ನಮ್ಮ ಅಂಕಣ “ನೂರಾರು ನೋಟ”ಇಂಥ ವಿಶಿಷ್ಟವಾದದ್ದೇ. ಇಲ್ಲಿ ಒಂದೇ ಚಿತ್ರದ ಹಲವು ನೋಟಗಳನ್ನು ಹೇಳಬಹುದು. ಇದೇ ರೀತಿಯಲ್ಲಿ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ “ಇಲ್ ಪೋಸ್ಟಿನೊ” ಚಿತ್ರದ ಬಗ್ಗೆ ದೀಪಾ ಹಿರೇಗುತ್ತಿ ಬರೆದಿದ್ದಾರೆ. ದೀಪಾ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇಂಗ್ಲಿಷ್ ಉಪನ್ಯಾಸಕಿ. 

ಕವಿ ತನ್ನ ಜತೆ ಎಲ್ಲರನ್ನೂ ಬೆಳೆಸ್ತಾನೆ ಅಂತಾರೆ. ನಿರ್ದೇಶಕ ಪಾತ್ರಧಾರಿಗಳು ಎಲ್ಲರೂ ತಾವೂ ಬೆಳೀತಾ ನಮ್ಮನ್ನೂ ಬೆಳೆಸ್ತಾರೆ ಅಂತ ತೀವ್ರವಾಗಿ ಅನ್ನಿಸೋ ಹಾಗೆ ಮಾಡೋ ಚಿತ್ರ ಇಲ್ ಪೋಸ್ಟಿನೋ. ಕವಿ ಸಹ್ರದಯತೆ, ರೂಪಕಗಳು ಮುಂತಾದ ಹತ್ತು ಹಲವು ಶಬ್ಡಗಳ ಒಣಚಚೆ೯ಯಲ್ಲಿ ಕವಿತೆಯನ್ನು ದಂತಗೋಪುರ ದಲ್ಲಿ ಪ್ರತಿಷ್ಠಾಪಿಸಿ ಜನಸಾಮಾನ್ಯನಿಂದ ದೂರವೇ ಉಳಿಸುವ ಸೋ ಕಾಲ್ಡ್ ಬುದ್ಧಿಜೀವಿಗಳು ಖಂಡಿತವಾಗಲೂ ನೋಡಲೇ ಬೇಕಾದ ಸಿನೆಮಾ ಇದು. ನಾನು ಈ ಫಿಲ್ಮ್ ಅನ್ನು ಎರಡು  ಸಲ ನೋಡಿದೆ. And I fell in love with the movie.

ilpostino1

ಕತೆ ನಡೆಯುವುದು ಇಟಲಿಯ ಸುಂದರವಾದ ಪುಟ್ಟ ದ್ವೀಪವೊಂದರಲ್ಲಿ . ಅಲ್ಲಿ ಎಲ್ಲರ ಜೀವನೋಪಾಯ ಮೀನುಗಾರಿಕೆ. ನಾಯಕ Mario Ruoppolo (Massimo Troisi) ಗೆ ಈ ಸಾಂಪ್ರದಾಯಿಕ ವೃತ್ತಿ ಇಷ್ಟವಿಲ್ಲ. ಅಮೆರಿಕ ಅವಕಾಶಗಳ ದೇಶ ಎಂದೆಲ್ಲ ತಂದೆಯ ಹತ್ತಿರ ಹೇಳುತ್ತಿರುತ್ತಾನೆ ನಿಧಾನವಾಗಿ ಸೂಪ್ ಸವಿಯುತ್ತ ಮುದ್ದು ಬರಿಸುವಷ್ಟು ನಿಲಿ೯ಪ್ತನೆನಿಸುವ ಅಪ್ಪನದೋ ಮಗನ ನಿರ್ಧಾರಕ್ಕೆ ಸಮ್ಮತಿ. ಅದೇ ಸಮಯದಲ್ಲಿ ಅಲ್ಲಿನ ಅಂಚೆ ಕಛೇರಿಯಲ್ಲಿ ತಾತ್ಕಾಲಿಕ ಅಂಚೆಯವನ ಕೆಲಸದ ಜಾಹೀರಾತನ್ನು ನೋಡುತ್ತಾನೆ. ಆ ಕೆಲಸದ ಏಕೈಕ ಕಂಡಿಶನ್ ಎಂದರೆ ಸೈಕಲ್ ಇರುವವರು ಮಾತ್ರ ಅಜಿ೯ ಹಾಕಬಹುದು . ಮಾರಿಯೋಗೆ ಕೆಲಸ ಸಿಗುತ್ತದೆ.

