ಸ್ಲಂಡಾಗ್ ಮಿಲಿನೇರ್ ಕುರಿತಾದ ಚರ್ಚೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ಚಿತ್ರವನ್ನು ಹೇಗೆ ಹೇಗೆ ಭಿನ್ನವಾಗಿ ನೋಡಬಹುದೆಂಬುದಕ್ಕೂ ಈ ಬರಹಗಳೂ ಉದಾಹರಣೆಯಾಗುತ್ತಿವೆ. ಬೆಂಗಳೂರಿನಲ್ಲಿರುವ ಪತ್ರಕರ್ತ ಹಾಗೂ ಬ್ಲಾಗಿಗ ಸುಧನ್ವಾ ದೇರಾಜೆ ತಮ್ಮ ನೋಟವನ್ನು ಹರಿಸಿದ್ದಾರೆ.

*

ಜಮಾಲ್ ಎರಡು ಕೋಟಿ ರೂ ಗೆದ್ದಿದ್ದಾನೆ. ಅದಕ್ಕಿಂತ ಹೆಚ್ಚಿನ ಲತಿಕಾ ಕ್ಷೇಮವಾಗಿ ಅವನಿಗೆ ದೊರಕಿದ್ದಾಳೆ. ಸ್ಲಮ್ಮಿನ ಮಕ್ಕಳು ಕೊಳಚೆಗೆ ಹಾರಿ ಸಂಭ್ರಮಿಸುತ್ತಿದ್ದಾರೆ. ಬಾತ್‌ಟಬ್‌ನಲ್ಲಿ ನೋಟು ತುಂಬಿಕೊಂಡು ಮಲಗಿರುವ ಅಣ್ಣ ಸಲೀಂ, ಆ ಸಂತಸದ ಸುದ್ದಿ ಕೇಳುತ್ತಾ, ತನ್ನೊಡೆಯ ಭೂಗತ ಪಾತಕಿಗೆ ಗುಂಡಿಕ್ಕಿ, ತಾನೂ ಗುಂಡಿಗೆ ಬಲಿಯಾಗುತ್ತಿದ್ದಾನೆ . ಅವನು ಕೊನೆಗೆ ಆಡುವ ಮಾತು- ದೇಶವೇ ಕೊಂಡಾಡುತ್ತಿರುವ ‘ಜಮಾಲ್ ಈಸ್ ಗ್ರೇಟ್’ ಅಂತಲ್ಲ, ‘ಗಾಡ್ ಈಸ್ ಗ್ರೇಟ್ ’.

‘ಸ್ಲಮ್‌ಡಾಗ್ ಮಿಲಿಯನೇರ್’ನ ಒಡಲಾಳದಲ್ಲಿರುವುದು ನಂಬುಗೆ. ಅದು ಬಂದದ್ದು ಅನುಭವದಿಂದ. ಆದರೆ ಆ ನಂಬಿಕೆ ಎಲ್ಲೆಲ್ಲಿ ಕೆಡುತ್ತಿದೆ ಅನ್ನುವುದನ್ನೂ ಸಿನಿಮಾ ಹೇಳುತ್ತದೆ. ಹಿಂದೂ ರಾಕ್ಷಸರಿಂದ ತಪ್ಪಿಸಿಕೊಳ್ಳಲು ಪೊಲೀಸರ ಬಳಿ ಹೋದರೆ ಅವರು ಇಸ್ಪೀಟು ಆಡುತ್ತಿದ್ದಾರೆ, ಕೊಳೆಗೇರಿಯಲ್ಲಿ ಕೊಡುವ ಕೋಕಾಕೋಲ ಹುಡುಗರನ್ನು ಅಪಹರಿಸುತ್ತದೆ..ಹೀಗೆ ನಾನಾಕಡೆ. ಪೊಲೀಸ್ ಸ್ಟೇಷನ್‌ನಲ್ಲಿ ಇನ್ಸ್‌ಪೆಕ್ಟರ್ ವ್ಯಂಗ್ಯವಾಗಿ “The man who know all the answers” ಅಂತ ಜಮಾಲ್‌ಗೆ ಹೇಳುತ್ತಾನೆ. ಆದರೆ ಪಾಪ ಅವನಿಗೇನು ಗೊತ್ತಿದೆ? ಆತನಿಗೆ ಗೊತ್ತಿರುವುದು ಒಂದೇ-ಬಂದಂತೆ ಸ್ವೀಕರಿಸುವುದು. ಅವನು ಬದುಕಿನಲ್ಲಿ ಮಾಡಿದ್ದೂ ಅದನ್ನೇ.

