ಮೈಸೂರಿನಲ್ಲಿ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದದಲ್ಲಿ ಉಮಾಶ್ರೀ ಮನಬಿಚ್ಚಿ ಮಾತನಾಡಿದರು. ತಮ್ಮ ಬದುಕಿನ ಅನುಭವಗಳನ್ನೆಲ್ಲಾ ವಿವರಿಸಿದರು. ಅದರ ಪುಟ್ಟ ವರದಿಯನ್ನು ಮೈಸೂರಿನ ನಚಿಕೇತ ಕಳಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.

“ನನ್ನನ್ನು ಸದಾ ಕಾಡುವವಳು ಶರ್ಮಿಷ್ಠೆ…”

ಹೀಗೆ ಮಾತು ಆರಂಭಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ, ತನ್ನ ನಟನೆಯ ಅನುಭವವನ್ನು ವಿವರಿಸಿದ್ದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ.

“ಎಲ್ಲರೂ ನನಗೆ ತೃಪ್ತಿ ಬಂದ ಪಾತ್ರಗಳ ಬಗ್ಗೆ ಕೇಳ್ತಾರೆ. ಆದರೆ ನನಗೆ ಅಂಥ ತೃಪ್ತಿ ಇನ್ನೂ ಬಂದಿಲ್ಲ, ಬಹುಶಃ ಕಲಾವಿದೆಗೆ ತೃಪ್ತಿ ಎಂದಿರದು. ಆಂಧ್ರದ ನಿರ್ಮಲಮ್ಮ ಎಂಬ ನಟಿ ತನ್ನ ಜೀವನದ ಕೊನೆ ಕ್ಷಣದವರೆಗೂ ನಟಿಸಿದರು, ನಟಿಸುತ್ತಿದ್ದಾಗಲೇ ನಿಧನಕ್ಕೀಡಾದರು. ಅಂದರೆ ಆ ಕ್ಷಣದವರೆಗೂ ತೃಪ್ತಿಯ ನೆಲೆಯಲ್ಲಿ ಹುಡುಕಾಟ ನಡೆದೇ ಇರುತ್ತದೆ. ಆದರೆ, ನನ್ನನ್ನು ಕಾಡಿದ ಪಾತ್ರಗಳಿವೆಯೇ ಎಂದು ಕೇಳಿದರೆ ಹೌದು, ಇದೆ. ಅದು ಶರ್ಮಿಷ್ಠೆಯದು. ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”.
umashree “ಹಾಗೆಯೇ ಒಡಲಾಳದ ಸಾಕಮ್ಮ ನನ್ನೊಳಗೆ ಗಟ್ಟಿತನ ಬೆಳೆಸಿದವಳು.  ನನ್ನ ಅದೃಷ್ಟವೇ ಹೀಗೇ ಎಂದು ಭಿಕ್ಷೆ ಬೇಡಲು ಸಿದ್ಧಳಾಗಲಿಲ್ಲ. ಎರಡು  ಕೋಳಿ ಸಾಕ್ಕೊಂಡು, ಮೊಟ್ಟೆ-ಗಿಟ್ಟೆ ಮಾರ್ಕೊಂಡು ಬದುಕ್ತೀನಿ ಎನ್ನೋ ಛಲ  ತೋರಿದಳು. ಅಂಥ ಗಟ್ಟಿಗಿತ್ತಿ ಆಕೆ”.

“ಗುಲಾಬಿ ಪಾತ್ರಕ್ಕೂ ನನ್ನ ಬದುಕಿಗೂ ಒಂದಷ್ಟು ಸಾಮ್ಯವಿದೆ. ದಾಂಪತ್ಯ  ಜೀವನದಿಂದ ಇಬ್ಬರೂ ವಂಚಿತರಾದವರೇ. ಆಕೆ ಭ್ರಮಾಲೋಕದಲ್ಲಿ  ವಿಹರಿಸುತ್ತಾ ಬದುಕಿದವಳು. ನಾನು ಚಿತ್ರಲೋಕದಲ್ಲಿ ಕಳೆಯುತ್ತಾ ಬದುಕು  ರೂಪಿಸಿಕೊಂಡವಳು”.

