ಸಾಂಗತ್ಯದ ಮತ್ತೊಂದು ಚಿತ್ರೋತ್ವವ ಮಳೆಗಾಲದಲ್ಲಿ ನಡೆಯಲಿದೆ. ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸದ್ಯವೇ ವಿವರ ಲಭ್ಯ. 

‘ಸಾಂಗತ್ಯ’  ಹೊಸ ಚಿತ್ರೋತ್ಸವಕ್ಕೆ ಸಜ್ಜಾಗುತ್ತಿದೆ. ಮೊದಲ ಚಿತ್ರೋತ್ಸವಕ್ಕೆ ವ್ಯಕ್ತವಾದ ಸಕಾರಾತ್ಮಕ ಅಭಿಪ್ರಾಯ ನಿಜಕ್ಕೂ ಹೊಸ ಹುಮ್ಮಸ್ಸನ್ನು ತುಂಬಿತ್ತು. ಚಿತ್ರೋತ್ಸವದ ಮೂಲಕವೇ ಚಿತ್ರಭಾಷೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ “ಸಾಂಗತ್ಯ’ದ್ದು.

ಜನವರಿಯಲ್ಲಿ ನಡೆದ ಚಿತ್ರೋತ್ಸವವನ್ನು ಉದ್ಘಾಟಿಸಿದ ಪರಮೇಶ್ ಗುರುಸ್ವಾಮಿ ಮತ್ತು ಕುವೆಂಪು ಟ್ರಸ್ಟ್ ನ ಕಡಿದಾಳು ಪ್ರಕಾಶ್.
ಜನವರಿಯಲ್ಲಿ ನಡೆದ ಚಿತ್ರೋತ್ಸವವನ್ನು ಉದ್ಘಾಟಿಸಿದ ಪರಮೇಶ್ ಗುರುಸ್ವಾಮಿ ಮತ್ತು ಕುವೆಂಪು ಟ್ರಸ್ಟ್ ನ ಕಡಿದಾಳು ಪ್ರಕಾಶ್.

ಈ ನೆಲೆಯಲ್ಲಿ ವರ್ಷಕ್ಕೆ ಎರಡು ಚಿತ್ರೋತ್ಸವ ಹಮ್ಮಿಕೊಳ್ಳುವ ಉದ್ದೇಶವಿದೆ. ಅದರಂತೆಯೇ ಈ ಮಳೆಗಾಲದಲ್ಲಿ ಕುಪ್ಪಳ್ಳಿಯಲ್ಲಿಯೇ ಚಿತ್ರೋತ್ಸವ ನಡೆಯಲಿದ್ದು, ಮಳೆಗಾಲವನ್ನು ಅನುಭವಿಸಲೂ ಒಂದು ಒಳ್ಳೆಯ ಅವಕಾಶ.

ಈಗಾಗಲೇ ಚಿತ್ರೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಕಳೆದ ಚಿತ್ರೋತ್ಸವದಲ್ಲಿ ಎರಡು ದಿನಗಳ ಕಾಲ ಆಯೋಜಿತವಾಗಿತ್ತು. ಕುಪ್ಪಳ್ಳಿಯ ಕುವೆಂಪು ಟ್ರಸ್ಟ್ ಅಮೋಘವಾದ ಸಹಕಾರ ನೀಡಿತ್ತು. ಟ್ರಸ್ಟ್ ನ ಕಾರ್ಯದರ್ಶಿ ಕಡಿದಾಳು ಪ್ರಕಾಶರ ಸಹಕಾರ ಅನನ್ಯ. ಆಗ ಕೇಳಿ ಬಂದಿದ್ದ ಸಕಾರಾತ್ಮಕ ಅಭಿಪ್ರಾಯವೆಂದರೆ ಚಿತ್ರೋತ್ಸವ ಕನಿಷ್ಠ ಮೂರು ದಿನಗಳವಾದರೂ ನಡೆಯಬೇಕೆಂಬುದು. ಆ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳನ್ನು ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ. ಹೇಗೆ ಆದರೂ ಯಾವುದೋ ಶುಕ್ರವಾರ, ಶನಿವಾರ, ಭಾನುವಾರ ನಡೆಯುವುದು ಖಚಿತ.

