ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು ಬೇಳೂರು ಸುದರ್ಶನ್, ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದ್ದಾರೆ.

2001 ರಲ್ಲೇ ಬಂದ ಈ ಸಿನೆಮಾದ ಬಗ್ಗೆ ನನಗೆ ಈಗಷ್ಟೇ ಹುಚ್ಚು ಹಿಡಿದಿದೆ. ಈ ಸಿನೆಮಾ ನೋಡಬೇಕೆಂದು ಬಯಸಿ ಬಯಸಿ ಎರಡು ವಾರಗಳ ಹಿಂದೆಯಷ್ಟೇ ಡಿವಿಡಿ ಸಂಗ್ರಹಿಸಿದೆ. ಆದರೆ ಎರಡು ತಿಂಗಳ ಹಿಂದೆ ಖರೀದಿಸಿದ ಸಿಲ್ವಿಯಾ ನಾಸರ್ ಬರೆದ ಎ ಬ್ಯೂಟಿಫುಲ್ ಮೈಂಡ್ ಪುಸ್ತಕವನ್ನು ನಾನು ಓದಿರಲಿಲ್ಲ. ಸರಿ, ಪುಸ್ತಕವನ್ನು ಓದಿದ ಮೇಲೆಯೇ ಸಿನೆಮಾ ನೋಡೋಣ. ಎಷ್ಟಂದ್ರೂ ಸಿನೆಮಾ ನೋಡೋದಕ್ಕೆ ಕೆಲ ತಾಸು ಸಾಕು. ಪುಸ್ತಕ ಓದೋದಕ್ಕೆ ನಿಜವಾಗ್ಯೂ ನನಗೆ ಎರಡು ವಾರ ಹಿಡೀತು. ಈ ಪುಸ್ತಕ, ಈ ಸಿನೆಮಾ, ಈ ಪುಸ್ತಕವನ್ನೇ ಆಧರಿಸಿದ ಇನ್ನೊಂದು ಡಾಕ್ಯುಮೆಂಟರಿ, ಈ ಸಿನೆಮಾದಲ್ಲಿರೋ ನೈಜ ಪಾತ್ರವಾದ ಜಾನ್ ನ್ಯಾಶ್‌ನನ್ನು ನೊಬೆಲ್ ಪ್ರಶಸ್ತಿ ವೆಬ್‌ಸೈಟಿನ ಪ್ರತಿನಿಧಿ ಭೇಟಿ ಮಾಡಿ ನಡೆಸಿದ ಸಂದರ್ಶನ ಎಲ್ಲವನ್ನೂ ಓದಿ, ನೋಡಿ ಈ ಲೇಖನ ಬರೆಯುತ್ತಿದ್ದೇನೆ.

ಹದಿನೈದು ದಿನ ಹೀಗೆ ಒದ್ದಾಡಿದಕ್ಕೆ ಕಾರಣವಿಷ್ಟೆ : ಜಾನ್ ಫೋರ್ಬಿಸ್ ನ್ಯಾಶ್ ಜ್ಯೂನಿಯರ್, ಮನುಕುಲ ಕಂಡ ಒಬ್ಬ ಮಹಾನ್ ಗಣಿತಜ್ಞ. ಅವನು ತನ್ನ 21ನೇ ವಯಸ್ಸಿನಲ್ಲಿ ಬರೆದ ಒಂದು ಸಿದ್ಧಾಂತಕ್ಕೆ 1994 ರಲ್ಲಿ ನೊಬೆಲ್ ಸ್ಮಾರಕ ಅರ್ಥಶಾಸ್ತ್ರ ಪ್ರಶಸ್ತಿ ಬಂತು ಎಂದರೆ ಯೋಚಿಸಿ…ಆತ 40 ವರ್ಷಗಳ ತನ್ನ ಅಧ್ಯಯನ ಕಾಲಾವಧಿಯಲ್ಲಿ ಬರೆದಿದ್ದೇ 23 ಪ್ರೌಢ ಪ್ರಬಂಧಗಳು. ಮನುಕುಲ ಕಂಡ ಇನ್ನಿತರೆ ಮಹಾನ್ ವಿಜ್ಞಾನಿಗಳಾದ ಐನ್‌ಸ್ಟೈನ್ ಎದುರೇ ವಾದ ಮಂಡಿಸಬಲ್ಲ ಛಾತಿ, ಓಪೆನ್‌ಹೈಮರ್‌ನಿಂದಲೇ ಉಚ್ಚ ಶಿಫಾರಸು ಪಡೆಯುವ ಅರ್ಹತೆ, ತನ್ನ ಕಾಲೇಜಿನ ಮುಖ್ಯಸ್ಥ ಬರೆದ ಪುಸ್ತಕವೇ ಮರೆಯಾಗಿ, 150 ವರ್ಷಗಳ ಅರ್ಥಶಾಸ್ತ್ರ ಸಿದ್ಧಾಂತಗಳೆಲ್ಲ ಬುಡಮೇಲಾಗುವಂತೆ ಮಾಡುವ ಸಾಮರ್ಥ್ಯ… ಜಾನ್ ನ್ಯಾಶ್‌ಗೆ ಮಾತ್ರ ಇತ್ತು. ಈಗಲೂ, 81ರ ಹರೆಯದಲ್ಲಿರುವ ನ್ಯಾಶ್ ಮನಸ್ಸು ಮಾಡಿದರೆ ಮತ್ತೊಂದಿಷ್ಟು ಥಿಯರಿಗಳು ಅಲ್ಲಾಡಬಹುದು ; ಜಗತ್ತು ತೆಪ್ಪಗೆ ಕೂತು ಅವನ ಸಿದ್ಧಾಂತಗಳನ್ನು ಅನುಸರಿಸಬಹುದು…

