“ಪ್ರಲೇಖ” ಇತ್ತೀಚೆಗೆ ತಾವು ನೋಡಿದ ಎರಡು ಚಿತ್ರಗಳ ಕುರಿತ ಅನಿಸಿಕೆಗಳನ್ನು ಬಹಳ ಲಲಿತಶೈಲಿಯಲ್ಲೇ ಬರೆದಿದ್ದಾರೆ. ವೆಂಕಟ ಇನ್ ಸಂಕಟ ಹಾಗೂ ಜಂಗ್ಲಿ ಇತ್ತೀಚಿನ ಚಿತ್ರಗಳು..ಆ ಕುರಿತ ಅನಿಸಿಕೆ ಓದಿ ಅಭಿಪ್ರಾಯಿಸಿ.

venkata1

ಹೋದ ರವಿವಾರ ನಮ್ಮ ಹಳೆಯ ದಾಖಲೆ ಮುರಿಯುವ ಪ್ರಯತ್ನ ಮಾಡಿದೆವು! ವಿಫಲರಾದೆವು! ಹಳೆಯ ದಾಖಲೆ: ಒಂದು ದಿನದಲ್ಲಿ ಎರಡು ಸಿನಿಮಾ… (ಮನೆಯಲ್ಲಿ ಅಲ್ಲ, ಚಿತ್ರಮಂದಿರದಲ್ಲಿ) “ವೆಂಕಟ ಇನ್ ಸಂಕಟ”ಕ್ಕೆ ನಾನು, “ಜಂಗ್ಲಿ”ಯತ್ತ ಮಿತ್ರನ ಒಲವು… ಯಾವುದು ನೋಡುವುದು ?

ಏನೇ ಹೇಳಿ, ಚಿತ್ರಮಂದಿರದಲ್ಲಿ ಸಿನಿಮಾ ನೋಡೋ ಮಜಾ ಟವಿಯಲ್ಲಿ ಇಲ್ಲ. ಆ ದೊಡ್ಡ ಸಿನಿಮಾಸ್ಕೋಪ್ ಪರದೆಗೂ, ಈ ಚಿಕ್ಕ ಸಿ.ಆರ್.ಟಿ ಮಾನಿಟರ್ ಗೂ ಎಲ್ಲಿಯ ತುಲನೆ? (ಎಲ್.ಸಿ.ಡಿ ಆದ್ರೂ ಅಷ್ಟೇ..)  ಸುತ್ತುವರಿ ಧ್ವನಿ ವಿಶೇಷಗಳು (surround sound effects) ಇಲ್ಲದೇ ಮಜಾ ಇಲ್ಲ. ಕಾಲೇಜು ದಿನಗಳಲ್ಲಿ, ಗೋವಿಂದನ “ವಾಹ್.. ತೆರಾ ಕ್ಯಾ ಕೆಹ್ನಾ” ಸುಚಿತ್ರಾ ಚಿತ್ರಮಂದಿರದಲ್ಲಿ ನೋಡಿ ತಲೆ ಕೆಟ್ಟು ಹೋಗಿತ್ತು. (ಅಷ್ಟು ಡಬ್ಬಾ ಚಿತ್ರ ಅದು)

ಅಂದ ಹಾಗೆ, ಹೋದ ರವಿವಾರ ಹೊರಟೆವು  “ವೆಂಕಟ”ನ ನೋಡಲು; “ಸಂಕಟ” ಪಡಲು! ಚೆನ್ನಾಗಿರುವ ಹಾಸ್ಯ ಚಿತ್ರ. ಆದರೆ ಡಬ್ಬಾ ಕ್ಲೈಮಾಕ್ಸ್ ಎಂದೂ ಇದ್ದ ವಿಶ್ಲೇಷಣೆ ಓದಿದ್ದೆ. ಚಿತ್ರ ನೋಡಿ “ಸಂಕಟ ಪಟ್ಟ ಮೇಲೆ” ವಿಶ್ಲೇಷಕ ಸಿಕ್ಕಿದ್ದಿದ್ದರೆ…ಅಷ್ಟೇ ! ಆದರೂ ಡಬ್ಬಾ ಕ್ಲೈಮಾಕ್ಸ್ ಅನ್ನೋ ಸತ್ಯ ಹೇಳಿದ್ನಲ್ಲಾ…ಓಕೆ.

