ಶಿವು .ಕೆ. ಅವರು ಅನಿಮೇಷನ್ ಸಿನಿಮಾದ ಬಗ್ಗೆ ಹೇಳುತ್ತಲೇ ಅದನ್ನು ರೂಪಿಸುವಂಥ ಮಾದರಿ ಬಗ್ಗೆಯೂ ಅತ್ಯಂತ ವಿಷದವಾಗಿ ಮಾಹಿತಿಪೂರ್ಣ ಲೇಖನವನ್ನು ಕಳಿಸಿದ್ದಾರೆ. ಇದನ್ನು ಓದಿ ಪ್ರತಿಕ್ರಿಯಿಸಿ.

ಅವತ್ತು ಬಿಡುವಿತ್ತು. ನಾನು ತುಂಬಾ ದಿನದಿಂದ ಕಾಯುತ್ತಿದ್ದ ಆ ಸಿನಿಮಾ ಡಿವಿಡಿ ಸಿಕ್ಕಿತ್ತು. ಅದೊಂದು ತೀರ ಸರಳ ಕತೆಯಿರುವ ಸಿನಿಮವಾದರೂ ಅಂಥ ಸಿನಿಮಗಳಂದ್ರೆ ನನಗೆ ತುಂಬಾ ಇಷ್ಟ. ತನ್ಮಯತೆಯಿಂದ ನೋಡುತ್ತೇನೆ. ಅದರ ಕತೆ ಹೀಗಿದೆ.

ಅದೊಂದು ಮಂಜಿನ ಲೋಕ. ಅರ್ಧಾತ್ ಮಂಜುಗಡ್ಡೆಯದೇ ಲೋಕ. ಆನೆ ದಂಪತಿಗಳ ಜೊತೆ ಒಂದು ಸಿಂಹ, ಕಾಡುಕುರಿ, ಮುಂಗುಸಿ ಮರಿಗಳ ಜೋಡಿ, ಇವುಗಳ ಜೊತೆ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಜೊತೆಯಾಗಿ ಸಂತೋಷದಿಂದ ಜೀವಿಸುತ್ತಿರುತ್ತವೆ. ಒಮ್ಮೆ ಮೂರು ದೊಡ್ಡ ಗಾತ್ರದ ಮೊಟ್ಟೆಗಳು ಸಿಕ್ಕಿ ಅವುಗಳಿಂದ ಮರಿಗಳು ಹೊರಬರುತ್ತವೆ. ಅವು ಡೈನಾಸಾರ್ ಮರಿಗಳು. ಇತರೆಲ್ಲಾ ಮರಿಗಳ ಜೊತೆಗೆ ಆಡಿ ಬೆಳೆಯುತ್ತಾ ಎಲ್ಲ ಪ್ರಾಣಿಗಳಿಗೂ ಕಾಟ ಕೊಡುತ್ತಾ ಬೆಳೆಯುತ್ತಿರುವಾಗ ಮೊಟ್ಟೆಗಳನ್ನು ಕಳೆದುಕೊಂಡ ದೊಡ್ಡ ಡೈನೋಸಾರ್ ಹುಡುಕಿಕೊಂಡು ಅಲ್ಲಿಗೆ ಬರುತ್ತದೆ. ಅಲ್ಲಿರುವ ಪ್ರಾಣಿ ಪಕ್ಷಿಗಳಿಗೆಲ್ಲಾ ಭಯ ಮತ್ತು ಅಚ್ಚರಿ. ಎಲ್ಲವು ತಮಗೆ ದೊಡ್ಡ ವಿಪತ್ತು ಬಂತು ಅಂತ ದಿಗಿಲುಪಟ್ಟುಕೊಂಡಿರುವಾಗ ಎಲ್ಲಾ ಪ್ರಾಣಿಗಳನ್ನು ಎದುರಿಸಿ ದೈತ್ಯ ಡೈನೋಸಾರ್ ತನ್ನ ಮೂರು ಮರಿಗಳನ್ನು ಜೊತೆಯಲ್ಲಿರುವ ಕಾಡುಕುರಿಯನ್ನು ಎತ್ತಿಕೊಂಡು ಹೋಗಿಬಿಡುತ್ತದೆ. ಆದುವರೆವಿಗೂ ತಮ್ಮದೇ ಲೋಕದಲ್ಲಿ ಸುಖವಾಗಿದ್ದ ಈ ಪ್ರಾಣಿಗಳಿಗೆ ಈ ಡೈನೋಸಾರುಗಳ ಆಗಮನದಿಂದ ತಾವು ಬದುಕುವುದು ಕಷ್ಟವಾಗುತ್ತದೆ. ನಡುವೆ ಇತರ ಡೈನೋಸಾರುಗಳಿಂದ ಆಕ್ರಮಣಕ್ಕೆ ತಮ್ಮದೇ ತಂತ್ರಗಳಿಂದ ತಪ್ಪಿಸಿಕೊಳ್ಳುವುದು. ನಡುವೆ ದೊಡ್ಡ ರಾಕ್ಷಸ ಗಾತ್ರದ ಮಾಂಸಹಾರಿ ಗಿಡಗಳಿಂದ ಆನೆ, ಸಿಂಹದಂತ ಪ್ರಾಣಿಗಳ ಮೇಲೆ ಆಕ್ರಮಣ, ರಾಕ್ಷಸಾಕಾರದ ಕೀಟಗಳು, ಹುಳುಗಳು, ಅದರಿಂದ ತಪ್ಪಿಸಿಕೊಳ್ಳುವುದು, ಹಾಗೆ ಸಾಗುತ್ತಾ ಜಾರುವ ದೊಡ್ಡ ದೊಡ್ಡ ಬಂಡೆಗಳ ನಡುವೆ ಸಾಗುವಾಗ ಬಂಡೆಗಳು ಜರುಗಿ ಎಲ್ಲಾ ಪ್ರಾಣಿಗಳು ಅಲ್ಲೋಲ ಕಲ್ಲೋಲ. ಇಷ್ಟೆಲ್ಲದರ ನಡುವೆ ಹೆಣ್ಣಾನೆಗೆ ಒಂದು ಮರಿಯಾನೆ ಹುಟ್ಟುತ್ತದೆ.
Untitled-1 copy
ಮತ್ತೊಂದು ಕಡೆ ಮರಿ ಡೈನಾಸಾರುಗಳ ಜೊತೆ ದೊಡ್ಡ ಡೈನಾಸರ್ ಮತ್ತೊಂದು ಅದಕ್ಕಿಂತ ದೊಡ್ಡದಾದ ಡೈನಸರ್ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದು. ಆಷ್ಟು ದೊಡ್ಡ ಡೈನಸರನ್ನು ಒಂದು ಪುಟ್ಟ ಜಂಬದ ನರಿ ಸೋಲಿಸಿ ಕಟ್ಟಿಹಾಕುವುದು ಆ ಸಮಯದಲ್ಲಿ ಆನೆಗಳು ಸಿಂಹ, ಇತರ ಪ್ರಾಣಿಗಳು ಅದರಿಂದ ತಪ್ಪಿಸಿಕೊಳ್ಳುವುದು ಹೀಗೆ ಸಾಗುತ್ತ ಕೊನೆಗೆ ಅಷ್ಟು ದೊಡ್ಡ ಡೈನಾಸರ್ ಜಾರಿ ಪ್ರಪಾತಕ್ಕೆ ಬಿದ್ದು ಸಾಯುವಂತೆ ಮಾಡುವುದು ಈ ಜಂಬದ ಬುದ್ಧಿವಂತ ನರಿ. ಅಲ್ಲಿಗೆ ಕತೆ ಸುಖಾಂತ್ಯವಾಗುತ್ತದೆ.