ನಾವು ಮೊದಲ ಬಾರಿಗೆ ಆಯೋಜಿಸಿದ್ದ ಚಿತ್ರೋತ್ಸವಕ್ಕಿಂತ  ಇನ್ನಷ್ಟು ಸಂಘಟನಾತ್ಮಕವಾಗಿ ನಡೆಸಲು ಗಮನ ಹರಿಸುತ್ತಿದ್ದೇವೆ. ಚಿತ್ರೋತ್ಸವವನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಸಂವಾದ ರೀತಿಯಲ್ಲಿ ನಡೆಸುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಗಳತ್ತ ಆಲೋಚನಾಮುಖಿಯಾಗಿದ್ದೇವೆ. ಈ ಬಾರಿಯೂ 40 ರಿಂದ 50 ಮಂದಿಗೆ ಆದ್ಯತೆ. ಕಾರಣ, ನಾವು ಆರಿಸಿಕೊಂಡಿರುವ ಸ್ಥಳದಲ್ಲಿ ಅಷ್ಟು ಮಂದಿಗೆ ಅವಕಾಶ ಕಲ್ಪಿಸಬಹುದು. ಜತೆಗೆ ಸಿನಿಮಾಗಳನ್ನು ನೋಡುವ ಥಿಯೇಟರ್ ಸಹಿತ 50ಮಂದಿಗೆ ಕುಳಿತುಕೊಳ್ಳಲು ಅವಕಾಶವಿದೆ.

ಈಗಾಗಲೇ ಸಿನಿಮಾಗಳ ಆಯ್ಕೆ, ಚಿತ್ರೋತ್ಸವ ಆಯೋಜನೆಯ ವಿಧಾನದ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಹತ್ತು ಹಲವು ಸಲಹೆಗಳ ಮೂಲಕ ಒಂದು ಅತ್ಯುತ್ತಮ ಚಿತ್ರೋತ್ಸವ ಸಂಘಟಿಸಬೇಕೆಂಬುದು ನಮ್ಮ ಉದ್ದೇಶ. ಹೊಸಬರು ರೂಪಿಸಿದ ಡಾಕ್ಯುಮೆಂಟರಿ, ಕಿರುಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬುದರ ಬಗ್ಗೆಯೂ ಚಿಂತನೆ ನಡೆದಿದೆ. ಸದ್ಯವೇ ಉಳಿದ ವಿವರಗಳನ್ನು ಒದಗಿಸಲಾಗುವುದು.

ಚಿತ್ರೋತ್ಸವ ಅರ್ಥಪೂರ್ಣವಾಗಲು ನಿಮ್ಮ ಸಲಹೆಗಳಿದ್ದರೆ ಕಳುಹಿಸಿ. ಅಂದ ಹಾಗೆ, ಹಿಂದಿನ ಚಲನಚಿತ್ರೋತ್ಸವಕ್ಕೆ ಚಲನಚಿತ್ರ ತಜ್ಞ ಪರಮೇಶ್ ಗುರುಸ್ವಾಮಿಯವರು ತಮ್ಮ ಅನುಭವಾತ್ಮಕ ನುಡಿಗಳಿಂದ ನಮ್ಮ ಅರ್ಥ ತುಂಬಿದ್ದರು. ಒಟ್ಟೂ ಚಿತ್ರೋತ್ಸವ ಯಶಸ್ವಿಯಾಗಿತ್ತು. 40 ಮಂದಿ ಭಾಗವಹಿಸಿದ್ದರು. ಎಂಟು ಚಲನಚಿತ್ರಗಳು ಪ್ರದರ್ಶಿತವಾಗಿದ್ದವು. ಪ್ರತಿ ಚಲನಚಿತ್ರ ಮುಗಿದ ನಂತರ ಆ ಕುರಿತು ಚರ್ಚೆ ಏರ್ಪಡಿಸಲಾಗಿತ್ತು.