ಪರಮೇಶ್ ಗುರುಸ್ವಾಮಿಯವರು ಈ ಬಾರಿ ವಿಶ್ಲೇಷಿಸಿರುವುದು “ಬೆಳ್ಳಿಮೋಡ’ ಚಿತ್ರದ ಬಗ್ಗೆ. ತಾಂತ್ರಿಕವಾಗಿ ಸಾಕಷ್ಟು ಆಳಜ್ಞಾನ ಹೊಂದಿದ್ದ ಪುಟ್ಟಣ್ಣರ ಈ ಚಿತ್ರ ತಾಂತ್ರಿಕವಾಗಿ ಹಲವು ದೋಷಗಳನ್ನು ಹೊಂದಿದೆ ಏಕೆ ?

ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ. ಅದರಲ್ಲೂ ತಾಂತ್ರಿಕ ಅಂಶಗಳನ್ನು ಚೆನ್ನಾಗಿ ಅರಿತಿದ್ದವರು. ಈ ಹಿಂದೆ ಒಂದು ಲೇಖನದಲ್ಲಿ ಇವರ ಬಗ್ಗೆ ಪ್ರಸ್ತಾಪಿಸಿದ್ದೆ. ಈಗಿನದು “ಬೆಳ್ಳಿಮೋಡ’ ಚಿತ್ರದ ಬಗ್ಗೆ.

ಕಥಾವಸ್ತು ಮತ್ತು ಅಂತ್ಯದ ಬಗ್ಗೆ ಈ ಚಿತ್ರ ಹೊಸ ಮಾದರಿಗಳನ್ನು ಸೃಷ್ಟಿಸಿದ್ದು, ಅನುಮಾನಗಳೇ ಇಲ್ಲ. ಅಂಥದೊಂದು ಹೊಸದನ್ನು ಸೃಷ್ಟಿಸಿ ಅದನ್ನು ಉಳಿಸಿಕೊಳ್ಳಲು ಪುಟ್ಟಣ್ಣರು ಪಟ್ಟ ಪಾಡನ್ನೂ ವಿವರಿಸಿದ್ದೆ. ಈ ದೃಷ್ಟಿಯಲ್ಲೇ ಬೆಳ್ಳಿಮೋಡವನ್ನು ತಾಂತ್ರಿಕವಾಗಿ ನೋಡಲಾರಂಭಿಸಿದೆ. ಬಹಳ ಬಾರಿ ನೋಡಿದಾಗ ನನಗೆ ಆಘಾತವಾದದ್ದು ತಾಂತ್ರಿಕವಾಗಿ ದೋಷಗಳಿದ್ದದ್ದನ್ನು ಕಂಡು. ವಾಸ್ತವವಾಗಿ ಆಶ್ಚರ್ಯವೆನಿಸಲಿಲ್ಲ ; ಆಘಾತವಾಯಿತು. ಕಾರಣವಿಷ್ಟೇ…ಹಲವು ಮೂಲಭೂತ ತಪ್ಪುಗಳು ಘಟಿಸಿದ್ದವು. ತಾಂತ್ರಿಕವಾಗಿಯೂ ತಿಳಿದಿದ್ದ ಒಬ್ಬ ಒಳ್ಳೆಯ ನಿರ್ದೇಶಕ ಇಂಥ ತಪ್ಪುಗಳನ್ನು ಹೇಗೆ ಒಪ್ಪಿಕೊಳ್ಳುತ್ತಾನೆ ? ಹಾಗಾದರೆ ಈ ತಪ್ಪುಗಳು ಘಟಿಸಿದ್ದು ಹೇಗೆ? ಇತ್ಯಾದಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ.