ಇದು ಐಸ್ ಎಜ್ 3 ಅನಿಮೇಶನ್ ಸಿನಿಮಾದ ಕತೆ. ಇದರ ಮೊದಲ ಎರಡು ಭಾಗಗಳಲ್ಲಿ ಒಂದು ಅಳಿಲು ಮತ್ತು ಒಂದು ಗೇರುಬೀಜದೊಂದಿಗೆ ಪ್ರಾರಂಭವಾದರೆ ಇಲ್ಲಿ ಅಳಿಲಿಗೊಂದು ಹೆಣ್ಣ ಅಳಿಲು ಜೊತೆಯಾಗುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ. ಮತ್ತು ಕತೆ ಅಂತ್ಯವಾಗುವುದು ಈ ಅಳಿಲುಗಳಿಂದಲೇ.

ಮನುಷ್ಯನ ಸಕಲ ಗುಣಗಳು ಅದರಲ್ಲೂ ಮಕ್ಕಳ ಎಲ್ಲಾ ಗುಣಗಳನ್ನು ಎಲ್ಲಾ ಪ್ರಾಣಿಗಳಿಗೂ ಆಳವಡಿಸಿ ತಯಾರಿಸಿರುವ ಈ ಕಾರ್ಟೂನ್ ಸಿನಿಮಾ ಮಕ್ಕಳಿಂದ ದೊಡ್ಡವರವರೆಗೆ ಮೈಮರೆತು ನೋಡುವಂತೆ ಮಾಡುತ್ತದೆ. ಅದ್ಬುತ ತಾಂತ್ರಿಕತೆಯಿಂದ ಕೂಡಿದ ಈ ಅನಿಮೇಶನ್ ಸಿನಿಮಾಗಳು ನಮ್ಮನ್ನು ಬೇರೆಯದೆ ಲೋಕಕ್ಕೆ ಕರೆದೊಯ್ಯುತ್ತವೆ. ನಿಜ ಹೀರೋಗಳ ಹೀರೋಹಿನ್‌ಗಳ ನಟನೆಗಿಂತ ಒಂದು ಕೈ ಮೇಲೆ ಎನ್ನುವಂತೆ [ಅತಿರೇಕವೆನಿಸಿದರೂ]ನಟಿಸುವ ಅದ್ಬುತ ಸಾಹಸಗಳನ್ನು ಮಾಡುವ ಇಂಥ ಸಿನಿಮಾದೊಳಗಿನ ಪಾತ್ರಗಳು ನಿಜಕ್ಕೂ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಲಯನ್ ಕಿಂಗ್ ಸರಣಿ, ಟಾರ್ಜನ್ ಸರಣಿ, ನೆಮೊ, ಶ್ರೇಕ್, ಇನ್ಕ್ರಿಡಬಲ್, ಬೀ ಮೂವಿ, ಆಂಟ್ಸ್ ಮೂವಿ, ಮಾನ್‌ಸ್ಟರ್ ಇಂಕ್, ಕುಂಗ್‌ಪೂ ಫಾಂಡ, ಒಂದೇ ಎರಡೇ ಎಲ್ಲಾ ನೂರಾರು ಅನಿಮೇಶನ್ ಸಿನಿಮಾಗಳಿವೆ. ಮತ್ತೆ ಹೊಸದು ಯಾವುದು ಬಂದರೂ ನಾನು ಟಾಕೀಸಿಗೆ ಹೋಗಿ ನೋಡುತ್ತೇನೆ. ಅಥವಾ ಮನೆಯಲ್ಲಿ ಡಿವಿಡಿ ತಂದು ನೋಡಿಬಿಡುತ್ತೇನೆ.

ಅದೆಲ್ಲಾ ಸರಿ ಈ ಅನಿಮೇಶನ್ ಸಿನಿಮಾಗಳನ್ನು ತಯಾರಿಸುವುದು ಹೇಗೆ ?

