ಕನ್ನಡ ಚಲನಚಿತ್ರರಂಗದ ಈಗಿನ ಶೋ ಮ್ಯಾನ್ ರವಿಚಂದ್ರನ್. ಆದರೆ ಮೊದಲ ಶೋ ಮ್ಯಾನ್ ಯಾರು ಗೊತ್ತೇ ? ಕೆಂಪರಾಜ ಅರಸ್. ಅಂದರೆ ರಾಜಾ ವಿಕ್ರಮದ ರಾಜ.ಇದೇ ಈ ವಾರದ ವಿಶೇಷ ಗುರುಸ್ವಾಮಿ ಕಾಲಂನಲ್ಲಿ.

ಕೆಂಪರಾಜ ಅರಸ್ ಗೊತ್ತಿರಲಿಕ್ಕೆ ಸಾಕು. ಕನ್ನಡ ಚಿತ್ರರಂಗದ ಮೊದಲ ಶೋಮ್ಯಾನ್ ಎಂದರೆ ಅವರೇ. ಅಂದರೆ ವಿಜೃಂಭಣೆಯ, ವೈಭವ ಪ್ರತೀಕ. ಈಗ ನೆನೆಸಿಕೊಳ್ಳಿ, ರವಿಚಂದ್ರನ್ ಅಂದರೆ ಹೇಗೆ ? ಅವರ ಸಿನಿಮಾ ಎಂದರೆ ಹೇಗೆ ? ಅದ್ಧೂರಿತನ. ಹಾಗೆಯೇ ಕೆಂಪರಾಜ ಅರಸ್ ಸಹ. ವರ್ಣರಂಜಿತವಾದ ವ್ಯಕ್ತಿತ್ವ, ಎಲ್ಲರ ಗಮನಸೆಳೆಯುವ ನಿಲುವು.

ಕನ್ನಡ ಚಿತ್ರರಂಗ ಮರೆಯಲಾರದ ಹೆಸರು. ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್‌ರ ಅಣ್ಣ. ಹುಣಸೂರಿನವರು. ಹೇಗೋ ಸಿನಿಮಾದ ಹುಚ್ಚು ಹತ್ತಿ ಚಿತ್ರರಂಗಕ್ಕೆ ಬಂದರು. ಒಳ್ಳೊಳ್ಳೆ ಚಿತ್ರ ರೂಪಿಸಿದರು, ಚೆನ್ನಾದ ನಟನೆ ಮಾಡಿದರು, ಹೆಸರೂ ಮಾಡಿದರು…ಹೀಗೇ ಬೇಡ ಎನಿಸಿ ಬದಿಗೆ ಸರಿದರು.

ಸ್ಪುರದ್ರೂಪಿ ಯುವಕನಿಗೆ ಸಿನಿಮಾದಲ್ಲಿ ಮಾಡಬೇಕೆನ್ನಿಸುವುದು ಸಹಜವೇ. ಅದರಲ್ಲೂ ಕೆಂಪರಾಜ ಅರಸರಿಗೆ ನಟನೆಯೂ ಗೊತ್ತಿತ್ತು. ಹಾಗಾಗಿ ಆ ಹುಚ್ಚು ಕಿಚ್ಚನ್ನು ಹಚ್ಚಿಸಿದ್ದು ನಿಜ. 1940-41 ರಲ್ಲಿ ದಿಗ್ಗಜ ಗುಬ್ಬಿವೀರಣ್ಣರಲ್ಲಿ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಕೋರುತ್ತಾರೆ.

