ಮಹೇಶ್ ಹೆಗಡೆ ಮತ್ತೊಮ್ಮೆ ಸಾಂಗತ್ಯಕ್ಕೆ ಬರೆದಿದ್ದಾರೆ. ತಮ್ಮ ನೆಚ್ಚಿನ “ಕಾರ್ಪೋರೇಟ್” ಸಿನಿಮಾದ ಬಗೆಗಿನ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ. ಇಲ್ಲಿ ಪ್ರಕಟವಾಗುತ್ತಿರುವ ಬರಹಗಳ ಕುರಿತ ಮುಂದಿನ ಚರ್ಚೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಸಿನಿಮಾಗಳ ಕುರಿತೇ ನಿಮ್ಮದೇ ಆದ ಹೊಸ ಒಳನೋಟಗಳ ಬರಹವಿದ್ದರೆ saangatya@gmailಗೆ ಕಳಿಸಿಕೊಡಿ.

*

He is a Star movie maker. ನಿರಂತರವಾಗಿ ಹೊಸತನ್ನು ಕೊಡುತ್ತಿರುವ ಒಬ್ಬ ವಿಶೇಷ ನಿರ್ದೇಶಕ. ಮತ್ತೆ ಮತ್ತೆ ಗೆಲುವು ತಂದುಕೊಂಡವ. ಅದು ‘ಮಧುರ್ ಭಂಡಾರ್ಕರ್’ ತಾಕತ್ತು. ನೋಡುವ ಮೊದಲೇ ನಿಮ್ಮನ್ನು ಸೆಳೆದುಬಿಡುವ ಕಲೆ ಅವರಲ್ಲಿದೆ. ಒಬ್ಬ ಅದೆಷ್ಟು ‘ಸ್ಟಾರು’ ಇದ್ಯೋ ಅಷ್ಟನ್ನೂ ಕೊಟ್ಬಿಡ್ತೀನಿ ಅನ್ನುವಂತೆ ತಮ್ಮ ಸಿನೆಮಾ ಮಾಡಿರ್ತಾರೆ. ಪ್ರತಿ ಬಾರಿಯೂ. ವಿಷಯದ ಆಯ್ಕೆಯ ಮಟ್ಟಿಗೆ ಭಂಡಾರ್ಕರ್ ಹಿಂದಿ ಸಿನೆಮಾ ಜಗತ್ತಿನ ನಿಜವಾದ ಹೀರೋ. ಮಸಾಲಾ ಜಗತ್ತಿಗೆ ‘ಮಸಾಲಾ’ ಚಿತ್ರಗಳನ್ನು ಕೊಟ್ಟರೂ ಅವರು ಇಷ್ಟವಾಗುವುದು ‘ಕಾರ್ಪೊರೇಟ್’ ನಂಥ ‘Thought Provoking’ ಸಿನೆಮಾ ನೀಡಿದ್ದಕ್ಕಾಗಿ. corporate-2

ಅವರು ತಮ್ಮ ಉಳಿದೆಲ್ಲ ಸಿನಿಮಾಗಳಿಗಿಂತ ವಿಭಿನ್ನ ಅಥವಾ ಬಾಲಿವುಡ್ ಇನ್ನೂ ಪ್ರಯತ್ನಿಸಿರದ ವಿಷಯದಲ್ಲಿ ಈ ಸಿನಿಮಾ ಮಾಡಿದ್ದು. ಸಾಮಾನ್ಯರಿಗೆ! ತಿಳಿದಿರದ ವಿಷಯವನ್ನು ತಂದು, ಸಿನಿಮಾ ಮಾಡುವ “ವಸ್ತು” ವೇ ಅಲ್ಲದ ಕಾರ್ಪೋರೇಟ್ ಜಗತ್ತಿನ – Pepsi-Coke-Pesticide ಅವ್ಯವಹಾರಗಳಿಗೆ ಸುಂದರ ರೂಪ ನೀಡಿ ಮತ್ತೆ ಗೆದ್ದದ್ದು. ನಿಜ, ನಾವಿನ್ನೂ ಕಲಿಯಬೇಕಾದ್ದು ಬಹಳಷ್ಟಿದೆ. ಈ ‘ಪಾನೀಯ’ ವಿಷಯ ಬಂದರೆ ಮಾತನಾಡಲು ಮುಗಿಯದಷ್ಟಿದೆ. ಸದ್ಯಕ್ಕೆ ವಿಷಯ ಅದಲ್ಲ, ಆ ಕುರಿತ ಕಾರ್ಪೋರೇಟ್ ನದ್ದು.

