ಗುಲಾಬಿ ಟಾಕೀಸ್ ಚಲನಚಿತ್ರದ ಅಭಿನಯಕ್ಕಾಗಿ ನಟಿ ಉಮಾಶ್ರೀಗೆ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ. ಉಮಾಶ್ರೀ ನಡೆದು ಬಂದ ಹಾದಿ ಕಲ್ಲು ಮುಳ್ಳು. ಇದು ಬರಿದೇ ಕಷ್ಟದ ಬಗ್ಗೆ ಹೇಳುತ್ತಿಲ್ಲ. ಅವರು ನಟನೆಗೆ ಇಳಿದು ಸಿನಿಮಾದಲ್ಲಿ ನಟಿಸತೊಡಗಿದಾಗ ಅವರ ದ್ವಂದ್ವಾರ್ಥದ ಸನ್ನಿವೇಶಗಳನ್ನು ಕಂಡೇ ಪ್ರೇಕ್ಷಕರು ಬ್ರ್ಯಾಂಡ್ ಮಾಡಿದ್ದರು. ಅಷ್ಟೇ ಏಕೆ ? ಅಸ್ಪೃಶ್ಯವಾಗಿಯೂ ನೋಡಿದ್ದರು. ಅದು ಕೇವಲ ನಟನೆ ಎಂಬ ಸತ್ಯವನ್ನು ತಿಳಿಯಲಿಲ್ಲ. ಈಗ ರಾಜಕಾರಣಿಯಾಗಿಯೂ ನಟಿಯನ್ನು ಕೊಂದುಕೊಳ್ಳಲಿಲ್ಲವೆಂಬುದಕ್ಕೆ ಗುಲಾಬಿ ಟಾಕೀಸಿನ ಅಭಿನಯವೇ ಸಾಕ್ಷಿ. ಬೆಂಗಳೂರು ವಿವಿಯ ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮದ ವಿದ್ಯಾರ್ಥಿ ಕಾರ್ತಿಕ್ ಪರಾಡ್ಕರ್ ಹೊಸದಿಗಂತ ಪತ್ರಿಕೆಗೆ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಇದು ಸಾಂಗತ್ಯದ ಅಭಿನಂದನೆ ಉಮಾಶ್ರೀಗೆ.

ಅವಳು ಕನಸಿನ ಗುಲಾಬಿ. ಪ್ರತಿ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಆ ಮೂಲಕ ಹೊಸ ಕನಸುಗಳನ್ನು ಕಾಣುವ ಬಯಕೆ ಆಕೆಗೆ. ಆ ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಶಃ ಈ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.

ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ “ಗುಲಾಬಿ ಟಾಕೀಸು”….

ಕನ್ನಡ ಸಿನಿಮಾದ ಗುಲಾಬಿ ಉಮಾಶ್ರಿಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ “ಗುಲಾಬಿ ಟಾಕೀಸು” ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ ಮುಖ್ಯಪಾತ್ರವೇ ಗುಲಾಬಿಯದ್ದು.
gu
ಉಮಾಶ್ರಿಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಆ ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ ಆಕೆ. ಉಮಾಶ್ರಿಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.

ಬಹುಶಃ ರಂಗಭೂಮಿ ಉಮಾಶ್ರಿಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರಿ ಅಂದರೆ ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರಿ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರಿಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು-ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.

ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ ಸಾಧ್ಯವಾಗುವುದು ಉಮಾಶ್ರಿಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರಿ ತೆರೆಮೇಲೆ ಬಿಚ್ಚಿಡುತ್ತಾರೆ. “ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು” ಎನ್ನುವಾಗ ಉಮಾಶ್ರಿಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.
gu-1
ಉಮಾಶ್ರಿಯ ನಟನೆಯ ತೀವ್ರತೆಯ ಸನ್ನಿವೇಶಗಳು “ಗುಲಾಬಿ ಟಾಕೀಸು” ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರಿಯ ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಆ ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ನಮಗೆ ಪೂರ್ಣವಾಗಿ ಅರ್ಥವಾಗುತ್ತಾಳೆ.

ಗುಲಾಬಿಯಂತಹ ಪಾತ್ರವನ್ನು ಉಮಾಶ್ರಿಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು ಸಲ್ಲಲೇಬೇಕು…ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರಿ ಮುಂದೆಯೂ ಕಟ್ಟಿಕೊಡಲಿ.
ಈ ಹಿಂದೆ ಕಾರ್ತಿಕ್ ಪರಾಡ್ಕರ್ ಬರೆದ “ಕಾಂಚೀವರಂ” ಚಿತ್ರದ ಬರಹಕ್ಕೆ ಇಲ್ಲಿ ಕ್ಲಿಕ್ ಮಾಡಿ.