ಇರಾನಿ ಚಿತ್ರ ಜಗತ್ತು ಬಹಳ ನಾಜೂಕಿನದು, ಹಾಗೆಯೇ ಅಲ್ಲಿಂದ ಬರುವ ಚಿತ್ರಗಳೂ ಬಹಳ ಸೂಕ್ಷ್ಮ ಸಂವೇದನೆಯವು. ಅದರಲ್ಲೂ ಮಜಿದ್ ಮಜಿದಿ ನಿರ್ದೇಶಕ ಹೊಸ ಅಲೆಯ ಚಿತ್ರಗಳ ಪಂಥವನ್ನು ಬೆಳೆಸಿದವರು. ಅವರಿಗೆ ಐವತ್ತು ತುಂಬಿದ ಸಂದರ್ಭದಲ್ಲಿ ಕಾರ್ತಿಕ್ ಪರಾಡ್ಕರ್ ಇರಾನ್ ಸಿನಿಮಾ ಹಾಗೂ ಮಜಿದ್ ಮಜಿದಿ ಕುರಿತು ಬರೆದಿದ್ದಾರೆ. ಅವರು ಕಳುಹಿಸಿದ ಲೇಖನ ಇಲ್ಲಿ ಪ್ರಕಟಿಸಲಾಗಿದೆ. ಹಾಗೆಯೇ ನಮ್ಮ ವಿಡೀಯೋ ಆಲ್ಬಂನಲ್ಲಿ ಮಜಿದ್ ಮಜಿದಿಯ ಮೂರು ಚಿತ್ರಗಳ ತುಣುಕುಗಳನ್ನು ಹಾಕಲಾಗಿದೆ. ಅದನ್ನೂ ನೋಡಿ. 

ಮಜಿದ್ ಮಜಿದಿಯ ಫಸ್ಟ್ ಹಾಫ್ ಮುಗಿದಿದೆ. ಎಪ್ರಿಲ್ 17 ಕ್ಕೆ ಭರ್ತಿ ಐವತ್ತು ವರ್ಷ.  ಮಜಿದಿ ಹೆಸರು ಗೊತ್ತಿಲ್ವಾ? ಕೊನೆ ಪಕ್ಷ “ಚಿಲ್ಡ್ರನ್ ಆಫ್ ಹೆವನ್” ಸಿನಿಮಾ ನೆನಪಿದೆಯಾ?

ಬಡ ಕುಟುಂಬದ ಅಣ್ಣನೊಬ್ಬ ತನ್ನ ತಂಗಿಗೆ ಶೂ ಕೊಡಿಸಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಕತೆ ಹೊಂದಿದ್ದ ಸಿನಿಮಾ-“ಚಿಲ್ಡ್ರನ್ ಆಫ್ ಹೆವನ್”. ಇದನ್ನು ನಿರ್ದೇಶಿಸಿದ್ದು ಮಜಿದ್ ಮಜಿದಿ. 1998ರಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯ ಮೆಟ್ಟಿಲೇರಿದ್ದ ಇರಾನಿ ಸಿನಿಮಾವಿದು. ನಿನ್ನೆ ಮೊನ್ನೆಯಷ್ಟೇ ವಿಶ್ವದ ವಿವಿಧ ಭಾಷೆಯ ಸಿನಿಮಾ ನೋಡಲು ಪ್ರಾರಂಭಿಸಿದವರಿಗೆ ಹೆಚ್ಚಿನವರು ಈ ಸಿನಿಮಾವನ್ನು ನೋಡಲು ಮರೆಯದಿರಿ ಎನ್ನುತ್ತಾರೆ. 

ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ಹೀರೋ ಅಲಿಯ ಜತೆ ಕುಶಲೋಪರಿ ನಡೆಸುತ್ತಿರುವ ಮಜಿದ್ ಮಜಿದಿ
ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ಹೀರೋ ಅಲಿಯ ಜತೆ ಕುಶಲೋಪರಿ ನಡೆಸುತ್ತಿರುವ ಮಜಿದ್ ಮಜಿದಿ

ಇವತ್ತು ಇರಾನ್ ಸಿನಿಮಾ ಅಂದ ತಕ್ಷಣ ಅಬ್ಬಾಸ್ ಕಿಯಾರಸ್ತೋಮಿ, ಮೊಹ್ಸೀನ್ ಮಕ್ಮಲ್‌ಬಫ್, ಜಾಫರ್ ಪನಾಹಿ ಜೊತೆಗೆ ನೆನಪಾಗುವ ಹೆಸರು ಮಜಿದ್ ಮಜಿದಿಯದ್ದು. ಹೊಸ ಅಲೆಯ ಇರಾನಿ ಸಿನಿಮಾ ನಿರ್ಮಾಣದಲ್ಲಿ ಇವರದ್ದು ವಿಶ್ವಕ್ಕೆ ಪರಿಚಿತ ಹೆಸರು.

