Archive for the ‘ಸೃಜನ್ ಅಂಕಣ’ Category
ದೇವಾನಂದ್, ದಿಲೀಪ್ ಕುಮಾರರ “ಇನ್ಸಾನಿಯತ್”
ಆ ಕಾಲದ ಹಿಂದಿ ಚಿತ್ರರಂಗದ ಅನಭಿಷಿಕ್ತ ದೊರೆಗಳಿಂತಿದ್ದ ದಿಲೀಪ್, ದೇವಾನಂದ್ ಒಬ್ಬ ದಕ್ಷಿಣದ ನಿರ್ದೇಶಕ/ ನಿರ್ಮಾಪಕನೊಂದಿಗೆ ಕೆಲಸ ಮಾಡಿದ್ದು ಆಗ ದೊಡ್ಡ ಟಾಕ್ (ಚರ್ಚೆಗೀಡಾದ ಸಂಗತಿ). ಚಿತ್ರದ ಮತ್ತೊಂದು ವಿಶಿಷ್ಟವೆಂದರೆ ಬೀನಾರಾಯಳ ಜೊತೆಯಲ್ಲಿ ನಟಿಸಿ ಆಕೆಯಷ್ಟೇ ಜನಪ್ರಿಯಳಾದ “ಜಿಪ್ಸಿ’ ಹೆಸರಿನ ಚಿಂಪಾಂಜಿ ಎನ್ನುತ್ತಾರೆ ಸೃಜನ್ ತಮ್ಮ ಅಂಕಣದಲ್ಲಿ.
ಭಾರತದಲ್ಲಿ ಸಿನಿಮಾಗಳೆಂದರೆ “ಎಂಟರ್‌ಟೈನ್‌ಮೆಂಟ್’ ಎಂಬ ಗಾಢ ನಂಬಿಕೆ ನಿನ್ನೆ ಇಂದಿನದಲ್ಲ. ಸಿನಿಮಾ ಹುಟ್ಟಿದಾಗಿನಿಂದಲೇ ನಿರ್ದೇಶಕರು ನಿರ್ಮಾಪಕರು ಪ್ರೇಕ್ಷಕನ ತಲೆ ತುಂಬಿದ್ದು ಸಿನಿಮಾ ಎಂದರೆ ಅತಿರೇಕದ “ಮನರಂಜನೆ’ ಎಂತಲೇ !
ಇದೇ ಸೂತ್ರ ಇಂದಿಗೂ ಸಾಕಷ್ಟು ಚಿತ್ರಗಳಿಗೆ ವರ್ತಿಸುತ್ತದೆ. ಪ್ರತಿಯೊಂದು ತುಂಬಿದ ಗಲ್ಲಾಪಟ್ಟಿಗೆಯ ಹಿಂದೆಯೂ ಇದೇ ಫಾರ್ಮುಲಾ ಇದೆ. ಹಾಗೆ ನೋಡಿದರೆ ಚಿತ್ರ ನಿಮಾಣವೂ ಕೂಡಾ. “ವ್ಯಾಪಾರವೇ’ ಅಲ್ಲವೇ ? ಎಷ್ಟೊಂದು ವ್ಯಾಪಾರಿ ಚಿತ್ರಗಳು ಇಂದಿಗೂ ಮೈಲಿಗಲ್ಲುಗಳಾಗಿ ನಿಂತಿವೆ. 
ಅಂದರೆ ಮನರಂಜನೆ + ಮನರಂಜನೆ = ಬಾಕ್ಸಾಫೀಸ್ ಸಕ್ಸೆಸ್ ಎಂಬ ಫಾರ್ಮುಲಾ ಎವರ್‌ಗ್ರೀನ್ ಅಂದ ಹಾಗಾಯ್ತು. 50 ರ ದಶಕದಲ್ಲಿ ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ “ಜೆಮಿನಿ’ ಕೂಡ ಇದೇ ಫಾರ್ಮುಲಾದಲ್ಲಿ ನಿರ್ಮಿಸಿದ ಚಿತ್ರ “ಇನ್ಸಾನಿಯತ್’. Read the rest of this entry »
ಅಂದಿನ ಬೆರಗು ಮರಾಠಿಯ ‘ಬ್ರಹ್ಮಚಾರಿ’
ನಗುತ್ತಲೇ, ನಗಿಸುತ್ತಲೇ ಸಾಮಾಜಿಕ ಲೋಪದೋಷಗಳನ್ನು ಎತ್ತಿ ತೋರಿಸಿದ ಸಿನಿಮಾಗಳನ್ನು ನಿರ್ಮಿಸಿದ / ನಿರ್ದೇಶಿಸಿದ ಕೆಲವೇ ಭಾರತೀಯರಲ್ಲಿ ಮಾಸ್ಟರ್ ವಿನಾಯಕ್ ಒಬ್ಬರು.
ಸಾಧಾರಣ ಯುವಕನಾದ ಆಡಂಬರ್ ತೀವ್ರ ಕಾಮನೆಗಳ ವ್ಯಕ್ತಿ. ಒಂದು ಭಾಷಣದಿಂದ ಉತ್ತೇಜಿತನಾದ ಆಡಂಬರ್ ಹನುಮಾನ್ ಜಯಂತಿಯ ಉತ್ಸವದಲ್ಲಿ ತಾನೂ ಕೂಡ ಥಟ್ಟನೇ ಬ್ರಹ್ಮಚಾರಿಯಾಗಿಯೇ ಬದುಕಬೇಕೆಂಬ ಮಹತ್ವಾಕಾಂಕ್ಷೆ ಮೂಡುತ್ತದೆ. Read the rest of this entry »
ದಾಸಿ ಅಪರಂಜಿ- ಆ ಕಾಲದ ರಂಜನೆಯ ಚಿತ್ರ
ಸೃಜನ್ ಈ ಬಾರಿ ಬರೆದಿರುವ ಚಿತ್ರ ತಮಿಳು “ದಾಸಿ ಅಪರಂಜಿ’ ಕುರಿತಾದದ್ದು. ಹಿಂದಿ ಚಿತ್ರನಟಿ ರೇಖಾಳ ತಾಯಿ ಪುಷ್ಪವಲ್ಲಿಯ ಪ್ರತಿಭಾ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ.
ರಾಜ ವಿಕ್ರಮಾದಿತ್ಯನ ಪಾಲನೆಯಲ್ಲಿ ರಾಜಮನ್ನಣೆ ಪಡೆದ ಅಪರೂಪದ ರಾಜನರ್ತಕಿ, ದೇವದಾಸಿ-ಅಪರಂಜಿ, ರಾಜನ ಮಾತೇ ಮುತ್ತು ದಾಸಿಮಾತೇ ವೇದವಾಕ್ಯವೆಂಬಂತಿದ್ದ ವಿಕ್ರಮಾದಿತ್ಯದ ಪಾಲನೆಯಲ್ಲಿ ‘ಅಪರಂಜಿ’ ಕುರಿತು ಯಾರೂ ಮಾತನಾಡಬಾರದೆಂದು ಶಾಸನ ವಿಧಿಸಿದ ಎಚ್ಚರಿಕೆಯಾಗಿತ್ತು. ‘ಅಪರಂಜಿ ಕುರಿತು ಮಾತಾಡುವುದು, ಆಕೆಯನ್ನು ಕನಸು ಕಾಣುವುದು, ಕನವರಿಸುವುದು ನಿಷೇಧವಾಗಿತ್ತು’. ಚಕ್ರವರ್ತಿ ವಿಕ್ರಮಾದಿತ್ಯನ ಅಂತಃಪುರ, ಅಪರಂಜಿಯೊಂದಿಗೆ ಪ್ರತಿದಿನ ಕಾಮಕೇಳಿಗಳಿಂದ ವಿಲಾಸದಿಂದ ತುಂಬಿ ತುಳುಕುತ್ತಿತ್ತು.
1944 ರಲ್ಲಿ ‘ದಾಸಿ ಅಪರಂಜಿ’ ಹೆಸರಿನಿಂದ ಖ್ಯಾತ ಸಿನಿಮಾ ಸಂಸ್ಥೆ ‘ಜೆಮಿನಿ’ ಈ ಕಥೆಯನ್ನಾಧರಿಸಿ ಸಿನಿಮಾ ಮಾಡಿತು. Read the rest of this entry »
ಪೋಸ್ಟರ್ ಪ್ರಪಂಚದ ಮಾಂತ್ರಿಕ ಗಂಗಾಧರ್
ಕೈಯಿಂದ ಬರೆದ ಅದ್ಭುತ ವಿನ್ಯಾಸದ ದೊಡ್ಡ ಟೈಟಲ್ ಜೊತೆಯಲ್ಲೇ ಮುದ್ದಾದ ಅಕ್ಷರಗಳ ತಾಂತ್ರಿಕವರ್ಗದವರ ಹೆಸರುಗಳು..ಸಿನೆಮಾಗೆ ಸಂಬಂಧಪಟ್ಟಂತೆ ಕ್ಲೈಮಾಕ್ಸ್ ಜಲವರ್ಣ ದೃಶ್ಯಗಳು…ಹೀಗೆ ಹತ್ತು ಹಲವು ವಿಶಿಷ್ಟ…ಅದಕ್ಕಿಂತಲೂ ಹೆಚ್ಚಾಗಿ ಎಲ್ಲವೂ ಮಾನವ ಪ್ರತಿಭೆಯ ಅನಾವರಣ.
