ಟೀನಾ ಶಶಿಕಾಂತ್ ಅವರು ಭಂಡಾರ್ಕರ್  ಅವರ “ಸತ್ತಾ” ಸಿನೆಮಾ ಕುರಿತು ವಿಮರ್ಶೆ ಬರೆದಿದ್ದಾರೆ. “ಸತ್ತಾ” ಮಧುರ್ ರೂಪಿಸಿದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು. ಮಹಿಳೆಯನ್ನೇ ಕೇಂದ್ರೀಕರಿಸಿದ ಈ ಚಿತ್ರದಲ್ಲಿ ನಟಿ ರವೀನಾ ಟಂಡನ್ ಹಾಗೂ ಅತುಲ್ ಕುಲಕರ್ಣಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಚಿತ್ರ ಬಿಡುಗಡೆಯಾದ ವರ್ಷ 2003.

*

‘ಸತ್ತಾ’ ಎಂದರೆ ಅಧಿಕಾರ.

ತನ್ನ ಮೊದಲ ಸಿನೆಮಾ ‘ಚಾಂದನೀ ಬಾರ್ ‘ ನಿಂದ ಎಲ್ಲರ ಗಮನ ಸೆಳೆದ ನಿರ್ದೇಶಕ ಮಧುರ್ ಭಂಡಾರ್ಕರ್ ತನ್ನ ಎರಡನೇ ಚಲನಚಿತ್ರಕ್ಕೆ ರಾಜಕೀಯವನ್ನು ವಸ್ತುವಾಗಿಸಿಕೊಂಡಿದ್ದು ಅದರಲ್ಲೂ ಮಹಿಳಾ ಕೇಂದ್ರೀಕೃತ ಕಥೆಯೊಂದನ್ನು ಆಯ್ದುಕೊಂಡಿದ್ದು ಎಲ್ಲರ ಹುಬ್ಬೇರಿಸಿತು. ಕಾರಣ ರಾಜಕೀಯವನ್ನು ವಸ್ತುವಾಗಿಸಿಕೊಂಡ ಹಲವಾರು ಸಿನೆಮಾಗಳು ಹಿಂದಿಯಲ್ಲಿ ನೂರಾರು ತಯಾರಾಗಿವೆ. ಮಹಿಳೆಯನ್ನು ಪ್ರಮುಖ ವಸ್ತುವಾಗಿಟ್ಟುಕೊಂಡು ಮಾಡಿದ ಸಿನೆಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುವುದಿಲ್ಲ ಅನ್ನುವದು ಸಿನಿಮಾ ರಂಗದಲ್ಲಿ ಪ್ರಚಲಿತ ವಿಷಯ. ಈ ಅಪವಾದವನ್ನು ಸುಳ್ಳು ಮಾಡದಲೆ ಈ ಚಲನಚಿತ್ರ ಸೋತೂ ಹೋಯಿತು. ಆದರೆ ಅನೇಕ ಸಿನಿಮಾಪ್ರಿಯರು ಇದನ್ನು ‘ಒಳ್ಳೆಯ’ ಸಿನೆಮಾಗಳ ಕ್ಯಾಟಗರಿಗೆ ಸೇರಿಸಿದರು.

satta6

 ಮಧುರ್ ಭಂಡಾರ್ಕರ್ ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳಲಿ, ಅದರ ಬಗ್ಗೆ ಆಸ್ಥೆಯಿಂದ ಸಂಶೋಧನೆ ಮಾಡಿ, ನೈಜತೆಯೊಡನೆ ಸಿನೆಮಾ ತಯಾರಿಸುತ್ತಾರೆ ಅನ್ನುವುದು ನಮಗೆ ಈಗಾಗಲೆ ತಿಳಿದಿರುವ ಮಾತು. ‘ಸತ್ತಾ’ ಬಗೆಗೂ ನಾವು ಇದೇ ಮಾತನ್ನು ಹೇಳಬಹುದು. ಭಾರತೀಯ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳ ಗುದ್ದಾಟ, ಹಿಪಾಕ್ರಸಿ, ಅಧಿಕಾರ ಲಾಲಸೆ ಮೊದಲಾದವುಗಳ ಬಗ್ಗೆ ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಚಿತ್ರ ಒಂದು ಕಮೆಂಟರಿ ಇದ್ದಹಾಗಿದೆ. ರಾಜಕೀಯದ ಬಗ್ಗೆ ದೂರ ನಿಂತು ಲೇವಡಿಮಾಡುವ ನಮ್ಮಂತಹ ಯುವಜನರಲ್ಲೊಬ್ಬಾಕೆ ಸ್ವತಹ ರಾಜಕೀಯಕ್ಕೆ ಕಾಲಿಟ್ಟಾಗ ಏನೇನು ಕಾಣಬರುತ್ತದೆ ಎನ್ನುವುದನ್ನು ನಿರ್ದೇಶಕ ಪರಿಣಾಮಕಾರಿಯಾಗಿ ತೋರಿಸಿಕೊಡುತ್ತಾರೆ. 