ಅಂದು ಲಭ್ಯವಿದ್ದ ಸಿನಿಮಾ ತಾಂತ್ರಿಕ ಅಂಶಗಳಿಂದ ನೋಡಿದರೆ, ಸಮರ್ಪಕವಾಗಿರಲಿಲ್ಲ ಬೆಳ್ಳಿಮೋಡ ಸಿನಿಮಾ. ಪುಟ್ಟಣ್ಣನವರು ಮೊದಲೇ ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ನಿರ್ದೇಶಿಸಿದ್ದರು. ಯಾವುದೇ ಕಲಾವಿದನಿಗೆ ಭಾಷೆಯ ಗಡಿ ಇಲ್ಲ. ಅವರು ಭಾಷಾತೀತರು. ಸೃಜನಶೀಲತೆ ಎಂಬುದು ಭಾಷೆಯ ಮಿತಿ-ನೆಲೆಯಲ್ಲಿ ಹುಟ್ಟಿಕೊಳ್ಳುವುದಲ್ಲ . ಅದಕ್ಕೆ ಅಂಥದೊಂದು ನಿರ್ಬಂಧವೂ ಸರಿಯಲ್ಲ. ಮಣಿರತ್ನಂ ಇಂದು ತಮಿಳಿನಲ್ಲಿ ಹೆಸರಾಂತ ನಿರ್ದೇಶಕ. ಆದರೆ ಮೊದಲು ನಿರ್ದೇಶಿಸಿದ್ದು ಕನ್ನಡ ಚಿತ್ರ. ಇಂಥ ಉದಾಹರಣೆ ಎಲ್ಲ ಭಾಷೆಗಳಲ್ಲೂ ಇದೆ. ಕಲಾವಿದರು ಭಾಷೆಯ ಎಲ್ಲೆ ಮೀರಿಯೇ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ಪುಟ್ಟಣ್ಣ ತಮಿಳು (ಚಿತ್ರ : ಟೀಚರಮ್ಮ ), ಮಲಯಾಳಂನಲ್ಲಿ (ಚಿತ್ರ : ಪೂಚಿಕಣ್ಣು) ನಿರ್ದೇಶಿಸಿ ಕನ್ನಡದಲ್ಲಿ “ಬೆಳ್ಳಿಮೋಡ’ ಮಾಡಲು ಬಂದರು.
guruswamy coloumn copy ನೀವು “ಬೆಳ್ಳಿಮೋಡ’ ವನ್ನು ಅಧ್ಯಯನದ ದೃಷ್ಟಿಯಿಂದಲೇ  ಸರಿಯಾಗಿ ನೋಡಿ. ಹಲವು ಚಿತ್ರಿಕೆಗಳೇ (ಶಾಟ್ಸ್) ತಪ್ಪಾಗಿವೆ.  ಅವುಗಳ ಸಂಕಲನವೂ ಸಹ. ಅತ್ಯಂತ ಪ್ರಸಿದ್ಧವಾದ ಹಾಡು  “ಮೂಡಲ ಮನೆಯ’ (ರಚನೆ : ದ.ರಾ.ಬೇಂದ್ರೆ) ಹಾಡಿರುವುದು  ಸೂರ್ಯೋದಯದ ಬಗ್ಗೆ. ಸಾಮಾನ್ಯವಾಗಿ ಸೂರ್ಯೋದಯದ ವಿವಿಧ ಹಂತಗಳು ( ಆರೋಹಣ ಕ್ರಮವಾಗಿ) ಪ್ರಕಟಗೊಳ್ಳಬೇಕು.  ಕಾರಣ, ಆ ಗೀತೆ ಇರುವುದೇ ಹಾಗೆ. ಆದರೆ ಮೊದಲನೇ ಚಿತ್ರಿಕೆ (ಶಾಟ್)ಯಲ್ಲಿ ಸೂರ್ಯ ಪೂರ್ತಿ ಕಾಣುತ್ತಾನೆ; ಬೆಳಕೂ ಹೆಚ್ಚು. ಎರಡನೇ ಚಿತ್ರಿಕೆಯಲ್ಲಿ ಸೂರ‍್ಯ ಚಿಕ್ಕದಾಗುತ್ತಾನೆ. ಹಾಗೆಯೇ ಕಲ್ಪನಾಳ ಚಿತ್ರಿಕೆಗಳಲ್ಲೂ ಅವಳ ನೆರಳುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ವಾಸ್ತವವಾಗಿ ಬೆಳಗ್ಗೆ ಚಿತ್ರೀಕರಿಸುವ ಚಿತ್ರಿಕೆಗಳಲ್ಲಿ ನೆರಳು ಸಿಗದು. ಮಧ್ಯಾಹ್ನವಾದರೆ ಮಾತ್ರ ಆ ಸಮಸ್ಯೆ. ಇದನ್ನು ಚಿತ್ರಿಕೆಗಳ ಸಂಯೋಜನೆಯ ಅವಘಡ ಎನ್ನುತ್ತೇವೆ. ಇಂಥ ಕೆಲವು ತಪ್ಪುಗಳಿವೆ.

