ಎದ್ದೇಳು ಮಂಜುನಾಥ ಚಿತ್ರ ಕುರಿತ ಸಂವಾದಕ್ಕೆ ಸುಧನ್ವಾ ದೇರಾಜೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಚರ್ಚೆಯನ್ನು ಮುಂದುವರಿಸಿದ್ದಾರೆ. ಹಾಗೆಯೇ ಚೇತನಾರ ಪ್ರತಿಕ್ರಿಯೆಗೆ ಬೇಡಬಿಡಿ ಮರು ಪ್ರತಿಕ್ರಿಯೆ ನೀಡಿದ್ದಾರೆ. ಚರ್ಚೆಯನ್ನು ಮುಂದುವರಿಸಲಿಚ್ಛಿಸುವವರು ಅಭಿಪ್ರಾಯವನ್ನು ಕಳಿಸಿಕೊಡಿ.

“ಬೇಡ ಬಿಡಿ’ ಹೇಳಿದ್ದು ಬಹುಪಾಲು ಸರಿಯಾಗಿದೆ. ಚೇತನಾ ಅವರು ಸುಮಾರು ಎರಡು ವರ್ಷಗಳ ನಂತರ ಕನ್ನಡ ಸಿನಿಮಾ ನೋಡುತ್ತಿರುವುದು, ಕ್ಷಮಿಸಲಾಗದ ಮೊದಲ ತಪ್ಪು ! ಬಹುಶಃ ಅದೇ “ತಪ್ಪು ಗ್ರಹಿಕೆ’ಗೆ ಕಾರಣವಾಗಿರಬೇಕು.

ಕನ್ನಡದ ಮಟ್ಟಿಗೆ ಇದೊಂದು ಉತ್ತಮ ಸಿನಿಮಾ. ಚಿತ್ರಕಲೆ ಅಂದರೆ ಕೇವಲ ಬಣ್ಣ ಮಾತ್ರ ಎನ್ನುವುದೂ ಅಳಿಸಿಹೋಗಿರುವಾಗ, ಸಿನಿಮಾ ಎಂದರೆ ವಿಷುವಲ್ ಮಾತ್ರ ಅಂತ ನಾವೇಕೆ ಅಂದುಕೊಳ್ಳಬೇಕು? ಮಾತನ್ನು ಕೇವಲ ಆಲಿಸುವುದಕ್ಕೂ, ಮಾತಾಡುವವರು ಎದುರೇ ಇರುವುದಕ್ಕೂ ವ್ಯತ್ಯಾಸವಿದೆ. ಮಾತಾಡುವವರನ್ನು ನೋಡುತ್ತಾ ಕೇಳಿದಾಗ ಅದರ ಅನುಭವವೇ ಬೇರೆ.

ಸಿನಿಮಾದಲ್ಲಿ ಬಹುಪಾಲು ಹೊಸ ಜೋಕುಗಳೇ ಇವೆ. ರಾಜಕಾರಣಿಗಳನ್ನು ಛೇಡಿಸಬೇಡಿ ಅಂತ ಯಾರಾದರೂ ಅಂದಾರೇ? ಕೇವಲ ತಾರ್ಕಿಕವಾಗಿ ಯೋಚಿಸುತ್ತ ಹೋದರೆ ಯಾವ ಕಲೆಯೂ ನಮಗೆ ದಕ್ಕಲಾರದು. ಗಾಳಿ ಉದಿದಾಗ ಜೊಳ್ಳು ಹಾರುವುದನ್ನೂ ನೋಡಿ ಖುಶಿಪಡುವ ಗುಣ ಬೇಕು. ಒಂದೇಒಂದು ವ್ಯಕ್ತಿತ್ವದ ಬೇರೆ ಬೇರೆ ವರ್ತನೆಗಳನ್ನು ತೋರಿಸುವ ಸಿನಿಮಾ ಅಷ್ಟೇ ಇದು. ಮಂಜನಿಗೆ ಮಂಜನೇ ವಿಲನ್ನು, ಅವನಿಗೆ ಅವನೇ ಹೀರೋಯಿನ್ನು ! ಕಾಮಿಡಿ ಕಾಮಿಡಿ ಅಂತ ರಮೇಶ ಅರವಿಂದ ಬಡಕೊಂಡರೂ, ಅವರ ಸತ್ಯವಾನ್ ಸಾವಿತ್ರಿ, ವೆಂಕಟ ಇನ್ ಸಂಕಟದಲ್ಲಿ ಬಾರದ ನಗುವೆಲ್ಲಾ ಇಲ್ಲಿ ಧಾರಾಳವಾಗಿ ಬಂತು. ಸಿನಿಮಾ ಪೂರ್ತಿ ಹಾರ್ಮೋನಿಯಂ ಬಳಸಿರುವುದೂ ಒಂದು ಹೊಸ ಖುಶಿಯ ದನಿ.

