Archive for the ‘ಹೊಸ ಸಿನಿಮಾ’ Category
ಮನೆಗೊಬ್ಬ ಮಂಜುನಾಥ…ಮೇಡ್ ಇನ್ ಇಂಡಿಯಾ..!
ಎದ್ದೇಳು ಮಂಜುನಾಥ ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಾದವು. ಟಾಕೀಸಿನಲ್ಲೂ ಜನರಿದ್ದಾರೆ. ಗುರುಪ್ರಸಾದರ ಮುಖವರಳಿದೆ, ಜಗ್ಗೇಶ್ ರದ್ದೂ ಸಹ. ಪಾತ್ರಕ್ಕೆ ಒಂದು ಬಗೆಯ ಬೂಸ್ಟ್ ಕೊಡುವ ಜಗ್ಗೇಶ್ ಈ ಪಾತ್ರವನ್ನೂ ನಿಭಾಯಿಸಿರುವುದು ಸಲೀಸಲಾಗಿಯೇ. ಅದಕ್ಕಿಂತಲೂ ನಿರ್ದೇಶಕ ತನಗೆಂದೇ ಈ ಪಾತ್ರ ಸೃಷ್ಟಿಸಿದ್ದಾನೆ ಎಂದು ಅಭಿನಯಿಸಿದ್ದಾರೆ. ತಬ್ಲಾ ನಾಣಿ ಹಾಗೂ ನಟಿ ಯಜ್ಞಾ ಶೆಟ್ಟಿ ಸಮರ್ಥವಾಗಿಯೇ ಜೀವ ತುಂಬಿದ್ದಾರೆ ಎನ್ನುತ್ತಾರೆ ನಿರಮಿತ್ರ.
ಎದ್ದೇಳು ಮಂಜುನಾಥ…!
ಒಂದೇ ಮಾತಿನಲ್ಲಿ ಹೇಳುವುದಾದರೆ ಎದ್ದಿರುವುದು ನಿಜ. ಸಿನಿಮಾದ ಕೊನೆಯ ದೃಶ್ಯದವರೆಗೂ ನಗಿಸಿ, ನಗಿಸಿ, ಕೊನೆಗೊಮ್ಮೆ ಸುಖಾಂತ (ಹ್ಯಾಪಿ ಎಂಡಿಂಗ್) ಎನ್ನಬಹುದಾದ ದುಃಖಾಂತವನ್ನು ಕೊಡುವ ಚಿತ್ರ ಖುಷಿ ಕೊಡುತ್ತದೆ. ಗುರುಪ್ರಸಾದರು ಕಥಾ ವಸ್ತುವಿನ ಬಗೆಗೆ ನೋಡುವ ದೃಷ್ಟಿಯೇ ವಿಶಿಷ್ಟ ಎನಿಸುತ್ತದೆ. ಅದರಂತೆಯೇ ಅದನ್ನು ನಿರ್ವಹಿಸುವುದರಿಂದ ಎಲ್ಲೂ ಲಡ್ಡು ಲಡ್ಡಾದ ರೇಷ್ಮೆ ಎಳೆಯಂತೆ ತೋರುವುದಿಲ್ಲ.
