ಮಠದಂಥ ವಿಭಿನ್ನ ಚಿತ್ರ ಕೊಟ್ಟ ನಿರ್ದೇಶಕ ಗುರುಪ್ರಸಾದ್ ನಿರ್ದೇಶಿಸಿರುವ “ಇದು ಬೊಂಬೆಯಾಟವಯ್ಯಾ” ಕನ್ನಡದ ಮೊದಲ ಅನಿಮೇಷನ್ ಚಿತ್ರ ಮೇನಲ್ಲಿ ಬಿಡುಗಡೆಯಾಗಲಿದೆ.
‘ಮಠ’ ದಂಥ ಭಿನ್ನ ನೆಲೆಯ ಅಂದರೆ ವಾಣಿಜ್ಯ ದೃಷ್ಟಿಯ ಪ್ರಯೋಗಾತ್ಮಕ ಚಿತ್ರ ಕೊಟ್ಟವರು ಇದ್ದಕ್ಕಿದ್ದಂತೆ ಅನಿಮೇಷನ್ ಕಡೆ ಮುಖ ಮಾಡಿದ್ದಾರೆ.
ಅವರು ನಿರ್ದೇಶಿಸಿ ರೂಪಿಸುತ್ತಿರುವ “ಇದು ಬೊಂಬೆಯಾಟವಯ್ಯಾ” ಚಿತ್ರ ಏ. 16 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮೇ ಮೊದಲನೇ ವಾರಕ್ಕೆ ಮುಂದೆ ಹೋಗಿದೆ.
ಕನ್ನಡದಲ್ಲಿ ಇದುವರೆಗೆ ಪೂರ್ಣ ಪ್ರಮಾಣದ ಅನಿಮೇಟೆಡ್ ಚಿತ್ರ ಬಂದಿಲ್ಲ. ಸಾಮಾನ್ಯವಾಗಿ ಜನರಲ್ಲಿ ಅನಿಮೇಷನ್ ಎಂದರೆ ಕಾರ್ಟೂನ್ ಎಂಬ ಕಲ್ಪನೆಯಿದೆ. ಡೊನಾಲ್ಡ್, ಮಿಕ್ಕಿ ಇತ್ಯಾದಿ. ಆದರೆ ಗುರುಪ್ರಸಾದ್ ನಿರ್ದೇಶಿಸುತ್ತಿರುವ ‘ಇದು ಬೊಂಬೆಯಾಟವಯ್ಯಾ’ ಚಿತ್ರ ಕಾರ್ಟೂನ್‌ನಂತಲ್ಲ. ವಾಸ್ತವ ಜಗತ್ತಿನ ಪಾತ್ರಗಳನ್ನೇ ಆಧರಿಸಿ ರೂಪಿಸಿದ್ದು. ಅಲ್ಲಿರುವ ಪಾತ್ರಗಳಿಗೆ ಹಲವರು ‘ರೂಪದರ್ಶಿ’ ಗಳಿದ್ದಾರೆ. ಪಾಪ ಪಾಂಡು ಖ್ಯಾತಿಯ ಜಹಂಗೀರ್ ಸಹ ಇಲ್ಲಿ ಒಂದು ಪಾತ್ರ. ಅಷ್ಟೇ ಏಕೆ ? ತಿಕ್ಕಲ ರಾಜನ ಪಾತ್ರದಲ್ಲಿ ಸ್ವತಃ ನಿರ್ದೇಶಕರೇ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಪಾತ್ರದಲ್ಲಿ ಹಿರಿಯ ನಟ ರತ್ನಾಕರ್ ಸಹ ಇದ್ದಾರೆ.
ಗುರುಪ್ರಸಾದ್ ಪ್ರತಿಭಾವಂತ ನಿರ್ದೇಶಕರು. ನಟ ಜಗ್ಗೇಶ್ ಅವರನ್ನು ನಾಯಕನಟನಾಗಿ ಬಳಸಿಕೊಂಡು ನಿರ್ದೇಶಿಸಿದ ‘ಮಠ’ ಚಿತ್ರ ಹೆಸರನ್ನೂ ತಂದುಕೊಟ್ಟಿದೆ, ಅವಕಾಶವನ್ನೂ ತಂದುಕೊಟ್ಟಿದೆ. ಈಗ ಅನಿಮೇಷನ್ ಚಿತ್ರಕ್ಕೆ ಕೈ ಹಾಕಿರುವುದೇನು ? ಎಲ್ಲವೂ ಮುಗಿದು ಸೆನ್ಸಾರ್ ಮುಗಿದಿದೆ.

