ಇದು ಹೊಸ ಚಿತ್ರದ ಬಗೆಗಿನ ಮಾಹಿತಿ. ಯಾರು ಬೇಕಾದರೂ ಹೊಸದಾಗಿ ಬಿಡುಗಡೆಯಾಗುವ ಚಿತ್ರಗಳ ಬಗ್ಗೆ ಮಾಹಿತಿ ಕಳುಹಿಸಬಹುದು. ರವಿರಾಜ್ ಗಲಗಲಿ ಅವರು “ಕಂಬಕ್ತ್ ಇಶ್ಕ್” ಚಿತ್ರದ ಬಗ್ಗೆ ಕಳುಹಿಸಿರುವುದನ್ನು ಇಲ್ಲಿ ನೀಡಲಾಗಿದೆ.

ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ತಮಿಳು ಅಥವಾ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳ ಹಿಂದೆ ಸುಳಿದಾಡಿತ್ತು. ರಿಚರ್ಡ್ ಅಟೆನ್‌ಬರೋರಂತಹ ನಟರನ್ನು ಬಿಟ್ಟರೆ ಹಿಂದಿ ಚಿತ್ರಗಳಲ್ಲಿ ಪ್ರಖ್ಯಾತ ಹಾಲಿವುಡ್ ನಟರು ಅಭಿನಯಿಸಿದ್ದು ಕಡಿಮೆ. ಕೆಲ ನಿರ್ಮಾಪಕರು ಅರ್ನಾಲ್ಡ್ ಶ್ವಾಜ್‌ನೆಗರ್, ಸಿಲ್ವೆಸ್ಟರ್ ಸ್ಟಾಲೋನ್ ನಮ್ಮ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಿ ಪ್ರಚಾರ ಗಿಟ್ಟಿಸಿ ಕೊನೆಗೆ ಸ್ವದೇಶಿ ನಟರಲ್ಲೇ ಚಿತ್ರದ ರೀಲು ಸುತ್ತಿದ ಉದಾಹರಣೆಗಳೂ ಇವೆ.
kambakth ishq
ಹಾಲಿವುಡ್‌ನ ದೊಡ್ಡ ನಾಯಕನೊಬ್ಬ ಹಿಂದಿ ಚಿತ್ರಗಳಲ್ಲಿ ನಟಿಸಬಹುದಾ? ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಈ ಸಾಧ್ಯತೆಯನ್ನು ನಿಜವಾಗಿಸಿರುವುದು ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾವಾಲಾ. ತಮ್ಮ ಹೊಸ ಚಿತ್ರ ಕಂಬಕ್ತ್ ಇಶ್ಕ್‌ನಲ್ಲಿ ರ‍್ಯಾಂಬೋ ಖ್ಯಾತಿಯ ಸಿಲ್ವೆಸ್ಟರ್ ಸ್ಟಾಲೋನ್‌ರನ್ನು ಕರೆತಂದಿದ್ದಾರೆ ಸಾಜಿದ್. ಅಕ್ಷಯ್ ಕುಮಾರ್, ಕರೀನಾ ಕಪೂರ್ ಏಳನೆ ಬಾರಿ ಯುಗಳ ಗೀತೆ ಹಾಡಲಿರುವ ಈ ಚಿತ್ರದಲ್ಲಿ ಸ್ಟಾಲೋನ್‌ರೊಂದಿಗೆ ಹಾಲಿವುಡ್‌ನ ಡೆನ್ನಿಸ್ ರಿಚರ್ಡ್ಸ್, ಬ್ರಾಂಡನ್ ರೂಟ್ ಕೂಡ ನಟಿಸಿದ್ದಾರೆ.

ಹಾಲಿವುಡ್‌ನ ಸ್ಟಂಟ್ ಮ್ಯಾನ್‌ನೊಬ್ಬ ರೂಪದರ್ಶಿಯೊಂದಿಗೆ ಪ್ರೇಮದಾಟ ಆಡುವ ಕತೆ ಚಿತ್ರದಲ್ಲಿದೆ. ೨೦೦೨ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್, ಸಿಮ್ರಾನ್ ಅಭಿನಯದ ಪಮ್ಮಳ್ ಕೆ.ಸಂಬಂಧಮ್ ತಮಿಳು ಚಿತ್ರದ ರಿಮೇಕ್ ಇದು. ಕಾರ್ಮನ್ ಎಲೆಕ್ಟ್ರಾಚಿತ್ರದ ವಿಡಿಯೋ ಹಾಡುಗಳಲ್ಲಿ ಅಭಿನಯಿಸಿ ಹಾಡಲಿದ್ದಾರೆ ಎನ್ನುವುದು ಮೊದಲು ಬಾಲಿವುಡ್‌ನಲ್ಲಿ ಓಲಾಡುತ್ತಿದ್ದ ವದಂತಿ. ಆದರೆ ಎಲೆಕ್ಟ್ರಾ ಬದಲು ಪಿಡಿಎಂ ಗ್ರೂಪ್ ವಿಡಿಯೋ ಹಾಡುಗಳಲ್ಲಿ ಅಭಿನಯಿಸಿದೆ.

60 ಕೋಟಿ ವೆಚ್ಚದ ಈ ಚಿತ್ರದ ಬಹುತೇಕ ಚಿತ್ರೀಕರಣ ಅಮೆರಿಕದ ಯೂನಿವರ್ಸಲ್ ಸ್ಟುಡಿಯೋನಲ್ಲಿ ಚಿತ್ರಿತವಾಗಿದೆ. ಈ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಪೂರ್ಣ ಪ್ರಮಾಣದ ಭಾರತದ ಮೊದಲ ಚಿತ್ರ ಎಂಬ ಖ್ಯಾತಿಯೂ ಇದೆ. ಕರೀನಾ ಕಪೂರ್ ಬಿಕಿನಿಯಲ್ಲಿ ಮೈ ತೋರಿಸಿರುವುದು ಸ್ಟಾಲೋನ್ ಅಭಿನಯದಷ್ಟೇ ಕುತೂಹಲ ಮೂಡಿಸಿದೆ. ಸಬಿರ್ ಖಾನ್ ಚಿತ್ರ ನಿರ್ದೇಶಿಸಿದ್ದು, ಅನು ಮಲಿಕ್ ಸಂಗೀತವಿದೆ.

ನಾನಾ ಕಾರಣಗಳಿಂದಾಗಿ ಬಿಡುಗಡೆಗೆ ವಿಳಂಬವಾದ ಚಿತ್ರ ಜು.3 ರಂದು ತೆರೆ ಕಾಣಲಿದೆ. ಸಿಂಗ್ ಈಸ್ ಕಿಂಗ್ ನಂತರ ಮತ್ತೊಂದು ಹಿಟ್‌ಗೆ ಎದುರು ನೋಡುತ್ತಿರುವ ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ ಮತ್ತೊಂದಿಷ್ಟು ಸಾಹಸ ಪ್ರದರ್ಶಿಸುವ ಹವಣಿಕೆಯಲ್ಲಿದ್ದಾರೆ. ಅಂದ ಹಾಗೆ ಚಿತ್ರದಲ್ಲಿ ಸ್ಟಾಲೋನ್ ಎಷ್ಟು ಹೊತ್ತು ಅಭಿನಯಿಸಿದ್ದಾರೆ ? ಅವರು ಅತಿಥಿ ಪಾತ್ರದಲ್ಲಿದ್ದಾರಾ ?ಎಂಬ ಪ್ರಶ್ನೆಗಳಿಗೆ ಶ್ವೇತ ಪರದೆ ಉತ್ತರ ನೀಡಲಿದೆ.

Advertisements