ಈ ಸಂದರ್ಭದಲ್ಲೇ ಇರಾನ್ ಸಿನಿಮಾ ಕುರಿತು ಎರಡು ಮಾಹಿತಿ ನೀಡುತ್ತೇನೆ. ಇರಾನ್ ಸಿನಿಮಾ (ಬಾಕ್ಸ್ ಐಟಂ) 

ಪರ್ಶಿಯನ್ನರ ದೃಶ್ಯ ಮಾಧ್ಯಮಕ್ಕೆ ಸುದೀರ್ಫ ಇತಿಹಾಸವಿದೆ.  ಕ್ರಿ.ಪೂ ೫೦೦ರಿಂದ ದೃಶ್ಯ ಅಭಿವ್ಯಕ್ತಿ ಪ್ರಾರಂಭವಾಯಿತು ಎನ್ನುವುದಕ್ಕೆ ದಾಖಲೆಗಳಿವೆ. ದೃಶ್ಯ ಕಲೆ, ಆಲಂಕಾರಿಕ ಕಲೆ, ಸಾಹಿತ್ಯ, ಕಟ್ಟಡ ನಿರ್ಮಾಣ, ನೃತ್ಯ, ಸಂಗೀತ ಎಲ್ಲದರಲ್ಲೂ ಪರ್ಶಿಯನ್ನರು ಛಾಪು ಮೂಡಿಸಿದವರು. ೨೦ನೇ ಶತಮಾನದಲ್ಲಿ ಸಿನಿಮಾ ಪರ್ಶಿಯನ್ನರಿಗೆ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ದಾರಿಯಾಗಿ ಕಂಡಿತು.

ಪಲ್ಹವಿ ಸಾಮ್ರಾಜ್ಯಕ್ಕಿಂತ ಮೊದಲು ಪರ್ಶಿಯಾವನ್ನು ಆಳಿದ್ದ  ಮೇಫರ್ ಅಲ್ ದಿನ್ ಶಾ 1900ರಲ್ಲಿ ಪ್ಯಾರೀಸ್‌ಗೆ ಭೇಟಿಕೊಟ್ಟಾಗ ಕ್ಯಾಮರಾವೊಂದನ್ನು ತಂದರು. ಇದೇ ಇರಾನಿನ ಸಿನಿಮಾ ನಿರ್ಮಾಣಕ್ಕೆ ಪ್ರಾರಂಭಿಕ ಹೆಜ್ಜೆಯಾಯಿತು. 2001 ರಲ್ಲಿ ಇರಾನ್ ಸಿನಿಮಾ ನೂರು ವರ್ಷಗಳ ಸಂಭ್ರಮವನ್ನು ಆಚರಿಸಿತು. ಚೀನಾ ಮತ್ತು ಇರಾನ್ ತೊಂಭತ್ತರ ದಶಕದಿಂದೀಚೆಗೆ ವಿಶ್ವ ಕಂಡ ಮಾನವೀಯ ಸ್ಪಂದನೆಗಳ ಚಿತ್ರಗಳ ಗೂಡು ಎನ್ನುತ್ತಾರೆ ಹಲವಾರು ಚಿತ್ರ ವಿಮರ್ಶಕರು.

