ನಮ್ಮ ಸಂವಾದವನ್ನು ಈಗ ಬೆಳೆಸಿರುವವರು ಟೀನಾ. ತಮ್ಮ ಕಣ್ಣಕೋಟೆಯ ಕಿಟಕಿಯಿಂದಲೇ ಸ್ಲಂಡಾಗ್ ಮಿಲಿನೇರ್ ಚಿತ್ರವನ್ನು ದೃಷ್ಟಿಸಿ, ಅದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಅವರ ನೋಟ ಈ ಬರಹ ರೂಪದಲ್ಲಿದೆ. ಚರ್ಚೆ ಮುಂದುವರಿಸುವವರು ತಮ್ಮ ಬರಹಗಳನ್ನು www.saangatya@gmail.com ಗೆ ಕಳಿಸಿ.

*

I Fly Like Paper Get High Like Planes

If You Catch Me At The Border I Got Visas In My Name

If You Come Around Here I Make ‘ Em All Day

I Get One Down In A Second If You Wait..

..”ಸ್ಲಮ್‌ಡಾಗ್ ಮಿಲಿಯನೇರ್ ” ನ ಹಾಡುಗಳಲ್ಲೊಂದಾದ ‘ಪೇಪರ್ ಪ್ಲೇನ್ಸ್’ ನ ಸಾಲುಗಳಿವು. ಪೂರ್ತಾ ಎಂಟು ಬಾರಿ (ಹಾ!! ನನ್ನ ಸಿನಿಪ್ರೇಮವೆ!!) ‘ಸ್ಲಮ್‌ಡಾಗ್ ಮಿಲಿಯನೇರ್ ‘ ಅನ್ನು ನೋಡಿದಾಗ ಪುನಾ ನನಗೆ ಎಲಿಯಟ್ ನ “ದ ವೇಸ್ಟ್‌ಲ್ಯಾಂಡ್” ಕವಿತೆಯ ಕೊನೆಯಲ್ಲಿ ಬರುವ ‘ದತ್ತ, ದಮ್ಯತ, ದಯಧ್ವಂ’ ಕಿವಿಯಲ್ಲಿ ರಿಂಗಣಿಸಿದ ಹಾಗನಿಸಿತು. ಹೈಸ್ಕೂಲಿನಲ್ಲಿ ಕದ್ದುನೋಡಿದ ಮೀರಾ ನಾಯರರ ‘ಸಲಾಮ್ ಬಾಂಬೆ’ ಮನಸ್ಸಿನಲ್ಲಿ ಸುಳಿದುಹೋಯಿತು. ನನಗೇನೆ ಗೊತ್ತಿಲ್ಲದಂತೆ ಕೈ ಯಾಂತ್ರಿಕವಾಗಿ ನೋಟ್ಸು ಮಾಡುತ್ತ ಹೋಗುತ್ತಿತ್ತು. ಹೇಗೆ ಇಷ್ಟೊಂದನ್ನ ಹಿಡಿದಿಡಲಿ ಪದಗಳಲ್ಲಿ ಅಂತ ಯೋಚಿಸುತ್ತ ಕೂತೆ. ಎಲ್ಲ ಬ್ಲಾಗೀ ಸ್ನೇಹಿತರು ಈ ಪಿಚ್ಚರಿನ ಬಗ್ಗೆ ತಮ್ಮದೆ ಆದ ರೀತಿಯಲ್ಲಿ ಅದ್ಭುತ ವಿಶ್ಲೇಷಣೆಗಳನ್ನ ಮಾಡಿದಾರೆ. ನಾನು ಕೂಡ ಎಲ್ಲಿಂದಲಾದರು ಶುರುಹಚ್ಚಲೆಬೇಕು. ಈ ಹಲ್ಲುನೋವು ಗವಾಕ್ಷಿಯಿಂದ ಮರಳಿದ ಪಿಶಾಚಿಯ ಥರ ಕಾಡುತ್ತಿದೆ.

