ಸಂವಾದಕ್ಕೆ ತಮ್ಮ ಅಭಿಪ್ರಾಯದ ಮೂಲಕ ಖೋ ಕೊಟ್ಟವರು ಟೀನಾ. ಕನ್ನಡ ಚಲನಚಿತ್ರರಂಗದ ಚರ್ಚಿಸಲಾರದ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಓದಿ ನೋಡಿ.

ಕೆಲದಿನಗಳ ಬಿಡುವಿನ ನಂತರ ಸಾಂಗತ್ಯಕ್ಕೆ ವಾಪಾಸು ಬಂದು ನೋಡಿದೆ. ಈ ಚರ್ಚೆ ಬಹಳ ಸಲ್ಲುವಂತಹದ್ದು ಅನ್ನಿಸ್ತು. ಸುರೇಶರ ವಾದವನ್ನ ಕೆಲಮಟ್ಟಿಗೆ ನಾನು ಒಪ್ಪುತ್ತೇನೆ ಆದರೆ ಕೆಲವಾದ್ರು ಒಳ್ಳೆ ಚಿತ್ರಗಳು ಇದಾವಲ್ಲ ಅನ್ನೋ ಅಲ್ಪತೃಪ್ತಿ ನಮಗೆ ಬಂದುಬಿಟ್ಟರೆ ಹೇಗೆ? ’ಆ ದಿನಗಳು’ ಹಟ್ ಕೇ ಚಲನಚಿತ್ರ ಅನ್ನಿಸಿದ್ರು ಕೆಲವೊಂದು ಪಾಯಿಂಟುಗಳಲ್ಲಿ ಭಾಳ ವೀಕು ಅನ್ನಿಸ್ತದೆ. ಇದರ ಬಗ್ಗೆ ಒಂದು ಬೇರೆಯ ಡಿಸ್ಕಶನನ್ನೆ ನಡೆಸಲೂ ನಾನು ಸಿದ್ಧ. ಅಥೆಂಟಿಸಿಟಿ ಅನ್ನೋದನ್ನ
ಕೊಡುವ ಲೆಕ್ಕದಲ್ಲಿ ಸುಮಾರು ಅದೇ ಕಾಲಘಟ್ಟವನ್ನು (ಅದಕ್ಕು ಹಿಂದಿನ ಅಂತಲೂ ಹೇಳಬಹುದು)ಚಿತ್ರಿಸುವ ’ಸುಬ್ರಹ್ಮಣ್ಯಪುರಂ’ ಅನ್ನ ನೋಡಿದರೆ ಅದರ ಕಾಸ್ಟ್ಯೂಮಿನಲ್ಲೆ ಕಥೆ ನಡಿಯೋ ಕಾಲಘಟ್ಟದ ಬಗ್ಗೆ ನಮಗೆ ತಿಳಿದುಹೋಗತ್ತೆ. ’ಆ ದಿನಗಳು’ನಲ್ಲಿ ಇಂಥದು ನಮಗೆ ಎಲ್ಲಿ ಕಾಣುತ್ತೆ? ನಾಯಕ ಚೇತನ್ ತೊಡುವ ಬ್ರಾಂಡೆಡ್ ಬಟ್ಟೆ, ನಾಯಕಿಯ ಹೇರ್ ಸ್ಟೈಲ್, ಡ್ರಾಮ್ಯಾಟಿಕ್ ಮಾತುಕತೆ – ಎಲ್ಲಿದೆ ಅಥೆಂಟಿಸಿಟಿ? ಚಿತ್ರ ಚೆನ್ನಾಗಿಲ್ಲ ಅಂತ ಹೇಳಲಾಗದೆ ಇದ್ದರೂನು ನಿರ್ದೇಶಕನ
ಮೊದಲನೆ ಚಿತ್ರ ಅನ್ನೋ ಎಲ್ಲಾ ಲಕ್ಷಣಗಳೂ ಕಾಣತ್ವೆ. ‘ಚೆನ್ನೈ-600028’ ಮತ್ತು ’ಪರುತ್ತಿವೀರನ್’ ಕೂಡ ತಮ್ಮ ಕಥೆಯನ್ನ ತೀರ ಗಟ್ಟಿಯಾಗಿ ಎಸ್ಟಾಬ್ಲಿಶ್ ಆದ ಕ್ಯಾರೆಕ್ಟರುಗಳ ಮೂಲಕ ಕಟ್ಟಿಕೊಡುತ್ತ ಪ್ರೇಕ್ಷಕ ಅವನ್ನ ಯಾವತ್ತಿಗು ಮರೆಯದ ಹಾಗೆ ಮಾಡುತ್ತವೆ. ಕೆಲವೇ ದಶಕಗಳ ಹಿಂದೆ ಅಂತಹ ಒಳ್ಳೆ ಹೆಸರಿರದಿದ್ದ ಮಲಯಾಳಂ ಚಿತ್ರರಂಗಕ್ಕೆ ಇವತ್ತಿಗೆ ಅಂತರ್ರಾಷ್ಟ್ರೀಯ ವಲಯದಲ್ಲೂ ಗೌರವ ದಕ್ಕುತ್ತಾ ಇದೆ. ಇಲ್ಲಿ ನನ್ನ ವಾದ ತಮಿಳು, ಮಲಯಾಳಂ ಚಲನಚಿತ್ರಗಳಷ್ಟು ನಮ್ಮ
