ಸೃಜನ್ ಈ ಬಾರಿ ಬರೆದಿರುವ ಚಿತ್ರ ತಮಿಳು “ದಾಸಿ ಅಪರಂಜಿ’ ಕುರಿತಾದದ್ದು. ಹಿಂದಿ ಚಿತ್ರನಟಿ ರೇಖಾಳ ತಾಯಿ ಪುಷ್ಪವಲ್ಲಿಯ ಪ್ರತಿಭಾ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ.

ರಾಜ ವಿಕ್ರಮಾದಿತ್ಯನ ಪಾಲನೆಯಲ್ಲಿ ರಾಜಮನ್ನಣೆ ಪಡೆದ ಅಪರೂಪದ ರಾಜನರ್ತಕಿ, ದೇವದಾಸಿ-ಅಪರಂಜಿ, ರಾಜನ ಮಾತೇ ಮುತ್ತು ದಾಸಿಮಾತೇ ವೇದವಾಕ್ಯವೆಂಬಂತಿದ್ದ ವಿಕ್ರಮಾದಿತ್ಯದ ಪಾಲನೆಯಲ್ಲಿ ‘ಅಪರಂಜಿ’ ಕುರಿತು ಯಾರೂ ಮಾತನಾಡಬಾರದೆಂದು ಶಾಸನ ವಿಧಿಸಿದ ಎಚ್ಚರಿಕೆಯಾಗಿತ್ತು. ‘ಅಪರಂಜಿ ಕುರಿತು ಮಾತಾಡುವುದು, ಆಕೆಯನ್ನು ಕನಸು ಕಾಣುವುದು, ಕನವರಿಸುವುದು ನಿಷೇಧವಾಗಿತ್ತು’. ಚಕ್ರವರ್ತಿ ವಿಕ್ರಮಾದಿತ್ಯನ ಅಂತಃಪುರ, ಅಪರಂಜಿಯೊಂದಿಗೆ ಪ್ರತಿದಿನ ಕಾಮಕೇಳಿಗಳಿಂದ ವಿಲಾಸದಿಂದ ತುಂಬಿ ತುಳುಕುತ್ತಿತ್ತು.

1944 ರಲ್ಲಿ ‘ದಾಸಿ ಅಪರಂಜಿ’ ಹೆಸರಿನಿಂದ ಖ್ಯಾತ ಸಿನಿಮಾ ಸಂಸ್ಥೆ ‘ಜೆಮಿನಿ’ ಈ ಕಥೆಯನ್ನಾಧರಿಸಿ ಸಿನಿಮಾ ಮಾಡಿತು.

ಚಿತ್ರದಲ್ಲಿ ಎಂ.ಕೆ.ರಾಧಾ, ಕೊತ್ತಮಂಗಳಂ ಸುಬ್ಬು, ಎಂ.ವಿ.ಮಣಿ ಹಾಗೂ ಎಲ್.ನಾರಾಯಣರಾವ್ ಮುಖ್ಯ ಭೂಮಿಕೆಯಲ್ಲಿದ್ದರು ಮತ್ತು ‘ದಾಸಿ-ಅಪರಂಜಿ’ಯಂತಹ ಗಮನ ಸೆಳೆಯುವ ಉದ್ರೇಕಕಾರಿ ಪಾತ್ರದಲ್ಲಿ ಆಗಲೇ ತಮಿಳು ಚಿತ್ರರಂಗದಲ್ಲಿ ಹೆಜ್ಜೆ ಇಟ್ಟಿದ್ದ ‘ಪುಷ್ಪವಲ್ಲಿ’ ನಟಿಸಿದ್ದಳು.pushpavalli