ಕನ್ನಡ ಚಿತ್ರರಂಗದ ಬೆಳವಣಿಗೆಗೆ ಗುಬ್ಬಿವೀರಣ್ಣರ ಕೊಡುಗೆಯೂ ಅನನ್ಯವೇ. ಅವರ ಕಂಪನಿಯಿಂದ ಪರಿಚಯಿಸಿದ ನಟರು ಹತ್ತಾರು ಮಂದಿ. ಪ್ರಮುಖರಾಗಿ ಡಾ. ರಾಜ್‌ಕುಮಾರ್, ಟಿ.ಎನ್. ಬಾಲಕೃಷ್ಣ (ಬಾಲಣ್ಣ), ನರಸಿಂಹರಾಜು ಹೀಗೆ. ಕೆಂಪರಾಜ ಅರಸ್ ಸಹ ಲಕ್ಷಣವಾಗಿದ್ದರು. ನಟನೆ ಬಗ್ಗೆ ಗೊತ್ತಿತ್ತು. ಒಟ್ಟೂ ಎಲ್ಲದರ ಫಲವೆಂದರೆ 1942 ರಲ್ಲಿ ಗುಬ್ಬಿವೀರಣ್ಣನವರು ರೂಪಿಸಿದ “ಜೀವನ ನಾಟಕ’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ಅದರಲ್ಲಿ ಸ್ವತಃ ಗುಬ್ಬಿವೀರಣ್ಣನವರೂ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಪ್ರಖ್ಯಾತಗೊಂಡ ಶಾಂತಾ ಹುಬ್ಳೀಕರ್ ಇದರಲ್ಲಿ ಅಭಿನಯಿಸಿದ್ದು ವಿಶೇಷ. ಇದರ ನಿರ್ದೇಶನ ವಹಾಬ್ ಕಾಶ್ಮೀರಿ.
guruswamy coloumn copy
ನಂತರ 1947 ರಲ್ಲಿ ನಿರ್ಮಾಣವಾದ ಕೃಷ್ಣಲೀಲಾ ಸಿನಿಮಾದಲ್ಲಿ “ಕಂಸ’ ನ ಪಾತ್ರವನ್ನು ನಿರ್ವಹಿಸಿದರು. ಕಂಸನ ಮಾತು ಗೊತ್ತಲ್ಲ, ಜೋರು ಧ್ವನಿಯಿಂದ ಕೂಡಿದ್ದು. ಮೈಸೂರಿನ ನವಜ್ಯೋತಿ ಸ್ಟುಡಿಯೋಸ್ ನಲ್ಲಿ ಶೂಟಿಂಗ್. ಎಷ್ಟೇ ಬಾರಿ ಪಾತ್ರ ಮಾಡಿದರೂ ತನ್ನ ಧ್ವನಿ ಸರಿಯಾಗಿ ಮುದ್ರಣಗೊಳ್ಳುತ್ತಿಲ್ಲ ಎಂದು ಅನಿಸತೊಡಗಿತಂತೆ. ಆದರೂ ಏನೋ ಮುಗಿಸಿ ಬಂದರು. ಇದೊಂದು ಅಪೂರ್ಣತೆ ಕೊನೆಗೆ ಚಿತ್ರ ರೂಪಿಸುವಲ್ಲಿ ಚೂರೂ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸೂಕ್ಷ್ಮತೆಯನ್ನು ಬೆಳೆಸಿತೇನೋ ಗೊತ್ತಿಲ್ಲ.

1948 ರಲ್ಲಿ ಭಕ್ತ ರಾಮದಾಸ ಚಿತ್ರದಲ್ಲಿ ಬಾದಶಹನ ಪಾತ್ರ ನಿರ್ವಹಿಸಿ ಭೇಷ್ ಎನಿಸಿಕೊಂಡರು. ತಾನೇ ಸಿನಿಮಾವನ್ನು ಮಾಡಬೇಕೆಂಬ ಹುಚ್ಚು ಹಿಡಿದದ್ದು ಕ್ರಮೇಣ. 1947 ರ ಸುಮಾರಿನಲ್ಲಿ ಲೆಕ್ಕಾಚಾರ ಮಾಡಿ 1951 ರಲ್ಲಿ ನಿರ್ಮಿಸಿದ್ದೇ ರಾಜಾ ವಿಕ್ರಮ. ಶನಿಮಹಾತ್ಮೆ ಕಥೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿ, ದೃಶ್ಯ ವೈಭವ ಕೊಟ್ಟು ತಾವೇ ರಾಜಾ ವಿಕ್ರಮರಾಗಿ ಅಭಿನಯಿಸಿದರು. ಇವರೊಂದಿಗೆ ಎಂ.ವಿ. ರಾಜಮ್ಮ, ಬಿ. ಜಯಮ್ಮ, ಭಾನುಮತಿ ಅವರೆಲ್ಲಾ ಅಭಿನಯಿಸಿದ್ದರು.

ಬಹಳ ಅದ್ಧೂರಿ ಚಿತ್ರ. ಅದಕ್ಕೇ ಹೇಳಿದ್ದು ಒಂದರ್ಥದಲ್ಲಿ ಕನ್ನಡದ ಮೊದಲ ಶೋ ಮ್ಯಾನ್. ಆಗ ಸುಸಜ್ಜಿತ ಸ್ಟುಡಿಯೋ ಎಂದು ಇದ್ದದ್ದೇ ಮೈಸೂರಿನ ನವಜ್ಯೋತಿ. ಆದರೆ, ಅವರ ಕಂಸನ ಪಾತ್ರದ ಸಂದರ್ಭದಲ್ಲಿ ಇಲ್ಲಿ ಎಲ್ಲವೂ ಸರಿಯಿಲ್ಲ ಎಂದುಕೊಂಡಿದ್ದರು. ಅದಕ್ಕಾಗಿ ಮದ್ರಾಸ್‌ಗೆ ಹೋಗಿ ಎಲ್ಲವನ್ನೂ ಮುಗಿಸಿ ಬಂದರು. ತಮ್ಮದೇ ಆದ ಸೆಟ್ ಎಲ್ಲ ಹಾಕಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದರು.

