ಮತ್ತೊಂದು ವಿಶೇಷವೆಂದರೆ, ನಿರ್ದೇಶಕ, ಛಾಯಾಗ್ರಾಹಕರು ಬಿಟ್ಟರೆ ಉಳಿದ ಬಹುತೇಕರು ಸಿನಿಮಾ ಕ್ಷೇತ್ರದವರೇ ಅಲ್ಲ. ಆದರೆ, ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರೇ. ಅವರನ್ನೆಲ್ಲಾ ಗುಡ್ಡೆ ಹಾಕಿ ಚಿತ್ರ ಮಾಡಿದ್ದೇ ದೊಡ್ಡ ಸಾಹಸ ಮತ್ತು ಪ್ರಯೋಗ. 

guruswamy coloumn copy

  ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ    ಚಿತ್ರಗಳು ಬಂದದ್ದೇ ಹೊಸತಲ್ಲ .  ಆದರೆ ಪ್ರಯೋಗಶೀಲತೆ ಎಂಬುದು  1929 ರಲ್ಲೇ ಆರಂಭವಾಗಿತ್ತು.  “ಮೃಚ್ಛಕಟಿಕ’ ಕಥೆ ಆಧರಿಸಿದ ಚಿತ್ರ “ವಸಂತಸೇನ’ ಕನ್ನಡದ ನೆಲದಲ್ಲಿ ನಿಜವಾದ ಹೊಸತನವನ್ನು ಪ್ರೇರೇಪಿಸಿದ ಚಿತ್ರ. 

ವಸಂತ ಸೇನೆಯ ಒಂದು ದೃಶ್ಯ
ವಸಂತ ಸೇನೆಯ ಒಂದು ದೃಶ್ಯ

ಈಗ ಗುರುತಿಸುತ್ತಿರುವ ವಾಣಿಜ್ಯ ನೆಲೆಯ ಹಾಗೂ ಕಲಾತ್ಮಕ ಸೆಲೆಯ ಚಿತ್ರಗಳೆಂಬ (ನಾನು ಹಾಗೆ ಪ್ರತ್ಯೇಕಿಸಲಾರೆ) ಎರಡು ಪ್ರಮುಖ ಧಾರೆ ಆರಂಭವಾಗಿದ್ದೇ ಅಂದು. ಅದರ ಒಂದು ನೆಲೆಯ ಬಗ್ಗೆ, ಅಂದರೆ ಪ್ರಯೋಗಶೀಲತೆಯ ಬಗ್ಗೆ ಹೇಳುತ್ತೇನೆ. ಕನ್ನಡದಲ್ಲಿ ಮೊದಲನೇ ಬಾರಿಗೆ ನಡೆದ ಪ್ರಯತ್ನವದು. “ಮೃಚ್ಛಕಟಿಕ’ ನಾಟಕ “ವಸಂತ ಸೇನ’ ವಾಗಿ 1929 ರಲ್ಲಿ ಬಿಡುಗಡೆಗೊಂಡಿತು. ಅದು ಮೂಕಿ ಚಿತ್ರ. 

ಇಷ್ಟೇ ಇದರ ವಿಶೇಷವೇ ? ಎಂದರೆ ಇಷ್ಟೇ ಅಲ್ಲ. ಇದರಲ್ಲಿನ ಎಲ್ಲವೂ ವಿಶೇಷವೇ. ಬಹಳ ವಿಶಿಷ್ಟವಾದ ಹಲವು ಸಂಗತಿಗಳು ಇಲ್ಲಿವೆ. ನಾವು ಯಾರನ್ನು ನಿರೀಕ್ಷಿಸಿರುವುದಿಲ್ಲವೋ ಸಾಮಾನ್ಯವಾಗಿ, ಅವರೆಲ್ಲರೂ ಇದರಲ್ಲಿ ನಟಿಸಿದ್ದಾರೆ. ಒಂದರ್ಥದಲ್ಲಿ ಭಾರತೀಯ ಸಾಂಸ್ಕೃತಿಕ ರಂಗದ ಅದ್ವಿತೀಯ ಪ್ರತಿಭೆಗಳ ಸಂಗಮ ಎಂದು ಹೇಳಿದರೆ ಅಚ್ಚರಿಯ ಸಂಗತಿಯಲ್ಲ.