ದರಿಯಸ್ ಮೆಹ್ರ್‌ಜುಯಿ 1969 ರಲ್ಲಿ “ದಿ ಕೌ” ಸಿನಿಮಾ ನಿರ್ದೇಶಿಸುವುದರೊಂದಿಗೆ ಹೊಸ ಅಲೆಯ ಚಿತ್ರಗಳು ಇರಾನಿನಲ್ಲಿ ಪ್ರಾರಂಭವಾದವು.  ಇಂದು ಇರಾನಿನಲ್ಲಿ ಈ ರೀತಿಯ ಸಿನಿಮಾ ನಿರ್ದೇಶಿಸುವವರ ಪಟ್ಟಿ ದೊಡ್ಡದಿದೆ. ಹೊಸ ಅಲೆಯ ಇರಾನಿ ಸಿನಿಮಾಗಳು ಯುರೋಪಿನ ಕಲಾತ್ಮಕ ಸಿನಿಮಾಗಳನ್ನು, ಮುಖ್ಯವಾಗಿ “ಇಟಾಲಿಯನ್ ನಿಯೋರಿಯಲಿಜಂ” ಗುಣಗಳನ್ನು ಹಂಚಿಕೊಂಡಿವೆ.  

ಬದುಕಿನ “ಕತೆ”

1959ರಲ್ಲಿ ಇರಾನ್ ರಾಜಧಾನಿ ಟೆಹ್ರಾನ್‌ನ ಮಧ್ಯಮ ವರ್ಗದಲ್ಲಿ ಮಜಿದ್ ಮಜಿದಿ ಹುಟ್ಟಿದ್ದು. ತನ್ನ ಹದಿನಾಲ್ಕನೇ ವಯಸ್ಸಿಗೆ ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ನಟಿಸಲು ಪ್ರಾರಂಭಿಸಿದ್ದ ಬಾಲಕ ಮಜಿದಿ. ನಂತರದ ದಿನಗಳಲ್ಲಿ ಟೆಹ್ರಾನ್‌ನಲ್ಲಿರುವ “ಇನ್ಟ್ಸಿಟ್ಯೂಟ್ ಆಫ್ ಡ್ರಾಮಾಟಿಕ್ ಆರ್ಟ್ಸ್”ನಲ್ಲಿ ಕಲಿಕೆ ಮುಂದುವರಿಕೆ. 1979ರಲ್ಲಿ ನಡೆದ “ಇರಾನ್ ಕ್ರಾಂತಿ” ಮಜಿದ್ ಮಜಿದಿಯ ಜೀವನವನ್ನೇ ಬದಲಿಸಿತು (ಶಾ ಮೊಹಮ್ಮದ್ ರೆಜಾ ಪಲ್ಹವಿಯ ರಾಜಪ್ರಭುತ್ವವನ್ನು ಮುರಿದು ಮುಸ್ಲಿಂ ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ರಾಂತಿ ನಾಂದಿಯಾತು. ಇದರ ನೇತೃತ್ವ ವಹಿಸಿದ್ದು ಆಯೋತೊಲ್ಲ ಖೊಮೇನಿ). 

ಸಿನಿಮಾವನ್ನು ಇಷ್ಟ ಪಡುತ್ತಿದ್ದ ಮಜಿದಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲು ಪ್ರಾರಂಭವಾಯಿತು. 1981 ರಿಂದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ, 1985 ರಲ್ಲಿ ಮೊಹ್ಸೀನ್ ಮಕ್ಮಲ್‌ಬಫ್  ನಿರ್ದೇಶನದ ಮೊದಲ ಚಿತ್ರ “ಬಾಯ್ಕಾಟ್”ನಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ಹೆಸರು, ಅವಕಾಶ ಎರಡೂ ಸಿಕ್ಕಿತು.  ಮಕ್ಮಲ್‌ಬಫ್‌ನ ಜೀವನಕ್ಕೆ ಹತ್ತಿರವಾಗಿದ್ದ ಈ ಕತೆಯಲ್ಲಿ ಇರಾನ್ ಕ್ರಾಂತಿ ಪೂರ್ವ ವಾತಾವರಣದಲ್ಲಿ ಕಥಾ ನಾಯಕ ತನ್ನ ಕಮ್ಯುನಿಷ್ಟ್ ನಿಲುವುಗಳಿಂದಾಗಿ ಮರಣದಂಡನೆಗೆ ಗುರಿಯಾಗುತ್ತಾನೆ.

ಈ ಸಿನಿಮಾ ನಂತರ ಕೆಲವು ಸಿನಿಮಾಗಳಲ್ಲಿ ಮಜಿದಿಯ ನಟನೆ ಮುಂದುವರಿಯಿತು. ಕ್ರಮೇಣ ಕಿರುಚಿತ್ರಗಳತ್ತ ಆಸಕ್ತಿ ಹೊರಳಿತು.

