‘ಈ ಉತ್ಸವ ಇಲ್ಲಿಗೇ ಕೊನೆಗೊಳ್ಳದು. ವರ್ಷಪೂರ್ತಿ ಮೂರು ಬಾರಿ ಇಂಥ ಚಿತ್ರೋತ್ಸವ ಸಂಘಟಿಸಿ ಕನ್ನಡದ ಅತ್ಯುತ್ತಮ 75 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎನ್ನುತ್ತಾರೆ ಸಾಂಗತ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಂಡ್ಯ ರಮೇಶ್

ಚಿತ್ರೋತ್ಸವ ಉದ್ಘಾಟನೆಗೆ ಮುನ್ನ ಗಿರೀಶ್ ಕಾಸರವಳ್ಳಿ ಮತ್ತು ಅತಿಥಿಗಳಿಗೆ ನಟನ ಚಿತ್ರೋತ್ಸವ ಕುರಿತು ಮಂಡ್ಯ ರಮೇಶ್ ವಿವರಿಸುತ್ತಿರುವುದು
ಚಿತ್ರೋತ್ಸವ ಉದ್ಘಾಟನೆಗೆ ಮುನ್ನ ಗಿರೀಶ್ ಕಾಸರವಳ್ಳಿ ಮತ್ತು ಅತಿಥಿಗಳಿಗೆ ನಟನ ಚಿತ್ರೋತ್ಸವ ಕುರಿತು ಮಂಡ್ಯ ರಮೇಶ್ ವಿವರಿಸುತ್ತಿರುವುದು

ಚಿತ್ರೋತ್ಸವದ ಕುರಿತು ‘ಸಾಂಗತ್ಯ’ ದೊಂದಿಗೆ ಮಾತನಾಡಿದ ಮಂಡ್ಯ ರಮೇಶ್, ‘ನಿಜವಾಗಲೂ ನಮ್ಮ ಪ್ರಯತ್ನ ಖುಷಿಕೊಟ್ಟಿದೆ. ಒಂದಿಷ್ಟು ಒಳ್ಳೆಯ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ಕಲ್ಪಿಸುವ ಆಲೋಚನೆಯ ಹಿಂದೆ ಆ ಮೂಲಕ ಅಧ್ಯಯನ ಮಾಡುವ ಅವಕಾಶವನ್ನು ನೀಡುವ ಉದ್ದೇಶವಿದೆ. ಏನಿಲ್ಲವೆಂದರೂ ನಮ್ಮಲ್ಲೇ ಕಲಿಯುತ್ತಿರುವ ರಂಗ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದರು.

‘ಮೂವತ್ತು ನಲವತ್ತು ಮಂದಿ ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ಚಲನಚಿತ್ರ ಇತಿಹಾಸ, ಆಗಿನ ನಟರ ಪರಿಶ್ರಮ ಎಲ್ಲವೂ ಅರ್ಥವಾಗಬೇಕು. ಹಾಗಾಗಿ ಶುರು ಮಾಡಿದೆವು. ಸಾರ್ವಜನಿಕರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆವು. ಚೆನ್ನಾಗಿ ನಡೆಯುತ್ತಿದೆ. ಎಲ್ಲ ಚಿತ್ರಗಳಿಗೂ ಒಂದೇ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಲಾಗದು. ಆದರೆ ಉತ್ಸಾಹ ಕುಂದಿಸುವಂತೇನೂ ಇಲ್ಲ’ ಎಂದಾಗ ಪ್ರಯತ್ನ ಮುಂದುವರಿಸುವಿಕೆಯ ಸೂಚನೆಯಿತ್ತು.