The Secret of Business is to Know what other person knows, and a little more.? ಸಾಮ್ರಾಜ್ಯಶಾಹಿ ಜನರ ಮಹತ್ವಾಕಾಂಕ್ಷಿ ಯುದ್ಧಭೂಮಿ ಈ ವ್ಯಾವಹಾರಿಕ ಜಗತ್ತು. ಮೋಸ ಮತ್ತು ಲಂಚಕೋರತನದ ಮನಸ್ಸುಗಳ ಪ್ರಪಂಚ. ಅಲ್ಲಿ ಚೌಕಟ್ಟುಗಳಿಲ್ಲ. ಹಾಗೆ ಹೇಳುತ್ತಾ ಸಾಗುತ್ತದೆ ಈ ಸಿನಿಮಾ, ಇಬ್ಬರು ಮಂಚೊಣಿಯಲ್ಲಿರುವ ಕಂಪನಿಯ ಒಡೆಯರನ್ನಿಟ್ಟುಕೊಂಡು. ಸೆಹಗಲ್ ಗ್ರೂಪ್ ಅಂತ ಒಂದು ಮಾರ್ವಾ ಇಂಟರ್ನ್ಯಾಶನಲ್ ಅಂತ ಇನ್ನೊಂದು. ಎರಡೂ ಒಂದೇ ಥರದ ವ್ಯವಹಾರದ ಮನೆಗಳು! ‘Powerfull, Ambitious, relentless’.

ಮೆನನ್ ರಿತೇಶ್ ಪಾತ್ರಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತಾರೆ. ಆತ ಗೆಲುವು ಕಾಣದ, ಆದರೆ ಸೋಲನ್ನೊಪ್ಪದ ಕನಸುಗಾರನ ಪಾತ್ರಕ್ಕೆ ಹೇಳಿಮಾಡಿಸಿದ ಆಯ್ಕೆ. ಅಂತೆಯೇ ತನ್ನ ‘ಪ್ರೀತಿ’ಯನ್ನು ವಿಪರೀತವಾಗಿ ಹಚ್ಚಿಕೊಳ್ಳುವ ಪಾತ್ರಕ್ಕೂ. ಭಾವನೆಗಳನ್ನೂ, ಸಂದರ್ಭಗಳನ್ನೂ ಅಭಿವ್ಯಕ್ತಿಸುವ ಕೆಲ ಸನ್ನಿವೇಶಗಳಲ್ಲಿ ಅವರ ಅಭಿನಯ ವ್ಹಾ ಅನ್ನುವಷ್ಟು ಸುಂದರ. ‘Acted to Perfection’.