ಅಭಿನಯದಲ್ಲೇನೂ ಕಡಿಮೆಯಿಲ್ಲ. ರಮೇಶ್, ಉಮಾಶ್ರೀ, ಮು.ಮ ಚಂದ್ರು, ಕರಿಬಸವಯ್ಯ….. ಎಲ್ಲರ ನಟನೆ ಚೆನ್ನಾಗಿತ್ತು, ಉಮೇಶ್ ಅವರ ಅಜ್ಜಿ  ಪಾತ್ರ ನಿಜಕ್ಕೂ ಸೂಪರ್! ಆದರೆ, ಹೆಚ್ಚಿನದು ಮೊದಲು ಕೇಳಿದ್ದ/ ನೋಡಿದ್ದ ಹಾಸ್ಯವೇ ಆಪರೇಶನ್ ಮಾಡಿಸಿಕೊಂಡು ಹೊಸ ರೂಪ ತಾಳಿ ಬಂದಾಗ ಕಿರಿಕಿರಿ ಎನಿಸಿತು. ಮೋಟಾರ್ ಬೈಕು ವೇಗವರ್ಧಕ (accelerator) ಇಲ್ಲದೇ ಹೇಗೆ ಓಡ್ತಾ ಇತ್ತು ಎಂದು ನಮಗೆ ಇನ್ನೂ ಯಕ್ಷಪ್ರಶ್ನೆಯಾಗೇ ಉಳಿದಿದೆ! ಏನೇ ಆದರೂ, ರಮೇಶ್ ಅವರ ಪ್ರಯತ್ನವನ್ನು ಅಲ್ಲಗೆಳೆಯುವಂತಿಲ್ಲ.  ಹಾಸ್ಯದ ಹಾಗೂ ಕ್ಲೈಮಾಕ್ಸ್ ಕಡೆಗೆ ಇನ್ನೂ ಹೆಚ್ಚು ಧ್ಯಾನ ವಹಿಸಿದ್ದರೆ, ಚಿತ್ರ ಮತ್ತಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು. ಕ್ಲಾಸ್ನಲ್ಲಿ ಕಾಪಿ ಹೊಡೆಯೋ ದೃಶ್ಯ ಮಾತ್ರ ನಮ್ಮನ್ನು ತುಂಬಾ ನಗಿಸಿತು ! ಸಂಭಾಷಣೆಗಳೂ ಪರವಾಗಿಲ್ಲ. ಹೊಗಳಲರ್ಹ ವಿಷಯವೆಂದರೆ, ರಮೇಶ್  ಹಲವು ನವ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯಿಸಿದ್ದಾರೆ.

junglee

ನಾವು ಈ ಚಿತ್ರ ನೋಡಲು ಮತ್ತೊಂದು ಮುಖ್ಯ ಕಾರಣ… ದೇವದಾಸ್ ಕಾಪಿಕಾಡ್! ಟೈಟಲ್ನಲ್ಲಿ ಇವರನ್ನು ಹೊಸ ಪ್ರತಿಭೆಯೆಂದು ತೋರಿಸಿದ್ದರೂ, ಇವರು ನಮಗೆ ಹೊಸಬರಲ್ಲ. ಉಡುಪಿ-ಮಂಗಳೂರಲ್ಲಿ ಯಾರ ಬೇಕಾದರೂ ಕೇಳಿ, “ಭಲೇ ಚಾ ಪರ್ಕ”ದ ಕಾಪಿಕಾಡರು ಯಾರೆಂದು ಹೇಳುತ್ತಾರೆ. ತುಳು ನಾಟಕದ ದೊಡ್ಡ ಹೆಸರು, “ದೇವದಾಸ್ ಕಾಪಿಕಾಡ್”! ಇವರು ನಟಿಸಿರುವ ಮೊದಲ ಕನ್ನಡ ಚಿತ್ರ ನೋಡಲೆಂದೇ ಎಲ್ರೂ ಸೆಂಟ್ರಲ್ಗೆ (ಥಿಯೇಟರ್ ಹೆಸರು ಸೆಂಟ್ರಲ್) ಮುಗಿಬೀಳುತ್ತಿದ್ದರು (ನಾವೂ ಸೇರಿದಂತೆ..)

ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದ “ವೆಂಕಟ..” ಭಿತ್ತಿಪತ್ರಗಳ (ಪೋಸ್ಟರ್ ಗಳ) ನೋಡಿದ್ರೆ, ಕಾಪಿಕಾಡರೇ ಹೀರೋ ಅಂದ್ಕೋಬೇಕು! ಅದರ ತುಂಬಾ ಅವರದ್ದೇ ಪೋಸುಗಳು! ಚಿತ್ರದಲ್ಲಿ ಅವರೇ ಮುಖ್ಯ ಹಾಸ್ಯಗಾರ, ನಗಿಸುವಲ್ಲಿ ಯಶಸ್ವಿಯಾಗಿದ್ದರೆ ಎನ್ನುವ ಅಗತ್ಯವೇ ಇಲ್ಲ. ಕಾಪಿಕಾಡರು ಇದ್ದಾರೆಂದರೆ, ನಗಲು ಇದೆಯೆಂದು ಪ್ರತ್ಯೇಕವಾಗಿ ಹೇಳ ಬೇಕಾಗಿಯೂ ಇಲ್ಲ! ಆದರೂ, “ವೆಂಕಟ”ನು “ಸಂಕಟ” ನೀಡಿದನು.. ಚಿತ್ರ ಹೆಚ್ಚು ಖುಷಿಕೊಡಲಿಲ್ಲ… ಕೆಲವು ಹಾಸ್ಯ ದೃಶ್ಯಗಳ ಹೊರತುಪಡಿಸಿ…
     ನಮ್ಮ ತಲೆಗೆ ಕಳೆದು ಹೋದ ಚೇತನವನ್ನು ತರಿಸಲೆಂದು ಹೋಟೇಲಿಗೆ ಹೋದೆವು. ಚಹಾ ಹೀರುತ್ತಾ ಗೆಳೆಯ ಹೇಳಿದ, “ಜಂಗ್ಲಿ” ನೋಡುವ ಮಾರೆ.. ಒಳ್ಳೆ ಉಂಟು..” ಮತ್ತೆ “ದೂಸ್ರಾ ಮಾತಿಲ್ಲ”! ಸೀದಾ ಹೊರಟೆವು, ರಾಮಕಾಂತಿ ಚಿತ್ರಮಂದಿರಕ್ಕೆ.

