ಕನ್ನಡ ಚಿತ್ರರಂಗದ ಹಲವು ಪ್ರಥಮಗಳ ಬಗ್ಗೆ ಸಂಗ್ರಹಿತ ಲೇಖನವಿದು.

ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಇತ್ತೀಚೆಗಷ್ಟೇ ಜರುಗಿತು. ಅದಾಗಲಿಲ್ಲ, ಇದಾಗಲಿಲ್ಲ. ಅದೂ ಆಗುತ್ತದೆ, ಇದೂ ಆಗುತ್ತದೆ…ಎಂದು ಅವರಿವರ ಹೇಳಿಕೆ-ಸ್ಪಷ್ಟನೆ ಮಧ್ಯೆ ಮಹೋತ್ಸವ ಜರುಗಿ ಹೋದದ್ದು ಗೊತ್ತಾಗಲಿಲ್ಲ.

ಚಿತ್ರರಂಗದ ನೇಪಥ್ಯಕ್ಕೆ ಸರಿದರೆ ಅದು ಸಾಗಿ ಬಂದ ಹೆಜ್ಜೆಗಳೆಲ್ಲಾ ಹೊಳೆಯುತ್ತವೆ. ಹೀಗೇ ಕುಳಿತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ. ಇದು ಸಮಗ್ರವೂ ಅಲ್ಲ ; ಚಿಕ್ಕದೊಂದು ನೋಟವಷ್ಟೇ.

ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನ’ (ವಾಕ್ಚಿತ್ರ) ಬಿಡುಗಡೆಯಾದದ್ದು 1934 ರ ಮಾರ್ಚ್ 3 ರಂದು. ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಚೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ. ನಿರ್ದೇಶನ : ಯರಗುಡಿಪಟಿ ವರದಾ ರಾವ್, ಕಥೆ : ಬೆಳ್ಳಾವೆ ನರಹರಿಶಾಸ್ತ್ರಿ, ತಾರಾಗಣ : ಆರ್. ನಾಗೇಂದ್ರರಾವ್, ಸುಬ್ಬಯ್ಯನಾಯ್ಡು, ಇಂದುಬಾಲಾ ಇತ್ಯಾದಿ, ನಿರ್ಮಾಪಕ : ಚಮನ್ ಲಾಲ್ ದೂಂಗಾಜಿ, ಸಂಗೀತ : ಆರ್. ನಾಗೇಂದ್ರರಾವ್, ನರಹರಿ ಶಾಸ್ತ್ರಿ. 170 ನಿಮಿಷದ ಚಿತ್ರ, 40 ಸಾವಿರ ವೆಚ್ಚ.

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಬಳಿಯಿದ್ದ ಈಗಿನ ಪರಿಮಳಾ ಚಿತ್ರಮಂದಿರ ( ಆಗ ಪ್ಯಾರಾಮೌಂಟ್ ಥಿಯೇಟರ್)ದಲ್ಲಿ ಬಿಡುಗಡೆ. ಆರು ವಾರಗಳ ಕಾಲ ಫುಲ್ ಹೌಸ್. ಹಾಗೆಯೇ ಕನ್ನಡದ ಮೊದಲ ನಾಯಕ ಸುಬ್ಬಯ್ಯ ನಾಯ್ಡು. ಆ ಚಿತ್ರ ಮಂದಿರವೇ ಕರ್ನಾಟಕದ ಮೊದಲ ಚಿತ್ರ ಮಂದಿರ.