ಸಹಜವಾಗಿ, ಸುಂದರವಾಗಿ ಎಲ್ಲೂ ಹಿಡಿತ ತಪ್ಪದಂತೆ ಆತ ನಿರ್ವಹಿಸಿದ ಕೆಲವು ಸನ್ನಿವೇಶಗಳಿವೆಯಲ್ಲ- ಭಾವನಾತ್ಮಕವಾದ, ಹತಾಶೆಯ, ಹುಚ್ಚುತನದ, ಸಿಟ್ಟಿನ ಸನ್ನಿವೇಶಗಳು- ಅಲ್ಲೆಲ್ಲಾ ಆತ ಅದ್ಭುತ ಅನ್ನಿಸುವಂತೆ ತನ್ನ ಕೌಶಲ್ಯವನ್ನು ತೋರಿದ್ದಾನೆ. Thanks to Kay Kay. He is Flawless. ‘ದೇವಯಾನಿ ಭಕ್ಷಿ’ಯಾಗಿ ಲಿಲ್ಲಿಟಿ ದುಬೆ ನಿರ್ವಹಿಸಿದ ಪತ್ರಕರ್ತೆಯ ಪಾತ್ರ ಕೆಲ ಉತ್ತಮ ಸನ್ನಿವೇಶಗಳ ನಿರ್ವಹಣೆಯ ಹೊಣೆ ಹೊತ್ತಿದ್ದು. ವೃತ್ತಿ, ವೃತ್ತಿಪರ ಲಾಭಗಳ ಮಧ್ಯೆ ಭಾವನೆಗಳಿಗೆ ಬೆಲೆಯಿಲ್ಲ ಅನ್ನಿಸುವಂತೆ ( ಆಕೆ ಕುಡಿಯುವ, ಕುಡಿದು ತನ್ನ ಚಾಲಕನ ಮುಂದೆ ಅಳುವ ಸನ್ನಿವೇಶ ನೋಡಿ/ನೆನಪಿಸಿಕೊಳ್ಳಿ) ಮಾಡುತ್ತದೆ ಕೆಲ ಸಮಯ. ಆಕೆಗೆ ಇನ್ನೂ ಒಳ್ಳೆಯ ಪಾತ್ರ ಸಿಗಬಹುದಿತ್ತು!. ಅಷ್ಟು ಬಿಟ್ಟರೆ, ಪ್ರತಿಯೊಬ್ಬರ ನಟನೆಯೂ ಸ್ಪಷ್ಟವಾಗಿ ನಿರೂಪಿಸಿದ್ದು, ಹೇಳುವುದಕ್ಕೇನೂ ಇಲ್ಲ ಆ ಕುರಿತು.

ಮೊದಲೇ ಹೇಳಿದಂತೆ ‘ಸೆಹಗಲ್ ಗ್ರೂಪ್’ನ ವಿನಯ್ ಸೆಹಗಲ್ (ರಜತ್ ಕಪೂರ್) ಹಾಗೂ ‘ಮಾರ್ವಾ’ದ ಧರ್ಮೇಶ್ ಮಾರ್ವಾ (ರಾಜ್ ಬಬ್ಬರ್) ನಡುವಿನ ಸಮರದಂತೆ ಚಿತ್ರಿಸಲ್ಪಟ್ಟ ‘ಕಾರ್ಪೊರೇಟ್’ ಅವರ ಜೊತೆ ಕೆಲಸ ಮಾಡುವ ಹಲವರನ್ನು ಒಳಗೊಂಡು ಸಾಗುತ್ತದೆ. ಅವರೊಳಗಿನ ಸ್ಪರ್ಧೆ, ಪರಿಧಿಯನ್ನು ದಾಟಿ ಬೆಳೆಯುವ ವ್ಯವಹಾರಕ್ಕೆ ತಕ್ಕಂತೆ ನಿರೂಪಿಸುತ್ತಾ ನಿರ್ದೇಶಕ ಸೇರಿಸಿದ ಮತ್ತೊಂದು ಪಾತ್ರ ‘ನಿಶಿ ಗಂಧಾ’.

ಬಿಪಾಶಾ ಬಸು ನಿರ್ವಸಿದ್ದು. (ಆಕೆಯ ಪಾತ್ರವನ್ನು ನೋಡಬೇಕೆಂಬ ಹಂಬಲ ನನಗೂ ಇತ್ತು ಬಿಡಿ). ಆಕೆಯ ಮೊದಲಿನ ಗ್ಲಾಮರಸ್ ರೋಲ್ ನೋಡಿದವರಿಗೆ ಇದು ವಿಭಿನ್ನ ಪಾತ್ರ. ಅಭಿನಯ ಕೂಡಾ ಚೆನ್ನಾಗಿದೆ/ಚೆನ್ನಾಗಿ ತೆಗೆದಿದ್ದಾರೆ.  ಪಾತ್ರಕ್ಕೆ ತಕ್ಕಂತೆ ಆಕೆ ಸಿನಿಮಾ ಕಟ್ಟಿಕೊಡುತ್ತಾಳೆ. ಮೊದಲರ್ಧದಲ್ಲಿ ಸ್ಪರ್ಧಾತ್ಮಕವೆನ್ನಿಸುವ ಅಭಿನಯ ನೀಡುವ ಆಕೆ, ನಂತರದಲ್ಲಿ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾಳೆ. ‘She is a Watchable Executive’.