ಅವನು ಹೇಳುವ ಉತ್ತರಗಳೆಲ್ಲ ಅನುಭವದಿಂದ ಬಂದದ್ದು. ಹಾಗಾಗಿ ಅವುಗಳ ಬಗ್ಗೆ ಅವನಿಗೆ ನಂಬಿಕೆ. ಒಂದು ಕೋಟಿ ರೂ. ತಂದುಕೊಡುವ ಪ್ರಶ್ನೆಗೆ, ತಪ್ಪುಉತ್ತರವನ್ನು ನಿಜವೆಂಬಂತೆ ಸುಳಿವು ಕೊಟ್ಟರೂ, ಅದನ್ನು ಧಿಕ್ಕರಿಸಿ ಹೃದಯದ ಹಾದಿ ಹಿಡಿಯುವ ಸತ್ಯವಂತ ಅವನು. ‘ಸತ್ಯಮೇವ ಜಯತೇ’ ಅನ್ನುವುದರ ಬಗ್ಗೆಯೂ ಅವನಿಗೆ ನಂಬಿಕೆಯಿಲ್ಲ, ಯಾಕೆಂದರೆ ಅದು ಅನುಭವಿಸಿ ಗೊತ್ತಿಲ್ಲ. ಅದಕ್ಕೆ ‘ಆಡಿಯನ್ಸ್ ಪೋಲ್’ ಬೇಕಲ್ಲ ! ಆದರೆ ನಿರ್ದೇಶಕನಿಗಂತೂ ಗೊತ್ತಿದೆ, ನಂಬಿಕೆಗೆ ಯಾವತ್ತೂ ದೈವದ ಬೆಂಬಲವಿದೆ. ಅಪನಂಬಿಕೆಗೆ ಇಲ್ಲ ! ಹೀಗೆ ಶುದ್ಧ ಭಾರತೀಯ ಮನಸ್ಸಿನ ಒಳಹೊಕ್ಕ ಸಿನಿಮಾ ಇದು. ಚಿತ್ರದ ಆರಂಭದಲ್ಲಿ ಪ್ರಶ್ನೆಯೊಂದು ತೆರೆಯ ಮೇಲೆ ಬರುತ್ತದೆ.

ಇಪ್ಪತ್ತು ಮಿಲಿಯನ್ ರೂಪಾಯಿ ಗೆಲ್ಲುವುದಕ್ಕೆ ಜಮಾಲ್ ಒಂದು ಪ್ರಶ್ನೆ ದೂರವಿದ್ದಾನೆ. ಆತ ಇಲ್ಲಿಯವರೆಗೆ ಗೆದ್ದದ್ದು ಹೇಗೆಂದು ನಿಮಗನಿಸುತ್ತದೆ? ನಾಲ್ಕು ಆಯ್ಕೆಗಳು- ೧.ಅವನು ಏನೋ ಮೋಸ ಮಾಡಿದ್ದಾನೆ, ೨. ಅವನು ಅದೃಷ್ಟವಂತ ೩.ಅವನು ಬಹಳ ಮೇಧಾವಿ ೪. ಅದು ವಿಧಿಲಿಖಿತ. ಈ ಆಯ್ಕೆಗಳಲ್ಲಿ ಒಂದೊಂದೆ ಉತ್ತರವನ್ನು ಅಲ್ಲಗಳೆಯುತ್ತಾ ಹೋಗುವ ಸಿನಿಮಾದ ಕೊನೆಗೆ, ನಿರ್ದೇಶಕ ಉಳಿಸಿ ತೋರಿಸುವುದು ಕೊನೆಯ ಆಯ್ಕೆಯನ್ನು . ಆತ ಹಾಗೆ ‘ನಂಬಿದ್ದಾನೆ ’.