ನಾನು ಇಡೀ ಪಿಚ್ಚರು ನೋಡಿದ್ದು ಅದರ ಸೆಂಟ್ರಲ್ ಥೀಮು ಎನಿಸುವ ‘ಆಯ್ಕೆ’ಯ ಮೂಲಕ. ಇಡೀ ಪಿಚ್ಚರಿನಲ್ಲಿ ಆಯ್ಕೆ ಬಹಳ ಮುಖ್ಯ ಪಾತ್ರವನ್ನ ವಹಿಸಿದೆ. ಪಿಚ್ಚರಿನುದ್ದಕ್ಕೂ ಜಮಾಲ್ ಭಾಗವಹಿಸುವ ಆಯ್ಕೆಗಳ ಆಟವಾದ ಗೇಮ್ ಶೋ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್ ‘ ರಾರಾಜಿಸುತ್ತದೆ. ಜಮಾಲ್ ಮಲಿಕನ ಆಯ್ಕೆಗಳು ಹಾಗೂ ಸಲೀಮನ ಆಯ್ಕೆಗಳು ಅವರನ್ನ ಬೇರೆಬೇರೆ ದಾರಿಗಳೆಡೆ ಕರೆದೊಯ್ಯುತ್ತವೆ. ಇಲ್ಲಿ ಅಣ್ಣತಮ್ಮಂದಿರು ತಮ್ಮ ಆಯ್ಕೆಗಳಿಂದಾಗಿ ತಮ್ಮ ವಿಧಿ ಕಂಡುಕೊಳ್ಳುವುದು ಹಿಂದೀ ಸಿನೆಮಾದ ಮಹಾ ‘ಕ್ಲೀಷೆ’ ಆದರು ನಮಗೆ ಹಾಗನ್ನಿಸದ ಹಾಗೆ ಕಥೆ ಸಾಗುತ್ತದೆ. ಎಲ್ಲ ಹಣೆಬರಹ, ವಿಧಿಲಿಖಿತ ಅನ್ನಿಸಿದರು ಗ್ರೀಕ್ ನಾಟಕಗಳಲ್ಲಿ ಬರುವ ಹಾಗೆ ಸಲೀಮ ಹಾಗೂ ಜಮಾಲರ ಆಯ್ಕೆಗಳು ಅವರ ಭವಿಷ್ಯ ನಿರ್ಧರಿಸುತ್ತವೆ. ಸಲೀಮ ಮಾಮನ್‌ನನ್ನು ಕೊಂದು ಲತಿಕಾಳನ್ನು ಪಾರುಮಾಡಿದ ರಾತ್ರಿಯೇ ಭೂಗತ ಪ್ರಪಂಚವನ್ನು ಆಯ್ದುಕೊಂಡರೆ, ಜಮಾಲ್ ಬಾಲ್ಯದಲ್ಲಿಯೆ ಲತಿಕಾಳನ್ನು ಆಯ್ಕೆಮಾಡಿಕೊಂಡು ಅದರ ಪರಿಣಾಮಗಳನ್ನು ಅನುಭೋಗಿಸುತ್ತಾನೆ. ಸಲೀಮನ ಅನುಭವಗಳು ಬದುಕಿನ ಮುಳ್ಳುಹಾದಿಯ ಮೇಲೆ ಹಾದುಬಂದವು, ಜಮಾಲನವು ಸಲೀಮನ ಮೂಲಕ ಹಾದುಬಂದು ಕಂಡುಕೊಂಡಂಥವು. ಜಮಾಲನ ಆಯ್ಕೆಯ ಹಿಂದೆ ಭೋಳೆತನ, ಭಯ, ಅಸಹಾಯಕತೆಗಳಿದ್ದರೆ ಸಲೀಮನ ಆಯ್ಕೆಗಳ ಹಿಂದೆ ಬದುಕುವ ಆಸೆ, ಕೋಪ, ಸುಪೀರಿಯಾರಿಟಿ ಕಾಂಪ್ಲೆಕ್ಸ್ ಅನ್ನುತ್ತೇವಲ್ಲ, ಅದು ಇದೆ. ಭಿಕ್ಷೆಬೇಡಲು ಲತಿಕಾಳ ಸುಪರ್ದಿಗೆ ಮಗುವೊಂದನ್ನು ಬಲವಂತವಾಗಿ ಒಪ್ಪಿಸುವ ಸಲೀಮ ಹೇಳುತ್ತಾನೆ “ರೋತೇ ಹುಯೆ ಬಚ್ಚೇ, ಟ್ರಿಪ್ಪಲ್ ದಾಮ್ !!”