ಕೆಲವೊಂದು ಚಿತ್ರಗಳಿವೆ…ನೋಡಲು ಬಹಳ ಚೆಂದ. ಆದರೆ ನಿರ್ವಹಣೆಯ ಗುಣಮಟ್ಟದಿಂದ ಅದು ಒಂದಕ್ಕೊಂದು ತಾಳೆ ಹೊಂದದ ದೃಶ್ಯಗಳಂತಿರುತ್ತವೆ. ಇನ್ನೂ ಕೆಲವೊಮ್ಮೆ ಪ್ರತಿ ಫ್ರೇಮ್ ಇಷ್ಟವಾಗುತ್ತದೆ, ಆದರೆ ಒಟ್ಟಂದ ನೀಡುವುದಿಲ್ಲ. ಅದಕ್ಕೇ ಹೇಳಿದ್ದು ರೇಷ್ಮೆ ಎಳೆ ನೋಡಲು ಚೆಂದವೇ. ಆದರೆ ಅದು ಲಡ್ಡು ಲಡ್ಡು (ದುರ್ಬಲ). Read the rest of this entry »
ನ್ಯೂಯಾರ್ಕ್ ಇಂದು ತೆರೆಗೆ
ಜಾನ್ ಇಬ್ರೆಹಾಂ, ನೀಲ್ ನಿತಿನ್ ಮುಖೇಶ್, ಕತ್ರೀನಾ ಕೈಫ್ ಅಭಿಯನಯದ ನ್ಯೂ ಯಾರ್ಕ್ ಚಿತ್ರ ಇಂದು ತೆರೆ ಕಂಡಿದೆ. ಕಾಬೂಲ್ ಎಕ್ಸ್‌ಪ್ರೆಸ್ ಚಿತ್ರ ನಿರ್ದೇಶಿಸುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ ನಿರ್ದೇಶಕ ಕಬೀರ್ ಖಾನ್‌ರ ಎರಡನೆಯ ಚಿತ್ರವಿದು. ಬಹುಕೋಟಿ ವೆಚ್ಚದ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿ ನಡೆದಿದೆ. 9/11 ಘಟನೆಯ ಜಾಡು ಹಿಡಿದು ಚಿತ್ರ ನಿರ್ದೇಶಿಸಿ ಸುದ್ದಿ ಮಾಡಿದ್ದಾರೆ ಕಬೀರ್ ಖಾನ್. ಕಾಬೂಲ್ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಅಫ್ಘಾನಿಸ್ತಾನದ ನೈಜ ಚಿತ್ರಣದೊಂದಿಗೆ ಅಲ್ಲಿನ ಸಂಸ್ಕೃತಿಯನ್ನೂ ಬಿಂಬಿಸುವಲ್ಲಿ ಕಬೀರ್ ಯಶಸ್ಸು ಗಳಿಸಿದ್ದರು.

ಓಮರ್, ಸ್ಯಾಮ್ ಹಾಗೂ ಮಾಯಾ ಎಂಬ ಮೂವರು ಸ್ನೇಹಿತರ ಜೀವನದಲ್ಲಿ ಒಂದು ದಿನ ಆಗುವ ಬದಲಾವಣೆ ಚಿತ್ರದ ಕತೆ. ಖ್ಯಾತ ನಟ ಇರ್ಫಾನ್ ಖಾನ್ ಎಫ್‌ಬಿಐ ಏಜೆಂಟ್ ರೋಶನ್ ಪಾತ್ರದಲ್ಲಿದ್ದಾರೆ. ಯಶ್‌ರಾಜ್ ಲಾಂಛನದಡಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಚಿತ್ರಕ್ಕೆ ಕತೆಯೂ ಅವರದ್ದೇ. ಪ್ರೀತಮ್ ಸಂಗೀತ ನಿರ್ದೇಶನ, ಜ್ಯೂಲಿಯಾಸ್ ಪಾಕಿಯಾನ್ ಹಿನ್ನೆಲೆ ಸಂಗೀತ, ಸಂದೀಪ್ ಶ್ರೀವಾಸ್ತವ ಚಿತ್ರಕತೆ ನಿರೂಪಿಸಿದ್ದಾರೆ. ಆಷಾಢ ಮಾಸದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಬಹು ನಿರೀಕ್ಷೆಯ ಚಿತ್ರವಿದು.
ವರ್ಮಾರನ್ನು ಹೆದರಿಸಿ…ಸಾಕು !
ಹೊಸ ಸಿನಿಮಾ ‘ಆಗ್ಯಾತ್” ಬಿಡುಗಡೆಯಾಗಿದೆ. ರಾಂಗೋಪಾಲ್ ವರ್ಮ ಯಾವಾಗಲೂ ಚಿತ್ರ ಪ್ರಚಾರಕ್ಕೆ ಒಂದು ತಂತ್ರ ಹೊಸೆದೇ ಹೊಸೆಯುತ್ತಾರೆ. ಈ ಬಾರಿಯೂ ಹೊಸ ತಂತ್ರವಿದೆ.
ಪ್ರೇಕ್ಷಕರನ್ನು ಹೆದರಿಸುವ ಸಿನಿಮಾಗಳನ್ನು ನಿರ್ದೇಶಿಸುವ ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾರರ್ ಚಿತ್ರ ಸಿದ್ಧಪಡಿಸಿದ್ದಾರೆ. ವರ್ಮಾರ ಹೊಸ ಚಿತ್ರ ಅಗ್ಯಾತ್ ಶುಕ್ರವಾರ ತೆರೆ ಕಂಡಿದೆ. ಶ್ರೀಲಂಕಾದ ಅರಣ್ಯದಲ್ಲಿ ಚಿತ್ರಿಸಲಾಗಿರುವ ಈ ಚಿತ್ರ ಯಥಾ ಪ್ರಕಾರ ಅಜ್ಞಾತ ವಸ್ತುವೊಂದು ಚಿತ್ರ ನಿರ್ಮಾಣ ತಂಡದ ಸದಸ್ಯರನ್ನು ಕೊಲ್ಲುವ ಕತೆ ಹೊಂದಿದೆ.