ಈ ಹೆಸರನ್ನು ದಕ್ಷಿಣ ಭಾರತದ ಪೋಸ್ಟರ್ ನೋಡುವ ಯಾವುದೇ ಪ್ರೇಕ್ಷಕ ಮರೆಯಲು ಸಾಧ್ಯವಿಲ್ಲ. 30-40 ವರ್ಷಗಳ ಹಿಂದಿನ ಸಿನಿಮಾ ಪೋಸ್ಟರ್ ಗಳನ್ನು ನೆನಪಿಸಿಕೊಳ್ಳಿ. ಕೈಯಿಂದ ಬರೆದ ಅದ್ಭುತ ವಿನ್ಯಾಸದ ದೊಡ್ಡ ಟೈಟಲ್ ಜೊತೆಯಲ್ಲೇ ಮುದ್ದಾದ ಅಕ್ಷರಗಳ ತಾಂತ್ರಿಕವರ್ಗದವರ ಹೆಸರುಗಳು..ಸಿನೆಮಾಗೆ ಸಂಬಂಧಪಟ್ಟಂತೆ ಕ್ಲೈಮಾಕ್ಸ್ ಜಲವರ್ಣ ದೃಶ್ಯಗಳು.ವಿಚಿತ್ರ ಆಕರ್ಷಕ ಬಣ್ಣಗಳ ನಾಯಕನ, ಅಥವಾ ನಾಯಕಿ ಪ್ರಧಾನ ಚಿತ್ರವಾದರೆ ನಾಯಕಿಯ ರೇಖಾ ಚಿತ್ರ .
ನಮ್ಮ ಬಾಲ್ಯದಲ್ಲಿ ಸಿನಿಮಾ ಪೋಸ್ಟರ್ ಗಳು ನಮಗೆ ಅದ್ಭುತ ಕಲಾವಿದನ
ಕಲಾಕೃತಿ ಗಳಂತ ಗೋಚರಿಸುತ್ತಿದ್ದವು .ಮತ್ತು ಅಂದಿನ ಪೋಸ್ಟರ್ ಕಲಾವಿದರಲ್ಲಿ ಗಂಗಾಧರ್ ನನ್ನ ಅತ್ಯಂತ ಮೆಚ್ಚಿನ ಕಲಾವಿದರಾಗಿದ್ದರು.ಈ ಪ್ಲಾಸ್ಟಿಕ್ ಪೋಸ್ಟರ್ ಯುಗ ಪ್ರಾರಂಭ ವಾಗುತ್ತಿದ್ದಂತೆ ಪೋಸ್ಟರ್ ಗಳಿಗೆ ಕಲಾ ಸ್ಪರ್ಶ ಕಮ್ಮಿಯಾಗುತ್ತ ಹೋಯಿತು, ಮತ್ತು ಜೊತೆಯಲ್ಲೇ ಈಶ್ವರ್,ಮಸ್ತಾನ್,ಸುರೇಶ,ಅಚು ಆಡ್ಸ್,ಪ್ರಕಾಶ್ ಚಿಕ್ಕ ಪಾಳ್ಯ ದಂತಹ ಕಲಾವಿದರ ಪೋಸ್ಟರ್ ಗಳು ಕಣ್ಣಿಗೆ ಬೀಳುತ್ತಿದ್ದವು.

ಗಂಗಾಧರ್ ‘ಹೆಸರಲ್ಲಿ ಒಂದು ಮೋಹಕತೆ ಇತ್ತು.ಕೇವಲ ಒಂದು ಅಡ್ಡವಾಗಿ ಸರಳ ರೇಖೆ ಎಳೆದು ಆಮೇಲೆ ಅದಕ್ಕೆ ಕೆಳಕ್ಕೆ ಸಣ್ಣ ರೇಖೆಗಳನ್ನು ಎಳೆಯುತ್ತಲೇ ನಾವೇ ಸ್ವಲ್ಪ ಹೊತ್ತು ಗಂಗಾಧರ್’ಗಳಾಗಿ ಹೋಗುತ್ತಿದ್ದವು.ಆಮೇಲೆ ನಮ್ಮ ಹೆಸರನ್ನು ಗಂಗಾಧರ್ ಶೈಲಿಯಲ್ಲಿ ಬರೆಯಲು ಅಭ್ಯಾಸ ಮಾಡುತ್ತಿದ್ದವು. Read the rest of this entry »
ಮರಾಠಿಯ “ಶ್ವಾಸ್” ನೋಡದೇ ಇರಲಾರದ ಚಿತ್ರ
‘ಶ್ವಾಸ್” ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದ ಮೊದಲ ಮರಾಠಿ ಚಿತ್ರ. ಐದು ದಶಕಗಳ ನಂತರ ಪುನಾ ಮರಾಠಿ ಚಿತ್ರರಂಗಕ್ಕೆ ವೈಭವ ತಂದುಕೊಟ್ಟ ಚಿತ್ರ ಎನ್ನುತ್ತಾರೆ ಸೃಜನ್.
ಶ್ವಾಸ್’ 2004 ರಲ್ಲಿ ಮರಾಠಿಯಲ್ಲಿ ತೆರೆ ಕಂಡ ಅದ್ಭುತ ಚಿತ್ರ. ಆಸ್ಕರ್ ಗೆ ಎಂಟ್ರಿ ಪಡೆದ ಮೊತ್ತ ಮೊದಲ ಮರಾಠಿ ಚಿತ್ರ ಕೂಡ. 50 ವರ್ಷಗಳ ಹಿಂದೆ ‘ಶ್ಯಾಮ್ ಚಿ ಆಯಿ’ ಚಿತ್ರಕ್ಕೆ ರಾಷ್ಟ್ರದ ‘ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಿಟ್ಟರೆ ‘ಶ್ವಾಸ್’ 5 ದಶಕಗಳ ನಂತರ ಪುನಃ ಆ ವೈಭವ ವನ್ನು ಮರಾಠಿ ಚಿತ್ರ ರಂಗಕ್ಕೆತಂದು ಕೊಟ್ಟಿದೆ. ಜೊತೆಗೆ 32 ಪ್ರಶಸ್ತಿಗಳನ್ನೂ ಪಡೆದು ಮರಾಠಿ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದೆ.
ತಮಾಷೆ ಎಂದರೆ ಚಿತ್ರದ ನಿರ್ಮಾಪಕರು ವಿಶ್ವನಾಥ್ ರಾಮಕೃಷ್ಣ ನಾಯಕ ಕನ್ನಡಿಗರು.ಮುಂಬೈ ನಲ್ಲಿ ಅವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾಗ ಅವರ ಆಫೀಸ್ ಗೆ ಮರಾಠಿ ರಂಗ ಭೂಮಿಯ ಖ್ಯಾತ ನಟರು,ನಿರ್ದೇಶಕರೂ ಆಗಿದ್ದ ಅರುಣ್ ನಾಲವಾಡೆ ಒಮ್ಮೆ ಇನ್ ಕಂ ಟ್ಯಾಕ್ಸ್ ಫೈಲ್ ಮಾಡಲು ಬರುತ್ತಾರೆ.ತುಂಬಾ ಸಹಜವಾಗೇ ರಾಮಕ್ರಿಷ್ಣರಿಂದ ಸಿನಿಮಾ ಮಾಡಬೇಕೆಂದಿದ್ದ ವಿಷಯ ತಿಳಿಯುತ್ತಿದ್ದಂತೆ ನಾಲವಾಡೆಯವರು ಮರು ದಿನ ೧೫ ವರ್ಷ ಹಿಂದೆ ನಡೆದಿದ್ದ ವಾಸ್ತವ ಘಟನೆ ಆಧಾರಿತ ಮಾಧವಿ ಘರ್ಪುರೆ ಬರೆದ ಕಥೆ ತರುತ್ತಾರೆ.ನಂತರ ದ ಘಟನೆಗಳು ಸಿನಿಮಾ ಮಾದರಿಯಲ್ಲೇ ಚಕ ಚಕನೆ ನಡೆದು ಹೋಗುತ್ತವೆ,ವಿಶ್ವನಾಥರು ತಮ್ಮಸಮಾನ ಅಭಿರುಚಿಯ ಸ್ನೇಹಿತರನ್ನು ಚಿತ್ರ ನಿರ್ಮಾಣಕ್ಕೆ ಸೇರಿಸಿಕೊಳ್ಳುತ್ತಾರೆ.ನಿರ್ಮಾಪಕರ ಮಾತಿಗೆ ನಾಲ ವಾಡೆಯವರು ನಿರ್ದೇಶನ ನಿರಾಕರಿಸುತ್ತಾರೆ.ಮತ್ತು ಅವರ ಕಸಿನ್ ಮತ್ತು ಮರಾಠಿ ರಂಗಭೂಮಿಯ ನಟ ನಿರ್ದೇಶಕರಾದ ಸಂದೀಪ್ ಸಾವಂತ್ ರನ್ನು ಸಲಹೆ ಮಾಡುತ್ತಾರೆ.

ಚಿತ್ರಕ್ಕೆ’ಶ್ವಾಸ್’ಎಂದು ನಾಮಕರಣವೂ ಆಗುತ್ತದೆ.ಸಂದೀಪರ ಪೂರ್ಣ ವೃತ್ತಿಪರ ಟೀಂ 31 ದಿನಗಳ ಶೆಡ್ಯೂಲ್ ನಲ್ಲಿ ಕೊಂಕಣ್,ರತ್ನಗಿರಿ,ಚಿತ್ರದುರ್ಗ ಗಳಲ್ಲಿ ಚಿತ್ರೀಕರಣ ಮಾಡುತ್ತಾರೆ.ಆಸ್ಪತ್ರೆಯ ದೃಶ್ಯಗಳನ್ನು ಪುಣೆಯ ಕೆ.ಎಂ . ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದರು. ಚಿತ್ರೀಕರಣದ ಒಟ್ಟು ಸಮಯ 6 ತಿಂಗಳು. ಸಿಂಗ್ ಸನ್ ಎಫೆಕ್ಟ್ ಬಳಸಿ ಚಿತ್ರೀಕರಣ ಮಾಡಿದ್ದರಿಂದ ಪ್ರತ್ಯೇಕ ಡಬ್ಬಿಂಗ್ ಅವಶ್ಯಕತೆ ಇರಲಿಲ್ಲ. 35 ಲಕ್ಷ ರೂಪಾಯಿಗಳಲ್ಲಿ ಇಡೀ ಸಿನಿಮಾ ಸಿದ್ಧವಾಗಿತ್ತು ನೋಡಿ. ಸಿನಿಮಾ ಏಪ್ರಿಲ್ 9 ಕ್ಕೆ ಬಿಡುಗಡೆಯಾದರೂ ಇಡೀ ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಬಂದಿರಲಿಲ್ಲ. ಆಗಸ್ಟ್ 14 ಕ್ಕೆ ‘ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ಬರುತ್ತಿದ್ದಂತೆ ‘ಶ್ವಾಸ್ ಗೆ ಪ್ರೇಕ್ಷಕರ ಮಹಾಪೂರ.ಇಡೀ ದೇಶದ ತುಂಬಾ ‘ಶ್ವಾಸ್’!ಅಲ್ಲಿಂದ ಬರಿ ಇತಿಹಾಸ ನಿರ್ಮಿಸಿತು.ದೇಶದ 32 ಪ್ರತಿಷ್ಟಿ ತ ಅವಾರ್ಡುಗಳು ಬೆನ್ನಲ್ಲೇ ಬಂದವು.
