ನಂದಿತಾದಾಸ್ ಒಳ್ಳೆ ಅಭಿನೇತ್ರಿಯಾಗಿಯೇ ಜನಪ್ರಿಯರಾದವರು. ಅವರೀಗ ಮೊದಲ ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಅವರ ಮೊದಲ ಚಿತ್ರ ಗುಜರಾತ್ ಗಲಭೆ ನಂತರದ ಸನ್ನಿವೇಶಗಳ ಕುರಿತ “ಫಿರಾಕ್” ಬಿಡುಗಡೆಯಾಗಿದೆ. ದಿಲ್ಲಿಯಲ್ಲಿರುವ ವಿನಾಯಕ ಭಟ್ಟ ತಮ್ಮ ಅನಿಸಿಕೆಯನ್ನು ಕಳುಹಿಸಿದ್ದಾರೆ. ಇದನ್ನು ಓದಿ, ನಿಮ್ಮ ಅನಿಸಿಕೆ ತಿಳಿಸಿ. 

firaaq

ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು. ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ಈ ಬಾರಿ ಮೊದಲ ದಿನವೇ ನೋಡಿಬಿಟ್ಟೆ!

ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಬಹಳ ಇಷ್ಟವಾಗಲೂ ಇಲ್ಲ. ಗುಜರಾತ್‌ನ ಮಲ್ಟಿಫ್ಲೆಕ್ಸ್‌ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸಿನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್‌ನ ಗೋಧ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲವೇನೋ ತಣಿಯಿತು. ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂದಂತೆ ಅನಿಸುತ್ತಿತ್ತು.

ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ಸಫಲವಾಗಿಲ್ಲ.

ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾರೆ ನಿರ್ದೇಶಕಿ. ಆದರೆ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸುವಲ್ಲಿ ಒಳ್ಳೆ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ  ಇಬ್ಬರನ್ನೂ ತೋರಿಸುವ ಪ್ರಜ್ಞೆಯೇ ಬೇಕಿತ್ತು ಎನಿಸುತ್ತದೆ. ಅದಾಗಿಲ್ಲ.

ಗಲಭೆಯ ಒಂದು ತಿಂಗಳ ನಂತರದ ಕತೆಯದು. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು’ ಎಂದು ಹೇಳಿಸುತ್ತಾರೆ ನಂದಿತಾ. ವಾಸ್ತವವಾಗಿ, ಯಾವ ಪೊಲೀಸ್ ಹೀಗೆ ಹೇಳಲು ಸಾಧ್ಯ?

ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವಂತಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜದ ನಂಬಿಕೆ ಕುಸಿಯುವಂತೆ ಮಾಡುತ್ತಾರೆ. ಅದು ನನಗೆ ಇಷ್ಟವಾಗಲಿಲ್ಲ. ಯಾಕೆಂದರೆ, ಹೀಗೆ ಒಂದು ಮಾಧ್ಯಮದಲ್ಲಿ ಬಿಂಬಿಸುವುದು ಸಮಾಜದ ಹಿತದೃಷ್ಟಿಯಲ್ಲೇ ಎಷ್ಟು ಅಪಾಯಕಾರಿ ಎಂಬುದು ಬಹುಶಃ ಅವರು ಮರೆತಿರಬಹುದು. 

ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬೇಕು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿಯೂ ಅಷ್ಟೇ. ಗಲಭೆ ನಂತರದ ಕೆಲವು ದೃಶ್ಯಗಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ. ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!

ಮಾರ್ಚ್ 18 ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರುಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇಕೆ ಎಂದು ಅರ್ಥವಾಗಲಿಲ್ಲ. 

ನನ್ನ ಕೆಲವು ಅನಿಸಿಕೆಗಳಿವೆ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿ ಸಾಮಾನ್ಯವೇ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ. ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ. 

ಆದರೆ ಸಿನಿಮಾ ನೋಡಿದರೆ ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂಥ ನಟರನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು. ಆದರೆ ಅದೂ ಆಗಿಲ್ಲ. 

ಈ ಸಿನಿಮಾಕ್ಕೆ 5 ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿರುವವರಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ಅಂದುಕೊಂಡಿದ್ದರೆ ನೋಡಬಹುದು. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್‌ಗಳ ಅರ್ಥ ಸೂಚ್ಯ. ಆದ್ದರಿಂದ ಸಾಮಾನ್ಯನಾದವ ಅರ್ಥ ಮಾಡಿಕೊಳ್ಳುವುದು ಕಷ್ಟ. 

ಸಿನಿಮಾ ಕುರಿತು ಇದು ನನ್ನ ಅನಿಸಿಕೆ. ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ತುಂಬ ಇಂಟಲೆಕ್ಚುಯಲ್ ಆದ, ಸೂಚ್ಯಾರ್ಥದ ಸಿನಿಮಾ ನನಗೆ ಕಷ್ಟ. ಸಿನಿಮಾಗಳು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವವ ನಾನು ಹಳೇ ಜಗ್ಗೇಶ್ ಫಿಲ್ಮ್ ಗಳನ್ನು  ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ‘ಫಿರಾಕ್’ನಂಥ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ.

Advertisements