ಇದು ಖಂಡಿತ ಕ್ಯಾಮೆರಾದಿಂದ ಅದರೊಳಗಿನ ಲೆನ್ಸ್ ಮೂಲಕ ಚಿತ್ರತವಾಗುವುದಿಲ್ಲ. ಯಾವುದೇ ಸಿನಿಮಾ ರೀಲ್ ಉಪಯೋಗಿಸುವುದಿಲ್ಲ. ಮತ್ತೇಗೆ ಈ ಚಿತ್ರಗಳು ತಯಾರಾಗುತ್ತವೆ ? ಹೇಗೆಂದರೆ ಇವೆಲ್ಲಾ “ಮಾಯಾ”, “೩ಡಿ ಮ್ಯಾಕ್ಸ್” ಇನ್ನಿತರ ಅನಿಮೇಶನ್ ಸಾಪ್ಟ್‌ವೇರುಗಳಿಂದ ಸೃಷ್ಟಿಯಾದಂತವುಗಳು. ಅರೆರೆ ಹಾಗಾದರೆ ಇದು ತುಂಬಾ ಸುಲಭ ಕೆಲವು ಮಾಯಾ ಅಥವ ೩ಡಿ ಮ್ಯಾಕ್ಸ್ ಕಲಿತ ವಿದ್ಯಾರ್ಥಿಗಳನ್ನಿಟ್ಟುಕೊಂಡು ಒಂದು ಪುಟ್ಟ ಮನಸೆಳೆಯುವ ಕತೆಯನ್ನಿಟ್ಟುಕೊಂಡು ಸಿನಿಮಾ ತೆಗೆದುಬಿಡಬಹುದಲ್ಲ ಅನ್ನಿಸುತ್ತದೆ ಅಲ್ಲವೇ. ಹಾಗೆ ಖಂಡಿತ ಸಾದ್ಯವಿಲ್ಲ. ಏಕೆಂದರೆ ಬೇರೆ ಸಿನಿಮಾ ರೀಲಿನ ಚಿತ್ರಗಳಿಗೆ ಹತ್ತಾರು ನೂರಾರು ಕೆಲಸಗಾರರು, ತಾಂತ್ರಿಕ ತಜ್ಞರು, ನಟರು, ನಿರ್ಧೇಶಕರು, ಇದ್ದಂತೆ ಇಲ್ಲಿ ನೂರಾರು ಕೆಲವೊಮ್ಮೆ ಸಾವಿರಾರು ಅನಿಮೇಶನ್ ಡಿಸೈನರುಗಳು ಬೇಕಾಗುತ್ತದೆ. ಈ ಡಿಸೈನರುಗಳಿದ್ದರೆ ಕಾರ್ಟೂನ್ ಸಿನಿಮಾ ತಯಾರಾಗುತ್ತದಾ?

ಆಗುವುದಿಲ್ಲ. ಮೊದಲು ಎಂದಿನಂತೆ ಇದರ ಬಗ್ಗೆ ಆಸಕ್ತಿಯುಳ್ಳ ಒಬ್ಬ ನಿರ್ಮಾಪಕ ಬೇಕು. ನಿರ್ದೇಶಕ ಬೇಕೇ ಬೇಕು. ಆತ ಆನಿಮೇಶನ್‌ನಲ್ಲಿ ಪಕ್ಕಾ ಪರಿಣತನಾಗಿರಬೇಕು. ಅವನು ಬರೆದ ಕತೆಗೆ ತಕ್ಕಂತ ಪಾತ್ರಗಳನ್ನು ಸೃಷ್ಟಿಸಬೇಕು. ಅವು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳಾಗಬಹುದು, ಕೀಟಗಳಾಗಬಹುದು, ಮನುಷ್ಯನಾಗಿರಬಹುದು, ಆಕಾಶದಾಚೆಗಿನ ಅನ್ಯಜೀವಿಗಳಾಗಬಹುದು, ಕೊನೆಗೆ ಮರಗಿಡ ಕಲ್ಲು ಮಣ್ಣು ಯಾವುದೇ ಆಗಿರಬಹುದು. ಅವೆಲ್ಲಕ್ಕೂ ಮಾತು ಇರಲೇ ಬೇಕು.
ice
ನಂತರ ಆತನ ಕಲ್ಪನೆಗೆ ತಕ್ಕಂತೆ ಪಾತ್ರಧಾರಿಗಳನ್ನು ಅಂದರೆ ಮಾಡೆಲ್ಲುಗಳನ್ನು ಸೃಷ್ಟಿಸಲು[ಮಾಡೆಲಿಂಗ್ ಸ್ಪೆಷಲೈಜೇಷನ್ ಮಾಡಿರುವವರು]ಹತ್ತಾರು ಮಾಡೆಲಿಂಗ್ ಪರಿಣತರಿಂದ ಕೆಲಸ ತೆಗೆಸುತ್ತಾನೆ. ಅವರು ನಿರ್ಧೇಶಕನ ಅನಿಸಿಕೆಯಂತೆ ತಿಂಗಳಾನುಗಟ್ಟಲೆ ಕುಳಿತು “ಮಾಯಾ” ಅಥವಾ 3ಡಿ ಮ್ಯಾಕ್ಸ್” ಇನ್ನೂ ಅನೇಕ ಸಾಫ್ಟ್ ವೇರ್ ಗಳಿಂದ ಕಂಪ್ಯೂಟರಿನಲ್ಲಿ ಮಾಡೆಲಿಂಗ್ ಸೃಷ್ಟಿಸುತ್ತಾರೆ. ಇದು ಏನು ಸಾಮಾನ್ಯ ಕೆಲಸವಲ್ಲ. ಇಲ್ಲಿ ಏನೇ ಯಡವಟ್ಟಾದರೂ ಅದು ಮುಂದಿನ ಪ್ರತಿ ಹಂತಕ್ಕೂ ತೊಂದರೆ ಕೊಡುತ್ತಿರುತ್ತದೆ. ಆದ್ದರಿಂದ ಅದನ್ನು ಸರಿಪಡಿಸದೇ ಮುಂದೆ ಹೋಗುವಂತಿಲ್ಲ. ಒಂದು ಪ್ರಾಣಿಯ ಮಾಡೆಲ್ ಮಾಡಬೇಕೆಂದರೆ ಅದಕ್ಕೆ ಹೊರಮೈ ಅಂದರೆ ಚರ್ಮದ ಕಲ್ಪನೆಯಲ್ಲಿ ರಚಿಸುತ್ತಾರೆ. ಮಾಯಾ ಸಾಫ್ಟ್ ವೇರಿನ ಆನೇಕ ಟೂಲ್‌ಗಳನ್ನು ಉಪಯೋಗಿಸಿ ವಿವಿಧ ಮಾಡೆಲ್ಲುಗಳನ್ನು ತಯಾರಿಸುತ್ತಾರೆ. ಆದ್ರೆ ಅವೆಲ್ಲಾ ಬಣ್ಣವಿಲ್ಲದ ಮಾಡೆಲ್ಲುಗಳು.