ಜಾನ್ ನಾಶ್
ಜಾನ್ ನಾಶ್

ಇಂಥ ಅದ್ಭುತ ಪ್ರತಿಭೆಯ ನ್ಯಾಶ್ ತನ್ನ ಮೂವತ್ತನೇ ವಯಸ್ಸಿನಿಂದ ಒಂಥರ ಮಾನಸಿಕ ವಿಸ್ಮರಣೆಗೆ ಒಳಗಾಗಿ, ಮುಂದಿನ 36 ವರ್ಷಗಳ ಕಾಲ ಏನೆಲ್ಲಾ ಪಾಡು ಪಟ್ಟು ಕೊನೆಗೂ ಔಷಧಗಳ ನೆರವಿಲ್ಲದೆ ತನ್ನನ್ನು ತಾನು ಸರಿಪಡಿಸಿಕೊಂಡು ಮೇಲೆದ್ದ ಕಥೆಯೇ ಎ ಬ್ಯೂಟಿಫುಲ್ ಮೈಂಡ್. ಐನೂರು ಪುಟಗಳಲ್ಲಿ ನ್ಯಾಶ್ ಬಗ್ಗೆ ಸಿಕ್ಕಿದ ಎಲ್ಲ ಮಾಹಿತಿಗಳನ್ನೂ ಯಾವ ಉತ್ಪ್ರೇಕ್ಷೆಯೂ ಇಲ್ಲದೆ ನಾಸರ್ ಬರೆದಿದ್ದು, ಅದು ಹಾಲಿವುಡ್ ಸಿನೆಮಾಗೆ ಪ್ರೇರಣೆಯಾಗಿದ್ದು ಎಲ್ಲವೂ ನಡೆದು ಎಂಟು ವರ್ಷಗಳೇ ಗತಿಸಿವೆ. ಈ ಸಿನೆಮಾ ಎಂಟು ಆಸ್ಕರ್‌ಗಳಿಗೆ ನಾಮಿನೇಟ್ ಆಗಿ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಒಂದು ಪುಸ್ತಕದ ಕಥೆ ಸಿನೆಮಾವಾದರೆ ಮೊದಲು ಪುಸ್ತಕವನ್ನು ಓದಿ ಆಮೇಲೆ ಸಿನೆಮಾ ನೋಡಬೇಕು ಅನ್ನೋದು ನನ್ನ ಥಿಯರಿ. ಯಾಕೆಂದರೆ ಮೊದಲು ರೂಪುಗೊಂಡಿದ್ದು ಪುಸ್ತಕ. ಸಾಮಾನ್ಯವಾಗಿ ಸಿನೆಮಾ ಎಂದರೆ ಪುಸ್ತಕದ ಕಥೆಯ ಅಡಾಪ್ಷನ್, ಮಾಡಿಫಿಕೇಶನ್, ಇನ್‌ಸ್ಪಿರೇಶನ್ ಇನ್ನೂ ಏನೇನೋ ಆಗಿರುತ್ತೆ.beluru copy 1