ನಾಯಕಿ ಅನುರಾಧಾ ಸೆಹಗಲ್ ಮಹತ್ವಾಕಾಂಕ್ಷೆಯ ಹೆಣ್ಣು. ಮಧ್ಯಮವರ್ಗದ ಪರಿವಾರಕ್ಕೆ ಸೇರಿದ ಅನುರಾಧಾಳಿಗೆ ರಾಜಕಾರಣಿಗಳನ್ನು ಕಂಡರಾಗದು. ತನ್ನ ಕೆಲಸದಲ್ಲಿ ಉನ್ನತ ಹುದ್ದೆ ಪಡೆದುಕೊಂಡು ಯಾರಾದರು ಸಿರಿವಂತ ಹುಡುಗನನ್ನು ಮದುವೆಯಾಗುವ ಕನಸು ಅನುರಾಧಾಳದು. ಅದಕ್ಕೆ ತಕ್ಕ್ಕ ಹಾಗೆ ರಾಜಕಾರಣಿ ಮಹೇಂದ್ರ ಚೌಹಾನನ ಮಗ ವಿವೇಕ್ ಚೌಹಾನ್ ಆಕೆಯಲ್ಲಿ ಅನುರಕ್ತನಾಗುತ್ತಾನೆ. ತನ್ನ ಬಯಕೆಗೆ ತಕ್ಕ ಜೋಡಿ ದೊರಕಿತೆನ್ನುವ ಸಂತಸದಲ್ಲಿ ಅನುರಾಧಾ ವಿವೇಕನನ್ನು ವರಿಸುತ್ತಾಳೆ. ಮದುವೆಯ ಮಾತುಕತೆಯ ಸಮಯದಲ್ಲಿಯೆ ಆಕೆಯ ತಾಯಿಯ ‘ಸಿಂಗಲ್ ಪೇರೆಂಟ್ ‘ ಸ್ಟೇಟಸ್ಸಿನ ಬಗ್ಗೆ ವಿವೇಕನ ಪರಿವಾರದಿಂದ ಪ್ರಶ್ನೆಗಳೇಳುತ್ತವೆ. ಮಣಿಯದ ಅನುರಾಧಾ ತನ್ನನ್ನು ತಂದೆಯ ಸಹಾಯವಿಲ್ಲದೆಯೆ ಬೆಳೆಸಿದ ತಾಯಿಯಿಂದಲೆ ಕನ್ಯಾದಾನ ಮಾಡಿಸಿಕೊಳ್ಳುತ್ತಾಳೆ.