ಮಾಡೆಲ್ಲುಗಳು ಅಂದರೆ ಪಾತ್ರಧಾರಿಗಳು ಸಿದ್ಧರಾದರೂ ಅವಕ್ಕೆ ಸುಣ್ಣ ಬಣ್ಣ ಹಾಕುವವರೇ ಬೇರೆಯವರು. ಅವರನ್ನು ಟೆಕ್ಷರಿಂಗ್ ಸ್ಪೆಷಲಿಷ್ಟ್ ಎನ್ನುತ್ತಾರೆ. ಇವರು ಈ ವಿಭಾಗದಲ್ಲಿ ಪಕ್ಕಾ ತರಬೇತಿಯನ್ನು ಪಡೆದಿರುತ್ತಾರೆ. ಇವರು ಎಲ್ಲಾ ಮಾಡೆಲ್ಲುಗಳಿಗೂ ನಿರ್ದೇಶಕನ ಕಲ್ಪನೆಯಂತೆ ಬೇಕಾದ ರೀತಿಯಲ್ಲಿ ಬಣ್ಣವನ್ನು ಕೊಡುತ್ತಾರೆ.

ಮೂರನೆಯದು. ಲೈಟಿಂಗ್. ಇದರಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಟಾಪ್ ವ್ಯೂ, ಸೈಡ್ ವ್ಯೂ, ಫ್ರಂಟ್ ವ್ಯೂ ಮತ್ತು ಕ್ಯಾಮೆರಾ ವ್ಯೂ ಅಂತ. ಮೊದಲ ಮೂರು ದಿಕ್ಕುಗಳಿಂದ ನೋಡಿದರೆ ಮಾಡೆಲ್ಲು ಮತ್ತು ಹಿನ್ನೆಲೆ ದೃಶ್ಯಗಳ ಮೇಲೆ ಬೆಳಕು ಹೇಗಿರಬೇಕು. ಮತ್ತು ಸಮಯಕ್ಕೆ ತಕ್ಕಂತೆ ಹೇಗೆ ಬದಲಾವಣೆಯನ್ನು ಹೊಂದುತ್ತಿರಬೇಕು, ಮಾಡೆಲ್ಲುಗಳ ಯಾವ ಭಾಗ ಹೈಲೈಟ್ ಮಾಡಬೇಕು, ಎಲ್ಲೆಲ್ಲಿ ಕತ್ತಲನ್ನು ಉಂಟು ಮಾಡಬೇಕು ಎನ್ನುವುದನ್ನು ಥೇಟ್ ಸಿನಿಮಾ ಸೂಟಿಂಗ್‌ನಲ್ಲಿ ಮಾಡುವಂತೆ ಇಲ್ಲಿಯೂ ಲೈಟಿಂಗ್ ಸ್ಪೆಷಲಿಷ್ಟುಗಳು ಕೆಲಸ ಮಾಡುತ್ತಾರೆ. ಕೊನೆಯದು ಕ್ಯಾಮೆರಾ ದೃಷ್ಟಿಕೋನ. ಇಲ್ಲಿ ಪ್ರತಿಹಂತದಲ್ಲೂ ಇವರು ಕೈಚಳಕ ತೋರಿಸಬೇಕು. ಊದಾಹರಣೆಗೆ ಒಂದು ಹುಲಿ ಕಾಡಿನ ಹುಲ್ಲುಗಾವಲಿನಲ್ಲಿ ಓಡುತ್ತಿರುವಾಗ ಬೆಳಕು ಅದರ ಮೇಲೆ ಪ್ರಕರವಾಗಿ ಬೀಳುತ್ತಿದ್ದರೂ ಮರುಗಳಿಗೆಯಲ್ಲಿ ಮರಗಳ ಕೆಳಗೆ ಚಲಿಸುವಾಗ ನೆರಳಿನ ವಾತಾವರಣದಲ್ಲಿ ಚಲಿಸುವಾಗ ಇರುವ ಬೆಳಕನ್ನು ಸೃಷ್ಟಿಸಬೇಕು. ಹೀಗೆ ಪ್ರತಿ ಹಂತದಲ್ಲೂ ಇವರ ಕೆಲಸ ಸೃಜನಶೀಲತೆಯನ್ನು ಬೇಡುತ್ತದೆ.