ಕೊನೆಯ ಹತ್ತು ನಿಮಿಷಗಳ ಕ್ಲೈಮಾಕ್ಸ್, ಮೊದಲಿನ ಸಿನಿಮಾದ ಧಾಟಿಗೆ ಹೊಂದಿಕೆಯಾಗುವುದಿಲ್ಲ, ಅಷ್ಟೊಂದು ಚೆನ್ನಾಗಿಲ್ಲ ನಿಜ. ಆದರೆ “ಗಂಡ ದಾರಿಗೆ ಬರಬೇಕಾದ್ರೆ ಹೆಂಡ್ತಿ ಗರ್ಭಪಾತ ಮಾಡಿಸಿಕೊಳ್ಳಬೇಕು’ ಅನ್ನುವಂತೆ ಎಲ್ಲೂ ಚಿತ್ರಿಸಿಲ್ಲ. ತನಗೊಂದು ಮಗು ಬರುತ್ತಿದೆ ಅಂತ ತಿಳಿದಾಗಲೇ ಮಂಜನ ಮನಸ್ಸು ಬದಲಾಗುತ್ತದೆ. ಹಾಗಂತ ಅದು ಬದಲಾಗಿ ಎಲ್ಲ ಸರಿಯಾಗುತ್ತದೆ ಅಂತ ಯಾರು ಹೇಳಿದರು? ನನಗೇನೂ ಗ್ಯಾರಂಟಿಯಿಲ್ಲ ! ಅಂದರೆ, ಬೇಜಾವಾಬ್ದಾರಿ- ಸೋಮಾರಿ- ಕುಡುಕ ಗಂಡನೂ ಬದಲಾಗಲೂಬಹುದು ಎನ್ನುವುದಷ್ಟೇ ನಿರ್ದೇಶಕರ ಉದ್ದೇಶ. ಇನ್ನು, ಬ್ರಾಂದಿ ಕುಡಿದ ಮಗು ಹಾಕುವ ಹೆಜ್ಜೆಗಳಂತೂ ನನಗೆ ತುಂಬಾ ಖುಶಿ ಕೊಟ್ಟಿತು. ದೊಡ್ಡವರು ಕುಡಿದಾಗ ಮಗುವಿನ ಥರ ಆಗಿ ಗೊತ್ತಿದ್ದನ್ನೆಲ್ಲ ಹೇಳಿಬಿಡ್ತಾರಲ್ಲ, ಹಾಗೆ ಮಗು ಕುಡಿದಾಗ ದೊಡ್ಡವರ ಥರ ಆಡುತ್ತದೆಯೆ ಅಂತೆಲ್ಲ ಅನಿಸಿತು ! ಚಿಕ್ಕವನಿದ್ದಾಗ ಬ್ರಾಂದಿ ಕುಡಿದದ್ದರಿಂದ ಹೀಗಾದೆ ಅಂತ ಹೇಳುವುದು ನಿರ್ದೇಶಕರಲ್ಲ, ಕಳ್ ಮಂಜ ಅನ್ನುವುದನ್ನು ನಾವು ಗಮನಿಸಬೇಕು ! ಇನ್ನು ಆಹ್ಲಾದಗೊಳಿಸುವ ಹೊಸತನವಂತೂ ಸಿನಿಮಾದುದ್ದಕ್ಕೂ ಇವೆ. ಉದಾಹರಣೆಗೆ ಕುರುಡ ನಿರ್ದೇಶಕ ಮತ್ತೊಬ್ಬನಿಗೆ ನೋಟು ಕೊಡುವಾಗ ಬರುವ “ಭಾಗ್ಯದ ಲಕ್ಷ್ಮಿ ಬಾರಮ್ಮಾ’ ಹಾಡು ಮತ್ತು ಅದನ್ನು ಮಂಜ ಜಗ್ಗೇಶ್ ಕಣ್ಣರಳಿಸಿ ನೋಡುವ ರೀತಿ, ಇತ್ಯಾದಿ ಸುಪರ್.