ಅಂಚೆಕಛೇರಿಯವರು ಈ ಹುದ್ದೆ ಸ್ರಷ್ಟಿಸಲು ಕಾರಣ ಖ್ಯಾತ ಕವಿ ಪಾಬ್ಲೊನೆರೂದ. ಚಿಲಿಯ ಈ ಕವಿ ಸ್ವದೇಶದಿಂದ ಬಹಿಷ್ಕ್ರತನಾಗಿ ಇಟಲಿಯ ಈ ದ್ವೀಪಕ್ಕೆ ಪತ್ನಿ (ಅಥವಾ ಪ್ರೇಯಸಿ) ಯೊಂದಿಗೆ ಬಂದಿರುತ್ತಾನೆ. ಆತನಿಗೆ ಬರುವ ಪತ್ರಗಳನ್ನು ತಲುಪಿಸುವುದೊಂದೇ ಮಾರಿಯೋನ ಕೆಲಸ. ಮಹಿಳೆಯರಿಂದಲೇ ಜಾಸ್ತಿ ಪತ್ರಗಳು ಬರುವ ವಿಷಯವನ್ನು ಬೆರಗಿನಿಂದ ನೋಡುತ್ತಲೇ ಮಾರಿಯೋನ ನೌಕರಿ ಶುರುವಾಗುತ್ತದೆ. ಅದೇ ಬೆರಗು ನೆರೂದನ ಕವಿತೆಗಳೆಡೆಗೆ ಮಾರಿಯೋನನ್ನು ಸೆಳೆಯುತ್ತದೆ ಇವನ ಮಗುವಿನಂತಹ ಮುಗ್ಧತೆಗೆ, ನೈಜ ಕೌತುಕಕ್ಕೆ ನೆರೂದ ಕೂಡ ಸೋಲುತ್ತಾನೆ. ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಇರುವಂತಹ ನಂಟಿನಂತೆ ಒಬ್ಬತೀರ ಸಾಮಾನ್ಯ ಮಾರಿಯೋಗೂ, ವಿಶ್ವವಿಖ್ಯಾತ ಕವಿ ನೆರೂದನಿಗೂ ಸ್ನೇಹ ಬೆಳೆಯುತ್ತದೆ. ಈ ಮಧ್ಯೆ Beatrice ಎಂಬ ಹುಡುಗಿಯೊಡನೆ ಮಾರಿಯೋನ ಪ್ರೇಮ. ಅದಕ್ಕೆ ನೆರೂದನ ಸಹಾಯ. ಅವರ ಮದುವೆಯ ದಿನವೆ ನೆರೂದನ ಮೇಲಿನ ಬಹಿಷ್ಕಾರ ರದ್ದಾಗಿ ವಾಪಸಾಗುವ ಸಿಹಿಸುದ್ದಿ. ನೆರೂದ ವಾಪಾಸಾಗುತ್ತಾನೆ ಅವನಿಂದ ಯಾವ ಸುದ್ದಿಯೂ ಬರುವುದಿಲ್ಲ. ನಾಲ್ಕಾರು ವರ್ಷಗಳ ನಂತರ ನೆರೂದ ಅಲ್ಲಿಗೆ ಬಂದಾಗ ಚಿಣ್ಣನೊಬ್ಬ ಎದುರುಗೊಳ್ಳುತ್ತಾನೆ. ಅವನೇ ಪಾಬ್ಲಿಟೋ, ಮಾರಿಯೋನ ಮಗ.