ಇದರ ನಂತರ ಶುರುವಾಗುತ್ತದೆ ಅತಿಮುಖ್ಯವಾದದು. ಅದೆಂದರೇ ಪ್ರತಿ ಪಾತ್ರಕ್ಕೂ ಮೂಳೆಗಳನ್ನು ಜೋಡಿಸಬೇಕು ಮತ್ತು ಮೂಳೆಗಳ ನಡುವೆ ಕೊಂಡಿಗಳನ್ನು ಹಾಕಬೇಕು ಇದಕ್ಕೆ ಎಂಥ ತಾಂತ್ರಿಕ ಪರಿಣತಿ ಬೇಕೇಂದರೆ ಮನುಷ್ಯನಿಗೆ ಎರಡು ಕಾಲಿರುವುದರಿಂದ ಅದಕ್ಕೆ ತಕ್ಕಂತೆ ಕಾಲು ಬೆರಳುಗಳು ಮತ್ತು ಕೈಬೆರಳುಗಳ ಗಂಟುಗಳ ನಡುವೆ ಕೊಂಡಿ ಹಾಕುವುದರಿಂದ ಪ್ರಾರಂಬಿಸಿ ದೇಹದ ಚಲಿಸುವ ಪ್ರತಿಭಾಗಗಳಿಗೂ ಕೊಂಡಿ ಹಾಕಬೇಕು ಅದು ನಿಯಮಕ್ಕೆ ತಕ್ಕಂತೆ ಹಾಕಬೇಕು. ಉದಾ: ಬೆರಳುಗಳು ಮುಂದಕ್ಕೆ ಮಡಿಚುತ್ತವೆ ವಿನಃ ಹಿಂಭಾಗಕ್ಕೆ ಮಡಿಚುವುದಿಲ್ಲ. ಇಂಥ ಸಾಮಾನ್ಯ ಜ್ಞಾನವಿರಬೇಕು. ಹೀಗೆ ಹಲ್ಲುಗಳು, ನಾಲಿಗೆ, ಬಾಯಿಯ ಮೇಲೆ ಮತ್ತು ಕೆಳ ತುಟಿಗಳು, ಕುತ್ತಿಗೆ, ಎದೆ ಸೊಂಟ, ಕುಂಡಿ, ತೊಡೆ, ಮಣಿಕಟ್ಟು, ಹಿಂಗಾಲು, ಪಾದ, ಹೀಗೆ ಪ್ರತಿಯೊಂದಕ್ಕು ಮೂಳೆ ಮತ್ತು ಕೀಲುಗಳನ್ನು ಜೋಡಿಸಬೇಕು. ಮಾಡೆಲ್ಲುಗಳು ಸರಿಯಾಗಿರದಿದ್ದಲ್ಲಿ ಇಲ್ಲಿನ ಕೆಲಸ ಮತ್ತೆ ತಪ್ಪುತ್ತದೆ. ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ. ಹೀಗೆ ನಾಲ್ಕು ಕಾಲಿನ ಪ್ರಾಣಿಗಳು, ಕೀಟಗಳು, ಡೈನೋಸಾರ‍್ಗಳು, ಕೊನೆಗೆ ಗಿಡಮರಗಳು ಮಾತಾಡುವ ಸ್ಥಿತಿಇದ್ದರೆ ಅವಕ್ಕೂ ಇವೆಲ್ಲಾ ಅವಶ್ಯಕ ಮತ್ತು ಅದರದೇ ಗುಣಲಕ್ಷಣಗಳಿಗನುಗುಣವಾಗಿಯೇ ಇರಬೇಕು. ಇದಕ್ಕೂ ನೂರಾರು ಜನರು ಹಗಲು ರಾತ್ರಿ ಕೆಲಸ ಮಾಡುತ್ತಿರುತ್ತಾರೆ. ಇದಕ್ಕೆ ಆನಿಮೇಶನಲ್ಲಿ ರಿಗ್ಗಿಂಗ್ ಎನ್ನುತ್ತೇವೆ. ಈ ಇದರಲ್ಲಿಯೇ ಪರಿಣತಿ ಪಡೆದಿರುವವರನ್ನು ರಿಗ್ಗಿಂಗ್ ಸ್ಪೆಷಲಿಷ್ಟ್ ಎನ್ನುತ್ತಾರೆ.

ಇದು ಮುಗಿದ ನಂತರ ಇನ್ನೂ ಮುಖ್ಯ ಕೆಲಸವೆಂದರೆ ಪ್ರತಿ ಪಾತ್ರಕ್ಕೂ ಚಲನೆಯನ್ನು ಕೊಡುವುದು ಈ ಚಲನೆ ಪಾತ್ರಗಳಿಗನುವಾಗಿ ತಕ್ಕಂತೆ ಇರುತ್ತದೆ. ಮನುಷ್ಯ ನಡೆಯುವುದು, ಓಡುವುದು, ಕಾಗೆಹಾರುವುದು, ಪ್ರಾಣಿಗಳು ನಾಲ್ಕುಕಾಲಿನಲ್ಲಿ ನಡೆಯುವುದು, ಓಡುವುದು, ಕೆಲವು ಹಾರುವುದು, ಕೀಟಗಳು ಹಾರುವುದು, ತನ್ನ ಆರು ಎಂಟು ಕೈಗಳಲ್ಲಿ ಚಲಿಸುವುದು, ಬಳಸುವುದು, ಮತ್ತೆ ತೆವಳುವ ಜೀವಿಗಳಿಗೆ ಅದಕ್ಕೆ ತಕ್ಕಂತೆ ಚಲನೆ , ಜಲಚರಗಳಿಗೆ ಈಜುವ ಚಲನೆ ಹೀಗೆ ಈ ವಿಭಾಗದಲ್ಲೂ ನೂರಾರು ಪರಿಣತರು ಕೆಲಸ ಮಾಡುತ್ತಾರೆ. ಇವರ ಕೆಲಸದ ಬಗ್ಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ.

ಸಿನಿಮಾದ ಭಾಷೆಯಲ್ಲಿ ಒಂದು ಸೆಕೆಂಡಿಗೆ 24 ಫ್ರೇಮುಗಳು ಚಲಿಸುವಂತೆ ಕ್ಯಾಮೆರಾದಲ್ಲಿ ಸೆಟ್ಟಿಂಗ್ ಇರುತ್ತದೆ. ಇಲ್ಲಿಯೂ ಅದೇ ನಿಯಮವನ್ನು ಬಳಸಿಕೊಳ್ಳುತ್ತಾರೆ. ಮನುಷ್ಯರು ನಟಿಸುವ ಸಿನಿಮಾಗಳಲ್ಲಿ ಕ್ಯಾಮೆರಾಗಳು ಇಂಥ ಕೆಲಸಗಳನ್ನು ಮಾಡುವುದರಿಂದ ಅಲ್ಲಿ ನಿರ್ಧೇಶಕ, ಛಾಯಾಗ್ರಾಹಕ ಯಾರಿಗೂ ತಲೆಬಿಸಿಯಿಲ್ಲ. ಆದ್ರೆ ಅನಿಮೇಶನ್ ಸಿನಿಮಾದಲ್ಲಿ ಕ್ಯಾಮೆರಾ ಇಲ್ಲದ್ದರಿಂದ ಎಲ್ಲವನ್ನು ಅನಿಮೇಶನ್ ಸ್ಪೆಷಲಿಷ್ಟ್ ಮಾಡಬೇಕು.