ಶ್ವಾಸ್’ ಚಿತ್ರದಲ್ಲಿ ಮಹಾರಾಷ್ಟ್ರದ ತೀರ ಹಿಂದುಳಿದ ಗ್ರಾಮದ ಬಾಲಕ ಪರಶುರಾಮ ಹೆಸರಿನ ಪರ್ಶ್ಯಾ ನಿಗೆ ತುಂಬಾ ಅಪರೂಪದ ಕಾಯಿಲೆ Retino blastoma ಹೆಸರಿನ ಕಣ್ಣಿನ ಕ್ಯಾನ್ಸರ್ ಬಂದಿರುತ್ತದೆ.ಇಲಾಜಿಗೆಂದು ಅವನ ಅಜ್ಜ (ಅರುಣ್ ನಾಲವಾಡೆ )ಮುಂಬೈ ಗೆ ತರುತ್ತಾನೆ.ಮುಂಬೈನ ಆಸ್ಪತ್ರೆಯಲ್ಲಿ ಪರ್ಶ್ಯಾನ ಸಂಬಂದಿ ವೈದ್ಯ ದಿವಾಕರ್, ಅಡ್ಮಿಟ್ ಆದ ನಂತರ ಕೆಲವು ಕಾಗದಗಳಲ್ಲಿ ಶಸ್ತ್ರಚಿಕಿತ್ಸೆಗೂ ಮಗುವಿಗೂ ಯಾವುದೇ ಸಂಬಂಧವಿಲ್ಲವೆಂದು ಸಹಿ ಮಾಡಿಸಿಕೊಳ್ಳುವಾಗ ಇಬ್ಬರೂ ಕಸಿ ವಿಸಿಯಾಗುತ್ತಾರೆ.ಆಸ್ಪತ್ರೆಯಲ್ಲಿನ ವೈದ್ಯಕೀಯ ಸಮಾಜ ಸೇವಕಿ(ಅಮೃತ ಸುಭಾಶ್)ಅಜ್ಜ ಮೊಮ್ಮಗರಿಗೆ ಧೈರ್ಯ ತುಂಬುತ್ತಾಳೆ.ಮಾನಸಿಕ ಸ್ಥೈರ್ಯ ನೀಡುತ್ತಾಳೆ. 
ವೈದ್ಯರು ಹೇಳುವ ಪ್ರಕಾರ ಪರ್ಶ್ಯಾ ಜೀವಂತ ಉಳಿಯ ಬೇಕೆಂದರೆ ಅವನ ದೃಷ್ಟಿಯನ್ನು ತೆಗೆಯಲೇ ಬೇಕಾಗುತ್ತದೆ. ಸಂಧಿಗ್ಧದ ಅಜ್ಜ..ಮುಗ್ಧ ಪರ್ಶ್ಯಾ ಇಬ್ಬರನ್ನು ನೋಡುತ್ತಾನಿಂತ ಆ ಹೆಣ್ಣುಮಗಳು ಎಂಥ ಎದೆ ತಟ್ಟುವ ಸ್ಥಿತಿ.ತಕ್ಷಣ ಆ ಹೆಣ್ಣುಮಗಳು ಆ ಇಬ್ಬರಿಗೂ ವಾಸ್ತವ ಹೇಳುವ ಪರಿ ಎಂಥವರನ್ನು ಒಂದು ಕ್ಷಣ ಕಣ್ಣು ಒದ್ದೆ ಮಾಡುತ್ತದೆ.ಕಾರಣಾಂತರದಿಂದ ಶಸ್ತ್ರ ಚಿಕಿತ್ಸೆ ಒಂದು ದಿನ ಮುಂದೂಡಿದಾಗ ಅಜ್ಜನ ಆನಂದ ಕ್ಕೆ ಪಾರವೇ ಇಲ್ಲದಂತಾಗುತ್ತದೆ.ತಕ್ಷಣ ಆತ ಪರ್ಶ್ಯಾನನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಮಾಯವಾಗಿಬಿಡುತ್ತಾನೆ.ಪರ್ಶ್ಯಾ ನಿಗೆ ಶಾಶ್ವತ ತೆರೆ ಬೀಳಲಿರುವ ಬೆಳಕಿನ ನಾಳೆ ಗಳನ್ನು ಇಂದೇ ತೋರಿಸಬೇಕೆಂಬ ಹಠ ಅಜ್ಜನಿಗೆ.ತನ್ನ ಕಣ್ಣ ಜಗತ್ತನ್ನು ಅಜ್ಜ ಪರ್ಶ್ಯಾನಿಗೆ ತೋರಿಸುವ ರೀತಿ ಎಂಥವರನ್ನೂ ಬೆರಗು ಗೊಳಿಸುತ್ತದೆ.ಏಕೆಂದರೆ ಆ ಮಗು ನೋಡುವ ಹಕ್ಕಿ , ಭೂಮಿ,ಮನುಷ್ಯರು,ಸುತ್ತಲಿನ ಜಗತ್ತು ಎಲ್ಲವೂ ಅಂದೇ ಕೊನೆ. ನಾಳೆಯಿಂದ ಪರ್ಶ್ಯಾ ಕೇವಲ ಧ್ವನಿಯಿಂದ,ಸ್ಪರ್ಶದಿಂದ,ವಾಸನೆಯಿಂದಲೇ ಬದುಕಬೇಕಾಗುತ್ತದೆ ಮತ್ತು ಸಂಬಂಧಗಳನ್ನು ಹುಡುಕಬೇಕಾಗುತ್ತದೆ.
ಕೊನೆಯಲ್ಲಿ ಕಪ್ಪು ಕನ್ನಡಕದ ಪರ್ಶ್ಯಾ ಮತ್ತು ಅಜ್ಜ ದೋಣಿಯೊಂದರಲ್ಲಿ ಇಳಿದು ಊರಕಡೆ ನಡೆಯುತ್ತಾ ತನ್ನ ಜನರನ್ನು ನೋಡುವ ದೃಶ್ಯವಂತೂ ಶ್ವಾಸ್’ಚಿತ್ರಕ್ಕೆ ಅತಂತ ಪರಿಣಾಮಕಾರಿಯಾಗಿದೆ.
ನಿರ್ದೇಶನ:ಸಂದೀಪ್ ಸಾವಂತ್, ನಿರ್ಮಾಪಕರು:ದೇವಿದಾಸ್ ಬಾಪಟ್,ರಾಜನ ಚೆಲ್ಕರ್,ದೀಪಕ್ ಚೌದರಿ,ನರೆಶ್ಚಂದ್ರ ಜೈನ್,ಅರುಣ್ ನಲವಾಡೆ,ರಾಮಕೃಷ್ಣ, ತಾರಾಗಣ : ನಾಯಕ- ಮೋಹನ್ ಪರಬ್ ಮತ್ತು ಸಂದೀಪ್ ಸಾವಂತ್, ಸಂಕಲನ:ನೀರಜ್ ವರಾಲಿಯ, ಭಾಷೆ:ಮರಾಠಿ, ಸಮಯ : 107ನಿಮಿಷಗಳು.ಬಿಡುಗಡೆ : ಏಪ್ರಿಲ್-2004, ಸಿನೆಮಾಟೋಗ್ರಫಿ :ಸಂಜಯ್ ಮೆಮಾನೆ, ಕಥೆ: ಮಾಧವಿ ಘರ್ಪುರೆ.
ಐದೂವರೆ ದಶಕದ ಅದ್ಭುತ ಅನುಭೂತಿ ಮಾಯಾಬಜಾರ್
ಸೃಜನ್ ಅವರ ಕಳೆದ ವಾರದ ಅಂಕಣ ಬರಹ ಕಾರಣಾಂತರಗಳಿಂದ ಈ ವಾರ ಪ್ರಕಟವಾಗುತ್ತಿದೆ-ಸಂ.
ತೆಲುಗು ಚಿತ್ರಗಳಲ್ಲಿ ಇಂದಿಗೂ ಕುಂದದ ವರ್ಚಸ್ಸಿನ,ಪ್ರತಿಸಲ ನೋಡುವಾಗಲೂ ಹೊಸ ಅನುಭವ ಕೊಡುವ ನಿತ್ಯ ನೂತನ ಚಿತ್ರ ಮಾಯಾಬಜಾರ್ .