ರಜತ್ ಕಪೂರ್ ತನ್ನ ಬುದ್ಧಿವಂತ ಇಂಡಸ್ಟ್ರಿಯಲಿಸ್ಟ್ ಪಾತ್ರಕ್ಕೆ ನ್ಯಾಯ ಒದಗಿಸಿದರೆ, ರಾಜ್ ಬಬ್ಬರ್ ತನ್ನ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ಸುಮ್ಮನಾಗಿದ್ದಾರೆ. ಲಂಚಕೋರ ಮಂತ್ರಿಯಾಗಿ ವಿನಯ್ ಆಪ್ಟೆ ಅಭಿನಯ ಸುಂದರ. ಸಂದೀಪ್ ಮೆಹ್ತಾ, ನೋಡಬೇಕಾದ ಪಾತ್ರ. ಸಿಕ್ಕ ಅವಕಾಶದಲ್ಲಿ ಸುಂದರ ಅಭಿನಯ. ಸಿ.ಇ.ಓ ರೂಪವನ್ನು ಸರಳವಾಗಿ ತೋರಿದ್ದಾನೆ. ಮೊದ ಮೊದಲು ಅಂತಹ ಛಾಪನ್ನೇನೂ ಮೂಡಿಸುವುದಿಲ್ಲ ಚಿತ್ರ.

ಅರ್ಧದಷ್ಟಾಗುವವರೆಗೆ ವಿಶೇಷವನ್ನೇನೂ ನೀಡದ ಮಧುರ್, ದ್ವಿತೀಯಾರ್ಧದಲ್ಲಿ ತನ್ನೆಲ್ಲಾ ಪರಿಶ್ರಮದೊಂದಿಗೆ ಕಥೆಯನ್ನು ತೆರೆದಿಡುತ್ತಾರೆ. ಆಗಲೇ ಚಿತ್ರ ಸಾಮಾನ್ಯರಿಗೆ ತೆರೆದುಕೊಳ್ಳುತ್ತಾ, ಸರಳವಾಗುತ್ತಾ ಸಾಗುವುದು. ಅಂತ್ಯದ ಕೆಲ ಬದಲಾವಣೆ, ಬ್ಯುಸಿನೆಸ್ ಟ್ರಿಕ್ಕುಗಳು ಬೆನ್ನು ಹುರಿಯಲ್ಲಿ ಛಳುಕು ಹುಟ್ಟಿಸುತ್ತವೆ. ಅನಿರೀಕ್ಷಿತ ಬದಲಾವಣೆಗಳು, ಸಿನಿಮಾದ ಅಂತ್ಯದವರೆಗೂ, ಯೋಚನೆಗೀಡುಮಾಡುತ್ತವೆ. ಒಂದು ಬದಿಯ ಕಾರ್ಪೊರೇಟ್ ಜಗತ್ತನ್ನು ಬೆತ್ತಲಾಗಿಸುತ್ತಾ ಹೋಗುತ್ತಾರೆ ಮಧುರ್.

ನಡುವೆ ಸಂಗೀತವಿದೆ. ಸಂಗೀತವಷ್ಟೆ ಇಲ್ಲ. ಹಾಡಿಗೂ ಕುಣಿತಕ್ಕೂ ತಕ್ಕುದಾದಲ್ಲದ ಈ ಸಿನಿಮಾಕ್ಕೆ ತಕ್ಕ ಸಂಗೀತ.  ಒಂದೆರಡು ಹಾಡುಗಳು ಸುಂದರವಾಗಿವೆ. ‘ಲಮ್ಹಾ ಲಮ್ಹಾ ಜಿಂದಗಿ ಹೈ’ ನೆನಪಿನಲ್ಲಿ ಉಳಿಯುವಂಥದ್ದು. ಸಂದರ್ಭೋಚಿತ ಹಾಡೂ ಸಹ. ಚಿತ್ರವನ್ನು ಮುಂದುವರಿಸುವ ಹಾಡೂ ಹೌದು. ಮನೋಜ್ ಮತ್ತು ಅಜಯ್ ಸಂಭಾಷಣೆ ಚೆಂದ. ‘They are Sharp’.