ಇದು ಏಕೆಂದು ಪುಟ್ಟಣ್ಣನವರ ಆಪ್ತರಾಗಿದ್ದು, ಅವರ ಬಲಗೈ ಬಂಟರಂತೆ ಕೆಲಸ ಮಾಡಿದ್ದ ಸುಂದರಕೃಷ್ಣ ಅರಸ್ ಹಾಗೂ ಮೈಸೂರಿನ ಆರ್. ಜಯರಾಮು ಅವರನ್ನು ಕೇಳಿದ್ದೆ. ಆಗ ನಿಜವಾದ ಸಂಗತಿ ನನಗೆ ತಿಳಿದದ್ದು. ವಾಸ್ತವವಾಗಿ ಜಯರಾಂ “ಬೆಳ್ಳಿಮೋಡ’ ಕ್ಕೆ ಪುಟ್ಟಣ್ಣರೊಂದಿಗೆ ಕೆಲಸ ಮಾಡಿರಲಿಲ್ಲ. ಅವರು ಪುಟ್ಟಣ್ಣರೊಂದಿಗೆ ಸೇರಿದ್ದು ಚದುರಂಗರ “ಸರ್ವಮಂಗಳ’ದಿಂದ. ಆದರೆ ಅವರೂ ಸೇರಿದಂತೆ ಆಪ್ತರ ಬಳಿ ಪುಟ್ಟಣ್ಣರೇ ಹೇಳಿಕೊಂಡ ಮಾಹಿತಿ ನನಗೆ ದಕ್ಕಿದ್ದು.

ಪುಟ್ಟಣ್ಣನವರು ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹೊಸಬರು. ಹೊಸ ಕನಸುಗಳನ್ನು, ಆವಿಷ್ಕಾರಗಳನ್ನು ತಮ್ಮ ಮುಂದಿಟ್ಟು ಕೊಂಡು ಬಂದವರು. ಆದರೆ ಅವರಿಗಿಂತ ಅನುಭವಿಗಳಾಗಿದ್ದವರು ತಕ್ಷಣವೇ ಹೊಸದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅದರ ಪರಿಣಾಮ ಬೆಳ್ಳಿಮೋಡದ ತಪ್ಪುಗಳು. ಇದರೊಂದಿಗೆ ಒಂದಿಷ್ಟು ಸನ್ನಿವೇಶವೇ ಸೃಷ್ಟಿಸುವ ಸಮಸ್ಯೆಗಳೂ ಸೇರಿದ್ದವು.