ಕಳೆದ ಐದೂವರೆ ದಶಕಗಳಿಂದ ಪ್ರೇಕ್ಷಕರಿಂದ ವಿಶಿಷ್ಟ ಮನ್ನಣೆ ಪಡೆಯುತ್ತಿರುವ ಅಪರೂಪದ ಸೃಷ್ಟಿ ಇದು.ಮಾಯಬಾಜಾರ್ ಸಿನಿಮಾದ ಲೆಕ್ಕವಿಲ್ಲದಷ್ಟು ಹಾಸ್ಯದ ಪಂಚ್ ಲೈನುಗಳು,ಲಿಮರಿಕ್ ಗಳು , ತಮಾಷೆಯ ಸಂಭೋದನೆಗಳು ,ಭಾಷೆಯ ಚಮತ್ಕಾರ ಇಂದಿಗೂ ತೆಲುಗರ ದೈನಂದಿನ ಬದುಕಲ್ಲಿ ಒಂದು ಭಾಗವೇ ಆಗಿಹೋಗಿವೆ.ಆ ಮಾತುಗಳು ,ಹಾಡುಗಳು,ಪದ ಪ್ರಯೋಗಗಳು ಪ್ರತಿಯೊಬ್ಬರ ಬಾಯಿಯಲ್ಲಿ ಪ್ರತಿಧ್ವನಿಸುತ್ತಿರುತ್ತವೆ.ಈ ಚಿತ್ರದ ಹಾಡಿನ ಸಾಲುಗಳು ಎಷ್ಟೋ ಚಿತ್ರಗಳಿಗೆ ಟೈಟಲ್ ಗಳಾಗಿವೆಎಂದರೆ ಆ ಜನಪ್ರಿಯತೆ ನೀವೇ ಊಹಿಸಿ.

ನಾಗೇಂದ್ರರಾಯರ ಸಾಹಿತ್ಯ,ಘಂಟಸಾಲರವರ ಮಧುರ ಸಂಗೀತ ಸಂಯೋಜನೆ ಮಾರ್ಕ್ಸ್ ಬಾರ್ಟ್ಲಿಯ ಮೋಹಕ ಛಾಯಾಗ್ರಹಣ,ತಿಂಗಳು ಗಟ್ಟಲೆ ಶ್ರಮಿಸಿ ವಸ್ತ್ರವಿನ್ಯಾಸದ ಚಿತ್ರಗಳನ್ನು,ಮಿನಿಯೇಚರ್ ಚಿತ್ರಗಳನ್ನು,ಸೆಟ್ಟಿಂಗ್ ಚಿತ್ರಗಳನ್ನು ಹಗಲಿರುಳು ಮಾಡಿದ್ದ ಅಪ್ರತಿಮ ಕಲಾ ನಿರ್ದೇಶಕ ಮಾ.ಗೋಖಲೆ ಮತ್ತು ಈ ಎಲ್ಲ ಪ್ರಚಂಡ ಪ್ರತಿಭೆಗಳ ಕ್ಯಾಪ್ಟನ್ ಕೆ.ವಿ.ರೆಡ್ಡಿಯಾದರೆ , ಮತ್ತು ಇಂಥದೊಂದು ಸೃಷ್ಟಿಗೆ ಬೆನ್ನೆಲುಬಾಗಿ ನಿಂತವರು ವಿಜಯಾ ಸಂಸ್ಥೆಯ ನಾಗಿರೆಡ್ಡಿ ಮತ್ತು ಚಕ್ರಪಾಣಿ.
ಮುಂದೆಂದೂ ಮತ್ತು ಯಾರೂ ಮಾಡಲಾರದ ಕಲಾ ಕೃತಿ ಯಂಥ ಚಿತ್ರವೆಂದು ಹೊಗಳಿಸಿಕೊಂಡ ಮಹೋನ್ನತ ತೆಲುಗು ಪೌರಾಣಿಕ ಚಿತ್ರ ಮಾಯಾಬಜಾರ್.
1956 ರಲ್ಲಿ ಬಿಡುಗಡೆಗೊಂಡ ಮಾಯಾಬಜಾರ್ ಪೌರಾಣಿಕ ಚಿತ್ರಗಳೆಂದರೆ ತೆಲುಗು ಚಿತ್ರಗಳನ್ನೇ ನೋಡಬೇಕೆಂಬ ಶಾಶ್ವತ ಮುದ್ರೆ ಒತ್ತಿದ ಅಪರೂಪದ ಚಿತ್ರವಿದು.ಇಷ್ಟಕ್ಕೋ ಮಾಯಾಬಜಾರ್ ಪೌರಾಣಿಕ ಚಿತ್ರವೇ?ಸಾಮಾಜಿಕ ಚಿತ್ರವೇ?ಏಕೆಂದರೆ ಬಲರಾಮನಿಗೆ ಶಶಿರೇಖ ಹೆಸರಿನ ಮಗಳಿದ್ದಂತೆ,ಅವಳನ್ನು ಅಭಿಮನ್ಯು ಮದುವೆಯಾದಂಥ ಪ್ರಸ್ತಾಪ ಎಲ್ಲೂ ನಮಗೆ ಸಿಗುವುದಿಲ್ಲ.ಹಾಗೆ ನೋಡಿದರೆ ಶಶಿರೇಖ ಪರಿಣಯವೇ ಚಿತ್ರದ ಎಳೆ.

ಚಕ್ರವ್ಯೂಹದಲ್ಲಿ ಅಭಿಮನ್ಯು ವೀರ ಮರಣವನ್ನಪ್ಪಿದಾಗ, ಹೆಂಗಸರು ಯುದ್ಧ ಭೂಮಿಗೆ ಬಂದು ಆಲಾಪಿಸುವಾಗಲೂ ಕೂಡ ಅವನ ಹೆಂಡತಿ ಉತ್ತರೆಯನ್ನು ಪ್ರಸ್ತಾಪಿಸುತ್ತರೆಯೇ ಹೊರತು ಶಶಿ ರೇಖಾಳನ್ನಲ್ಲ .ಈಕೆಯ ಹೊರತು ಪಡಿಸಿ ಉಳಿದೆಲ್ಲ ಪಾತ್ರಗಳು,ಅವುಗಳ ಸಂಬಂಧಗಳು ಎಲ್ಲವೂ ಮಹಾಭಾರತದ್ದೆ.ಅದೂ ಅಲ್ಲದೆ ಈ ಕಥೆ ಈಗಾಗಲೇ’ ಶಶಿ ರೇಖಾಪರಿಣ ಯಂ’ಮತ್ತು ’ವೀರ ಘಟೋತ್ಕಚ ’ಹೆಸರಿಂದ ನಾಟಕಗಳ ರೂಪದಲ್ಲಿ ಸಾಕಷ್ಟು ಜನಪ್ರಿಯ ಗೊಂಡಿದ್ದವು.
ಮೂಕಿಯ ಕಾಲದಿಂದಲೂ ನಮ್ಮ ದೇಶ ದಲ್ಲಿ ಪದೇ ಪದೇ ಸಿನೆಮಾಗಳಾಗಿ ನಿರ್ಮಾಣ ಗೊಂದದ್ದು ಎರಡೇ, ಒಂದು ’ಸತ್ಯ ಹರಿಶ್ಚಂದ್ರ’ ಮತ್ತೊಂದು ’ಮಾಯಾಬಜಾರ್’ .ವಿಜಯಾ ಸಂಸ್ಥೆ ’ಮಾಯಾಬಜಾರ್ ನಿರ್ಮಿಸಿದ ಮೇಲೆ ಮತ್ತೆ ಯಾರು ಅದನ್ನು ನಿರ್ಮಿಸುವ ಧೈರ್ಯ ಮಾಡಲಿಲ್ಲ.
10-12 ಲಕ್ಷಗಳಲ್ಲಿ ಅದ್ಭುತವಾದ ಅದ್ದೂರಿಯಾದ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ ಮಾಯಾಬಜಾರ್’ ಚಿತ್ರದ ವೆಚ್ಹ 32 ಲಕ್ಷ. ಕೆ.ವಿ ರೆಡ್ಡಿಯಂಥ ನಿರ್ದೇಶಕರ ಸ್ಟಾರ್ ವಾಲ್ಯೂ ನೋಡಿ ವಿಜಯಾ ಸಂಸ್ಥೆ ಧೈರ್ಯೇ ಸಾಹಸೇ ಲಕ್ಷ್ಮಿ ’ಎಂದು ಮಾಯಾಬಜಾರ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ತೋರಿಸುತ್ತಾರೆ. Read the rest of this entry »
ನೇಪಥ್ಯದಲ್ಲೇ ಸೊಗಸು ಕಟ್ಟಿಕೊಡುವ ‘ಸುಬ್ರಹ್ಮಣ್ಯಪುರಂ’



“ಅರ್ಧಸತ್ಯ” ಕ್ಕೆ ಕಾಲು ಶತಮಾನ
‘ಅರ್ಧಸತ್ಯ’- ಭಾರತೀಯ ಚಿತ್ರರಂಗದಲ್ಲೇ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾ. ಗೋವಿಂದ ನಿಹಲಾನಿಯವರು ನಿರ್ದೇಶಿಸಿದ ಸಿನಿಮಾ ಸಾಮಾನ್ಯರ ಬದುಕಿನಲ್ಲೊಂದು ತಮ್ಮ ನಡುವೆಯೇ ಇರುವ, ಭ್ರಷ್ಟ ಸರಕಾರಿ ವ್ಯವಸ್ಥೆಯೊಳಗೆ ನಲುಗುವ ಮತ್ತೊಬ್ಬ ವ್ಯಕ್ತಿಯ ಒಳದನಿ ಕೇಳಿಸಿದ ಚಿತ್ರ.
ಸತ್ಯಕ್ಕೂ ಅಸತ್ಯಕ್ಕೂ ನಡುವಿನ ದೂರ ಎಷ್ಟು ?
