ಬೇಳೂರು ಸುದರ್ಶನ ಸಾಂಗತ್ಯಕ್ಕಾಗಿ ವಾರಕ್ಕೊಮ್ಮೆ ಬರೆಯಲಿದ್ದಾರೆ. ಹಾಲಿವುಡ್ ಚಿತ್ರಗಳೂ ಸೇರಿದಂತೆ ವಿಭಿನ್ನವಾದ ಚಲನಚಿತ್ರಗಳ ಕುರಿತು ಅವರ ನೋಟ ಹರಿಯಲಿದೆ. ಈ ಸರಣಿ ಶುರುವಾಗಿ ಎರಡು ವಾರ ಆಗಬೇಕಿತ್ತು. ಆದರೆ ಸ್ಲಂಡಾಗ್ ಮಿಲಿನಿಯೇರ್ ಬಗೆಗಿನ ಸಂವಾದ ಚಾಲ್ತಿಯಲ್ಲಿದ್ದರಿಂದ ಮುಂದೂಡಲಾಗಿತ್ತು. ಈಗ ಪ್ರಾರಂಭವಾಗುತ್ತಿದೆ. ಈ ಬಾರಿ “ವಾಲ್ಕನೋಸ್ ಆಫ್ ದಿ ಡೀಪ್ ಸೀ’ ಸಾಕ್ಷ್ಯಚಿತ್ರದ ಬಗ್ಗೆ ಬರೆದಿದ್ದಾರೆ.

*

2004 ರ ಫೆಬ್ರುವರಿ ತಿಂಗಳಿನ ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್‌ನ್ನು ಕೈಲಿ ಹಿಡಿದು ಮನಸ್ಸಿಗೆ ಬಂದ ಪುಟ ತಿರುಗಿಸಿದೆ.ಅಲ್ಲೊಂದು ಪುಟ್ಟ ಚಿತ್ರವಿತ್ತು. ಅರೆ, ಇದೇನು ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿವೆಯೆ? ಮನುಷ್ಯನ ವಾಸ್ತು ಸಾಮರ್ಥ್ಯವನ್ನು ಸದಾ ಅಣಕಿಸುವ ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿ ಬದುಕುತ್ತಿವೆಯೆ? – ಅಚ್ಚರಿಯಿಂದ ಛಾಯಾಚಿತ್ರದ ಅಡಿಟಿಪ್ಪಣಿಯನ್ನು ಗಮನಿಸಿದೆ. ಹಾಗೆ ಗಮನಿಸಿದ ಕ್ಷಣದಿಂದ ನಾನು ಈ ಪುಟ್ಟ ಲೇಖನವನ್ನು ಬರೆದು ನಿಮ್ಮೆದುರಿಗೆ ಇಡಲು ತವಕಿಸಿದ್ದೇನೆ. ಈ ವಿಶ್ವದಲ್ಲಿ ಇರುವ ಎಷ್ಟೋ ವಿಚಿತ್ರಗಳ ಬಗ್ಗೆ ನಾವು ಓದಿರುವ ಮಾಹಿತಿಗೆ ಇದೂ ಒಂದು ಸೇರಿಕೊಳ್ಳಲಿ, ಕನ್ನಡದ ಓದುಗರಿಗೆ ಈ ಚಿತ್ರದ ಹಿನ್ನೆಲೆ ಗೊತ್ತಾಗಲಿ ಎಂದು ಅಂತರಜಾಲಾಡಿ ಮಾಹಿತಿ ಕಲೆಹಾಕಿ ಬರೆಯುತ್ತಿರುವೆ.  

ಪೇಲಿಯೋಡಿಕ್ಟಿಯೋನ್ ನೋಡೋಸಮ್ ಎಂಬ ಹುಳಗಳು ೫೦ ಮಿಲಿಯ ವರ್ಷಗಳ ಹಿಂದೆಯೇ ಫಾಸಿಲ್‌ಗಳಾಗಿವೆ. ಈ ಹುಳಗಳೇ ಇಂಥ ಅಚ್ಚುಕಟ್ಟಾದ ಷಡ್ಭುಜಾಕೃತಿಗಳನ್ನು ಅಟ್ಲಾಂಟಿಕ್ ಸಮುದ್ರದ ತಳದ ಗುಡ್ಡಸಾಲಿನಲ್ಲಿ ಕೊರೆದಿದ್ದು ಎಂಬುದೀಗ ನಿರ್ಧಾರವಾಗಿದೆ. ಈ ಕರಾರುವಾಕ್ ಆಕಾರಗಳನ್ನು ರಚಿಸಿದ್ದು ಮಾತ್ರ ೫೦೦ ಮಿಲಿಯ ವರ್ಷಗಳ ಹಿಂದೆ (೫೦ ಕೋಟಿ ವರ್ಷಗಳು) ಎಂದೂ ಈಗ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.  

