ಸಿನಿಮಾ ಎಂದರೇನು ಎಂಬುದು ಸುಮ್ಮನೆ ಹುಟ್ಟಿ ಹಾಕಿರುವ ಚರ್ಚೆ. ಆ ಮೂಲಕ ಸಿನಿಮಾ ಬಗೆಗಿನ ವಿಭಿನ್ನ ವ್ಯಾಖ್ಯಾನ, ದೃಷ್ಟಿಗಳು ಒಟ್ಟಾಗಲಿ ಎಂಬುದೇ ಆಶಯ. ಈ ಚರ್ಚೆ ಇಷ್ಟು ದಿನವೆಂದೇನೂ ಇಲ್ಲ. ಆಗಾಗ್ಗೆ ಬೇರೆ ಬರಹಗಳು ಪ್ರಕಟಗೊಳ್ಳುತ್ತಲೆ ಇರುತ್ತವೆ. ರಂಜಿತ್ ಹೀಗೇ ಸಿನಿಮಾದ ಒಲವಿನವರು. ತಮ್ಮ ದೃಷ್ಟಿಯನ್ನು ಬರೆದುಕಳಿಸಿದ್ದಾರೆ. ಇದನ್ನು ನೀವೂ ಬೆಳೆಸುವುದಾದರೆ ನಮಗೆ ಇಮೇಲ್ ಮಾಡಿ.

ಸಿನೆಮಾ ಎಂದರೇನು? ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.

ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕ ಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?

ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?

ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.

ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ಅನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.

ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು. ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!

ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ.

“ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆ ಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.

ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದ, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆ ಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ.

ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ. ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.

ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.

Advertisements