ಬೇಳೂರು ಕಾಲಂನಲ್ಲಿ ಈ ಬಾರಿ ಪ್ರಕಟವಾಗಿರುವುದು ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಕುರಿತಾದ ಲೇಖನ. ಆಂಥೋನಿ ಹಾಪ್ ಕಿನ್ಸ್ ನ ರೌದ್ರಾವತಾರದ ಬಗ್ಗೆ ಬರೆದಿದ್ದಾರೆ.

1991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ ನಂತರ ಆ ಸಿನೆಮಾ ಬೆಂಗಳೂರಿಗೆ ಬರುತ್ತಿತ್ತು. ಈಗ ಹಾಲಿವುಡ್ ಸಿನೆಮಾಗಳು ಸರಸರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರುತ್ತದೆ. ಸ್ಯಾಟೆಲೈಟ್ ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನದಿಂದ ಇದೆಲ್ಲ ಸಾಧ್ಯವಾಗಿದೆ ಅನ್ನಿ.

ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ನೋಡಿದಾಗ ನಿಜಕ್ಕೂ ಕ್ರೌರ್ಯವನ್ನು ಹೀಗೆಲ್ಲ ತೋರಿಸಬಹುದೆ ಎಂದು ಅಚ್ಚರಿಪಟ್ಟಿದ್ದೆ.

ಹ್ಯಾನಿಬಾಲ್ ಲೆಕ್ಟರ್ ಎಂಬಾತ ಥಾಮಸ್ ಹ್ಯಾರಿಸ್ ಎಂಬ ಕಾದಂಬರಿಕಾರನ ಸೃಷ್ಟಿಯ ಪಾತ್ರ. ಈತ ಪ್ರಖ್ಯಾತ ಮನಶ್ಶಾಸ್ತ್ರಜ್ಞ; ಜೊತೆಗೆ ನರಮಾಂಸವನ್ನೇ ತಿನ್ನುವ ಸೀರಿಯಲ್ ಕಿಲ್ಲರ್. ನೀವು ಅವನ ಹತ್ತಿರ ಹೋದರೆ ಸಾಕು, ಯಾವ ಸೆಂಟ್ ಹಾಕಿದ್ದೀರ, ನಿಮ್ಮ ಅಂಗಿಯ ವಾಸನೆ ಯಾವುದು, ನಿನ್ನೆ ನೀವು ಏನು ತಿಂದಿರಿ, ಯಾವ ಬ್ರಾಂಡ್ ಶೂ ಹಾಕಿದ್ದೀರಿ ಎಂದೆಲ್ಲ ಕ್ಷಣಮಾತ್ರದಲ್ಲಿ ವಿವರಿಸುವ ಸೂಕ್ಷ್ಮಗ್ರಾಹಿ ಗುಣ ಹ್ಯಾನಿಬಾಲ್‌ಗೆ ಇದೆ. ಅವನ ಕಣ್ಣುಗಳನ್ನೇ ನೋಡಿ. ಹೇಗೆ ನಿಮ್ಮ ಎದೆಯನ್ನು ಇರಿಯುತ್ತಾನೆ….. ಆಂಥೋನಿ ಹಾಪ್‌ಕಿನ್ಸ್ ನಿರ್ವಹಿಸಿದ ಹ್ಯಾನಿಬಾಲ್ ಪಾತ್ರ ಈಗ ನಿಜಕ್ಕೂ ಇಂಥ ವ್ಯಕ್ತಿಯೊಬ್ಬ ಇದ್ದನೇನೋ ಅಂತ ಅನ್ನಿಸೋ ಮಟ್ಟದಲ್ಲಿ ಗಟ್ಟಿಯಾಗಿದೆ.

