ಅಂತರ್ಜಾಲದಲ್ಲಿ ಸಿಕ್ಕ ಮಧುರ್ ಭಂಡಾರ್ಕರ್ ಅವರ ಹಲವು ಸಂದರ್ಶನಗಳ ಕೆಲ ಭಾಗಗಳನ್ನು ಪೂರ್ವಿ ಸಾಂಗತ್ಯಕ್ಕೆ ಸಂಗ್ರಹಿಸಿ ಕಳುಹಿಸಿ ಕೊಟ್ಟಿದ್ದಾರೆ. ಇದು ಉತ್ಸವಕ್ಕೆ ಕಳೆಗಟ್ಟಲೆನ್ನುವ ಉದ್ದೇಶ ಹಾಗೂ ಅವರ ಚಿತ್ರಗಳ ಕುರಿತು ನಡೆಯುವ ಚರ್ಚೆಗೆ ವೇದಿಕೆಯಾಗಲೆಂದು ಇಲ್ಲಿ ಪ್ರಕಟಿಸಲಾಗಿದೆ.

*

“ನಾನು ವಾಣಿಜ್ಯ ದೃಷ್ಟಿಯಲ್ಲಿ ಚಿತ್ರಗಳನ್ನು ಮಾಡುವುದಿಲ್ಲ. ಮಾರುಕಟ್ಟೆಯ ಯಾವುದೇ ಸಿದ್ಧ ಸೂತ್ರಗಳನ್ನು ಆಧರಿಸಿ ಚಿತ್ರಗಳನ್ನು ಮಾಡದೇ, ಪ್ರಯೋಗಾತ್ಮಕವಾಗಿ ಚಿತ್ರ ನಿರ್ಮಿಸಿ ಲಾಭ ಮಾಡುವುದು ನನ್ನ ಪ್ರಯತ್ನ’ ಎನ್ನುತ್ತಾರೆ ಮಧುರ್ ಭಂಡಾರ್ಕರ್.

“ನನ್ನ ಚಿತ್ರಗಳನ್ನು ಜೀವನದ ವಾಸ್ತವ ಸನ್ನಿವೇಶಗಳ ಜತೆಗೆ ಅಷ್ಟೊಂದು ಸನಿಹವಿರಿಸಿ ಯಾಕೆ ವಿಮರ್ಶಿಸುತ್ತಾರೋ ನನಗೆ ತಿಳಿಯದು.    ಬಹುಶಃ ಅದೇ ನಾನು ಹೆಗ್ಗಳಿಕೆ ಪಡಬಹುದಾದ ಅಂಶವಿರಬಹುದು’.
ಕಾರ್ಪೋರೇಟ್ ಸಿನಿಮಾ ಕುರಿತು ಹೇಳುತ್ತಾ, “ನಾನು ವಾಣಿಜ್ಯ ಜಗತ್ತಿನ ಬಗ್ಗೆ ಚಿತ್ರ ಮಾಡಲು ನಿರ್ಧರಿಸಿದಾಗ ಅದರ ಬಗ್ಗೆ ಅಧಿಕೃತತೆ-ವಾಸ್ತವವನ್ನು ಕಟ್ಟಿಕೊಡಲು ಗಮನಹರಿಸಿದೆ. ನನ್ನ “ಸತ್ತಾ’, “ಪೇಜ್ 3’, ಚಾಂದಿನಿ ಬಾರ್‌ನಲ್ಲಿ ಆಯಾ ಲೋಕದ ವಾಸ್ತವತೆಯನ್ನು ಕಟ್ಟಿಕೊಟ್ಟಂತೆಯೇ. ಯಾಕೆಂದರೆ ಅವೆಲ್ಲವನ್ನೂ ನಕಲು ಮಾಡಲಾಗದು. ನನ್ನ ವಾಣಿಜ್ಯ ಜಗತ್ತು “ಫಿಲ್ಮಿ” ಯಾಗಿಯೇ ಕಾಣಬೇಕೆಂದು ಬಯಸಲಾರೆ’ ಎಂದಿದ್ದಾರೆ.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರಗಳನ್ನು ಮಾಡುವುದು ನನ್ನ ಸ್ವಭಾವ ಮತ್ತು ಹವ್ಯಾಸ. ಒಂದುವೇಳೆ ಚಲನಚಿತ್ರ ಜಗತ್ತಿನ ಬಗ್ಗೆ ಚಿತ್ರ ಮಾಡಲು ಹೊರಟರೆ, ಅದರದ್ದೇ ಆದ ಭಾಷಾಬನಿಯನ್ನು ಬಳಸಬೇಕು, ಇಲ್ಲವೇ ಚಿತ್ರ ಮಾಡಬಾರದು. ಇದು ನನ್ನ ಅಭಿಪ್ರಾಯ. ಹಾಗಾಗಿ ನನ್ನ ವೀಕ್ಷಕ ಸಮುದಾಯ ಎಂಥದ್ದು ಎಂಬುದು ಗೊತ್ತಿದೆ. ಅದರಂತೆಯೇ ಚಿತ್ರ ಮಾಡುತ್ತಿದ್ದೇನೆ ಎಂಬುದು ಅವರ ವಿಸ್ತರಿತ ಉತ್ತರ.

