ಸಿನಿಮಾ ಎಂದರೆ ಏನು ?

ಇಂಥದೊಂದು ಪ್ರಶ್ನೆಗೆ ಉತ್ತರ ಹುಡುಕುವಂಥ ಪ್ರಯತ್ನ ಸಾಂಗತ್ಯ ಆರಂಭಿಸುತ್ತಿದೆ. ಬಹಳಷ್ಟು ಬಾರಿ ಸಿನಿಮಾ ಎನ್ನುವುದನ್ನು ಇನ್ನೂ ನಾವು ಸಾಹಿತ್ಯಿಕ ನೆಲೆಯಲ್ಲೇ ಹುಡುಕುವ ಪ್ರಯತ್ನ ನಡೆದಿದೆ. ಸಿನಿಮಾದಲ್ಲಿ ಕಥೆಯನ್ನೇ ಹುಡುಕಿಕೊಂಡು ಬೆನ್ನಟ್ಟಿರುವುದನ್ನು ಕಂಡಿದ್ದೇವೆ. ಒಂದು ದಟ್ಟವಾದ ಕಥೆ ಇಲ್ಲದಿದ್ದರೆ ಸಿನಿಮಾ ಚೆನ್ನಾಗಿಲ್ಲ ಎಂದು ನಿರ್ಧರಿಸುತ್ತೇವೆ. ಹಾಗಾದರೆ ಸಾಹಿತ್ಯವನ್ನು ಯಥಾವತ್ತಾಗಿ ಭಟ್ಟಿ ಇಳಿಸುವುದೇ ಸಿನಿಮಾ ಮಾಧ್ಯಮದ ಸಾಧ್ಯತೆಯೇ ? ದೃಶ್ಯ ಸಾಧ್ಯತೆಗಳ ಪ್ರಯೋಗಶೀಲತೆಗೆ ಅಲ್ಲಿ ಬೆಲೆ ಸಿಗುವುದಿಲ್ಲವೇ ?

ಒಂದು ಸಿನಿಮಾ ಬರಿಯ ಕಥೆಯಿಂದಲೇ ರೂಪುಗೊಳ್ಳುತ್ತದೆಯೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರ ಸಿಗಬಲ್ಲದು. ಉಳಿದದ್ದು ಏನು ಎಂದು ಕೇಳಿದರೆ ಸಣ್ಣಪುಟ್ಟ ಉತ್ತರದಂತೆ ಛಾಯಾಗ್ರಹಣ, ಸ್ಕ್ರಿಪ್ಟ್, ಸಂಭಾಷಣೆ, ಎಡಿಟಿಂಗ್…ಹೀಗೆ ಇತ್ಯಾದಿಗಳನ್ನು ಹುಡುಕಲು ಶುರು ಮಾಡುತ್ತೇವೆ. ನಿಜವಾಗಲೂ ಹೇಳುವುದಾದರೆ ಸಿನಿಮಾ ನಿರ್ದೇಶಕನ ನಿರ್ದೇಶಿತ ಮಾಧ್ಯಮ ಎನಿಸಿದರೂ ಅದು ಸಾಮೂಹಿಕ ಪ್ರಕ್ರಿಯೆ. ಒಂದು ಸಾಲು ಸಾಲಾಗಿ ನಡೆಯುವ ಸರಣಿ ಕ್ರಿಯೆ. ಸರಣಿಯಲ್ಲಿ ಎಲ್ಲೇ ತಪ್ಪಿದರೂ ಅದರ ಊನ ಮುಚ್ಚಿ ಹಾಕಲಾರದು.

Untitled-1 copy

ಹಾಗಾದರೆ ನಾವು ಸಿನಿಮಾದಲ್ಲಿ ಗಮನಿಸಬೇಕಾದದ್ದು ಏನು ? ಕಥೆಯಲ್ಲವೇ ? ಕಥೆ ಅಲ್ಲದಿದ್ದರೆ ಏನನ್ನು ? ಸಿನಿಮಾ ನಿರ್ಮಾಣ ಎಂದರೆ ದುಡ್ಡು ಸುರಿದು ಸುಮ್ಮನಿರುವುದೇ ? ಸಿನಿಮಾ ಮೇಕಿಂಗ್ ಬಗ್ಗೆ ನಮ್ಮ ಆಸಕ್ತಿ ಏಕೆ ಬೆಳೆಯುತ್ತಿಲ್ಲ. ಒಂದು ಒಳ್ಳೆಯ ಚಿತ್ರದ ನಿರ್ಮಾಣದ ಹಿಂದಿನ ಘಟನೆಗಳನ್ನು ಅರ್ಥೈಸಿಕೊಳ್ಳುತ್ತಾ ಸಿನಿಮಾ ರೂಪುಗೊಳ್ಳುವ ಬಗೆಯನ್ನು ತಿಳಿಯಲು ಕುತೂಹಲವೇಕಿಲ್ಲ ?

ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಮ್ಮದು. ಯಾರು ಬೇಕಾದರೂ ಬರೆಯಬಹುದು. ಕೆಲವು ತಜ್ಞರ ಅಭಿಪ್ರಾಯಗಳೂ ಈ ಸರಣಿಯಲ್ಲಿ ಪ್ರಕಟವಾಗಲಿವೆ. “ಸಿನಿಮಾ ಎಂದರೆ ಏನು ?” ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು saangatya@gmail.com OR saangatyaciniblog@gmail.com ಗೆ ಕಳಿಸಬಹುದು.