ನಿಜಕ್ಕೂ ಖುಷಿಯಾಗುತ್ತಿದೆ. ಸಾಂಗತ್ಯ ಆರಂಭಿಸಿರುವ ಒಂದು ಚರ್ಚೆಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಹಲವರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.  ಒಂದು ಚಿತ್ರದ ಭಿನ್ನ ನೆಲೆಗಳನ್ನು ಹಿಡಿದು ಕೊಡುವುದೇ ನಮ್ಮ ಪ್ರಯತ್ನ. ವೈಶಾಲಿ ಅವರು ಚರ್ಚೆಯನ್ನು ಮುಂದುವರಿಸಿದ್ದಾರೆ ತಮ್ಮ ಬರಹವನ್ನು ನಮಗೆ ಕಳುಹಿಸುವ ಮೂಲಕ.

ಹಾಗೆಯೇ ನಮ್ಮ ಈ ಚರ್ಚೆಯ ಪ್ರಯತ್ನವನ್ನು ಚೇತನಾ ತೀರ್ಥಹಳ್ಳಿಯವರು ತಮ್ಮ ಬ್ಲಾಗ್ ನಲ್ಲಿ ಚಿಕ್ಕಟಿಪ್ಪಣಿ ಬರೆದ ಸಾಂಗತ್ಯದ ಚರ್ಚೆಗೆ ಸಂಪರ್ಕ ಕೊಟ್ಟಿದ್ದಾರೆ.   ಇಬ್ಬರಿಗೂ ಧನ್ಯವಾದ.

*

ನಾನು ಸ್ಲಮ್ ಡಾಗ್ ಮಿಲೆನಿಯರ್ ಎರಡನೇ ಬಾರಿಗೆ ನೋಡಿದೆ. ವಿಮರ್ಶಗಳನ್ನು ಓದಿದ ನಂತರ. 

ಯಾವುದೇ ಪ್ರಶಸ್ತಿ ಪುರಸ್ಕ್ರತ ಚಿತ್ರವಾಗಿ ಬೇಡ. ಒಮ್ಮೆ ಹಾಗೆ ಸುಮ್ಮನೆ ಕುಳಿತು ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರ ನೋಡಬೇಕು. ಚಿತ್ರದ ಆರಂಭವಾಗಿ ಸ್ವಲ್ಪ ಹೊತ್ತಿಗೆ ನಾಯಕ ಜಮಾಲ್ ಕೌನ್ ಬನೇಗ ಕರೋಡಪತಿ ಯಲ್ಲಿ ಭಾಗವಹಿಸುವ ದೃಶ್ಯ ಬರುತ್ತದೆ. ಆತ ತನ್ನನ್ನು ಚಹಾ ಮಾರುವ ಹುಡುಗ ಎಂದು ಪರಿಚಯಿಸಿಕೊಂಡಾಗ ಅಲ್ಲಿರುವ ವೀಕ್ಷಕರು ಅಪಹಾಸ್ಯದ ನಗು ನಗುತ್ತಾರೆ. ಕಾರ್ಯಕ್ರಮದ ನಿರೂಪಕ ಪ್ರೇಂ ಕುಮಾರ್( ಅನಿಲ್ ಕಪೂರ್) ಕೂಡ ಜಮಾಲ್ ನನ್ನು ಚಾಯ್ ವಾಲಾ ಚಾಯ್ ವಾಲಾ ಅನ್ನುವಾಗ ಅಚ್ಚರಿಗಿಂತ ಅಪಹಾಸ್ಯ, ಗೇಲಿಯ ದ್ವನಿಯೇ ಇರುತ್ತದೆ…. 

