ನಮ್ಮ ಎಸ್. ಜಾನಕಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಶನಿವಾರ ಅಭಿನಂದಿಸುತ್ತಿದೆ. ಈ ಸಂದರ್ಭದಲ್ಲಿ ಪುಟ್ಟದೊಂದು ಲೇಖನ ಬರೆದು ಕಳುಹಿಸಿದ್ದಾರೆ ಕೆ.ಎಸ್. ಪೂರ್ವಿ. ಇದು ಅವರಿಗೆ ನುಡಿ ಅಭಿನಂದನೆ.

ಪಿ. ಸುಶೀಲಾರೊಂದಿಗೆ ಎಸ್. ಜಾನಕಿ
ಪಿ. ಸುಶೀಲಾರೊಂದಿಗೆ ಎಸ್. ಜಾನಕಿ

‘ಕಂಗಳು ತುಂಬಿರಲು….ಕಂಬನಿ ಧಾರೆಯಲಿ’…ಈ ಹಾಡು ಕೇಳಿದಾಗಲೆಲ್ಲಾ ಕಣ್ಣಾಲಿಗಳನ್ನು ತುಂಬಿಕೊಂಡು ವಿಷಾದದಲ್ಲಿ ಅದ್ದಿ ತೆಗೆದಂತೆ ತೋರುವ ಜಾನಕಿ ನೆನಪಾಗುತ್ತಾರೆ.

ಒಂದಿಷ್ಟು ಬಣ್ಣಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು ನಿನಗ್ಯಾವ ಬಣ್ಣ ಬೇಕೋ ಅದನ್ನು ಆರಿಸಿಕೊ ಎಂದರೆ ಆಯ್ಕೆ ಯಾವುದಾಗಬೇಕು ? ವಿಪರ್ಯಾಸವೆಂದರೆ, ಆಯ್ಕೆಗಿಂತ ಗೊಂದಲವೇ ಹೆಚ್ಚಾಗುತ್ತದೆ. ಹಾಡುಗಳ ಮೆರವಣಿಗೆಯಲ್ಲಿ ನಾವು ಯಾರನ್ನೋ ಹುಡುಕಲು ಹೋದ ಮಂದಿ ಕಳೆದು ಹೋಗುತ್ತೇವೆ.

ಎಸ್. ಜಾನಕಿ ಅದ್ಭುತ ಕಲಾವಿದೆ. ಅವರು ಹಾಡಿದ ಹಾಡುಗಳೆಲ್ಲಾ ಸದಾ ನೆನಪಿನ ಬುತ್ತಿಯಲ್ಲಿ ಚಿಗುರುತ್ತಿರುವ ಹಸಿರೇ. ಯಾವುದೇ ಭಾವ ಇರಬಹುದು ; ಅದಕ್ಕೆ ಜೀವ ತುಂಬಿ ಹಾಡಿದವರು ಜಾನಕಿ.

ಮೈಸೂರು ವಿಶ್ವವಿದ್ಯಾಲಯ ಜಾನಕಿಯಮ್ಮನಿಗೆ ಶನಿವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿದೆ. ನನ್ನ ಮೆಚ್ಚಿನ ಗಾಯಕಿಗೆ ಸಲ್ಲುತ್ತಿರುವ ಗೌರವ. ಮನಸ್ಸಿಗೆ ಖುಷಿಯಾಯಿತು. ಅದಕ್ಕೇ ಜಾನಕಿ ಕುರಿತು ಬರೆದೆ.
ಇಂದಿಗೂ ನನ್ನನ್ನು ಕಾಡುವ ಹಾಡುಗಳಲ್ಲಿ ಮೇಲಿನದು ಒಂದು. ಆ ಹಾಡು ಕೇಳುತ್ತಿದ್ದರೆ ಹೃದಯದ ಕಣ್ಣೂ ಹನಿಗೂಡುತ್ತದೆ. ಹಾಗೆಯೇ “ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ ಹಾಡೂ ಸಹ ಒಂದು ಒಳ್ಳೆಯ ಒಲವಿನ ಗೀತೆ.