ವಿಶೇಷವೇನೆಂದರೆ, ಅಲ್ಲಿ ಹಿಂದೆ ಯಾವ ಚಿತ್ರಕ್ಕೆ ಹೋಗಿದ್ದೆ ಅನ್ನೋದೇ ನೆನಪಿಲ್ಲ! ಮಿತ್ರನು ಅಲ್ಲಿ “ಜೋಗಿ” ನೋಡಿದ್ದ. ಅಲ್ಲಿ ತುಂಬಾ ವರ್ಷಗಳ ಹಿಂದೆ “ಮೈನೆ ಪ್ಯಾರ್ ಕಿಯಾ” ನೋಡಿದ್ದ ನೆನಪು… ಮತ್ತೆ ಹೋಗಿದ್ದೆ..ಸರಿ ನೆನಪಿಲ್ಲ.

ಜಂಗ್ಲಿ ನೋಡಿ ಖುಷಿಯಾಯ್ತು! ಒಂಥರಾ ಭಿನ್ನ ಶೈಲಿಯಲ್ಲಿತ್ತು ಅದರ ಚಿತ್ರಕಥೆ, screenplay. ಛಾಯಾಗ್ರಹಣವಂತೂ ಸೂಪರ್! ಶುರುವಿನಿಂದ ಕಡೆಯವರೆಗೂ! ಕೆ.ಆರ್.ಪುರಂ ಕೇಬಲ್ ಸೇತುವೆಯ ಬಳಿ ಶುರುವಾದ “ಜಂಗ್ಲಿ” ಕೊನೆಯವರೆಗೂ ನೋಡಿಸಿಕೊಂಡು ಹೋಯಿತು. ಎಲ್ಲೂ “ಬೋರ್” ಆಗ್ಲಿಲ್ಲ. ಸೊಗಸಾದ ಹಾಡುಗಳು, (ಕಂಗ್ಲಿಷ್ ಆದ್ರೂ ಚೆನ್ನಾಗಿತ್ತು!) ಇನ್ನು ಸೊಗಸಾದ ಚಿತ್ರೀಕರಣ, ಛಾಯಾಗ್ರಹಣ… ಉಳಿದ ತಾಂತ್ರಿಕತೆಗಳು!

ರಾಮಕಾಂತಿಯ ದೊಡ್ಡ, ಅಗಲ ಪರದೆಯಮೇಲೆ, ಸುತ್ತುವರಿ ಧ್ವನಿ ವಿಶೇಷಗಳ ನಡುವೆ “ಜಂಗ್ಲಿ” ಮಿಂಚಿತು. ಕಥೆಯೇನೂ ವಿಶೇಷವಿಲ್ಲದಿದ್ದರೂ, ಅದನ್ನು ಕೊಂಡೊಯ್ದ ರೀತಿ ಖುಷಿ ತಂದಿತು. ಎಲ್ಲರ ಅಭಿನಯವೂ ಚೆನ್ನಾಗಿತ್ತು. ವಿಶೇಷವಾಗಿ, ರಂಗಾಯಣ ರಘು ಅವರದು. ಹೆಚ್ಚೇನೂ ಇಲ್ಲ ಚಿತ್ರದಲ್ಲಿ, ಮಸಾಲಾ ಮನೋರಂಜನೆ. ಆದರೆ, ಒಮ್ಮೆ ನೋಡಿ ಆನಂದಿಸಬಹುದು…

ಚಿತ್ರಗಳ ಕಥೆ ಹೇಳಿ ನಿಮ್ಮ ಕುತೂಹಲವನ್ನು ಹಾಳು ಮಾಡಲಾರೆ. ನೀವೇ ನೋಡಿ… ನಮಗಿಷ್ಟವಾದುದು ನಿಮಗೆ ಆಗದೆಯೂ ಇರಬಹುದು. ಇಷ್ಟವಾಗದು ಇಷ್ಟವಾಗಲೂ ಬಹುದು… ಅಂದ ಹಾಗೆ, ಸಂಜೆ ಷೋ, “ಸಂಕಟ”ವಾಗಿ, ರಾತ್ರಿಯದು “ಜಂಗ್ಲಿ”ಯಾಯ್ತು. ಮೂರನೇ ಚಿತ್ರ ಅಂದೇ ನೋಡಿ ನಮ್ಮ ದಾಖಲೆ ಮುರಿಯಲಿಲ್ಲ.

Advertisements