ಎ.ಆರ್.ರೆಹಮಾನ್‌ರದ್ದು ಇದೇ ಅತ್ಯುತ್ತಮ ಸಂಗೀತ ಅಲ್ಲದಿದ್ದರೂ, ಅವರ ಸಾಮರ್ಥ್ಯ ಗೊತ್ತಾಗಿರುವುದು, ಸಂದರ್ಭಕ್ಕೆ ಬಹಳ ಸೂಕ್ತವಾದ ಸಂಗೀತ ಕೊಟ್ಟಿರುವುದರಲ್ಲಿ. ಅಭಿನಯ-ಚಿತ್ರಕಥೆ-ಸಂಭಾಷಣೆಗಳೆಲ್ಲ ಒಂದರೊಳಗೊಂದು ಸೇರಿ ಚಿತ್ರದಲ್ಲೊಂದು ಹದವಾದ ಪಾಕವಾಗಿದೆ. ಪ್ರತಿಯೊಂದು ದೃಶ್ಯದಲ್ಲೂ ತೋರುವ ವಿವರಗಳನ್ನು ಗಮನಿಸಿದರೆ, ಒಂದೊಂದು ಶಾಟ್‌ನ್ನೂ ಅದೆಂಥ ಲೆಕ್ಕಾಚಾರದಲ್ಲಿ ತೆಗೆದಿರಬಹುದೆಂದು ಊಹಿಸಬಹುದು. ವಿಮಾನನಿಲ್ದಾಣದಿಂದ ಪೊಲೀಸರು ಅಟ್ಟಿಸಿಕೊಂಡು ಹೋಗುವಾಗ , ಅಮಿತಾಬ್ ಆಟೊಗ್ರಾಫ್ ಉಳ್ಳ ಚಿತ್ರವನ್ನು ಮಾರಿದಾಗ, ಕಣ್ಣನ್ನು ಸುಡಲು ಜಮೀಲ್‌ನನ್ನು ಕರೆ ಎಂದಾಗ…ಹೀಗೆ ಎಲ್ಲೆಡೆಗಳಲ್ಲೂ ಮೊದಲನೇ ಸಲೀಂ-ಜಮಾಲ್ ಇಬ್ಬರೂ ಮನದುಂಬಿ ಅಭಿನಯಿಸಿದ್ದಾರೆ.

ರಾತ್ರಿ ಹೊತ್ತು ರಾಜಕುಮಾರಿ ಲತಿಕಾಗೆ, ಆ ಪುಟ್ಟ ರಾಜಕುಮಾರ ಜಮೀಲ್ ಕನಸು ತೋರುವ ದೃಶ್ಯವನ್ನೂ ನೆನಪಿಸಿಕೊಳ್ಳಿ. ರೈಲಿನಿಂದ ಉರುಳುರುಳಿ ಬಿದ್ದು ಆಗ್ರಾದಲ್ಲಿ ಎದ್ದಾಗ ಎರಡನೇ ಸಲೀಮ್ ಮತ್ತು ಜಮಾಲ್! ಅದೆಷ್ಟು ಸರಿಯಾದ ಸಮಯ-ಸಂದರ್ಭದಲ್ಲಿ ನಿರ್ದೇಶಕರು ಆ ಬದಲಾವಣೆ ಮಾಡಿದ್ದಾರೆಂದರೆ ಆ ಪರಿವರ್ತನೆ ಹಲವರ ಗಮನಕ್ಕೇ ಬರಲಿಕ್ಕಿಲ್ಲ.

ಅರೆ, ಆ ಎರಡನೇ ಜಮಾಲ್ ಅಂತೂ ತಾರೇ ಜಮೀನ್ ಪರ್’ನಲ್ಲಿ ದರ್ಶೀಲ್ ಸ್ನೇಹಿತನಾಗಿದ್ದ ಹುಡುಗ ! ಆಗ್ರಾದಲ್ಲಿ ಟೂರಿಸ್ಟ್ ಗೈಡ್‌ಗಳಾಗಿ, ಚಪ್ಪಲಿ ಕಳ್ಳರೂ ಮಾರಾಟಗಾರರೂ ಆಗಿ, ಬಳಿಕ ಮುಂಬಯಿಗೆ ಬಂದಾಗ ಅವರಿಬ್ಬರೂ ಪರಸ್ಪರ ಹಿಂದಿ ಮಾತಾಡುವುದಿಲ್ಲ, ಇಂಗ್ಲಿಷ್ ರೂಢಿಸಿಕೊಂಡಿದ್ದಾರೆ ! ವೇಶ್ಯೆಯರ ಕೂಟದಲ್ಲಿದ್ದ ಲತಿಕಾ ಜತೆ ಸಲೀಮ್-ಜಮಾಲ್ ಹಳೇ ಅಪಹರಣಕಾರನಿಗೆ ಸಿಕ್ಕಿಬಿದ್ದಾಗ ಆತ ಆಡುವ ಮಾತು “I never forget a face”. ಆಗ ಕಾಣುವುದು ಆತನ ಪಕ್ಕದಲ್ಲಿರುವ, ಸಲೀಮ್‌ನಿಂದ ಬಾಟಲಿಯೇಟು ತಿಂದಿದ್ದವನ ಮುಖ!

