ಈ ಅಂಕಣದ ಹೆಸರೇ “ನಿಮ್ಮದೇ ಅಂಕಣ”. ಸಿನಿಮಾ, ಸಿನಿಮಾದ ಬಗೆಗಿನ ಅನುಭವ, ಸಿನಿಮಾ ಗ್ರಹಿಕೆ ಕುರಿತ ಅನಿಸಿಕೆ-ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಅತಿಥಿ ಅಂಕಣ. ಪ್ರತಿ ಬುಧವಾರ ಪ್ರಕಟವಾಗುವ ಈ ಅಂಕಣಕ್ಕೆ ಎಲ್ಲರಿಗೂ ಮುಕ್ತ-ಮುಕ್ತ-ಮುಕ್ತ. ನಿಮ್ಮ ಲೇಖನಗಳನ್ನು saangatya@gmail.com ಗೆ ಕಳಿಸಿ. ಅಂದ ಹಾಗೆ ಈ ವಾರ ಅತಿಥಿಯೊಬ್ಬರು ಬರೆದ ಲೇಖನ ಪ್ರಕಟಿಸಲಾಗಿದೆ.

ಒಂದು ಚಿತ್ರ ನೋಡುವುದೆಂದರೆ ಹೇಗೆ ? ಯಾವ ರೀತಿ?
ಈ ಪ್ರಶ್ನೆಯನ್ನು ಇಟ್ಟುಕೊಂಡು ಹಲವು ದಿನಗಳಿಂದ ಉತ್ತರ ಹುಡುಕುತ್ತಿದ್ದೇನೆ. ನನಗೆ ಚಿತ್ರ ನೋಡುವ ಹುಚ್ಚು ಶುರುವಾಗಿದ್ದು ಇತ್ತೀಚೆಗೆ ಅಂದರೆ ನಾಲ್ಕೈದು ವರ್ಷಗಳಿಂದ. ಎಲ್ಲೋ ನೋಡಿದ ಒಂದು ಸಿನಿಮಾ (ಅದರ ಹಿಂದೆ ನೋಡುತ್ತಿಲ್ಲ ಎಂದಲ್ಲ ; ಸಿನಿಮಾ ಅರ್ಥವಾಗುತ್ತಿರಲಿಲ್ಲವೇನೋ) ನನ್ನನ್ನು ತೀವ್ರವಾಗಿ ಕಾಡಿಸಿತು. ಅದೆಂದರೆ “ಚಿಲ್ಡ್ರನ್ ಆಫ್ ಹೆವನ್’.

ಕ್ರಮೇಣ ನಾನು ಸಿನಿಮಾದೊಳಗಿನ ವರ್ತುಲಕ್ಕೆ ಸಿಲುಕಿದೆ. ಆದರೆ, ಅಂದಿನಿಂದ ಆರಂಭವಾದ ಈ ಚಿತ್ರ ಭಾಷೆಯನ್ನು ಅರಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆದೇ ಇದೆ, ನಿಂತಿಲ್ಲ.

ಚಿತ್ರ : ಪ್ರವೀಣ್ ಬಣಗಿ
ಚಿತ್ರ : ಪ್ರವೀಣ್ ಬಣಗಿ

ನನ್ನ ಅನುಮಾನ ಆರಂಭವಾಗುವುದು ಇಲ್ಲೇ. ಒಂದು ಸಿನಿಮಾದೊಳಗೆ ನಾನು ಪೂರ್ವಸಜ್ಜಿತನಾಗಿ ಒಳಗೊಳ್ಳಬೇಕೋ ? ಅಥವಾ ಆ ಸಿನಿಮಾವೇ ನಮ್ಮೊಳಗೆ ಇಣುಕುತ್ತದೋ ಎಂಬುದು. ಈ ಮಾತು ಹೇಳಲಿಕ್ಕೆ ನನ್ನೊಳಗಿನ ಅನುಮಾನವೇ ಕಾರಣ. ಎಷ್ಟೋ ಬಾರಿ, ಹೊಸದಾಗಿ ತಂದ ಡಿವಿಡಿ ಗಳನ್ನು ನೋಡುವ ಮುನ್ನ ಇಂಟರ್ ನೆಟ್‌ನಲ್ಲಿ ಅ ಬಗೆಗಿನ ಮಾಹಿತಿಗಳನ್ನೆಲ್ಲಾ ಓದಿ ಸಿನಿಮಾ ನೋಡುವುದು ನನ್ನ ಚಾಳಿಯಾಗಿತ್ತು. ಅದೊಂದು ಥರ ಪೂರ್ವ ಸಿದ್ಧತೆ. ಆಗ ಸಿನಿಮಾ ಹೆಚ್ಚು ಅರ್ಥವಾಗಬಹುದು ಎಂಬುದು ನನ್ನ ಲೆಕ್ಕಾಚಾರವಾಗಿತ್ತು.