ಜಮಾಲನ ಹಾದಿ ನೇರವಾದದ್ದು. ಆತನಿಗೆ ಕಾಣುವದು ಬರೆ ಸಲೀಮ ಇಲ್ಲವೇ ಲತಿಕಾ. ಆದರೆ ಸಲೀಮನ ಪ್ರಪಂಚ ಯಾರ ಸುತ್ತಲೂ ಸುತ್ತುವುದಿಲ್ಲ. “ಇಂಡಿಯಾ ಈಸ್ ಅಟ್ ದ ಸೆಂಟರ್ ಆಫ್ ದಿ ವರ್ಲ್ಡ್ ಅಂಡ್ ಐ ಆಂ ಅಟ್ ದಿ ಸೆಂಟರ್ ಆಫ್ ದಿಸ್ ಸೆಂಟರ್ “ಎನ್ನುವ ಆತನ ಹಸಿವು ಅಗಾಧವಾದದ್ದು. ಆತನಿಗೆ ‘ಪವರ್ ‘ ಬೇಕು. ಜಮಾಲನ ಮೇಲಿನ ಪ್ರೀತಿ, ದ್ವೇಷಗಳು ಕೂಡ ಆತನನ್ನು ನಮಗೆ ಇನ್ನಷ್ಟು ಹತ್ತಿರ ಅನ್ನಿಸುವ ಹಾಗೆ ಮಾಡುತ್ತವೆ. ಜಮಾಲನ ಅಮಿತಾಭ್ ಬಚ್ಚನನ ಪ್ರೇಮದ ಬಗ್ಗೆ ಗೊತ್ತಿರುವ ಸಲೀಮ ಅಮಿತಾಭನ ಹೆಲಿಕಾಪ್ಟರು ಬಂದಾಗ ಆತನನ್ನು ಟಾಯ್ಲೆಟ್ಟಿನಲ್ಲಿ ಕೂಡಿಹಾಕುತ್ತಾನೆ. ಜಮಾಲ್ ಕೊನೆಗೂ ಅಮಿತಾಭನ ಆಟೋಗ್ರಾಫು ಪಡೆದಾಗ ಅದನ್ನು ಮಾರಿಬಿಡುತ್ತಾನೆ. ಗಲಭೆಯಲ್ಲಿ ತಮ್ಮಂತೆಯ ನಿರ್ಗತಿಕಳಾದ ಲತಿಕಾಳನ್ನು ಜತೆಗಿರಿಸಿಕೊಳ್ಳಲು ಆತ ಒಪ್ಪುವದಿಲ್ಲ. ಕಣ್ಣುಕೀಳುವ ಮಾಮನ್‌ನ ಗ್ಯಾಂಗಿನಿಂದ ತಪ್ಪಿಸಿಕೊಳ್ಳುವಾಗ ತಮ್ಮೊಂದಿಗೆ ಟ್ರೈನು ಹತ್ತಲಿರುವ ಲತಿಕಾಳ ಕೈ ಬೇಕೆಂದೇ ಬಿಟ್ಟುಬಿಡುವ ಸಲೀಮ ಆಗ್ರಾದಲ್ಲಿ ಜಮಾಲ್ ಗೈಡ್ ಆಗಿರುವ ಅಮೆರಿಕನ್ ಟೂರಿಸ್ಟರ ಕಾರನ್ನು ಲೂಟಿಮಾಡಿ ಜಮಾಲ್ ಏಟು ತಿನ್ನುವಂತೆ ಮಾಡುತ್ತಾನೆ.