1993 ರಲ್ಲಿ “ಬದುಕ್” ಸಿನಿಮಾದ ಮೂಲಕ ಮಜಿದ್ ಮಜಿದಿಯ ನಿರ್ದೇಶನದ ಬದುಕು ಶುರುವಾಯಿತು. ಮಕ್ಕಳ ಜೀತದ ಕಥೆ ಹೊಂದಿದ್ದ ಈ ಸಿನಿಮಾ ಇರಾನಿನಲ್ಲೇ ಬ್ಯಾನ್ ಆಗುವ ಭೀತಿಯಿತ್ತು ಎಂದು ಮಜಿದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಂತರ ಮಜಿದಿಯ ಚಿತ್ರಯಾತ್ರೆ ನಿರಾತಂಕವಾಗಿ ಸಾಗಿತು. “ದಿ ಫಾದರ್”, “ಚಿಲ್ಡ್ರನ್ ಆಫ್ ಹೆವನ್”, “ಕಲರ್ ಆಫ್ ಪ್ಯಾರಡೈಸ್”, “ಬರನ್”, “ದಿ ವಿಲ್ಲೋ ಟ್ರೀ” ಸಿನಿಮಾಗಳನ್ನು ನಿರ್ದೇಶಿಸಿದರು. ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾ “ದಿ ಸಾಂಗ್ ಆಫ್ ಸ್ಪ್ಯಾರೋಸ್”. ಇದರ ಜೊತೆ ೪ ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ಚಿತ್ರಗಳು 13. ಚಿತ್ರ ಬರಹಗಾರನಾಗಿ 15 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. 2008 ರ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನಾ ಸರ್ಕಾರ ಬೀಜಿಂಗ್ ನಗರವನ್ನು ಪರಿಚಯಿಸುವ ಡಾಕ್ಯುಮೆಂಟರಿ ನಿರ್ಮಾಣಕ್ಕೆ ವಿಶ್ವದ 5 ಸಿನಿಮಾ ನಿರ್ದೇಶಕರನ್ನು ಆಹ್ವಾನಿಸಿತ್ತು. ಅದರಲ್ಲಿ ಮಜಿದ್ ಮಜಿದಿ ಸಹ ಒಬ್ಬರು. 

“ಚಿತ್ರ-ಕತೆ”

ಮಜಿದಿಯ ಸಿನಿಮಾ ಜಗತ್ತಿನ ಪಾತ್ರಗಳು ಹೆಚ್ಚು ಮಾನವೀಯವಾಗಿ ಸ್ಪಂದಿಸುವಂತಹದ್ದು. ಅವರೆಲ್ಲಾ ಬಹುತೇಕ ನಮ್ಮ ಪಕ್ಕದ ಮನೆ, ಬೀದಿಯವರೇ. “ಕಲರ್ ಆಫ್ ಪ್ಯಾರಡೈಸ್”ನಲ್ಲಿ ಬರುವ ದೈಹಿಕವಾಗಿ ವಿಕಲಾಂಗ ಕಣ್ಣು ಕಾಣದ ಮಗ ಮೊಹಮ್ಮದ್, ಮಾನಸಿಕವಾಗಿ ವಿಕಲಾಂಗನಾಗುತ್ತಾ ಹೋಗುವ ಅಪ್ಪ ಇಬ್ಬರೂ ನಮ್ಮದೇ ಜಗತ್ತಿನ ಪಾತ್ರಗಳಾಗುತ್ತವೆ. “ಬರನ್” ಸಿನಿಮಾದಲ್ಲಿ ಹುಡುಗಿಯ ಚಪ್ಪಲಿ ಹೆಜ್ಜೆಗುರುತಲ್ಲಿ ನೀರು ತುಂಬಿಕೊಳ್ಳುವಾಗ ತದೇಕಚಿತ್ತದಿಂದ ನೋಡುವ ಲತೀಫ್‌ನ ನಿಷ್ಕಲ್ಮಷ ಪ್ರೀತಿ ಕೂಡ ನಮ್ಮ ಜಗತ್ತಿನ ಒಂದು ಭಾಗವೇ. 