ಆದರ್ಶಕ್ಕೂ ವಾಸ್ತವಕ್ಕೂ ನಡುವಿನ ಅಂತರವೆಷ್ಟು ? ಈ ಪ್ರಶ್ನೆಗಳಿಗೆ ಇವತ್ತಿಗೂ ಸರಿಯಾದ ಉತ್ತರವಿಲ್ಲ. ಪರಿಸ್ಥಿತಿಗಳೊಂದಿಗೆ, ವ್ಯವಸ್ಥೆಯೊಂದಿಗೆ ರಾಜಿಯ ಉತ್ತರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಆ ಉತ್ತರ ಇಲ್ಲಿ’ಅರ್ಧ ಸತ್ಯ’ವಾಗಿರುತ್ತದೆ.ನಿಷ್ಟುರವಾದ ಸತ್ಯವನ್ನೇ ಗೋವಿಂದ ನಿಹಲಾನಿ ‘ಅರ್ಧ ಸತ್ಯ’(1983) ಹೆಸರಿಂದ ಸಿನಿಮಾ ಮಾಡಿದ್ದಾರೆ. ನಿರ್ದೇಶಕರಾಗಿ ಅವರಿಗೆ ಈ ಚಿತ್ರ ಮೈಲಿಗಲ್ಲು.

ಸಿನಿಮಾದಲ್ಲಿ ನಾಯಕನಾಗಿ ನಟಿಸಿದ ಓಂಪುರಿಗೂ ಇದು ಕಂಡರಿಯದ ಮೊದಲ ಹಿಟ್. ಒಂದು ಕಲಾತ್ಮಕ ಚಿತ್ರ ಕಮರ್ಷಿಯಲ್ ಆಗಿ ಜನಪ್ರಿಯಗೊಳ್ಳುವ ಟ್ರೆಂಡ್ ಇದರಿಂದಲೇ ಪ್ರಾರಂಭವಾಯ್ತು. ಆದ್ದರಿಂದಲೇ ‘ಅರ್ಧ ಸತ್ಯ’ ಭಾರತಿಯ ಚಿತ್ರ ಇತಿಹಾಸದಲ್ಲೂ ಮೈಲಿಗಲ್ಲೇ.
ನಮ್ಮ ಚಲನಚಿತ್ರ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪೋಲಿಸ್ ಕಥೆಯಾಧಾರಿತ ಸಿನಿಮಾಗಳು ಪುಂಖಾನು ಪುಂಖವಾಗಿ ಸಿಗುತ್ತವೆ. ವೃತ್ತಿಯನ್ನು ಪವಿತ್ರವೆಂದು ಭಾವಿಸುತ್ತಾ ತಮ್ಮ ಪ್ರಾಣವನ್ನೇ ಧಾರೆಯೆರೆದ ನಿಷ್ಟಾವಂತ ಪೋಲಿಸ್ ಅಧಿಕಾರಿಗಳು ಒಂದು ಕಡೆಯಾದರೆ, ಲಂಚ-ಅಧಿಕಾರ ಧಿಮಾಕುಗಳಿಂದ ಮೆರೆದವರ ದಂಡು ಮತ್ತೊಂದು ಕಡೆ. ನಿಜ ಹೇಳಬೇಕೆಂದರೆ ಪೋಲಿಸ್ ಉದ್ಯೋಗ ಒಂದು ರೀತಿಯಲ್ಲಿ ಕತ್ತಿಯಂಚಿನ ಬದುಕು. ನಿಷ್ಠೆ ಪ್ರಾಮಾಣಿಕತೆಗಳು ಮೇಲಧಿಕಾರಿಗಳ ಲೋಲುಪತೆ ಎದುರು ಕೇವಲ ನಿಘಂಟಿನ ಪದಗಳು. ವೃತ್ತಿಗೆ ನ್ಯಾಯ ಒದಗಿಸಲಾಗದೆ, ಮನಸ್ಸಿಗೆ ವಿರುದ್ಧವಾಗಿ ಪರಿಸ್ಥಿತಿಗಳೊಂದಿಗೆ ರಾಜಿಯಾಗದೆ ಮಾನಸಿಕವಾಗಿ ಜರ್ಜರಿತರಾಗುತ್ತಿರುವ ಎಷ್ಟೋ ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಜೈಲಿನ ಗೋಡೆಗಳ ಹಿಂದೆ, ಬಾಗಿಲ ಸರಳುಗಳ ಹಿಂದೆ ಕಮರಿ ಹೋಗುತ್ತಿರುವ ಖೈದಿಗಳಂತೆ ಜೈಲು ಗೋಡೆಗಳ ಈಚೆ ಇಂಥದೇ ಸ್ಥಿತಿಯಲ್ಲಿರುವ ಪೋಲೀಸರ ದುರ್ಭರ ಸ್ಥಿತಿಗಳ ಬಗ್ಗೆ ನಿಹಲಾನಿ ಸಿನಿಮಾ ಮಾಡುವವರೆಗೆ ಯಾರಿಗೂ ಗೊತ್ತಿರಲಿಲ್ಲ.

‘ಅರ್ಧ ಸತ್ಯ’ ಪ್ರಾಮಾಣಿಕ ಪೋಲಿಸ್ ಇನ್ಸಪೆಕ್ಟರ್ ಒಬ್ಬನ ಕಥೆ. ಅನಂತ್ ವೇಲಂಕರ್(ಓಂ ಪುರಿ) ಸೂಕ್ಷ್ಮ ಮನಸ್ಸಿನ ಕವಿ ಹೃದಯದ, ಭಾವುಕ. ಆರ್ಟ್ಸ್‌ನಲ್ಲಿ ಪ್ರೊಫೆಸರ್ ಆಗಬೇಕೆಂಬ ಮಹತ್ವಾಕಾಂಕ್ಷೆಯವ. ಆದರೆ ಅವನ ತಂದೆಯ(ಅಮರೀಶ್ ಪುರಿ) ಯೋಚನೆಗಳೇ ಬೇರೆ .ಬೀದಿಯ ರೌಡಿಗಳನ್ನು ಒದ್ದು ದಾರಿಗೆ ತರುವಂತೆ ಹೆಂಡತಿಯನ್ನು ಕೂಡ ಒದ್ದು ದಾರಿಗೆ ತರುವಲ್ಲಿ ತಪ್ಪೇನೂ ಇಲ್ಲವೆಂದು ಭಾವಿಸುವ ಹುಂಬ ಮನುಷ್ಯ. ಅವನಿಗೆ ಎದುರಿನವರ ಇಷ್ಟಗಳ, ಆಸೆಗಳ ಪ್ರಮೇಯವೇ ಇಲ್ಲದವನಂತೆ ವರ್ತಿಸುವವ. ಎಲ್ಲ ತನ್ನಿಷ್ಟ. ತಾನು ಅಂದು ಕೊಂಡದ್ದು ನೆರವೇರಿದರೆ ಸಾಕು. ಹಾಗೆಯೇ ಮಗ ಅನಂತನ ಪುಟ್ಟ ಪುಟ್ಟ ಆಸೆಗಳನ್ನು, ಬಯಕೆಗಳನ್ನು ನಿರ್ಲಕ್ಷ್ಯಿಸಿ, ನಿರಾಕರಿಸಿ ಪೋಲಿಸ್ ವೃತ್ತಿಯಲ್ಲಿ ಸೇರುವಂತೆ ಮಾಡಿದ.

ಇಷ್ಟ ಕಷ್ಟ ಗಳ ನಡುವೆ ಅನಂತ್ ಉದ್ಯೋಗಕ್ಕೆ ಸೇರಿದ ಬಳಿಕ ಅನ್ನ ಕೊಡುವ ಉದ್ಯೋಗ ಕ್ಕೆ ಪ್ರಾಮಾಣಿಕನಾಗಿರುತ್ತಾನೆ. ಹಾಗೆ ಇರಬೇಕಾಗಿರುವುದು ತನ್ನ ಕರ್ತವ್ಯವೆಂದೇ ಭಾವಿಸಿರುತ್ತಾನೆ. ಒಮ್ಮೆ ಅಲ್ಲಿ ಸ್ಥಳೀಯ ರೌಡಿ ರಾಮ್ ಶೆಟ್ಟಿ(ಸದಾಶಿವ್ ಅಮರಾಪುರಕರ್) ಹೆಸರಿನ ರೌಡಿಯನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಪೋಲಿಸ್ ಪೇದೆಯೊಬ್ಬನನ್ನು ರೌಡಿಗಳು ಥಳಿಸಿದ ಆರೋಪದ ಮೇಲೆ ರಾಮ್ ಶೆಟ್ಟಿ ಯ ಮೂವರು ಅನುಚರರನ್ನು ಅನಂತ್ ಬಂಧಿಸುತ್ತಾನೆ. ಆದರೆ ರಾಮ್‌ಶೆಟ್ಟಿಗೆ ಅನಂತ್‌ನ ಮುಗ್ಧತೆ ನಗು ತರಿಸುತ್ತದೆ. ಆತ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಕ್ಷಣಗಳಲ್ಲಿ ಅವರ ಬಿಡುಗಡೆಯ ಆರ್ಡರ್ ಹೊರಡಿಸುತ್ತಾನೆ. ಇದೆಲ್ಲ ಅನಂತ್ ನ ಕಣ್ಣ ಮುಂದೆಯೇ ನಡೆಯುತ್ತದೆ. ಅನಂತನಿಗೆ ತನ್ನ ನಿಸ್ಸಹಾಯಕತೆ, ತನ್ನ ಇತಿ ಮಿತಿಗಳ ಕಲ್ಪನೆ ಸ್ಪಷ್ಟವಾಗುತ್ತದೆ. ಹತಾಶೆಯಿಂದ ಇದನ್ನು ತನ್ನಪೋಲಿಸ್ ಸ್ನೇಹಿತರೊಂದಿಗೆ ಹಂಚಿ ಕೊಳ್ಳಲು ಯತ್ನಿಸುತ್ತಾನೆ.