“ಏನೇ ಹೇಳಿ. ನಟನೆಯ ಕೃಷಿ ಮಾಡಲಿಕ್ಕೆ, ಕಲಿಯಲಿಕ್ಕೆ ರಂಗಭೂಮಿಯೇ  ಸಮರ್ಥ ವೇದಿಕೆ. ಕಿರುತೆರೆತಯಾಗಲೀ, ಬೆಳ್ಳಿತೆರೆಯಾಗಲೀ ಅಲ್ಲ.  ಈಗಿನವರು ರಂಗಭೂಮಿಗೆ ಬರದೇ ನೇರವಾಗಿ ಕಿರುತೆರೆಗೆ ಬರ್ತಾರೆ.  ದಿಢೀರ್ ದುಡ್ಡು, ಪ್ರಖ್ಯಾತಿ ಸಿಗೋದು ನಿಜ. ಆದರೆ ಕಲಿಕೆಗೆ ಅವಕಾಶ  ಸಿಗದು. ಮೂರು ಇಲ್ಲವೇ ಐದು-ಹತ್ತು ಧಾರಾವಾಹಿಗಳಲ್ಲಿ ಆ ನಟಿ  ಹಳಬಳಾಗಿಬಿಡುತ್ತಾಳೆ. ಮುಖ ಹಳಸಲು ಎನಿಸುತ್ತದೆ. ಅಷ್ಟೆ ಭವಿಷ್ಯ.  ರಂಗಭೂಮಿಯಲ್ಲಿ ತಾಲೀಮು ಪಡೆದು ಬಂದರೆ ಸಾಕಷ್ಟು ವರ್ಷ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಸಾಧ್ಯ. ಹಾಗಾಗಿ ಗಟ್ಟಿಯಾದ ಕಲಾವಿದರು ಚಿತ್ರರಂಗಕ್ಕೆ ಸಿಗದಿರುವುದಕ್ಕೂ ಕಾರಣವಿದೆ”.

“ನಾನು ಈ ವಯಸ್ಸಿನಲ್ಲಿ ಹೀರೋಯಿನ್ ಆಗಿದ್ದೇನೆ. ರಂಗಭೂಮಿಯಲ್ಲಿ ನಾಯಕ ನಟ, ನಾಯಕ ನಟಿ, ಪೋಷಕ ನಟ, ಪೋಷಕ ನಟಿ ಎಂಬ ಪ್ರತ್ಯೇಕತೆಯಿಲ್ಲ. ಆದರೆ ಸಿನಿಮಾದಲ್ಲಿ ಅಂಥದೊಂದು ಗೆರೆಗಳನ್ನು ಹಾಕಿಕೊಂಡಿದ್ದೇವೆ. ಆ ಪದ್ಧತಿ ಬೆಳೆದುಬಂದಿದೆ. ಅದನ್ನು ನಾನಿಲ್ಲಿ ದೂರುತ್ತಿಲ್ಲ. ಆದರೆ ಒಬ್ಬ ನಾಯಕಿಯೇ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಬೇಕೇಹೊರತು ಪೋಷಕ ನಟಿಯಲ್ಲ. ಇದುವರೆಗೆ ಪೋಷಕ ನಟಿ ಎನಿಸಿಕೊಂಡಿದ್ದೆ. ಈಗ ಗುಲಾಬಿಯ ಪಾತ್ರದಿಂದ ಉತ್ತಮ ನಟಿಯಾಗಿ ಪರಿಗಣಿತವಾಗಿದ್ದೇನೆ. ಅದೇ ಸಂತೋಷ”.

ಒಂದು ಸಂದರ್ಭದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದೆ ನಿಜ, ಅದೇ ಹುಡುಗರು ದೊಡ್ಡವರಾಗಿ ನನ್ನ ನಟನೆಯನ್ನು ಮೆಚ್ಚುತ್ತಿದ್ದಾರೆ ಎಂಬುದು ಅವರ ಸಂತೋಷದ ನುಡಿ. ಸಂಘದ ಅಧ್ಯಕ್ಷ ಕೆ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಭುರಾಜನ್, ಖಜಾಂಚಿ ಕುಂದೂರು ಉಮೇಶ ಭಟ್ಟ ಭಾಗವಹಿಸಿದ್ದರು.