ಸಾಂಗತ್ಯದ ಬಳಗ ದೊಡ್ಡದಾಗುತ್ತಿರುವುದು ಖುಷಿಯ ಸಂಗತಿ. ಮಧುರ್ ಭಂಡಾರ್ಕರ್ ಸಿನಿಮಾ ಉತ್ಸವ ಮುಂದುವರಿದಿದೆ. ಅವರ “ಫ್ಯಾಷನ್” ಹೊಸ ಕಥಾವಸ್ತುವಿನ ಚಿತ್ರ. ವಿನಾಯಕ ಭಟ್ಟ ಮೂರೂರು ಈ ಚಿತ್ರದ ಕುರಿತು ಕಳಿಸಿದ ಅನಿಸಿಕೆಯನ್ನು ಪ್ರಕಟಿಸಲಾಗಿದೆ. ಇಲ್ಲಿ ಪ್ರಕಟಗೊಂಡಿರುವ ಎಲ್ಲ ಚಿತ್ರಗಳ ಭಿನ್ನ ಭಿನ್ನ ನೋಟಗಳನ್ನು saangatya@gmail.com ಕಳುಹಿಸಿ.

ಫ್ಯಾಷನ್ ಅಂದರೆ ಅದೇ…
ಯಾವುದನ್ನು ಎಷ್ಟು ತೋರಿಸಬೇಕೊ ಅಷ್ಟು ತೋರಿಸಬೇಕು. ಯಾವುದನ್ನು ಮುಚ್ಚಿಡಬೇಕೊ ಅದನ್ನು ಮುಚ್ಚಿಡಬೇಕು!

fashion-cut-copy

ಫ್ಯಾಷನ್ ಸಿನಿಮಾದಲ್ಲೂ ಮಧುರ್ ಭಂಡಾರ್ಕರ್ ಅದನ್ನೇ ಮಾಡಿದ್ದಾರೆ. ಬಟ್ಟೆಗಳ ಪಾರದರ್ಶಕದ ಮೂಲಕ ಬೆತ್ತಲೆ ತೋರಿಸಹೊರಟ ಫ್ಯಾಷನ್ ಲೋಕವನ್ನು, ಸಿನಿಮಾ ಮಂದಿರದಲ್ಲಿರುವ ಬಟ್ಟೆ ಪರದೆ ಮೇಲೆ ನಿರ್ದೇಶಕ ಮಧುರ್ ಭಂಡಾರ್ಕರ್ ತೆರೆದಿಟ್ಟಿದ್ದಾರೆ. ಅದನ್ನೆಲ್ಲ ಎಷ್ಟು ತೋರಿಸಬೇಕೊ ಅಷ್ಟೇ ತೋರಿಸಿದ್ದಾರೆ.

ಫ್ಯಾಷನ್ ಎಂದರೆ ಥಳುಕು-ಬಳುಕು ಎರಡೂ ಇರುವ ಕ್ಷೇತ್ರ ಎಂಬುದಷ್ಟೇ ನಮಗೆ ಗೊತ್ತಿತ್ತು. ಫ್ಯಾಷನ್ ಟಿ.ವಿ,  ಮ್ಯಾಗಜಿನ್‌ಗಳ ಮುಖಪುಟದಲ್ಲಿ, ಜಾಹೀರಾತಿನಲ್ಲಿ ನೋಡಿದ್ದೆವು. ಅವರ-ಅವಳ ನಗುಮುಖದ ಹಿಂದೆ ನಮಗೆ ಅರಿಯದ ನೋವು ಇರಬಲ್ಲದು ಎಂಬುದರ ಅರಿವು ಅಷ್ಟಾಗಿರಲಿಲ್ಲ. ಆದರೆ ಭಂಡಾರ್ಕರ್ 3 ತಾಸಿನಲ್ಲಿ ಫ್ಯಾಷನ್ ಲೋಕದ ಸಂಪೂರ್ಣ ಪರಿಚಯ ಮಾಡಿಸುತ್ತಾರೆ. ಥಳುಕು-ಬಳುಕು ಜತೆಗೆ ಕೊಳಕು ಇದೆ ಎಂದಿದ್ದಾರೆ. ಅವರ ಹಿಂದಿನ ಸಿನಿಮಾಗಳಂತೆ!