ಅಲ್ಲೊಂದು ಅಸಹಾಯಕತೆಯಿದೆ. ಬಡತನದ ಬವಣೆಯಿದ್ದರೂ ಅದರೊಳಗೆ ಬೇಯುತ್ತಾ ಮೆದುವಾಗುವ ಸಹನೆಯಿದೆ. ವಾಸ್ತವದಲ್ಲಿ ಬದುಕುವ ಹುಮ್ಮಸ್ಸು ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುತ್ತದೆ. ಒಂದು ಕುಟುಂಬದ ಅಪ್ಪನೋ, ಅಣ್ಣನೋ ಚಿಕ್ಕ ಚಿಕ್ಕ ಸಂತೋಷಗಳನ್ನು ಗಳಿಸಿಕೊಳ್ಳುವಲ್ಲಿ, ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಾನಸಿಕ ತುಮುಲಗಳು, ಬದುಕಿನ ಸಣ್ಣ ಸಣ್ಣ ವೈರುಧ್ಯಗಳು ಮಜಿದಿಗೆ ಮಹತ್ವದ್ದಾಗಿ ಕಾಣುತ್ತದೆ.  ಮಜಿದಿಯ ಸಿನಿಮಾಗಳಲ್ಲಿ ಜನಸಾಮಾನ್ಯನ ದಿನನಿತ್ಯದ ಬದುಕಿನ ಕಾವ್ಯ ಮತ್ತು ವಾಸ್ತವ ಒಟ್ಟಿಗೆ ಚಿತ್ರಿತವಾಗುತ್ತಾ ಹೋಗುತ್ತದೆ. ಮಾನವೀಯ ಸ್ಪಂದನೆ ಮನುಷ್ಯನ ಮೂಲಭೂತ ಕ್ರಿಯೆಯಾಗಿರುವುದರ ಜೊತೆಗೆ ಸಾರ್ವತ್ರಿಕವಾಗಿರುವುದರಿಂದ ಜನಸಾಮಾನ್ಯನ ಸಾಂಸ್ಕೃತಿಕ ಸಂಫರ್ಷಳು ಸಹ ಸೂಕ್ಷ್ಮವಾಗಿ ದಾಖಲಾಗುತ್ತವೆ. ಕೊಲ್ಲುವ ಕ್ರಿಯೆ ಹೆಚ್ಚು ಜೀವಂತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಿನಿಮಾಗಳು ಹೆಚ್ಚು ಅರ್ಥಪೂರ್ಣ. ಇರಾನ್ ಕವಿಗಳಾದ ಹಫೀಸ್, ಸಾದಿ, ರೂಮಿ ಕಾವ್ಯ ಮಾನವೀಯತೆಯನ್ನು ಎತ್ತಿ ಹಿಡಿದಿತ್ತು. ಸಿನಿಮಾಗಳಲ್ಲಿರುವ ಮಾನವೀಯ ನೆಲೆಗಳಿಗೆ ಇದೇ ಮೂಲ ಎನ್ನುತ್ತಾರೆ ಮಜಿದಿ.  

ಮಜಿದ್ ಮಜಿದಿಯ ಸಿನಿಮಾಗಳಲ್ಲಿನ ಮುಸ್ಲಿಂ ಹೆಣ್ಣು ಪಾತ್ರಗಳಿಗೆ ಹೆಚ್ಚು ಜೀವಂತಿಕೆಯಿದೆ. “ದಿ ಫಾದರ್” ಚಿತ್ರದಲ್ಲಿ ಬರುವ ತಾಯಿಯ ಪಾತ್ರ ತನ್ನ ಮಕ್ಕಳಿಗಾಗಿ ಮಾಡಿಕೊಳ್ಳುವ ಎರಡನೇ ಮದುವೆ, “ಬರನ್” ಚಿತ್ರದಲ್ಲಿ ಹುಡುಗಿ ಹುಡುಗನಂತೆ ವೇಷ ಧರಿಸಿ ದುಡಿಯುವ ಕತೆ, ವ್ಯಕ್ತಿತ್ವ ಎಲ್ಲದರಲ್ಲೂ ಡೈನಮಿಕ್ ಅಂಶಗಳು ಕಾಣುತ್ತವೆ. ಆದರೆ ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಮುಸ್ಲಿಂ ಮಹಿಳೆಯರನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಹೀನ ಎಂದು ಚಿತ್ರಿಸುವುದಲ್ಲಿ ಪೂರ್ವಾಗ್ರಹಗಳಿವೆ, ದುರುದ್ದೇಶಗಳಿವೆ ಎನ್ನುವ ತಕರಾರು ಮಜಿದಿಯದ್ದು. 