ಇನ್ನು ಬಾಲಕ ಜಮಾಲ್ ಅಮಿತಾಬ್ ನ ಹಸ್ತಾಕ್ಷರದ ಸಲುವಾಗಿ ಮಲದ ಗುಂಡಿಯಲ್ಲಿ ಬಿದ್ದೇಳುವ ಸೀನ್. ಅಬ್ಬಾ … ನಿಜಕ್ಕೂ ನನಗೆ ಆ ದೃಶ್ಯ ನೋಡಲಾಗಲಿಲ್ಲ. ಮಲ ಹೊರುವ ಪದ್ಧತಿ ಭಾರತದಲ್ಲಿ ಇನ್ನು ಒಂದೆಡೆ ಜೀವಂತವಾಗಿದೆ ಅನ್ನುವ ಬಗ್ಗೆ ಕೇಳಿದ್ದೇನೆ. ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಅದೂ ಕೂಡ ಒಂದು ಬಲವಂತದ ಕೆಲಸದಲ್ಲಿ ಸೇರುತ್ತದೆ. ತೀರ ಈ ಮಟ್ಟಕ್ಕೆ ಅದನ್ನು ತೋರಿಸಿ ವಾಸ್ತವದ ಚಿತ್ರಣ ಅಂತ ಖುಷಿಪಟ್ಟುಕೊಳ್ಳುವ ಕರ್ಮ ಯಾಕೆ ನಮಗೆ? ನನಗೆ ನೆನಪಿದ್ದಂತೆ ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆ ಯ ಉಳಿದಾವ ಚಿತ್ರಗಳಲ್ಲೂ ವಾಸ್ತವದ ಚಿತ್ರಣಗಳು ಈ ರೀತಿಯದ್ದಲ್ಲ. ( Trainspotting, The Beach, 28 Days Later, Millions…)

 ಕೌನ್ ಬನೇಗ ಕರೋಡಪತಿಯಂತಹ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಸಮಯೋಚಿತವಾಗಿ ಉತ್ತರಿಸಿ ಕೋಟಿ ಗೆದ್ದ ಹುಡುಗನೊಬ್ಬನನ್ನು ಆ ನಂತರದಲ್ಲಿ ನೀನು ಮೋಸ ಮಾಡಿ ಗೆದ್ದಿದ್ದೀಯ ಎಂದು ಪೋಲಿಸ್ ವಿಚಾರಣೆಗೊಳಪಡಿಸಿ ಹಿಂಸಿಸುವ ಕಾನ್ಸೆಪ್ಟೆ ನನಗೆ ವಿಚಿತ್ರ ಅನ್ನಿಸಿತು.  

ವಾಸ್ತವ ಎಂದರೆ ಟೀವಿ ಕಾರ್ಯಕ್ರಮಗಳನ್ನೂ ಸೇರಿಸಿ ಭಾರತದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜಮಾಲ್ ನಂತಹ ಪ್ರತಿಭಾವಂತ ವ್ಯಕ್ತಿತ್ವದ ಒಬ್ಬ ಹುಡುಗ ಸ್ಪರ್ದೆಗಿಳಿದರೆ ನಾವು ಅವನ ವೃತ್ತಿಯ ಕಾರಣದಿಂದಾಗಿ ಗೇಲಿ ಮಾಡುತ್ತೇವೆಯೇ ? ಮಾದ್ಯಮದ ಯಾವುದೇ ಒಂದು ಸಣ್ಣ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳೂ ಕೂಡ ಜನರ ದೃಷ್ಟಿಯಲ್ಲಿ ಹೀರೋ ಆಗುವ ಪರಿಸ್ಥಿತಿ ಇಂದು ಭಾರತದಲ್ಲಿದೆ. ಅಷ್ಟು ಸಹಕಾರ, ಪ್ರೋತ್ಸಾಹ ಬೇಡವೆಂದರೂ ಸಿಗುತ್ತದೆ. 

ಸ್ಲಮ್ ಗಳು ಭಾರತದ ವಾಸ್ತವ ಹೌದು. ಮುಂಬೈನ ಸ್ಲಮ್ ಗಳು ಏಷ್ಯಾದಲ್ಲೇ ಅತಿ ದೊಡ್ಡ ಕೊಳಚೆ ಪ್ರದೇಶಗಳು. ಅದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದರೆ ಅದೊಂದೇ ಭಾರತ ಅಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಳಚೆ ಪ್ರದೇಶಗಳ ಭಾರತದ ಚಿತ್ರಣ ಬದಲಾಗಿದೆ. ಸ್ವಲ್ಪ ಮಟ್ಟಿಗಾದರೂ ಗೌರವ ಹುಟ್ಟಿಕೊಂಡಿದೆ. ಬಡತನ, ದಾರಿದ್ರ್ಯದಷ್ಟೇ ವಾಸ್ತವ ಐಟಿ ಸಿಟಿಗಳು, ಕೈಗಾರಿಕೆಗಳು.. ಸಂಸ್ಕೃತಿ, ಪದ್ಧತಿಗಳು ಕೂಡ ಅಲ್ಲವೇ? ಇವೆಲ್ಲವನ್ನೂ ಹೊರತಾಗಿಸಿ ತಯಾರಾದ ‘ತಾರೆ ಜಮೀನ್ ಪರ್’ ಕೂಡ ಉತ್ತಮ ಚಿತ್ರ. ಆದರೆ ಅದು ಅಂತರರಾಷ್ಟ್ರೀಯ ಪ್ರಶಸ್ತಿಗೆ ಸ್ಪರ್ಧಿಸಿರುವ ಚಿತ್ರಗಳ ಪಟ್ಟಿಯಿಂದ ಹೊರಗೆ ಬಿತ್ತು. ಅದರ ಹಿಂದಿನ ‘ಲಗಾನ್’ ಕೂಡ. 

ಇದೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ ಚಿತ್ರವೊಂದಿದೆ. ‘ಡಾರ್ಕ್ ನೈಟ್’. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಇದು ಸಂಪೂರ್ಣವಾಗಿ ಕಾಲ್ಪನಿಕ ಚಿತ್ರ. ತಾಂತ್ರಿಕವಾಗಿ ಹಾಗೂ ಉಳಿದೆಲ್ಲ ವಿಷಯಗಳಲ್ಲೂ ಇದೊಂದು ಅದ್ಭುತ ಕಲಾಕೃತಿ. ಯಾವ ವಾಸ್ತವಗಳನ್ನು ಹೇಳದೆ ಸಂಪೂರ್ಣವಾಗಿ ನಮ್ಮನ್ನು ತನ್ನೊಳಗೆ ಎಳೆದುಕೊಳ್ಳುವ ಶಕ್ತಿ ಈ ಚಿತ್ರಕ್ಕಿದೆ.. ಪ್ರಶಸ್ತಿಗಳನ್ನೆಲ್ಲ ಮೀರಿದ ಚಿತ್ರ ಅನ್ನುವ ಭಾವನೆ ಕೊಡುತ್ತದೆ. ಅಷ್ಟೆಲ್ಲಾ ನಿರೀಕ್ಷೆ ಬೇಡ ಬಿಡಿ. ಆದರೆ ಭಾರತವನ್ನು ಒಂದು ಪ್ರಶಸ್ತಿಗಾಗಿ ಇಷ್ಟು ಕನಿಷ್ಟವಾಗಿಸುವ ಜರೂರತ್ತಿದೆಯೇ? ಭಾರತವನ್ನು ಕೀಳಾಗಿ ತೋರಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಳ್ಳುವ ಪ್ರಯತ್ನ ಇದೆ ಮೊದಲೇನಲ್ಲ. ಆದರೆ ಇದನ್ನು ವಿರೋಧಿಸುವ ಮನಸ್ಸು ಬಾರದೇ ಇದು ವಾಸ್ತವದ ಚಿತ್ರಣ ಎಂದು ಸಂತಸಪಡುವ ಮನಸ್ಸನ್ನು ನಾವು ಬೆಳೆಸಿಕೊಳ್ಳುತ್ತಿರುವುದು ಬೇಸರ ಹುಟ್ಟಿಸುತ್ತಿದೆ. . 

ಈ ಚಿತ್ರದಲ್ಲಿ ನಾನು ಮೆಚ್ಚಿದ ಏಕೈಕ ಅಂಶವೆಂದರೆ ನಾಯಕ ಜಮಾಲ್ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತ ಹೋದಂತೆ ಹಂತ ಹಂತವಾಗಿ ಬಿಚ್ಚಿಕೊಳ್ಳುವ ಆತನ ಅನುಭವಗಳು, ಆ ಹಿನ್ನೆಲೆಯಲ್ಲಿ ದೃಶ್ಯಗಳು ತೆರೆದುಕೊಳ್ಳುವ ರೀತಿ. ಕೆಲವು ಶಾಟ್ ಗಳು ತುಂಬ ಚೆನ್ನಾಗಿವೆ ಅನ್ನುವುದು ನಿಜ.

