ಕನ್ನಡ ಚಿತ್ರರಂಗದಲ್ಲಿ ಚರ್ಚಿಸಬಾರದ, ಚರ್ಚಿಸಲಾರದ ಹಾಗೂ ಚರ್ಚಿಸಿದರೆ ವ್ಯರ್ಥ ಎನಿಸುವಷ್ಟು ಹಲವು ಸಂಗತಿಗಳಿವೆ. ಅದರಲ್ಲಿ ಇದೂ ಒಂದು ಎನ್ನುತ್ತಾರೆ ನಿರಮಿತ್ರ. ನಿಮ್ಮದೇ ಅಂಕಣದ ಈ ಲೇಖನಕ್ಕೆ ನಿಮ್ಮ ದನಿಯನ್ನೂ ಕೂಡಿಸಬಹುದು.

ಇದು ಚರ್ಚಿಸುವ ಸಂಗತಿಯಲ್ಲ ಎಂಬುದು ಎಂದೋ ನಿರ್ಧಾರವಾಗಿರುವಂಥ ಸಂಗತಿ. ಯಾಕೆಂದರೆ ಇದರೊಳಗೆ ಚರ್ಚಿಸಲು ಯಾರೂ ಬರುವುದಿಲ್ಲ ಎಂಬ ಕಾರಣವೇ ಅದರ ಹಿನ್ನೆಲೆ. ಆದರೂ ಸುಮ್ಮನೆ ಹೀಗನಸಿದ್ದನ್ನು ಬರೆಯುತ್ತಿದ್ದೇನೆ. ಎಲ್ಲರೂ ಒಪ್ಪಬಹುದು, ಒಪ್ಪದಿರಬಹುದು. ನಮ್ಮ ಚಲನಚಿತ್ರರಂಗದ ಮಹಾಶಯರೂ ಹೀಗೆ ಮೂಗು ಮುರಿದು ಸುಮ್ಮನಿರಬಹುದು.

ಇತ್ತೀಚೆಗಷ್ಟೇ ಅರ್ಚನಾ ಹೆಬ್ಬಾರ್ ಅವರು, ಇತ್ತೀಚಿನ ಚಲನಚಿತ್ರ ಗೀತ ಸಾಹಿತ್ಯದ ಕುರಿತು ಬರೆದಿದ್ದರು. ಅದರಲ್ಲಿ ಬಹುಪಾಲು ಅಂಶಗಳಿಗೆ ನನ್ನದೂ ಸಹಮತವಿದೆ. ನನ್ನ ಚರ್ಚೆಯ ಅಂಶವೂ ಆ ನೆಲೆಯಲ್ಲೇ ಹುಟ್ಟಿಕೊಂಡಿದ್ದು, ಆದರೆ ಅದು ಚಲನಚಿತ್ರದ ಗುಣಮಟ್ಟದ ಕುರಿತಾದದ್ದು.

ನನಗೆ ತೋರಿದಂತೆ ಇತ್ತೀಚೆಗೆ ಪ್ರಯೋಗಾತ್ಮಕ ನೆಲೆಯಲ್ಲಿ ಕನ್ನಡದಲ್ಲಿ ಸಿನಿಮಾ ಬಂದದ್ದೇ ಕಡಿಮೆ ಎನ್ನುವುದಕ್ಕಿಂತಲೂ ಇಲ್ಲ ಎಂದರೆ ಪರವಾಗಿಲ್ಲ. ಒಂದು ಸಂಪೂರ್ಣ ವಿಭಿನ್ನವಾದ ಚಿತ್ರಗಳನ್ನು ಕೊಟ್ಟಿದ್ದೇವೆ ಎನ್ನುವವರು ನಮ್ಮ ಎದುರಿಲ್ಲ. ಆ ಸಂಖ್ಯೆಯೂ ಕಾಣಸಿಗದು. ಒಂದುವೇಳೆ ಪ್ರಯೋಗಾತ್ಮಕ ಚಿತ್ರ ಬಂದಿದ್ದರೂ ವೃಥಾ ಶ್ರಮಿವಿಲ್ಲದೇ ಬಂದಿರಬೇಕು. ಯಾಕೆ ಹೀಗೆ ಎನ್ನುವುದೇ ತಿಳಿಯದ ಸಂಗತಿ.