ನಿತಿನ್, ಪ್ರಿಯಾಂಕಾ ಕೊಠಾರಿ, ಗೌತಮ್, ರವಿ ಕಾಳೆಯಂತಹ ಆಫ್ ಬೀಟ್ ತಾರೆಗಳು ಚಿತ್ರದಲ್ಲಿದ್ದಾರೆ. ಚಿತ್ರ ನಿರ್ಮಾಣವಾಗಿ ಹಲವು ತಿಂಗಳುಗಳೇ ಕಳೆದಿವೆ, ಈ ಮಧ್ಯೆ ವರ್ಮಾ ಫೂಂಕ್ ಹಾಗೂ ರಣ್ ಚಿತ್ರದಲ್ಲಿ ವರ್ಮಾ ತೊಡಗಿಸಿಕೊಂಡಿದ್ದರಿಂದ ಬಿಡುಗಡೆ ವಿಳಂಬವಾಗಿದೆ. ರಿಡ್ಲಿ ಸ್ಕಾಟ್‌ರ ಏಲಿಯನ್ ಹಾಗೂ ಜಾನ್ ಕಾರ್ಪೆಂಟರ್, ಬ್ಲೇರ್ ವಿತ್ ಪ್ರೆಸೆಂಟ್‌ನಂತಹ ಚಿತ್ರಗಳ ಮೂಲಕ ಪ್ರಭಾವಿತರಾಗಿರುವ ವರ್ಮಾ ಹೊಸ ಕತೆ, ವಿಭಿನ್ನ ನಿರೂಪಣೆಯ ಮೂಲಕ ಜನರನ್ನು ಹೆದರಿಸಲಿದ್ದೇನೆ ಎನ್ನುತ್ತಾರೆ ರಾಮ್‌ಗೋಪಾಲ್. ಈ ಮೊದಲು ಫೂಕ್, ಡರ್ನಾ ಮನಾ ಹೈ ನಂತಹ ಚಿತ್ರಗಳಲ್ಲೂ ಇದೇ ವಿಧಾನ ಬಳಸಿದ್ದರು ವರ್ಮಾ.

ಚಿತ್ರದ ಪ್ರಚಾರಕ್ಕಾಗಿ ಹೊಸ ತಂತ್ರವೊಂದನ್ನೂ ವರ್ಮಾ ಕಂಡುಕೊಂಡಿದ್ದಾರೆ. ತಮ್ಮಂತೆ ಪ್ರೇಕ್ಷಕರನ್ನು ಬೆದರಿಸಬಲ್ಲ ನಿರ್ದೇಶಕನ ತಲಾಶ್ ಈ ಚಿತ್ರದ ಮೂಲಕ ನಡೆಸಲಿದ್ದಾರೆ. ಹೊಸ ಹಾರರ್ ನಿರ್ದೇಶಕನ ಹುಡುಕಾಟಕ್ಕಾಗಿ ಅಗ್ಯಾತ್ ಸ್ಪರ್ಧೆ ಆಯೋಜಿಸಲಾಗಿದ್ದು, ಭಾವಿ ನಿರ್ದೇಶಕರಾಗಬಯಸುವವರು ಹ್ಯಾಂಡಿ ಕ್ಯಾಮ್, ಮೊಬೈಲ್, ಡಿಜಿಟಲ್ ಕ್ಯಾಮೆರಾ ಅಥವಾ ಇನ್ನಾವುದೇ ಕ್ಯಾಮೆರಾ ಬಳಸಿ ಚಿಕ್ಕ ಹಾರರ್ ಚಿತ್ರವೊಂದನ್ನು ನಿರ್ಮಿಸಿ ಡಿವಿಡಿ ಅಥವಾ ಕೊರಿಯರ್ ಮೂಲಕ ವರ್ಮಾಗೆ ಕಳುಹಿಸಬೇಕು. ಆಯ್ಕೆಯಾದವರಿಗೆ ವರ್ಮಾರ ಮುಂದಿನ ಹಾರರ್ ಚಿತ್ರ ನಿರ್ದೇಶಿಸುವ ಸುಯೋಗ.