ನೀವು ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ನೋಡುವ ಹೊತ್ತಿಗೆ ಹ್ಯಾನಿಬಾಲ್ ಅದಾಗಲೇ ಸೆರೆಮನೆಯಲ್ಲಿರುತ್ತಾನೆ. ಹತ್ತಾರು ಬಾಗಿಲುಗಳ ಭದ್ರ ಸೆಲ್‌ನಲ್ಲಿ ಕಾಲು ನೀಡಿ ಮಲಗಿರೋ ಹ್ಯಾನಿಬಾಲ್‌ಗೆ ಒಂದು ಪೆನ್ನು ಸಿಕ್ಕಿದರೂ ಸಾಕು, ಅದನ್ನೇ ವಜ್ರಾಯುಧ ಮಾಡಿಕೊಂಡು ಅಪಾರ ಭದ್ರತೆಯ ಕಟ್ಟಡದಿಂದ ತಪ್ಪಿಸಿಕೊಳ್ಳುತ್ತಾನೆ. ತನ್ನ ಪಂಜರದಲ್ಲೇ ಪೊಲೀಸರನ್ನು ನೇತು ಹಾಕಿ ಡ್ಯಾನ್ಸ್ ಮಾಡುತ್ತಾನೆ.

ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾದಲ್ಲಿ ಕಥೆ ಹೀಗಿದೆ: ಬಫೆಲೋ ಬಿಲ್ ಎಂಬ ಇನ್ನೊಬ್ಬ ಸೀರಿಯಲ್ ಕಿಲ್ಲರ್‌ನನ್ನು ಹಿಡಿಯುವ ಯತ್ನದಲ್ಲಿರೋ ಕ್ಲಾರಿಸ್ ಸ್ಟಾರ್ಲಿಂಗ್ ಎಂಬ ಎಫ್ ಬಿ ಐ ಅಧಿಕಾರಿ (ಜೂಡೀ ಫೋಸ್ಟರ್) ಈ ಸೈಕೋಪಾಥ್‌ನನ್ನು ಹಿಡಿಯಲು ಹ್ಯಾನಿಬಾಲ್‌ನ ನೆರವು ಕೇಳುತ್ತಾಳೆ. ಹ್ಯಾನಿಬಾಲ್‌ಗೆ ಬಫೆಲೋ ಬಿಲ್‌ನ ಕಡತ ಕೊಡುತ್ತಾಳೆ. ಆದರೆ ಹ್ಯಾನಿಬಾಲ್ ಷರತ್ತು ಹಾಕುತ್ತಾನೆ: ನಿನ್ನ ಬಾಲ್ಯದ ಕಹಿ ಅನುಭವದ ವೈಯಕ್ತಿಕ ವಿವರ ಕೊಡು, ನಿನಗೆ ಬಫೆಲೋ ಬಿಲ್ ಬಗ್ಗೆ ಹೇಳ್ತೀನಿ. ಹೀಗೆ ಕ್ಲಾರಿಸ್‌ಳನ್ನು ಮಾತಿಗೆ ಎಳೆದು ತನ್ನನ್ನು ಸೆನೆಟರ್ ವಿಚಾರಣಾ ಕಟ್ಟಡಕ್ಕೆ ಕರೆದೊಯ್ಯುವ ಹಾಗೆ ಸನ್ನಿವೇಶ ಸೃಷ್ಟಿಸುವ ಹ್ಯಾನಿಬಾಲ್, ಅಲ್ಲಿಂದ ತಪ್ಪಿಸಿಕೊಳ್ಳುವುದು, ಕೊನೆಗೆ ಕ್ಲಾರಿಸ್ ಕೂಡಾ ಬಫೆಲೋ ಬಿಲ್‌ನನ್ನು ಪತ್ತೆ ಹಚ್ಚುವುದು ಎಲ್ಲವೂ ಥ್ರಿಲ್ಲರ್ ಸಿನೆಮಾದ ಖಡಕ್ ಸನ್ನಿವೇಶಗಳೇ.beluru copy 1