ಆಗ ಮದರಾಸೇ ಚಿತ್ರನಗರಿ. ಅಲ್ಲಿ ಚಿತ್ರೀಕರಣವಿಲ್ಲದಿದ್ದಾಗ ಕ್ಯಾಮೆರಾ ಇತ್ಯಾದಿ ಉಪಕರಣಗಳು ಖಾಲಿ ಇದ್ದರೆ ಕನ್ನಡದ ಚಿತ್ರಗಳಿಗೆ ಸಿಗುತ್ತುದ್ದವು. ಹಾಗಾಗಿ ಎಷ್ಟೋ ಬಾರಿ ಹೇಳಿದ ಸಮಯಕ್ಕೆ ಕ್ಯಾಮೆರಾ ಸಿಗುತ್ತಿರಲಿಲ್ಲ. ಕ್ಯಾಮೆರಾ ಸಿಕ್ಕಾಗ ಅಕಾಲವಾದರೂ ಚಿತ್ರೀಕರಣ ಕೈಗೊಳ್ಳಬೇಕಿತ್ತು. ಇಲ್ಲದಿದ್ದರೆ ಕಷ್ಟ. ಏನೂ ಮಾಡುವಂತಿರಲಿಲ್ಲ. ನಮಗೆ ಬೇಕಾದ ಚಿತ್ರೀಕರಣದ ಸಂದರ್ಭಕ್ಕೆ, ಹೊತ್ತಿಗೆ ಕಾದು ಕುಳಿತು ಚಿತ್ರೀಕರಿಸಲು ಚಿತ್ರ ನಿರ್ಮಾಣ ವೆಚ್ಚ ಕೈ ಮೀರುತ್ತಿತ್ತು. ಹಾಗಾಗಿ ಒಂದಷ್ಟು ಸಂದರ್ಭದಲ್ಲಿ ಹೊಂದಾಣಿಕೆ (ಕಾಂಪ್ರೈಮೈಸ್) ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇದರೊಂದಿಗೆ “ನಾನು ಸೀನಿಯರ್, ನೀನು ಜೂನಿಯರ್’ ಎಂಬ ಅಂಶವೂ ಸೇರಿದರೆ ಇನ್ನೂ ಕಷ್ಟದ್ದು.
puttanna ಆದರೂ ಪುಟ್ಟಣ್ಣರ ಪ್ರತಿಭೆ ಅರ್ಥವಾಗುವುದು ಬೆಳ್ಳಿಮೋಡದ ಮತ್ತೊಂದು ದೃಶ್ಯದಲ್ಲಿ.  ಎಸ್ಟೇಟ್‌ನ ಒಡತಿ ಪಾತ್ರದಲ್ಲಿದ್ದ ಪಂಡರೀಬಾಯಿ ಚಿತ್ರದಲ್ಲಿ ಸಾಯುತ್ತಾರೆ. ಅವರು  ಸುತ್ತಮುತ್ತಲೂ ಬಹಳ ಹೆಸರುವಾಸಿಯಾಗಿದ್ದವರು. ಹಾಗಾಗಿ ಅವರ ಸಾವನ್ನು  ನೋಡಲು ನೂರಾರು ಮಂದಿ ಬರುತ್ತಾರೆ. ಹಾಗೆ ನೂರಾರು ಮಂದಿಯನ್ನು ನಟನೆಗೆ  ಕರೆತಂದರೆ ಅವರಿಗೆ ಹಣ ಕೊಡಬೇಕು, ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ  ನಿರ್ಮಾಪಕರು ಒಪ್ಪಲಿಲ್ಲ. ಆಗ ಪುಟ್ಟಣ್ಣನವರು, ಬರೀ ಕಾಲುಗಳನ್ನೇ ಸೆರೆಹಿಡಿಸಿ,  ಅದನ್ನು ದ್ವಿಗುಣಗೊಳಿಸಿ ತೋರಿಸಿದರು. ಜನರಿಗೂ ಅನುಮಾನ ಬರಲಿಲ್ಲ,  ನಿರ್ಮಾಪಕರ ಜೇಬಿಗೂ ಭಾರವಾಗಲಿಲ್ಲ.

ಅಂಥದೇ ಮತ್ತೊಂದು ಸಂಗತಿ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಮರದ ಮೇಲೆ ಕೆತ್ತಿದ  ಹೆಸರುಗಳನ್ನು ಕಲ್ಪನಾ ಛಿದ್ರಗೊಳಿಸುವುದು. ರೂಢಿಗತ ಕ್ಲೈಮ್ಯಾಕ್ಸ್‌ಗಳಿಂದ ತೀರಾ  ಭಿನ್ನವಾದದ್ದಿದು. ವಾಸ್ತವವಾಗಿ ಆ ಸಮತಟ್ಟಾದ ಪ್ರದೇಶದಲ್ಲಿ ಮರವಿರಲಿಲ್ಲ.  ಬೇರೊಂದು ಕಡೆಯಿಂದ ಮರವನ್ನು ಕಡಿದು ತಂದು ಇಲ್ಲಿರಿಸಿ ಚಿತ್ರೀಕರಿಸಿದ್ದು. ಈ  ದೃಶ್ಯದ ಚಿತ್ರೀಕರಣದ ಬಗ್ಗೆಯೂ ಸಹೋದ್ಯೋಗಿಗಳಿಗೆ ವಿವರಿಸಿದಾಗ ಎಲ್ಲರೂ  ನಕ್ಕಿದ್ದರಂತೆ.

ಇಂಥದೊಂದು ಸನ್ನಿವೇಶಕ್ಕೆ ಪೂರಕವಾಗುವ ಸ್ಥಳವನ್ನು ಹುಡುಕೋ ಬದಲು, ಇದ್ಯಾವ ಡೈರೆಕ್ಟರಪ್ಪಾ..ಮರನ್ನೇ ಕತ್ತರಿಸಿ ತಾ ಅಂತಾನೆ ಅಂದು ಬಹುತೇಕರು ಗೊಣಗಿದ್ದರು. ಆದರೆ ತಮಗೆ ಬೇಕಾದ, ಸರಿ ಎನಿಸಿದ ಲೋಕೇಷನ್‌ನಲ್ಲಿ ತಮಗೆ ಬೇಕಾದದ್ದನ್ನು ಸೃಷ್ಟಿಸಿಕೊಳ್ಳುವ ಶಕ್ತಿ ಪುಟ್ಟಣ್ಣರಿಗಿತ್ತು.