il postino poster

ಹುಟ್ಟುವುದಕ್ಕಿಂತಲೂ ಮೊದಲೇ ಕಮ್ಯುನಿಸ್ಟ್ ತತ್ವದಿಂದ ಆಕರ್ಷಿತನಾಗಿ ಸಭೆಯೊಂದರಲ್ಲಿ ಭಾಗವಹಿಸಲು ಹೋದ ಮಾರಿಯೂ ಸತ್ತ  ಸುದ್ದಿಯನ್ನುಆಕೆ  ಅರಹುತ್ತಾಳೆ .ಸಮುದ್ರ ತೀರದಲ್ಲಿ ಮ್ಲಾನವದನ ನೆರೂದ ತಮ್ಮ ಸ್ನೇಹವನ್ನು ನೆನಪಿಸಿಕೊಳ್ಳುವುದರೊಂದಿಗೆ ಸಿನಿಮಾ ಮುಗಿಯುತ್ತದೆ

Technology ಜತೆಗೆ ಕಲೆಯನ್ನು ಹದವಾಗಿ ಬೆರೆಸಲು ಬಲ್ಲ ನಿರ್ದೇಶಕನ ಚಿತ್ರ ಇದು .ಈ ಕತೆಯನ್ನು ಎಲ್ಲೂ ಅಂದಗೆಡಿಸದೆ ಸಹಜವಾಗಿ ಎರಡು ಗಂಟೆ ಹೇಳಿರುವ ನಿರ್ದೇಶಕನಿಗೆ ಥ್ಯಾಂಕ್ಸ್ ಹೇಳಲೇಬೇಕು. ಅರೆಬರೆ ವಿದ್ಯಾವಂತನೂ ಮುಗ್ಧ ಹಳ್ಳಿಗನೂ ಆಗಿರುವ ಯುವಕನ ಅಭಿನಯದಲ್ಲಿ Massimo troisi ಯದು ನೂರಕ್ಕೆ ಇನ್ನೂರು ಮಾರ್ಕ್ ಕೊಡಲೇಬೇಕಾದ ನಟನೆ . ಆ ಮುಗ್ಧತೆ, ಕೌತುಕ , ನಾಚಿಕೆ , ಬೆರಗು ಎಲ್ಲವನ್ನು ಅತ್ಯಂತ ಸಹಜವಾಗಿ  ನಟಿಸಿರುವ ಈ ನಟ ಆ ಪಾತ್ರವೇ ಆಗಿದ್ದಾನೆ ಸೈಕಲ್ ಇರುವವರು ಕೆಲಸಕ್ಕೆ ಬೇಕೆಂಬ ಜಾಹಿರಾತು ನೋಡಿ ಸೈಕಲ್ ಅನ್ನು ಅಂಚೆಕಚೇರಿಯ ಒಳಗೇ ತೆಗೆದುಕೊಂಡು ಹೋಗುವುದರಿಂದ ಹಿಡಿದು ಕೊನೆಯವರೆಗೂ ಅವನ ಪಾತ್ರ ನಮ್ಮನ್ನು ಕಾಡುತ್ತದೆ .

