ಸಿನಿತಜ್ಞ ಮತ್ತು ಸಿನಿಮಾಕೋಶ ಪರಮೇಶ್ ಗುರುಸ್ವಾಮಿ ಕಾಲಂ ಇಂದಿನಿಂದ ಆರಂಭವಾಗಿದೆ. ಪ್ರತಿ ಶುಕ್ರವಾರ ಸಾಂಗತ್ಯದ ಹೊಸ ರಿಲೀಸ್ ಈ ಕಾಲಂನಲ್ಲಿನ ಹೊಸ ಹೊಸ ಸಂಗತಿಗಳು. ಓದಿ ಪ್ರತಿಕ್ರಿಯಿಸಿ.

ಪುಟ್ಟಣ್ಣನವರ “ಬೆಳ್ಳಿಮೋಡ’ ಚಿತ್ರದ ಬಗೆಗಿನ ಸಂಗತಿಗಳಿವು. 

ಕನ್ನಡ ಚಿತ್ರರಂಗದಲ್ಲಿ “ಬೆಳ್ಳಿಮೋಡ’ ಕೆಲ ಪ್ರಥಮಗಳಿಗೆ ಕಾರಣವಾಗಿದ್ದು ಸತ್ಯ. “ಹೊಸ ನಿರೂಪಣಾ ತಂತ್ರ’ ವನ್ನು ಈ ಚಿತ್ರದ ಮೂಲಕ ಹೇಳಿಕೊಟ್ಟವರು ಪುಟ್ಟಣ್ಣ ಕಣಗಾಲ್. ಅದು ಒಂದು ರೀತಿಯಲ್ಲಿ ಕ್ರಾಂತಿಕಾರಕ ಹೆಜ್ಜೆ. ಅದುವರೆಗೂ ಸಿನಿಮಾಗಳ ಹಾಡಿನಲ್ಲಿ ನಾಯಕಿಯ ಹಾವ-ಭಾವ-ವಿಲಾಸ-ವಿಭ್ರಮಗಳಿರುತ್ತಿದ್ದವು. 

puttanna1

ಮೊದಲನೇ ಬಾರಿಗೆ ಬೇರೆಯದೇ ದಿಕ್ಕು ನೀಡಿ, ಮಹಿಳಾ ಪಾತ್ರಕ್ಕೊಂದು ಸ್ವಾಭಿಮಾನ, ಆತ್ಮವಿಶ್ವಾಸ ತುಂಬಿದರು. ಅದೂ ಸಹ ಆ ಹೊತ್ತಿನ ನಿರ್ಧಾರವಾಗಿರಲಿಲ್ಲ (ಟೈಮಿಂಗ್ ಆಫ್ ದಿ ಶೋ ಎನ್ನುವಂತೆ). ಪೂರ್ವ ನಿರ್ಧಾರಿತ ಪ್ರಯತ್ನವಾಗಿತ್ತು.  ಪುರುಷನ ಅಹಂಕಾರವನ್ನು ಹೊಡೆದು ಹಾಕಿದ ಬಹಳ ಮಹತ್ವವಾದ ಮತ್ತು ಶಕ್ತಿಯುತವಾದ ಪಾತ್ರವನ್ನು ರೂಪಿಸಿದರು. ಅದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿಯವರೆಗಿದ್ದ ವೈಯ್ಯಾರದ ಮಹಿಳೆ, ಅಂದಿನಿಂದ ಸ್ವಾಭಿಮಾನಿ ಮಹಿಳೆಯಾಗಿ ಗೋಚರಿಸಿದಳು. ಅದು ಚಿತ್ರರಂಗಕ್ಕೆ ಹೊಸದು. ಸಿನಿಮಾ ತಾಂತ್ರಿಕತೆಯೂ ಸಕಾರಾತ್ಮಕ ನೆಲೆಯತ್ತ ಹೊರಳಿಕೊಂಡಿತು. 

