ಚಲನಚಿತ್ರ ಅಕಾಡೆಮಿ ಕೋಲಾರದ ಕೈವಾರದಲ್ಲಿ ಮೂರು ದಿನಗಳ ಬೆಳ್ಳಿ ಮಂಡಲ ಕಾರ್ಯಾಗಾರ ಏರ್ಪಡಿಸಿತ್ತು. ಚಲನಚಿತ್ರ ಸಮಾಜಗಳ ರಚನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ. ಅದರ ವರದಿ ಹಾಗೂ ಶಿಬಿರಾರ್ಥಿಯಲ್ಲಿ ಒಬ್ಬರಾದ ಶಿವಮೊಗ್ಗದ ದಿ ಹಿಂದೂ ಪತ್ರಿಕೆಯ ಛಾಯಾಗ್ರಾಹಕ ವೈದ್ಯ ಅವರು ಕಳಿಸಿಕೊಟ್ಟ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊಸ ಸಾಹಸಕ್ಕೆ ಕೈ ಹಾಕಿದೆ.
“ಬೆಳ್ಳಿ ಮಂಡಲ’ದ ಹೆಸರಿನಲ್ಲಿ ರಾಜ್ಯಾದ್ಯಂತ ಫಿಲ್ಮ್ ಸೊಸೈಟಿಗಳನ್ನು ಹುಟ್ಟು ಹಾಕಲು ಹೊರಟಿದೆ. ಆ ಮೂಲಕ ಒಳ್ಳೆಯ ಚಲನಚಿತ್ರಗಳನ್ನು ನೋಡಲು ಇರುವ ನಿರ್ವಾತವನ್ನು ನಿವಾರಿಸುವುದು ಅಕಾಡೆಮಿಯ ಉದ್ದೇಶ.

ಹೊಸ ನೆಲೆಯ ಚಿತ್ರಗಳು ಹಾಗೂ ಪ್ರಯೋಗಾತ್ಮಕ ಚಲನಚಿತ್ರಗಳು ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗದು. ಒಂದುವೇಳೆ ಬಿಡುಗಡೆಯಾದರೂ ಎಂದಿನ (ರೆಗ್ಯುಲರ್) ಚಲನಚಿತ್ರಗಳಷ್ಟು ಪ್ರಚಾರ ಇತ್ಯಾದಿ ಇರದು. ಹಾಗಾಗಿ ಅದು ಬಂದದ್ದೂ ತಿಳಿಯವುದಿಲ್ಲ, ಹೋದದ್ದೂ ತಿಳಿಯುವುದಿಲ್ಲ ಎಂಬ ಆರೋಪವಿದೆ. ಇಂಥ ಆರೋಪಗಳ ನಿವಾರಣೆ ಹಾಗೂ ಉತ್ತಮ ಚಲನಚಿತ್ರಗಳಿಗೆ ವೇದಿಕೆಯಾಗಿಸಲು ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಲು ಹೊರಟಿದೆ ಅಕಾಡೆಮಿ.

ಇದಕ್ಕೆ ಪೂರಕವೆಂಬಂತೆ ಆ. 20 ರಿಂದ 22 ರವರೆಗೆ ಕೋಲಾರ ಜಿಲ್ಲೆಯ ಕೈವಾರ ಕ್ಷೇತ್ರದಲ್ಲಿ “ಬೆಳ್ಳಿಮಂಡಲ’ ಕುರಿತೇ ರಾಜ್ಯದ ಎಲ್ಲ ಜಿಲ್ಲೆಯ ಕೆಲ ಆಸಕ್ತರನ್ನು ಕರೆಸಿ ಕಾರ್ಯಾಗಾರವನ್ನು ನಡೆಸಿತು. ಆ ಕಾರ್ಯಾಗಾರದಲ್ಲಿ ಬೆಳ್ಳಿಮಂಡಲ ಅಂದರೆ ಫಿಲ್ಮ್ ಸೊಸೈಟಿಗಳ ಸ್ಥಾಪನೆ, ಸಂರಚನೆ, ಕಾರ್ಯ ನಿರ್ವಹಿಸುವ ರೀತಿ ಹಾಗೂ ಅವುಗಳ ಹೊಣೆಗಾರಿಕೆ…ಇತ್ಯಾದಿಗಳನ್ನು ವಿವರಿಸಲಾಯಿತು.