“How much this little virgin worth?” ಅಂತ ಆ ಮಕ್ಕಳ ಕಳ್ಳ; ಪ್ರಶ್ನಿಸುವುದಕ್ಕೂ ,ಕೊಂಚ ಮೊದಲು ಲತಿಕಾಳ ಎದೆಯ ಮಟ್ಟ ತೋರಿಸಿರುವುದಕ್ಕೂ ಎಂಥಾ ಕಾವ್ಯಾತ್ಮಕ ಸಂಬಂಧ ಇದೆಯಲ್ಲ. ಈ ನಿರ್ದೇಶಕ-ಕ್ಯಾಮರಾಮ್ಯಾನ್ ಜೋಡಿ, ಕಾರು ಹತ್ತುತ್ತಿರುವ ರೌಡಿ ಸಲೀಂನ ಮುಖದ ಮೊಡವೆಗಳನ್ನು ತೋರಿಸಬಲ್ಲರು. ೨ ಕೋಟಿಯ ಪ್ರಶ್ನೆಯಿದು ಅಂತ ಅನಿಲ್ ಕಪೂರ್ ಹೇಳುವಷ್ಟರಲ್ಲಿ, ಟಿವಿಯೆದುರು ಕುಳಿತ ಸಾಮಾನ್ಯನೊಬ್ಬ ಬಿಸ್ಕೆಟ್ ಬಾಯಿಗಿಡುವುದನ್ನು ಕಾಣಿಸಬಲ್ಲರು. ಇಷ್ಟೆಲ್ಲ ಸೂಕ್ಷ್ಮ ಮನಸ್ಸಿನ ಇವರು, ಭಾರತವನ್ನು ಕೊಳಕಾಗಿ ತೋರಿಸುವುದಕ್ಕೇ ಸಿನಿಮಾ ತೆಗೆದರು ಅಂದರೆ ನೀವು ನಂಬುತ್ತೀರಾ?

ಪ್ರಶಸ್ತಿಯ ರಾಜಕೀಯಗಳೇನೇ ಇರಲಿ ಇಲ್ಲದಿರಲಿ, ಒಳ್ಳೆಯ ಚಿತ್ರವೊಂದು ಬಂದಾಗ ಸಂಭ್ರಮಿಸುವ ಮನಸ್ಸೂ ನಮಗಿಲ್ಲದಿದ್ದರೆ, ಅದಕ್ಕಿಂತ ಬೇಜಾರಿನ ಸಂಗತಿ ಮತ್ತೊಂದಿಲ್ಲ. ಕಲೆಯಲ್ಲಿ, ಒಳ್ಳೆಯದ್ದನ್ನು ತೋರಿಸಿದರೆ ಮಾತ್ರ ಶ್ರೇಷ್ಠ , ಕೆಟ್ಟದ್ದನ್ನು ತೋರಿಸಿದರೆ ಕಳಪೆ ಎಂದಿದೆಯೆ? ಯಾವುದು ಕೂಡಾ ಎಲ್ಲ ಕೋನಗಳಿಂದಲೂ ಚೆಂದವಾಗಿ ಕಾಣುವುದಿಲ್ಲ ಅಥವಾ ಕೊಳಕಾಗಿಯೂ ಅಲ್ಲ. ಭಾರತದ ಬದುಕಿನ ನಾನಾ ಬಗೆಗಳನ್ನು ಸಮರ್ಥವಾಗಿ ತೋರಿಸಿದ ಸಿನಿಮಾ ಇದು. ನಾವೇ ಬೆಚ್ಚಿಬೀಳುವಂತೆ ನಮ್ಮ ದೇಶವನ್ನೇ ಆ ನಿರ್ದೇಶಕ ತೋರಿಸಿದ ರೀತಿ ದೊಡ್ಡದು. ತನ್ನ ಮುಂದಿನ ಚಿತ್ರದ ಶೂಟಿಂಗ್‌ನ್ನೂ ಮುಂಬಯಿಯಲ್ಲೇ ಮಾಡುತ್ತೇನೆಂದು ನಿರ್ದೇಶಕ ಹೇಳಿರಬೇಕಾದರೆ, ಅವನಿನ್ನು ಎಂಥದ್ದೆಲ್ಲಾ ನೋಡಿದ್ದಾನೋ !