ಆದರೆ ಅನಂತನ ಸ್ನೇಹಿತರದೊಂದು ಕಥೆ. ಉದ್ಯೋಗದಲ್ಲಿ ಸೇರಿದ ಹೊಸದರಲ್ಲಿ ಅವರೂ ಈ ರೀತಿಯ ಆದರ್ಶ ಬದುಕಿಗಾಗಿ ಪಣ ತೊಟ್ಟವರೇ ! ಸುತ್ತಲಿನ ವ್ಯವಸ್ಥೆ ಯ ಪ್ರವಾಹದ ಎದುರು ಈಜಲಾಗದೇ ರಾಜಿಯಾದ ಮತ್ತೊಬ್ಬ ಇನ್ಸ್ಸ್‌ಪೆಕ್ಟರ್ ಹೈದರಾಲಿ(ಶಫಿ ಇನಾಮದಾರ) ಮತ್ತು ವ್ಯವಸ್ಥೆ ಯೊಂದಿಗೆ ಹೋರಾಡುತ್ತಲೇ ಜೀವಚ್ಚವವಾಗಿ ಬದುಕುತ್ತಿರುವ ಇನ್ನೊಬ್ಬ ಇನ್ಸ್ಸ್‌ಪೆಕ್ಟರ್ ಮೈಕ್ ಲೋಬೋ(ನಾಸಿರುದ್ದೀನ್ ಷಾ ) ರನ್ನು ಕಂಡು ಭಯವಾಗುತ್ತದೆ.

ಅನಂತ್ ಎದುರಿಗೆ ಎರಡೇ ದಾರಿ. ಒಂದು ರಾಜಿಯಾಗಿ ನೈತಿಕವಾಗಿ ಪತನ ಹೊಂದುವುದು, ಮತ್ತೊಂದು ರಾಜಿಯಾಗದೆ ಜೀವಚ್ಚವವಾಗಿ ಬದುಕುವುದು. ಈ ಮಧ್ಯೆ ನಲುಗುವ ಅನಂತ್ ತನ್ನ ದಾರಿಯನ್ನು ನಿರ್ಧರಿಸಲಾಗದೇ ಮದ್ಯದ ಮೊರೆ ಹೋಗುತ್ತಾನೆ. ಕ್ರಮೇಣ ಮದ್ಯ ವ್ಯಸನಿಯಾಗುತ್ತಾನೆ. ತನ್ನ ಬಗ್ಗೆ ಅತೀವ ಪ್ರೀತಿ ತೋರುವ ಕವಿತೆಯೆಂಥ ಚೆಂದನೆಯ ಹುಡುಗಿ ಜ್ಯೋತ್ಸ್ನಾಳನ್ನು ಅನಂತ್ ಹಿಂಸಿಸಲು ಪ್ರಾರಂಭಿಸುತ್ತಾನೆ. ಒಮ್ಮೆಯಂತೂ ಜ್ಯೋತ್ಸ್ನಾಳೊಂದಿಗೆ ಮಾತಾಡಲೇ ಬೇಕೆಂಬ ಉತ್ಕಟತೆಯಿಂದ ಫೋನ್ ಮಾಡಿದಾಗ “ನಾನೇ ಮಾತಾಡ್ತಿರೋದು’ ಎಂದು ಪದೇ ಪದೇ ಹೇಳಿದರೂ “ಆಕೆಗೆ ಫೋನ್ ಕೊಡಿ’ಎಂದು ಕೇಳುವಾಗಿನ ಅನಂತ್ ಮನಸ್ಥಿತಿ ಹೇಗಿರಬಹುದು ಊಹಿಸಿ. ಆ ಸಮಯದಲ್ಲಿ ಜ್ಯೋತ್ಸ್ನಾ “ಈಗ ಅವರು ಮನೇಲಿಲ್ಲ. ಬಂದ ನಂತರ ಹೇಳ್ತೇನೆ’ ಎಂದಾಗಲೇ ಅನಂತ್‌ಗೆ ಸಮಾಧಾನ.
ತನ್ನನ್ನು ತಾನು ಅಂದಾಜಿಸಲಾಗದ ವಿಚಿತ್ರ ಸ್ಥಿತಿಯಲ್ಲಿನ ಅನಂತ್, ಲಾಕಪ್‌ನಲ್ಲಿ ಖೈದಿಯೊಬ್ಬನನ್ನು ಪ್ರಶ್ನಿಸುತ್ತಾ ಮಿತಿಮೀರಿ ಥಳಿಸುತ್ತಾನೆ. ಪರಿಣಾಮ ಖೈದಿಯ ಸಾವು. ಲಾಕಪ್ ಸಾವಿನ ಕೇಸು ಅನಂತ್ ಕೊರಳಿಗೆ ಸುತ್ತಿಕೊಳ್ಳುತ್ತದೆ. ಅದರಿಂದ ಹೊರ ಬರಲು ಅನಂತ್‌ಗೆ ಒಂದೇ ದಾರಿ ಎಂದರೆ ರಾಮ್ ಶೆಟ್ಟಿಯ ಆಶ್ರಯ ಎಂದು ಅವನ ಸ್ನೇಹಿತರೇ ಉಪಾಯ ಹೇಳುತ್ತಾರೆ. ಅನಂತ್ ನ ಗೊಂದಲಗಳು..ನಿಸ್ಸಹಾಯಕತೆ..ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ಹೆಜ್ಜೆಯನ್ನು ಮುಂದಿಡಲಾಗದ ಅವನ ಸ್ಥಿತಿ.. ಇಂಥ ವ್ಯವಸ್ಥೆಯೆಂಬ ಹೆಮ್ಮರಕ್ಕೆ ಮೂಲಕಾರಣರಾದ ರಾಮ್ ಶೆಟ್ಟಿಗಳಂಥವರೇ ಇರಬಾರದೆಂದು ತೀರ್ಮಾನಿಸಿ ಅವನನ್ನು ಕೊಂದು ಪೋಲಿಸರಿಗೆ ಶರಣಾಗತನಾಗುತ್ತಾನೆ.
ಇದು ಸದ ಪನ್ವಲ್ ಕರ್ ಬರೆದ “ಸೂರ್ಯ’ ಹೆಸರಿನ ಮರಾಠಿ ಸಣ್ಣ ಕಥೆಯಾಧರಿತ ಸಿನಿಮಾ. ಗೋವಿಂದ ನಿಹಲಾನಿ ಯವರನ್ನು ಮೂರು ಸಣ್ಣ ಕಥೆಗಳು ತುಂಬಾ ಕಾಡುತ್ತಿದ್ದವು. ಒಂದು ಪನ್ವಲ್ ಕರ್ ಬರೆದ “ಸೂರ್ಯ’, ಭೀಷ್ಮ ಸಹಾನಿಯವರ “ತಮಸ್’ ಹಾಗೂ ಮಹೇಶ್ ಎಲ್ ಕುಂಭಾರ್ ಕರ್ ನಾಟಕ “ಪಾರ್ಟಿ’.
“ಸೂರ್ಯ’ ಕಥೆಯಲ್ಲಿನ ತಲ್ಲಣ, ಮನುಷ್ಯ ಸಹಜ ಸಂಬಂಧ, ನಿಸ್ಸಹಾಯಕತೆಗಳು ನಿಹಲಾನಿಯವರನ್ನು ತುಂಬಾ ಕಾಡಿದ್ದವು. ಅಪ್ಪ ಮಗುವಿನ ನಡುವಿನ ಸಂಬಂಧದ ತೆರೆ, ತಮ್ಮ ಇಷ್ಟಗಳನ್ನು ಮಕ್ಕಳ ಮೇಲೆ ಹೇರುವ ಪರಿ,ಮಕ್ಕಳ ಮಾನಸಿಕ ವೇದನೆ,ಸಮಾಜದ ಪ್ರಭಾವ,ಪರಿಸ್ಥಿತಿಗಳೊಂದಿಗೆ ರಾಜಿಯಾಗುವ ಜನ,ರಾಜಿಯಾಗದೆ ಜೀವಚ್ಛವದಂತೆ ಬದುಕುತ್ತಾ ನಾಶವಾಗುವ ಜನ..ಇದನ್ನೆಲ್ಲಾ ಈ ಸಿನಿಮಾದಿಂದ ಮಾತ್ರ ತೋರಿಸಲು ಸಾಧ್ಯ ಎಂದು ನಿಹಲಾನಿ ಭಾವಿಸಿದ್ದರು.
ಮೂಲತಃ ನಿಹಲಾನಿ ಛಾಯಾಗ್ರಾಹಕರೂ ಆಗಿರುವುದರಿಂದ ಚಿತ್ರದಲ್ಲಿ ಅತ್ಯಂತ ಸಣ್ಣ ಸಣ್ಣ ಸಂಗತಿಗಳ ಕಡೆ ಅವರು ತೋರುವ ಪ್ರಾಮುಖ್ಯತೆ,ಅದ್ಭುತವಾದ ಕ್ಲೋಸ್ ಅಪ್ ಶಾಟ್ಸ್ ಬೆರಗುಗೊಳಿಸುತ್ತವೆ. ಕ್ಲೋಸ್ ಅಪ್ ಶಾಟ್ಸ್ ಗಳಿಂದಲೇ ಪಾತ್ರಗಳಲ್ಲಿನ ಸಂಘರ್ಷಗಳನ್ನು,ಭಾವೋದ್ವೇಗಗಳ ತೀವ್ರತೆಯನ್ನು ನಾವು ತುಂಬಾ ಸ್ಪಷ್ಟವಾಗಿ ಗಮನಿಸಬಹುದು.