ಅದಷ್ಟೇ ಕಾರ್ಯಾಗಾರ ಮುಗಿಯಲಿಲ್ಲ. ಮೂರು ದಿನಗಳಲ್ಲಿ ಎಂ.ಎಸ್. ಸತ್ಯು ಅವರ “ಬರ’, ಗಿರೀಶ್ ಕಾಸರವಳ್ಳಿಯವರ “ದ್ವೀಪ’, ಟಿ.ಎಸ್. ನಾಗಾಭರಣರ “ನಾಗಮಂಡಲ’, “ಇನ್‌ಜಾ’, “ವೇರ್ ದ ಗ್ರೀನ್ ಆಂಟ್ಸ್ ಡ್ರೀಮ್’, “ಇನ್ಸಿಂಡೆಟ್ ಅಟ್ ಔಲ್ಕ್ರೀಕ್’ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಪ್ರತಿ ಚಿತ್ರದ ನಂತರವೂ ಚರ್ಚೆಗಳನ್ನು ಸಂಘಟಿಸಲಾಗಿತ್ತು.

ಉದ್ಘಾಟನೆ

ಆ. 20 ರಂದು ಬೆಳಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಭಾಗವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.

ನಂತರದ ಕಾರ್ಯಾಗಾರವನ್ನು ಚಿತ್ರತಜ್ಞ ಮನು ಚಕ್ರವರ್ತಿಯವರು “ಸಿನಿಮಾ-ಇತಿಹಾಸ ಮತ್ತು ಸಂಸ್ಕೃತಿಯ ಪ್ರತಿಬಿಂಬ’ ಕುರಿತು ಮಾತನಾಡಿದರು. ಅನಂತರ ನಡೆದ “ವೇರ್ ದ ಗ್ರೀನ್ ಆಂಟ್ಸ್ ಡ್ರೀಮ್’ ಚಲನಚಿತ್ರ ಕುರಿತ ಚರ್ಚೆಯಲ್ಲೂ ಪಾಲ್ಗೊಂಡರು. ತರುವಾಯ ನಡೆದದ್ದು ಪ್ರೊ. ನಾಗರಾಜರಾವ್, ಮನು ಚಕ್ರವರ್ತಿ, ಪ್ರೊ. ಡಿ.ಎಸ್. ಮಂಜುನಾಥರೊಂದಿಗೆ ಸಂವಾದ. ಸುಮಾರು ಒಂದೂವರೆ ತಾಸು ನಡೆದ ಸಂವಾದದಲ್ಲಿ ಸಿನಿಮಾ ಗ್ರಹಿಕೆಯಿಂದ ಆರಂಭಿಸಿ ಸಿನಿಮಾ ಕ್ಷೇತ್ರದ ವಿವಿಧ ಮಜಲುಗಳ ಬಗ್ಗೆ ಚರ್ಚೆ ನಡೆಯಿತು.

ಸಂವಾದದಲ್ಲಿ ಪಾಲ್ಗೊಂಡಿದ್ದ ನಾಗಾಭರಣ, ವ್ಯಾಸರಾವ್ ಹಾಗೂ ಪ್ರಕಾಶ್ ಬೆಳವಾಡಿ
ಸಂವಾದದಲ್ಲಿ ಪಾಲ್ಗೊಂಡಿದ್ದ ನಾಗಾಭರಣ, ವ್ಯಾಸರಾವ್ ಹಾಗೂ ಪ್ರಕಾಶ್ ಬೆಳವಾಡಿ

ಸಾಹಿತ್ಯದಿಂದ ಸಿನಿಮಾ ಕುರಿತು ಉಪನ್ಯಾಸ ನೀಡಿದ ಪ್ರೊ. ಡಿ. ಎಸ್. ಮಂಜುನಾಥ್, “ಸಾಹಿತ್ಯ ಕೃತಿಯಂತೆಯೇ ಸಿನಿಮಾ ಮೂಡಿ ಬರಬೇಕೆಂದೇನೂ ಇಲ್ಲ. ಎರಡೂ ಬೇರೆ ಬೇರೆ ಸೃಷ್ಟಿಗಳು. ಸಾಹಿತ್ಯವನ್ನು ಆಧರಿಸಿ ದೃಶ್ಯ ಮಾಧ್ಯಮದಲ್ಲಿ ಏನನ್ನು ಹೇಳಬಹುದು ಎಂದು ಚಿತ್ರ ನಿರ್ದೇಶಕ ಆಲೋಚಿಸುತ್ತಾನೆ. ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗುತ್ತಾನೆ. ಅದು ಸರಿಯಾದ ಪ್ರಕ್ರಿಯೆ’ ಎಂದು ಅಭಿಪ್ರಾಯಪಟ್ಟರು.