ಈ ಬಗ್ಗೆ ಮಾಹಿತಿಗಾಗಿ http://www.agyat-theunknown.com ಜಾಲಾಡಬೇಕು. ಬಹು ನಿರೀಕ್ಷಿತ ಫೂಂಕ್ ಚಿತ್ರದ ಪ್ರಚಾರಕ್ಕಾಗಿ ಹೊಸ ತಂತ್ರವನ್ನು ವರ್ಮಾ ಬಳಸಿದ್ದರು. ಚಿತ್ರವನ್ನು ಒಬ್ಬರೇ ಸಿನಿಮಾ ಮಂದಿರದಲ್ಲಿ ನೋಡಿದರೆ ಬಹುಮಾನವನ್ನೂ ನೀಡುವುದಾಗಿ ಘೋಷಿಸಿದ್ದರು. ಬೆಂಗಳೂರಿನ ಯುವಕನೊಬ್ಬ ಈ ಸಾಹಸ ಮಾಡಿ ಪ್ರಚಾರವನ್ನೂ ಪಡೆದುಕೊಂಡಿದ್ದರು. ಅಂದ ಹಾಗೆ ಅಗ್ಯಾತ್ ಪ್ರೇಕ್ಷಕರನ್ನು ಬೆದರಿಸುತ್ತದೋ ಅಥವಾ ಚಿತ್ರವೇ ಅಜ್ಞಾತವಾಗುತ್ತದೋ ಎನ್ನುವುದು ಸದ್ಯ ಮಟ್ಟಿಗೆ ಕುತೂಹಲಕ್ಕೆ ಕಾರಣವಾಗಿದೆ.
ಹಿಂದಿಗೂ ಬಂದರು ಸಿಲ್ವೆಸ್ಟರ್ ಸ್ಟಾಲೋನ್ !
ಇದು ಹೊಸ ಚಿತ್ರದ ಬಗೆಗಿನ ಮಾಹಿತಿ. ಯಾರು ಬೇಕಾದರೂ ಹೊಸದಾಗಿ ಬಿಡುಗಡೆಯಾಗುವ ಚಿತ್ರಗಳ ಬಗ್ಗೆ ಮಾಹಿತಿ ಕಳುಹಿಸಬಹುದು. ರವಿರಾಜ್ ಗಲಗಲಿ ಅವರು “ಕಂಬಕ್ತ್ ಇಶ್ಕ್” ಚಿತ್ರದ ಬಗ್ಗೆ ಕಳುಹಿಸಿರುವುದನ್ನು ಇಲ್ಲಿ ನೀಡಲಾಗಿದೆ.
ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ತಮಿಳು ಅಥವಾ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳ ಹಿಂದೆ ಸುಳಿದಾಡಿತ್ತು. ರಿಚರ್ಡ್ ಅಟೆನ್‌ಬರೋರಂತಹ ನಟರನ್ನು ಬಿಟ್ಟರೆ ಹಿಂದಿ ಚಿತ್ರಗಳಲ್ಲಿ ಪ್ರಖ್ಯಾತ ಹಾಲಿವುಡ್ ನಟರು ಅಭಿನಯಿಸಿದ್ದು ಕಡಿಮೆ. ಕೆಲ ನಿರ್ಮಾಪಕರು ಅರ್ನಾಲ್ಡ್ ಶ್ವಾಜ್‌ನೆಗರ್, ಸಿಲ್ವೆಸ್ಟರ್ ಸ್ಟಾಲೋನ್ ನಮ್ಮ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಿ ಪ್ರಚಾರ ಗಿಟ್ಟಿಸಿ ಕೊನೆಗೆ ಸ್ವದೇಶಿ ನಟರಲ್ಲೇ ಚಿತ್ರದ ರೀಲು ಸುತ್ತಿದ ಉದಾಹರಣೆಗಳೂ ಇವೆ.