ವಾಪಾಸು ಮುಂಬಯಿಗೆ ಲತಿಕಾಳಿಗೋಸ್ಕರ ಜಮಾಲನೊಡನೆ ಬಂದರೂ ಪುನಹ ಲತಿಕಾಳನ್ನು ಜಮಾಲನಿಂದ ದೂರ ಮಾಡುತ್ತಾನೆ. ಜಮಾಲನನ್ನು ರೂಮಿನಿಂದ ಹೊರನೂಕಿ ಲತಿಕಾಳನ್ನು ಕೂಡುವ, ಆಕೆಯನ್ನು ಡಾನ್ ಜಾವೇದನಿಗೆ ಒಪ್ಪಿಸುವ ಜಮಾಲನ ವಿಕೃತಿ ಬೇಸರ ಹುಟ್ಟಿಸಿದರೆ, ಜಮಾಲನನ್ನು ಗಲಭೆಯ ವೇಳೆಯಲ್ಲಿ ಮತ್ತು ಕಣ್ಣುಕೀಳುವವರಿಂದ ಪಾರುಮಾಡುವ, ಲತಿಕಾಳನ್ನು ಕೊನೆಗೆ ಜಮಾಲನ ಬಳಿ ಕಳುಹಿಸುವ, ಕೊನೆಗೆ ಅವರಿಬ್ಬರಿಗಾಗಿ ತನ್ನ ಪ್ರಾಣವನ್ನೆ ಪಣಕ್ಕೊಡ್ಡುವ ಸಲೀಮನ ಆರ್ದ್ರತೆ ಆಶ್ಚರ್ಯ ಹುಟ್ಟಿಸುತ್ತದೆ. ಆತನ ‘survival instincts’ ಆತನ ಹಸಿವಿನಿಂದ ಹುಟ್ಟಿರುವಂಥದು. ಜಮಾಲ್ ಸಲೀಮನಿಲ್ಲದೆ ಪೂರ್ಣವಾಗಲಾರ. ಸಲೀಮನಿಗೆ ಜಮಾಲ್ ಬೇಕಿಲ್ಲ, ಆದರು ಆತ ಜಮಾಲನ ರಕ್ಷಣೆಯ ಪಣ ತೊಟ್ಟವನಂತೆ ಆಡುವ. ಜಮಾಲ್ ತನ್ನ ವಿಧಿಲಿಖಿತವೆಂಬಂತೆ ಮಿಲಿಯಾಧಿಪತಿಯಾದರೆ ಸಲೀಮ ಕೊನೆಯುಸಿರೆಳೆಯುವದೂ ನೋಟುಗಳ ನಡುವೆಯೆ. ನನಗೆ ಪಿಚ್ಚರಿನಲ್ಲಿ ಅತಿ ಪ್ರಿಯವಾದ ಪಾತ್ರ ಸಲೀಮನದು.