ಇಡೀ ಚಿತ್ರದಲ್ಲಿ ನಿಮ್ಮನ್ನು ಥರಥರಗುಟ್ಟಿಸೋ ಈ ಹ್ಯಾನಿಬಾಲ್ ಲೆಕ್ಟರ್ ಪರದೆಯ ಮೇಲೆ ಕಾಣಿಸೋದೇ ಕೇವಲ ಹದಿನಾರೂವರೆ ನಿಮಿಷ. ಆದರೆ ಈ ಪಾತ್ರಕ್ಕೆ ಆಂಥೋನಿ ಹಾಪ್‌ಕಿನ್ಸ್ ಪ್ರಮುಖ ನಟನೆಂಬ ಆಸ್ಕರ್ ಪ್ರಶಸ್ತಿ ಪಡೆಯುತ್ತಾನೆ ಎಂದರೆ ಯೋಚಿಸಿ! ಈ ಪಾತ್ರ ಆಸ್ಕರ್ ತೀರ್ಪುಗಾರರನ್ನು ಎಷ್ಟು ನಡುಗಿಸಿರಬಹುದು! ಆಸ್ಕರ್ ಇತಿಹಾಸದಲ್ಲೇ ಇಷ್ಟು ಕಡಿಮೆ ಕಾಲಾವಧಿಯ ಪಾತ್ರ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಬೇರೆ ಉದಾಹರಣೆ ಸದ್ಯಕ್ಕಂತೂ ಇಲ್ಲ.

ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ಗೆ ಸಿಖ್ವೆಲ್ ಆಗಿ ಬಂದ ಇನ್ನೊಂದು ಥ್ರಿಲ್ಲರ್: ಹ್ಯಾನಿಬಾಲ್ (2001). ಇದು ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಘಟನೆಗಳ ಏಳು ವರ್ಷದ ತರುವಾಯ ನಡೆಯುವ ಕಥೆ. ಇಲ್ಲಿ ಲೆಕ್ಟರ್‌ನಿಂದ ತಪ್ಪಿಸಿಕೊಂಡ ಒಬ್ಬ ಮುಖಹೀನ ಶ್ರೀಮಂತ ಮೇಸನ್ ವರ್ಜರ್, ಉಪಾಯವಾಗಿ ಲೆಕ್ಟರ್‌ನನ್ನು ಹಿಡಿದು ಹಂದಿಗಳಿಗೆ ಆಹಾರ ಮಾಡಲು ಹೊರಡುತ್ತಾನೆ. ಆದರೆ ಆಗ ಪೋಲಿಸ್ ಅಧಿಕಾರಿ ಸ್ಟಾರ್ಲಿಂಗ್ ಹ್ಯಾನಿಬಾಲ್‌ನನ್ನು ಬಚಾವ್ ಮಾಡುತ್ತಾಳೆ. ಎಲ್ಲರಿಗೂ ಕಾನೂನು ಪ್ರಕಾರವೇ ಶಿಕ್ಷೆಯಾಗಬೇಕು ಅನ್ನೋದೇ ಅವಳ ಈ ನಡೆಯ ಉದ್ದೇಶ. ಇಲ್ಲಿ ಗಾಯಗೊಂಡ ಸ್ಟಾರ್ಲಿಂಗ್‌ಳನ್ನು ತನ್ನ ಮನೆಗೆ ಕರೆದುಕೊಂಡು ಬಂದ ಹ್ಯಾನಿಬಾಲ್ ಔಷಧ ಮತ್ತು ಹಿಪ್ನಾಸಿಸ್ ಮೂಲಕ ಸ್ಟಾರ್ಲಿಂಗ್‌ಳನ್ನು ತನ್ನ ಸತ್ತುಹೋದ ತಂಗಿಯ ರೂಪದಲ್ಲಿ ಕಾಣಬಯಸುತ್ತಾನೆ. ಅಲ್ಲೇ ಹ್ಯಾನಿಬಾಲ್ ಇನ್ನೊಬ್ಬ ಪೊಲೀಸ್ ಅಧಿಕಾರಿಯನ್ನೂ ಹಿಡಿದು ತಂದಿರುತ್ತಾನೆ. ಈ ಅಧಿಕಾರಿಯನ್ನು ಜೀವಂತವಾಗಿ ಡೈನಿಂಗ್ ಟೇಬಲ್ ಪಕ್ಕ ಕೂರಿಸಿ, ಅವನ ಮೆದುಳಿನ ಚೂರನ್ನೇ ಕತ್ತರಿಸಿ ಮಸಾಲೆ ಹಾಕಿ ಹುಡಿದು ತಿನ್ನಲು ಕೊಡುವ ದೃಶ್ಯವನ್ನು ನೋಡಿ ನೂರಾರು ಜನ ಥಿಯೇಟರಿನಲ್ಲೇ ವಾಂತಿ ಮಾಡಿಕೊಂಡ ಸುದ್ದಿಯನ್ನು ನಾನು ಕೇಳಿ ತಿಳಿದಿದ್ದೇನೆ!