ಮೂಲತಃ ತ್ರಿವೇಣಿಯವರ ಕಾದಂಬರಿಯಲ್ಲೂ  ಆ ಪಾತ್ರಕ್ಕೆ ಅಷ್ಟೊಂದು ಸಮರ್ಥನಾ ನೆಲೆಯಲ್ಲಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಪುಟ್ಟಣ್ಣರ ಚಿತ್ರದಲ್ಲಿ ಪವರ್‌ಪುಲ್ ಪಾತ್ರವಾಗಿ ಹೊಮ್ಮಿದಳು. ಚಿತ್ರದ ಕೊನೆಯಲ್ಲಿ ಪ್ರೇಮದ ಸಂಕೇತವಾಗಿದ್ದ ವಸ್ತುವನ್ನೇ ಕೊಡಲಿಯಿಂದ ತುಂಡು ಮಾಡುವಾಗಿನ ಅವಳ ಮನಃಸ್ಥಿತಿ-ಬಹಳ ಭಿನ್ನವಾಗಿ ಮೂಡಿಬಂದಿದೆ. ಮನಸ್ಸಿಗೆ ತೀರಾ ಘಾಸಿಯಾಗುವಂತ ಇಮೇಜ್. 

kalpana12

ಇವೆಲ್ಲ ಸಂಗತಿಗಳನ್ನು ನಾವೇಕೆ ತೀರಾ ಗಂಭೀರವಾಗಿ ಪರಿಗಣಿಸಬೇಕೆಂದರೆ, ಆ ಹೊತ್ತಿನಲ್ಲಿ ಯಾರೂ ಜನಪ್ರಿಯ (ಪಾಪ್ಯುಲಾರಿಟಿ) ಇಮೇಜ್‌ಗಳ ವಿರುದ್ಧ ಹೋಗುವ ಧೈರ್ಯ ಮಾಡುತ್ತಿರಲಿಲ್ಲ. ಅದುವರೆಗೆ ನಾಯಕಿ ಪಾತ್ರ ಕೇವಲ ವಿಲಾಸ-ವಿಭ್ರಮಗಳಲ್ಲೇ ಮುಳುಗಿತ್ತು. ಪುರುಷನಿಗೆ ಎದುರಾಗಿ ನಿಲ್ಲುವ ಅದರಲ್ಲೂ ಆತ್ಮವಿಶ್ವಾಸದ ಪ್ರತೀಕದಂತೆ ಸೆಟೆದು ನಿಲ್ಲುವ ಪ್ರತಿಮೆ ಸೃಷ್ಟಿಯಾಗಿರಲಿಲ್ಲ. ಆದರೆ, ಪುಟ್ಟಣ್ಣ ಆ ಮೂಲಕ ತಮ್ಮ ಪ್ರಗತಿಯ ನೆಲೆಯನ್ನು ಸ್ಪಷ್ಟವಾಗಿ ಅನಾವರಣಗೊಳಿಸಿದರು. ಆಗಿನ ಅವರ ಧೈರ್ಯ ಎಲ್ಲರೂ ಮೆಚ್ಚಲೇಬೇಕಾದದ್ದು. 

ತಮಾಷೆಯ ಸಂಗತಿಯೆಂದರೆ, ಬೆಳ್ಳಿಮೋಡ ಚಿತ್ರ ಸಿದ್ಧವಾಯಿತು. ದುಡ್ಡು ಹಾಕಿದ ನಿರ್ಮಾಪಕರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಯಿತು. ಚಿತ್ರ ನೋಡಿದ ನಿರ್ಮಾಪಕರು ಹೇಳಿದ್ದು ಏನು ಗೊತ್ತೇ…? “ಕ್ಲೈಮ್ಯಾಕ್ಸ್ ಸರಿಯಿಲ್ಲ. ಇವತ್ತಿನ ಸಂದರ್ಭಕ್ಕೆ ಹೊಂದುವಂತಿಲ್ಲ. ಅದನ್ನು ಬದಲಾಯಿಸಿ’. ಪುಟ್ಟಣ್ಣ ಒಪ್ಪಲಿಲ್ಲ. ತಮ್ಮ ಪ್ರತಿಮೆ (ಇಮೇಜ್) ಅನ್ನು ನಿರ್ಮಾಪಕರಿಗೆ ಅರ್ಥೈಸಲು ಪ್ರಯತ್ನಿಸಿದರು. ಅದಕ್ಕೆ ನಿರ್ಮಾಪಕರು, “ನೋಡಿ, ಇವೆಲ್ಲಾ ಜನಪ್ರಿಯವಾದ ಇಮೇಜ್‌ಗಳಲ್ಲ. ಜನ ತಿರಸ್ಕರಿಸಿದರೆ ಹಾಕಿದ ದುಡ್ಡು ನಷ್ಟವಾಗುತ್ತದೆ. ಒಂದು ಕೆಲಸ ಮಾಡಿ. ಕೊನೆ ಸನ್ನಿವೇಶವನ್ನು ಬದಲಾಯಿಸಿ ಇಲ್ಲವೇ ನಮ್ಮ ದುಡ್ಡು ಕೊಟ್ಟು ಬಿಡಿ’ ಎಂದು ಒಪ್ಪಂದದಂತೆ ಹೇಳಿಬಿಟ್ಟರು. 