ಅಂದಮೇಲೆ ಈ ಹುಳಗಳು ಹೇಗೆ ಅಂಥ ವಿಪರೀತ ತಳದಲ್ಲಿ ಈಗಿನ ಮನುಕುಲದ ಜ್ಯಾಮಿತಿಯ ಲೆಕ್ಕಕ್ಕೇ ಪಂಥಾಹ್ವಾನ ನೀಡುವಂತೆ ಗೂಡು ಕಟ್ಟಿದವು., ಅಲ್ಲಿ ಬ್ಯಾಕ್ಟೀರಿಯಾಗಳ ಕೃಷಿ ಮಾಡಿದವು ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ವಿಜ್ಞಾನಿಗಳೇ ಈಗಲೂ ಈ ಪ್ರಶ್ನೆಗೆ ಉತ್ತರ ಸಿಗದೆ ತಡಕಾಡುತ್ತಿರಬೇಕಾದರೆ ನನ್ನ – ನಿಮ್ಮ ಪಾಡು ಕೇಳೋರಾರು ಬಿಡಿ…!  

ಹಾಗಂತ ಈ ಆಕಾರವು ಜೇನುಗೂಡಿನ ಥರ ಕಟ್ಟಿದ್ದೇನಲ್ಲ. ನೋಡೋಸಮ್ ಹುಳಗಳು ಷಡ್ಭುಜದ ಮೂಲೆಗಳಿರುವ ಸ್ಥಳದಲ್ಲಿ ರಂಧ್ರವನ್ನು ಕೊರೆದಿವೆ. ಈ ರಂಧ್ರಗಳನ್ನು ಒಟ್ಟು ಸೇರಿಸಿದರೆ ‘ಆರ್ಡರ್ಲಿ’ (ವ್ಯವಸ್ಥಿತ) ಹೆಕ್ಸಾಗನ್ ಆಕಾರ ಕಂಡುಬರುತ್ತದೆ ಎಂದು ಪೀಟರ್ ಎ. ರೋನಾ ಹೆಳುತ್ತಾರೆ.  

ಈ ಪೀಟರ್ ಭಾಗಿಯಾಗಿದ್ದ, ಸ್ಟೀಫನ್ ಲೋ ನಿರ್ದೇಶನದ ತಂಡವು ಐಮ್ಯಾಕ್ಸ್ ಸಂಸ್ಥೆಯ ‘ವಾಲ್ಕನೋಸ್ ಆಫ್ ದಿ ಡೀಪ್ ಸೀ’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಈ ಸಿನೆಮಾವನ್ನು ನೀವು ಆರಾಮಾಗಿ ಕೂತು ನೋಡಿದರೆ ನೋಡೋಸಮ್‌ನ ಅದ್ಭುತ ಷಡ್ಭುಜಾಕೃತಿಯ ಗೂಡಿನ ಕಥೆಯನ್ನು ಸವಿಯಬಹುದು. ಈ ಸಿನೆಮಾವನ್ನು ಡೌನ್‌ಲೋಡ್ ಮಾಡಿ  ನೋಡೋಸಮ್‌ನ ಗೂಡನ್ನು ಕತ್ತರಿಸಿದ ದೃಶ್ಯಗಳನ್ನು ನಿಮಗಾಗಿ ನೀಡುತ್ತಿದ್ದೇನೆ. 

ಹಾಗೆ ನೋಡಿದರೆ ಕಳೆದ ಮೂವತ್ತೈದು ವರ್ಷಗಳಿಂದ ಪೀಟರ್‌ಗೆ ಉತ್ತರವೇ ಸಿಕ್ಕಿಲ್ಲ. ಯಾಕೆಂದರೆ ನೋಡೋಸಮ್‌ನ ಗೂಡು ಸಿಕ್ಕಿದೆ. ಫಾಸಿಲ್ ಸಿಕ್ಕಿದೆ. ಆದರೆ ಹುಳ ಮಾತ್ರ ಸಿಕ್ಕಿಲ್ಲ; ಅದು ಈಗಲೂ ಜೀವಂತ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರಂತೆ.  