ಸಿನಿಮಾ ಅದ್ಭುತ ಯಶಸ್ಸು ಕಂಡಿತು. ಅರಸ್‌ರ ಸಿನಿಮಾ ಮಾಡುವ ಹುಚ್ಚು ಹೆಚ್ಚಿಸಿತು. ಅದಾದ ಮೇಲೆ “ಜಲದುರ್ಗ’ ಎಂಬ ಚಿತ್ರವನ್ನು ನಿರ್ಮಿಸಿದರು. ಆ ಸಂದರ್ಭಕ್ಕೆ ಅದು ವಿಶಿಷ್ಟವಾದ ಸಾಮಾಜಿಕ ಕಥಾವಸ್ತು. ಫ್ರೆಂಚ್ ಕಾದಂಬರಿಯೊಂದರ ಪ್ರೇರಣೆಯಿಂದ ಸಮಾಜದ ಓರೆ ಕೋರೆಗಳನ್ನು ತಿದ್ದುವ ರೀತಿಯ ಚಿತ್ರವಾಗಿತ್ತು. ಪತ್ರಿಕೆಗಳು, ಬುದ್ಧಿಜೀವಿಗಳೆಲ್ಲಾ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ದರು. ಆದರೆ ಜನ ಸ್ವೀಕರಿಸಲಿಲ್ಲ. ಅದರಲ್ಲಿ ಬಿ. ಆರ್. ಪಂತುಲು, ಸಂಧ್ಯಾ ಎಲ್ಲರೂ ನಟಿಸಿದ್ದು ವಿಶೇಷ.

1967 ರಲ್ಲಿ “ನಳ ದಮಯಂತಿ’ ಚಿತ್ರ ನಿರ್ಮಿಸಿದ್ದರೂ ಯಶಸ್ವಿಯಾಗಲಿಲ್ಲ. ಭಾನುಮತಿ, ನರಸಿಂಹರಾಜ್ ಅವರೆಲ್ಲಾ ಅಭಿನಯಿಸಿದ ಚಿತ್ರ ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ಕ್ರಮೇಣ ಚಿತ್ರರಂಗದಿಂದ ಬದಿಗೆ ಸರಿದ ಅವರು, ತಮ್ಮ ಸೋದರ ಮುಖ್ಯಮಂತ್ರಿಯಾದಾಗ ಸ್ಥಾಪನೆಗೊಂಡ ಕರ್ನಾಟಕ ಚಲನಚಿತ್ರ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಇವರಿಗೆ ಚಿತ್ರ ನಿರ್ಮಿಸುವಲ್ಲಿ ಸಿಕ್ಕ ಜ್ಞಾನ ಕೃಷ್ಣಲೀಲಾ ನಿರ್ಮಾಣದ ಸಂದರ್ಭದಲ್ಲಿ ಸಿಕ್ಕ ಹೊಣೆಗಾರಿಕೆಯ ಫಲ. ಮಹಾತ್ಮಾ ಪಿಕ್ಚರ‍್ಸ್ ನ ಶಂಕರ್ ಸಿಂಗ್ (ಈಗಿನ ರಾಜೇಂದ್ರಸಿಂಗ್‌ಬಾಬು ಅವರ ತಂದೆ) ಹಾಗೂ ವಿಠ್ಠಲ್ ಚಾರ್ಯರು ಕೃಷ್ಣಲೀಲಾ ಚಿತ್ರದ ನಿರ್ವಹಣೆಯನ್ನು ಅರಸ್‌ರಿಗೆ ವಹಿಸಿದ್ದರು. ಕಾರಣ, ಇಬ್ಬರಿಗೂ ಮೈಸೂರು ಹೊಸತು, ಪರಿಚಯವಿರಲಿಲ್ಲ.

ಈ ಸಂದರ್ಭದಲ್ಲಿ ಸಿಕ್ಕ ಜ್ಞಾನವನ್ನೇ ಪಡೆದು ಚಿತ್ರ ನಿರ್ಮಾಪಕರಾದರು. ಅವರ ಯಶಸ್ವಿ ಚಿತ್ರ ರಾಜಾವಿಕ್ರಮಕ್ಕೆ ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ ಒದಗಿಸಿದ್ದರು.

Advertisements