ಆದರೆ ಅಷ್ಟುಹೊತ್ತಿಗೆ ಸ್ಟಾರ್ಲಿಂಗ್ ಪೋಲೀಸರಿಗೆ ಮಾಹಿತಿ ಕೊಟ್ಟಿರುತ್ತಾಳೆ. ಜೊತೆಗೇ ತನ್ನ ಕೈ ಕೋಳವನ್ನು ಹ್ಯಾನಿಬಾಲ್‌ಗೂ ಹಾಕಿಬಿಡುತ್ತಾಳೆ. ಅವಳನ್ನು ಕೊಲ್ಲಬಯಸದ ಹ್ಯಾನಿಬಾಲ್ ಇನ್ನೇನು ಮಾಡಬಲ್ಲ? ಮಚ್ಚಿನಿಂದ ತನ್ನ ಕೈಯನ್ನೇ ಕತ್ತರಿಸಿಕೊಂಡು ಪರಾರಿಯಾಗುತ್ತಾನೆ.

ಈ ಎರಡೂ ಸಿನೆಮಾಗಳಿಗೆ ಪ್ರಿಕ್ವೆಲ್ ಆಗಿ ಬಂದ ಇನ್ನೊಂದು ಥ್ರಿಲ್ಲರ್ ರೆಡ್ ಡ್ರಾಗನ್ (2002). ಇಲ್ಲಿ ಹ್ಯಾನಿಬಾಲ್ ಎಂಥ ಜನಪ್ರಿಯ ನಾಗರಿಕನಾಗಿದ್ದೂ ಮನುಷ್ಯರನ್ನು ಕೊಂದು ತಿನ್ನುತ್ತಿದ್ದ, ಹೇಗೆ ವಿಲ್ ಗ್ರಹಾಂ (ದಿ ಸ್ಕೋರ್ ಎಂಬ ಹೊಸ ಹಾಲಿವುಡ್ ಸಿನೆಮಾದ ಖಳನಾಯಕ ಪಾತ್ರ ವಹಿಸಿದ ಎಡ್ವರ್ಡ್ ನಾರ್ಟನ್) ಎಂಬ ಅಧಿಕಾರಿಗೆ ಸಿಕ್ಕಿಬಿದ್ದ, ಇನ್ನೊಬ್ಬ ಸೀರಿಯಲ್ ಕಿಲ್ಲರ್ ಟೂತ್ ಫೇರಿ ಎಂಬಾತನನ್ನು ಹಿಡಿಯಲು ಗ್ರಹಾಂ ಹೇಗೆ ಹ್ಯಾನಿಬಾಲ್ ನೆರವು ಕೋರಿದ…… ಇದೆಲ್ಲ ಸಿನೆಮಾದ ಆರಂಭದ ಕಥೆ. ಈ ಸೀರಿಯಲ್ ಕಿಲ್ಲರ್‌ನ ವರ್ತನೆಗಳು, ಗ್ರಹಾಂನ ವಿಳಾಸವನ್ನು ತನ್ನ ಅತಿ ಜಾಣತನದಿಂದ ಪಡೆದು ಟೂತ್‌ಫೇರಿಗೆ ರವಾನಿಸುವ ಹ್ಯಾನಿಬಾಲ್‌ನ ಚಾಕಚಕ್ಯತೆ, – ಎಲ್ಲವೂ ನಿಮ್ಮನ್ನು ಖುರ್ಚಿಯ ತುದಿಗೆ ತರುತ್ತವೆ.hannibal by Anthony Hopkins