ಫ್ಯಾಷನ್ ಸಿನಿಮಾದಲ್ಲಿ ಕನಸು, ಆಸೆಗಳಿವೆ. ಅದರ ಹಿಂದೆ ಬಿದ್ದ ಮಧ್ಯಮ ವರ್ಗದ ಹುಡುಗಿಯ ವ್ಯಥೆಯಿದೆ. ಭಾವನೆಗಳಿವೆ. ದುಃಖವಿದೆ, ಸೆಕ್ಸ್ ಇದೆ. ಇತ್ತೀಚೆಗೆ ಭಾರೀ ಸುದ್ದಿಗೀಡಾಗುತ್ತಿರುವ, ನಮ್ಮ ದೇಶದಲ್ಲೂ ಅಧಿಕೃತ ಮುದ್ರೆ ಪಡೆಯಲು ಯತ್ನಿಸುತ್ತಿರುವ ಹಾಗೂ ಫ್ಯಾಷನ್ ಲೋಕದಲ್ಲಿರುವ ಸಲಿಂಗ ಕಾಮದ ಬಗ್ಗೆಯೂ ಸೂಚ್ಯ  ಉಲ್ಲೇಖವಿದೆ. ನೀವು ಎಷ್ಟೇ ಉತ್ತುಂಗದಲ್ಲಿದ್ದರೂ ಹಮ್ಮು-ಬಿಮ್ಮು ಬೆಳೆಸಿಕೊಳ್ಳಬೇಡಿ ಎಂಬ ಸಂದೇಶವೂ ಇದೆ. ಉತ್ತಮ ಸಂಗೀತವಿದೆ.

ಸಿನಿಮಾ ನೋಡಿ ಮುಗಿದ ನಂತರ ಕುಳಿತು ಯೋಚಿಸಿದರೆ ನಿರ್ದೇಶಕ, ಒಂದೇ ಒಂದು ದೃಶ್ಯವನ್ನೂ ಅನವಶ್ಯಕವಾಗಿ ಸೇರಿಸಿಲ್ಲ ಅನ್ನಿಸುತ್ತದೆ. ಹಾಡುಗಳು ಹಲವು ಬಾರಿ ಕೇಳುವಂತಿವೆ. ಅವು ಸಾಕಷ್ಟು ಜನಪ್ರಿಯವೂ ಆಗಿವೆ. ‘ಮರಜಾಂವಾ’, ‘ಕುಚ್ ಖಾಸ್ ಹೆ’, ‘ಫ್ಯಾಷನ್ ಕಾ ಜಲ್ವಾ’ ಹಾಡುಗಳು ಇಂದಿಗೂ ಕೇಳಬೇಕು ಎನಿಸುವಂಥವು. ಇಷ್ಟು ಹಾಡಿದ್ದರೂ ಒಂದೇ ಒಂದು ಡ್ಯಾನ್ಸ್ ಇಲ್ಲ!

ಚಿತ್ರ ನಾಯಕಿ ಮೇಘನಾ ಹಾಗೂ ಫ್ಯಾಷನ್ ಲೋಕದಲ್ಲೇ ಪರಿಚಯವಾದ ಗೆಳೆಯ ‘ಮಾನವ್’ ಜತೆ ಪ್ರೇಮ ಅಂಕುರಿಸುತ್ತದೆ. ಸಮಾಧಾನದ ಸಂಗತಿಯೆಂದರೆ ಅವರು ಒಂದು ಬಾರಿಯೂ ಹಾಡಿ ಕುಣಿಯುವುದಿಲ್ಲ. ಹಾಗೆ ಅವರು ಹಾಡದಿರುವುದರಿಂದ ಹೊತ್ತಲ್ಲದ ಹೊತ್ತಲ್ಲಿ, ಆಫ್ ಸೀಜನ್‌ನಲ್ಲಿ ಮಳೆಯೂ ಬರುವುದಿಲ್ಲ! ಇವರ ಪ್ರೇಮವನ್ನೇ ನೆಪವಾಗಿಸಿಕೊಂಡು ಈಗೀಗ ಮಹಾನಗರಗಳಲ್ಲಿ ರೂಢಿಗೆ ಬರುತ್ತಿರುವ ಲಿವಿಂಗ್ ಸಂಬಂಧದ ಝಲಕ್ ಒದಗಿಸಿದ್ದಾರೆ.

ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾಳ ಪ್ರತಿಸ್ಪರ್ಧಿ ಪಾತ್ರ ಮಾಡಿದ ಕಂಗನಾ ರಾವ್ ಇಷ್ಟವಾಗಬಹುದು. ಅವಳು ನಟಿಗಿಂತ ಹೆಚ್ಚಾಗಿ ಮಾಲ್ ಒಂದರಲ್ಲಿ ಆಕಸ್ಮಿಕವಾಗಿ ಕಂಡು, ಕಣ್ಸೆಳೆದು ಹೋದ ಹುಡುಗಿ ಅನ್ನಿಸಿಬಿಡುತ್ತಾಳೆ. ನಟನೆಯಲ್ಲಿ ಆಕೆ ಚೋಪ್ರಾಳನ್ನೂ ಹಿಂದಿಕ್ಕಿದ್ದಾಳೆ.

ಈಕೆಯ ಪಾತ್ರದ ಮೂಲಕ ನಿರ್ದೇಶಕ, ಕೆಟ್ಟ ಚಟಗಳಿಗೆ ಬಲಿಯಾದರೆ ಆಗುವ ಪರಿಣಾಮಗಳನ್ನು ಚಿತ್ರಿಸಿದ್ದಾರೆ. ನೀವು ಎಷ್ಟೇ ಉನ್ನತ ಸ್ಥಾನದಲ್ಲಿರಿ ಹಮ್ಮು ಬೆಳೆಸಿಕೊಂಡರೆ ಅಧಃಪತನಕ್ಕೆ ಹೆಚ್ಚು ದಿನ ಬೇಕಿಲ್ಲ ಎಂಬ ಸಂದೇಶವೂ ರವಾನೆಯಾಗಿದೆ. ಅದಕ್ಕೆ ನಾಯಕಿಯ ಪಾತ್ರದ ನಿರೂಪಣೆ.  ಹಾಗೆಯೇ ಫ್ಯಾಷನ್ ಪ್ರಪಂಚದ ಸಂಪಕ್ಷ, ಹೆಸರು ಎಲ್ಲವನ್ನೂ ಕಳೆದುಕೊಂಡ ನಾಯಕಿ ಒಂದು ವರ್ಷ ಬಿಟ್ಟು ಮರಳಿ ಅದೇ ಕ್ಷೇತ್ರಕ್ಕೆ ಬಂದು, ಮತ್ತೆ ಔನ್ನತ್ಯಕ್ಕೇರುವುದನ್ನು ತೋರಿಸುವ ಮೂಲಕ ಆಶಾವಾದವನ್ನು ಬಿತ್ತಿದ್ದಾರೆ. ಏನೇ ಆದರೂ ಜೀವನದಲ್ಲಿ ಎಲ್ಲ ಮುಗಿಯುವುದಿಲ್ಲ, ತಲೆ ಮೇಲೆ ಕೈ ಹೊತ್ತು ಕೂರುವ ಅಗತ್ಯವಿಲ್ಲ ಎಂಬ ಸಂದೇಶದ ಮೂಲಕ…

‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಕೆಲಸವು ಸಾಗದು ಮುಂದೆ’ ಎಂಬುದನ್ನು ನೆನಪಾಗುವುದು ಇಲ್ಲಿಯೇ. ನಾಯಕಿಯ ಅಪ್ಪನ ಪಾತ್ರದ ಮೂಲಕ ‘ಓಟದಲ್ಲಿ ಬಿದ್ದವನು ಸೋಲುವುದಿಲ್ಲ. ಬಿದ್ದೂ ಏಳದವನು ಮಾತ್ರ ಸೋಲುತ್ತಾನೆ’ ಎಂಬುದನ್ನು ಹೇಳಿಸಿ, ಪ್ರೇಕ್ಷಕರಿಗೂ ಸ್ಪೂರ್ತಿ ನೀಡಿದ್ದಾರೆ.

ಬಹುಶಃ ಭಂಡಾರ್ಕರ್ ಹೊರತುಪಡಿಸಿ ಮತ್ಯಾರೇ ಇದನ್ನು ನಿರ್ದೇಶಿಸಿದ್ದರೂ, ಅದರಲ್ಲಿ ಇನ್ನೊಂದಿಷ್ಟು ಅನಗತ್ಯ ಸೆಕ್ಸ್, ಮತ್ತೊಂದಿಷ್ಟು ಗ್ಲಾಮರ್, ಡ್ಯಾನ್ಸ್ ತುರುಕುತ್ತಿದ್ದರು. ಭಂಡಾರ್ಕರ್ ಮಾತ್ರ ಅತಿಯನ್ನು ತಿರಸ್ಕರಿಸುತ್ತಲೇ ಮಿತವಾದುದನ್ನು ಹೇಳಿ ಅರ್ಥ ತುಂಬಬಲ್ಲವರು. ಜತೆಗೆ ಕುಟುಂಬವಿಡೀ ಕೂತು ನೋಡಬಲ್ಲ ಚಿತ್ರವಾಗಿಸಬಲ್ಲವರು. 

ಈ ಚಿತ್ರದ ಯಶಸ್ಸಿನಲ್ಲಿ ಭಂಡಾರ್ಕರ್‌ಗೆ ಪೂರ್ಣ ಪಾಲು ಸಿಗದು. ಯಾಕೆಂದರೆ ಸ್ವಲ್ಪ ಪಾಲು ಹಾಡು ಬರೆದೆ ಇರ್ಫಾನ್ ಸಿದ್ದಿಕಿ, ಸಂದೀಪ್ ನಾಥ್, ಸಂಗೀತ ನೀಡಿದ ಸಲೀಂ-ಸುಲೇಮಾನ್‌ಗೆ ಸಲ್ಲಬೇಕು. ಸಿನಿಮಾದ ಕತೆ ಬರೆಯುವಲ್ಲೂ ಮಧುರ್ ಜತೆ ಅಜಯ್ ಮೋಂಗಾ-ಅನುರಾಧಾ ತಿವಾರಿ ಪಾಲುದಾರರು.

ಸಾಮಾನ್ಯವಾಗಿ ಭಂಡಾರ್ಕರ್ ಯಾವುದೇ ವಿಷಯದಲ್ಲಿ ಸಿನಿಮಾ ಮಾಡಿದರೂ ಆ ಕ್ಷೇತ್ರ ಒಳ-ಹೊರಗಳನ್ನು, ತಂತ್ರಗಳನ್ನು, ಹುಳುಕುಗಳನ್ನು ದಿಟ್ಟವಾಗಿ ಹೇಳುತ್ತಾರೆ. ಆ ಕ್ಷೇತ್ರದ ನಾವರಿಯದ ಮುಖ ಪರಿಚಯಿಸುತ್ತಾರೆ ಎಂಬ ಮಾತಿದೆ. ಅದು ಫ್ಯಾಶನ್‌ಗೂ ಅನ್ವಯ. ಇಷ್ಟಿದ್ದೂ ಈ ಸಿನಿಮಾವನ್ನು ಮತ್ತೆ ನೋಡಬೇಕು ಅನ್ನಿಸದು.

Advertisements