ಹಾಲಿವುಡ್‌ನ ದೊಡ್ಡ ನಾಯಕನೊಬ್ಬ ಹಿಂದಿ ಚಿತ್ರಗಳಲ್ಲಿ ನಟಿಸಬಹುದಾ? ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಈ ಸಾಧ್ಯತೆಯನ್ನು ನಿಜವಾಗಿಸಿರುವುದು ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾವಾಲಾ. ತಮ್ಮ ಹೊಸ ಚಿತ್ರ ಕಂಬಕ್ತ್ ಇಶ್ಕ್‌ನಲ್ಲಿ ರ‍್ಯಾಂಬೋ ಖ್ಯಾತಿಯ ಸಿಲ್ವೆಸ್ಟರ್ ಸ್ಟಾಲೋನ್‌ರನ್ನು ಕರೆತಂದಿದ್ದಾರೆ ಸಾಜಿದ್. ಅಕ್ಷಯ್ ಕುಮಾರ್, ಕರೀನಾ ಕಪೂರ್ ಏಳನೆ ಬಾರಿ ಯುಗಳ ಗೀತೆ ಹಾಡಲಿರುವ ಈ ಚಿತ್ರದಲ್ಲಿ ಸ್ಟಾಲೋನ್‌ರೊಂದಿಗೆ ಹಾಲಿವುಡ್‌ನ ಡೆನ್ನಿಸ್ ರಿಚರ್ಡ್ಸ್, ಬ್ರಾಂಡನ್ ರೂಟ್ ಕೂಡ ನಟಿಸಿದ್ದಾರೆ. Read the rest of this entry »
ಫಿರಾಕ್: ಹೇಳೋ ಹಾಗಿಲ್ಲ ಬಹುಪರಾಕ್
ನಂದಿತಾದಾಸ್ ಒಳ್ಳೆ ಅಭಿನೇತ್ರಿಯಾಗಿಯೇ ಜನಪ್ರಿಯರಾದವರು. ಅವರೀಗ ಮೊದಲ ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಅವರ ಮೊದಲ ಚಿತ್ರ ಗುಜರಾತ್ ಗಲಭೆ ನಂತರದ ಸನ್ನಿವೇಶಗಳ ಕುರಿತ “ಫಿರಾಕ್” ಬಿಡುಗಡೆಯಾಗಿದೆ. ದಿಲ್ಲಿಯಲ್ಲಿರುವ ವಿನಾಯಕ ಭಟ್ಟ ತಮ್ಮ ಅನಿಸಿಕೆಯನ್ನು ಕಳುಹಿಸಿದ್ದಾರೆ. ಇದನ್ನು ಓದಿ, ನಿಮ್ಮ ಅನಿಸಿಕೆ ತಿಳಿಸಿ.

ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು. ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ಈ ಬಾರಿ ಮೊದಲ ದಿನವೇ ನೋಡಿಬಿಟ್ಟೆ!
ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಬಹಳ ಇಷ್ಟವಾಗಲೂ ಇಲ್ಲ. ಗುಜರಾತ್‌ನ ಮಲ್ಟಿಫ್ಲೆಕ್ಸ್‌ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸಿನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್‌ನ ಗೋಧ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲವೇನೋ ತಣಿಯಿತು. ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂದಂತೆ ಅನಿಸುತ್ತಿತ್ತು.
ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ಸಫಲವಾಗಿಲ್ಲ.
ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾರೆ ನಿರ್ದೇಶಕಿ. ಆದರೆ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸುವಲ್ಲಿ ಒಳ್ಳೆ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸುವ ಪ್ರಜ್ಞೆಯೇ ಬೇಕಿತ್ತು ಎನಿಸುತ್ತದೆ. ಅದಾಗಿಲ್ಲ.
ಗಲಭೆಯ ಒಂದು ತಿಂಗಳ ನಂತರದ ಕತೆಯದು. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು’ ಎಂದು ಹೇಳಿಸುತ್ತಾರೆ ನಂದಿತಾ. ವಾಸ್ತವವಾಗಿ, ಯಾವ ಪೊಲೀಸ್ ಹೀಗೆ ಹೇಳಲು ಸಾಧ್ಯ?
ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವಂತಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜದ ನಂಬಿಕೆ ಕುಸಿಯುವಂತೆ ಮಾಡುತ್ತಾರೆ. ಅದು ನನಗೆ ಇಷ್ಟವಾಗಲಿಲ್ಲ. ಯಾಕೆಂದರೆ, ಹೀಗೆ ಒಂದು ಮಾಧ್ಯಮದಲ್ಲಿ ಬಿಂಬಿಸುವುದು ಸಮಾಜದ ಹಿತದೃಷ್ಟಿಯಲ್ಲೇ ಎಷ್ಟು ಅಪಾಯಕಾರಿ ಎಂಬುದು ಬಹುಶಃ ಅವರು ಮರೆತಿರಬಹುದು.
ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬೇಕು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿಯೂ ಅಷ್ಟೇ. ಗಲಭೆ ನಂತರದ ಕೆಲವು ದೃಶ್ಯಗಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ. ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!
ಮಾರ್ಚ್ 18 ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರುಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇಕೆ ಎಂದು ಅರ್ಥವಾಗಲಿಲ್ಲ.
ನನ್ನ ಕೆಲವು ಅನಿಸಿಕೆಗಳಿವೆ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿ ಸಾಮಾನ್ಯವೇ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ. ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ.
ಆದರೆ ಸಿನಿಮಾ ನೋಡಿದರೆ ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂಥ ನಟರನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು. ಆದರೆ ಅದೂ ಆಗಿಲ್ಲ.
ಈ ಸಿನಿಮಾಕ್ಕೆ 5 ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿರುವವರಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ಅಂದುಕೊಂಡಿದ್ದರೆ ನೋಡಬಹುದು. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್‌ಗಳ ಅರ್ಥ ಸೂಚ್ಯ. ಆದ್ದರಿಂದ ಸಾಮಾನ್ಯನಾದವ ಅರ್ಥ ಮಾಡಿಕೊಳ್ಳುವುದು ಕಷ್ಟ.
ಸಿನಿಮಾ ಕುರಿತು ಇದು ನನ್ನ ಅನಿಸಿಕೆ. ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ತುಂಬ ಇಂಟಲೆಕ್ಚುಯಲ್ ಆದ, ಸೂಚ್ಯಾರ್ಥದ ಸಿನಿಮಾ ನನಗೆ ಕಷ್ಟ. ಸಿನಿಮಾಗಳು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವವ ನಾನು ಹಳೇ ಜಗ್ಗೇಶ್ ಫಿಲ್ಮ್ ಗಳನ್ನು ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ‘ಫಿರಾಕ್’ನಂಥ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ.
ಇದು “ಮಂಗ”ನಾಟವಯ್ಯ, delhi6 !

ರವಿರಾಜ್ ಗಲಗಲಿ ಅವರೂರಿನಲ್ಲಿ ಡೆಲ್ಲಿ6 ಚಿತ್ರ ನೋಡಿದ್ದಾರೆ. ತಮ್ಮ ಮೊದಲ ಅನಿಸಿಕೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ನೀವೂ ನೋಡಿದ್ದರೆ ನಿಮ್ಮ ಅಭಿಪ್ರಾಯವನ್ನು saangatya@gmail.comಗೆ ಕಳುಹಿಸಿ. ನಮ್ಮಲ್ಲಿ ಪ್ರಕಟಿಸುತ್ತೇವೆ.
*
ದಿಲ್ಲಿ ದೇಶದ ರಾಜಧಾನಿಯಷ್ಟೇ ಅಲ್ಲ, ಸಂಸ್ಕೃತಿಗಳ ರಾಜಧಾನಿಯೂ ಹೌದು. ಮೊಘಲರ ಕಲೆ, ಸೂಫಿ ಹಾಡುಗಾರಿಕೆ, ನಾನಾ ಧರ್ಮಗಳ ದೇವರು ದಿಂಡರು, ಬಳೆ, ಜಿಲೇಬಿ, ಆ ಕಾಲದ ಟಾಂಗಾ…ಹೀಗೆ ಅದು ಹಲವು ಸಂಸ್ಕೃತಿಗಳ, ಭಾವನೆಗಳ ರಂಗಭೂಮಿ. ಇಂತಹ ವಿಶಾಲ ಮಿಶ್ರ ಸಂಸ್ಕೃತಿಯನ್ನು ಬಗೆ, ಬಗೆಯಾಗಿ ತೆಗೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ.
