“ಇನ್ ಟು ದಿ ವೈಲ್ಡ್” ಚಿತ್ರದ ಬಗ್ಗೆ ಬೇಳೂರರು ಬರೆದಿದ್ದಾರೆ. ಈ ಚಿತ್ರ ಒಂದು ಅದ್ಭುತವಾದದ್ದು, ಆತ್ಮವಿಶ್ವಾಸ ಹುಟ್ಟಿಸುವಂಥದ್ದು ; ಏಕಾಂಗಿಯ ಯಾತ್ರೆಯಿಂದ ಕಲಿತುಕೊಳ್ಳಬಹುದಾದ ಜೀವನಪ್ರೀತಿ ಅನನ್ಯ.

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. ‘ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ ಚೀಲವೋ 25 & 30 ಪೌಂಡ್ ತೂಗುತ್ತಿದೆಯಲ್ಲ ಎಂದು ಜೇಮ್ಸ್ ಅಚ್ಚರಿಪಟ್ಟ. ಇಂಥ ಥಂಡಿಯಲ್ಲಿ ಈ ಅಲೆಕ್ಸ್ ಬದುಕುವುದು ಹೇಗೆ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತ್ತು.

ಮೂರು ತಾಸು ಸಾಗಿದ ಮೇಲೆ ‘ಅಲೆಕ್ಸ್’ ಜೇಮ್ಸ್‌ನ ಟ್ರಕ್ಕಿನಿಂದ ಇಳಿದ. ತನ್ನ ಗಡಿಯಾರ, ಬಾಚಣಿಗೆ, 85 ಸೆಂಟ್‌ಗಳಷ್ಟು ಹಣ, ಸ್ಥಳನಕಾಶೆ….. ಎಲ್ಲವನ್ನೂ ಟ್ರಕ್ಕಿನೊಳಗೇ ಬಿಟ್ಟ. ‘ಈ ಸಮಯ ಎಷ್ಟೆಂದು ನನಗೆ ತಿಳಿಯಬೇಕಿಲ್ಲ. ಯಾವ ದಿನವಿದು, ನಾನೆಲ್ಲಿದ್ದೇನೆ ಯಾವುದೂ ನನಗೆ ಗೊತ್ತಾಗಬೇಕಿಲ್ಲ. ಇಂಥ ಯಾವ ಸಂಗತಿಗಳೂ ನನಗೆ ಬೇಕಾಗಿಲ್ಲ’ ಎಂದು ನಸುನಗುತ್ತ ಅಲಾಸ್ಕಾದ ಹಿಮಹಾದಿಯಲ್ಲಿ ನಡೆದ. ‘ಇಂಥ ಪ್ರದೇಶಕ್ಕೆ ಬರಬೇಡ’ ಎಂದು ಜೇಮ್ಸ್ ಹೇಳಿದ್ದೆಲ್ಲವೂ ವ್ಯರ್ಥವಾಯಿತು. ಅಪ್ಪ, ಅಮ್ಮಂದಿರಿಗೂ ತನ್ನ ಯೋಜನೆಯನ್ನು ತಿಳಿಸಿಲ್ಲ; ನಿಜ ಹೇಳಬೇಕಂದ್ರೆ ನಾನು ಅವರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಮಾತಾಡೇ ಇಲ್ಲ ಎಂದು ಅಲೆಕ್ಸ್ ಹೇಳಿದ್ದನ್ನು ಕೇಳಿ ಜೇಮ್ಸ್ ಮತ್ತಷ್ಟು ಅಚ್ಚರಿಗೆ ಬಿದ್ದು ಮೂರು ತಾಸುಗಳಾಗಿದ್ದವು.
beluru copy 1
‘ಅಲೆಕ್ಸ್’ ಎಂದು ಹೇಳಿಕೊಂದ ಕ್ರಿಸ್ಟೋಫರ್ ಜೆ. ಮ್ಯಾಕ್‌ಕ್ಯಾಂಡ್ಲೆಸ್ ಹೀಗೆ ತನ್ನ ಏಕಾಂಗಿತನದ ಯಾತ್ರೆಯನ್ನು ಶುರುಮಾಡಿದ್ದು 1992ರ ಏಪ್ರಿಲ್ 28ರ ಮಂಗಳವಾರ.

ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಕ್ರಿಸ್‌ಗೆ ಬಾಲ್ಯದಿಂದಲೇ ಲಿಯೋ ಟಾಲ್‌ಸ್ಟಾಯ್ ಎಂದರೆ ಪ್ರೀತಿ. ಆತ ಎಂಥ ಸಿರಿವಂತ ಬದುಕನ್ನು ಬಿಟ್ಟು ಅನಾಥರ, ಹತಭಾಗ್ಯರ ಜೊತೆ ಕಳೆದ ಎಂದು ಕ್ರಿಸ್ ಬೆರಗುಗಣ್ಣಿಂದ ಓದಿದ್ದ. ತನ್ನ ಪದವಿ ಶಿಕ್ಷಣ ಮುಗಿದ ಕೂಡಲೇ ಶಿಕ್ಷಣವೆಚ್ಚದಲ್ಲಿ ಉಳಿದಿದ್ದ 24 ಸಾವಿರ ಡಾಲರ್‌ಗಳನ್ನು ಆಕ್ಸ್‌ಫರ್ಡ್ ಬರಗಾಲ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಕ್ರಿಸ್‌ಗೆ ಎಂದೂ ಈ ಲೌಕಿಕ ಬದುಕಿನಲ್ಲಿ ಅಂಥ ಆಕರ್ಷಣೆ ಹುಟ್ಟಲಿಲ್ಲವೇನೋ. ನಿರಭ್ರ ಆಕಾಶವನ್ನು ನೋಡುತ್ತ, ಪ್ರಕೃತಿದತ್ತ ಬದಲಾವಣೆಗಳನ್ನು ಗಮನಿಸುತ್ತ, ತನ್ನ ಪ್ರಿಯ ಪುಸ್ತಕಗಳನ್ನು ಓದುತ್ತ ಕಾಲ ಕೂಡುವ, ಬದುಕನ್ನು ತನ್ನದೇ ರೀತಿಯಲ್ಲಿ ಕಲಿಯುವ ವಿಶಿಷ್ಟ ಯತ್ನಕ್ಕೆ ಕ್ರಿಸ್ ಹೊರಟಿದ್ದ.