ಹಾಡುಗಳು ಚೆನ್ನಾಗಿವೆ. ಜಗ್ಗೇಶ್ ಅದ್ಭುತವಾಗಿ ಅಲ್ಲದಿದ್ದರೂ ಚೆನ್ನಾಗಿಯೇ ನಟಿಸಿದ್ದಾರೆ. ಯಜ್ಞಾ ಶೆಟ್ಟಿ ಇನ್ನೂ ಚೆನ್ನಾಗಿ ಅಭಿನಯಿಸಬಹುದಿತ್ತು. ಒಂದು ಒಳ್ಳೆಯ ಪಾಕಕ್ಕಾಗಿ ಥ್ಯಾಂಕ್ಸ್ ಟು ಗುರುಪ್ರಸಾದ್.
******
ನನಗೆ ರಿಡಿಫ್.ಕಾಂ ನಲ್ಲಿ ಪ್ರತಿಕ್ರಿಯಿಸಿ ಅಭ್ಯಾಸ. ಅಲ್ಲಿನ ಕಾಮೆಂಟ್ಸ್ ಗಳನ್ನು ಒಮ್ಮೆ ನೋಡಿದರೆ, ಪ್ರತಿಕ್ರಿಯೆಗಳ ಸರಾಸರಿ ಒರಟುತನ ತಿಳಿಯುತ್ತದೆ. ಹಾಗಾಗಿ ನನ್ನ ಪ್ರತಿಕ್ರಿಯೆ ಒರಟಾಗಿತ್ತು. ಮನ್ನಿಸಿರೆನ್ನ.

“ದಿ ಪ್ರೆಸಿಡೆಂಟ್ ಇಸ್ ಕಮಿಂಗ್” ಇದು ಸ್ಪೂಫ್/ಪ್ಯಾರೋಡಿ ಜಾನರ್ ಅಲ್ಲ. ಅದು ಸಟಯ್ರ್. ಸಟಯ್ರ್ ನಲ್ಲಿ ಅಸಂಬಧ್ದತೆಗಳು ಇರುವುದಿಲ್ಲ. ಯಾವುದಾದರೊಂದು ಇಶ್ಯೂ ಇಟ್ಟುಕೊಂಡು ವಿಡಂಬನೆ ಮಾಡಲಾಗುತ್ತದೆ (ಉದಾ: ಮಠ ).ಆದರೆ “ಎದ್ದೇಳು” ನಲ್ಲಿ ಇರುವುದು ವಿಡಂಬನೆಯಲ್ಲ , ಕೇವಲ ಕೀಟಲೆ, ಕೆಣಕು, ಲೇವಡಿ, ಕಿಚಾಯಿಸುವುಕೆ ಗಳು. ನನಗೆ ಗೊತ್ತಿರುವ ಮಟ್ಟಿಗೆ ಎಂ ಟಿ ವಿ ಯವರು “ಧೂಮ್” ಚಿತ್ರವನ್ನ ಕೀಟಲೆ ಮಾಡುವುದಕ್ಕೋಸ್ಕರ “ಘೂಂ” ಎಂಬ ಸ್ಪೂಫ್ ಚಿತ್ರ ಮಾಡಿದ್ದರು. ಇದು ಬಿಟ್ಟರೆ ನನಗಿನ್ನಾವುದು ಗೊತ್ತಿಲ್ಲ. ಬೀಚಿ ರವರು ತಮ್ಮ ಆತ್ಮಚರಿತ್ರೆಯಾದ “ನನ್ನ ಭಯಾಗ್ರಫಿ” ಯಲ್ಲಿ ಜಿ.ಪಿ ಅವರು ಯಾರೋ ಅರೇಬಿಕ್ ಕವಿಯೊಬ್ಬನ ಶೈಲಿಯನ್ನ ನಕಲಿಸಿದ್ದಾರೆ ಎಂದು ದೂಶಿಸಿದ್ದರು. ಆಗ ಜಿ.ಪಿ ಯವರು ಅದಕ್ಕೆ ಉತ್ತರವನ್ನ ತಮ್ಮ ಆತ್ಮಚರಿತ್ರೆಯಾದ “ನಿರ್ಭಯಾಗ್ರಫಿ” ಯಲ್ಲಿ ನೀಡಿದ್ದರು. ತಮ್ಮ ಅತ್ಮಚರಿತ್ರೆಗೆ ಹೆಸರಿಡಲು ಜಿ.ಪಿ ಯವರು ಉಪಯೋಗಿಸಿರುವ ತಂತ್ರವೇ ಸ್ಪೂಫ್. ವಿಡಂಬನಾತ್ಮಕ ಚಿತ್ರಗಳಿಂದ ಸಮಾಜಕ್ಕೆ ಒಂದಿಷ್ಟು ಒಳಿತಾದರು ಆಗಬಹುದೇನೋ, ಆದರೆ ಸ್ಪೂಫ್ ಚಿತ್ರಗಳು ಬರೇ ನಗಿಸುವುದು, ದುಡ್ಡು ಮಾಡಿಕೊಳ್ಳುವುದು ಅಷ್ಟೇ. ಸ್ಪೂಫ್ ಚಿತ್ರಗಳು ಮಾಡುವ ಹಾಸ್ಯಕ್ಕೆ “ಬ್ಲೂ ಹ್ಯೂಮರ್” ಎಂದು ಕರೆಯುತ್ತಾರೆ.