ನೆರೂದ ಮತ್ತು ಮಾರಿಯೊನ ನಡುವೆ ಸ್ನೇಹ ನವಿರಾಗಿ ಅರಳುವ ರೀತಿ ಅನನ್ಯ . ಅ ಮಹಾನ್ ಕವಿಯ ಅಟೋಗ್ರಾಫ್ ಕೇಳಲು ಕನ್ನಡಿ ಮುಂದೆ ತಾಲೀಮು ನಡೆಸುವ ಮಾರಿಯೋನನ್ನು ನೋಡಿದರೆ ಪ್ರೀತಿ ಉಕ್ಕುತ್ತದೆ ನೆರೂದನ ಕವನಗಳನ್ನು ಓದಲು ಶುರುಮಾಡುವ ಮಾರಿಯೋ ರೂಪಕ ಅಂದರೇನು ಅಂತ ಕೇಳುತ್ತಾನೆ ಅದಕ್ಕೆ ನೆರೂದ ಆಕಾಶ ಆಳ್ತಿದೆ ಅಂದ್ರೇನು ಎಂದು ಪ್ರಶ್ನಿಸುತ್ತಾನೆ ಅದಕ್ಕೆ ಮಾರಿಯೊ ಮಳೆ ಎನ್ನುತ್ತಾನೆ ನೆರೂದ ಇದೇ ರೂಪಕ ಅನ್ನುತ್ತಾನೆ ಇದಿಷ್ಟು ಸುಲಭವಾ ? ಇದಕ್ಕೆ Metaphor ಎನ್ನುವ ಕಷ್ಟದ ಹೆಸರೇಕೆ ಎಂದು ಕೇಳುವ ಮಾರಿಯೋನ ಪ್ರಶ್ನೆಯಲ್ಲಿ ಬಹಳ ಅರ್ಥಗಳಿವೆ. ಇನ್ನೊಮ್ಮೆ ಯಾವುದೋ ಕವಿತೆಯ ಅರ್ಥ ಕೇಳಿದಾಗ ನೆರೂದ ಕವಿತೆ ವಿವರಣೆಯನ್ನು ಮೀರಿದ್ದು ಎನ್ನುತ್ತಾನೆ ಮಾರಿಯೋ ತಾನು ಕವಿಯಾಗುವ ಆಸೆ ವ್ಯಕ್ತಪಡಿಸುತ್ತಾ ಮಹಿಳೆಯರು ಮುಗಿಬೀಳುತ್ತಾರಲ್ಲ ಆ ಕಾರಣಕ್ಕೆ ಎನ್ನುತ್ತಾನೆ ಪೋಸ್ಟಮ್ಯಾನ್. ಹಾಗಿರೋದೇ original ಎನ್ನುತ್ತಾನೆ ನೆರೂದ

ರೂಪಕಗಳು ಮಾರಿಯೋನನ್ನು ಹಗಲಿರುಳು ಬೆಂಬತ್ತುತ್ತವೆ ಶಬ್ದಗಳು ಸಮುದ್ರದ ಮೇಲಿನ ದೋಣಿಯಂತೆ ಹೊಯ್ದಾಡುತ್ತವೆ ಎನ್ನುತ್ತಾನೆ ಮಾರಿಯೋ. ಅರೇ, ನೀನು ರೂಪಕವನ್ನು ಸ್ರಷ್ಟಿಸಿದೆ ಎಂದು ನೆರೂದ ಹೇಳಿದಾಗ ಮಾರಿಯೋ ನಾಚುತ್ತಾನೆ ಇಡೀ ಜಗತ್ತು ಯಾವುದಕ್ಕೆ ರೂಪಕ ಎಂದು ಮಾರಿಯೋ ಪ್ರಶ್ನಿಸಿದಾಗ ನೆರೂದನೂ ತಬ್ಬಿಬ್ಬಾಗುತ್ತಾನೆ ! ಪ್ರೇಯಸಿಗೋಸ್ಕರ ನನ್ನ ಕವಿತೆ ಏಕೆ ಕದ್ದಿದ್ದು ಎಂದು ನೆರೂದ ಕೇಳಿದಾಗ ಕವಿತೆ ಬರಿಯುವವರಿಗೆ ಸೇರಿದ್ದಲ್ಲ,  ಅವಶ್ಯಕತೆ ಇರುವವರಿಗೆ ಸೇರಿದ್ದು ಎಂಬ universal truth ಅನ್ನು ( ಅದರ ಅರಿವಿಲ್ಲದೆ ) ಮಾರಿಯೋ ಹೇಳುತ್ತಾನೆ. ಆಗ ನೆರೂದ ಈ  democratic idea ವನ್ನು ಪ್ರಶಂಸಿಸುತ್ತೇನೆ ಎನ್ನುವ ದೃಶ್ಯ ಪರಿಣಾಮಕಾರಿ.