ಚಿತ್ರದಲ್ಲಿ ಅನಂತ್ ನ ಸ್ನೇಹಿತ ಹೈದರಾಲಿ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಾನೆ. ಪ್ರಾಮಾಣಿಕತೆ, ನೈತಿಕ ಮೌಲ್ಯಗಳನ್ನೂ ನಿರ್ಲಕ್ಷ್ಯಿಸುತ್ತಾನೆ. ಆದರೆ ವ್ಯವಸ್ಥೆಯ ವಿರುದ್ಧ ಈಜಲು ಹೋಗಿ ನಾಶವಾಗುವ ಮೈಕ್ ಲೋಬೊ, ತನ್ನ ಪ್ರಾಮಾಣಿಕತೆಯ ಕಾರಣದಿಂದಲೇ ಉದ್ಯೋಗದಿಂದ ಅಮಾನತುಗೊಳ್ಳುತ್ತಾನೆ. ಬೀದಿಗೆ ಬಿದ್ದು ಭಿಕ್ಷೆ ಬೇಡುವ ಸ್ಥಿತಿಗೆ ಬರುತ್ತಾನೆ. ಈ ಎರಡು ಸಂಕೀರ್ಣತೆಗಳು ಸಾಕು ಮನುಷ್ಯ ತನ್ನ ಮೌಲ್ಯಗಳ ಬಗ್ಗೆ ಯೋಚಿಸಲು. ಅನಂತನ ಪ್ರಾಮಾಣಿಕತೆಯ ಪ್ರತಿ ಹೆಜ್ಜೆಯನ್ನು ಮೆಚ್ಚುವ, ಅಭಿನಂದಿಸುವ ಮೂಲಕ ಜ್ಯೋತ್ಸ್ನಾ ಅವನಲ್ಲಿ ಇಳಿಯುವ ಪರಿ ಕೂಡ ಖುಷಿಕೊಡುತ್ತದೆ. ಜ್ಯೋತ್ಸ್ನಾ ಳ ಸಹಜ ನಟನೆಯ ಸೊಬಗು ಮನಸೂರೆಗೊಳ್ಳುತ್ತದೆ.
ರಾಮ್ ಶೆಟ್ಟಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಸದಾಶಿವ್ ಅಮರಾಪುರ್‌ಕರ್ ಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಅವರದು ಕೇವಲ ನಾಲ್ಕು ದೃಶ್ಯ ಅಷ್ಟೇ. ಪೂರ್ತಿಯಾಗಿ ರಂಗಭೂಮಿ ಹಿನ್ನೆಲೆಯಿಂದ ಬಂದ ಸದಾಶಿವ್ ನೀರು ಕುಡಿದಷ್ಟು ಸಹಜವಾಗಿವೆಯೇ ಅಭಿನಯಿಸಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಅನಂತ್ ನ ಪಾತ್ರದಲ್ಲಂತೂ ಓಂಪುರಿ ನಮ್ಮನ್ನು ಇವತ್ತಿಗೂ ಕಾಡುತ್ತಾರೆ. ಈ ಪಾತ್ರವನ್ನು ಓಂ ಪುರಿ ಹೊರತುಪಡಿಸಿದರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ.
ಭಾರತೀಯ ಸಿನಿಮಾಗಳಲ್ಲಿ ಕಡ್ಡಾಯವಾಗಿರುವಂತೆ ಈ ಸಿನಿಮಾದಲ್ಲಿ ಹಾಡುಗಳಿಲ್ಲ. ಖ್ಯಾತ ಮರಾಥಿ ಕವಿ ದಿಲೀಪ್ ಚಿತ್ರೆ ಯವರ ಎರಡು ಉರಿವ ಕೆಂಡದಂಥ ಕವನಗಳನ್ನು ಅನಂತ್ ಓದುತ್ತಾರೆ.
ಚಕ್ರವ್ಯೂಹ್ ಮೇ ಗುಸ್ ನೆ ಸೆ ಪೆಹ್ ಲೇ
ಕೌನ್ ಥಾ ಮೈ ಔರ್ ಕೈಸಾ ಥಾ
ಏ ಮುಜ್ಹೆ ಯಾದ್ ಯಾದ್ ಹೀ ನ ರಹೇಗಾ
ಚಕ್ರವ್ಯೂಹ್ ಮೇ ಗುಸ್ ನೆ ಕೇ ಬಾದ್
ಮೇರೆ ಔರ್ ಚಕ್ರವ್ಯೂಹ್ ಕೆ ಬೀಚ್
ಸಿರ್ಫ್ ಏಕ್ ಜಾನ್ ಲೇವಾ ನಿಕಟ್‌ತಾ ಹೈ
ಇಸ್ಕಾ ಮುಜ್ಹೆ ಪತಾ ಹಿ ನ ಚಲೇಗಾ
‘ತಕ್ಕಡಿಯಲ್ಲಿ ಒಂದು ಕಡೆ ಏನೂ ಮಾಡಲಾಗದ ನಪುಂಸಕತೆ,
ಮತ್ತೊಂದು ಕಡೆ ಪೌರುಷ.
ತಕ್ಕಡಿಯ ಮುಳ್ಳಿನ ಹತ್ತಿರ ಅರ್ಧಸತ್ಯ’ !
ಚಕ್ರವ್ಯೂಹದಂತಹ ಪೋಲಿಸ್ ವ್ಯವಸ್ಥೆ -ನಿಸ್ಸಹಾಯಕ ಅನಂತ್ …
ಸ್ಪಷ್ಟವಾಗಿ ಕಾಣುವ ‘ಅರ್ಧಸತ್ಯ’.
ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಪೋಷಕ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ಒಂದು ಜೀವಿತ ಕಾಲಕ್ಕೆ ಆಗುವಷ್ಟು ಪ್ರೇಕ್ಷಕರನ್ನು ಪಡೆದಿದೆ.
ಇದು ಮಾತ್ರ “ಅರ್ಧಸತ್ಯವಲ್ಲ’ !
ಚಿತ್ರ : ಅರ್ಧಸತ್ಯ, ವರ್ಷ-1983, ತಾರಾಗಣ : ಓಂಪುರಿ, ಸ್ಮಿತಾಪಾಟೀಲ್, ಅಮರೀಶ್ ಪುರಿ, ನಾಸಿರುದ್ದೀನ್ ಶಾ, ಸದಾಶಿವ್ ಅಮರಾಪುರ್‌ಕರ್, ಶಫಿ ಇನಾಮದಾರ, ಕವಿತೆಗಳು : ದಿಲೀಪ್ ಚಿತ್ರೆ. ಸಂಗೀತ : ಅಜಿತ್ ವರ್ಮನ್. ಛಾಯಾಗ್ರಹಣ ಮತ್ತು ನಿರ್ದೇಶನ : ಗೋವಿಂದ ನಿಹಲಾನಿ. ಸಮಯ : 130 ನಿಮಿಷ.
ಸೃಜನ್ ಅಂಕಣದಲ್ಲಿ “ಆಲಂ ಆರಾ”
ಸೃಜನ್ ಬಳ್ಳಾರಿಯವರು. ಅಲ್ಲಿಯ ಜಿಂದಾಲ್ ಕಂಪನಿಯಲ್ಲಿ ನೌಕರಿ. ಆದರೆ, ರಾಜ್ಯದುದ್ದಕ್ಕೂ ಪರಿಚಿತರಾಗಿರುವುದು ತಮ್ಮ ಚಿತ್ರಗಳಿಂದಲೇ. ಜತೆಗೆ ಚಿತ್ರಮೋಹಿ ಸಹ. ಪ್ರತಿ ಗುರುವಾರ ಭಾರತೀಯ ಚಿತ್ರಗಳ ಬಗ್ಗೆ ಬರೆಯುತ್ತಾರೆ. ಈ ವಾರದಿಂದ “ಸೃಜನ್ ಅಂಕಣ” ಆರಂಭ.
“ದೇದೆ ಖುದಾಕೆ ನಾಮ್ ಪೆ
ಪ್ಯಾರೆ ,ತಾಕತ್ ಹೈ ಗರ್ ದೆನೆ ಕಿ
ಕುಚ್ ಚಾಹೆ ಅಗರ್ ತೋ ಮಾಂಗ್ ಲೇ
ಮುಜ್ಹ್ ಸೆ ಹಿಮ್ಮತ್ ಹೋ ಗರ್ ಲೇನೇ ಕಿ”
(ನಿನಗೆ ಕೊಡುವ ಶಕ್ತಿ ಇದ್ದರೆ ದೇವರ ಹೆಸರಮೇಲೆ ಕೊಡು,ನಿನಗೆ ಏನಾದರೂ ಕೇಳ ಬೇಕೆಂದಿದ್ದರೆ ಅದನ್ನು ಕೂಡ ಕೇಳು )
ವಾಸಿರ್ ಮಹಮ್ಮದ್ ಖಾನ್ ಬರೆದ 1931 ಮಾರ್ಚ್ 13 ರಂದು ಬಿಡುಗಡೆಯಾದ ದೇಶದ ಮೊತ್ತ ಮೊದಲ ಟಾಕಿ ಚಿತ್ರ ‘ಆಲಂ ಆರಾ’ ಚಿತ್ರದ ಜನಪ್ರಿಯ ಹಾಡಿನ ಸಾಲಿದು. ಮೊದಲ ಮೂಕಿ ಚಿತ್ರ ‘ರಾಜಾ ಹರಿಶ್ಚಂದ್ರ ‘ ಮಹಾಭಾರತದ ಹಿನ್ನೆಲೆಯ ಕಥೆ ಆಧಾರಿತವಾಗಿದ್ದರೆ ‘ಆಲಂ ಆರಾ’ ಮಾತ್ರ ಪಾರ್ಸಿ ನಾಟಕ ಮತ್ತು ಜಾನಪದ ಕಥಾವಸ್ತು ಹೊಂದಿದ್ದ ಚಿತ್ರ.

ಇಬ್ಬರ ಹೆಂಡಿರ ಮುದ್ದಿನ ವೃದ್ಧ ರಾಜನೊಬ್ಬನಿಗೆ ಪುತ್ರಸಂತಾನವಿರಲಿಲ್ಲ.ರಾಣಿಯರಿಬ್ಬರೂ ಮೊದಲು ಮಗನನ್ನು ಹೆತ್ತು ರಾಜನನ್ನು ಆಶ್ಚರ್ಯ ಗೊಳಿಸಲು ಯೋಚಿಸುತ್ತಾರೆ.