ಟಿ. ಪಿ. ಕೈಲಾಸಂ ನಾಟಕ ಬರೆದದ್ದನ್ನು ಕೇಳಿದ್ದೀರಿ, ಆದರೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದನ್ನು. ಈ ಚಿತ್ರದಲ್ಲಿ “ಶಕಾರ’ ನ ಪಾತ್ರ ಅಭಿನಯಿಸಿದವರು ಅವರೇ. ಮೈಸೂರು ವಿವಿ ಯಲ್ಲಿ ಪ್ರಾಧ್ಯಾಪಕಿಯಾಗಿದ್ದ ಯೇಣಾಕ್ಷಿ ರಾಮರಾವ್,  ಕಮಲಾದೇವಿ ಚಟ್ಟೋಪಾಧ್ಯಾಯ, ನಿಘಂಟಿನ ಮೂಲಕವೇ ಈಗಿನ ತಲೆಮಾರುಗಳಿಗೆ ಪರಿಚಯವಿರುವ ಡಿ. ಕೆ. ಭಾರದ್ವಾಜ್, ಕಥೆಗಾರ ಅಜ್ಜಂಪುರ ಸೀತಾರಾಂ, ಮೈಸೂರಿನ ಆಸ್ಥಾನ ನರ್ತಕಿ ಜಟ್ಟಿತಾಯಮ್ಮ…ಎಲ್ಲರೂ ಅಭಿನಯಿಸಿದವರು. ಇದನ್ನು ನಿರ್ದೇಶಿಸಿದವರು ಮುಂಬಯಿಯ ಮೋಹನ್ ಭವನಾನಿ. ಇವರು ಮುಂಬಯಿಯ ಅಜಂತಾ ಸಿನಿಟೋನ್‌ನ ಮಾಲೀಕ.

ಮತ್ತೊಂದು ವಿಶೇಷವೆಂದರೆ, ನಿರ್ದೇಶಕ, ಛಾಯಾಗ್ರಾಹಕರು ಬಿಟ್ಟರೆ ಉಳಿದ ಬಹುತೇಕರು ಸಿನಿಮಾ ಕ್ಷೇತ್ರದವರೇ ಅಲ್ಲ. ಆದರೆ, ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರೇ. ಅವರನ್ನೆಲ್ಲಾ ಗುಡ್ಡೆ ಹಾಕಿ ಚಿತ್ರ ಮಾಡಿದ್ದೇ ದೊಡ್ಡ ಸಾಹಸ ಮತ್ತು ಪ್ರಯೋಗ. 

ಚಿತ್ರದ ಭಿತ್ತಿಪತ್ರ
ಚಿತ್ರದ ಭಿತ್ತಿಪತ್ರ

ಅಂದಹಾಗೆ, ಇದರ ಚಿತ್ರೀಕರಣವೆಲ್ಲಾ ಬೇಲೂರು, ಹಳೇಬೀಡು, ಸೋಮನಾಥಪುರ, ಬೆಂಗಳೂರಿನ ಟಿಪ್ಪು ಅರಮನೆ, ಲಾಲ್ ಬಾಗ್‌ನಲ್ಲಿ ಪೂರೈಸಲಾಗಿತ್ತು. ಜತೆಗೆ ಮತ್ತೊಂದು ವಿಶಿಷ್ಟ ಕೇಳಿ. ಈ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಿ, ಜರ್ಮನಿಗೆ ಕೊಂಡೊಯ್ದು ಹ್ಯಾಂಡ್ ಕಲರ್ ಹಾಕಿಸಿದ್ದರು. ಅಂದರೆ ಪ್ರತಿ ಫ್ರೇಮ್‌ಗೂ ಬಣ್ಣ ಹಚ್ಚುವುದು !

1929 ರಲ್ಲಿ ನಮ್ಮಲ್ಲಿ ಬಿಡುಗಡೆಗೊಂಡಿತು. ನಂತರ ಜರ್ಮನಿಯಲ್ಲೂ 1931 ರಲ್ಲಿ ಕ್ರಿಸ್‌ಮಸ್ ಸಂದರ್ಭ ದಲ್ಲಿ ಬಿಡುಗಡೆಗೊಂಡು ಜನಪ್ರಿಯವಾಯಿತು. ಮಾತಿಲ್ಲದ ಚಿತ್ರವಾದ್ದರಿಂದ ಭಾಷೆಯ ತೊಡಕು ಎದುರಾಗಲಿಲ್ಲ. 

ಇನ್ನೊಂದು ಅರ್ಥದಲ್ಲಿ ಇದು ಟ್ರೆಂಡ್ ಸೆಟ್ಟರ್ ಚಿತ್ರ ಸಹ. ಅದುವರೆಗೂ ಸಾಮಾನ್ಯವಾಗಿ ರಾಜರ ಮನೆತನ ಆಧರಿಸಿದ, ಸಾಹಸ ಪ್ರಧಾನವಾದ ಚಿತ್ರಗಳೇ ಹೆಚ್ಚಾಗಿದ್ದವು. ಇಲ್ಲವಾದರೆ, ಪೌರಾಣಿಕ ಕಥೆಗಳನ್ನು ಆಧರಿಸಿದ್ದು ಹೆಚ್ಚು. ಅಂಥ ಹೊತ್ತಿನಲ್ಲಿ ಸಾಹಿತ್ಯ ಕೃತಿಯಾದ ಮೃಚ್ಛಕಟಿಕವನ್ನು ಸಿನಿಮಾ ಮಾಡಿದರು. “ಮೃಚ್ಛಕಟಿಕ’ ರಾಜರ ಕಥೆಯಲ್ಲ ; ಜನರ ಹೋರಾಟದ ಕಥೆ, ಕ್ರಾಂತಿಕಾರಿಯ ಕಥೆ. ಮತ್ತೆ ಹಳತಿಗೇ ಮೊರೆ ಹೋಗದೇ, ಹೊಸತನಕ್ಕೆ ಮುಂದಾದದ್ದು  ವಿಶೇಷ. ಕಥಾ ವಸ್ತುವಿನಲ್ಲ್ಲೂ ಹೊಸತನವೇ. 