ಇಲ್ಲೂ ಹಾಗೇ ಆಗಿದೆ. ಪುಸ್ತಕದಲ್ಲಿ ನಾನು ಕಂಡ ಮುಗ್ಧ ಮತ್ತು ಬುದ್ಧಿವಂತ ನ್ಯಾಶ್ ಬೇರೆ. ಸಿನೆಮಾದಲ್ಲಿ ಸರಳೀಕರಿಸಿದ ವ್ಯಕ್ತಿತ್ವ ಮತ್ತು ಕಾಯಿಲೆಯೇ ಬೇರೆ. ಜಾನ್ ನ್ಯಾಶ್‌ಗೆ ಇದ್ದಿದ್ದು ಸ್ಕೀಝೋಫ್ರೇನಿಯಾ ಎಂಬ ವಿಚಿತ್ರ ಕಾಯಿಲೆ. ಅವನಿಗೆ ಯಾರ‍್ಯಾರೋ ಮಾತನಾಡಿದ್ದೆಲ್ಲ ಕೇಳಿಸುತ್ತಿತ್ತಂತೆ. ಆದರೆ ಸಿನೆಮಾದಲ್ಲಿ ಈ ಮಾತಾಡುವವರನ್ನೇ ನಿಜ ಪಾತ್ರಧಾರಿಗಳನ್ನಾಗಿ ಮಾಡಿ ಸಿಂಪ್ಲಿಫೈ ಮಾಡಿರೋದು ನನಗಂತೂ ಒಪ್ಪಿಗೆಯಾಗಲಿಲ್ಲ. ಇತ್ತೀಚೆಗೆ ಬಂದ ನಿಕೋಲಾಸ್ ಕೇಜ್‌ನ ನೋಯಿಂಗ್ ಸಿನೆಮಾದಲ್ಲಿ ಮಕ್ಕಳಿಗೆ ಯಾರೋ ಏನೋ ಹೇಳುವುದು ಕೇಳಿಸುತ್ತಿರುತ್ತೆ. ಅದನ್ನು ಚಿತ್ರೀಕರಿಸಿರುವ ರೀತಿಯನ್ನು ಗಮನಿಸಿದರೆ ಬ್ಯೂಟಿಫುಲ್ ಮೈಂಡ್‌ನಲ್ಲಿ ದೃಶ್ಯೀಕರಿಸಿರುವುದು ಸಪ್ಪೆ ಎನ್ನಿಸಿತು.

ಅದಿರಲಿ, ಸಿನಿಮಾವೇ ಬೇರೆ, ಕಥೆಯೇ ಬೇರೆ ಎಂಬುದೂ ಇಲ್ಲಿ ನಿಜ. ನ್ಯಾಶ್‌ನ ಕಥೆಗೂ ಸಿನೆಮಾದ ನಿರೂಪಣೆಗೂ ಸಾಮ್ಯವಿದೆ ಎಂದು ನಾಸರ್ ಹೇಳುವುದರಲ್ಲಿ ನನಗಂತೂ ನಂಬಿಕೆ ಬರಲಿಲ್ಲ. ನಿಜ ಕಥೆಯಲ್ಲಿ ಜಾನ್ ನ್ಯಾಶ್ ಮದುವೆಗೆ ಮುನ್ನ ಎಲೆನೇರ್ (1921-2005) ಎಂಬ ದಾದಿಯ ಜೊತೆ ಸಂಬಂಧ ಬೆಳೆಸಿ, ಮಗನೂ (ಡೇವಿಡ್ ಸ್ಟೀರ್) ಹುಟ್ಟಿರುತ್ತಾನೆ. (ಸಿನೆಮಾದಲ್ಲಿ ಈ ಕಥೆ ಇಲ್ಲ) ನ್ಯಾಶ್‌ನ ಪತ್ನಿ ಅಲೀಸಿಯಾ ಒಮ್ಮೆ ಅವನಿಗೆ ಡೈವೋರ್ಸ್ ಕೊಟ್ಟು ಆಮೇಲೆ 2001 ರಲ್ಲಿ ಮತ್ತೆ ಮದುವೆಯಾಗುತ್ತಾಳೆ. (ಸಿನೆಮಾದಲ್ಲಿ ಈ ಕಥೆ ಇಲ್ಲ) ಅಲೀಸಿಯಾ-ನ್ಯಾಶ್‌ರ ಮಗನಿಗೂ ನ್ಯಾಶ್ ಥರಾನೇ ಸ್ಕೀಝೋಫ್ರೇನಿಯಾ ಇರುತ್ತೆ. (ಸಿನೆಮಾದಲ್ಲಿ ಈ ಕಥೆ ಇಲ್ಲ) ನ್ಯಾಶ್ ನೊಬೆಲ್ ಪ್ರಶಸ್ತಿ ಬಂದಾಗ ಯಾವುದೇ ಭಾಷಣವನ್ನೂ ಮಾಡಲಿಲ್ಲ. (ಸಿನೆಮಾದಲ್ಲಿ ನ್ಯಾಶ್ ಭಾಷಣ ಮಾಡುತ್ತಾನೆ). ನ್ಯಾಶ್ ಎಂ ಐ ಟಿ ನಲ್ಲಿ ವೀಲರ್ ಲ್ಯಾಬೋರೇಟರಿ ಸೇರುತ್ತಾನೆ ಎಂಬ ಚಿತ್ರಣವಿದೆ. ಆದರೆ ಅಂಥ ಸಂಸ್ಥೆಯೇ ನಿಜವಾಗಿಯೂ ಇಲ್ಲ. ಅಲ್ಲದೆ ನ್ಯಾಶ್ ರ‍್ಯಾಂಡ್ (ರಿಸರ್ಚ್ ಎಂಡ್ ಡೆವೆಲಪ್‌ಮೆಂಟ್) ಎಂಬ ರಕ್ಷಣಾ ಸಂಶೋಧನೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾನೆ. ಆ ಬಗ್ಗೆ ಉಲ್ಲೇಖವೇ ಇಲ್ಲ.beautiful mind