ಹಾಗಾದರೆ ಹ್ಯಾನಿಬಾಲ್ ಯಾಕೆ ಇಷ್ಟು ಕ್ರೌರ್ಯ ತೋರಿಸುತ್ತಾನೆ? ಕಾರಣವೂ ಇದೆ. ಹ್ಯಾನಿಬಾಲ್ ಕೇವಲ 11 ವರ್ಷದವನಿದ್ದಾಗ, 1944ರಲ್ಲಿ, ಅವನ ತಂಗಿ ಮಿಶಾಳನ್ನು ಮಾಜಿ ನಾಝಿಗಳ ಒಂದು ತಂಡವು ಅಮಾನುಷವಾಗಿ ಕೊಂದು ತಿಂದಿರುತ್ತದೆ. ತನ್ನ ಕಣ್ಣೆದುರೇ ನಡೆದ ಈ ಘಟನೆಯಿಂದ ಹ್ಯಾನಿಬಾಲ್‌ನಲ್ಲಿ ಕರುಣೆ, ಪ್ರೀತಿಯ ರಸವೆಲ್ಲ ಇಂಗಿಹೋಗುತ್ತದೆ. ಅವನ ಈ ಭೀಕರ ಭೂತ (ವಯಲೆಂಟ್ ಪಾಸ್ಟ್)ವನ್ನು ವಿವರಿಸೋ ಇನ್ನೊಂದು ಸಿನೆಮಾ ಹ್ಯಾನಿಬಾಲ್ ರೈಸಿಂಗ್ ಕೂಡಾ 2006 ರಲ್ಲಿ ಬಂತು. ಈ ಸಿನೆಮಾದಲ್ಲಿ ಹ್ಯಾನಿಬಾಲ್‌ನ ಬಾಲ್ಯ, ಶಿಕ್ಷಣ ಎಲ್ಲವೂ ಚಿತ್ರೀಕರಣವಾಗಿದೆ.

ಮೂಲತಃ ಹ್ಯಾನಿಬಾಲ್ ಲೆಕ್ಟರ್ ಪಾತ್ರವನ್ನು ರಚಿಸಿದ ಕಾದಂಬರಿಕಾರ ಥಾಮಸ್ ಹ್ಯಾರಿಸ್ ಈಗಲೂ ತನಗೆ ಈ ಪಾತ್ರದ ಬಗ್ಗೆ ಸ್ಫೂರ್ತಿ ಬಂದಿದ್ದು ಎಲ್ಲಿಂದ ಎಂದು ಹೇಳಿಲ್ಲ. ಈ ಬಗ್ಗೆಯೇ ಚರ್ಚೆ ಮಾಡಿದ ಹಲವು ಲೇಖನಗಳು, ಪುಸ್ತಕಗಳು ಬಂದಿವೆ.

ಇಂಥ ರೌದ್ರ ಪಾತ್ರಗಳನ್ನು ತನ್ನ ಹಲವು ಕಾದಂಬರಿಗಳಲ್ಲಿ ಬಳಸಿದ ಜನಪ್ರಿಯ ಲೇಖಕ ಸ್ಟೀಫನ್ ಕಿಂಗ್ ಸ್ವತಃ ಹ್ಯಾನಿಬಾಲ್ ಲೆಕ್ಟರ್ ಪಾತ್ರವು ದಿ ಎಕ್ಸಾರ್ಸಿಸ್ಟ್ ಥರ ಅತ್ಯಂತ ಭೀಕರವಾದ ಪಾತ್ರ ನಿರೂಪಣೆ ಎಂದು ಘೋಷಿಸಿದ್ದಾನೆ.