ಒಂದು ಸೆಕೆಂಡಿಗೆ 24 ಪ್ರೇಮುಗಳಂತೆ ಪ್ರತಿ ಪ್ರೇಮು ಕೂಡ ಪಾತ್ರಧಾರಿಯ ಕಾಲುಗಳು[ಎರಡಾಗಲಿ ನಾಲ್ಕಾಗಲಿ] ಎಷ್ಟು ದೂರ ಚಲಿಸಬೇಕು, ಜೊತೆಗೆ ಕಾಲಿನ ಮೇಲಿನ ಹಿಮ್ಮಡಿ ಎಷ್ಟು ಎತ್ತಬೇಕು ಮತ್ತು ಮುಂದಿನ ಯಾವ ಪ್ರೇಮಿನಲ್ಲಿ ಕೆಳಗೆ ಇಳಿಸಬೇಕು ಎನ್ನುವ ಪಕ್ಕಾ ಲೆಕ್ಕಾಚಾರವಿರಬೇಕು. ಜೊತೆ ಜೊತೆಗೆ ಮಂಡಿ, ಕುಂಡಿ ಎದೆ ತಲೆ, ಕಣ್ಣುಗಳು, ಈ ಸಮಯದಲ್ಲಿ ಒಂದು ಕೈ ಮುಂದಿದ್ದರೆ ಮತ್ತೊಂದು ಕೈ ಹಿಂದಕ್ಕೆ ಹೀಗೆ 24 ಫ್ರೇಮುಗಳಲ್ಲಿ ನಡಿಗೆ ಸೃಷ್ಟಿಸಬೇಕು. ಹೀಗೆ ಮುಂದಿನ ಸೆಕೆಂಡಿಗೆ ಮತ್ತೆ ಚಲನೆಯಲ್ಲಿ ವ್ಯತ್ಯಾಸವಾಗುವುದಾದರೆ [ನಡೆಯುವವನು ಓಡಿಲಿಚ್ಛಿಸಿದರೆ]ಅದಕ್ಕೆ ತಕ್ಕಂತೆ ಮತ್ತೆ ಬದಲಿಸಬೇಕು. ಜೊತೆಗೆ ಪಾತ್ರಧಾರಿಯ ಮಾತುಕತೆಗೆ ಅನುಗುಣವಾಗಿ ಬಾಯಿ ಮತ್ತು ತುಟಿ ಚಲನೆ, ಕಣ್ಣುಗಳ ಹುಬ್ಬೇರಿಸುವಿಕೆ, ಹಣೆಯ ಚಲನೆ, ಹೀಗೆ ಪ್ರತಿ ಫ್ರೇಮಿನಲ್ಲೂ ಪಕ್ಕಾ[ನಿರ್ದೇಶಕನ ಆಶಯದಂತೆ]ಚಲನೆಯಂತೆ 24 ಫ್ರೇಮು ಸರಿಯಾಗಿದ್ದರೆ ಒಂದು ಸೆಕೆಂಡಿನ ಆನಿಮೇಶನ್ ಸಿದ್ಧವಾಗುತ್ತದೆ. ನಡುವೆ 16 ಅಥವಾ 20 ನೇ ಫ್ರೇಮಿನಲ್ಲಿ ತಪ್ಪಾದರೇ ಮತ್ತೆ ಅದನ್ನು ಸರಿಪಡಿಸಲು ಬೇರೊಬ್ಬರಿರುತ್ತಾರೆ.

ಹೀಗೆ ಒಂದು ಫ್ರೇಮು ಚಲನೆ[ಅನಿಮೇಟ್] ಕೊಡುವುದಕ್ಕೆ ಎಂಥ ಪರಿಣತನಿಗಾದರೂ ಕನಿಷ್ಟ 25 ಕೊಂಡಿಗಳನ್ನು ಸಮನಾಂತರ ಚಲಿಸಲು ಹತ್ತಾರು ಕೀಗಳನ್ನು ಉಪಯೋಗಿಸಬೇಕಾಗುತ್ತದೆ. ಅದಕ್ಕಾಗಿ ಕಡಿಮೆಯೆಂದರೂ ಹತ್ತು ನಿಮಿಷ ಬೇಕಾಗುತ್ತದೆ. ಒಂದು ಸೆಕೆಂಡಿಗೆ ಎಷ್ಟಾಗಬಹುದು….ಒಂದು ನಿಮಿಷಕ್ಕೆ ಎಷ್ಟು, ಒಂದುಗಂಟೆಗೆ ಎಷ್ಟು ಮತ್ತು ಒಂದು ಸಿನಿಮಾ ಅನಿಮೇಶನ್ ಮಾಡಲು ಎಷ್ಟು ಸಮಯ ಬೇಕಾಗಬಹುದು? ಲೆಕ್ಕ ನಿಮಗೆ ಬಿಟ್ಟಿದ್ದು.