ಹಾಗಾಗಿ ಅದನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದೆ. ಒಂದು ಸಿನಿಮಾದ ಬಗೆಗಿನ ಮಾಹಿತಿ, ವಿಮರ್ಶೆ, ನಿರ್ದೇಶಕರ ಸಂದರ್ಶನ ಸಿಕ್ಕರೆ ಅವೆಲ್ಲವನ್ನೂ ಓದಿ ಮುಗಿಸುತ್ತಿದ್ದೆ. ಆ ದಿನ ರಾತ್ರಿ ಸಿನಿಮಾ ನೋಡುತ್ತಿದ್ದೆ. ಅರ್ಥವಾಗದ ಕಡೆ ಮತ್ತೆ ವಾಪಸು ಹೋಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಚಿತ್ರ ನೋಡಿ ಮುಗಿಸುತ್ತಿದ್ದೆ. ಕೆಲ ಸಂಗತಿಗಳು ಬಿಡದೇ ಕಾಡುತ್ತಿದ್ದವು. ಓದಿದ ಮಾಹಿತಿ, ವಿಮರ್ಶೆ, ನಿರ್ದೇಶಕನ ಸಂದರ್ಶನದೊಳಗಿನ ಅನಿಸಿಕೆ ಹಾಗೂ ಕಂಡ ಚಲನಚಿತ್ರ ಎಲ್ಲವೂ ಒಟ್ಟಾಗಿ ಗೊಂದಲ ಮೂಡಿಸುತ್ತಿದ್ದ ಪ್ರಸಂಗಗಳೂ ಇದ್ದವು.

ಹಾಗಾದರೆ ಚಿತ್ರ ನೋಡುವುದು ಹಾಗಲ್ಲವೇ? ಎಲ್ಲ ಸಂದರ್ಭಗಳಲ್ಲೂ ಒಂದಿಷ್ಟು ಮಾಹಿತಿಯ ಮುಂಗಡದೊಂದಿಗೇ ವ್ಯಾಪಾರ ಆರಂಭಿಸುವುದು ಸಾಮಾನ್ಯ. ಅದೇ ರೀತಿ ಚಿತ್ರ ನೋಡುವ ಬಗೆಯಲ್ಲೂ ಅನುಸರಿಸಿದರೆ ತಪ್ಪೇನೂ ಇಲ್ಲ ಎಂಬುದೇ ನನ್ನನ್ನು ಹೀಗೆ ಮಾಡಿಸಿದ್ದು. ಆಯಿತು…ಇಂಥ ಅಭ್ಯಾಸ ಬಹಳಷ್ಟು ದಿನ ಮುಂದುವರಿಯಿತು. ಅಲ್ಲಿಗೆ, ಪೂರ್ವಾಗ್ರಹಗಳಿಲ್ಲದೇ (ಅಂದರೆ ಮಾಹಿತಿಯ ರೂಪದಲ್ಲಾದರೂ) ಚಿತ್ರ ನೋಡುವುದು ಕಷ್ಟ ಎನಿಸಿದ್ದೂ ನಿಜ.

ಚಿತ್ರ : ಸೃಜನ್
ಚಿತ್ರ : ಸೃಜನ್

ಅದರಲ್ಲೂ ಬೇರೆ ಬೇರೆ ಭಾಷೆಯ ಚಲನಚಿತ್ರಗಳು ನೋಡುವುದರಿಂದ ಒಂದಿಷ್ಟು ಮಾಹಿತಿ ತೀರಾ ಅಗತ್ಯ. ಇಲ್ಲದಿದ್ದರೆ ತುದಿ-ಬುಡ ಗೊತ್ತಾಗುವುದಿಲ್ಲ. ಚಿತ್ರದ ಉಪ ಶೀರ್ಷಿಕೆ (ಸಬ್ ಟೈಟಲ್ಸ್) ಗಳನ್ನೇ ಬೆನ್ನತ್ತಿಕೊಂಡು ಹೋದರೆ ಸನ್ನಿವೇಶ, ಅದರ ಹಿನ್ನೆಲೆಯ ಸೌಂದರ್ಯ ಹಾಗೂ ದೃಶ್ಯ ಸಿದ್ಧತೆಯೊಳಗಿನ ಶಿಸ್ತನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಜತೆಗೆ, ದೃಶ್ಯದ ಒಟ್ಟಂದವೇ ಕೈಗೆ ಸಿಗದೆ ಓಡಿ ಬಿಡುತ್ತದೆ. ಇವೆಲ್ಲಾ ಗೊಂದಲಗಳ ಮಧ್ಯೆ ತೊಡಗಿಕೊಂಡಾಗ ಒಮ್ಮೆ “ಬೋಧಿವೃಕ್ಷ’ದ ಕೆಳಗೆ ಕುಳಿತಿದ್ದೆ. ಆಗ ಆದದ್ದು ಜ್ಞಾನೋದಯ.