ಪ್ರಯೋಗಾತ್ಮಕ ನೆಲೆಗೆ ನಾವೇನೂ ಹಾಲಿವುಡ್‌ಗೆ ಹೋಗಬೇಕಿಲ್ಲ. ನಮ್ಮ ಸುತ್ತಲಿನ ದಕ್ಷಿಣ ಭಾರತದಲ್ಲೇ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಚಿತ್ರರಂಗದ ಮಂದಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ಎಷ್ಟೊಂದು ಬಗೆ ಬಗೆಯ ಸಿನಿಮಾಗಳು ಬರುತ್ತಿವೆ. ನೂರು ಅತ್ಯಂತ ಸಾಮಾನ್ಯ ಸಂಗತಿಯವದ್ದೇ ಬರಬಹುದು, ಆದರೆ ಒಂದೆರಡಾದರೂ ಭಿನ್ನ ನೆಲೆಯ ಪ್ರಯತ್ನಗಳು ಬರುತ್ತವೆ. ಅವೆಲ್ಲವೂ ಸಾಮಾನ್ಯ ಚಿತ್ರಗಳಂತೆಯೇ ಬಿಡುಗಡೆಗೊಳ್ಳುತ್ತವೆ. ಅದು ನಮ್ಮಲ್ಲಿ ಸಾಧ್ಯವಾಗುವುದಿಲ್ಲ ಏಕೆ ? ರೀಮೇಕ್‌ಗೂ ಸೌಂದರ‍್ಯ ತುಂಬಲು ಬಾರದ ಮಂದಿ ನಾವು ಎನ್ನಿಸುವುದೂ ಉಂಟು. matha
ತಮಿಳು ಚಿತ್ರರಂಗವನ್ನೇ ತೆಗೆದುಕೊಳ್ಳಿ. ಪ್ರಕಾಶ್ ರೈ ಅಭಿನಯಿಸಿದ್ದೇ ಎರಡು ಒಳ್ಳೆಯ ಚಿತ್ರಗಳು ಬಂದವು. “ಅಭಿಯುಂ ನಾನು’ ಹಾಗೂ “ಕಾಂಚೀವರಂ”, ಹಾಗೆಯೇ ಮತ್ತೊಂದು ಚಿತ್ರ ಸುಬ್ರಹ್ಮಣ್ಯಪುರಂ. ಸುಬ್ರಹ್ಮಣ್ಯಪುರಂ ಕಥನಕ್ಕಿಂತಲೂ ಸೆಟ್ಟಿಂಗ್ಸ್ ಎಲ್ಲವೂ 1980 ರ ಲೆಕ್ಕಕ್ಕೆ ಹೊಂದಿಸಿ ಪ್ರಯೋಗದಲ್ಲಿ ತೊಡಗಿದ್ದು. ಉಳಿದ ಎರಡು ಚಿತ್ರಗಳ ವಿಶಿಷ್ಟತೆ ಹೇಳಬೇಕೇನೂ ಇಲ್ಲ. ಕಾರಣ, ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ.