ತೆಲುಗಿನ ‘ಸಂಪೂರ್ಣ ರಾಮಾಯಣಂ’ ಚಿತ್ರದಿಂದ ಬೆಳ್ಳಿ ತೆರೆಗೆ ಪರಿಚಯವಾದ ‘ಪುಷ್ಪವಲ್ಲಿ’ 1938 ರಲ್ಲಿ ‘ಚಲ್ ಮೋಹನ್‌ರಂಗಾ’ ಚಿತ್ರಕ್ಕೆ ಆಗಲೇ ‘ಹೀರೋಯಿನ್’ ಆಗಿ ಬಿಟ್ಟಿದ್ದಳು. ತೆಲುಗು ಚಿತ್ರರಂಗವನ್ನು ‘ಟ್ರಿಪಲ್-ಕೆ’(ಕೆ-ತ್ರಯರು) ಎಂಬ ಕಾಂಚನಮಾಲ, ಕನ್ನಾಂಬ, ಕೃಷ್ಣವೇಣಿಯರು ಅನಭಿಷಕ್ತ ರಾಣಿಯರಂತೆ ಆಳುತ್ತಿದ್ದ ಕಾಲವದು. 1938 ರಲ್ಲಿ ‘ಮೋಹಿನಿ ಭಸ್ಮಾಸುರ’ ಚಿತ್ರದಿಂದ ಪ್ರೇಕ್ಷಕರ ನಿದ್ದೆ ಕೆಡಿಸಿದ್ದ ಪುಷ್ಪವಲ್ಲಿ ‘ಮಾಲತೀಮಾಧವ’ ಚಿತ್ರದ ‘ಚಂಡಿಕ’ ಪಾತ್ರಕ್ಕೂ ಅದ್ಭುತವಾಗಿ ನಟಿಸಿದ್ದಳು. ಆದರೆ ಎಲ್ಲಾ ‘ನಾಯಕಿ’ಯರಂತೆ ಆಕೆಗೂ ಸ್ಟಾರ್‌ವ್ಯಾಲ್ಯೂ ತುಡಿತವಿತ್ತು. ಸಹಜವಾಗಿಯೇ ಆಕೆ ತಮಿಳು ಚಿತ್ರರಂಗದ ಕಡೆ ದೃಷ್ಟಿ ಹಾಯಿಸಿದಳು. ಜೈಮಿನಿ ಸಂಸ್ಥೆಯ ಅದೃಷ್ಟದ ಬಾಗಿಲು ತೆಗೆಯಿತು. ಆಕೆಗೆ ತೆಲುಗು ಅಥವಾ ಬೇರೆ ಭಾಷೆಗಳ ಚಿತ್ರಗಳ ಕಡೆ ತಿರುಗಿ ನೋಡುವ ಅಗತ್ಯ ಬರಲೇ ಇಲ್ಲ. ಆ ಸಂಸ್ಥೆಯ ‘ದಾಸಿ-ಅಪರಂಜಿ’ ಚಿತ್ರಕ್ಕೆ ನಾಯಕಿಯಾಗಿ ಪ್ರಕಟವಾಗುತ್ತಿದ್ದಂತೆ ಪುಷ್ಪವಲ್ಲಿ ಸಿನಿಮಾ ಬಿಡುಗಡೆಯ ಮುನ್ನವೇ ಸ್ಟಾರ್ ಆಗಿ ಬಿಟ್ಟಳು.