ಎರಡನೇ ದಿನ
ಆ. 21 ರಂದು ಬೆಳಗ್ಗೆ ದ್ವೀಪ ಚಿತ್ರ ಕುರಿತ ಚರ್ಚೆಯನ್ನು ನಡೆಸಿಕೊಟ್ಟವರು ನಾಗರಾಜರಾವ್. ನಂತರ “ಬರ’ ಚಿತ್ರ ಪ್ರದರ್ಶನಗೊಂಡು, ಪೊಗದಸ್ತಾದ ಊಟ ಮಾಡಿ ಚರ್ಚೆಗೆ ಚಾಲೂ ನೀಡಲಾಯಿತು. ಪ್ರೊ. ಡಿ.ಎಸ್. ಮಂಜುನಾಥ್ ಇದನ್ನು ನಿರ್ವಹಿಸಿದರು. ಛಾಯಾಗ್ರಾಹಕ ಎಸ್. ರಾಮಚಂದ್ರ ತಂತ್ರಜ್ಞಾನದ ಮೂಲಕ ಸಿನಿಮಾವನ್ನು ನೋಡುವ ಬಗೆಯನ್ನು ವಿವರಿಸಿದರೆ, ಅದಕ್ಕೆ ಸಾಥ್ ನೀಡಿದವರು ನಿರ್ದೇಶಕ ಪಿ.ಎಚ್. ವಿಶ್ವನಾಥ್.

“ಚಲನಚಿತ್ರದಲ್ಲಿ ಹೊಸ ಅಲೆ’ ಕುರಿತು ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ, “ಹೊಸ ಅಲೆಯ ಚಿತ್ರಗಳನ್ನು ಜನರಿಗೆ ತಲುಪಿಸುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಇದು ನಮ್ಮದಷ್ಟೇ ಅಲ್ಲ, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿನ ಹೊಸ ಅಲೆಯ ನಿರ್ದೇಶಕರ ಸಮಸ್ಯೆ. ಕೇರಳದಲ್ಲಿ ಇಂಥ ಸಮಸ್ಯೆ ನಿವಾರಣೆಗೆ ಕಂಡುಕೊಂಡ ಮಾರ್ಗ ಚಿತ್ರ ಸಮಾಜ (ಫಿಲ್ಮ್ ಸೊಸೈಟಿ)ಗಳ ರಚನೆ. ಜಾನ್ ಅಬ್ರಹಾಂನಂಥ ನಿರ್ದೇಶಕ ಮುಂಚೂಣಿಯಲ್ಲಿ ನಿಂತು ಹೊಸ ಚಳವಳಿಗೆ ನಾಂದಿ ಹಾಡಿದರು. ಇದರ ಪರಿಣಾಮವಾಗಿ ಇಂದು ಕೇರಳದಲ್ಲಿ ಸುಮಾರು ೩೦೦ ಚಿತ್ರ ಸಮಾಜಗಳು ಹೊಸ ಅಲೆಯ ಚಿತ್ರಗಳು ಹಾಗೂ ಪ್ರೇಕ್ಷಕರ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು. ಜತೆಗೆ ರಾಜ್ಯ ಚಲನಚಿತ್ರ ಅಕಾಡೆಮಿಯ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.

ಎಚ್. ಎನ್. ನರಹರಿರಾವ್ ಮತ್ತು ಎನ್. ವಿದ್ಯಾಶಂಕರ್
ಎಚ್. ಎನ್. ನರಹರಿರಾವ್ ಮತ್ತು ಎನ್. ವಿದ್ಯಾಶಂಕರ್