ಭಾರತವನ್ನು ಅಥವಾ ಯಾವುದೇ ದೇಶದ ಸಂಸ್ಕ್ರತಿಯ ಒಂದೇ ಮುಖದ ಚಿತ್ರಣವನ್ನು ಬಿಂಬಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಅಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಲಾಬಿಗಳು ನಡೆಯುತ್ತವೆ ಎಂಬುದು ನಮಗೆ ಗೊತ್ತಿರಬೇಕಷ್ಟೇ. ಯಾವುದೇ ದೇಶದ ಸ್ಪಷ್ಟ ಚಿತ್ರಣ ಬೇಕೆಂದರೆ ಅತ್ಯುತ್ತಮ ಡಾಕ್ಯುಮೆಂಟರಿಗಳು ಸಿಗುತ್ತವೆ. ಅಷ್ಟಕ್ಕೂ ಒಂದು ಚಲನಚಿತ್ರ ನಿರ್ದೇಶಕನ ದೃಷ್ಟಿಕೋನದಿಂದ ವೀಕ್ಷಕನೆದುರು ತೆರೆದುಕೊಳ್ಳುವುದೇ ವಿನಃ ಸಂಪೂರ್ಣ ಸತ್ಯದ ಅನಾವರಣವಲ್ಲ ಅಲ್ಲವೇ? ಯಾವ ದೃಷ್ಟಿಕೋನದಿಂದ ಇದು ಗೋಲ್ಡನ್ ಗ್ಲೋಬ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯಿತು ಎಂಬುದು ನನಗಿನ್ನೂ ಅರ್ಥವಾಗದ ವಿಷಯವೇ. ಕೊಳಚೆ, ಬಡತನ ಮಾತ್ರ ಭಾರತದ ವಾಸ್ತವ ಎನ್ನುವುದಾದರೆ, ಅದನ್ನೇ ಜಗತ್ತಿನ ಎದುರು ಇಡಬೇಕೆಂಬ ಆಸೆಯಿದ್ದರೆ ಈ ಚಿತ್ರ, ಅದರ ನಿರೂಪಣೆ, ಉದ್ದೇಶ ಯಾರನ್ನು ಭಾದಿಸದೇನೋ…

ಈ ಚಿತ್ರ ಭಾರತೀಯ ನಿರ್ದೇಶಕನ, ಭಾರತಕ್ಕಷ್ಟೇ ಸೀಮಿತವಾದ, ಕೇವಲ ನಾವು ಮಾತ್ರ ವೀಕ್ಷಿಸುವ ಚಲನಚಿತ್ರವಾಗಿದ್ದರೆ ವಾಸ್ತವ, ಅದ್ಭುತ ಅಂತೆಲ್ಲ ಹೊಗಳಿ ಸಮಾಧಾನ ಪಡಬಹುದಿತ್ತೇನೋ … ಆದರೆ ಈ ಚಿತ್ರವನ್ನು ಇಡೀ ಜಗತ್ತು ವೀಕ್ಷಿಸುತ್ತಿದೆ. ನಮ್ಮ ಮನೆಯಲ್ಲಿ ಕೆಲವೇ ಜಾಗದಲ್ಲಿರುವ ಕೊಳಕನ್ನು ಜಗತ್ತಿಗೆ ತೋರಿಸಿ ಇದು ನಮ್ಮ ಮನೆಯ ನೈಜ ಚಿತ್ರಣ, ಇದು ವಾಸ್ತವ ಅನ್ನುವ ಮನಸ್ಸು ಇದೆಯೇ? ಅಥವಾ ಮೂರನೆಯವನೊಬ್ಬ ಬಂದು ತೋರಿಸಿದಾಗ ಹೌದು, ಇದೇ ವಾಸ್ತವ ಅಂತ ಖುಷಿಪಡುವುದು ಒಳ್ಳೆಯದೇ? ಆ ಮನಸ್ಸು ನಮಗಿದ್ದರೆ ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರ ಸುಂದರವಾಗಿದೆ! ಅಡಿಗರ ವೈಟ್ ಟೈಗರ್ ಕೃತಿ ಕೂಡ…..

ಎಷ್ಟು ಕುತೂಹಲ, ನಿರೀಕ್ಷೆ, ಹೆಮ್ಮೆಯಿಂದ ನಾನು ಮೊದಲ ಸಲ ಸ್ಲಮ್ ಡಾಗ್ ಮಿಲೆನಿಯರ್ ಚಿತ್ರವನ್ನು ವೀಕ್ಷಿಸಿದ್ದೇನೋ ಅಷ್ಟೆ ಬೇಸರ, ಅಸಹ್ಯ ,ಚಡಪಡಿಕೆಯಿಂದ ಎದ್ದು ಹೊರಹೋಗಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆಯೇ ಈ ಚಿತ್ರ ನೋಡಿದರೂ ಕೂಡ ಇದು ಹಿಂಸೆಯೇ.