ಹಾಗೆಯೇ ಹಿಂದಿಯಲ್ಲಿ ಯೋಚಿಸಿ. ಎಷ್ಟೊಂದು ಪ್ರಯತ್ನಗಳು ನಡೆಯುತ್ತಿವೆ. ಮುಂಬಯಿ ಬಾಂಬ್ ಸ್ಫೋಟದ ನೆಲೆಯನ್ನೇ ಆಧರಿಸಿದ ಮೂರು ಚಿತ್ರಗಳು ಬಂದವು. ಮುಂಬಯಿ ಮೇರೆ ಜಾನ್, ಅಮೀರ್ ಹಾಗೂ ವೆಡ್ನೆಸ್ಡೇ. ಮೂರೂ ಒಂದೇ ನೆಲೆಯಲ್ಲಿ ಆರಂಭವಾಗಿ ಬೇರೆ ಬೇರೆ ನೆಲೆಯನ್ನು ಮುಟ್ಟುವಂಥವು. ಮುಂಬಯಿ ಮೇರೆ ಜಾನ್, ಬಾಂಬ್ ಸ್ಪೋಟದ ನಂತರದ ಪರಿಣಾಮದಲ್ಲಿ ಜನ ಸಾಮಾನ್ಯರ ಬದುಕಿನ ಚಿತ್ರಣ, ಅವರ ಆತಂಕ ಎಲ್ಲವನ್ನೂ ಕಟ್ಟಿಕೊಟ್ಟರೆ, ಅಮೀರ್, ಮೂಲಭೂತವಾದಿಗಳು ಅಮಾಯಕನನ್ನು ಬಳಸಿಕೊಳ್ಳುವ ವಿಧ ಹಾಗೂ ಅಮಾಯಕನೊಳಗಿನ ಸಾಮಾಜಿಕ ಪ್ರಜ್ಞೆಯ ಜಾಗೃತಾವಸ್ಥೆ ವಿವರಿಸಬಲ್ಲದು. ವೆಡ್ನೆಸ್ಡೇ, ಮೂಲಭೂತವಾದಿಗಳನ್ನು, ಆತಂಕವಾದಿಗಳನ್ನು ತಮ್ಮ ವಿಳಂಬ ನೀತಿಯಿಂದಲೇ ಪೋಷಿಸುತ್ತಾ, ಲಾಭದ ಹವಣಿಕೆಯಲ್ಲಿರುವ ಆಡಳಿತ ವ್ಯವಸ್ಥೆ, ಆಳುವವರ ವಿರುದ್ಧ ಸಿಡಿದು ನಿಲ್ಲುವಂಥ ಚಿತ್ರ.t
ಮುನ್ನಾಬಾಯಿ ಎಂಬಿಬಿಎಸ್ ಚಿತ್ರ, ಅದ್ಭುತವಾದದ್ದು. ಅದು  ನಮ್ಮಲ್ಲಿ ಉಪ್ಪಿದಾದ ಆಯಿತು. ಅದರ ಕಥೆ ಬಿಡಿ. ಅಮೀರ್  ಖಾನ್ ರೂಪಿಸಿದ ಹಲವು ಚಿತ್ರಗಳೂ ಭಿನ್ನ ನೆಲೆಯವೇ.  ಲಗಾನ್, ರಂಗ್ ದೇ ಬಸಂತಿ, ಮಂಗಲ್‌ಪಾಂಡೆ, ತಾರೇ  ಜಮೀನ್ ಪರ್…ನನಗೆ ಅನ್ನಿಸುವುದು ಅದೇ. ತಾರೇ  ಜಮೀನ್ ಪರ್ ಎನ್ನುವ ಮಾದರಿಯ ಸಿನಿಮಾ ಕನ್ನಡದಲ್ಲಿ  ಏಕೆ ಬರುವುದಿಲ್ಲ ?

ಕನ್ನಡದಲ್ಲಿ ಆಗುತ್ತವೆ, ಅವು ಅತ್ಯಂತ ಅಪರೂಪದವು. “ಮಠ’ ಚಿತ್ರ ನಿಜಕ್ಕೂ ಅಂಥದೊಂದು ಪ್ರಯೋಗಾತ್ಮಕ ಚಿತ್ರ. ಹಾಗೆಯೇ ಮಾತಾಡು ಮಾತಾಡು ಮಲ್ಲಿಗೆ ಪರವಾಗಿಲ್ಲ. ನಮಗೆ ಮಚ್ಚು, ಲಾಂಗು ಎಲ್ಲವೂ ಬೇಕು, ಅದೇ ತುಂಬಿಬಿಟ್ಟರೆ ಹೇಗೆ ? ಸುಬ್ರಹ್ಮಣ್ಯಪುರಂ ಚಿತ್ರದಲ್ಲೂ ಲಾಂಗಿದೆ, ಹಿಂಸೆಯಿದೆ, ಅದಕ್ಕೊಂದು ಕಲಾತ್ಮಕ ಆಯಾಮವಿದೆ. ಅದನ್ನೇ ಪ್ರಯೋಗಶೀಲತೆ ಎನ್ನುವುದು.