ತಂದೆ ಸತ್ತಿರುವ ದೃಶ್ಯವನ್ನ ನೀವು ತರ್ಕದ ತಕ್ಕಡಿಯಲ್ಲಿ ತೂಗುಹಾಕಿಬಿಟ್ಟಿರುವಿರಿ. ಇದೆ ರೀತಿ ಆಲೋಚಿಸಿದಾಗ ನನಗೆ ಇನ್ನೊಂದು ದೃಶ್ಯವು ಹೊಳೆಯಿತು. ಜಗ್ಗೇಶ್ ರ ಪಾತ್ರ ಮಗು ಆಗಿದ್ದಾಗ “ಇಂತಿ ನಿನ್ನ ಪ್ರೀತಿಯ” ಹಾಗು “ಶ್ರೀ ನಗರದ ಕಿಟ್ಟಿ”, ಇವೆರಡರಲ್ಲಾವುದೂ ಭೂಮಿಗೆ ಬಂದಿರಲಿಲ್ಲ. ಕೀಟಲೆ ಮಾಡುವುದಕ್ಕೆ, ಚಟಾಕಿ ಹಾರಿಸುವುದಕ್ಕಂತಲೇ ದೃಶ್ಯಗಳನ್ನ ಹೆಣೆಯಲಾಗುತ್ತದೆ. ಆ ದೃಶ್ಯಗಳು ಜನರನ್ನ ನಗಿಸುತ್ತವೋ,ಇಲ್ಲವೊ ಎಂಬುದರ ಮೇಲೆ ಅವುಗಳ ಸಾರ್ಥಕತೆ ನಿಂತಿರುತ್ತದೆ. ಅನೇಕ “ನಾನ್ ಇಂಟರ್ ಸೆಕ್ಟಿಂಗ್” ಕೀಟಲೆಗಳನ್ನ ಹೂ ಕಟ್ಟುವ ದಾರ ದಷ್ಟೇ ಗಟ್ಟಿಯಾದ ಕಥೆಯೊಂದರಿಂದ ಕಟ್ಟುವ ಸಿನಿಮಾವೇ ಸ್ಪೂಫ್.

ಇಡೀ ಚಿತ್ರದಲ್ಲಿ ಬಿ ಜೆ ಪಿ ಪದ ಬಳಕೆಯಾಗೋದೇ ಎರಡು ಬಾರಿ. “ನಿಮ್ ಯಜಮಾನ್ರು ಕಾಂಗ್ರೆಸ್ಸ, ನಾವು ಬಿ ಜೆ ಪಿ”,” ನಮ್ ಸ್ನೇಹಿತರು ಬಿ ಜೆ ಪಿ ಇಂದ ಎಲೆಕ್ಷನ್ ನಿಂತಿದ್ದಾರೆ , ಅವರು ಗೆದ್ದು ಸರ್ಕಾರ ಫಾರಂ ಮಾಡಿದ್ರೆ ನನಗೆ ಕೆಲಸ ಕೊಡಿಸ್ತಾರೆ”. ಇದು ಯಾವ್ ಯಂಗಲ್ ಇಂದ ಬಿ ಜೆ ಪಿ ಕ್ಯಾನ್ವಾಸ್ ?