ಚಿತ್ರಗಳು ಚೆನ್ನಾಗಿಲ್ಲ ಅನ್ನೋದನ್ನ ಹೇಳೋದಲ್ಲ. ನಮ್ಮ ಪಕ್ಕದ ರಾಜ್ಯದ್ದೆ ಚಿತ್ರರಂಗ ಇವತ್ತು ಹಿಂದೀ ಚಿತ್ರಗಳಿಗೆ ಸಡ್ಡುಹೊಡೆಯುವಷ್ಟು , ಹಿಂದಿ ಚಿತ್ರಗಳು ಅಲ್ಲಿಂದ ಕಥೆಗಳನ್ನ ಆಮದು ಮಾಡುವಷ್ತು ಎತ್ತರಕ್ಕೆ ಬೆಳೆದು ನಿಂತಿರಬೇಕಾದರೆ, ನಾವು ಇನ್ನೂನು ಒಳ್ಳೆಯ ಕಥೆಗಳಿಗೆ ತಿಣುಕಾಡುವುದು, ಯಾವುದೊ ಫಾರ್ಮುಲಾಗೆ ಸಿಕ್ಕಿಕೊಂಡು ಒದ್ದಾಡುವುದು ಯಾಕೆ ನಡೀತಿದೆ? ನಮ್ಮಲ್ಲಿ ನಡಿಯೋದೆ ಹೀಗೆ ಅನ್ನೋ ಸಬೂಬು ಹೇಳೊದು, ಬೆರಳೆಣಿಕೆಯ ಚಿತ್ರಗಳ ಉದಾಹರಣೆ
ನೀಡೋದು ಬಿಟ್ಟು ನಮ್ಮ ಚಿತ್ರರಂಗ ಆತ್ಮವಿಮರ್ಶೆ ಮಾಡಿಕೋಬೇಕು. ಯಾವುದೋ ಕಾರ್ಯಕ್ರಮದಲ್ಲಿ ತನ್ನ ಚೊಚ್ಚಲ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಯುವನಿರ್ದೇಶಕನೊಬ್ಬ ನಿರ್ದೇಶನದ ರೂಲ್ಸು ರೆಗ್ಯುಲೇಶನ್ಸು ಹೀಗೇ ಇರಬೇಕು ಅಂತೆಲ್ಲ ಮಾತನಾಡಿದ್ದು ಕೇಳಿ ನಾನು ’ಹಾಗಾದರೆ ನಿರ್ದೇಶನ ಅನ್ನೋದು ಒಂದೇ ಫಾರ್ಮಾಟಿಗೆ ಒಗ್ಗಿರಬೇಕೆ? ಈಗಿನ ಬ್ಲಾಗ್ಯುಮೆಂಟರಿ, ಸಿಜೆ, ಯೂಟ್ಯೂಬು, ಮೊಬೈಲ್ ಫೋನ್ ಮೂವೀಗಳ ಬಗ್ಗೆ ಏನು ಹೇಳುತ್ತೀರ” ಎಂದು ಪ್ರಶ್ನೆಯೊಂದನ್ನ
ಕಳುಹಿಸಿದರೆ ಆತನ ಬಳಿ ಅದಕ್ಕೆ ಉತ್ತರವೆ ಇರಲಿಲ್ಲ!! ’ಸ್ಲಂಡಾಗ್’ ಮಟ್ಟಕ್ಕೆ ಯೋಚಿಸುವ ಬುದ್ಢಿವಂತರು ನಮ್ಮಲ್ಲಿರಬಹುದು. ಆದರೆ ’ಎದ್ದೇಳು ಮಂಜುನಾಥಾ’ ನಮ್ಮನ್ನ ದಾಟಿಹೋಗದೆ ನಮ್ಮಲ್ಲೆ ಉಳಿದುಬಿಡುವುದು ಇದೆಯಲ್ಲ, ಅದು ಬೇಸರದ ಸಂಗತಿ.