರಿಕಾಗೆ ಬಂದು ಉಳಿದಿದ್ದಾರೆ. ಬಹುಶಃ ಟಿಬೆಟನ್ನರನ್ನು ಬಿಟ್ಟರೆ ಹೀಗೆ ದೇಶಭ್ರಷ್ಟರಾದ ದೊಡ್ಡ ಸಮುದಾಯ ಇವರೇ ಇರಬೇಕು.

ಕೋವಾಲ್‌ಸ್ಕಿ ಹೀಗೆ ತನ್ನವರಿಗೇ `ಅನ್ಯನಾಗಿ’ ಅನ್ಯರಿಗೆ `ನಮ್ಮವನು’ ಅನ್ನಿಸಿಬಿಡುತ್ತದೆ. ಮಕ್ಕಳೆಲ್ಲ ಅವನ ಆಸ್ತಿಗಾಗಿ ಕಾತರಿಸಿದರೆ, ಮೊನ್ ಸಮುದಾಯದವರು ಅವನಲ್ಲಿ ಒಬ್ಬ ಹೃದಯವಂತ ರಕ್ಷಕನನ್ನು ಕಾಣುತ್ತಾರೆ. ಬದುಕಿನಲ್ಲಿ ಏನೂ ರಸ ಇರದ ಕೋವಾಲ್‌ಸ್ಕಿ ದಿನೇದಿನೇ ಖುಷಿಯತ್ತ ಸಾಗುತ್ತಾನೆ; ಆದರೂ ಒಳಗೆಲ್ಲೋ ದುಗುಡವೂ ಹರಡಿಕೊಳ್ಳುತ್ತೆ. ಇಡೀ ಸಿನೆಮಾದಲ್ಲಿ ಈ ತೆರನ ಸನ್ನಿವೇಶಗಳಿಗೆ ಲೆಕ್ಕವಿಲ್ಲ. ಮುದುಕನೇ ಹೀರೋ ಆಗಿದ್ದಾನಲ್ಲ ಎಂದು ಮೂಗು ಮುರಿಯುವಂತೆ ಈ ಸಿನೆಮಾ ಖಂಡಿತ ಇಲ್ಲ. ಯಾಕೆಂದರೆ ಕೋವಾಲ್‌ಸ್ಕಿ ಪಾತ್ರಕ್ಕೂ, ಪಾತ್ರಧಾರಿ ಕ್ಲೈಂಟ್ ಈಸ್ಟ್‌ವುಡ್‌ಗೂ ಒಂದೇ ವಯಸ್ಸು : 78!
beluru copy 1
ಈ ಸಿನೆಮಾದಲ್ಲಿ ಮೊನ್ ಸಮುದಾಯದ ಪಾತ್ರಗಳಲ್ಲಿ ನಟಿಸಿದವರಾರೂ ಸಿನೆಮಾದಲ್ಲಿ ಈ ಹಿಂದೆ ನಟಿಸಿದವರೇ ಅಲ್ಲ. ಕಥೆಯ ನೈಜತೆಗಾಗಿ ಅವರನ್ನೆಲ್ಲ ಕ್ಲೈಂಟ್ ಈಸ್ಟ್‌ವುಡ್ ದುಡಿಸಿಕೊಂಡ ರೀತಿ ಶ್ಲಾಘನೀಯವೇ.

ಕ್ಲೈಂಟ್ ಈಸ್ಟ್‌ವುಡ್‌ನ ಕಟ್ಟಾ ಅಭಿಮಾನಿಯಾದ ನನಗೆ ಈ ಸಿನೆಮಾ ತುಂಬಾ ತುಂಬಾ ಹಿಡಿಸಿತು.
ಕಳೆದ ೫೫ ವರ್ಷಗಳಿಂದ ಸಿನೆಮಾರಂಗದಲ್ಲಿರುವ ಕ್ಲೈಂಟ್ ಈಸ್ಟ್‌ವುಡ್‌ನ ನಟನೆಯ (ಬಹುಶಃ) ಈ ಕೊನೇ ಸಿನೆಮಾ ಅಮೆರಿಕಾದಲ್ಲಿ ಬಾಕ್ಸ್ ಆಫೀಸ್ ಹಿಟ್ ಆಯಿತು. `ತೆರೆಯ ಮುಂದೆ ಇರದಿದ್ದರೇನು, ಹಿಂದೆ ಇರೋದಕ್ಕೆ ಟ್ರೈ ಮಾಡ್ತೀನಿ’ ಎಂದು ಕ್ಲೈಂಟ್ ಈಸ್ಟ್‌ವುಡ್ ಹೇಳಿರೋದೇ ಸಮಾಧಾನದ ಸಂಗತಿ.
gran torino1
ಅಮೆರಿಕಾದಲ್ಲಿ ಇದಾರೆ ಎಂದೇ ಗೊತ್ತಿರದ ಒಂದು ಸಮುದಾಯದ ಕಥೆಯನ್ನು ಇಟ್ಟುಕೊಂಡು ಇಂಥ ಶಿಸ್ತಿನ, ಸರಳ, ನೇರ ಚಿತ್ರಕಥೆಯ ಸಿನೆಮಾ ಮಾಡಿದ ಸಾಹಸವನ್ನು ನೀವೂ ಮೆಚ್ಚಬಹುದು, ಸಿನೆಮಾ ನೋಡಿ.

Advertisements