“ನನ್ನ ಚಿತ್ರಗಳು ಕ್ರಾಂತಿ ಮಾಡುವಂಥದ್ದಲ್ಲ ; ಆದರೆ ಸಮಾಜದ ಕನ್ನಡಿ. ಹಾಗೆಯೇ ನನ್ನ ಚಿತ್ರಗಳು ತೀರ್ಪು ನೀಡುವುದಿಲ್ಲ ; ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸುತ್ತವೆ. ಕೆಲವೊಮ್ಮೆ ಪರಿಹಾರ ಇರಬಹುದು, ಇಲ್ಲದೆಯೂ ಇರಬಹುದು’- ಮಧುರ್ ಭಂಡಾರ್ಕರ್.
*

ನಮಸ್ಕಾರ.
“ಸಾಂಗತ್ಯ” ಹೊಸ ಸಂವಾದಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಉತ್ಸವ ಆರಂಭಿಸುತ್ತಿದೆ. ಈ ಉತ್ಸವದ ಉದ್ದೇಶ ಒಬ್ಬ ಸಿನಿ ನಿರ್ದೇಶಕನ ಚಿತ್ರಗಳು, ಅವನ ಗ್ರಹಿಕೆ, ಅವನ ಶ್ರೇಷ್ಠತೆ ಎಲ್ಲವನ್ನೂ ಚರ್ಚಿಸುತ್ತಲೇ ಒಂದು ಅನೂಹ್ಯ ಚಿತ್ರಜಗತ್ತಿನೊಳಗೆ ಹೊಕ್ಕು ಅವಲೋಕಿಸುವುದು. ಒಟ್ಟೂ ಸಮಗ್ರವಾಗಿ ನೋಡುವಾಗ ವಿಶಿಷ್ಟ ಎನಿಸುತ್ತದೆ. ಒಂದೇ ಚಿತ್ರದ ಭಿನ್ನ ಭಿನ್ನ ಬರಹಗಳು, ಅವರ ಬಗೆಗೆ ವಿವಿಧ ವ್ಯಾಖ್ಯಾನಗಳನ್ನೆಲ್ಲಾ ಕಟ್ಟಿಕೊಡುವುದು ಇದರ ಉದ್ದೇಶ.
ಹಾಗಾಗಿ “ಮಧುರ್ ಭಂಡಾರ್ಕರ್”ಉತ್ಸವ ಆರಂಭವಾಗುತ್ತಿದೆ. ಅದರಲ್ಲಿ ನೀವೆಲ್ಲರೂ ಪಾಲ್ಗೊಳ್ಳಬಹುದು. ಇದು ಸಾಂಗತ್ಯದ ಹೆಮ್ಮೆಯ ಉತ್ಸವ. ಎಲ್ಲರೂ ಚಿತ್ರಗಳ ವಿಮರ್ಶೆ, ಅವರ ಬಗೆಗಿನ ಕುತೂಹಲದ ಸಂಗತಿ, ನಿರ್ದೇಶನ ರೀತಿ, ದೃಷ್ಟಿಕೋನ-ಹೀಗೆ ನಾನಾ ನೆಲೆಯ ಬರಹಗಳನ್ನು saangatya@gmail.com ಗೆ ಕಳುಹಿಸಿ.
*

madhur-bhandarkar

ಮಧುರ್ ಭಂಡಾರ್ಕರ್ ಒಬ್ಬ ವಿಶಿಷ್ಟ ನೆಲೆಯ ನಿರ್ದೇಶಕ. ಆಧುನಿಕ ನೆಲೆಯನ್ನು ಅತ್ಯಂತ ಆಪ್ತವಾಗಿ ಚರ್ಚಿಸುತ್ತಲೇ ಹೊಸದೊಂದು ಚೌಕಟ್ಟು ಕೊಟ್ಟು ಕಲಾಕೃತಿಯನ್ನಾಗಿಸುವ ನೈಪುಣ್ಯತೆ ಅವರದ್ದು. ಜತೆಗೆ ಸ್ತ್ರೀ ಪಾತ್ರವನ್ನು ಅತ್ಯಂತ ಸಬಲಗೊಳಿಸುತ್ತಲೇ, ಅದನ್ನು ಔನ್ನತ್ಯದಲ್ಲಿರಿಸಿ ಅವಲೋಕಿಸುತ್ತಾರೆ.