ಸಲಿಂಗಕಾಮ ಕೆಟ್ಟದು ಎಂಬುದಕ್ಕೆ ನೀವು ಕೊಟ್ಟಿರುವ ಕಾರಣಗಳು, ಹುಡುಗಿಯರು ಏಕೆ ಡಿಸ್ಕೋ ಪಬ್ ಗಳಿಗೆ ಹೋಗಬಾರದು ಎಂಬುದಕ್ಕೆ ಮುತಾಲಿಕ್, ಯಡಿಯೂರಪ್ಪ ನವರು ಕೊಟ್ಟಿರುವ ಕಾರಣಗಳು, ಎರಡೂ ಒಂದೇ. ನಿಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಚರ್ಚೆ ಬೇಡ ಬಿಡಿ.

ಬ್ರಾಂಡಿ ಕುಡಿಸುವ ಸೀನ್ ವಿಕೃತ ಅಂತ ನಾನೇ ಹೇಳಿದೆನಲ್ಲ. ಅದರಲ್ಲಿ ಖಂಡಿತವಾಗಿಯೂ ಹಾಸ್ಯವಿದೆ. ಆ ದೃಶ್ಯ ದಿಂದ ಆಗಬಹುದಾದ ಏಕೈಕ ಕೆಡುಕು, ಅಜ್ಜಿಯರ ಅಪಮಾನ. ಆದರೆ, ಅದರಿಂದ ಯಾರಿಗೂ ಅಪಮಾನ ಇಲ್ಲ ಅಂತ ನೀವೇ ಹೇಳಿದಿರಿ. ಮತ್ತೆ ಆ ಕಾನ್ಸೆಪ್ಟ್ ಕೆಟ್ಟದು ಹೇಗಾಯಿತು?

ಇನ್ನು ಹಿಂದಿ. ಅದಕ್ಕೆ ಮೊದಲು ಒಂದು ಘೋಷ ವಾಕ್ಯ. ” ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ. ಇದು 47 ರಲ್ಲೂ ಸತ್ಯ. 2009 ರಲ್ಲೂ ಸತ್ಯ “. ಹಿಂದಿ ಹಾಗು ಇಂಗ್ಲಿಷ್, ಇವು ಕೇಂದ್ರ ಆಡಳಿತ ಮಾಡಲು ಉಪಯೋಗಿಸುವ ಭಾಷೆಗಳು. ಇವು ಅಫಿಷಿಯಲ್ ಭಾಷೆಗಳು. ಅದರಲ್ಲೂ ಕೇಂದ್ರವು ದಕ್ಷಿಣದ ರಾಜ್ಯಗಳೊಡನೆ ಸಂವಹಿಸುವಾಗ ಕೇವಲ ಇಂಗ್ಲಿಷ್ ಮಾತ್ರ ಉಪಯೋಗಿಸಬೇಕು. ಇವೆಲ್ಲವೂ ಸಂವಿಧಾನದಲ್ಲಿ ಇದೆ. ಬೇರೆ ಭಾಷೆಗಳ ವಿರುದ್ದ ತಿರುಗಿಬಿಳುವಾಗ ಇರದ ಹಿಂಜರಿಕೆ , ಹಿಂದಿ ಹೇರಿಕೆ ವಿರುದ್ದ ಪ್ರತಿಭಟಿಸುವಾಗ ಉಂಟಾಗೋದು ಏಕೆ ಅಂದರೆ ” ಅಯ್ಯೋ ನಮ್ಮ ರಾಷ್ಟ್ರ ಭಾಷೆಯನ್ನ ವಿರೋಧಿಸಿದರೆ ನಾವು ಭಾರತೀಯರು ಎನಿಸಿಕೊಳ್ಳುತ್ತೆವ?” ಎಂದು ನಮ್ಮ ಮನಸನ್ನು ಚುಚ್ಚುವ ತಪ್ಪು ತಿಳಿವಳಿಕೆ. ಕನ್ನಡಿಗರ ರಾಷ್ಟ್ರಭಾಷೆ ಕನ್ನಡ ಎಂದು ಪ್ರತಿಯೊಬ್ಬ ಕನ್ನಡಿಗನಿಗೆ ಎಂದು ಅರಿವಾಗುವುದೋ ಅಂದಿಗೆ ಉದಯವಾಗುವುದು ನಮ್ಮ ಚೆಲುವ ಕನ್ನಡ ನಾಡು.
ಹೆಚ್ಚಿನ ಓದಿಗಾಗಿ ಕ್ಲಿಕ್ಕಿಸಿ
http://www.hinduonnet.com/thehindu/thscrip/print.pl?file=2004011800040300.htm&date=2004/01/18/&prd=mag&
http://en.wikipedia.org/wiki/Anti-Hindi_agitations_of_Tamil_Nadu