 ಮದುವೆಯ ನಂತರ ಅನುರಾಧಾಳ ಕನಸುಗಳು ಒಂದೊಂದಾಗಿ ಕರಗತೊಡಗುತ್ತವೆ. ಪರಿವಾರಕ್ಕಾಗಿ ಆಕೆ ತನ್ನ ಕೆಲಸವನ್ನು ಬಿಡಬೇಕಾಗುತ್ತದೆ. ಆಕೆಯನ್ನು ಮನೆಯ ಅಲಂಕಾರಕ್ಕೆ ಹಾಗೂ ಹಾಸಿಗೆಗೆ ಸೀಮಿತವೆಂಬಂತೆ ಕಾಣುವ ವಿವೇಕನ ಇನ್ನೊಂದು ಮುಖದ ಪರಿಚಯ ಆಕೆಗೆ ಆಗತೊಡಗುತ್ತದೆ. ಅನುರಾಧಾಳ ಸ್ವಾಭಿಮಾನ ಆಕೆಯನ್ನು ವಿವೇಕನೆದುರು ನಿಂತು ಆತನನ್ನು ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ಇದನ್ನು ಸಹಿಸದ ವಿವೇಕ ಆಕೆಯನ್ನು ನಿಂದಿಸಲು ಆರಂಭಿಸುತ್ತಾನೆ. ಹೀಗೇ ಒಂದು ದಿನ ಗಂಡಹೆಂಡಿರ ನಡುವೆ ಜಗಳವಾದಾಗ ವಿವೇಕ ಕೋಪದಲ್ಲಿ ಗೆಳೆಯನ ಜತೆ ಒಂದು ಪಬ್ಬಿಗೆ ನುಗ್ಗುತ್ತಾನೆ. ಅಲ್ಲಿ ಸಮಯ ಮೀರಿತೆಂದು ಮದ್ಯ ನೀಡಲು ಒಲ್ಲೆನೆನುವ ಬಾರ್ ಮೆಯಿಡ್ ಮೇಲೆ ಕೋಪಗೊಂಡು ಆಕೆಯ ಮೇಲೆ ಗುಂಡುಹಾರಿಸುತ್ತಾನೆ. ಈ ಘಟನೆ ಜೆಸ್ಸಿಕಾ ಲಾಲ್ ಪ್ರಕರಣವನ್ನು ನೆನಪಿಸುತ್ತದೆ. ಮಹೇಂದ್ರ ಚೌಹಾನನ ನಂತರ ಪಕ್ಷದ ಯುವನಾಯಕನಾಗಬೇಕಾಗಿದ್ದ ವಿವೇಕ ಜೈಲುಕಂಬಿ ಎಣಿಸುವಂತಾಗುತ್ತದೆ.

 ಈಗ ಎಲ್ಲರ ದೃಷ್ಟಿ ಅನುರಾಧಾಳೆಡೆಗೆ ತಿರುಗುತ್ತದೆ. ಅತ್ತೆ ಮಾವಂದಿರಿಗೆ ಇಷ್ಟವಿಲ್ಲದಿದ್ದರೂ ಎಲ್ಲರ ಒತ್ತಡಕ್ಕೆ ಮಣಿದು ಅನುರಾಧಾ ವಿವೇಕನ ಸ್ಥಾನದಲ್ಲಿ ನಿಂತು ಚುನಾವಣೆ ಗೆಲ್ಲುತ್ತಾಳೆ. ಮೆಲ್ಲಮೆಲ್ಲಗೆ ರಾಜಕೀಯದಲ್ಲಿ ಪಳಗಲು ಆರಂಭಿಸುತ್ತಾಳೆ. ಆಕೆಯನ್ನು ಆರಂಭದಲ್ಲಿ ಸುಮ್ಮನೆ ಗಮನಿಸುವ ಪಕ್ಷದ ಹಿರಿಯ ನಾಯಕ ಯಶವಂತ ಆಕೆಗೆ ಸಹಾಯ ಮಾಡುತ್ತಾನೆ, ರಾಜಕೀಯ ಗುರುವಾಗುತ್ತಾನೆ. ತನ್ನ ಯಶಸ್ಸು ಸಹಿಸದೆ ಅವಮಾನಿಸಲೆತ್ನಿಸುವ ಅತ್ತೆಮಾವಂದಿರನ್ನು ಅನುರಾಧಾ ಎದುರಿಸಿ ತೊರೆದುಬರುತ್ತಾಳೆ. ರಾಜಕೀಯ ಕೊಂಚಕೊಂಚವಾಗಿ ಹೆಬ್ಬಾವಿನಂತೆ ಅನುರಾಧಾಳನ್ನು ನುಂಗಲು ತೊಡಗುತ್ತದೆ. ಎಲ್ಲವನ್ನು ಅಚ್ಚರಿಯಿಂದ ಗಮನಿಸುತ್ತಲೇ ಕಲಿಯುವ ಅನುರಾಧಾಳಿಗೆ ಯಶವಂತನೇ ಊರುಗೋಲು. ಈ ನಡುವೆ ಆಕೆಗೆ ಎದುರುನಿಲ್ಲುವ ಎಲ್ಲರನ್ನೂ ಯಶವಂತ ಒಬ್ಬೊಬ್ಬರನ್ನಾಗಿ ನಿವಾರಿಸುತ್ತಾನೆ. ಅನುರಾಧಾ ಹಾಗೂ ಯಶವಂತರಲ್ಲಿ ಪ್ರೀತಿ ಮೊಳೆಯುತ್ತದೆ.  