ದ್ವೀಪವನ್ನು ಬಿಟ್ಟು ಹೋದ ಮೇಲೆ ನೆರೂದ ಎಲ್ಲಿಯೂ ತಮ್ಮ ಹೆಸರನ್ನು ಹೇಳಲೇ ಇಲ್ಲ ಎಂದು Beatrice ಳ ಆಂಟಿ ಹೇಳುವಾಗ. ಅವನು ನಮ್ಮನ್ನು ಏಕೆ ನೆನಪಿಸಬೇಕು ? ನಮ್ಮಂತಹ ಸಾಮಾನ್ಯರನ್ನು ಸ್ನೇಹಿತರಂತೆ ಕಂಡದ್ದು ಅವನ ದೊಡ್ಡಗುಣ ಎನ್ನುವ ಮಾರಿಯೋನ ವಾಸ್ತವದ ಅರಿವು ಮತ್ತು ನೆರೂದ ನನ್ನು ಮಿಸ್ ಮಾಡಿಕೊಳ್ಳುತ್ತಲೇ ಆ ಮಾತು ಹೇಳುವ ದ್ರಶ್ಯದಲ್ಲಂತೂ Troiisi ಯ ಮುಖಭಾವ ಅದ್ಭುತ.

ಇಡೀ ಚಿತ್ರ ಒಂದು ದ್ರಶ್ಯಕಾವ್ಯ. ಪ್ರತೀ ಶಾಟ್‌ಗಳು, ಸಂಭಾಷಣೆ ಎಲ್ಲವೂ ಎಲ್ಲ್ಲೂ ಹದ ತಪ್ಪಿಲ್ಲ. ನಿನ್ನ ದ್ವೀಪದ ವಿಶೇಷತೆ ಏನು ಎಂದು ನೆರೂದ ಕೇಳಿದಾಗ Beatrice Rousseu ಎಂದು ಪೆದ್ದುಪೆದ್ದಾಗಿ ಹೇಳಿ ಮುಗುಳ್ನಗು ಹೊಮ್ಮಿಸಿದ್ದ ಪ್ಯಾರ್ ಕಾ ಮಾರಾ ಮಾರಿಯೋ ನಂತರ ಸಮುದ್ರದ ಅಲೆ ಗಾಳಿ ಹಾಗು – ನೆರೂದನ ನೆನಪಿಗೆ ಹುಟ್ಟುವ ಮುಂಚೆಯೇ ಹೆಸರಿಟ್ಟ –  ಪಾಬ್ಲಿಟೋನ ಹ್ರುದಯದ ಬಡಿತವನ್ನು Record ಮಾಡುವಾಗ ಮನಸನ್ನು ಆರ್ದ್ರಗೊಳಿಸುತ್ತಾನೆ. ಕೊನೆಯಂತೂ ಇದ್ದಕ್ಕಿದ್ದಂತೆ ಎದುರಾಗುವ ಆತನ ಸಾವು ಕಣ್ಣಂಚಿನಲ್ಲಿ ನಿರೂರಿಸುತ್ತದೆ. ಚಿತ್ರದುದ್ದಕ್ಕೂ ಬೆಳೆಯುತ್ತಲೇ ಹೋದ ಮಾರಿಯೋ ಹಾಗು ಅದಕ್ಕೆ ಸಾಕ್ಷಿಯಾಗಿ ಕಣ್ಣಲ್ಲೇ ಮೆಚ್ಚುಗೆ ಸೂಸುತ್ತ ನಿಂತ ನೆರೂದನ ಪಾತ್ರಗಳು ನನ್ನನ್ನು ಕಾಡುತ್ತಲೇ ಇವೆ. ಚಿತ್ರದ ಬಗ್ಗೆ ಎಷ್ಟು ಹೇಳಿದರೂ ಸುಂದರ ಮಾಲೆಯೊಂದರಲ್ಲಿರುವ ಬಿಡಿ ಹೂಗಳನ್ನು ವರ್ಣಿಸಿದಂತೆ. ಮಾಲೆಯ ಚೆಂದ ನೋಡಲು ಚಿತ್ರವನ್ನು ನೋಡಲೇಬೇಕು  !

Advertisements