ಪ್ರತಿ ಮನುಷ್ಯನಲ್ಲೂ ಮಂಗನ ಸ್ವಭಾವವಿರುತ್ತದೆ, ಅದು ಆಗಾಗ ಇಣುಕಿ ನೋಡಲೂ ಪ್ರಯತ್ನ ಪಡುತ್ತಿರುತ್ತದೆ. ಇಂತಹ ಮನವೆಂಬ ಮರ್ಕಟದ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗಬಹುದು ? ಚಿತ್ರದಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕಿದ್ದಾರೆ ನಿರ್ದೇಶಕ. ನಾನಾ ಧರ್ಮಗಳ, ಸಂಸ್ಕೃತಿಯ ಹಳೆಯ ದಿಲ್ಲಿಯಲ್ಲಿ ಅಜ್ಞಾತ ಮಂಗವೊಂದು ದಾಳಿ ನಡೆಸಿದೆ ಎನ್ನುವ ಸುದ್ದಿ ವಾಹಿನಿಗಳ ಮೂಲಕ ಬೆಳಕು ಕಾಣುತ್ತದೆ. ಮಂಗದ ಸಾಕ್ಷಾತ್ ದರ್ಶನ ಯಾರಿಗೂ ಆಗಿರುವುದಿಲ್ಲವಾದರೂ, ಮಂಗನ ಬಗ್ಗೆ ಭಯ ಅದರ ಬಾಲದಷ್ಟೇ ವ್ಯಾಪಕವಾಗುತ್ತದೆ. ವಿದೇಶದಲ್ಲಿರುವ ನಾಯಕ ರೋಶನ್ ಹೃದಯಾಘಾತಕ್ಕೊಳಗಾದ ಅಜ್ಜಿಗೆ ಭಾರತ ದರ್ಶನಕ್ಕಾಗಿ ಕರೆದುಕೊಂಡು ಬರುತ್ತಾನೆ.
ಈ ಮಧ್ಯೆ ಮಂಗನ ಕಾಟ ವಿಪರೀತವಾಗುತ್ತದೆ, ಅದರೊಂದಿಗೆ ಧರ್ಮಗಳ ನಡುವಿನ ಬೇಧ, ಮತಾಂಧತೆ, ದ್ವೇಷದ ದರ್ಶನವೂ ಆತನಿಗಾಗುತ್ತದೆ. ದೆಹಲಿಯ ಸುಪ್ರಸಿದ್ಧ ರಾಮಲೀಲೆಯ ಮೂಲಕ ಮಾನವನೊಳಗಿನ ದ್ವೇಷ, ಅಹಂಕಾರ ಹಾಗೂ ಮೂಢ ನಂಬಿಕೆಗಳನ್ನು ಬಯಲಾಗಿಸುತ್ತ ನಾಯಕ ತನಗರಿವಿಲ್ಲದಂತೆ ವ್ಯವಸ್ಥೆಯ ಭಾಗವಾಗುತ್ತಾನೆ.
ಈ ಮಧ್ಯೆ ಪ್ರೀತಿಯಲ್ಲೂ ಬೀಳುವ ನಾಯಕ ಕೊನೆಗೆ ಮಂಗನಾಟದ ಬಗ್ಗೆ ಸಂಶೋಧನೆ ನಡೆಸುತ್ತಾನೆ. ಪ್ರೀತಿ ಮಾಡುವ ಭರದಲ್ಲಿ ‘ಮಂಗ’ನಾಗುವ ಮೂಲಕ ಎಲ್ಲ ಸಮಸ್ಯೆಗಳಿಗೂ ಅಂತ್ಯ ಕಾಣಿಸುತ್ತಾನೆ. ಮತಾಂಧತೆಯ ಬಗ್ಗೆ ಹಲವು ಚಿತ್ರಗಳು ಬಂದಿವೆ. ಆದರೆ ಡೆಲ್ಲಿ6 ಮಾತ್ರ ಇವುಗಳಲ್ಲಿ ಭಿನ್ನ, ವಿಭಿನ್ನ. ಕೈಲಾಶ್ ಖೇರ್ ಹಾಡಿರುವ ರಾಮಲೀಲಾ ಗೀತೆಗಳೊಂದಿಗೆ ಸೂಫಿ ಗಾಯಕಿಯ ಜುಗಲ್ ಬಂದಿ ನಡೆಸಿದ್ದಾರೆ.