ನ್ಯಾಶ್‌ಗೆ ಮಾನಸಿಕ ವಿಭ್ರಮೆ ಹೇಗೆ ಆವರಿಸುತ್ತದೆ ಎಂಬ ಚಿತ್ರಣವೂ ನನಗೆ ಹಾಸ್ಯಾಸ್ಪದ ಅನ್ನಿಸಿತು. ನಿಜ ಕಥೆಯಲ್ಲಿ ನ್ಯಾಶ್‌ಗೆ ನಿಧನಿಧಾನವಾಗಿ ಮನಸ್ಸಿನಲ್ಲೇ ಏನೋ ಅನ್ನಿಸುತ್ತದೆ. ಸಿನೆಮಾದಲ್ಲಿ ಆತ ಪೆಂಟಾಗನ್‌ನಲ್ಲಿ ಯಾವುದೋ ರಹಸ್ಯ ಸಂಕೇತವನ್ನು ಬಿಡಿಸಿದ ಮೇಲೆ ಇವೆಲ್ಲ ಶುರುವಾಯ್ತು ಅನ್ನೋ ವಿಲಕ್ಷಣ ಚಿತ್ರಣವಿದೆ.

ಮುಖ್ಯವಾಗಿ, ನ್ಯಾಶ್ ಹಲವಾರು ಸಲ ಮಾನಸಿಕ ಆಸ್ಪತ್ರೆಗೆ ಹೋಗಿ ಬಂದ ಮೇಲೆ, 1970ರ ನಂತರ ಯಾವುದೇ ಔಷಧವನ್ನೂ ಸೇವಿಸುವುದಿಲ್ಲ. ಸಿನೆಮಾದಲ್ಲಿ ಆತ ಔಷಧ ಸೇವಿಸ್ತಿದ್ದ ಅನ್ನೋ ಥರ ಬಿಂಬಿತವಾಗಿದೆ. ಔಷಧವೇ ಇಲ್ಲದೆ ಸುಧಾರಿಸಿಕೊಳ್ಳಬಹುದು ಅನ್ನೋ ಸಂದೇಶ ಕೊಟ್ರೆ ಈಗಿನ ರೋಗಿಗಳ ಮೇಲೆ ದುಷ್ಪರಿಣಾಮ ಆಗುತ್ತೆ ಅಂತ ಹೀಗೆ ಮಾಡಿದಾರಂತೆ…ಔಷಧಗಳ ರ‍್ಯಾಕೆಟ್ ಹೇಗೆ ಹಾಲಿವುಡ್ಡನ್ನೂ ಬಿಟ್ಟಿಲ್ಲ ನೋಡಿ….

ಅದಿರಲಿ, ಸಿನೆಮಾದಲ್ಲಿ ಯಾವ ಪಾತ್ರವೂ ಗಟ್ಟಿಯಾಗಿ ನಿಲ್ಲುವುದಿಲ್ಲ. ನ್ಯಾಶ್ ಪಾತ್ರ ವಹಿಸಿದ ರಸೆಲ್ ಕ್ರೋ ನಿಜಕ್ಕೂ ಪರಕಾಯ ಪ್ರವೇಶ ಮಾಡಿದ ಹಾಗೆ ನಟಿಸಿದ್ದಾನೆ. ನ್ಯಾಶ್‌ನ ನೈಜ ಪಾತ್ರವೇ ಎದುರಿಗಿದ್ದರೂ ಸಿನೆಮಾ ಯಾಕೆ ಹೀಗೆ ಸಿನಿಮೀಯವಾಯ್ತು ಅಂಬೋದೇ ಇಲ್ಲಿನ ಪ್ರಶ್ನೆ.