ಒಟ್ಟಿನಲ್ಲಿ ಇದು, ಒಂದೊಂದು ದೃಶ್ಯವೂ ಮರೆತು ಹೋಗದಂತೆ, ನಾವೆಲ್ಲ ಮೈಮರೆಯುವ ಹಾಗೆ ಮಾಡಬಲ್ಲ ಸಿನಿಮಾ ಆಗಿದೆ. ಎಲ್ಲೆಡೆ ಪ್ರಶಂಸೆಗೆ ಪಾತ್ರವಾದ ಇದರಲ್ಲಿ ನಮ್ಮವರೂ ಇರುವುದಕ್ಕೆ ಸಂಭ್ರಮಿಸೋಣ. ಮೂಲ ಕಾದಂಬರಿಯಲ್ಲಿ ರಾಮ್ ಮಹಮ್ಮದ್ ಥಾಮಸ್ ಆಗಿದ್ದವನು ಇಲ್ಲಿ ಜಮಾಲ್ ಮಲ್ಲಿಕ್ ಯಾಕಾದ? ನಮಗೆ ಗೊತ್ತಿಲ್ಲ. ಯಾಕೆಂದರೆ ಮೂಲ ಕಾದಂಬರಿಯನ್ನೇ ನಾವು ಓದಿಲ್ಲ. ಆದರೂ ಸಿನಿಮಾಕ್ಕಿಂತ ಹೆಚ್ಚಾಗಿ ಅದರ ಸುತ್ತಲಿನ ರಾಜಕೀಯದ ಬಗ್ಗೆ ಮಾತಾಡುವುದನ್ನು ನಾವು ಬಿಡುವುದಿಲ್ಲ !

ಸಲೀಂ-ಜಮಾಲ್ ಇಬ್ಬರೂ ಹುಟ್ಟಿದ್ದು ಅಣ್ಣತಮ್ಮಂದಿರಾಗಿಯೇ. ಕೊನೆಗೆ ಒಬ್ಬ ನಾಯಕ, ಇನ್ನೊಬ್ಬ ದುರಂತನಾಯಕ ! ಡ್ಯಾನಿ ಬೋಯ್ಲೆ ತೋರಿಸಿರುವುದು ಕೊಳಕು-ಕ್ರೌರ್ಯದ ಭಾರತವನ್ನಷ್ಟೇ ಅಲ್ಲ, ಇಲ್ಲಿರುವ ವೈರುಧ್ಯವನ್ನು. ಹುಡುಗನೊಬ್ಬ ಹೇಲಿನಲ್ಲಿ ಮಿಂದೆದ್ದು ಬರುವುದನ್ನು-ಅಮಿತಾಬ್ ಹೆಲಿಕಾಪ್ಟರ್‌ನಲ್ಲಿ ಇಳಿಯುವುದನ್ನು. ಭೂಗತಪಾತಕಿಯ ಬಾತ್‌ಟಬ್‌ನಲ್ಲಿ ಅಣ್ಣ ಸಾಯುವುದನ್ನು-ತಮ್ಮ ಕೋಟ್ಯಾಧಿಪತಿಯಾಗುವುದನ್ನು . ನಿಜವಾದ ಉತ್ತರಗಳು ಗೊತ್ತಿರುವುದು ಇಬ್ಬರಿಗೇ. ಅನುಭವಿಸಿದವನಿಗೆ ಮತ್ತು ದೇವರಿಗೆ . ಈ ಸಿನಿಮಾ ಅನುಭವಿಸೋಣ, ಆಗದೇ?