ಸಾಂಗತ್ಯದ ಹೊಸ ಅಂಕಣ “ಒಂದೇ ಚಿತ್ರ : ನೂರಾರು ನೋಟ” ಕ್ಕೆ ಮಹೇಶ್ ಹೆಗಡೆ ಅವರು ಬರೆದ ಇಟಾಲಿಯನ್ ಸಿನಿಮಾ “ಇಲ್ ಪೋಸ್ಟಿನೊ” ಬಗ್ಗೆ ಚೇತನಾ ತೀರ್ಥಹಳ್ಳಿಯವರು ತಮ್ಮ ನೋಟ ಹರಿಸಿದ್ದಾರೆ. ಚೇತನಾ ಬೆಂಗಳೂರಿನಲ್ಲಿ ಪತ್ರಕರ್ತೆ. ನೀವೂ ನಿಮ್ಮ ನೋಟಗಳನ್ನು www.saangatya@gmail.com ಗೆ ಬರೆದು ಕಳುಹಿಸಿ. ಭಿನ್ನ ಭಿನ್ನ ನೋಟಗಳು ಅರಳಲಿ. ilpostino2

ಇಲ್ ಪೋಸ್ಟಿನೋ ಸಿನಿಮಾ ನೋಡುವ ಮೊದಲು ಇಂಥದೊಂದು ಕಾನ್ಸೆಪ್ಟ್ ಅನ್ನು ನಾನು ಊಹಿಸಿಯೂ ಇರಲಿಲ್ಲ.

ಸಿನಿಮಾ ನೇರವಾಗಿ ನನ್ನ ತಟ್ಟಿದ್ದು ಅದರ ನಿರೂಪಣೆ ಶೈಲಿ, ನಟನೆ ಮತ್ತು ಛಾಯಾಗ್ರಹಣದಿಂದ. ಆದರೆ ನನ್ನನ್ನು ಬೆರಗಿಗೆ ತಳ್ಳಿದ್ದು, ಮನುಷ್ಯನ ಸತ್ತ್ವವನ್ನೆ ಬದಲಾಯಿಸಿಬಿಡಬಹುದಾದ ಕಾವ್ಯದ ಶಕ್ತಿಯನ್ನು ಬಿಂಬಿಸುವ ಕಥಾ ಹಂದರ.   

ಸುಮ್ಮನೆ ತನ್ನ ಪಾಡಿಗೆ ತಾನು ಬೆಸ್ತನ ಮಗನಾಗಿ ಬದುಕಿಬಿಡಬಹುದಾಗಿದ್ದ ಮಾರಿಯೋ ಕವಿಯಾಗಿ ಸಾಯುತ್ತಾನಲ್ಲ, ಅದರಲ್ಲೂ ಸಮಾಜವಾದಿ ಹೋರಾಟದೊಂದಿಗೆ ಗುರುತಿಸಿಕೊಂಡು, ತನ್ನನ್ನು ತಾನು ಕಮ್ಯುನಿಸ್ಟನೆಂದು ಕರೆದುಕೊಂಡುಕರೆಸಿಕೊಂಡು ಬದಲಾದ ವ್ಯಕ್ತಿತ್ವದೊಂದಿಗೆ ಸಾಯ್ತಾನಲ್ಲ, ಅದಕ್ಕೆ ಮೂಲ ಕಾರಣಪ್ರೇರಣೆ ಪ್ಲಾಬ್ಲೋ ನೆರೂದನೆಂಬ ಕವಿ ಮತ್ತು ಕವಿತೆ 

ಮಾರಿಯೋ ಬೆಸ್ತನ ಮಗ. ಆದರೆ ಅವನಿಗೆ ತಾನೂ ಒಬ್ಬ ಬೆಸ್ತನಾಗಲು ಇಷ್ಟವಿಲ್ಲ. ಚಿಕ್ಕ ದ್ವೀಪದಲ್ಲಿ ಮೀನುಗಾರಿಕೆಯಲ್ಲದೆ ಬೇರೆ ಬದುಕಿಲ್ಲ. ಇಂತಹ ವ್ಯಕ್ತಿಗೆ ನೆರೂದನ ಬಗ್ಗೆ ಕುತೂಹಲ, ಆಕರ್ಷಣೆ ಬೆಳೆಯುವುದುಆತಪ್ರೇಮ ಕವಿ’ ‘ಮಹಿಳೆಯರ ಕಣ್ಮಣಿಎಂದು ಅವನು ಕೇಳ್ಪಟ್ಟುದರಿಂದ. ಹೀಗಾಗಿಯೇ ಮಾರಿಯೋ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು ನೆರೂಡನ ಸಹಾಯ ಬೇಡುವ ಸಾಹಸ ಮಾಡುತ್ತಾನೆ.

ಹಾಗೆಂದು ಮಾರಿಯೋ ಅರಸಿಕನೇನಲ್ಲ. ಅವನಿಗೇ ತಿಳಿಯದಂತೆ ಅವನಲ್ಲಿಯೂ ಒಂದು ಭಾವದ ಒರತೆಯಿದೆ. ನೆರೂದ ದ್ವೀಪದಲ್ಲಿದ್ದಷ್ಟೂ ಕಾಲ ಒಳಗೇ ಸುಪ್ತವಾಗಿದ್ದ ಅದು, ಅವನು ಹೊದನಂತರ ಚಿಮ್ಮತೊಡಗುತ್ತದೆ. ದಿನವೂ ನೋಡುತ್ತಿದ್ದ ಕಡಲು, ಹೂವು, ಗಾಳಿಯ ಸದ್ದು  ಇವೆಲ್ಲ ಅವನಿಗೆ ಸುಂದರವಾಗಿ ಕಾಣತೊಡಗುತ್ತವೆ. ಹೀಗೆ ಅದು ಹೊರಬರುವಂತೆ ಪ್ರಚೋದಿಸುವುದು ನೆರುದನ ಅಲ್ಪ ಕಾಲದ ಸಹವಾಸ 