ಪ್ರಶಸ್ತಿ ಬಂದ ಸಂದರ್ಭದ ಪ್ರಶ್ನೆಗೆ, “ನಾನು ಇಂಥ ಘಳಿಗೆಯನ್ನೇ ನಿರೀಕ್ಷಿಸಿರಲಿಲ್ಲ. ಅತ್ಯುತ್ತಮವಾದುದನ್ನು ಮಾಡಬೇಕೆಂಬ ಹಂಬಲವಷ್ಟೇ ನನ್ನದಾಗಿತ್ತು. ಹಾಗಾಗಿ ಪ್ರತಿ ಪ್ರಯತ್ನಕ್ಕೂ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿದ್ದೆ. ನನ್ನ ಪ್ರಯತ್ನ ನನಗೆ ಮೊದಲು ಖುಷಿಕೊಡಬೇಕು. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ನಮ್ಮ ಪ್ರಜ್ಞೆಯ ಎದುರು ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಪ್ರಶಸ್ತಿ ಬಂದದ್ದೂ ಅಂಥ ನನ್ನ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿದೆ’.

ನಿಮ್ಮ ಸಿನಿಮಾಗಳಲ್ಲಿ ವಾಸ್ತವ ಜಗತ್ತಿನ ಸನ್ನಿವೇಶಗಳನ್ನೇ ಬಿಂಬಿಸುವುದರಿಂದ ಏನಾದರೂ ಬದಲಾವಣೆ ಸಾಧ್ಯವೆನಿಸುತ್ತದೆಯೇ ? ಎಂಬ ಪ್ರಶ್ನೆಗೆ ಅವರ ಉತ್ತರ-“ನಾನೊಬ್ಬ ಚಿತ್ರ ನಿರ್ದೇಶಕ. ನನಗನ್ನಿಸಿದ್ದನ್ನು ಚಿತ್ರದ ಮೂಲಕ ನೀಡುತ್ತೇನೆ. ನಾನೇನೂ ಸುಳ್ಳನ್ನು ಹೇಳುತ್ತಿಲ್ಲ ;ವಾಸ್ತವ ಜಗತ್ತನ್ನೇ ಎಲ್ಲರೆದುರು ತೆರೆದಿಡುತ್ತಿದ್ದೇನೆ. ಎಲ್ಲವನ್ನೂ ಸಿನಿಮಾ ಬದಲಿಸಬಹುದೆಂಬ ಭ್ರಮೆಯೂ ನನ್ನಲಿಲ್ಲ. ಆದರೆ ಕೆಲವರಿಗಾದರೂ ಪ್ರೇರಣೆಯಾಗಬಹುದು. ಬದುಕಿನ ಹಲವು ಸಂದರ್ಭಗಳಲ್ಲಿ ಪರಿಹಾರದ ಸಾಧ್ಯತೆಯನ್ನು ಅವು ಹೇಳಬಹುದಾದರೂ, ಬದಲಾವಣೆಯ ಹಿಂದಿನ ಪ್ರಬಲ ಶಕ್ತಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎಂದು ಹೇಳಲಾರೆ’.

Advertisements