ಹಾಗೆಯೇ ನಿರೂಪಣೆಯಲ್ಲೂ ಹೊಸ ಬಗೆಯಿತ್ತು. ಸಾಮಾನ್ಯವಾಗಿ ನಾಯಕನ ಟ್ರ್ಯಾಕ್‌ಗೆ ಸರಿಯಾಗಿ ಹಾಸ್ಯದ ಟ್ರ್ಯಾಕ್ ಇರುತ್ತಿತ್ತು. ಇದು ಮೊದಲ ಚಿತ್ರವಾದ್ದರಿಂದ ಎಲ್ಲ ಬದಲಾವಣೆಯನ್ನೂ ಒಪ್ಪಿಕೊಳ್ಳಲಾರರೆಂದು ಹಾಸ್ಯದ ಟ್ರ್ಯಾಕ್ ಅನ್ನು ಉಳಿಸಿಕೊಂಡಿದ್ದರು ಪುಟ್ಟಣ್ಣ. ಆದರೆ ನಂತರದ ಚಿತ್ರಗಳಲ್ಲಿ ಸನ್ನಿವೇಶಗಳಲ್ಲೇ ಉತ್ತಮ ಅಭಿರುಚಿಯ ಹಾಸ್ಯವನ್ನು (ಸೀಕ್ವೆನ್ಸನ್ಸ್) ಸೃಷ್ಟಿಸಿದ್ದರು. ಅದೇ ಸ್ವತಂತ್ರವಾದ ನೆಲೆ. ಕರುಳಿನ ಕರೆ ಇತ್ಯಾದಿ ಚಿತ್ರಗಳಲ್ಲಿ ನೋಡಬಹುದು.

ಆಗ ಪ್ರಚಲಿತವಾಗಿದ್ದ ನಾಟಕದ ಮಾದರಿಯ ಮೂರು-ನಾಲ್ಕು ನಿಮಿಷಗಳ ಸನ್ನಿವೇಶಗಳನ್ನು “ಇದು ಸಿನಿಮಾಕ್ಕೆ ಹೊಂದುವಂಥದ್ದಲ್ಲ’ ಎಂದು ಖಡಕ್ಕಾಗಿ ಹೇಳುತ್ತಿದ್ದ ಅವರು, ಒಂದೂವರೆ ನಿಮಿಷದ ಸನ್ನಿವೇಶಗಳಿದ್ದರೆ ಚೆಂದ ಎಂದು ಪ್ರತಿಪಾದಿಸುತ್ತಿದ್ದರು. ಅನಗತ್ಯವಾದ ಸಂಭಾಷಣೆ ಇರಬಾರದು, ಚುಟುಕಾಗಿ, ತೀಕ್ಷ್ಣವಾಗಿ ಸನ್ನಿವೇಶಗಳಿರಬೇಕು ಎನ್ನುತ್ತಿದ್ದರು. ಈ ಎಲ್ಲ ದೃಷ್ಟಿಯಿಂದ ನೋಡಿದ್ದರೆ “ಬೆಳ್ಳಿಮೋಡ’ ಮಹತ್ವದ ಚಿತ್ರ.

ಇದರೊಂದಿಗೆ “ಬೆಳ್ಳಿಮೋಡ” ಹಿಂದಣದ ಅರಿವು, ಮುಂದಣದ ಪ್ರಜ್ಞೆ ಇಟ್ಟುಕೊಂಡ ಚಿತ್ರ. ಪರಂಪರೆಯನ್ನೂ ಸಾರಾಸಗಟಾಗಿ ಬಿಡದೇ, ಭವಿಷ್ಯದ ಪ್ರಗತಿಯತ್ತಲೂ ಚಾಚಿದಂಥ ಚಿತ್ರ. ಹಾಗಾಗಿ ಕನ್ನಡ ಚಿತ್ರರಂಗದ ಬೆಳವಣಿಗೆಯ ಹಿತದೃಷ್ಟಿಯಲ್ಲಿ ಗಮನಿಸಿದರೆ ಅತ್ಯಂತ ಮಹತ್ವದ ಚಿತ್ರ. ತನ್ನದೇ ಆದ ತಾಂತ್ರಿಕ ಪರಿಣತಿ-ಪ್ರೌಢಿಮೆಗಳನ್ನು ಹೊಂದುವಲ್ಲಿ ದೃಷ್ಟಿ ಹರಿಸಿದ, ಹಾತೊರೆದಂಥದ್ದು “ಬೆಳ್ಳಿಮೋಡ’; “ಸಂಕ್ರಮಣ’ ಚಿತ್ರವೆನ್ನಲೂ ಬಹುದು.