ಇಂಗ್ಲಿಷ್‌ನಲ್ಲೂ ಎಷ್ಟೊಂದು ಬಗೆ ಬಗೆಯ ಪ್ರಯತ್ನಗಳು. ಯಾವುದಾದರೂ ಒಂದು ನೆಲೆಯಲ್ಲಿ ಅತ್ಯಂತ ಉನ್ನತಮಟ್ಟದ ಶ್ರಮ ಹಾಕಿ ತೆಗೆದ ಚಿತ್ರಗಳು. ರುವಾಂಡಾದಲ್ಲಿ ನಡೆದ ಜನಾಂಗೀಯ ಹಿಂಸೆಯಲ್ಲಿ ಒಬ್ಬ ಹೋಟೆಲ್ ಮ್ಯಾನೇಜರ್ ತನ್ನ ನೆಲೆಯಲ್ಲಿ ಸಾಧ್ಯವಾದಷ್ಟು ಜನರನ್ನು ಬದುಕಿಸಲು(ರಕ್ಷಿಸುವ) ಪ್ರಯತ್ನಿಸುವ ಚಿತ್ರ “ಹೋಟೆಲ್ ರುವಾಂಡಾ’, ವಿಲ್ ಸ್ಮಿತ್ ಅಭಿನಯದ “ಪರ್ಸ್ಯೂಟ್ ಆಫ್ ಹ್ಯಾಪಿನೆಸ್’, ಇರಾನಿಯ “ಸಾಂಗ್ ಆಫ್ ಸ್ಪ್ಯಾರೋ’, “ಕಲರ್ ಆಫ್ ಪ್ಯಾರಡೈಸ್”, “ಕಂದಹಾರ್”, “ವೈಟ್ ಬಲೂನ್”, “ಮಿರರ್’…ಹೀಗೇ ಕೆಲವೇ ಭಾಷೆಗಳದ್ದಲ್ಲ.
Untitled-1 copy
ಜಾಗತಿಕ ಮಟ್ಟದಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಿಂದ ಅತ್ಯುತ್ತಮ ಚಿತ್ರಗಳು ಮೂಡಿ ಬರುತ್ತಿವೆ. ಅವುಗಳನ್ನು ನೋಡುವ, ಅದರಲ್ಲಿನ ಒಳ್ಳೆಯದನ್ನು ಸ್ವೀಕರಿಸುವ ಸಾಧ್ಯತೆಯೇ ನಮ್ಮಲ್ಲಿಲ್ಲ ಎನ್ನುವುದು ನನ್ನ ಅನಿಸಿಕೆ. ಕೆಲ ನಿರ್ದೇಶಕರು, ನಿರ್ಮಾಪಕರಿಗೆ ಬೇರೆ ಬೇರೆ ಸಿನಿಮಾ ಜಗತ್ತಿನಲ್ಲಾಗುತ್ತಿರುವ ಬೆಳವಣಿಗೆ ಕುರಿತು ಗಮನಿಸುತ್ತಿರಬಹುದು. ಬಹುಪಾಲು ಮಂದಿಗೆ ಇಲ್ಲ.

ಯಾವುದಾದರೂ ನಿರ್ದೇಶಕರಿಗೆ ಕೇಳಿ. ಅಲ್ಲಿನ ಜನಕ್ಕೆ ಅಂಥದ್ದು ಬೇಕು, ಇಲ್ಲಿನವರಿಗೆ ಬೇಕಾಗಿದ್ದೇ ಬೇರೆ, ಅದನ್ನೇ ಕೊಡುತ್ತಿದ್ದೇವೆ ಎನ್ನುತ್ತಾರೆ. ಹಾಗೆಂದು ಯಾರೂ ಇವರಲ್ಲಿ ನಮಗಿಂಥದ್ದೇ ಕೊಡಿ ಎಂದು ಹೇಳಿಲ್ಲ, ಇವರೇ ಹಾಗೆ ತಿಳಿದುಕೊಂಡುಬಿಟ್ಟಿದ್ದಾರೆ. ಒಂದುವೇಳೆ ಸ್ವಲ್ಪ ಸೈಲೆನ್ಸ್ ಮೂಡ್ ಇರುವ ಚಿತ್ರ ತೆಗೆದರೆ ಅದನ್ನು “ಕಲಾಚಿತ್ರ’ ಎಂದು ಪ್ರತ್ಯೇಕಗೊಳಿಸಿ ಹಣೆಪಟ್ಟಿ ಕಟ್ಟಿ ಸುಮ್ಮನಾಗುತ್ತೇವೆ.

ಹಾಗೆ ಹೊಸ ಅಲೆಯ ಚಿತ್ರಗಳನ್ನು ರೂಪಿಸುವವರೂ ಸ್ವಲ್ಪ ವಾಣಿಜ್ಯಾತ್ಮಕ ನೆಲೆಯನ್ನು ಇಟ್ಟುಕೊಂಡೇ ಚಿತ್ರ ರೂಪಿಸುವ ಸರ್ಕಸ್ಸಿಗೆ ಇಳಿಯುವುದಿಲ್ಲ ಎಂದೆನಿಸುತ್ತದೆ. ಯಾಕೋ ? ಗೊತ್ತಿಲ್ಲ. ಆದರೆ ಬಹಳಷ್ಟು ಬಾರಿ ಅನಿಸುವ ಸಂಗತಿಯೆಂದರೆ “ನಾವು ಯೋಚಿಸುವುದನ್ನೇ ನಿಲ್ಲಿಸಿದ್ದೇವೆಯೇ?’ ಎಂಬುದು.

ಮೇಲೆ ಹೇಳಲಾದ ಎಲ್ಲ ಚಿತ್ರಗಳೂ ಪ್ರಯೋಗಾತ್ಮಕ ಎನ್ನುವ ನೆಲೆಯಲ್ಲಿದ್ದರೂ ಅದ್ಯಾವುದೂ ಡಬ್ಬಾದಿಂದ ಬರಲಾಗದ ಚಿತ್ರಗಳಲ್ಲ. ನನಗೂ ಚಿತ್ರ ಹೀಗೇ ಇರಬೇಕು…ಡಿಮ್ ಅಂಡ್ ಡಿಪ್‌ನಲ್ಲೇ ಎಲ್ಲ ದೃಶ್ಯಗಳೂ ಚಿತ್ರೀಕರಿಸಬೇಕು…ಎಂದೆಲ್ಲಾ ಅಭಿಪ್ರಾಯವಿಲ್ಲ. ಆದರೆ ಮಾನವೀಯ ನೆಲೆಯಲ್ಲೇ ಆಲೋಚಿಸುವ ಚಿತ್ರಗಳು ಬೇಕು. ಅದಕ್ಕೆ “ಮಾಸ್’ ಮತ್ತು “ಕ್ಲಾಸ್’ ಎಂಬ ಪ್ರತ್ಯೇಕತಾವಾದ ಕೈ ಬಿಡಬೇಕಾದ ಅನಿವಾರ‍್ಯ ಸ್ಥಿತಿಯಿದೆ. “ಮಾಸ್’ ನ ಮಂದಿಗೂ ಅರ್ಥವಾಗುವ ಚಿತ್ರಗಳು “ಕ್ಲಾಸ್’ ನಿಂದ ಬರಬೇಕು. “ಕ್ಲಾಸ್’ ನ ಜನರೂ ನೋಡುವ ಚಿತ್ರಗಳು “ಮಾಸ್’ ನವರು ಮಾಡಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ, ಇರುವ ನಮ್ಮ ತಲೆಯನ್ನು ಸ್ವಲ್ಪವಾದರೂ ಬಳಸಬೇಕು, ಬರೀ ಬಾಟಲಿ ಬದಲಿಸುವ ವರ್ತನೆಯಲ್ಲಿ ಒಂದಷ್ಟು ಬದಲಾವಣೆ ತಂದುಕೊಳ್ಳಬೇಕು ಎನಿಸುವುದಿಲ್ಲವೇ ?

Advertisements