ಏ. 16 ಚಾಪ್ಲಿನ್ ಜನ್ಮದಿನ. ಜಗತ್ತಿನ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ. ಅವನ ಹೆಸರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಯತ್ನಿಸಿ ವಿವಾದಕ್ಕೀಡಾದ ಪ್ರಸಂಗ ಮುಗಿದಿರುವಾಗ ಈ ಬಾರಿಯ ಚಾರ್ಲಿ ಚಾಪ್ಲಿನ್ ಜನ್ಮದಿನವನ್ನು ಕನ್ನಡ ಚಿತ್ರರಂಗ ಸಂಭ್ರಮದಿಂದ ಆಚರಿಸುವ ಉದ್ದೇಶವಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ.
ಆದರೂ ಈ ಚಿತ್ರ ಯಾವತ್ತೇ ಬಿಡುಗಡೆಯಾಗಲಿ, ಅಂದು ಮರೆಯಲಾರದ ದಿನ ಕನ್ನಡಿಗರ ಸಾಧನೆಗೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೂ ಮಹತ್ವದ ದಿನ.
ಮಕ್ಕಳು ಮತ್ತು ಪೋಷಕರನ್ನೇ ಗುರಿಯಿಟ್ಟುಕೊಂಡಿದ್ದರೂ, ಇದು ಮಕ್ಕಳ ಚಿತ್ರವೆಂದು ಬ್ರ್ಯಾಂಡ್ ಮಾಡುವಂಥದ್ದೇನಲ್ಲ. ಕಾರಣ “ಡ್ರಾಮಾ” ಎಲ್ಲರಿಗೂ ಹಿಡಿಸುವಂಥದ್ದು. ಮಕ್ಕಳಷ್ಟೆ ನೋಡಬೇಕೆಂದೇನೂ ಇಲ್ಲ. ರಿಯಲಿಸ್ಟಿಕ್ ಪಾತ್ರಗಳನ್ನೇ ತೆಗೆದುಕೊಂಡು ಚಿತ್ರ ರೂಪಿಸಲಾಗಿದೆ. ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತವರು ಶಂಕರ್ ರಾವ್, ಲೋಕೇಶ್ವರಯ್ಯ, ಜೆ.ಸಿ. ರಾಜು ಅವರು.
‘ಇದು ಬೊಂಬೆಯಾಟವಯ್ಯಾ’ ಹೆಸರಿಟ್ಟಿರುವುದೂ ಸ್ಪಷ್ಟ ಉದ್ದೇಶದಿಂದಲೇ. ಎ.ಎನ್. ಪ್ರಕಾಶ್ ಅವರ ‘ಬಂದ ಕೋಡಂಗಿ’ ನಾಟಕವನ್ನು ಸಿನಿಮಾಕಥೆಗೆ ಪುನರ್ ರೂಪಿಸಿಕೊಳ್ಳಲಾಗಿದೆ. ಅನಿಮೇಷನ್ ಪಾತ್ರಗಳು ಒಂದು ರೀತಿಯಲ್ಲಿ ಬೊಂಬೆಗಳಂತೆ. ಹಾಗಾಗಿ ಇದಕ್ಕೆ ಈ ಹೆಸರು.