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. ಅತ್ಯುತ್ತಮ ಸಂಭಾಷಣೆ, ವರ್ಣರಂಜಿತ ದಿಲ್ಲಿಯನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಚಿತ್ರದ ವಸ್ತುವಿನ ಪ್ರತಿಬಿಂಬದಂತೆ ಹುಚ್ಚನೊಬ್ಬ ಕೈಯಲ್ಲಿ ಕನ್ನಡಿ ಹಿಡಿದು ಎಲ್ಲರಿಗೂ ನಿಮ್ಮ ಮುಖ ತೋರಿಸಿ ಎಂದು ಗಂಟು ಬೀಳುತ್ತಿರುತ್ತಾನೆ. ಕೊನೆಗೆ ಮಂಗನಾಟದ ರಹಸ್ಯ ಬಯಲಾದಾಗ ಆತನ ಕೈಯಲ್ಲಿ ಕನ್ನಡಿಯಿರುವುದಿಲ್ಲ, ಬದಲು ಆತನನ್ನು ಹುಚ್ಚ ಎಂದು ಜರಿದವರು ಮನದ ಮಾತಿಗೆ ಕನ್ನಡಿ ಹಿಡಿದಿರುತ್ತಾರೆ. ಆತ ಹೇಳುವ ಮಾತು ಕೇಳಿ, ಜರ್ರೆ ಜರ್ರೆ ಪರ ಉಸಿ ಕಾ ನೂರ ಹೆ ಫಕೀರ್, ಬಂದೆ ತುಮ್ ಕ್ಯೂ ಝಗಡ್ ತೇ ಹೋ…ಕಣ ಕಣದಲ್ಲೂ ಭಗವಂತನಿದ್ದಾನೆ, ಆತನ ಹೆಸರಿನಲ್ಲಿ ನೀವೇಕೆ ಬಡಿದಾಡುತ್ತೀರಿ ?. ನಾಯಕಿ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದವಳು, ಅವಳಿಗೋ ಸ್ಟಾರ್ ಆಗುವ ಆಸೆ, ಆದರೆ ತಂದೆಗೆ ಮಗಳ ಮದುವೆ ಮಾಡುವ ತವಕ. ಬಂಧನಗಳನ್ನೆಲ್ಲ ಮೀರಬೇಕು ಎನ್ನುವ ಆಕೆ ತಂದೆ ಸಾಕಿದ ಪಾರಿವಾಳ ಮಸಕ್ಕಲಿ ಬಗ್ಗೆ ಹೇಳುವ ಮಾತು , ಅದು ಹಾರಲು ಸಾಧ್ಯವಿಲ್ಲ, ಏಕೆಂದರೆ ಅದು ಅಪ್ಪನ ಪ್ರೀತಿಯ ಪಾರಿವಾಳ. ಅದರ ರೆಕ್ಕೆಗಳನ್ನೂ ಕಟ್ಟಿಹಾಕಲಾಗಿದೆ, ನನ್ನಂತೆ.
ಧರ್ಮಾಂಧತೆ, ಕೋಮು ಸಾಮರಸ್ಯದ ವಿಷಯವನ್ನು ಭಾಷಣ, ಗದ್ದಲ ಹಾಗೂ ಹೊಡೆದಾಟಗಳಿಲ್ಲದೆ ಶಾಂತವಾಗಿ ನಿರ್ವಹಿಸಿದ ಪರಿ ವಿಸ್ಮಯಕಾರಿ. ಸೋನಮ್ ಕಪೂರ್, ಓಂ ಪುರಿ, ವಹಿದಾ ರೆಹಮಾನ್, ಅತುಲ್ ಕುಲಕರ್ಣಿ, ಸೈರಸ್ ಸಾಹುಕಾರ್, ಪ್ರೇಮ್ ಚೋಪ್ರಾ ಮಿಂಚುತ್ತಾರೆ, ಆದರೆ ಮನಸ್ಸಿನಿಂದ ಮರೆಯಾಗುವುದಿಲ್ಲ.
ಮೊದಲ ಚಿತ್ರ ರಂಗ್ ದೇ ಬಸಂತಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೆಹ್ರಾ ತಮ್ಮ ಭೋರ್ಗರೆತ ಮುಂದುವರಿಸಿದ್ದಾರೆ. ಹಳೆ ದಿಲ್ಲಿಯ ಪಿನ್ ಕೋಡ್ ಸಂಖ್ಯೆ 6 ಆಗಿರುವುದರಿಂದ ಚಿತ್ರದ ಹೆಸರೂ ಹಾಗೆ ಇದೆ. ಈ ಚಿತ್ರ ಮಿಸ್ ಮಾಡಿಕೊಂಡರೆ ಮನದೊಳಗಿರುವ ಮಂಗನ ಕೈಯಲ್ಲಿ ನಾವೂ ಮಾಣಿಕ್ಯ ಕೊಡುವ ಸಾಧ್ಯತೆಗಳಿವೆ. ಒಮ್ಮೆ ನೋಡಬಹುದು, ಮತ್ತೊಮ್ಮೆ ನೋಡುವಂತಾದರೆ ಅದು ಮಂಗನ ತಪ್ಪಲ್ಲ !