ಬಹಳ ಕುತೂಹಲದ ಸಂಗತಿಯೆಂದರೆ ಪುಟ್ಟಣ್ಣನವರಿಗೆ ಬೇರೆಯವರ ಕಥೆಯನ್ನು ಅಳವಡಿಸಿಕೊಳ್ಳುವುದು ಕರಗತವಾಗಿತ್ತು. ಅದರಲ್ಲಿ ಅವರು ಯಶಸ್ವಿ ಸಹ. ಆದರೆ, ತಮ್ಮದೇ ಕಥೆಯನ್ನು ಕಟ್ಟಿಕೊಳ್ಳರು. ಮಸಣದ ಹೂ ಇತ್ಯಾದಿ. ಜತೆಗೆ ಅವರ ಯಶಸ್ವಿ ಚಿತ್ರಗಳೆಲ್ಲಾ ಬೇರೆಯವರ ಕಥೆ ಆಧರಿಸಿದವು.

ರಾತ್ರಿಯೆಲ್ಲಾ ಚಿ. ಉದಯಶಂಕರ್‌ರಂಥವರಲ್ಲಿ ಚಿತ್ರಕತೆ, ಸಂಭಾಷಣೆ ಬರೆಸುತ್ತಿದ್ದರು. ಆದರೆ ಬೆಳಗ್ಗೆ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ಸಂಭಾಷಣೆಗಳನ್ನು ಕಿತ್ತು, ಸಂಕ್ಷೇಪಗೊಳಿಸಿಬಿಡುತ್ತಿದ್ದರು. ಆಗೆಲ್ಲಾ ಸಂಭಾಷಣಾಕಾರರು ಪುಟ್ಟಣ್ಣನವರ ಚಿತ್ರಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರಲಿಲ್ಲವಂತೆ. ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಹೊರಬರುತ್ತಿದ್ದ ಪುಟ್ಟಣ್ಣನವರ ಸಹಾಯಕರಿಗೆ ಉದಯಶಂಕರ್ ಸೇರಿದಂತೆ ಇವರ ಚಿತ್ರಗಳಲ್ಲಿ ಸಂಭಾಷಣೆ ಬರೆದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಯೆಂದರೆ “ಮುಗೀತೇನ್ರಪ್ಪಾ…ಎಲ್ಲಾ ಹೊಡೆದು ಹಾಕಿದ್ದು’. ಈ ಹಿನ್ನೆಲೆಯಲ್ಲಿ ಒಮ್ಮೆ ಆರ್. ಜಯರಾಮು, ಪುಟ್ಟಣ್ಣನವರನ್ನು ಕೇಳಿಯೇ ಬಿಟ್ಟರಂತೆ.”ಸಾರ್, ಯಾಕ್ ಸುಮ್ನೆ ಚಿ. ಉದಯಶಂಕರ್ ಅವರಲ್ಲಿ ಬರೆಸ್ತೀರಾ? ಅವ್ನೆಲ್ಲಾ ಹೊಡೆದುಹಾಕ್ತೀರಿ. ಸುಮ್ನೆ ದುಡ್ಡೂ ವೇಸ್ಟ್, ಅವ್ರಿಗೂ ಬೇಜಾರು’ ಎಂದರಂತೆ.

ಅದಕ್ಕೆ ಪುಟ್ಟಣ್ಣನವರು, “ನೋಡಪ್ಪಾ, ಉದಯಶಂಕರ್ ಅವರು ಚಿತ್ರಕಥೆಯನ್ನ ಚೆನ್ನಾಗಿ ಬರೆಯುತ್ತಾರೆ. ಆದರೆ ಚಿತ್ರಕಥೆ ಬೇರೆಯವರದ್ದಿರಬೇಕು. ಯಾವಾಗ್ಲೂ ಸಂಭಾಷಣೆಯನ್ನ ನಿರ್ದೇಶಕನೇ ರೂಪಿಸಬೇಕು. ಅದೇ ಸರಿಯಾದುದು’ ಎನ್ನುತ್ತಿದ್ದರಂತೆ.

Advertisements