ದಾಸಿ ‘ಅಪರಂಜಿ’ ಚಿತ್ರದಲ್ಲಿ ಸಾಕಷ್ಟು ಬಿಸಿ ಬಿಸಿ ದೃಶ್ಯಗಳಿದ್ದವು. ‘ಆಸೈ ಕೊಳ್ಳಾದವರ್ ಅನ್ ಪಿಳ್ಲೈ ಇಲ್ಲೈ’ (ಆಸೆ ಇಲ್ಲದವನು ನಿಜಕ್ಕೆ ಗಂಡಸಲ್ಲ..) ಎಂಬ ಹಾಡನ್ನು ಕೊತ್ತಮಂಗಳಂ ಸುಬ್ಬು ಸೃಷ್ಟಿಸಿದ್ದರು. ಚಿತ್ರದ ಮುಖ್ಯಕಥೆಯನ್ನು ಪಕ್ಕಕ್ಕಿಟ್ಟರೆ ಚಿತ್ರದಲ್ಲಿನ ಕಾಮೆಡಿ ಟ್ರ್ಯಾಕ್, ಸುಬ್ಬುನವರ ಕಚಗುಳಿ ಇಡುವ ಗರಿಗರಿ ಮಾತುಗಳು ಪ್ರೇಕ್ಷಕರನ್ನೂ ವಿಪರೀತವಾಗಿ ಆಕರ್ಷಿಸಿದ್ದವು. ಪೌರಾಣಿಕ ಹಿನ್ನೆಲೆಯ ಕಥಾ ವಸ್ತು ಹೊಂದಿದ್ದ ಚಿತ್ರ ವಿಚಿತ್ರವಾಗಿ ಎಲ್ಲಾ ಥರದ ಜನರನ್ನು ಕನಿಷ್ಠ ಎರಡು-ಮೂರು ಸಲ ಸಿನಿಮಾ ನೋಡುವಂತೆ ಮಾಡಿತ್ತು.srujan column new
ದೇವಸ್ಥಾನದ ಪುಷ್ಕರಣಿಯ ಅರ್ಚಕರಾದ ಸ್ವಾಮಿಗಳು (ಈ ಪಾತ್ರವನ್ನು ಕೂಡಾ ‘ಕೊತ್ತಮಂಗಳಂ ಸುಬ್ಬು’ ಮಾಡಿದ್ದರು!) ಇದ್ದಕ್ಕಿದ್ದಂತೆ ಒನ್ ವೇ ಪ್ರೇಮದಲ್ಲಿ ಸಿಲುಕುತ್ತಾರೆ. ಅದೂ ಹೋಗಿ ಹೋಗಿ ದಾಸಿ-ಅಪರಂಜಿಯಂಥ ಬೆಡಗಿಯೊಂದಿಗೆ! ಆಕೆಯ ಬಗ್ಗೆ ವಿಪರೀತ ಕನಸು ಕಾಣಲಾರಂಭಿಸುತ್ತಾರೆ. ಹೊರಗೆ ಗೊತ್ತಾದರೆ ಸಾವಿರ ಚಿನ್ನದ ನಾಣ್ಯಗಳನ್ನು ದಂಡ ತೆತ್ತಬೇಕಲ್ಲ ಎಂದು ಅಪರಂಜಿಯೇ ನನ್ನನ್ನು ಪ್ರೀತಿಸುವಂತೆ ಮಾಡಿದರೆ ಹೇಗೆ ಎಂದು ಮಾಸ್ಟರ್ ಪ್ಲಾನ್ ಮಾಡುತ್ತಾರೆ.

ಗೌಪ್ಯವಾಗಿ ವಶೀಕರಣದ ಔಷಧ ತಯಾರಿಸಿದ ಸ್ವಾಮಿಗಳು ಅಪರಂಜಿಗೆ ನೇರವಾಗಿ ಕೊಡಲು ಹಿಂಜರಿದು, ಆಕೆಯ ಮನೆಯ ಸೋಮಾರಿ ಕೆಲಸದ ಹುಡುಗಿ ‘ಸಿಂಗಾರಿ’ಯ ಮೊರೆ ಹೋಗುತ್ತಾರೆ. ಆಕೆಯನ್ನು ಕರೆದು ‘ಔಷಧಿ ಮಿಶ್ರಿತ ಪೊಂಗಲ್ ಪ್ರಸಾದ’ ನೀಡಿ ಅಪರಂಜಿಗೆ ಕೊಡಲು ಹೇಳುತ್ತಾರೆ. ಆದರೆ ಚಾಲಾಕಿ ಸಿಂಗಾರಿ… ‘ದಾಸಿ ವೀಟ್ಟು ವೇಳೈಕಾರಿ ಗೇಲಿ ವೇಳೈಕಾರಿ ಗೇಲಿಪಿಳ್ಲೆಪ್ಪು’ ಎಂದು ಹಾಡುತ್ತಾ ಇಡೀ ಪ್ರಸಾದವನ್ನು ತಾನೇ ತಿನ್ನುತ್ತಾ ತಿನ್ನುತ್ತಾ ಒಂಚೂರನ್ನು ತನ್ನ ಜತೆಯ ಪ್ರೀತಿಯ ಕುರಿಮರಿಗೆ ತಿನ್ನಿಸುತ್ತಾಳೆ.