1938 ರಿಂದ 1940 ರವರೆಗೆ ಯಾರೂ ಚಿತ್ರಗಳನ್ನೇ ನಿರ್ಮಿಸಿರಲಿಲ್ಲ. ಎರಡನೇ ಜಾಗತಿಕ ಮಹಾ ಯುದ್ಧದ ಸಂದರ್ಭದಲ್ಲಿ ಬೇರೆ ರಾಜ್ಯಗಳಂತೆ ನಮ್ಮಲ್ಲೂ ಯಾವುದೇ ಸಿನಿಮಾಗಳನ್ನು ನಿರ್ಮಿಸಲಿಲ್ಲ. ಎಲ್ಲವೂ ಬಂದ್ ಆಗಿತ್ತು. ಎಂ.ವಿ. ರಾಜಮ್ಮ ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮಾಪಕಿ.
b
“ಗೆಜ್ಜೆಪೂಜೆ’ ಯ ಚಿತ್ರಕಥೆಗೆ ಪುಟ್ಟಣ್ಣ ಕಣಗಾಲ್ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಹಾಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಮೊದಲಿಗರು. 1944 ಹಾಗೂ 1946 ರಲ್ಲೂ ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ.

1951 ರಲ್ಲಿ ಬಿಡುಗಡೆಯಾದ “ಜಗನ್ಮೋಹಿನಿ’ ಮೊದಲ ಶತದಿನೋತ್ಸವ ಆಚರಿಸಿದ ಚಿತ್ರ. 1954 ಮರೆಯಲಾರದ ವರ್ಷ. ಕಾರಣ, ವರನಟ ಡಾ. ರಾಜಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಅದೇ ವರ್ಷ. ಎಚ್.ಎಲ್.ಎನ್. ಸಿಂಹ ಅವರನ್ನು ಕರೆ ತಂದದ್ದು. ರಾಜ್‌ಕುಮಾರ್ ಅಭಿನಯಿಸಿದ “ಬೇಡರ ಕಣ್ಣಪ್ಪ’ 1955 ರಲ್ಲಿ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿತ್ರ ಪ್ರಶಸ್ತಿ ನಡೆಯಿತು.

ಆದರೂ ವರ್ಣರಂಜಿತ ಅಧ್ಯಾಯ ಆರಂಭವಾಗಿದ್ದು 1954 ರಲ್ಲಿ. ಸ್ತ್ರೀ ರತ್ನ ಚಿತ್ರದಲ್ಲಿ ಮೊದಲೆರು ರೀಲುಗಳು ವರ್ಣದಲ್ಲಿದ್ದವಂತೆ. ಆ ಲೆಕ್ಕದಲ್ಲಿ ಸಂಪೂರ್ಣ ವರ್ಣದಲ್ಲಿ ಬಿಡುಗಡೆಯಾದ ಮೊದಲ ಚಿತ್ರ “ಅಮರಶಿಲ್ಪಿ ಜಕಣಾಚಾರಿ’. ಹಾಗೆಯೇ ಮೊದಲ ಸಿನಿಮಾ ಸ್ಕೋಪ್ ಚಿತ್ರ “ಸೊಸೆ ತಂದ ಸೌಭಾಗ್ಯ’. “ಅಧಿಕಾರಿ’ ಮೊದಲ ಡಬ್ಬಿಂಗ್ ಚಿತ್ರ ಸಹ.

ಡಾ. ರಾಜ್‌ಕುಮಾರ್, ಜಿ. ವಿ. ಅಯ್ಯರ್, ಬಾಲಕೃಷ್ಣ ಹಾಗೂ ನರಸಿಂಹ ರಾಜು ಅವರ ನೇತೃತ್ವದಲ್ಲಿ ಸ್ಥಾಪನೆಯಾದದ್ದು ಚಲನಚಿತ್ರ ಸಹಕಾರಿ ಫೆಡರೇಷನ್. ಈ ಮೂಲಕ ರೂಪಿಸಿದ ಮೊದಲ ಚಿತ್ರ “ರಣಧೀರ ಕಂಠೀರವ’. ಬಹಳ ಯಶಸ್ವಿಯಾದ ಚಿತ್ರ. ಕರ್ನಾಟಕ ಚಲನಚಿತ್ರ ರಂಗವೇ ಮೊದಲ ಬಾರಿಗೆ ಸಮಕಾಲೀನ ಸಂಗತಿಗಳ ಕುರಿತು ಚಿತ್ರ ರೂಪಿಸಿದ ಹೆಗ್ಗಳಿಕೆಗೆ ಪಾತ್ರ.