ಅವರು ಪ್ರತಿಪಾದಿಸಿದ ಜನಪ್ರಿಯ ಮತ್ತು ಜನಪರ ಚಿತ್ರಗಳ ಬಗೆಗಿನ ವ್ಯಾಖ್ಯಾನಕ್ಕೆ ಶಿಬಿರಾರ್ಥಿಯೊಬ್ಬರು ಇವೆರಡನ್ನೂ ಕೂಡಿಸಿ ಒಳ್ಳೆಯ ಚಿತ್ರಗಳನ್ನು ಮಾಡಲು ಸಿದ್ಧವಿಲ್ಲವೇ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಟಿ.ಎಸ್. ನಾಗಾಭರಣ, “ಆ ಪ್ರಯತ್ನ ತಂತಿ ಮೇಲೆ ನಡೆಯೋ ಕೆಲಸ ; ಕೆಲವರಷ್ಟೇ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

“ಜನಪ್ರಿಯ ಚಿತ್ರಗಳು ಹಾಗೂ ರೂಢಿಬದ್ಧ ಸಾಂಸ್ಕೃತಿಕ ಪುನರ್ ನಿರ್ಮಾಣಗಳು’ ಕುರಿತು ಮಮತಾ ಸಾಗರ್ ಮಾತನಾಡಿದರು. ನಿರ್ದೇಶಕ ಪ್ರಕಾಶ್ ಬೆಳವಾಡಿ ಸಂವಾದದಲ್ಲಿ ಪಾಲ್ಗೊಂಡು, ಪ್ರತಿಯೊಬ್ಬನೂ ಚಿತ್ರ ನಿರ್ಮಿಸುವುದು ಅವನ ಅಭಿವ್ಯಕ್ತಿಯ ಒತ್ತಡಕ್ಕಾಗಿಯೇ ಹೊರತು ಕೇವಲ ಹಣಕ್ಕಲ್ಲ. ಅದೊಂದು ಉತ್ಪನ್ನದ ಮಾದರಿಯಲ್ಲ. ಕನ್ನಡದಲ್ಲಿ ಇಂದಿಗೂ ಚಿತ್ರರಂಗ ಉಳಿದದ್ದೇ ಅಚ್ಚರಿಯ ಸಂಗತಿ. ನಮ್ಮ ಸುತ್ತಲೂ ಮದರಾಸು, ಆಂಧ್ರ, ಮಹಾರಾಷ್ಟ್ರದ ಪ್ರಭಾವಕ್ಕೆ ಒಳಗಾದ ಬಹುಪಾಲು ಗಡಿ ಪ್ರದೇಶಗಳನ್ನು ಸೇರಿಸಿ ಕರ್ನಾಟಕವನ್ನಾಗಿ ರೂಪಿಸಲಾಗಿದೆ. ಆ ಜನ ಎರಡೂ ಬಗೆಯ ಚಿತ್ರಗಳನ್ನು ನೋಡಬಲ್ಲರು. ಕನ್ನಡದಷ್ಟೇ ನೋಡುವವರು ರಾಜ್ಯದ ಕೆಲವೇ ಭಾಗದ ಮಂದಿ ಮಾತ್ರ. ಅಂಥವರು ಚಿತ್ರ ನೋಡುತ್ತಿರುವುದರಿಂದಲೇ ಚಿತ್ರರಂಗ ಉಳಿದಿದೆ. ಇದೇ ಪರಿಸ್ಥಿತಿ ಆಂಧ್ರ, ತಮಿಳುನಾಡಿನಲ್ಲಿಲ್ಲ. ಇದನ್ನು ಅರ್ಥೈಸಿಕೊಂಡು ಕನ್ನಡ ಚಿತ್ರರಂಗದ ಸ್ಥಿತಿಯನ್ನು ಅಳೆಯಬೇಕಿದೆ’ ಎಂದವರು ಬೆಳವಾಡಿ. ಅಂದು ರಾತ್ರಿ ನಾಗಮಂಡಲ ಚಿತ್ರ ಪ್ರದರ್ಶನಗೊಂಡು ಆ. 22 ರ ಬೆಳಗ್ಗೆ ಚರ್ಚೆ ನಡೆಯಿತು.