“ನನ್ನ ಸಿನಿಮಾಗಳಲ್ಲಿ ಭೂತ ಮತ್ತು ಭವಿಷ್ಯದ ಮಧ್ಯೆ ಸೇತುವೆ ಕಟ್ಟಲು ಪ್ರಯತ್ನಿಸುತ್ತಿರುತ್ತೇನೆ. ನಾನು ನಿನ್ನೆ ಬದುಕಿದ, ಕಲಿತ ಅನುಭವಗಳಿಂದ ಸತ್ಯ ಮತ್ತು ವಾಸ್ತವದ ಕಡೆಗೆ ಚಲಿಸುತ್ತಿರುತ್ತೇನೆ. ನನ್ನ ಸಿನಿಮಾ ಮೇಕಿಂಗ್ ಎಲ್ಲರೂ ಬೆರೆತು ಚಿತ್ರೀಕರಿಸುವ ರೀತಿಯದ್ದು” ಎನ್ನುತ್ತಾರೆ ಮಜಿದ್ ಮಜಿದಿ. ನೈಜವಾಗಿ ಸಿನಿಮಾದ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಮಜಿದಿಗೆ ಕಾಳಜಿ ಜಾಸ್ತಿ. ಅದಕ್ಕಾಗಿಯೇ ಕ್ಯಾಮರಾವನ್ನು ಗುಪ್ತವಾಗಿ ಇಟ್ಟು ಚಿತ್ರೀಕರಿಸುತ್ತಾರೆ.

ಜನರ ನಿತ್ಯಜೀವನವನ್ನು ಯಾವುದೇ ಕೃತಕತೆಯಿಲ್ಲದೇ ಸೆರೆ ಹಿಡಿಯಲು ಇದು ಸಹಕಾರಿ ಎನ್ನುವ ಅಭಿಪ್ರಾಯ ಅವರದ್ದು.  “ಚಿಲ್ಡ್ರನ್ ಆಫ್ ಹೆವನ್” ಚಿತ್ರದಲ್ಲಿ ಶೂ ಹಾಕಿಕೊಂಡು ಅಲಿ, ಜಾರಾ ಓಣಿಯೊಳಗಿನಿಂದ ಓಡಿ ಶಾಲೆಗೆ ಹೋಗುವ ದೃಶ್ಯವಿದೆಯಲ್ಲ ಅದನ್ನು ಗುಪ್ತ ಸ್ಥಳದಲ್ಲಿ ಕ್ಯಾಮರಾವನ್ನು ಇಟ್ಟು ಚಿತ್ರೀಕರಿಸಿದ್ದು. ಶೂಟಿಂಗ್ ನಡೆಯುತ್ತಿದೆ ಅಂತ ಸುತ್ತಮುತ್ತಲಿನ ಜನರಿಗೆ ಗೊತ್ತಿರುವುದಿಲ್ಲ. ಸಿನಿಮಾದ ಮುಖ್ಯ ಪಾತ್ರಗಳಿಗೆ ಸಹ ಕೆಲವೊಮ್ಮೆ ಯಾವ ಕಡೆಯಿಂದ ಚಿತ್ರಿಸುತ್ತಾರೆ ಎನ್ನುವ ಮಾಹಿತಿಯಿರುವುದಿಲ್ಲ. ಇದು ಸಿನಿಮಾವನ್ನು ಮತ್ತಷ್ಟು ನಿಖರವಾಗಿಸುತ್ತದೆ.