ಪಿಚ್ಚರಿನುದ್ದಕ್ಕೂ ಜಮಾಲನ ಉತ್ತರಗಳು ಹಾಗೂ ಆತನ ಅನುಭವಗಳಿಗೆ ಕಲ್ಪಿಸಿರುವ ಸಂಪರ್ಕಗಳು ಅದ್ಭುತವಾಗಿ ಕೆಲಸ ಮಾಡಿವೆ. ನೋಡುತ್ತ ನೋಡುತ್ತ ನನಗೆ ಅರವಿಂದ ಅಡಿಗರ ‘ದಿ ವ್ಹೈಟ್‌ಟೈಗರ್ ‘ ನ ಹರಿವಿಗೂ ‘ಸ್ಲಮ್‌ಡಾಗ್…’ ಚಿತ್ರಕಥೆಯ ಹರಿವಿಗೂ ಒಂದೇ ರೀತಿಯ ಕ್ವಾಲಿಟಿ ಇದೆ ಅನ್ನಿಸುತ್ತ ಹೋಯಿತು. ಎರಡು ಕಥೆಗಳಿಗೂ ಭಾರತದ ಕರಾಳ ಮುಖವನ್ನು ತೋರಿ ಪ್ರಶಸ್ತಿ ಗೆದ್ದುಕೊಂಡ ಆರೋಪ. ಎರಡರಲ್ಲೂ ನಾಯಕರು ಕತ್ತಲೆಯಲ್ಲಿ ಹುಟ್ಟಿದವರು. ಜಮಾಲ್ ತನ್ನ ಕಥೆಯನ್ನ ಪೊಲೀಸಿನವನಿಗೆ ಹೇಳಿದರೆ ಬಲ್ರಾಂ ಹಲ್ವಾಯಿ ತನ್ನ ಕಥೆಯನ್ನ ಚೀನಾದೇಶದ ಪ್ರಮುಖಪ್ರಜೆಗೆ ಹೇಳುವ. ಇಬ್ಬರೂ ತಮ್ಮದೇ ರೀತಿಯಲ್ಲಿ ವಿಜಯಿಗಳು. ಎರಡೂ ಕಥೆಗಳಲ್ಲಿ ಹೆಸರಿನ ಸುತ್ತ ವ್ಯಂಗ್ಯ ಕಾಣಬರುತ್ತದೆ. ‘ದಿ ವ್ಹೈಟ್‌ ಟೈಗರ್ ‘ನ ಬಲರಾಮ್ ತಾನು ಕೊಂದ ಯಜಮಾನ ಅಶೋಕನ ಹೆಸರನ್ನು ಇಟ್ಟುಕೊಂಡು ಹೊಸಹುಟ್ಟು ಪಡೆಯುತ್ತಾನೆ. ‘ಸ್ಲಂ ‌ಡಾಗ್..’ನಲ್ಲಿ ಅಂಧಕವಿ ಸೂರದಾಸನ ‘ದರ್ಶನ್ ದೋ ಘನಶ್ಯಾಮ್ ಆಜ್ ಮೆರಿ ಅಖಿಯಾಂ ಪ್ಯಾಸೀರೇ’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಹುಡುಗ ಅರವಿಂದನ (ಹೆಸರಿನ ಅರ್ಥ ಕಮಲ – ಕಣ್ಣನ್ನು ಬಣ್ಣಿಸಲು ಬಳಸುವ ಇಮೇಜು) ಕಣ್ಣನ್ನು ಆಸಿಡ್ ಹಾಕಿ ಸುಡಲಾಗುತ್ತದೆ. ಜಮಾಲನನ್ನು ಅಷ್ಟು ವರುಷಗಳ ಮೇಲೂ ಗುರುತು ಹಿಡಿವ ಅರವಿಂದ ಆತನಿಗೆ ಇನ್ನು ನಾನು ನಿನ್ನ ಹೆಣ ಹೋಗುವಾಗ್ಲೇ ಹಾಡೋದು!! ಅನ್ನುತ್ತಾನೆ.