೧೯೭೬ರ ಒಂದು ದಿನ ಪೀಟರ್ ಇದ್ದ ನ್ಯಾಶನಲ್ ಓಸಿಯಾನಿಕ್ ಎಂಡ್ ಅಟ್ಮಾಸ್ಫಿಯರಿಕ್ ಅಡಿನಿಸ್ಟ್ರೇಶನ್‌ನ ಸಂಶೋಧನಾ ತಂಡಕ್ಕೆ ಅಟ್ಲಾಂಟಿಕ್ ಸಾಗರದಲ್ಲಿ ಈ ಷಡ್ಭುಜದ  ಚಿತ್ರಗಳು ಸಿಕ್ಕಿ ಎಲ್ಲರ ಕಣ್ಣುಗಳೂ ಅರಳಿದ್ದವು. ನೋಡನೋಡುತ್ತ ಇಂಥ ಸಾವಿರಾರು ರಚನೆಗಳನ್ನು ಪೀಟರ್ ಮತ್ತು ಅವರ ತಂಡ ಪತ್ತೆ ಹಚ್ಚಿ ಛಾಯಾಗ್ರಹಣ ಮಾಡಿತ್ತು. ಇದೇನಾದರೂ ಮೋಸವೆ? ಯಾರಾದರೂ ವಿಜ್ಞಾನಿಗಳನ್ನು ಹಾದಿ ತಪ್ಪಿಸಲು ಹೀಗೆ ಮಾಡಿದ್ದಾರೆಯೆ? ಅಥವಾ ಇದು ಬಾಹ್ಯಾಕಾಶ ಜೀವಿಗಳ ಸಂದೇಶವೆ? ಹೀಗೆಲ್ಲ ಪೀಟರ್ ಯೋಚಿಸಿದ್ದೂ ಇದೆ. 

ಈ ಬಗೆಯ ಗೂಡು ಸಿಕ್ಕಿದ್ದು ಮಧ್ಯ ಅಟ್ಲಾಂಟಿಕ್ ಗುಡ್ಡಸಾಲಿನಲ್ಲಿ. ಈ ಗುಡ್ಡಸಾಲು ಮುಂದೆ ಆರ್ಕಟಿಕ್, ಇಂಡಿಯನ್ ಮತ್ತು ಶಾಂತಿಸಾಗರದ ಗುಡ್ಡಸಾಲುಗಳಿಗೆ ಸೇರಿಕೊಳ್ಳುತ್ತದೆ. ಈ ಸ್ಥಳಗಳಲ್ಲಿ ನಿಜಕ್ಕೂ ಭಾರೀ ಪ್ರಮಾಣದ ಖಂಡಾಂತರ ನಡೆಯುತ್ತಿದೆ. ನಮ್ಮ ವಸುಂಧರೆಯ ಹೊರ ಕವಚವಾಗಿರುವ ಮಣ್ಣಿನ ಬೃಹತ್ ತಟ್ಟೆಗಳು ಬೇರ್ಪಡೆಯಾಗುತ್ತಲೇ ಇವೆ. ಇದರಿಂದಾಗಿ ನಡುವಣ ಜಾಗದಲ್ಲಿ ಭೂಮಿಯ ಹೊಟ್ಟೆಯೊಳಗಿರುವ ಬಿಸಿ ಲಾವಾರಸ ಹೊರಬರುತ್ತಿದೆ. ವಷ್ಕ್ಕೆ ಕೆಲವು ಅಂಗುಲಗಳಷ್ಟು ಈ ಹೊಸ ಕವಚವೂ ಬೆಳೆಯುತ್ತಿದೆ. ಇಲ್ಲೇ ಭೂಕಂಪಗಳು ಹುಟ್ಟುವುದು, ತ್ಸುನಾಮಿಗಳ ಹಣೆಬರಹ ನಿರ್ಧಾರವಾಗೋದು ಎಂಬುದನ್ನು ನಿಮಗೆ ಪ್ರತ್ಯೇಕ ಹೇಳಬೇಕಿಲ್ಲ.  

ಈ ರಚನೆಗಳು ಹವಳದ ಹುಳಗಳದ್ದಂತೂ ಅಲ್ಲ ಎಂದು ಪೀಟರ್‌ಗೆ ಹವಳತಜ್ಞ ಫ್ರೆಡೆರಿಕ್ ಎಂ. ಬೇಯರ್ ಹೇಳಿದರು. ಅಷ್ಟುಹೊತ್ತಿಗೆ ಅಡಾಲ್ಫ್ ಡಾಲ್ಫ್ ಸೀಲಾಚರ್ ಎಂಬುವರು ಜರ್ಮನಿಯ ಟ್ಯೂಬಿಂಜನ್ ವಿಶ್ವವಿದ್ಯಾಲಯದಲ್ಲಿ ಪೇಲಿಯಾಂಟಾಲಜಿಸ್ಟ್ ಆಗಿದ್ದರು. ಅವರು ಒಂದೇ ಮಾತು ಬರೆದಿದ್ದರು: ನಿಮ್ಮ ಚಿತ್ರಗಳು ನಿಜಕ್ಕೂ ರೋಚಕವಾಗಿವೆ. ಅಂದಹಾಗೆ ನಾನು ಕಳಿಸಿದ ಚಿತ್ರಗಳು ನಿಮಗೆ ತಲುಪಿದವೆ? ಅದು ಪೇಲಿಯೋಡಿಕ್ಟಿಯಾನ್ ನೋಡೋಸಮ್‌ನ ಪಳೆಯುಳಿಕೆಯ ಚಿತ್ರ. ನಿಮ್ಮ ಚಿತ್ರವು ಈ ಚಿತ್ರವನ್ನು ಕರಾರುವಾಕ್ಕಾಗಿ ಹೋಲುತ್ತದೆ ತಾನೆ?’ 