ಭಂಡಾರ್ಕರ್ ಬಗ್ಗೆ ಹೇಳುವುದಾದರೆ, ಮಹಾರಾಷ್ಟ್ರದ ಖಾರ್ ಎಂಬಲ್ಲಿ ವೀಡಿಯೋ ಕ್ಯಾಸೆಟ್ ಅಂಗಡಿಯೊಂದನ್ನ್ನು ನಡೆಸುತ್ತಿದ್ದರು. ಹಾಗಾಗಿ ಹೆಚ್ಚು ಚಿತ್ರಗಳ ಸಂಗ್ರಹ ಹಾಗೂ ಅವುಗಳನ್ನು ನೋಡುವ ಮೂಲಕ ಅಧ್ಯಯನ ಸಾಧ್ಯವಾಯಿತು. ಹಾಗಾಗಿಯೇ ಸಿನಿಮಾದ ಬಗ್ಗೆ ಒಲವೂ ಬೆಳೆಯಿತು.

ಮೊದಲು ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್ ವರ್ಮರಿಗೆ ಸಹಾಯಕರಾಗಿ ದುಡಿದ ಭಂಡಾರ್ಕರ್, ರಂಗೀಲಾ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಅಭಿನಯಿಸಿದರು. ಆದರೆ ನಿರ್ದೇಶಕನಾಗಿ ಪರಿಚಯವಾಗಿದ್ದು “ತ್ರಿಶಕ್ತಿ (1999)”. ಅದು ಯಶಸ್ವಿಯಾಗಲಿಲ್ಲ. ಎರಡು ವರ್ಷಗಳ ನಂತರ “ಚಾಂದಿನಿಬಾರ್” (2001) ಚಿತ್ರವನ್ನು ನಿರ್ದೇಶಿಸಿದರು. ಟಬು ಮತ್ತು ಅತುಲ್ ಕುಲಕರ್ಣಿ ಪ್ರಧಾನ ಭೂಮಿಕೆಯಲ್ಲಿದ್ದರು. ಈ ಚಿತ್ರ ಹೆಸರನ್ನೂ ತಂದುಕೊಟ್ಟಿತಲ್ಲದೇ, ಇವರ ಬಗ್ಗೆ ಚಿತ್ರನಗರಿಯಲ್ಲಿ ಹೊಸ ವಿಶ್ವಾಸವನ್ನು ಬೆಳೆಸಿತು. ಇದೇ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಭಂಡಾರ್ಕರ್ ಅವರನ್ನು ಹಿಡಿಯುವವರೇ ಇರಲಿಲ್ಲ.

ಬಳಿಕ “ಸತ್ತಾ” (2003) ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೊಂಕಣಸೇನ್ ಅಭಿನಯದ “ಪೇಜ್ 3” (2005) ಭಂಡಾರ್ಕರ್ ರತ್ತ ದೃಷ್ಟಿಹರಿಸುವಂತೆ ಮಾಡಿದ ಚಿತ್ರ. ವಿಮರ್ಶಕಾರರ ಒಲವು ಗಳಿಸಿತಲ್ಲದೇ, ಬಾಕ್ಸ್ ಆಫೀಸ್ ನಲ್ಲೂ ಜಯಗಳಿಸಿತು. ಜತೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರನ್ನಾಗಿಸಿತು. ಮುಂದಿನ ಚಿತ್ರ “ಕಾರ್ಪೋರೇಟ್” (2007). ವಾಣಿಜ್ಯ ಜಗತ್ತಿನ ಕರಾಳ ಮುಖವನ್ನು ಪ್ರದರ್ಶಿಸಿದ್ದು ಈ ಚಿತ್ರದ ವಿಶೇಷ.

2007 ರಲ್ಲಿ ಬಿಡುಗಡೆಗೊಂಡಿದ್ದು ಟ್ರಾಫಿಕ್ ಸಿಗ್ನಲ್. ಈ ಚಿತ್ರ ಮತ್ತೆ ಗಳಿಸಿದ್ದು ರಾಷ್ಟೀಯ ಮನ್ನಣೆ. ಇತ್ತೀಚೆಗೆ ಜನಮನ್ನಣೆ ಗಳಿಸಿದ್ದೆಂದರೆ “ಫ್ಯಾಷನ್’. ಸಿದ್ಧಗೊಳ್ಳುತ್ತಿರುವ ಚಿತ್ರ (ಜೈಲ್).  ಇದು ಇವರ ಬಗೆಗಿನ ಒಂದಿಷ್ಟು ಮಾಹಿತಿ.

Advertisements