ಕವಿಗಳು ಸಂವೇದನಾಶೀಲರು. ಅದಕ್ಕೇ, ಎಷ್ಟೇ ಬೇಡವೆಂದುಕೊಂಡರೂ ಸಾಮಾಜಿಕ ಚಳುವಳಿ, ಹೋರಾಟಗಳೊಂದಿಗೆ ಅವರ ನಂಟು. ನೆರೂದನದೂ ಅಷ್ಟೇ. ಅವನಿಂದ ಪ್ರಭಾವಿತನಾಗಿಕವಿಯಾಗುವ ಮಾರಿಯೋನದೂ ಅಷ್ಟೇ.

ಮಾರಿಯೋಗೆ ಉಪಮೆಗಳು ಗೊತ್ತಿಲ್ಲ. ವ್ಯಾಕರಣದ ಹಂಗಿಲ್ಲ. ಅವನೊಬ್ಬ ಭಾವುಕ. ಹಾಗೆಂದೇ ಕವಿಯಾದವನು.

ರಾಜಕಾರಣದ ವಿಷಯದಲ್ಲಿಯೂ ಅಷ್ಟೇ. ಅವನ ಜಗತ್ತು ತೀರ ಚಿಕ್ಕದು. ತನ್ನನ್ನು ತಾನು ಕಮ್ಯುನಿಸ್ಟನೆಂದು ಕರೆದುಕೊಳ್ಳುವುದರಲ್ಲಿ ಅವನಿಗೆ ಖುಷಿಯಿದೆಯೇ ಹೊರತು ಅವನಿಗೆ ಅದರ ಗಂಧಗಾಳಿಯೂ ಇಲ್ಲ. ಅವನು ಕವಿತೆ ಬರೆದು, ಅದನ್ನು ನೆರೂಡನಿಗೆ ಅರ್ಪಿಸಿ ಕಮ್ಯುನಿಸ್ಟ್ ಸಮ್ಮೇಳನವೊಂದರಲ್ಲಿ ಹಾಡಲು ಹೋಗುವುದುಅದರಿಂದ ನೆರೂದನಿಗೆ ಬಹಳ ಸಂತೋಷವಾಗಬಹುದು ಎನ್ನುವ ಕಾರಣಕ್ಕೇ ಹೊರತು, ಚಳುವಳಿಯಲ್ಲಿ ಪಾಲ್ಗೊಳ್ಳಬೇಕೆಂಬ ಸಹಜ ಬಯಕೆಯಿಂದಲ್ಲ 

ನೆರೂದನ ಕಾವ್ಯಕ್ಕೆ ತನ್ನ ಪ್ರೇಯಸಿಯನ್ನು ಒಲಿಸಿಕೊಡುವ ತಾಕತ್ತಿದೆ! ಅದು ಮಾರಿಯೋನ ಬೆರಗು. ಆದರೆ ತಾನು ಮಾತ್ರ ಅತಿಯಗಿ ಪ್ರೀತಿಸುತ್ತಿರುವೆನೆಂದುಕೊಂಡವಳಿಗಾಗಿ ಒಂದಕ್ಷರ ಬರೆಯಲಾರ. ಇಂತಹ ಮಾರಿಯೋ ನೆರೂಡನಿಗಾಗಿ ಕವಿತೆ ಬರೆಯುತ್ತಾನೆ. ಇದು, ಕವಿಯ ಆಕರ್ಷಣೆ ಮತ್ತು ಸ್ನೇಹದ ಪ್ರಭಾವವನ್ನು ಎತ್ತಿ ತೋರಿಸುತ್ತದೆ

ಮುಗ್ಧ ಮಾರಿಯೋನ ಸ್ನೇಹವಾದರೂ ಎಂಥದ್ದು? ಆತನಿಗೆ ತನ್ನ ದ್ವೀಪದಿಂದ ತೆರಳಿದ ನೆರೂಡಾ ತನ್ನನ್ನು ನೆನೆಸಿಕೊಳ್ಳಲಿಲ್ಲವೆಂಬ ಬೇಸರವೇ ಇಲ್ಲ. ಬದಲಿಗೆ, ತನ್ನ ಜಗತ್ತನ್ನು ಮತ್ತಷ್ಟು ಸುಂದರವಾಗಿ ನೋಡಲು ಕಲಿಸಿದವನ ಬಗೆಗೆ ಗೌರವವಿದೆ. ಹಾಗೆಂದೇ ತನ್ನ ಮಗನಿಗೆ ಪ್ಲಾಬ್ಲೆಟ್ಟೋ ಎಂದು ಹೆಸರಿಡುತ್ತಾನೆ. ಸ್ನೇಹದ ಬಗ್ಗೆ ಬರೆಯುತ್ತ ಹೋದರೆ ಅದು ಮತ್ತೊಂದೇ ಲೇಖನವಾದೀತು.

ನೋಡಿದ ಇಷ್ಟು ದಿನದ ನಂತರವೂ ನೆನೆಸಿಕೊಂಡಾಗಲೆಲ್ಲ ಕಾಡುವ ಸಿನಿಮಾ, ನಾನು ಈವರೆಗೆ ನೋಡಿದ ಅತ್ಯುತ್ತಮ ಸಿನಿಮಾಗಳಲ್ಲೊಂದು.

Advertisements