ಜಾನ್ ನ್ಯಾಶ್‌ನ ಗಣಿತದ ಪ್ರಬಂಧಗಳ ಬಗ್ಗೆಯೂ ಸಿನೆಮಾದಲ್ಲಿ ಸರಿಯಾದ ಚಿತ್ರಣವಿಲ್ಲ. ನ್ಯಾಶ್ ಈಕ್ವಿಲಿಬ್ರಿಯಂ ಎಂಬ ಪ್ರೌಢ ಪ್ರಬಂಧದ ಕೆಲ ಪುಟಗಳ ಮೇಲಾದರೂ ಕ್ಯಾಮೆರಾ ಪ್ಯಾನ್ ಮಾಡಬಹುದಾಗಿತ್ತು. ಅಥವಾ ಫಾರ್ಚುನ್ ಮ್ಯಾಗಜಿನ್‌ನಲ್ಲಿ ನ್ಯಾಶ್ ಮೇಧಾವಿ ಗಣಿತಜ್ಞ ಎಂದು ಬರೆದಿದ್ದನ್ನು ತೋರಿಸಬಹುದಿತ್ತು. ಹಾಗೆ ತೋರಿಸಿದರೆ ಡಾಕ್ಯಮೆಂಟರಿಯಾಗೋ ಭಯ ಬಂತೋ ಏನೋ…ನಮಗೆ ನ್ಯಾಶ್‌ನ ಥಿಯರಿ ಅರ್ಥವಾಗುವುದೂ ಇಲ್ಲ ಬಿಡಿ. ಆದರೆ ಅದೊಂದು ಸಂಕೀರ್ಣ ಪ್ರಬಂಧ ಎಂದು ಚಿತ್ರೀಕರಿಸೋದ್ರಲ್ಲಿ ಯಾವ ತಪ್ಪೂ ಇರಲಿಲ್ಲ.

ನ್ಯಾಶ್ ಬದುಕಿನಲ್ಲಿ ಬಂದ ಎಲೆನೇರ್ ಮತ್ತು ನ್ಯಾಶ್ ಇವರಿಬ್ಬರ ಕಥೆಗಳೇ ನ್ಯಾಶ್‌ನ ಮಾನಸಿಕತೆಯನ್ನು ಬಿಂಬಿಸುವ ಗಟ್ಟಿ ದೃಶ್ಯಗಳಾಗುತ್ತಿದ್ದವು. ನ್ಯಾಶ್‌ನ ತಾಯಿ ವರ್ಜೀನಿಯಾ, ತಂಗಿ ಮಾರ್ಥಾ, ಸಹೋದ್ಯೋಗಿಗಳು, – ಹೀಗೆ ಮೆಗಾ ಸಿನೆಮಾದ ಎಲ್ಲ ಪಾತ್ರಗಳು, ಘಟನೆಗಳು, ಸನ್ನಿವೇಶಗಳು ಇಲ್ಲಿದ್ದವು. ನ್ಯಾಶ್‌ನ ಮನಸ್ಥಿತಿಯನ್ನು ಬಿಂಬಿಸುವ ಅನೇಕ ವಿಚಿತ್ರ ಘಟನೆಗಳನ್ನು ನಾಸರ್ ತನ್ನ ಪುಸ್ತಕದಲ್ಲಿ ಸಿನೆಮಾಗಿಂತ ಪ್ರಭಾವಿಯಾಗಿ ಕಟ್ಟಿಕೊಟ್ಟಿದ್ದಾಳೆ. ಆದರೆ ಅವಳೇ ಎಂಡಾರ್ಸ್ ಮಾಡೋ ಈ ಸಿನೆಮಾದಲ್ಲಿ ಇಂಥ ಉದಾಹರಣೆಗಳಾವುವೂ ಇಲ್ಲ.

ಒಂದು ಸಲ ನ್ಯಾಶ್ ರೂಮಿನ ಸ್ವಿಚ್ ಹಾಕಲು ಸಹಪಾಠಿಯ ದೇಹದ ಮೇಲೇ ನಡೆದುಹೋಗಿದ್ದನಂತೆ. ನೋಡಿ, ಈ ಪುಟ್ಟ ಘಟನೆಯ ಚಿತ್ರೀಕರಣ ಚೆನ್ನಾಗಿರ‍್ತಾ ಇರಲಿಲ್ವೆ?
ಕೆನಡಿ ಮತ್ತು ಕ್ರುಶ್ಚೇವ್ ಹೆಸರಿನಲ್ಲಿ ಒಂದು ಸಾಮಾನ್ಯ ಅಂಶ ಇದೆ. ಅದೇನು ಗೊತ್ತಾ? ನ್ಯಾಶ್ ಕೇಳುತ್ತಾನೆ. ಕೊನೆಗೆ ಅವನೇ ಉತ್ತರ ಕೊಡುತ್ತಾನೆ : ಎರಡೂ ಹೆಸರು ಕೆ ಅಕ್ಷರದಿಂದ ಶುರುವಾಗುತ್ತವೆ!
ಒಂದು ಸಲ ಗೆಳೆಯನ ಮನೆಗೆ ಹೋದ ನ್ಯಾಶ್ ಚಹಾಗೆ ಪೆಪ್ಪರ್ ಹಾಕಿಕೊಳ್ಳುತ್ತಾನೆ. ಆಮೇಲೆ ಚಹಾ ತುಂಬಾ ಕೆಟ್ಟದಾಗಿದೆ ಅಂತ ಕಾಮೆಂಟ್ ಮಾಡುತ್ತಾನೆ.