ಆದರೆ ಇಬ್ಬರು ರಾಣಿಯರಲ್ಲಿ ಒಬ್ಬರಿಗೆ ಮಾತ್ರ ಆ ಅದೃಷ್ಟವಿದೆಯೆಂದು ಫಕೀರನೊಬ್ಬ ಹೇಳಿರುತ್ತಾನೆ. ಎರಡನೆಯ ರಾಣಿ ಸೈನ್ಯಾಧಿಕಾರಿಯ ಸ್ನೇಹ ಸಂಪಾದಿಸಿ ತನಗೆ ದಕ್ಕದ ಅದೃಷ್ಟ ಮತ್ತ್ಯಾರಿಗೂ ದಕ್ಕಬಾರದೆಂದು ದುರಾಸೆಯಿಂದ ರಾಜನ ಕುಟುಂಬವನ್ನು ಸರ್ವನಾಶ ಮಾಡಲು ಪಣ ತೊಡುತ್ತಾಳೆ.
ಆದರೆ ಸೈನ್ಯಾಧಿಕಾರಿಯ ಪ್ರಾಮಾಣಿಕತೆ ಆಕೆಗೆ ಕುತ್ತಾಗುತ್ತದೆ. ಹಗೆ ತೊಟ್ಟ ಹೆಣ್ಣು ತನಗೆ ಸಹಕರಿಸದ ಸೈನ್ಯಾಧಿಕಾರಿಯ ಇಡೀ ಕುಟುಂಬವನ್ನು ನಿರ್ನಾಮ ಮಾಡುತ್ತಾಳೆ.
ಆದರೆ ಹೇಗಿದ್ದರೂ ಅದು ಸಿನಿಮಾ ತಾನೆ? ಸೈನ್ಯಾಧಿಕಾರಿಯ ಚೆಲುವಿ ಮಗಳು ಹೇಗೋ ತಪ್ಪಿಸಿಕೊಲ್ಲುತ್ತಾಳೆ . ಆ ಚೆಲುವೆ (ಜುಬೇದಾ) ಕಾಡಲ್ಲಿ ಬೆಳೆಯುತ್ತಾಳೆ. ಹುಡುಗಿ ‘ಆಲಂ ಆರಾ(ಜಗತ್ತಿನ ರೂಪಸಿ)’. ಆಲಂ ಆರಾ ಮುಂದೆ ಕಾಡಿನ ತನ್ನ ಜನರೊಂದಿಗೆ ಅರಮನೆ ಮೇಲೆ ದಂಡೆತ್ತಿ ಬರುತ್ತಾಳೆ. ಮೋಸಗರ್ತಿ ರಾಣಿಯ ನಿಜ ಸ್ವರೂಪವನ್ನು ಬಯಲು ಮಾಡುತ್ತಾಳೆ. ಆಗಾಗಲೇ ಯುಕ್ತ ವಯಸ್ಸಿಗೆ ಬಂದಿದ್ದ ರಾಜಕುಮಾರ (ಮಾಸ್ಟರ್ ವಿಠಲ್) ಆಲಂ ಆರಾ ಳನ್ನು ವರಿಸುತ್ತಾನೆ. ಶುಭಂ! ಇದು ಕಥೆ.
ಇಲ್ಲಿ ಪಾರ್ಸಿ ನಾಟಕ ಕೂಡ ರೋಡ್ಗರ್ಸ್ ಮತ್ತು ಹ್ಯಾಮ್ಮರ್ ಸ್ಟೀನ್ ರ ಯುನಿವರ್ಸಲ್ ಪಿಚ್ಚರ್ಸ್ ನಿರ್ಮಾಣದ ‘ಷೋ ಬೋಟ್’ ಎಂಬ ಹಾಲಿವುಡ್ ಸಿನೀಮಾದಿಂದ ಕೂಡ ‘ಆಲಂ ಆರಾ ‘ಪ್ರೇರಣೆ ಗೊಂದು ನಿರ್ಮಾಣವಾಗಿತ್ತು.
ಅರ್ದೇಷೆರ್ ಇರಾನಿ ನಿರ್ದೇಶಿಸಿದ್ದ ,ಇಂಪೀರಿಯಲ್ ಮೂವಿ ಟೋನ್;ಸಂಸ್ಥೆ ನಿರ್ಮಿಸಿದ್ದ ಈ ಚಿತ್ರ ಮುಂಬೈ ನ ಅವರದ್ದೇ ಟಾಕಿಸ್ ಮೆಜೆಸ್ಟಿಕ್ ನಲ್ಲಿ ಬಿಡುಗಡೆಯಾಗಿ ಜನರನ್ನು ಹುಚ್ಚು ಹಿಡಿಸಿತ್ತು.ಪ್ರತಿದಿನ ಪ್ರವಾಹದಂತೆ ಜನ ಚಿತ್ರ ನೋಡಲು ಬರುತ್ತಿದ್ದರು.ನಾಲ್ಕಾಣೆಯ ಸಿನಿಮಾ ಟಿಕೆಟ್ಸ್ 4-5 ರೂಪಾಯಿಗಳಿಗೆ ಬ್ಲಾಕ್ ನಲ್ಲಿ ಮಾರುತ್ತಿದ್ದರು.

ಚಿತ್ರದ ಆ ಕಾಲದ ಪೋಸ್ಟರ್
7 ಮಧುರವಾದ ಹಾಡುಗಳನ್ನು ಹೊಂದಿದ್ದ ‘ಆಲಂ ಆರಾ’ ಚಿತ್ರಕ್ಕೆ ಫಿರೋಜ್ ಶಹ ಮಿಸ್ತ್ರಿ ,ಬಿ. ಇರಾನಿ ಅದ್ಭುತವಾದ ಸಂಗೀತವನ್ನು ಸಂಯೋಜಿಸಿದ್ದರು. ವಿಲ್ಫೋರ್ದ್ ದೆಮಿಂಗ್ ಹಾಗೂ ಆದಿ.ಎಂ .ಇರಾನಿ ಸಿನಿಮಾಟೋಗ್ರಾಫರ್ಸ್ ಆಗಿದ್ದರು. ಸಿನಿಮಾ ಪೋಸ್ಟರ್ ನಲ್ಲಿ ‘All living, Breathing 100% talking’ ಎಂದು ಬರೆದಿದ್ದರು.
ಅರ್ದೆಷೆರ್ ಇರಾನಿ ಭಾರತಿಯ ಶಬ್ದ ಚಿತ್ರದ ಬ್ರಹ್ಮ!
ಇಡೀ ದೇಶದಿಂದ ‘ಆಲಂ ಆರಾ’ ಸಿನಿಮಾಗಾಗಿ ಬೇಡಿಕೆ ಬರತೊಡಗಿದಾಗ ಸೌಂಡ್ ಪ್ರೋಜಕ್ಟಾರ್ ದೊಂದಿಗೆ ನಿರ್ದೇಶಕರು ತಿರುಗಾಟಕ್ಕೆ ಸಿದ್ಧವಾಗೇ ಬಿಟ್ಟರು. ಸೌಂಡ್ ಆಪರೇಟರ್ ಆಗಿದ್ದ ಟಿ.ಮಹದೇವ್ ಹೇಳುತ್ತಾರೆ. ‘ಚೆನ್ನೈ ನ ಸೆಂಟ್ರಲ್ ಸ್ಟೇಷನ್ ನಲ್ಲಿ ನಾವು ಇಳಿಯುತ್ತಿದ್ದಂತೆಯೇ ಸೆಂಟ್ರಲ್ ಥಿಯೇಟರ್ ಮಾಲೀಕರು ಹೂವಿನ ಹಾರಗಳೊಂದಿಗೆ ಸ್ವಾಗತಿಸಿದ್ದರು. ತಿರುಚ್ಚಿಯಲ್ಲಿ ಸಿನಿಮಾ ಯುನಿಟ್ ಗಾಗಿ ರೈಲು ಒಂದು ತಾಸು ತಡವಾಗಿ ಹೊರಟಿತ್ತು.
ತುಮಕೂರಿನಲ್ಲಾದರೆ ಇಡೀ ಸಿನೀಮಾ ಯುನಿಟ್ ಯಾವುದೇ ಹೋಟೆಲ್ ನಲ್ಲಿ ತಿಂಡಿ ,ಊಟ ಉಚಿತವಾಗಿ ಮಾಡಬಹುದೆಂದು ಘೋಷಿಸಿದ್ದರು.
‘ಆಲಂ ಆರಾ’ ಸಿಂಗಲ್ ಪ್ರೋಸೆಸ್ಸ್ ನಲ್ಲಿ ತಯಾರಾದ ಸಿನಿಮಾ.ಅಂದರೆ ಪಿಚ್ಚರ್ ನೆಗೆಟಿವ್ ಗೆ ಶಬ್ದವನ್ನು ಸೇರಿಸುವದು.(ಆಗಿನ್ನೂ play back ಪದ್ದತಿ ಇರಲಿಲ್ಲ.) ಚಿತ್ರೀಕರಣ ದಲ್ಲೇ ಧ್ವನಿಗ್ರಹಣ ನಡೆಯುತ್ತಿತ್ತು.೪ ತಿಂಗಳ ಸಮಯದಲ್ಲಿ ತಯಾರಾಗಿದ್ದ ಈ ಸಿನಿಮಾದ ಬಜೆಟ್ ಬರೀ 4000 ರೂಪಾಯಿಗಳು. 10, 500 ಅಡಿಗಳಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರ ಅಪ್ಪಟ ಸ್ವದೇಶಿ ಚಿತ್ರ.
ಚಿತ್ರ : ಆಲಂ ಅರಾ, ಭಾಷೆ : ಹಿಂದಿ, ಸಮಯ : 124 ನಿಮಿಷ, ನಿರ್ದೇಶಕ : ಅರ್ದೇಷೆರ್ ಇರಾನಿ