“ಮಕ್ಕಳು ಮತ್ತು ಅಪ್ರಾಪ್ತ ವಯಸ್ಸಿನ ನಟರು ಯಾವುದೇ ರೀತಿಯ ಪೂರ್ವ ನಿರ್ಧರಿತ ನಟನೆಗೆ ಮೊರೆ ಹೋಗುವುದಿಲ್ಲ. ಆದ್ದರಿಂದ ಮುಗ್ಧ ಪ್ರಪಂಚ ಕ್ಯಾಮರಾ ಮುಂದೆ ನೈಜವಾಗಿ, ನಿಖರವಾಗಿ ಸೃಷ್ಟಿಯಾಗುತ್ತದೆ”. ಇದು ಮಜಿದಿಯ ಅನಿಸಿಕೆ. “ಬರನ್”, “ಚಿಲ್ಡ್ರನ್ ಆಫ್ ಹೆವನ್” ಇದಕ್ಕೆ ಉದಾಹರಣೆ. ಇವೆಲ್ಲಾ ಮಜಿದಿಯ ಸಿನಿಮಾ ನಿರ್ಮಾಣದ ಹಿಂದಿರುವ ಶೃದ್ಧೆಗೆ ಸಾಕ್ಷಿ.  

“ಸಿನಿಮಾ ನಿರ್ಮಾಣದಲ್ಲಿ ಅಡೆತಡೆಗಳು ಇದ್ದೇ ಇವೆ… ಆದರೆ ಬಲಹೀನ ಸಿನಿಮಾ ಸೃಷ್ಟಿಸಲು ಯಾವುದೇ ರಿಯಾಯಿತಿಗಳಿಲ್ಲ” ಎನ್ನುವುದು ಮಜಿದಿ ನಂಬಿಕೊಂಡು ಬಂದ ಸಿದ್ಧಾಂತ. ಬದುಕಿನ ಬವಣೆಗಳ ನಡುವೆ ಮಸುಕಾಗದ ಜೀವನ ಪ್ರೀತಿಯ ಬಣ್ಣವನ್ನು ತೆರೆಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಎಲ್ಲರೂ ಹಪಹಪಿಸುತ್ತಾರೆ. “ಚಿಲ್ಡ್ರನ್ ಆಫ್ ಹೆವನ್” ಕೊನೆಯಲ್ಲಿ ಅಲಿ ಗುಳ್ಳೆಗಳೆದ್ದ ಕಾಲನ್ನು ನೀರಿನ ಕೊಳದಲ್ಲಿ ಅದ್ದುತ್ತಾನಲ್ಲ, ಆಗ ಮೀನುಗಳು ಆತನ ಪಾದದ ಬಳಿ ಹರಿದಾಡುತ್ತಾ ಮುತ್ತನ್ನಿಡುತ್ತವಲ್ಲ ಅಂತಹ ಸಾಂತ್ವನ ಎಲ್ಲರಿಗೂ ಬೇಕಾಗಿದೆ. ಆದ್ದರಿಂದ ಪ್ರತೀ ಸಿನಿಮಾ ನಿರ್ದೇಶಿಸಲು ಹೊರಟಾಗಲೂ ಜಗತ್ತು ಮಜಿದಿಯತ್ತ ಕೌತುಕದ ಕಣ್ಣನ್ನು ತೆರೆದಿರುತ್ತದೆ. 

ಮಜಿದಿಯ ಫಸ್ಟ್‌ಹಾಫ್ ಮುಗಿದಿದೆ ಅನ್ನುವುದಕ್ಕಿಂತ ಮತ್ತೊಂದು ಫಸ್ಟ್‌ಹಾಫ್ ಪ್ರಾರಂಭವಾಗುತ್ತಿದೆಯಲ್ಲ ಎಂಬುದೇ ಖುಷಿಯ ಸಂಗತಿ.

ಸಿನಿಮಾ ಸುಲಭದ ಮಾತಲ್ಲ 

ಸಿನಿಮಾ  ಧಾರ್ಮಿಕತೆಯ ಹಿಡಿತ ಇರಾನ್‌ನಲ್ಲಿ ಚಿತ್ರಗಳನ್ನೂ ಬಿಟ್ಟಿಲ್ಲ. ಪಾಶ್ಚಾತ್ಯ ಸಿನಿಮಾಗಳು ಇಲ್ಲಿ ಯಾವತ್ತಿಗೂ ಬ್ಯಾನ್.

ಕುಡಿತ, ಪ್ರೇಮಿಗಳ ಸರಸ-ಸಲ್ಲಾಪ, ಕಡಿಮೆ ಬಟ್ಟೆ ಧರಿಸಿದ ಮಹಿಳೆ ಎಲ್ಲದಕ್ಕೂ ಇಲ್ಲಿ ಕತ್ತರಿ. ಪ್ರದರ್ಶನಕ್ಕೆ ಅಯೋಗ್ಯ.