‘ವಸಂತಸೇನ’ ಚಿತ್ರದ ಮೂಲಕ ಆರ್ ಎನ್‌ಆರ್ ಅವರ ಅಭಿನಯ, ಕನ್ನಡದ ಮೊದಲ ನಟಿ ಲಕ್ಷ್ಮೀಬಾಯಿವರ ನಟನೆ ನೋಡಲು ಸಾಧ್ಯವಾಯಿತು. ನಮ್ಮ ವಿದ್ಯಾರ್ಥಿಗಳಿಗೆ ಬರೀ ಸಿನಿಮಾ ನಿರ್ಮಾಣವಲ್ಲ ; ಪರಿಕಲ್ಪನೆ ಮತ್ತು ಮೌಲ್ಯಗಳ ಬಗ್ಗೆಯೂ ಹೇಳಬೇಕಿದೆ. ಈ ನಿಟ್ಟಿನಲ್ಲಿ ಆರಂಭಿಸಿದ್ದು ಈ ಚಿತ್ರೋತ್ಸವ’.

‘ಈ ಉತ್ಸವ ಇಲ್ಲಿಗೇ ಕೊನೆಗೊಳ್ಳದು. ವರ್ಷಪೂರ್ತಿ ಮೂರು ಬಾರಿ ಇಂಥ ಚಿತ್ರೋತ್ಸವ ಸಂಘಟಿಸಿ ಕನ್ನಡದ ಅತ್ಯುತ್ತಮ 75 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರೇಕ್ಷಕರು ಎಷ್ಟೇ ಮಂದಿ ಇದ್ದರೂ ಉತ್ಸವ ನಿಲ್ಲುವುದಿಲ್ಲ. ನಿಮಗೆ ಹೇಳುವುದಾದರೆ, ಈ ಹಿಂದೆ ರಂಗಾಯಣದಲ್ಲಿ ‘ಭೂಮಿಗೀತ’ ನಾಟಕ ಪ್ರದರ್ಶನಕ್ಕೆ ಸಜ್ಜಾಗಿತ್ತು. ಕಾವ್ಯವನ್ನು ನಾಟಕವಾಗಿಸುತ್ತಿದ್ದಾರೆ…ಇತ್ಯಾದಿ ಟೀಕೆ ಕೇಳಿಬಂದಿದ್ದ ಕಾಲ. ಅಂದು ಪ್ರೇಕ್ಷಕರಾಗಿದ್ದ  ಕೆ.ವಿ. ಸುಬ್ಬಣ್ಣ ಮತ್ತು ಅಕ್ಷರ ಇಬ್ಬರಿಗೇ ರಂಗಾಯಣ ನಾಟಕ ಪ್ರದರ್ಶಿಸಿತು. ಬಿ. ವಿ.ಕಾರಂತರು ಹೇಳುತ್ತಿದ್ದ ಮಾತು ಇಂದಿಗೂ ನೆನಪಿದೆ. ‘ಪ್ರೇಕ್ಷಕರ ಸಂಖ್ಯೆ ಮುಖ್ಯವಲ್ಲ. ಒಬ್ಬರಿರಲಿ, ಇಬ್ಬರಿರಲಿ, ವೃತ್ತಿಪರತೆ ಮುಖ್ಯ. ಆ ಇಬ್ಬರನ್ನೂ ಕಡೆಗಣಿಸುವುದು ವೃತ್ತಿಪರತೆಯಲ್ಲ. ಹಾಗಾಗಿ ಅದನ್ನೇ ರೂಢಿಸಿಕೊಂಡಿದ್ದೇವೆ’ ಎನ್ನುತ್ತಾರೆ ಮಂಡ್ಯ ರಮೇಶ್.

ಒಳ್ಳೆಯ ಬೆಳವಣಿಗೆ. ಹೀಗೆ ಚಿತ್ರೋತ್ಸವ ಪ್ರತಿ ಊರಿನಲ್ಲೂ ಆಗಾಗ್ಗೆ ನಡೆದರೆ, ನಮ್ಮ ಜನರ ಅಭಿರುಚಿ ಮತ್ತಷ್ಟು ಹೆಚ್ಚಬಹುದು. ನಟನಕ್ಕೆ ಹಾಗೂ ರಮೇಶ್‌ರ ಪ್ರಯತ್ನಕ್ಕೆ ಸಾಂಗತ್ಯ ಶುಭ ಹಾರೈಸುತ್ತದೆ.

Advertisements