ಪುಟ್ಟಣ್ಣರಲ್ಲಿ ಹಣ ಕೊಟ್ಟು ಚಿತ್ರ ತಮ್ಮಲ್ಲೇ ಇಟ್ಟುಕೊಳ್ಳಲು ಹಣವಿರಲಿಲ್ಲ. ಆದರೆ ತಾವೇ ಸೃಷ್ಟಿಸಿದ ಒಂದು ಸಮರ್ಥ ಪ್ರತಿಮೆಯನ್ನು ಬಿಟ್ಟುಕೊಡಲೂ ಸುತರಾಂ ಮನಸ್ಸು ಒಪ್ಪಿರಲಿಲ್ಲ. ಅಂತಿಮವಾಗಿ ಕೆಸಿಎನ್ ಗೌಡ ಅವರ ಬಳಿ ಹೋಗಿ “ಸಾರ್, ನಾನು ಇಂಥದೊಂದು ಚಿತ್ರವನ್ನು ವಿಭಿನ್ನವಾಗಿ ಮಾಡಿದ್ದೇನೆ. ಇದಕ್ಕೆ ಕೊಟ್ಟಿರುವ ಕೊನೆ (ಕ್ಲೈಮ್ಯಾಕ್ಸ್) ತೀರಾ ಭಿನ್ನವಾಗಿದೆ. ಇದು ಇಂದು ಜನಪ್ರಿಯ ಇಮೇಜ್‌ಗಳಿಗೆ ವಿರುದ್ಧ ಎನಿಸಿದರೂ ಯಶಸ್ವಿಯಾಗುತ್ತದೆ. ದಯವಿಟ್ಟು ಆ ಸಿನಿಮಾವನ್ನು ಖರೀದಿಸಿ ದುಡ್ಡು ಕೊಡಿ’ ಎಂದು ವಿನಂತಿಸಿಕೊಂಡರು. 

ಕೆಸಿಎನ್ ಗೌಡ ಒಪ್ಪಿ ಖರೀದಿಸಿದರು. ಪುಟ್ಟಣ್ಣ ತಮ್ಮ ಮೊದಲ “ಕೊನೆ’ ಯನ್ನು ಉಳಿಸಿಕೊಂಡರು. ಇದು ನಮ್ಮ ಕನ್ನಡದ್ದೇ ಆದ ಚಿತ್ರಭಾಷೆ. ಅದನ್ನು ಮೊದಲಿಗೆ ಕೊಟ್ಟಿದ್ದು ಪುಟ್ಟಣ್ಣ. ಹಾಗೆಂದು, ಅವರೇನೂ ಅಲೆಯ ವಿರುದ್ಧವಾಗಿ ಹೋಗಿರಲಿಲ್ಲ. ಅಲೆಯೊಂದಿಗೆ ಹೊಂದಿಕೊಳ್ಳುತ್ತಲೇ ಹೊಸದನ್ನು ಪರಿಚಯಿಸುವ ಪ್ರಯತ್ನ ಮಾಡಿದರು. ಅವರು ತಮ್ಮ ಸಿನಿಮಾ ಬದುಕಿನುದ್ದಕ್ಕೂ ನಡೆಸಿದ್ದು ಇದೇ. ಚಲನಚಿತ್ರದ ಪಾರಂಪರಿಕ ಅಂಶಗಳನ್ನು ಇಟ್ಟುಕೊಂಡು ಹೊಸದಾದ ಕನ್ನಡ ಭಾಷೆಯನ್ನು ರೂಪಿಸಿದರು. ಅದು ನಿಜವಾದ, ನಮ್ಮ ನೆಲೆಯ, ಸ್ವಂತಿಕೆಯ ಚಿತ್ರಭಾಷೆ.

Advertisements