ಕನಸು ನನಸಾಯಿತು.
ಸಾಂಗತ್ಯ ಕಂಡಿದ್ದ “ನಮ್ಮ ಚಿತ್ರೋತ್ಸವ’ ಕನಸು ಕೈಗೂಡಿದೆ. ಶನಿವಾರ ಮತ್ತು ಭಾನುವಾರ (ಜ.೩, ೪) ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ನಡೆದ ಚಿತ್ರೋತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು ೪೦ ಮಂದಿ ಭಾಗವಹಿಸಿದ್ದರು.

ಇದೊಂದು ರೀತಿಯಲ್ಲಿ “ಚಿತ್ರ ಪ್ರಶಂಸನಾ ಶಿಬಿರ’ ವಿದ್ದಂತೆ. ಉಪನ್ಯಾಸಗಳ ಭಾರವಿಲ್ಲದ ಶಿಬಿರದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದೇ ಹೆಚ್ಚು ಖುಷಿಗೆ ಕಾರಣ.

ಕುವೆಂಪು ಟ್ರಸ್ಟ್‌ನ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉದ್ಘಾಟಿಸಿದ ಚಿತ್ರೋತ್ಸವದಲ್ಲಿ ಒಟ್ಟೂ ಎಂಟು ಚಲನಚಿತ್ರ ಮತ್ತು ಎರಡು ಡಾಕ್ಯುಮೆಂಟರಿಗಳನ್ನು ನೋಡಿದೆವು. ಬರಿದೇ ನೋಡಲಿಲ್ಲ, ಅದರ ಕುರಿತು ಚರ್ಚಿಸಿದೆವು. ನಮ್ಮ ಚರ್ಚೆಗಳಿಗೆಲ್ಲಾ ಒಂದು ಚೆಂದದ ಚೌಕಟ್ಟು ಹಾಕಿ, ವಿಶೇಷತೆಯನ್ನು ಹೇಳಿಕೊಂಡಲು ಚಿತ್ರಲೋಕದ ಪರಮೇಶ್ವರ ಗುರುಸ್ವಾಮಿ ಇದ್ದರು. ನಿಜವಾಗಲೂ ಅದ್ಭುತದ ಎರಡು ದಿನಗಳು.

ಕುಪ್ಪಳ್ಳಿ ಕುವೆಂಪು ಅವರ ಊರು. ಕವಿಶೈಲದ ಸುಂದರ ಪರಿಸರದಲ್ಲಿ ಎರಡು ದಿನ ಕಳೆದದ್ದು ನಮ್ಮ ನಗರ ಜೀವನದಿಂದ ಸೋತು ಹೋದ ಬದುಕಿಗೆ ಹೊಸ ಹುಮ್ಮಸ್ಸು ಮೂಡಿಸಿದ್ದು ನಿಜ. ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಟ್ರಸ್ಟ್‌ನ ವ್ಯವಸ್ಥೆ. ಅಲ್ಲಿ ಒಂದು ಸುಸಜ್ಜಿತ ಸ್ಟುಡಿಯೋ ಕಟ್ಟಿಸಿದ್ದಾರೆ. ಅಲ್ಲಿ ಉಳಿದುಕೊಳ್ಳಲೂ ವ್ಯವಸ್ಥೆಯಿದೆ. ಜತೆಗೆ ನಿಮ್ಮನ್ನು ಹುರಿದುಂಬಿಸುವ ಹಸಿರಿದೆ. ಚುಮು ಚುಮು ಚಳಿಯಲ್ಲಿ ಒಂದೆಡೆ ಕುಳಿತು ಚಿತ್ರಗಳನ್ನು ನೋಡಿದ ಅನುಭವ ಅನನ್ಯ.

ಪ್ರತಿ ಚಿತ್ರದ ನಂತರವೂ ಸುಮಾರು ೪೫ ನಿಮಿಷ ಚರ್ಚೆ ಏರ್ಪಡಿಸಲಾಗಿತ್ತು. ಕಥಾವಸ್ತು ಸಾಗಿ ಬಂದ ಬಗೆಯಿಂದ ಹಿಡಿದು, ಆ ಚಿತ್ರದ ಉತ್ತಮ ಅಂಶ-ಲೋಪಗಳನ್ನು ಗುರುತಿಸಲು ಪ್ರಯತ್ನಿಸಿದೆವು. ಜತೆಗೆ ಪರಮೇಶ್ವರ ಗುರುಸ್ವಾಮಿಯವರು ಚಿತ್ರವನ್ನು ನೋಡುವ ಬಗೆಯನ್ನೂ ತಿಳಿಸಿಕೊಟ್ಟದ್ದು ಉತ್ತಮವೆನಿಸಿತು. ಹಲವು ಬ್ಲಾಗಿಗರು, ಕೃಷಿಕರು, ಮಾಧ್ಯಮದ ಗೆಳೆಯರು, ವಿದ್ಯಾರ್ಥಿಗಳೂ ಭಾಗವಹಿಸಿದ್ದರು.  ಕೊಪ್ಪ ಸುತ್ತಮುತ್ತಲಿನವರೂ ಒಟ್ಟೂ ಚಿತ್ರೋತ್ಸವಕ್ಕೆ ರಂಗು ತಂದರು.