ಜಾನಕಿ, ಎಲ್ಲರ ಜಾನಕಿ. ಹುಟ್ಟಿದ್ದು ಆಂದ್ರ ಪ್ರದೇಶದಲ್ಲಿ. ಅಂದರೆ ತೆಲುಗು ಭಾಷಿಗರು. ಮೂರನೇ ವರ್ಷದಲ್ಲಿ ಸಂಗೀತವನ್ನು ಒಲಿಸಿಕೊಂಡ ಅವರು, ತಮ್ಮ ಹಿತೈಷಿಗಳ ಸಲಹೆಯಂತೆ ಹೊರಟದ್ದು ಚೆನ್ನೈ ಕಡೆಗೆ. ಅಲ್ಲಿ ಒಂದಿಷ್ಟು ಸಂಗೀತವನ್ನು ಅರಗಿಸಿಕೊಳ್ಳುತ್ತಲೇ ಎವಿಎಂ ಕಂಪನಿಯಲ್ಲಿ ಹಾಡಲು ಶುರು ಮಾಡಿದವರು. ತಮಿಳು, ಮಲಯಾಳಂ, ಹಿಂದಿ, ಕನ್ನಡ, ತೆಲುಗು ಹೀಗೆ ಹಲವು ಭಾಷೆಗಳಲ್ಲಿ ಹಾಡಿರುವ ಅವರು ಎಲ್ಲದಕ್ಕೂ ನ್ಯಾಯ ಒದಗಿಸಿದ್ದಾರೆ. ಇದುವರೆಗೆ ಒಂದು ಅಂದಾಜಿನ ಪ್ರಕಾರ ೩೦ ಸಾವಿರ ಹಾಡುಗಳನ್ನು ಹಾಡಿರಬಹುದು.
ಚೆನ್ನೈಗೆ ಇರುವುದರಿಂದ ಆಕೆ ತಮಿಳಿಗಳು, ಆಂಧ್ರದಲ್ಲಿ ಹುಟ್ಟಿದ್ದಕ್ಕೆ ಆಂಧ್ರದವಳು, ಕನ್ನಡದಲ್ಲಿ ಹಾಡಿ ಎಲ್ಲರ ಮನವನ್ನು ತುಂಬಿದ್ದಕ್ಕೆ ಆಕೆ ಕನ್ನಡಿಗಳು….ಹೀಗೆ ಭಾಷೆಯ ಬೇಲಿ ಇರದೇ ಅರಳಿದ ಹೂ ಆಕೆ.

ಹಾಡುಗಳಿಂದಲೇ ನಮ್ಮನ್ನು ಆವರಿಸಿಕೊಂಡ ಜಾನಕಿ, ಮುಗ್ಧೆ. ಬೆಂಗಳೂರಿನಲ್ಲಿ ಸುಮಾರು ನಾಲ್ಕು ಕಾರ್‍ಯಕ್ರಮಗಳಲ್ಲಿ ಅವರನ್ನು ಖುದ್ದಾಗಿ ಕಂಡಿದ್ದೇನೆ. ಮಹಾನ್ ಗಾಯಕಿಯಾಗಿ ದುರಂಹಕಾರವನ್ನು ಧರಿಸದೇ ವಿನಯವನ್ನು ಧರಿಸಿರುವಾಕೆ. ನಿಷ್ಕಲ್ಮಶವಾದ ನಗುವನ್ನು ಚೆಲ್ಲುತ್ತಾ, ತನ್ನೊಳಗಿನ ಪ್ರತಿಭೆ ದಾರ್ಷ್ಟ್ಯವನ್ನು ಮೆರೆಯಲು ಬಿಡದೇ, ಪ್ರಜ್ಞಾಪೂರ್ವಕವಾಗಿ ಬಾಳಿದವರು ಅವರು. ಹಾಗಾಗಿ ಅವರನ್ನು ಅಭಿನಂದಿಸಲೇಬೇಕು.

ಹೂವೊಂದು ಬೇಕು ಬಳ್ಳಿಗೆ ಎಂಬ ಹಾಡನ್ನು ಹಾಡುವಾಗ ಮಗುವನ್ನು ಬಯಸುವ ತಾಯಿಯ ಅಗತ್ಯವನ್ನು ಒತ್ತಿ ಹೇಳುವ ಜಾನಕಿ, ಸುಮ್ಮನೆ ಪದಗಳನ್ನು ಹೇಳುವುದಿಲ್ಲ. ಕನ್ನಡಿಗಲಲ್ಲದಿದ್ದರೂ ಕನ್ನಡದ ಭಾಷೆಗೆ, ಸಾಹಿತ್ಯಕ್ಕೆ ಅಪಚಾರವಾಗದಂತೆ ಎಚ್ಚರಿಕೆ ವಹಿಸಿ ಹಾಡಿರುವುದನ್ನು ನಾವು ಮೆಚ್ಚಬೇಕು. ಈಗ ಹಿಂದಿಯಿಂದ, ಬೇರೆ ಭಾಷೆಗಳಿಂದ ಆಮದಾಗುತ್ತಿರುವ ಗಾಯಕರು, ಕನ್ನಡವನ್ನು ಎಷ್ಟೋ ಬಾರಿ ಕೊಂದಿದ್ದಾರೆ !.

ಇಂಥ ಸಂದರ್ಭದಲ್ಲಿ ನಾವು ಇವರೆಲ್ಲರನ್ನೂ ಮೆಚ್ಚಿಕೊಳ್ಳಬೇಕು. ಜಾನಕಿ, ಪಿ. ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯ, ಎಲ್. ಆರ್. ಈಶ್ವರಿ…ಒಬ್ಬರೇ…ಇಬ್ಬರೇ..ಹೀಗೆ ಕನ್ನಡವನ್ನು ತಮ್ಮ ಸಿರಿಕಂಠದಲ್ಲಿ ಹಾಡಿದವರೆಲ್ಲಾ ಬೇರೆ ಭಾಷಿಗರೇ. ಆದರೆ ಆ ಮೂಲಕ ಹಾಡಿನ ತೋರಣವನ್ನು ಕಟ್ಟಿದ ಇವರ ಕೊಡುಗೆಯನ್ನು ಮೆಚ್ಚದೇ ಇರುವಂತಿಲ್ಲ.

ಅದಕ್ಕೇ ಹೇಳಿದ್ದು…ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…

Advertisements