ಇನ್ನು ನಾನು ಯಾವುದೇ ಪಿಚ್ಚರು ನೊಡಿದರೂ ಮೊದಲು ಗಮನಿಸುವ ವಿಷಯ ಅಂದರೆ ಬಣ್ಣಗಳ ಬಳಕೆ. ಇಡೀ ಪಿಚ್ಚರಿನಲ್ಲಿ ಹಳದಿ ಬಣ್ಣದ ಬಳಕೆ ಹೇರಳ. ತಮಾಷೆ ಅಂದರೆ ಹೆಚ್ಚೂ ಕಡಿಮೆ ಇದರ ಜತೆಗೇ ರಿಲೀಸ್ ಆದ ಇನ್ನೊಂದು ಪಿಚ್ಚರು ‘ರಬ್ ನೆ ಬನಾದೀ ಜೋಡಿ’ಯಲ್ಲೂ ಕೂಡ ಹಳದಿ ಬಣ್ಣದ ಬಳಕೆ ಆಗಿರುವುದು. ಅಲ್ಲಿ ಹಳದಿ ಬಣ್ಣವನ್ನು ಟ್ರಾಫಿಕ್ ಸಿಗ್ನಲಿನ ಹಳದಿ ಬಣ್ಣ ಸೂಚಿಸುವ ಕಾಯುವಿಕೆ ಮತ್ತು ತಾಳ್ಮೆಯನ್ನು ಬಿಂಬಿಸಲು ಬಳಸಲಾಗಿದೆ ಅನ್ನಿಸುತ್ತದೆ. ‘ರಬ್‌ನೆ ಬನಾದೀ ಜೋಡಿ’ಯ ಮೊದಲನೆ ದೃಶ್ಯದಲ್ಲೇ ನಾಯಕ ನಾಯಕಿ ರೈಲಿನಿಂದ ಇಳಿದಾಗ ನಾಯಕ ಹಳದಿ ಬಣ್ಣದ ಸೂಟ್‌ಕೇಸು ಹಿಡಿದಿರುತ್ತಾನೆ. ಅಲ್ಲಿಂದಾಚೆಗೆ ಆತನ ಊಟದ ಬಾಕ್ಸು, ಕಾರು, ಉಡುಗೆ ಎಲ್ಲದರಲ್ಲೂ ಹಳದಿಯನ್ನು ಜಾಣ್ಮೆಯಿಂದ ಬಳಸಲಾಗಿದೆ. ‘ಸ್ಲಮ್‌ಡಾಗ್..’ನಲ್ಲಿ ಹಳದಿಯಷ್ಟೇ ಅಲ್ಲ, ಅದರ ವಿವಿಧ ಶೇಡುಗಳನ್ನು ಕೂಡ ಸುಂದರವಾಗಿ ಬಳಸಲಾಗಿದೆ. ಇಡೀ ಪಿಚ್ಚರು ಹಳದಿಯಲ್ಲಿ ಸ್ನಾನ ಮಾಡಿ ಎದ್ದಿದೆಯೇನೊ ಎಂಬಂತೆ ಭಾಸವಾಗುತ್ತದೆ. ಸ್ಲಮ್ಮಿನ ರಾಚುವ ಹಳದಿ ಬಣ್ಣ, ಗಲಭೆಗಳ ಬೆಂಕಿಯ ಹಳದಿ ರಂಗು, ಮಕ್ಕಳನ್ನು ಪುಸಲಾಯಿಸಿ ಭಿಕ್ಷಾಟನೆಗೆ ಕರೆದೊಯ್ಯುವ ಮಾಮನನ ಹಳದಿ ವ್ಯಾನು, ಜಮಾಲ್ ಲತಿಕಾಳನ್ನು ಹರೆಯದಲ್ಲಿ ಕಂಡುಹಿಡಿವ ವೇಶ್ಯಾವಾಟಿಕೆಯ ಜಾಗ ಪೀಲಾ ಸ್ಟ್ರೀಟ್, ಜಮಾಲನನ್ನು ಕಾಣಲು ರೇಲ್ವೇಸ್ಟೇಶನ್ನಿಗೆ ಬರುವ ಲತಿಕಾ ತೊಟ್ಟಿರುವ ಹಳದಿ ಕಮೀಜು, ಕೊನೆಯ ಪ್ರಶ್ನೆ ಉತ್ತರಿಸುವ ಜಮಾಲನನ್ನು ಕಾಣಲು ಧಾವಿಸುವ ಲತಿಕಾಳ ಹಳದಿ ಶಾಲು, ಜೈಹೋ! ಹಾಡಿನಲ್ಲಿ ನರ್ತಿಸುವ ಲತಿಕಾಳ ಮಗುವಿನ ಪಾತ್ರಧಾರಿ ತೊಟ್ಟಿರುವ ಹಳದಿ ಅಂಗಿ.. ಇಲ್ಲಿ ಹಳದಿ ಬಣ್ಣ ಕಾಯುವಿಕೆಯ ಜತೆಗೇ ಭಾರತದ ಬಣ್ಣವಾಗಿಯೂ ಕೂಡ ಕೆಲಸಮಾಡುತ್ತದೆ.