ವರ್ಷದಲ್ಲಿ 8 ರಿಂದ 10 ಹಾಲಿವುಡ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡರೇನೇ ಹೆಚ್ಚು. ಇಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಆಡಿಸಿದ ಸಮಕಾಲೀನ ಹಾಲಿವುಡ್ ಕ್ಲಾಸಿಕ್ ಸಿನಿಮಾಗಳು ಮಾತ್ರ ಟಿವಿಯಲ್ಲಿ ಪ್ರದರ್ಶನ ಕಾಣುತ್ತವೆ. ಬಹುತೇಕ ಭಾರತದಂತೆಯೇ ಅಲ್ಲಿ ಕೂಡಾ ಕಮರ್ಶಿಯಲ್ ಮತ್ತು ಕಲಾತ್ಮಕ ಎನ್ನುವ ಎರಡು ಪಂಗಡಗಳಿವೆ. ಸರ್ಕಾರ ಸಿನಿಮಾ ನಿರ್ಮಾಣದ ಮೇಲೆ ಕಣ್ಣಿಟ್ಟೇ ಇರುತ್ತದೆ.

ಇರಾನ್‌ನ 53 ಮಿಲಿಯನ್ ಜನರ ಭಾಷೆ ಪರ್ಶಿಯನ್. ಹಾಗಾಗಿ ಇದೇ ಅಧಿಕ ಭಾಷೆಯಲ್ಲಿ ಚಿತ್ರಗಳು ತಯಾರಾಗುತ್ತವೆ.

ವರ್ಷಕ್ಕೆ ಹೆಚ್ಚುಕಮ್ಮಿ 130 ಚಿತ್ರಗಳು ತಯಾರಾಗುತ್ತವೆ. ಕಾಮಿಡಿ, ರೊಮ್ಯಾಂಟಿಕ್ ಮೆಲೋಡ್ರಾಮಾ ಮತ್ತು ಕೌಟುಂಬಿಕ ಕಾಮಿಡಿ ಚಿತ್ರಗಳೇ ಹೆಚ್ಚು.

ಕಮರ್ಶಿಯಲ್ ಸಿನಿಮಾಗಳಿಗೆ 25 ವರ್ಷದೊಳಗಿನವರು ಮುಖ್ಯ ಟಾರ್ಗೆಟ್.  ಸ್ಥಳೀಯ ಪ್ರೇಕ್ಷಕರೇ ಆಧಾರ. ಮೊಹಮ್ಮದ್ ಅಲಿ ಫರ್ದೀನ್ ಅಲ್ಲಿನ ಪ್ರಸಿದ್ಧ ಕಮರ್ಶಿಯಲ್ ಹೀರೋ.

ಕಲಾತ್ಮಕ ಸಿನಿಮಾಗಳು ಹೆಚ್ಚಾಗಿ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಆದರೆ ಕೆಲವಾರು ಸಿನಿಮಾಗಳು ಹೌಸ್‌ಫುಲ್ ಪ್ರದರ್ಶನ ಕಂಡ ಉದಾಹರಣೆಗಳಿವೆ.

ನಮ್ಮಲ್ಲಿರುವಂತೆ ಅಲ್ಲಿಯೂ ಪೈರಸಿ ಹುಲುಸಾಗಿಯೇ ಬೆಳೆದಿದೆ. ಆದ್ದರಿಂದ ಕಲಾತ್ಮಕ ಸಿನಿಮಾಗಳ ಪೈರೇಟೆಡ್ ಡಿವಿಡಿಗಳು ಸುಲಭಾಗಿ ಸಿಗುತ್ತವೆ.

ಅರಬ್ ಮತ್ತು ಭಾರತೀಯ ಸಿನಿಮಾಗಳೆಡೆಗೆ ಇರಾನಿಯರಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಈ ಎರಡೂ ದೇಶಗಳ ಒಂದೇ ಒಂದು ಸಿನಿಮಾ ಕೂಡಾ ಪ್ರದರ್ಶನ ಕಂಡಿಲ್ಲ.

Advertisements