ಇಷ್ಟರ ಮಧ್ಯೆ ಸಮೀರ್ ದತ್ತಾನಿ, ಮಿನಿಶಾ ಲಂಬಾ, ಸುಮ್ಮನೆ ಬೊಂಬೆಗಳಂತೆ ಬಂದು ಹೋಗುತ್ತಾರೆ. ಅವರದ್ದು ಸುಮ್ಮನೆ ತೂರಿಸಿದ ಪಾತ್ರ ಅಂತ ಅನ್ನಿಸಿದರೂ ಆಶ್ಚರ್ಯವಿಲ್ಲ. ಪಾಯಲ್ ರಸ್ತೋಗಿ ಕಾಣಿಸಿಕೊಂಡು ಓಕೆ ಅನ್ನಿಸುತ್ತಾಳೆ. ಕೆಲವೊಮ್ಮೆ ಅನವಶ್ಯಕವಾದ ವಿಚಾರಗಳೂ ತೂರಿಕೊಂಡಿವೆ ಅನ್ನಿಸುತ್ತದೆ, ಕೆಲ ಪಾತ್ರಗಳಂತೆ. (ದ್ವಿತೀಯಾರ್ಧದ ಕೆಲ ಅನವಶ್ಯಕವೆನ್ನಿಸುವ ದೃಶ್ಯಗಳು).

 ‘Honesty & Sinciarity’ಯಿಂದಾಗಿ ನೀವು ಏನೂ ಮಾಡಲಾಗದು ಅನ್ನುವ ಭಾವನೆಯನ್ನು ಬಿಟ್ಟು ಚಿತ್ರ ಮುಗಿಯುತ್ತದಾ ಅನ್ನುವ ಅನುಮಾನ ಸಹಜ. ಆದರೆ, ಇದು ಕಾರ್ಪೊರೇಟ್ ಜಗತ್ತಿನ ಕೇವಲ ಒಂದು ಮಗ್ಗುಲನ್ನು ಮಾತ್ರ ಹೇಳಿದೆ ಅನ್ನುವುದು ಅಂತ್ಯವನ್ನು ಅಷ್ಟೇನೂ ಋಣಾತ್ಮಕವಾಗಿ ಅರಿಯಬೇಕಿಲ್ಲ ಅನ್ನುವ ಸಮಾಧಾನವನ್ನು ಹೇಳುತ್ತದೆ. ಒಬ್ಬ ಬರಹಗಾರನಾಗಿ, ನಿರ್ದೇಶಕನಾಗಿ ಮಧುರ್ ಮತ್ತೊಂದು ಹೊಸ ದಾರಿ ಕಂಡುಕೊಂಡ ಚಿತ್ರ ಇದು.

ಕಾರ್ಪೊರೇಟ್ ಜಗತ್ತಿನ ಒಳ ಹೊರಗನ್ನು ತೋರಿಸುವುದರ ಜೊತೆಗೆ, ಭಾವನಾತ್ಮಕ ಎಳೆಯನ್ನೂ ಸುಂದರವಾಗಿ ನೀಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಮಧುರ್ ಇಷ್ಟವಾಗುವುದು ಅವರ ಹೊಸ ಧಾಟಿಯಿಂದಾಗಿ. ಒಂದೆರಡು ಋಣಾತ್ಮಕ ಅಂಶಗಳು ಹಾಗೆಯೆ ನಿರ್ಲಕ್ಷ್ಯಿಸಬಹುದಾದ್ದು.

ನೋಡಿದವರು ಮತ್ತೊಮ್ಮೆ ನೋಡಬಹುದಾದ ಚಿತ್ರ ಹಾಗಾಗಿಯೇ ಸಿಗುತ್ತೆ ಅಲ್ವಾ? ಮಧುರ್ ಗೆದ್ದದ್ದು ಖಂಡಿತ. ಒಬ್ಳು ಅಂದಿದ್ಲು, ಮೆನನ್ ಅದ್ಭುತ ನಟ, ನನಗೆ ಆತನ ಮೇಲೆ ಮನಸಾಗಿದೆ ಅಂತ. ನಕ್ಕು ಸುಮ್ಮನಾಗಿದ್ದೆ. ಆತ ಅದ್ಭುತವಾಗಿ ನಟಿಸಿದ್ದಾನೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆತನಿಗಾಗೇ ಸಿನಿಮಾ ನೋಡಬೇಕು.

Advertisements