ಹೀಗೆ ಒಂದು ಅನಿಮೇಶನ್ ಸಿನಿಮಾ ಒಂದೂವರೆಗಂಟೆ ಇದ್ದರೆ ಒಂದು ಲಕ್ಷ ಇಪ್ಪತ್ತೊಂಬತ್ತು ಸಾವಿರದ ಆರುನೂರು[129600] ಫ್ರೇಮುಗಳ ಚಲನೆಯನ್ನು ಅನಿಮೇಶನ್ ಸ್ಪೆಷಲಿಷ್ಟುಗಳು ಕೊಡಬೇಕಾಗುತ್ತದೆ. ಇಲ್ಲಿಯೂ ಅಷ್ಟೇ ಯಾವುದೇ ಒಂದು ಪ್ರೇಮಿನ ನಡೆಯು ತಪ್ಪಾದರೂ ಆ ಸೆಕೆಂಡಿನ ಅನಿಮೇಶನ್ ಅಸಂಬದ್ಧವಾಗುತ್ತದೆ.
ice age
ಇದರ ನಡುವೆ ಮತ್ತೊಬ್ಬರು ಬರುತ್ತಾರೆ ಡೈನಮಿಕ್ಸ್ ಸ್ಪೆಷಲಿಷ್ಟ್ ಅಂತ. ಅವರ ಕೆಲಸವೇನೆಂದರೆ ಸಿನಿಮಾದಲ್ಲಿ ಬಾಂಬ್ ಸ್ಪೋಟಿಸುವುದು, ಮಳೆ ಬರಿಸುವುದು, ಹೊಗೆ ಬರಿಸುವುದು, ಜಲಪಾತ ಹರಿಸುವುದು, ಪ್ರವಾಹ ತರಿಸುವುದು, ಅಗ್ನಿಪರ್ವತವನ್ನು ಸ್ಪೋಟಿಸುವುದು, ಚಂಡಮಾರುತ ಬರಿಸುವುದು, ಸಮುದ್ರ ಉಕ್ಕಿಸುವುದು, ಭೂಕಂಪ ಮಾಡಿಸುವುದು…ಹೀಗೆ ನೂರಾರು ಕೆಲಸಗಳನ್ನು ಈ ಸಿನಿಮಾಗೆ ಬೇಕಾದ ಹಾಗೆ ಮಾಡುತ್ತಾರೆ. ಇವರೆಲ್ಲರ ಕೆಲಸ ಮುಗಿದ ಮೇಲೆ ಸಿನಿಮಾ ಹೈ ಕ್ವಾಲಿಟಿಯಲ್ಲಿ ರೆಂಡರಿಂಗ್ ಆಗಿ ಮೂಕಿ ಸಿನಿಮಾ ಆಗಿ ದಾಖಲಾಗುತ್ತದೆ. ಆನಂತರವೇ ಅದನ್ನು ಪ್ರೊಜೆಕ್ಟ್ ಮಾಡಿ ಮಾತಿನ ಡಬ್ಬಿಂಗ್, ಹಿನ್ನೆಲೆ ಸಂಗೀತ, ಡಾಲ್ಬಿ ಡಿಜಿಟಲ್ ಎಫೆಕ್ಟ್ಸ್ ಇತ್ಯಾದಿಗಳನ್ನು ಮಾಡುತ್ತಾರೆ ಅದಕ್ಕೆ ಹೆಸರಾಂತ ನಟರು ಅಥವಾ ಡಬ್ಬಿಂಗ್ ಕಲಾವಿದರು ಇರುತ್ತಾರೆ.

ಒಂದು ಅತ್ಯುತ್ತಮ ತಾಂತ್ರಿಕತೆಯ ಅನಿಮೇಶನ್ ತಯಾರಾಗಬೇಕಾದರೆ 20 ಜನ ಮಾಡಲರುಗಳು, 20 ಜನ ಟೆಕ್ಷರ್ [ಬಣ್ಣಹಾಕುವವರು]. 20 ಜನ ಲೈಟಿಂಗ್ ಸ್ಪೆಷಲಿಷ್ಟ್, 20 ಜನ ರಿಗ್ಗಿಂಗ್ ಸ್ಪೆಷಲಿಷ್ಟ್, ಕೊನೆಯಲ್ಲಿ 200 ಜನ ಅನಿಮೇಟರುಗಳು 100 ಜನ ಡೈನಮಿಕ್ಸ್ ಸ್ಪೆಷಲಿಷ್ಟುಗಳು ಆರುತಿಂಗಳು ವರ್ಷಾನುಗಟ್ಟಲೇ ಒಂದು ಸಿನಿಮಾ ತಯಾರಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.

ಇಷ್ಟೆಲ್ಲಾ ಸಾಧಕರ ಕೆಲಸವನ್ನು ನಾವು ಒಂದುವರೆ ಗಂಟೆಯಲ್ಲಿ ನೋಡಿ ಥತ್! ಇದೆಂಥ ಸಿನಿಮಾ ಅಂದುಬಿಡುತ್ತೇವಲ್ಲ…
ಇದೆಲ್ಲಾ ನನಗೆ ಹೇಗೆ ಗೊತ್ತಾಯಿತು ಅಂದುಕೊಳ್ತೀದ್ದೀರಿ ಅಲ್ವಾ…..ಖಂಡಿತ ಇದೆಲ್ಲಾ ಮಾಹಿತಿಯನ್ನು ಇಂಟರ್‌ನೆಟ್ ಮೂಲಕವಾಗಿ ಪಡೆದುಕೊಂಡಿಲ್ಲ. ಮತ್ತೆ ಹೇಗೆ ಗೊತ್ತಾಯಿತು ಅಂತೀರಾ! ನಾನು ಆರು ತಿಂಗಳು “ಮಾಯಾ” ಸಾಪ್ಟ್‌ವೇರ‍್ನಲ್ಲಿ ಅನಿಮೇಶನ್ ಕೋರ್ಸ್ ಮಾಡಿದ್ದೆ. ನನಗೆ “ಟೆಕ್ಷರಿಂಗ್” ವಿಭಾಗದಲ್ಲಿ ಪರಿಣತಿ ಪಡೆಯಬೇಕೆನ್ನುವ ಮಹತ್ವಾಕಾಂಕ್ಷೆಯಿತ್ತು. ಮೊದಲು ಬೇಸಿಕ್ ಕೋರ್ಸ್ ಮುಗಿಸಿದ್ದೆ. ಇನ್ನೇನು ಆಡ್ವಾನ್ಸ್ ಕೋರ್ಸ್ ಸೇರಬೇಕೆನ್ನುವಷ್ಟರಲ್ಲಿ ನನ್ನ ತಂದೆ ತೀರಿಹೋದರು. ಮನೆಯ ಜವಾಬ್ದಾರಿ ಪೂರ್ಣವಾಗಿ ನನ್ನ ಮೇಲೆ ಬಿತ್ತು. ಎರಡು ದುಡಿಮೆಗಳಾದ ದಿನಪತ್ರಿಕೆ ವಿತರಣೆ ಮತ್ತು ಫೋಟೊಗ್ರಫಿಯ ಜೊತೆಗೆ ಈ ಆನಿಮೇಶನ್ ಕಲಿಕೆಯಿಂದಾಗಿ ನನಗೆ ನಿದ್ರಾ ಸಮಯ ಪ್ರತಿದಿನ 3 ಅಥವಾ 4 ಗಂಟೆ ಮಾತ್ರ ಇರುತ್ತಿತ್ತು.