ಕೊನೆಯದಾಗಿ ಪಿಚ್ಚರಿನ ಸುತ್ತಲ ಗಲಾಟೆ. ಅಮಿತಾಭ್ ಬಚ್ಚನರಿಗೆ ಪಿಚ್ಚರು ಹಿಡಿಸಿಲ್ಲ. ಬಿಡಿ, ಅವರಿಗೆ ಇಷ್ಟವಾಗಿದ್ದೇ ನಮಗೂ ಸಲ್ಲಬೇಕೂ ಅಂತಿಲ್ಲವಲ್ಲ!! ‘ಕೌನ್ ಬನೇಗಾ ಕರೋಡ್ಪತಿ’ ಯ ಅಮಿತಾಭ್ ಮ್ಯಾನರಿಸಮ್ಮನ್ನು ಅನಿಲ್ ಕಪೂರ್ ಸಖತ್ತಾಗಿ ಅನುಕರಿಸಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅಂತ ಕೇಳಿದೀರ? ರೆಹಮಾನರ ಸಂಗೀತ ಅಷ್ಟಕ್ಕಷ್ಟೆ ಅನ್ನಿಸೋ ಹಾಗಿದೆ ಅನ್ನೋದು ಎರಡನೇ ಅಪವಾದ. ಸಂಗೀತ ಇಲ್ಲಿ ಸ್ವರ್ಗಸದೃಶವಾಗಿರಬೇಕಾದ ಅವಶ್ಯವೇನೂ ಇರಲಿಲ್ಲ. ಇಲ್ಲಿ ರೆಹಮಾನ್ ಬಳಸಿರೋದು ಪಿಚ್ಚರಿನ ಜತೆಗೆ ಬ್ಲೆಂಡ್ ಆಗುವಂಥ ಪಾಪ್ಯುಲರ್ ಸಂಗೀತವನ್ನ. ಇಲ್ಲಿ ‘ರೋಜಾ’ಥರದ್ದೇನನ್ನೂ ನಾವು ಬಯಸಲಿಕ್ಕಾಗದು. ವೇಶ್ಯಾವಾಟಿಕೆಯ ಜಾಗದಲ್ಲಿ ‘ರಿಗರಿಗ ರಿಂಗಾ’ ಸರಿಯೆನ್ನಿಸಬಹುದು, ದಿಲ್ ಸೇ ರೇ.. ಅಲ್ಲ!! ಮೂರನೇದು ಭಾರತದ ‘ಕೆಟ್ಟ’ ಚಿತ್ರಣವನ್ನು ಅವಾರ್ಡಿಗಾಗಿ ಬಳಸಿಕೊಳ್ಳಲಾಗಿದೆ ಅಂತ. ಅದಕ್ಯಾಕೆ ಬೇಸ್ರ? ಮತ್ತೆ ನಮ್ಮ ಫೈಸ್ಟಾರ್ ಹೋಟ್ಲುಗಳು, ಮಾಲುಗಳು, ಮಲ್ಟಿಪ್ಲೆಕ್ಸು, ಸಾಫ್ಟ್ವೇರ್ ಪಾರ್ಕುಗಳು, ಕಾಫಿಡೇ ಔಟ್ಲೆಟ್ಟುಗಳನ್ನೆ ತೋರಿಸಿ ಒಂದು ಸೂಪರ್ ಪಿಚ್ಚರು ಮಾಡಪ್ಪಾ ಅಂತ ನಿರ್ದೇಶಕ ಡ್ಯಾನಿ ಬಾಯ್ಲ್‌ಗೆ ಅಪೀಲು ಮಾಡೋಣ. ‘ಒಳ್ಳೆ’ ಭಾರತವನ್ನೇ ತೋರಿಸಿ ಅವಾರ್ಡು ಗಿಟ್ಟಿಸೋಣ. ಸರಿಯೆ? ಸದ್ಯಕ್ಕೆ ಜಮಾಲ್, ಸಲೀಮರಂಥ ಸಾವಿರಾರು ಸ್ಲಂ-ಮಕ್ಕಳ ಅಳಿವು-ಉಳಿವುಗಳ ಎಡೆಬಿಡದ ಹೋರಾಟಕ್ಕೆ ತಲೆಬಾಗಿ ಬರೆದಂತಿರುವ ‘ಪೇಪರ್ ಪ್ಲೇನ್ಸ್ ‘ ನ ಮತ್ತೂ ಕೆಲವು ಸಾಲುಗಳು, ನಿಮಗಾಗಿ.

Sometimes I Think Sitting On Trains

Every Stop I Get To I’ m Clocking That Game

Everyone’ s A Winner Now We’ re Making That Fame..