ನನ್ನ ಈ ಹೊಸ ಅಭ್ಯಾಸ ಈಗಾಗಲೇ ಹಲವರು ಮಾಡಿರಬಹುದು. ನನಗೆ ಹೊಸದಾಗಿದ್ದರಿಂದ ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ. ಒಮ್ಮೆ ಪರ್ಶಿಯನ್ ಸಿನಿಮಾವೊಂದನ್ನು ಅಂಗಡಿಯಿಂದ ತಂದೆ. ಅದಕ್ಕೆ ಯಾವ ಮಾಹಿತಿಯನ್ನೂ ಕಡ ಪಡೆಯಲಿಲ್ಲ. ರಾತ್ರಿ ಕಚೇರಿಯಿಂದ ಮನೆಗೆ ನೇರ ಬಂದವನೇ ಊಟ ಮುಗಿಸಿ ಚಿತ್ರ ನೋಡಲು ಕುಳಿತೆ. ಪರ್ಶಿಯನ್ ಭಾಷೆಯ ಆ ಸಿನಿಮಾ ನನಗೆ ಮೊದಲಿನದು.

ಚಿತ್ರ : ಇಂಟರ್ ನೆಟ್
ಚಿತ್ರ : ಇಂಟರ್ ನೆಟ್

ಒಟ್ಟು ಒಂದೂವರೆ ಗಂಟೆ ಸಿನಿಮಾ. ಒಬ್ಬ ಬಾಲಕ, ಒಬ್ಬ ಬಾಲಕಿ, ಒಬ್ಬ ಮುದುಕ, ಒಬ್ಬ ಮುದುಕಿ, ಒಬ್ಬ ಮಧ್ಯ ವಯಸ್ಕ, ಒಂದು ನಾಯಿ, ಒಂದು ಕುದುರೆ ಹಾಗೂ ಒಂದು ನಗರ, ಅದರೊಳಗಿನ ಒಂದು ಸಂತೆ…ಇಷ್ಟೇ ಚಿತ್ರ. ಸಿನಿಮಾ ನೋಡಿ ಮುಗಿಸಿದಾಗ ಒಂದು ಬಗೆಯ ಖುಷಿ ನನ್ನೊಳಗೆ ಆವರಿಸಿತ್ತು. ಅದಕ್ಕೆ ಆ ಚಿತ್ರದೊಳಗಿನ ಅಮೂರ್ತ ಭಾವ (ಕೆಲವೊಮ್ಮೆ ಚಿತ್ರದ ಏನೂ ಅರ್ಥವಾಗದಿದ್ದಾಗಲೂ ಅಮೂರ್ತ ಎನಿಸುವುದುಂಟು. ಇದು ಹಾಗಲ್ಲ) ನನ್ನೊಳಗೆ ತುಂಬಿಕೊಂಡಿತು. ಬದುಕಿನ ಅಮೂರ್ತತೆಯನ್ನು ಕನ್ನಡಿಯಲ್ಲಿ ತೋರಿಸಿದಂತಿತ್ತು. ಸರಿ, ಸುಮ್ಮನಾಗಿ ಮಲಗಿದೆ.

ಮಾರನೆದಿನ ಕಚೇರಿಗೆ ಹೋದವನೇ ಕಂಡ ಚಿತ್ರದ ಬಗೆಗಿನ ಮಾಹಿತಿಗಳನ್ನೆಲ್ಲಾ ಹುಡುಕಿದೆ. ಒಂದಿಷ್ಟು ಪೋಸ್ಟರ್ ಸಿಕ್ಕಿದವು. ನಿರ್ದೇಶಕನ ಒಂದೆರಡು ಮಾತುಗಳೂ ಸಿಕ್ಕವು. ಆ ಚಿತ್ರದ ಬಗ್ಗೆ ಬಂದ ಕೆಲ ವಿಮರ್ಶೆಗಳೂ ಸಿಕ್ಕವು. ಎಲ್ಲವನ್ನೂ ಪ್ರತಿ ತೆಗೆದು ಓದಿದೆ. ಎರಡು ಬಾರಿ ಓದಿದ ಮೇಲೆ, ಕಂಡ ಹಾಗೂ ನೆನಪಿನಲ್ಲಿ ಉಳಿದಿದ್ದ ಕೆಲ ದೃಶ್ಯಗಳ ಚೌಕಟ್ಟುಗಳಿಗೆ ಅರ್ಥ ಕಂಡವು. ಅದಷ್ಟೇ ಅರ್ಥವಿರಲಾರದು. ಆದರೆ ನನಗೆ ಹೊಳೆದ ತಾರೆಗಳು, ಉಳಿದದ್ದು ದೊಡ್ಡ ಆಕಾಶ.