ಗೆಜ್ಜೆ ಪೂಜೆ, ಶರಪಂಜರ, ಚಕ್ರತೀರ್ಥ, ಸಂಸ್ಕಾರ, ಉಯ್ಯಾಲೆ, ಸುಬ್ಬಾಶಾಸ್ತ್ರಿ ಇವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಕೀರ್ತಿಗೆ ಭಾಜನವಾದವು.

“ಒಂದಾನೊಂದು ಕಾಲದಲ್ಲಿ’ಯ ನಟನೆಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದವರು ಶಂಕರನಾಗ್. ವಾಸುದೇವರಾವ್ “ಚೋಮನದುಡಿ’ ಚಿತ್ರದ ಪಾತ್ರಕ್ಕಾಗಿ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲಿಗರು. ಎರಡು ವರ್ಷ ನಿರಂತರವಾಗಿ ನಡೆದ ಮೊದಲ ಚಿತ್ರವೆಂದರೆ “ಬಂಗಾರದ ಮನುಷ್ಯ’. ಅದರಲ್ಲಿ ರಾಜ್‌ಕುಮಾರ್, ಭಾರತಿ ನಾಯಕ-ನಾಯಕಿ. ಸಿದ್ದಲಿಂಗಯ್ಯ ನಿರ್ದೇಶನ. ಜನ ಸಮೂಹದ ಮೇಲೆ ಅತ್ಯಂತ ಪ್ರಭಾವಬೀರಿದ ಚಿತ್ರ. ಹೀಗೆಯೇ ಮೊದಲ ಕಾದಂಬರಿ ಆಧರಿತ ಚಿತ್ರ “ಕರುಣೆಯೇ ಕುಟುಂಬದ ಕಣ್ಣು’. ಬಹುಶಃ ಸತ್ಯ ಹರಿಶ್ಚಂದ್ರ ಮೂರು ಆವೃತ್ತಿಗಳಲ್ಲಿ (ಮೂರು ಬಾರಿ ನಾಯಕ, ನಾಯಕಿ ಬೇರೆ) ಮೂಡಿಬಂದ ಚಿತ್ರ.

ಕೇವಲ ಎರಡೇ ಪಾತ್ರಗಳಲ್ಲಿ ಪೂರೈಸಿದ ಚಿತ್ರ “ಶೃಂಗಾರ ಮಾಸ’. ವಿದೇಶಗಳಲ್ಲಿ ಮೊದಲ ಬಾರಿಗೆ ಚಿತ್ರೀಕರಿಸಿದ ಚಿತ್ರ “ಸಿಂಗಾಪೂರ್ ನಲ್ಲಿ ರಾಜಾಕುಳ್ಳ’. ಮೈಸೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಾಫಿ ಕೋರ್ಸ್ ಆರಂಭವಾಯಿತಂತೆ.

ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿದ ಫಿಲ್ಮ್ ಯಾವುದು ಗೊತ್ತೇ ? “ಸಂಗೊಳ್ಳಿ ರಾಯಣ್ಣ’, ಹಾಡು- “ಬೆಳ್ಳನೆ ಬೆಳಗಾಯಿತು’. ಅದರಂತೆಯೇ ಮಹಮ್ಮದ್ ರಫಿ ಹಾಡಿದ “ನೀನೆಲ್ಲಿ ನಡೆವೆ ದೂರ’ ಹಾಗೂ ಕಿಶೋರ್ ಕುಮಾರ್ ಹಾಡಿದ “ಆಡು..ಆಟ ಆಡು’ ಹಾಡುಗಳು.

ರಾಷ್ಟ್ರಪತಿ ಸ್ವರ್ಣ ಪದಕ ಪಡೆದ ಮೊದಲ ಚಿತ್ರ “ಸಂಸ್ಕಾರ’. ಜತೆಗೆ ಕನ್ನಡ ಚಿತ್ರಗಳಿಗೆ ಶೇ. 100 ರಷ್ಟು ರಿಯಾಯಿತಿ ಘೋಷಿಸಿದ ಸರಕಾರವೂ ಕರ್ನಾಟಕದ್ದೇ.