ನನಗನ್ನಿಸುವುದೇನೆಂದರೆ, ನಮ್ಮ ನೆಲದಲ್ಲಿ ಹುಟ್ಟಿಕೊಂಡ ಆಫ್‌ಬೀಟ್ (ಅಂದರೆ ಜನಪ್ರಿಯ ನೆಲೆಗಿಂತ ಭಿನ್ನವಾದದ್ದು) ಚಿತ್ರವಿದು. ನಾವು ಹೇಳುವ ಹೊಸ ಅಲೆಯ ಚಿತ್ರಗಳು (ಸಂಸ್ಕಾರ) ಸಹ ಮೂಲವಾಗಿ ಭಾರತೀಯ ಅಥವಾ ಕನ್ನಡದ ನೆಲದ ಸೊಗಡಿನಿಂದ ಮೂಡಿದ್ದಲ್ಲ. ಅದರ ಕತೆ ಸಂರಚನೆಯಿಂದಲೂ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿರುವಂಥದ್ದು. ಆದರೆ ನಮ್ಮ ನೆಲದ, ಭಾರತೀಯ ಸೊಗಡಿನ ಅಂದರೆ ನಮ್ಮ ಮಣ್ಣಿನ ಅನುಭವವನ್ನೇ ದೃಶ್ಯ ಕಾವ್ಯವಾಗಿಸಿದ್ದು ಇದರ ಹೆಗ್ಗಳಿಕೆ ಮತ್ತು ಇದರ ವಿಶೇಷ. ತಾಂತ್ರಿಕತೆ ಮತ್ತು ನಮ್ಮ ನೆಲದ ಅನುಭವಗಳನ್ನು ಮುಖಾಮುಖಿಗೊಳಿಸಿದ ಪ್ರಯತ್ನ. 

ಮತ್ತೊಂದು ಸಂಗತಿ-ಕನ್ನಡದಲ್ಲಿ ಹೀಗೆ ಸಾಹಿತ್ಯ ಕ್ಷೇತ್ರದಿಂದ ದಿಢೀರನೆ ಚಿತ್ರ ಜಗತ್ತಿಗೆ ಬಂದವರು ಬಹಳಷ್ಟು ಮಂದಿಯಿದ್ದಾರೆ. ಪಿ. ಲಂಕೇಶ್, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರು, ಚಂದ್ರಶೇಖರ ಕಂಬಾರರು, ಬರಗೂರು ರಾಮಚಂದ್ರಪ್ಪ… ಹೀಗೆ..ಆದರೆ ನನಗನ್ನಿಸುವ ಸಂಗತಿಯೆಂದರೆ ಎಲ್ಲರಿಗೂ ಸ್ವಲ್ಪವಾದರೂ ಸಿನಿಮಾ ಕ್ಷೇತ್ರದ ಹಿನ್ನೆಲೆ ಬೇಕು. ಇಲ್ಲದಿದ್ದರೆ ಕಷ್ಟ.

ಟಿ. ಪಿ. ಕೈಲಾಸಂ ಅವರ ನವರಸ ಅಭಿವ್ಯಕ್ತಿಯ, ಭಾವಭಂಗಿಯ ಭಾವಚಿತ್ರಗಳನ್ನು ನೋಡಿರಬಹುದು. “ಶಕಾರ’ ಪಾತ್ರ ಮಾಡುವ ಮುನ್ನವೂ ಎಲ್ಲರೆದುರೂ ಹಾಗೆಯೇ ಹೇಳುತ್ತಿದ್ದರಂತೆ. “ಈ ಪಾತ್ರವೇನು ? ಸೂಪರ್ ಆಗಿ ಮಾಡ್ತೀನಿ…’ ಎನ್ನುತ್ತಲೇ ಇದ್ದಾಗ ಎದುರಿಗೆ ಕ್ಯಾಮೆರಾ ಬಂದು ಬಿಟ್ಟಿತಂತೆ. ಅಂದರೆ ಅಭಿನಯಿಸುವ ಸಮಯವೇ ಬಂದಿತು. ಕ್ಯಾಮೆರಾ ಎದುರು ಬೆವತು ನೀರಾಗಿ ಬಿಟ್ಟರಂತೆ ಕೈಲಾಸಂ. ಅದನ್ನು ಕಂಡವರು “ಅಯ್ಯೋ…’ ಎಂದರಂತೆ. ಇದನ್ನು ರಾ. ಶಿ. ಅವರೂ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರಂತೆ. ವಾಣಿಜ್ಯ ನೆಲೆಯ ಪ್ರಯೋಗಶೀಲ ಚಿತ್ರದ ಬಗ್ಗೆ ಮುಂದಿನ ವಾರ ಹೇಳುತ್ತೇನೆ.

Advertisements