ಚುನಾವಣೆಯ ಸಂದರ್ಭ ಒದಗಿಬಂದಾಗ ಅನುರಾಧಾಳಿಗೆ ತಾನು ಸಿಲುಕಿಕೊಂಡ ಜಾಲ ಎಂತಹದು ಎಂದು ಅರಿವಾಗತೊಡಗುತ್ತದೆ. ಮುಖ್ಯಮಂತ್ರಿಸ್ಥಾನ ಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳ ಯಶವಂತ ಅನುರಾಧಾಳನ್ನು ತನ್ನ ರಾಜಕೀಯ ಲಾಲಸೆಗಾಗಿ ಬಳಸಿಕೊಳ್ಳುತ್ತಿರುವುದು, ತನ್ನ ಗಂಡ ವಿವೇಕನೇ ಸೇರಿದಂತೆ ಹಲವಾರು ಜನರ ವಿರೋಧಿಗಳ ಹತ್ಯೆಗೆ ಕಾರಣನಾಗಿರುವದು ತಿಳಿದುಬಂದಾಗ ಅನುರಾಧಾ ಬದಲಾಗುತ್ತಾಳೆ. ರಾಜಕೀಯದಲ್ಲಿ ಯಾರನ್ನೂ ನಂಬಕೂಡದೆಂಬ ಪಾಠ ಕಲಿತುಕೊಳ್ಳುತ್ತಾಳೆ. ಒಬ್ಬ ಮಾಮೂಲಿ ಹೆಣ್ಣಿನಿಂದ ನುರಿತ ರಾಜಕಾರಣಿಯಾಗಿ ಬದಲಾಗುತ್ತಾಳೆ. ಯಶವಂತನ ವಿಧಾನವನ್ನು ಅವನ ವಿರುದ್ಧವೇ ಪ್ರಯೋಗಿಸುತ್ತಾಳೆ. ಲಿಯಾಕತ್ ಅಲಿ ಬೇಗನಂತಹ ಕುಟಿಲನನ್ನೂ ಚತುರತೆಯಿಂದ ಬಗ್ಗುಬಡಿಯುತ್ತಾಳೆ. ತನಗೇ ರಾಜಕೀಯ ಪೀಠ ದೊರೆಯುವಾಗ ಅದನ್ನು ನಿರಾಕರಿಸಿ ‘ಕಿಂಗ್ ಮೇಕರ್ ‘ ಆಗುವ ನಿರ್ಧಾರ ಮಾಡುತ್ತಾಳೆ.

 ಎಲ್ಲ ರಾಜಕೀಯ ಸಿನೆಮಾಗಳಂತೆ ಈ ಸಿನೆಮಾ ಕೂಡ ಹಲವಾರು ಕ್ಲೀಷೆಗಳನ್ನೊಳಗೊಂಡಿದೆ.  ಆದರು ಪರಿಣಾಮಕಾರಿ ನಿರ್ದೇಶನ, ರವೀನಾ ಹಾಗೂ ಅತುಲ್ ಕುಲಕರ್ಣಿಯವರ ನಟನೆ, ಪೋಷಕಪಾತ್ರಗಳ ಉತ್ತಮ ನಿರ್ವಹಣೆಯಿಂದಾಗಿ ಸಿನೆಮಾ ಉತ್ತಮಗೊಂಡಿದೆ. ಭಂಡಾರ್ಕರರ ಎಲ್ಲ ಸಿನೆಮಾಗಳಂತೆ ಇಲ್ಲಿಯೂ ಕೂಡ ಮಹಿಳಾ ಪಾತ್ರಕ್ಕೆ ಪ್ರಾಮುಖ್ಯ ದಕ್ಕಿದೆ. ನೈಜ ಶೈಲಿ ಒಮ್ಮೊಮ್ಮೆ ಹೆಚ್ಚಾಯಿತೆನಿಸಿ ರಾಮ್ ಗೋಪಾಲ್ ವರ್ಮಾನ ನೆನಪು ಬರಿಸಿದರು ಹಿಡಿತ ತಪ್ಪದೆ ಸಾಗುತ್ತದೆ. ಕೊನೆಯಲ್ಲಿ ತನ್ನ ಬಲಹೀನತೆಗಳನ್ನು ತನ್ನ ಶಕ್ತಿಯಾಗಿಸಿಕೊಳ್ಳುವ ನಾಯಕಿಯ ಪಾತ್ರ ಮನಸ್ಸಿನಲ್ಲಿ ನಿಲ್ಲುತ್ತದೆ.

Advertisements