 ಅಲ್ಲಿಗೆ ನೋಡೋಸಮ್ ರಹಸ್ಯ ಬಯಲಾಗಿತ್ತು. 

ಆದರೆ ಸೂರ್ಯನ ಕಿರಣಗಳು ಮುಟ್ಟದ ಅಂಥ ಆಳದಲ್ಲಿ ಈ ಜೀವಿಗಳು ಇರೋದಾದ್ರೂ ಹೇಗೆ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡಿತ್ತು. ಅದಕ್ಕೊಂದು ಉತ್ತರಕೂಡಾ ಸಿಕ್ಕಿತು ಎನ್ನಿ: ಈ ಲಾವಾ ಕವಚದಲ್ಲಿ ಹುಟ್ಟಿದ ಜೀವಿಗಳು ತಮ್ಮ ಆಹಾರಕ್ಕಾಗಿ ಒಂದು ಬಗೆಯ ಕೀಮೋಸಿಂಥೆಸಿಸ್ ಮೂಲಕ ಬದುಕುತ್ತಿದ್ದ ಬ್ಯಾಕ್ಟೀರಿಯಾಗಳನ್ನು ತಿನ್ನುತ್ತಿದ್ದವಂತೆ. ಆದ್ದರಿಂದಲೇ ೪೦೦ ಡಿಗ್ರಿ ಫ್ಯಾರೆನ್‌ಹೀಟ್ ಬಿಸಿಯಲ್ಲೂ ಇಂಥ ಜೀವಿಗ ಳು ವಿಕಾಸಗೊಂಡಿದ್ದವು!  

ಈ ಕಥೆಯನ್ನು ನಾನು ಹೇಳಿದ್ದಕ್ಕಿಂತ ರೋಚಕವಾಗಿ ಪೀಟರ್ ಬರೆದಿದ್ದಾರೆ. ವಿಜ್ಞಾನ ಸಾಹಿತ್ಯಪ್ರೇಮಿಗಳಾದರೆ ಈ ಕೊಂಡಿಯನ್ನು ಓದಿ ಆನಂದಿಸಬಹುದು. 

ನಾನು ಇಲ್ಲಿ ಈ  ನೋಡೋಸಮ್ ಕಥೆಯನ್ನು ಬರೆದಿದ್ದಕ್ಕೆ ಒಂದೇ ಕಾರಣ: ಇಂಥ ಷಡ್ಭುಜಾಕೃತಿಯನ್ನು ರಚಿಸುವ ಬುದ್ಧಿಮತ್ತೆಯಾದರೂ ಈ ಹುಳಕ್ಕೆ ಹೇಗೆ ಬಂತು? ಹಾಗಾದರೆ ೫೦ ಕೋಟಿ ವರ್ಷಗಳ ಹಿಂದೆಯೇ ಈ ಹೆಕ್ಸಾಗನ್ ಇದೆ ಎಂದಾಯಿತು; ಈ ಜ್ಯಾಮಿತಿಯನ್ನು ಯಾರು ಕಲಿಸಿಕೊಟ್ಟರು?

ನೀವು ಕುಕ್ಕೆ ಸುಬ್ರಹ್ಮಣ್ಯದ ಬಳಿ ಇರುವ ಕುಮಾರಪರ್ವತದ ಬಗ್ಗೆ ಕೇಳಿರಬಹುದು: ಅಲ್ಲಿ ಷಡ್ಭುಜಾಕೃತಿಯ ಕಲ್ಲುಗಳು ಈಗಲೂ ಸಿಗುತ್ತವೆ. ಸುಬ್ರಹ್ಮಣ್ಯನ ಕ್ಷೇತ್ರದ ಮಹಿಮೆ ಎಂದೇ ಎಲ್ಲರೂ ಹೇಳುತ್ತಾರೆ. ಇನ್ನು ಜೇನುಹುಳದ ಷಡ್ಭುಜಾಕೃತಿಯ ಜೇನುಗೂಡುಗಳನ್ನಂತೂ ನೀವು ನೋಡಿರುತ್ತೀರಿ. 

ಅಟ್ಲಾಂಟಿಕ್ ತಳದಿಂದ ಹಿಡಿದು ಕುಮಾರಪರ್ವತದವರೆಗೆ ಹಬ್ಬಿರುವ ಈ ಷಣ್ಮುಖ ರಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟವೇ.