ವಿಕಾಸ್ ಹೆಗಡೆ ಅವರ ಅನಿಸಿಕೆ ಚಿತ್ರದ ಕುರಿತಲ್ಲ. ಆದರೆ ಚಿತ್ರದ ಕುರಿತು ನಡೆದಿರುವ ವಿಮರ್ಶೆ ಹಾಗೂ ಅದನ್ನು ಗ್ರಹಿಸುವ ವಿಭಿನ್ನ ನೆಲೆಗಳ ವ್ಯಾಖ್ಯಾನದ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಚರ್ಚೆಯ ಇನ್ನೊಂದು ಆಯಾಮವೆನ್ನುವ ಕಾರಣಕ್ಕೆ ಇಲ್ಲಿ ಕೊಡಲಾಗಿದೆ. ಇದು ವಿಕಾಸವಾದ.
*
ನಾವು ಭಾರತೀಯರೇ ಹೀಗೆ. ನಮ್ಮಲ್ಲಿರುವುದನ್ನು ಪಾಶ್ಚಾತ್ಯ ಜಗತ್ತು ಗುರುತಿಸಿದ ಮೇಲೆ ಅದರ ಬೆಲೆ ನಮಗೆ ತಿಳಿಯುವುದು. ಮತ್ತೊಂದೆಂದರೆ ಪಶ್ಚಿಮದಿಂದ ಗುರುತಿಸಲ್ಪಟ್ಟ ಪ್ರತಿಯೊಂದೂ ನಮಗೆ ಅದ್ಭುತವಾಗಿಬಿಡುವುದು. ಅದು ನಿಜವಾಗಿಯೂ ಯೋಗ್ಯವಾಗಿದೆಯಾ ಅಥವಾ ಪಶ್ಚಿಮವು ಅದನ್ನು ಗುರುತಿಸಲು ಬಳಸಿದ ಮಾನದಂಡವೇನು, ಅದೇ ಜಾಗತಿಕ ಮಟ್ಟದ ಮಾನದಂಡವಾದುದು, ಪರಮಶ್ರೇಷ್ಠವಾದುದಾದರೂ ಹೇಗೆ ಎಂದು ಕಿಂಚಿತ್ತೂ ಯೋಚಿಸದೇ ತಲೆ ಮೇಲೆ ಹೊತ್ತುಕೊಂಡು ಕುಣಿಯುವುದು ನಮ್ಮ ಜಾಯಮಾನ.
 
ಅದಕ್ಕೆ ಜೀವಂತ ಉದಾಹರಣೆ ಈಗಿನ ಸ್ಲಂಡಾಗ್ ಮಿಲೇನಿಯರ್ ಎಂಬ ಸಿನೆಮಾ. ಸ್ವಲ್ಪ ಸಮಯದ ಹಿಂದೆ ಚಾಲ್ತಿಗೆ ಬಂದ ಈ ಸಿನೆಮಾ ಈಗ ಸದ್ಯಕ್ಕೆ ಚರ್ಚೆಯ ವಿಷಯ. ಭಾರತದ ಬಡ ಹುಡುಗನೊಬ್ಬ ಟೀವಿ ಸ್ಪರ್ಧೆಯೊಂದರಲ್ಲಿ ಕೋಟಿ ಹಣ ಗೆಲ್ಲುವುದು ಇದರ ಕಥಾವಸ್ತುವಾದರೂ ಅದರಲ್ಲಿರುವ  ಭಾರತದ ನೆಗೆಟಿವ್ ಬದಿಯ ಅನಾವರಣವೇ ಮುಖ್ಯ ಅಂಶವಾಗುತ್ತದೆ.  ಅದೇ ಕೂಡ ಪರ ಹಾಗೂ ವಿರೋಧಗಳಿಗೆ ಕಾರಣವಾಗುತ್ತದೆ. ಮೊದಲಿಂದಲೂ ಕೂಡ  ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ.
 
ಇಲ್ಲಿ ಸ್ಲಂಡಾಗ್ ಮಿಲೇನಿಯರ್ ಎಂಬ ಚಿತ್ರದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಚರ್ಚೆಯಾಗಬೇಕಾಗಿರುವುದು ಭಾರತೀಯರ ಮನಃಸ್ಥಿತಿಯ ಬಗ್ಗೆ. ಈ ಸಿನೆಮಾವನ್ನು ಸುಮ್ಮನೇ ಸಿನೆಮಾದ ರೀತಿಯಲ್ಲಿ ನೋಡಿದರೆ ಚೆನ್ನಾಗಿಯೇ ಇದೆ ಎಂಬುದು ನಿಜ.  ಇವತ್ತು ಸುಮಾರು ಬ್ಲಾಗ್ ಗಳೂ, ಪತ್ರಿಕೆಗಳೂ ಇದರ ಬಗ್ಗೆ ಬರೆಯುತ್ತಿವೆ. ಆದರೆ ವಿಷಯ ಏನೆಂದರೆ ಆ ಪ್ರಶಸ್ತಿ ಬರದೆ ಹೋಗಿದ್ದರೆ ಇದರ ವಿಷಯ ಇಷ್ಟು ಚರ್ಚಿತವಾಗುತ್ತಿರಲಿಲ್ಲ. ಭಾರತವನ್ನು ಕೀಳಾಗಿ ತೋರಿಸಲಾಗಿದೆ ಎಂದು ಯಾರೂ ವಿರೋಧಿಸುತ್ತಲೂ ಇರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅಧ್ಬುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ.  ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ  ನಿರ್ದೇಶಕ ಕೂಡ ಆ ರೀತಿ ಅಂದುಕೊಂಡಿರುತ್ತಾನೋ ಗೊತ್ತಿಲ್ಲ.
 
ಪತ್ರಿಕೆಗಳು, ಮಾಧ್ಯಮಗಳೂ ಕೂಡ ಇದಕ್ಕೆ ಪ್ರಶಸ್ತಿ ಬಂದಿದೆ ಎಂದಾಕ್ಷಣದಿಂದ ಹೊಗಳಿ ಹೊಗಳಿ ಬರೆದು ಧನ್ಯರಾಗುತ್ತಿದ್ದಾರೆಯೇ ಹೊರತು ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಂಡಿಲ್ಲ. ಒಟ್ಟಿನಲ್ಲಿ ಎಲ್ಲರಿಗೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವಾಗಿಬಿಟ್ಟಿದೆ!
 
ಈ ಚಿತ್ರವನ್ನು ಭಾರತವನ್ನು ಪ್ರತಿನಿಧಿಸುವ ಚಿತ್ರ ಎಂದು ನೋಡಬೇಕಾದು ಹೇಗೆ ಅಗತ್ಯವಿಲ್ಲವೋ ಹಾಗೆಯೇ ಗೋಲ್ಡನ್ ಗ್ಲೋಬ್ ಬಂದ ಮಾತ್ರಕ್ಕೆ ಇದು ‘ಅದ್ಭುತ’ ಚಿತ್ರವೆನಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಈ ಪ್ರಶಸ್ತಿ, ಸನ್ಮಾನಗಳಲ್ಲೂ ಕೂಡ ಮಾರ್ಕೆಟಿಂಗ್ ತಂತ್ರಗಳ ಪಾಲಿದೆ ಎಂದು ತಿಳಿದುಕೊಂಡಾಗ ಮಾತ್ರ ಭಾರತದ ಪ್ರತಿಯೊಂದು ಸ್ಲಂಡಾಗೂ ಕೂಡ ಮಿಲೇನಿಯರ್ ಆದಂತೆ.