ಈಗ ಸಿನಿಮಾ ಆರಂಭ ನೋಡಿ. ವಶೀಕರಣದ ಔಷಧಮಿಶ್ರಿತ ಪೊಂಗಲ್ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಿಂಗಾರಿ ಮೈಮೇಲೆ ಪ್ರಜ್ಞೆ ಕಳೆದುಕೊಂಡವಳಂತೆ ದಾಹದಿಂದ ಸ್ವಾಮಿಗಳ ತೆಕ್ಕೆಯಲ್ಲಿ ಬೀಳುತ್ತಾಳೆ. ಜೊತೆಗೆ ಸ್ವಲ್ಪ ಪ್ರಸಾದ ತಿಂದಿದ್ದ ಕುರಿಮರಿಯೂ ಓಡಿ ಬಂದು ಸ್ವಾಮಿಗಳ ಮುಖ ಮುತ್ತಿಡಲು ಪ್ರಾರಂಭಿಸುತ್ತದೆ. ಹೀಗೆ ಇದು ಹಾಸ್ಯವೋ ಅಪಹಾಸ್ಯವೋ ಗೊತ್ತಾಗದೆ ವಿಚಿತ್ರ ಸನ್ನಿವೇಶಗಳಿಂದ, ಬಿಸಿಬಿಸಿ ದೃಶ್ಯಗಳಿಂದ, ಅದ್ಭುತ ಹಾಡುಗಳಿಂದ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ. ಮತ್ತೆ ಜೆಮಿನಿಯ ಲಿಸ್ಟ್‌ನಲ್ಲಿ ಹಿಟ್ ಚಿತ್ರ ಸೇರುತ್ತದೆ!

ತಮಾಷೆ ನೋಡಿ-ಅರ್ಚಕರೇನೋ ಕನಸಲ್ಲಿ ತೇಲ ತೊಡಗುತ್ತಾರೆ. ಅಪ್ಪುಗೆಯಲ್ಲಿ ಸಿಂಗಾರಿಯನ್ನೂ ಅವುಚಿಕೊಂಡು ‘ಅಪರಂಜಿ-ಅಪರಂಜಿ’ ಎನ್ನ ತೊಡಗುತ್ತಿದ್ದಂತೆ..‘ಮೇ ಮೇ..’ ಎಂದು ಕುರಿಮರಿ ಮುತ್ತು ಕೊಡುವ ಘಟನೆಗಳು ಚಕ್ರವರ್ತಿಗಳಿಗೆ ಗೊತ್ತಾಗುತ್ತಿದ್ದಂತೆ ಸ್ವಾಮಿಗಳನ್ನು ದರದರನೆ ಎಳೆದೊಯ್ದು ಸಿಟ್ಟಿನಿಂದ ‘ದಾಸಿ-ಅಪರಂಜಿ’ಯ ಸೀರೆ-ರವಿಕೆಗಳನ್ನು ಒಗೆಯುವ ಶಿಕ್ಷೆ ಕೊಡುತ್ತಾರೆ. ಹೀಗೆ ಹಲವು ಆಸಕ್ತ ಪೂರ್ಣ ಘಟನೆಗಳ, ತಿರುವುಗಳ ಚಿತ್ರ ‘ಅಪರಂಜಿ’.

ಆಮೇಲೆ ಪುಷ್ಪವಲ್ಲಿ ತೆಲುಗಿನ ‘ಬಾಲನಾಗಮ್ಮ’ ಚಿತ್ರದಿಂದ ಮತ್ತೆ ಖ್ಯಾತಳಾಗುತ್ತಾಳೆ. ‘ಪಾಂಡುರಂಗ’ನ ಪಾತ್ರ ಮಾಡಿದ್ದ ಆರ್.ಗಣೇಶ್ ಎಂಬ ಚಿಗುರು ಮೀಸೆಯ ನಟ, ‘ಚಕ್ರಧಾರ’ ಚಿತ್ರದಲ್ಲಿ ಆಕೆಯ ನಟನೆಗೆ, ಸೌಂದರ್ಯಕ್ಕೆ ಹುಚ್ಚನಾಗಿ ಪ್ರೀತಿಸುತ್ತಾನೆ. ಅವರ ಪ್ರೇಮಾಂಕುರವೇ ಇಂದಿನ ಹಿಂದಿಯ ಎವರ್‌ಗ್ರೀನ್ ನಾಯಕಿ ‘ರೇಖಾ’.

ಅಂದಹಾಗೆ ‘ಸಿಂಗಾರಿ’ಯ ಪಾತ್ರದ ಸುಂದರಿಬಾಯಿಯ ನಟನೆ ಖುಷಿ ಕೊಡುತ್ತದೆ. ಎನ್.ಎಸ್.ಕೃಷ್ಣನ್-ಟಿ.ಎ.ಮಧುರಂ ನಂತರ ಸುಬ್ಬು-ಸುಂದರಿಬಾಯಿಯ ಜೋಡಿ ಹಲವು ವರ್ಷಗಳವರೆಗೆ ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿತ್ತು.

Advertisements