ಚಿತ್ರ : ಸೃಜನ್
ಚಿತ್ರ : ಸೃಜನ್

ಮೂರು ದಿನಗಳ ನಂತರ ಅದೇ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿದೆ. ಇಡೀ ಸಿನಿಮಾದಲ್ಲಿನ ವಿವಿಧ ಚಿತ್ರಿಕೆಗಳು ನನಗೆ ತೀರಾ ಪರಿಚಿತವೆನಿಸ ತೊಡಗಿದವು. ಎಲ್ಲೆಲ್ಲಿ ತೀರಾ ಅಪರೂಪ ಎನಿಸುತ್ತದೋ, ಅಲ್ಲಿಗೆ ನಾನು ಓದಿಕೊಂಡ ಮಾಹಿತಿಯನ್ನು ಹೊಂದಿಸುತ್ತಾ ಹೋದೆ. ಎಲ್ಲ ಮುಗಿದಾಗ ಆ ಚಿತ್ರ ವಿಶಿಷ್ಟವಾಗಿ ಅರ್ಥವಾಗಿತ್ತು. ಅಷ್ಟೇ ಅಲ್ಲ. ನಿರ್ದೇಶಕ ಒಂದು ಸೂಕ್ಷ್ಮ ಹಾಗೂ ಸರಳ ಸಂಗತಿಯನ್ನು ಚಿತ್ರಿಸಿಕೊಟ್ಟ ಬಗೆಯೇ ಅಚ್ಚರಿ ಮೂಡಿಸಿತ್ತು. ಬಹಳ ಮುಖ್ಯವಾಗಿ ಚಿತ್ರ, ನಿರ್ದೇಶಕ, ಚಿತ್ರದ ಪರಿಸರ, ಹಿನ್ನೆಲೆ…ಎಲ್ಲವೂ ಕನಿಷ್ಠ ಮಟ್ಟದಲ್ಲಿಯಾದರೂ ಅರ್ಥವಾಗಿತ್ತು.

ತೃಪ್ತಿಯ ಭಾವ ಮೂಡಿದ್ದು ಹಾಗೆಯೇ. ಅಂದಿನಿಂದ ಚಿತ್ರ ನೋಡುವ ಈ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಈಗೀಗ ಅನಿಸುತ್ತಿರುವುದು ಅದೇ. ಒಂದು ಕಲಾಕೃತಿಯನ್ನು ಮುಕ್ತವಾದ ಮನಸ್ಸು, ಕಣ್ಣುಗಳಿಂದ ನೋಡಬೇಕು. ಮೊದಲೇ ಒಂದಿಷ್ಟು ನಮ್ಮೊಳಗಿದ್ದರೆ ಹೊರಗಿನದು ತುಂಬಿಕೊಳ್ಳಲು ಅವಕಾಶ ಇರುವುದಿಲ್ಲ. ಇದಲ್ಲದೇ, ನಾವು ಪಡೆದ ಮಾಹಿತಿಯ ಚೌಕಟ್ಟಿಗೇ ಚಿತ್ರವನ್ನು ಹೊಂದಿಸುವ ಅಥವಾ ಚಿತ್ರವನ್ನು ನೋಡುವತ್ತ ಮನಸ್ಸು ಜಾಗ್ರತವಾಗಿರುತ್ತದೆ. ಆಗ ಸಿನಿಮಾ ಅರ್ಥವಾಗದೇ ಸಂಕೀರ್ಣ ಎನಿಸಲೂ ಬಹುದು, ತೀರಾ ಸರಳ ಎನಿಸಲೂ ಬಹುದು. ಸಂಕೀರ್ಣದೊಳಗಿನ ಸರಳತೆ ಯಾವಾಗಲೂ ಸುಂದರ. ಆದರೆ ಅವೆರಡನ್ನೂ ಭಿನ್ನವಾಗಿ ತೆರೆದಿಟ್ಟು, ಮತ್ತೆ ಕೂಡಿಸಿ ನೋಡುವ ಅಭಿರುಚಿ ನಮಗಿರಬೇಕೆನಿಸುತ್ತದೆ.

ನಿಜ, ಇದೇ ಅಂತಿಮ ದಾರಿಯಲ್ಲ. ಆದರೆ ದಾರಿ ಹುಡುಕುವ ಮಧ್ಯೆ ಸಿಕ್ಕ ಮಣ್ಣಿನ ದಾರಿ. ಮುಂದೆ ಕತ್ತಲೆಯಲ್ಲಿ ಇನ್ನಷ್ಟು ದೂರ ನಡೆಯಲು ಉತ್ಸಾಹ ತುಂಬುವ ಪುಟ್ಟದೊಂದು ಹಣತೆ ಎಂಬುದು ನನ್ನ ಅನಿಸಿಕೆ.

Advertisements