ಹಿಂದೊಮ್ಮೆ, 1990ರಲ್ಲಿ ಅರಿಝೋನಾ ಮರುಭೂಮಿಯ ಹಾದಿಯಲ್ಲಿ ತನ್ನ ಕಾರು ಕೆಟ್ಟು ನಿಂತಾಗ ಇದೇ ಕ್ರಿಸ್ ತನ್ನಲ್ಲಿ ಇದ್ದಬದ್ದ 160 ಚಿಲ್ಲರೆ ಡಾಲರ್ ಹಣವನ್ನು ಸುಟ್ಟುಹಾಕಿದ್ದ. ಮುಂದಿನ ತಿಂಗಳುಗಳಲ್ಲಿ ಕ್ರಿಸ್ ಅಲೆಮಾರಿಯಾಗಿ ಊರೂರು ಅಲೆದ. ಬಸ್ಸು, ರೈಲು – ಹೀಗೆ ಕಂಡಕಂಡ ವಾಹನಗಳನ್ನು ಬಳಸಿದ; ನಡೆದ. ಮುಂದಿನ ತುತ್ತು ಎಲ್ಲಿ ಸಿಗುತ್ತದೆ ಎಂದು ಗೊತ್ತಿಲ್ಲದ ಆ ಕ್ಷಣಗಳು ಅತ್ಯಂತ ರೋಚಕವಾಗಿದ್ದವು ಎಂದು ಗೆಳೆಯನೊಬ್ಬನಿಗೆ ಕಾರ್ಡ್ ಹಾಕಿದ್ದ.
intothewildposter
ಈಗ ಕ್ರಿಸ್ ಅಲಾಸ್ಕಾದ ಕಾಡಿನಲ್ಲಿ ನಡೆಯುತ್ತ ಒಂದು ಪಾಳುಬಿದ್ದ ೪೦ರ ದಶಕದ ಬಸ್ಸೊಂದನ್ನು ಕಂಡ. ಅಲ್ಲಿಂದ ಅವನ ಹೊಸ ಬದುಕು ಶುರುವಾಯಿತು. 189 ದಿನಗಳ ಕಾಲ ಹೀಗೆ ಹೊಸಲೋಕದಲ್ಲಿ ಸಂಚರಿಸಿದ ಕ್ರಿಸ್ ಆಗಸ್ಟ್ 18 ರಂದು ತಣ್ಣಗೆ ಈ ಲೋಕದಿಂದ ಹೊರನಡೆದ. ಸೆಪ್ಟೆಂಬರ್ 6ರಂದು ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಹಾಸಿಗೆ ಚೀಲದಲ್ಲಿ ಕ್ರಿಸ್‌ನ ದೇಹ ಮಲಗಿದ್ದನ್ನು ಕಂಡರು. 67 ಪೌಂಡ್ ತೂಗುತ್ತಿದ್ದ ಆ ದೇಹದಲ್ಲಿ ಏನೂ ಇರಲಿಲ್ಲ. ಆತ ಹಸಿವಿನಿಂದ ಸತ್ತ ಎಂದು ವೈದ್ಯರು ಅಭಿಪ್ರಾಯಪಟ್ಟರು. ಆದರೆ ಹಾಗೇನೂ ಅಲ್ಲ, ಆತ ತನ್ನದೇ ನಿರ್ಣಯದಿಂದ ಹೀಗೆ ಹೊರಟುಹೋದ ಎಂದು ಕ್ರಿಸ್ ಬದುಕಿನ ಬಗ್ಗೆ ‘ಇನ್ ಟು ದಿ ವೈಲ್ಡ್’ ಎಂಬ ಜೀವನಕಥೆಯನ್ನು ಬರೆದ ಜೋನ್ ಕ್ರಾಕೂರ್ ಹೇಳುತ್ತಾನೆ. ಇನ್ನೇನು ಸತ್ತೇಹೋಗುತ್ತೇನೆ ಎನ್ನುವಾಗ ಕ್ರಿಸ್ ತನ್ನನ್ನೇ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿಕೊಂಡ ಚಿತ್ರವನ್ನು ನೋಡಿ. ಅವನ ಮುಖದಲ್ಲಿ ಹೇಗೆ ಮಂದಹಾಸ ಮಿನುಗುತ್ತಿದೆ…..

ತನ್ನ ದಿನಚರಿಯ ಪುಟಗಳನ್ನು ಬಿಟ್ಟುಹೋದ ಕ್ರಿಸ್ ಹಸಿವಿನಿಂದ ಬಳಲುತ್ತಿದ್ದುದೂ ನಿಜ; ತನ್ನ ಬದುಕು ನಿಜಕ್ಕೂ ಸಂತೋಷಮಯವಾಗಿತ್ತು; ದೇವರಿಗೆ ವಂದನೆಗಳು ಎಂದು ಹೇಳಿದ್ದೂ ನಿಜ. ನಮ್ಮ ಜೈನ ಮುನಿಗಳು ಸ್ವೀಕರಿಸುವ ಸಲ್ಲೇಖನ ವ್ರತದಂತೆ ಎಂದು ಸ್ಥೂಲವಾಗಿ ಹೇಳಬಹುದು (ಹಾಗಂತ ಕ್ರಿಸ್ ಅಹಿಂಸೆಯನ್ನು ಪಾಲಿಸಲಿಲ್ಲ. ಕಾಡತೂಸು ಇರುವವರೆಗೆ ಕೆಲವು ಪ್ರಾಣಿಗಳನ್ನು ಬೇಟೆಯಾಡಿ ತಿಂದ).

ಈ ಪುಸ್ತಕವನ್ನೇ ಆಧರಿಸಿ ಸಿಯಾನ್ ಪೆನ್ 2007 ರಲ್ಲಿ ‘ಇನ್ ಟು ದಿ ವೈಲ್ಡ್’ ಹೆಸರಿನ ಸಿನೆಮಾ ಮಾಡಿದ್ದಾನೆ. ಕ್ರಿಸ್ ತನ್ನ ಕೊನೆ ದಿನಗಳನ್ನು ಕಳೆದ ಬಸ್ಸಿನಲ್ಲೇ, ಅದೇ ತಾಣದಲ್ಲೇ ಈ ಸಿನೆಮಾವನ್ನು ಚಿತ್ರೀಕರಿಸಲಾಗಿದೆ. ಅಬ್ಬರದ ಬದುಕಿನಲ್ಲಿ ನಮ್ಮನ್ನು ನಾವು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡ ಅನುಭವಕ್ಕಾಗಿ ಈ ಸಿನೆಮಾವನ್ನು ಖಂಡಿತ ನೋಡಿ.

ಅಲಾಸ್ಕಾದ ಜನ ಮಾತ್ರ ಕ್ರಿಸ್‌ನ ಮರಣ ಒಂದು ಮೂರ್ಖ ಘಟನೆ ಎನ್ನುತ್ತಾರೆ. ಕೊನೆಗಾಲದಲ್ಲಿ ಕ್ರಿಸ್ ಜನವಸತಿಯತ್ತ ಹೋಗಲು ನಿರ್ಧರಿಸಿದ್ದ. ಆದರೆ ಅವನು ಮೊದಲು ದಾಟಿ ಬಂದ ತಕ್ಲೆನಿಕ ನದಿ ಈಗ ಅಗಲವಾಗಿತ್ತು; ದಾಟುವುದು ದುಸ್ಸಾಹಸವಾಗಿತ್ತು; ಆದರೆ ಕಾಲು ಮೈಲು ದೂರದಲ್ಲೇ ಅದನ್ನು ದಾಟಬಹುದಿತ್ತು ಎಂಬ ವಿಚಾರವೂ ಕ್ರಿಸ್‌ಗೆ ತಿಳಿದಿರಲಿಲ್ಲ ಎಂದರೆ ಈತ ಎಂಥ ಚಾರಣಿಗ ಎಂದು ಅಲಾಸ್ಕನ್ನರು ಹೇಳುತ್ತಾರೆ.

ಏನೇ ಇರಲಿ, ಬದುಕಿನ ಬಗ್ಗೆ ನಮಗೂ ಇರುವ ಪ್ರಶ್ನೆಗಳನ್ನೇ ಕ್ರಿಸ್ ಗಂಭೀರವಾಗಿ ತೆಗೆದುಕೊಂಡು ಕಾಡು ಮೇಡು ಅಲೆದ; ಗಿಡಗಂಟಿಗಳನ್ನು ತಿಂದ; ಹಸಿವನ್ನು ಆನಂದಿಸಿದ; ಬದುಕಿನ ಕೊನೆಯನ್ನು ತೀವ್ರವಾಗಿ, ಅಷ್ಟೇ ಅಕ್ಕರೆಯಿಂದ ಅನುಭವಿಸಿದ. ಇಂದಿನ ನಾಗರಿಕತೆಯ ಯಾವ ಸಾಧನಗಳೂ ಇಲ್ಲದೆ ಬದುಕುವುದು ಅಸಾಧ್ಯವಾಯಿತು ಎನ್ನುವುದು ಒಪ್ಪಿಕೊಳ್ಳಬೇಕಾದ ವಿಷಯವೇ. ಆದರೆ ಕ್ರಿಸ್ ತನ್ನ ನಗುಮುಖದ ಮೂಲಕ ಏನನ್ನೋ ಹೇಳಹೊರಟಿದ್ದಾನೆ ಎನ್ನಿಸುವುದಿಲ್ಲವೆ?
into the wild
ಬದುಕನ್ನು ಅತ್ಯಂತ ಉತ್ಕಟವಾಗಿ ಪ್ರೀತಿಸುವವರೇ ದುರಂತಕ್ಕೆ ಒಳಗಾಗುತ್ತಾರೆ ಎನ್ನುವುದು ನಮಗೆ ಆಗಿರಬಹುದಾದ ಸಾಮಾನ್ಯ ಅನುಭವ. ದೇಶವನ್ನೇ ನುಂಗಿ ನೀರು ಕುಡಿಯುವ ಭ್ರಷ್ಟ ರಾಜಕಾರಣಿಗಳು, ಬಾಂಬುಗಳನ್ನು ಸ್ಫೋಟಿಸುವ ಸಂಚನ್ನು ಕ್ಷಣಕ್ಷಣಕ್ಕೂ ಹೂಡುವ ಭಯೋತ್ಪಾದಕರು ಯಾಕಾದರೂ ಸಾಯುವುದಿಲ್ಲ ಎಂದು ನಾವೆಲ್ಲ ಹತಾಶೆಯಿಂದ ಗೋಣು ಬಗ್ಗಿಸಿದ್ದೇವೆ. ಬದುಕನ್ನು ಅತಿಯಾಗಿ ಪ್ರೀತಿಸಿದ್ದ ಹೀರೋ ಕೊನೆಗೆ ಸಮುದ್ರದಲ್ಲಿ ಯಾರಿಗೂ ಸಿಗದಂತೆ ಲೀನವಾಗುವುನ್ನೂ, ಬದುಕಿನಲ್ಲಿ ಯಾವ ಸುಖವೂ ಇಲ್ಲ ಎಂದೇ ವ್ಯಥಿಸುತ್ತಿದ್ದ ಹೀರೋಯಿನ್ ಬದುಕಿದ್ದನ್ನೂ ‘ಟೈಟಾನಿಕ್’ ಸಿನೆಮಾದಲ್ಲಿ ನೋಡಿದ್ದೇವೆ.

ಕ್ರಿಸ್‌ನ ಹಾಗೆ ಯಾರೂ ಹಸಿವಿನಿಂದ ಸಾಯುತ್ತಲೇ ಬದುಕನ್ನು ಅನುಭವಿಸಬೇಕಿಲ್ಲ. ಆದರೆ ಕ್ರಿಸ್‌ಗೆ ಇದ್ದ ನಿಸರ್ಗದತ್ತ ಜೀವನ ಪ್ರೀತಿಯನ್ನು ನಾವೆಲ್ಲ ಕಲಿಯಬಹುದೇನೋ. ಲೌಕಿಕ ಬದುಕಿನ ಆಯಾಮಗಳನ್ನು ನಾವು ಅಳೆಯುವುದು ಯಾವಾಗ? ಈ ಯಾಂತ್ರಿಕ ಬದುಕಿನಲ್ಲಿ ನಿಸರ್ಗದ ನಿಯಮಗಳನ್ನು ಅರಿತು, ಪ್ರಕೃತಿಯೊಂದಿಗೆ ಬೆರೆಯುತ್ತ ಬದುಕುವ ಪರಿಯನ್ನು ನಾವು ಕಲಿಯುವುದು ಯಾವಾಗ? ನಗರೀಕರಣದ, ಕಾಂಕ್ರೀಟೀಕರಣದ ಜಂಜಡದಲ್ಲಿ ಇರುವ ಬದಲು ಬಯಲಿನಲ್ಲಿ ಕೂತು ಹೊಸ ಗಾಳಿಯನ್ನು ಉಸಿರಾಡುವುದು ಯಾವಾಗ?

Advertisements