ನ್ಯಾಶ್ ನಿಜವಾಗಿಯೂ ಅಮೆರಿಕಾದಿಂದ ತಪ್ಪಿಸಿಕೊಳ್ಳುವುದಕ್ಕೆ ಯೂರೋಪಿಗೆ ಪ್ರವಾಸ ಮಾಡುತ್ತಾನೆ. ಅಲ್ಲಿ ಹಲವು ದೇಶಗಳನ್ನು ಸುತ್ತುತ್ತಾನೆ. ಯಾರ ಜೊತೆಗೋ ಇರುತ್ತಾನೆ. ಕೊನೆಗೆ ತಾಯಿ ಊರಿನಲ್ಲಿ ದಿನ ಕಳೆಯುವಾಗ ಮನಸ್ಸಿನಲ್ಲೇ ಇಡೀ ಜಗತ್ತನ್ನು ಸುತ್ತುತ್ತಾನೆ. ಅವನ ಮನಸ್ಸಿನಲ್ಲಿ ಸಮುರಾಯ್, ದೆವ್ವಗಳು, ಪ್ರವಾದಿಗಳು, ನಾಝಿಗಳು, ಅರ್ಚಕರು, ನ್ಯಾಯವಾದಿಗಳು, ನೆಪೋಲಿಯನ್, ಇಬ್ಲಿಸ್, ಮೋರಾ, ಸತಾನ್, ಪ್ಲಾಟಿನಂ ಮನುಷ್ಯ, ಟೈಟಾನ್, ನ್ಯಾಹಿಪೋಟ್ಲೀರೂನ್, ಅರ್ಮಗೆಡಾನ್, ಮೇ 29 ಎಲ್ಲವೂ ಬರುತ್ತವೆ. ಎಂಥ ಕೊಲ್ಯಾಜ್ ಚಿತ್ರೀಕರಣ ಇಲ್ಲಿ ಸಾಧ್ಯವಿತ್ತಲ್ಲವೆ ?

ಹಿರೋನಕಾಗೆ ಫೀಲ್ಡ್ಸ್ ಬಹುಮಾನ (ತನಗೆ ಈ ಬಹುಮಾನ ಬರಲೇ ಇಲ್ಲ ಎಂದು ನ್ಯಾಶ್‌ಗೆ ತೀವ್ರ ಬೇಸರವಾಗಿತ್ತು) ಬಂದಾಗ, ಪ್ರಿನ್ಸ್‌ಟನ್ ಕಾಲೇಜಿನಲ್ಲೇ ಭೂತದಂತೆ ತಿರುಗಾಡುತ್ತಿದ್ದ ನ್ಯಾಶ್ ಕಪ್ಪುಹಲಗೆಗಳ ಮೇಲೆ ಹಿರೋನಕಾಗೆ ಅನೇಕ ಗಣಿತದ ಪ್ರಶ್ನೆಗಳನ್ನು ಕೇಳುತ್ತಾನೆ. ಮಾನಸಿಕ ಅಸ್ವಸ್ಥತೆಯ ನಡುವೆಯೂ ನ್ಯಾಶ್ ತನ್ನ ಬುದ್ಧಿಮತ್ತೆಯನ್ನು ಮರೆತಿರುವುದಿಲ್ಲ.

ಇಂಟರ್‌ನೆಟ್ ಕಾಲಕ್ಕೆ ಮತ್ತೆ ತನ್ನ ಸಹಜ ವ್ಯಕ್ತಿತ್ವವನ್ನು ಪಡೆದ ನ್ಯಾಶ್ ಇಮೇಲ್ ಮೂಲಕ ಇತರೆ ಗಣಿತಜ್ಞರ ಗಮನ ಸೆಳೆಯುತ್ತಾನೆ. ಮೂರು ದಶಕಗಳ ಕಾಲ ಮೈಮರೆತಿದ್ದ ನ್ಯಾಶ್ ಮತ್ತೆ ತನ್ನತನವನ್ನು ತೋರಿಸಿದ್ದು, ಕಂಪ್ಯೂಟರನ್ನು ಕಲಿತು ಅದರಲ್ಲಿ ತನ್ನೆಲ್ಲ ಸಂಶೋಧನೆಗಳನ್ನು ಸದಾ ಒರೆಗೆ ಹಚ್ಚುತ್ತಿದ್ದುದು …ಇವೆಲ್ಲ ಸಿನೆಮಾ ಆಗಬಾರದಂಥ ದೃಶ್ಯಗಳೇ?

ಇಂಥ ಎಷ್ಟೋ ಸನ್ನಿವೇಶಗಳನ್ನು ಪುಸ್ತಕದಲ್ಲಿ ಓದಿ ನಾನೇ ಒಮ್ಮೆ ಅರೆ, ಬದುಕಿನಲ್ಲಿ ಇಂಥ ವ್ಯಕ್ತಿತ್ವವೂ ಇರಲು ಸಾಧ್ಯವೇ ಅಂತ ಅಚ್ಚರಿಪಟ್ಟೆ. ಆದರೆ ಇವನ್ನು ನಾನು ಸಿನೆಮಾದಲ್ಲಿ ಕಾಣಲಿಲ್ಲ. ವಾಸ್ತವ ಯಾವಾಗಲೂ ಫಿಕ್ಷನ್‌ಗಿಂತ ಭೀಕರವಾಗಿರುತ್ತೆ ಅಂತ ನಾನು ಹಿಂದೆಲ್ಲೋ ಹೇಳಿದ್ದೆ. ಈ ಸಿನೆಮಾ ನನ್ನ ಮಾತನ್ನು ಸಾಬೀತುಪಡಿಸಿದೆ. ಪುಸ್ತಕದಲ್ಲಿ ಮೊದಮೊದಲು ಕೇವಲ ದಾಖಲೀಕರಣದಂತೆ ಕಾಣುವ ಸಂಗತಿಗಳು ಬರಬರುತ್ತ ಎಮೋಶನಲ್ ಆಗುತ್ತವೆ. ಆದರೆ ಸಿನೆಮಾದಲ್ಲಿ ಇವೆಲ್ಲ ಇಲ್ಲ. ಬರೀ ಸಿನೆಮಾ ನೋಡಿದವರಿಗೆ ಒಂಥರ ಚೆನ್ನಾಗಿದೆ ಎಂಬ ಭಾವ ಮೂಡಬಹುದು. ಅದನ್ನು ನಾನು ಅಲ್ಲಗಳೆಯಲಾರೆ.

ಸರಿ, ಸಿನೆಮಾ ಹೀಗಿದೆಯಲ್ಲ ಅಂತ ನಾನು ದಿ ಅಮೆರಿಕನ್ ಎಕ್ಸ್‌ಪೀರಿಯೆನ್ಸ್: ಎ ಬ್ರಿಲಿಯೆಂಟ್ ಮ್ಯಾಡ್‌ನೆಸ್ ಎಂಬ ಡಾಕ್ಯುಮೆಂಟರಿಯನ್ನು ಹುಡುಕಿ (ಡಬ್ಲ್ಯು ಜಿ ಬಿ ಎಚ್ ಎಜ್ಯುಕೇಶನಲ್ ಫೌಂಡೇಶನ್ ನಿರ್ಮಾಣ) ನೋಡಿದೆ. ಇದರಲ್ಲಿ ಪುಸ್ತಕದಲ್ಲಿ ಇರುವ ಸಂಗತಿಗಳು ಹೆಚ್ಚುಕಡಿಮೆ ಇವೆ. ವಾಸ್ತವಕ್ಕೆ ಅತೀ ಹತ್ತಿರವಾಗಿದೆ. ತನ್ನ ಮಗನಿಗೂ ತನಗಿರೋ ರೋಗವೇ ಇದೆ ಎಂದು ನ್ಯಾಶ್ ಇದರಲ್ಲಿ ಒಪ್ಪಿಕೊಂಡಿದ್ದಾನೆ. ಎಲನೇರ್‌ಳ ಮಗ ಡೇವಿಡ್ ಸ್ಟೀರ್‌ನ ಭಾವುಕ ಮಾತುಗಳ ನ್ನೂ ಇಲ್ಲಿ ನೀವು ಕೇಳಬಹುದು. ಡೇವಿಡ್‌ನನ್ನು ಎತ್ತಿ ಹಿಡಿದುಕೊಂಡ ನ್ಯಾಶ್‌ನ ಚಿತ್ರವೂ, ನ್ಯಾಶ್ ಈಕ್ವಿಲಿಬ್ರಿಯಂ ಸೇರಿದಂತೆ ಹಲವು ಪ್ರಬಂಧಗಳ ಪುಟಗಳ ಚಿತ್ರಣವೂ ಇಲ್ಲಿದೆ. ನ್ಯಾಶ್‌ನ ಕಥೆಯನ್ನು ಪುಸ್ತಕವಾಗಿ ಬರೆದ ನಾಸರ್, ನ್ಯಾಶ್‌ನ ತಂಗಿ ಮಾರ್ಥಾ, ನ್ಯಾಶ್‌ನನ್ನು ಕಂಡ ಗಣಿತಜ್ಞ ನ್ಯೂಮನ್,-ಹೀಗೆ ಹಲವರ ನೈಜ ಸಂದರ್ಶನದಿಂದ ಈ ಸಾಕ್ಷ್ಯಚಿತ್ರ ಕಳೆಗಟ್ಟಿದೆ.