ನಿಜ, ಈ ನಾಲ್ಕೂ ಸಿನೆಮಾಗಳಲ್ಲಿ ಕ್ರೌರ್ಯ ತುಂಬಿ ತುಳುಕಿದೆ. ರಕ್ತ ಚೆಲ್ಲಾಡಿದೆ. ನಿಮ್ಮನ್ನು ಮಾನಸಿಕವಾಗಿ ಅಸ್ವಸ್ಥಗೊಳಿಸುವ ಹಲವು ಸನ್ನಿವೇಶಗಳಿವೆ. ಹ್ಯಾನಿಬಾಲ್ ಒಮ್ಮೆ ನಿಮ್ಮನ್ನು ನೋಡಿ ತಮಾಶೆಗೂ ಹೂಂಕರಿಸಿದರೂ ನೀವು ಅಲ್ಲಾಡಿಹೋಗುತ್ತೀರಿ. ಖಳನಾಯಕನೇ ವಿಜೃಂಭಿಸುವ ಇಂಥ ಸಿನೆಮಾ ನೋಡಬೇಕೆ ಎಂದು ನಿಮಗೆ ಅನ್ನಿಸಲೂ ಬಹುದು.

ನನ್ನ ಮಟ್ಟಿಗೆ ಹ್ಯಾನಿಬಾಲ್ ನಂಥ ಅನೇಕ ನೈಜ ಪಾತ್ರಗಳು ನಮ್ಮ ನಡುವೆಯೇ ಇವೆ. ನೊಯಿಡಾದ ಮಕ್ಕಳ ನರಮೇಧವೇ ಇದಕ್ಕೆ ಚಿಕ್ಕ ಉದಾಹರಣೆ. ಇಂಥ ಘಟನೆಗಳು ವಿದೇಶದಲ್ಲೂ ಸಾಕಷ್ಟು ನಡೆದಿವೆ. ಈ ಸಿನೆಮಾದಲ್ಲಿ ಇವೆಲ್ಲ ಘಟನೆಗಳನ್ನು ಒಗ್ಗೂಡಿಸಿದ ಹಲವು ದೃಶ್ಯಗಳಿವೆ. ಆದ್ದರಿಂದ ಕ್ರೌರ್ಯದ ಜಗತ್ತನ್ನು ಒಮ್ಮೆ ಗಾಢವಾಗಿ ಅನುಭವಿಸಲು, ಇಂಥ ವ್ಯಕ್ತಿತ್ವಗಳೂ ಇರಬಹುದೇ ಎಂದು ತೀವ್ರವಾಗಿ ಅನ್ನಿಸಲು ಈ ನಾಲ್ಕೂ ಸಿನೆಮಾಗಳನ್ನು ನಿಧಾನವಾಗಿ ನೋಡಿ. ಮೊದಲು ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್, ಆಮೇಲೆ ಹ್ಯಾನಿಬಾಲ್, ಆಮೇಲೆ ರೆಡ್ ಡ್ರಾಗನ್. ಆಮೇಲೆ ಹ್ಯಾನಿಬಾಲ್ ರೈಸಿಂಗ್ – ಹೀಗೆಯೇ ನೋಡಿ. ನನಗಂತೂ ಈಗ ಆಂಥೋನಿ ಹಾಪ್‌ಕಿನ್ಸ್ ಹೆಸರೇ ಮರೆತುಹೋಗುವಷ್ಟ ಹ್ಯಾನಿಬಾಲ್ ಪ್ರಭಾವ ಬೀರಿದೆ.

ಅಂದಹಾಗೆ, ಇದೇ ಆಂಥೋನಿ ಹಾಪ್‌ಕಿನ್ಸ್ ೧೯೬೦ರಲ್ಲಿ ಸೈಕೋ ಅನ್ನೋ ಸೈಕೋಪಾಥ್ ಸಿನೆಮಾದಲ್ಲೂ ಮುಖ್ಯ ಪಾತ್ರ ವಹಿಸಿದ್ದ ಅನ್ನೋದು ಗೊತ್ತಲ್ವ? ಅದೂ ಆಗಿನ ಕಾಲದಲ್ಲಿ ಎದೆ ನಡುಗಿಸಿದ ಚಿತ್ರವಾಗಿತ್ತು. ಅದರ ಸಿಕ್ವೆಲ್‌ಗಳೂ ಬಂದಿವೆ.

Advertisements