ಕವಿ ಪ್ಯಾಬ್ಲೊ ನೆರುದ ಪಾತ್ರದ “ಇಲ್ ಪೋಸ್ಟಿನೊ’ (ಇಟಾಲಿಯನ್) ಚಿತ್ರದ ಚರ್ಚೆಯನ್ನು ದೀಪಾ ಹಿರೇಗುತ್ತಿ ನಡೆಸಿಕೊಟ್ಟರೆ, ಟೀನಾ ಶಶಿಕಾಂತ್ ಇಂಗ್ಲಿಷ್‌ನ “ದಿ ಕ್ರ್ಯಾಶ್’ ಚಿತ್ರದ ಮೇಲೆ ಬೆಳಕು ಚೆಲ್ಲಿದರು. ಇರಾನಿ ಚಿತ್ರ “ಸೈಲೆನ್ಸ್’ ಮೇಲೂ ಒಳ್ಳೆ ಚರ್ಚೆ ನಡೆಯಿತು. ಬಂಗಾಳಿಯ “ಜುಕ್ತಿ, ಟಕ್ಕೊ ಔರ್ ಗಪ್ಪೊ’ ಚಿತ್ರ ಕುರಿತು ಚೇತನಾ ತೀರ್ಥಹಳ್ಳಿ ಚರ್ಚೆಗೆ ಚಾಲನೆ ನೀಡಿ ನಿರ್ವಹಿಸಿದರು. ಚೀನಿ ಚಿತ್ರ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್’ ಬಗ್ಗೆ ಸಿಬಂತಿ ಪದ್ಮನಾಭ ಚರ್ಚೆಯನ್ನು ನಿರ್ವಹಿಸಿದರು. ಹಕ್ಕಿಗಳ ವಲಸೆ ಕುರಿತು ತೆಗೆದ “ವಿಂಗ್ಡ್ ಮೈಗ್ರೇಷನ್’ ತಂಡದ “ಮೈಕ್ರೋ ಕಾಸ್ಮೋಸ್’ ಅತ್ಯಂತ ಖುಷಿ ನೀಡಿತು. ಅದರ ಛಾಯಾಗ್ರಹಣ ಎಲ್ಲರನ್ನೂ ಮೋಹಕಗೊಳಿಸಿತು.

ಅಲ್ಲದೇ ಅಕಿರ ಕುರಸೋವನ  ಮೂರು “ಡ್ರೀಮ್’ ಗಳನ್ನು ನೋಡಿ ಆನಂದ ಪಟ್ಟೆವು. ಅದರ ಕುರಿತೂ ಚರ್ಚೆ ನಡೆಯಿತು. ಚೈತನ್ಯ ಹೆಗಡೆ ಇಂಗ್ಲಿಷ್ ಚಿತ್ರ “ಬ್ಲಡ್ ಡೈಮಂಡ್’ ಕುರಿತು ಚರ್ಚೆಗೆ ಸಿದ್ಧತೆ ನಡೆಸಿಕೊಂಡು ಬಂದಿದ್ದ. ಆದರೆ ಸಮಯದ ಕೊರತೆಯಿಂದ ಅದನ್ನು ಪ್ರದರ್ಶಿಸಲಿಲ್ಲ.

ಮ್ಯಾಜಿಕ್ ಕಾರ್ಪೆಟ್‌ನ ಜಿ. ಎನ್. ಮೋಹನ್ ಅವರ ಸಹಕಾರ-ಸಲಹೆಯಿಂದ ಸಮಾರೋಪ ಸಮಾರಂಭದಲ್ಲಿ ಎಲ್ಲರಿಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಮೊದಲು, ನಾವು ಪ್ರಶಂಸನಾ ಪತ್ರ ನೀಡುವ ಇಚ್ಛೆ ಹೊಂದಿರಲಿಲ್ಲ.  ಕಾರಣ, ನಮ್ಮದು ಉಪನ್ಯಾಸ ರಹಿತ ಶಿಬಿರವಾಗಿತ್ತು. ಆದರೆ ಮೋಹನ್, ಪರಮೇಶ್ವರ ಅವರು, ಇದೇ ಮಾದರಿ ಚೆನ್ನ. ನೀವು ಪತ್ರ ಕೊಡಿ ಎಂದಾಗ ಒಪ್ಪಿಕೊಂಡೆವು. ಇದನ್ನು ಒದಗಿಸಿದ್ದು ಮೋಹನ್‌ರೇ. ಅವರಿಗೆ ಧನ್ಯವಾದಗಳು.

ಕಾರ್ಯಕ್ರಮದ ಸಂಘಟನೆಗೆ ವಾದಿರಾಜ್, ಪ್ರವೀಣ್ ಹೆಗಡೆ, ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿ, ಮಧುಕರ್ ಮಯ್ಯ, ಕಥೆಗಾರ್ತಿ ದೀಪಾ ಹಿರೇಗುತ್ತಿ ಎಲ್ಲ ಸಹಕರಿಸಿದರು. ಕಾಫಿ ಜತೆಗೆ ಸವಿಯಲು ಮೈಸೂರಿನ ಸೂರ್‍ಯ ಕಾಂಡಿಮೆಂಟ್ಸ್‌ನ ಎ.ವಿ. ಭಟ್ ತಿಂಡಿ ಒದಗಿಸಿದರು. ಅದರಲ್ಲೂ ಟ್ರಸ್ಟ್‌ನ ಸಿಬ್ಬಂದಿ ನೀಡಿದ ಸಹಕಾರವನ್ನು ಮರೆಯಲಾಗದು. ಎಲ್ಲರ ಸಹಕಾರದಿಂದ ಚಿತ್ರೋತ್ಸವ ಮುಗಿಸಿದ್ದೇವೆ ; ತೃಪ್ತಿ ತಂದಿದೆ. ಮತ್ತೊಮ್ಮೆ ಟ್ರಸ್ಟ್‌ನ ಮಂಡಳಿಯ ಸಹಕಾರ, ಕಡಿದಾಳ್ ಪ್ರಕಾಶ್ ಅವರ ಕಾಳಜಿಯನ್ನು ಮರೆಯಲಾಗದು.