ನೊಬೆಲ್‌ಪ್ರೈಜ್ ವೆಬ್‌ಸೈಟಿನಲ್ಲಿ ನ್ಯಾಶ್‌ನ ಸಂದರ್ಶನವಿದೆ. ಅದನ್ನೂ ನೀವು ನೋಡಿ. ನ್ಯಾಶ್ ತನ್ನ ಯೌವ್ವನದ ಕಾಲದಲ್ಲಿ ಎಂಥ ಮುಗ್ಧ ಸ್ವಭಾವದವನು, ಅವನ ಮಾತಿನಲ್ಲಿ ಎಂಥ ವಿನಯವಂತಿಕೆ ಇದೆ, ಅವನೆಂಥ ಸಜ್ಜನ ಸಹೃದಯಿ ಎಂಬುದು ಅವನ ಸರಳ ವಾಕ್ಕುಗಳಿಂದಲೇ ತಿಳಿಯುತ್ತದೆ. ಈ ಸಂದರ್ಶನವನ್ನು ನೋಡುವುದೇ ಖುಷಿ. ಯಾಕೆಂದರೆ ಅವನು ಹೇಳುವ ಥಿಯರಿಗಳು ನಮಗೆ ಈಗಲೂ ಅರ್ಥವಾಗುವುದು ಕಷ್ಟ.

ಕಾದಂಬರಿಯ ಮುಖಪುಟ
ಕಾದಂಬರಿಯ ಮುಖಪುಟ

ಏನೇ ಇರಲಿ, ನ್ಯಾಶ್‌ನ ಬದುಕಿನ ಪುಟಗಳನ್ನು ಅರಿಯುವುದಕ್ಕೆ ನನಗೆ ಪ್ರೇರೇಪಿಸಿದ ಸಿನೆಮಾಗೆ ಥ್ಯಾಂಕ್ಸ್ ಹೇಳಲೇಬೇಕು, ಸಿನೆಮಾ ಆಗದಿದ್ದರೆ ಪುಸ್ತಕ ಓದುತ್ತಿರಲಿಲ್ಲ ! ಡಾಕ್ಯುಮೆಂಟರಿಯನ್ನೂ ಹುಡುಕ್ತಾ ಇರಲಿಲ್ಲ. ಅವನ ಗಣಿತದ ಸಂಶೋಧನೆ ಯ ಶೀರ್ಷಿಕೆಯೂ ನನಗೆ ಗೊತ್ತಾಗ್ತಾ ಇರಲಿಲ್ಲ.

ಎಷ್ಟೋ ಪುಸ್ತಕಗಳನ್ನು ಆಧರಿಸಿದ ಸಿನೆಮಾಗಳು ಬಂದಿವೆ; ಆದರೆ ಅತ್ಯಂತ ಉತ್ಕೃಷ್ಟ ಮತ್ತು ದೃಶ್ಯ ವೈಭವ (ರಿಚ್ ವಿಜುಯಲೈಸೇಶನ್) ಮೂಲಕ ಒಂದು ಗ್ರೇಟ್ ಸಿನೆಮಾ ಆಗಬಹುದಾಗಿದ್ದ ಪುಸ್ತಕವನ್ನು ಕೆಲವು ಸ್ಪೆಶಲ್ ಎಫೆಕ್ಟ್‌ಗಳ ಕ್ಷುದ್ರ ಚಿತ್ರೀಕರಣಕ್ಕೆ ಸೀಮಿತವಾಗಿಸಿದ್ದು ಬೇಸರ ತಂದಿದೆ. ಆದರೆ ಪುಸ್ತಕವನ್ನು ಸಾಲು ಸಾಲು ಬಿಡದೆ ಓದಿದ ನನ್ನೊಳಗೆ ಈ ರಮ್ಯ, ರುದ್ರ, ಭಾವುಕ ಸಿನೆಮಾ ಗಟ್ಟಿಯಾಗಿ ನಿರ್ಮಾಣಗೊಂಡಿದೆ. ಎದೆಯೊಳಗೆ ಭದ್ರವಾಗಿ ಕೂತ ನ್ಯಾಶ್‌ನ ಈ ಕಥೆ ಸದ್ಯ ನನ್ನಿಂದ ಮರೆಯಾಗುವುದಿಲ್ಲ.

ನ್ಯಾಶ್ ಹತ್ತು ನೊಬೆಲ್‌ಗಳಿಗೆ ಅರ್ಹ. ಅವನ ಸಿನೆಮಾ ಹತ್ತಾರು ಆಸ್ಕರ್‌ಗಳಿಗೆ ಅರ್ಹ. ಈ ಎರಡೂ ಸಾಧ್ಯತೆಗಳು ನಿಜವಾಗಲಿಲ್ಲ.

Advertisements