ಗುರುಪ್ರಸಾದ್ ಅವರು ತಮ್ಮ ಲೆಕ್ಕಾಚಾರಗಳನ್ನು ವಿವರಿಸುವಂತೆ ಈ ಚಿತ್ರ ಒಂದು ಕೋಟಿ ರೂ. ವೆಚ್ಚದ್ದು. ಭಗವತಿ ಕ್ರಿಯೇಷನ್ಸ್ ರೂಪಿಸುತ್ತಿರುವ ಚಿತ್ರದ ಎಲ್ಲ ನಿರ್ಮಾಣಗೊಂಡಿರುವುದು ಮೈಸೂರಿನಲ್ಲಿ. ವಾಸ್ತವವಾಗಿ ಕನ್ನಡ ಚಿತ್ರರಂಗದ ಮೂಲವೂ ಮೈಸೂರೇ. ಈಗ ಹೊಸ ಸಾಧನೆಯ ಶಾಸನ ಬರೆಯುತ್ತಿರುವುದೂ ಇಲ್ಲಿಯೇ.
ರಂಗ ಕಲಾವಿದ ಅಬ್ದುಲ್ ಕರೀಂ, ಭದ್ರಾವತಿಯ ಶ್ರೀಹರಿ ಗೌತಂ, ಕಲಾವಿದ ಪುರಂದರ್- ಈ ಮೂರು ಮಂದಿ ಸೇರಿ ರಚಿಸಿಕೊಂಡಿದ್ದು ಎಪಿಎಸ್ ಅನಿಮೇಷನ್ಸ್. ಕಥೆಯ ಹೂರಣವನ್ನೆಲ್ಲಾ ತೆರೆಯ ಮೇಲೆ ಜೀವ ತುಂಬಿರುವುದು ಇದೇ ಎಪಿಎಸ್ ತಂಡ. 60 ಪಾತ್ರಗಳಿರುವ ಚಿತ್ರಕ್ಕೆ 4.5 ಲಕ್ಷದಷ್ಟು ಚಿತ್ರಕ್ಕೆ ಜೀವ-ಭಾವ ತುಂಬಲಾಗಿದೆ. ಇದು ಸಂಪೂರ್ಣವಾಗಿ ಕನ್ನಡಿಗರೇ ರೂಪಿಸಿದ 110 ನಿಮಿಷದ 2ಡಿ ಅನಿಮೇಷನ್ ಚಿತ್ರ. ತಂತ್ರಜ್ಞಾನದಿಂದ ಹಿಡಿದು ಪಾತ್ರದವರೆಗೂ ಎಲ್ಲವೂ ಕನ್ನಡಿಗರದ್ದೇ. ಚಿತ್ರ ನಿರ್ಮಾಣದ ಶೇ. 9೦ ರಷ್ಟು ಕೆಲಸ ಮುಗಿದಿರುವುದೂ ಮೈಸೂರಿನಲ್ಲಿ. ಧ್ವನಿ ಮುದ್ರಣ ಮಾತ್ರ ಬೆಂಗಳೂರಿನಲ್ಲಿ.
ಮೊದಲೇ ಹೇಳಿದಂತೆ ದುಡ್ಡು ಹಾಕಿ ಕಳೆದುಕೊಳ್ಳುವ ಜಾಯಮಾನ ಗುರುಪ್ರಸಾದರದ್ದಲ್ಲ. ಕಾರಣ ಅವರ ಜೀವನದ ಅನುಭವಗಳಲ್ಲಿ ಒಂದು. ಹಾಗಾಗಿ ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆಯ ಅವಕಾಶಗಳನ್ನು ಹುಡುಕಿಕೊಂಡೇ ಹೆಜ್ಜೆ ಇಟ್ಟಿದ್ದಾರೆ. ಆದ ಕಾರಣ ನಾವೆಲ್ಲಾ ಅವರ ಹೊಸ ಪ್ರಯತ್ನವನ್ನು ಕಾಣಲಾದರೂ ಚಿತ್ರ ನೋಡಬೇಕು. ಅವರಿಗೆ ಸಾಂಗತ್ಯ ಶುಭ ಹಾರೈಸುತ್ತದೆ.
ಈ ಚಿತ್ರ ನೋಡಲೇಬೇಕು, ತಿಳಿಸಿದ್ದಕ್ಕೆ ಧನ್ಯವಾದಗಳು
ಶಹಬ್ಬಾಸ್…ಗುರುಪ್ರಸಾದ್,
ಶಿವು.ಕೆ.
Fabulous job 🙂