ಈ ಅನಿಮೇಶನ್ ಕೋರ್ಸಿನಲ್ಲಿ ತರಗತಿಗಿಂತ ಅಭ್ಯಾಸಕ್ಕೆ ತುಂಬಾ ಸಮಯ ಬೇಡುತ್ತದೆ. ಎಷ್ಟು ಸಮಯವೆಂದರೆ ದಿನಕ್ಕೆ ಕಡಿಮೆಯೆಂದರೆ 10 ಗಂಟೆ ಎಡಬಿಡದೆ ಅಬ್ಯಾಸ ಮಾಡಬೇಕು. ಮತ್ತು ಸಿಕ್ಕಾಪಟ್ಟೆ ಸೃಜನಶೀಲತೆಯನ್ನು ಬೇಡುತ್ತದೆ. ಆದರೂ ಒಂದು ಕೈ ನೋಡೇ ಬಿಡೋಣವೆಂದು ಸೇರಿಕೊಂಡು ಆರು ತಿಂಗಳ ಬೇಸಿಕ್ ಕೋರ್ಸ್ ಮುಗಿಸಿದ್ದೆ. ನಂತರ ನಡೆದ ಕೆಲವು ಅನಿರೀಕ್ಷಿತ ಘಟನೆಗಳಿಂದಾಗಿ ಮತ್ತು ಅ ಸಮಯದಲ್ಲಿ ಕೈತುಂಬ ಫೋಟೊಗ್ರಫಿ ಕೆಲಸ, ದಿನಪತ್ರಿಕೆ ವಿತರಣೆ ಕೆಲಸಗಳ ನಡುವೆ ದಿನದ ೨೪ ಗಂಟೆಗಳಲ್ಲಿ 10 ಗಂಟೆಯನ್ನು ಅನಿಮೇಶನ್ ಅಭ್ಯಾಸಕ್ಕೆ ಹೊಂದಿಸಿಕೊಳ್ಳಲಾಗುತ್ತಿರಲಿಲ್ಲ. ಇದೆಲ್ಲಾ ಕಾರಣಗಳಿಂದಾಗಿ ನಾನು ಅಂತ ಅದ್ಬುತ “ಮಾಯಾ”ಲೋಕದ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಬಹುಶಃ ನಾನು ಅದರಲ್ಲೇ ಮುಂದುವರಿದಿದ್ದರೇ ಈಗ ಯಾವುದೋ ಕಂಪನಿಯ ಜಾಹಿರಾತಿಗೋ, ಅಥವ ಸಿನಿಮಾಗೋ ಟೆಕ್ಷರ್ ಆರ್ಟಿಷ್ಟ್ [ನನಗೆ ಮಾಡೆಲ್ಲುಗಳಿಗೆ ಮತ್ತು ಪ್ರಕೃತಿಗೆ ಬಣ್ಣ ಹಾಕುವುದು ಇಷ್ಟ] ಆಗಿ ಕಂಪ್ಯೂಟರ್ ಕುಟ್ಟುತ್ತಿದ್ದೆ.

ಕೊನೆಗೆ ನನ್ನ ಹಣೆಬರಹದಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ ಅಂದುಕೊಂಡು ಸುಮ್ಮನಾದೆ.
ಈ ವಿಚಾರವನ್ನು ತುಂಬಾ ದಿನದಿಂದ ಹೇಳಿಕೊಳ್ಳಬೇಕೆನಿಸಿದರೂ ಸಾಧ್ಯವಾಗಿರಲಿಲ್ಲ. ಅನಿಮೇಶನ್ ಸಿನಿಮಾ ತಯಾರಿಕೆ ಬಗ್ಗೆ ಮತ್ತು ಕಲಿಕೆಯ ಬಗ್ಗೆ ಯಾವುದೇ ತಾಂತ್ರಿಕ ಪದಗಳನ್ನು ಬಳಸದೆ ಸರಳವಾಗಿ ಹೇಳಬೇಕೆನಿಸಿ ಪ್ರಯತ್ನಿಸಿದ್ದೇನೆ. ಲೇಖನವನ್ನು ಎಷ್ಟು ಚಿಕ್ಕದು ಬರೆಯಬೇಕೆನಿಸಿದರೂ ಸಾಧ್ಯವಾಗದೇ ಇಷ್ಟು ದೀರ್ಘವಾಗವಾಗುವುದನ್ನು ನನಗೆ ತಡೆಯಲಾಗಲಿಲ್ಲ. ಮತ್ತೆ ಅನಿಮೇಶನ್ ಡಬ್ಬಿಂಗ್ ಬಗ್ಗೆ ಬರೆದರೆ ಮತ್ತಷ್ಟು ಪುಟಗಳು ತುಂಬಿ ನಿಮಗೆ ಬೇಸರವಾಗಬಹುದೆನಿಸಿ ಇಲ್ಲಿಗೆ ನಿಲ್ಲಿಸಿದ್ದೇನೆ. ಲೇಖನ ಅರ್ಥವಾದರೇ ನನ್ನ ಪ್ರಯತ್ನ ಸಾರ್ಥಕ. ಓದಿದ ನಂತರ ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ…

Advertisements