ಸಮಾರೋಪ
ಕೊನೆಯ ದಿನ ಚಲನಚಿತ್ರ ಇತಿಹಾಸದ ಬಗ್ಗೆ ವಿವರಿಸಿದ ಸುಚಿತ್ರಾ ಫಿಲಂ ಸೊಸೈಟಿಯ ಎಚ್. ಎನ್. ನರಹರಿರಾವ್, ಚಲನಚಿತ್ರ ಸಮಾಜಗಳ ಅಗತ್ಯ ಹಾಗೂ ಕಾರ‍್ಯ ನಿರ್ವಹಣೆ ಕುರಿತು ವಿವರಿಸಿದರು. “ಒಳ್ಳೆ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಹೊಸ ಅಭಿರುಚಿಯನ್ನು ಬೆಳೆಸಬಹುದು. ನಾವೇ ನಾವೇ ಒಂದಿಷ್ಟು ಮಂದಿ ಸೇರಿಕೊಂಡು ಚಿತ್ರ ನೋಡಿ, ಚರ್ಚೆ ಮಾಡಬೇಕು. ಅದೊಂದು ಒಳ್ಳೆಯ ಪ್ರಕ್ರಿಯೆ’ ಎಂದರು.

ಸುಚಿತ್ರಾ ಸಾಂಸ್ಕೃತಿಕ ಕೇಂದ್ರದ ಎನ್. ವಿದ್ಯಾಶಂಕರ್, ಚಲನಚಿತ್ರ ಸಮಾಜ ಎದುರಿಸಬಹುದಾದ ಸಮಸ್ಯೆಗಳ ಕುರಿತು ವಿವರಿಸಿದರು. ಕಾಪಿರೈಟ್ ಕಾಯ್ದೆಯಿಂದ ಫಿಲ್ಮ್ ಸೊಸೈಟಿಗೆ ಎದುರಾಗುವ ಸಮಸ್ಯೆಯೇನು ಎಂಬುದರ ಕುರಿತೂ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ಸಮಾಜಗಳ ಮೂಲಕ ಚಳವಳಿ ಆರಂಭಿಸುವ ಕುರಿತು ಟಿ.ಎಸ್. ನಾಗಾಭರಣ ಶಿಬಿರಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, “ಅಕಾಡೆಮಿ ಒಳ್ಳೆಯ ಕೆಲಸ ಆರಂಭಿಸಿದೆ. ಯಾವುದೇ ಕಾರಣಕ್ಕೂ ಉದ್ಯಮದ ಒತ್ತಡಕ್ಕೆ ಒಳಗಾಗದೇ ಕೆಲಸ ನಿರ್ವಹಿಸಬೇಕು. ಶೈಕ್ಷಣಿಕ ನೆಲೆಯಲ್ಲೇ ಕಾರ್ಯ ನಿರ್ವಹಿಸಿ ಉತ್ತಮ ಪ್ರೇಕ್ಷಕರನ್ನು ರೂಪಿಸಬೇಕು. ಉದ್ಯಮ ಎನ್ನುವುದು ದೊಡ್ಡ ಲಾಬಿ. ಅದರ ಒತ್ತಡಕ್ಕೆ ಎಲ್ಲ ಸರಕಾರಗಳೂ ಒಳಗಾಗಿವೆ. ಆದ ಕಾರಣ, ಸಬ್ಸಿಡಿ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿದೆ’ ಎಂದರು. ಕೈವಾರದ ಶ್ರೀ ಯೋಗಿನಾರೇಯಣ ಟ್ರಸ್ಟ್ ನ ಅಧ್ಯಕ್ಷ ಎಂ. ಆರ್. ಜಯರಾಂ ಭಾಗವಹಿಸಿದ್ದರು.

ಗ್ರೂಪ್ ಫೋಟೋ
ಗ್ರೂಪ್ ಫೋಟೋ

ಮೂರೂ ದಿನಗಳ ವಸತಿ-ಊಟ ಉಪಚಾರ ವ್ಯವಸ್ಥೆಯನ್ನು ಅಕಾಡೆಮಿ ಅಚ್ಚುಕಟ್ಟಾಗಿ ಮಾಡಿತ್ತು. ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ, ಸದಸ್ಯ ಎಂ.ಎನ್. ವ್ಯಾಸರಾವ್ ಹಾಗೂ ಸಿಬ್ಬಂದಿ ಉಸ್ತುವಾರಿ ಹೊಣೆ ಹೊತ್ತಿದ್ದರು. ಆ. 24 ಮತ್ತು 25 ರಂದು ಚಿತ್ರಕೂಟ (ಬೆಳ್ಳಿ ಸಾಕ್ಷಿ) ಶಿಬಿರ ನಡೆಯಿತು. ಚಿತ್ರಗಳ ಕುರಿತು ಜನರಲ್ಲಿ ತಿಳಿವು ಮೂಡಿಸುವ ಪ್ರಯತ್ನ ಇದಾಗಿದೆ.