ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಮಧುರ್ ಭಂಡಾರ್ಕರ್-Madhur Bhandarkar’ Category

“ಫ್ಯಾಷನ್” ಸಿನಿಮಾ ಕೇವಲ ಪಿಕ್ಶನ್ ಅಲ್ಲ !

without comments

ಸಾಂಗತ್ಯದ ಬಳಗ ದೊಡ್ಡದಾಗುತ್ತಿರುವುದು ಖುಷಿಯ ಸಂಗತಿ. ಮಧುರ್ ಭಂಡಾರ್ಕರ್ ಸಿನಿಮಾ ಉತ್ಸವ ಮುಂದುವರಿದಿದೆ. ಅವರ “ಫ್ಯಾಷನ್” ಹೊಸ ಕಥಾವಸ್ತುವಿನ ಚಿತ್ರ. ವಿನಾಯಕ ಭಟ್ಟ ಮೂರೂರು ಈ ಚಿತ್ರದ ಕುರಿತು ಕಳಿಸಿದ ಅನಿಸಿಕೆಯನ್ನು ಪ್ರಕಟಿಸಲಾಗಿದೆ. ಇಲ್ಲಿ ಪ್ರಕಟಗೊಂಡಿರುವ ಎಲ್ಲ ಚಿತ್ರಗಳ ಭಿನ್ನ ಭಿನ್ನ ನೋಟಗಳನ್ನು saangatya@gmail.com ಕಳುಹಿಸಿ.

ಫ್ಯಾಷನ್ ಅಂದರೆ ಅದೇ…
ಯಾವುದನ್ನು ಎಷ್ಟು ತೋರಿಸಬೇಕೊ ಅಷ್ಟು ತೋರಿಸಬೇಕು. ಯಾವುದನ್ನು ಮುಚ್ಚಿಡಬೇಕೊ ಅದನ್ನು ಮುಚ್ಚಿಡಬೇಕು!

fashion-cut-copy

ಫ್ಯಾಷನ್ ಸಿನಿಮಾದಲ್ಲೂ ಮಧುರ್ ಭಂಡಾರ್ಕರ್ ಅದನ್ನೇ ಮಾಡಿದ್ದಾರೆ. ಬಟ್ಟೆಗಳ ಪಾರದರ್ಶಕದ ಮೂಲಕ ಬೆತ್ತಲೆ ತೋರಿಸಹೊರಟ ಫ್ಯಾಷನ್ ಲೋಕವನ್ನು, ಸಿನಿಮಾ ಮಂದಿರದಲ್ಲಿರುವ ಬಟ್ಟೆ ಪರದೆ ಮೇಲೆ ನಿರ್ದೇಶಕ ಮಧುರ್ ಭಂಡಾರ್ಕರ್ ತೆರೆದಿಟ್ಟಿದ್ದಾರೆ. ಅದನ್ನೆಲ್ಲ ಎಷ್ಟು ತೋರಿಸಬೇಕೊ ಅಷ್ಟೇ ತೋರಿಸಿದ್ದಾರೆ.

ಫ್ಯಾಷನ್ ಎಂದರೆ ಥಳುಕು-ಬಳುಕು ಎರಡೂ ಇರುವ ಕ್ಷೇತ್ರ ಎಂಬುದಷ್ಟೇ ನಮಗೆ ಗೊತ್ತಿತ್ತು. ಫ್ಯಾಷನ್ ಟಿ.ವಿ,  ಮ್ಯಾಗಜಿನ್‌ಗಳ ಮುಖಪುಟದಲ್ಲಿ, ಜಾಹೀರಾತಿನಲ್ಲಿ ನೋಡಿದ್ದೆವು. ಅವರ-ಅವಳ ನಗುಮುಖದ ಹಿಂದೆ ನಮಗೆ ಅರಿಯದ ನೋವು ಇರಬಲ್ಲದು ಎಂಬುದರ ಅರಿವು ಅಷ್ಟಾಗಿರಲಿಲ್ಲ. ಆದರೆ ಭಂಡಾರ್ಕರ್ 3 ತಾಸಿನಲ್ಲಿ ಫ್ಯಾಷನ್ ಲೋಕದ ಸಂಪೂರ್ಣ ಪರಿಚಯ ಮಾಡಿಸುತ್ತಾರೆ. ಥಳುಕು-ಬಳುಕು ಜತೆಗೆ ಕೊಳಕು ಇದೆ ಎಂದಿದ್ದಾರೆ. ಅವರ ಹಿಂದಿನ ಸಿನಿಮಾಗಳಂತೆ!

ಫ್ಯಾಷನ್ ಸಿನಿಮಾದಲ್ಲಿ ಕನಸು, ಆಸೆಗಳಿವೆ. ಅದರ ಹಿಂದೆ ಬಿದ್ದ ಮಧ್ಯಮ ವರ್ಗದ ಹುಡುಗಿಯ ವ್ಯಥೆಯಿದೆ. ಭಾವನೆಗಳಿವೆ. ದುಃಖವಿದೆ, ಸೆಕ್ಸ್ ಇದೆ. ಇತ್ತೀಚೆಗೆ ಭಾರೀ ಸುದ್ದಿಗೀಡಾಗುತ್ತಿರುವ, ನಮ್ಮ ದೇಶದಲ್ಲೂ ಅಧಿಕೃತ ಮುದ್ರೆ ಪಡೆಯಲು ಯತ್ನಿಸುತ್ತಿರುವ ಹಾಗೂ ಫ್ಯಾಷನ್ ಲೋಕದಲ್ಲಿರುವ ಸಲಿಂಗ ಕಾಮದ ಬಗ್ಗೆಯೂ ಸೂಚ್ಯ  ಉಲ್ಲೇಖವಿದೆ. ನೀವು ಎಷ್ಟೇ ಉತ್ತುಂಗದಲ್ಲಿದ್ದರೂ ಹಮ್ಮು-ಬಿಮ್ಮು ಬೆಳೆಸಿಕೊಳ್ಳಬೇಡಿ ಎಂಬ ಸಂದೇಶವೂ ಇದೆ. ಉತ್ತಮ ಸಂಗೀತವಿದೆ.

ಸಿನಿಮಾ ನೋಡಿ ಮುಗಿದ ನಂತರ ಕುಳಿತು ಯೋಚಿಸಿದರೆ ನಿರ್ದೇಶಕ, ಒಂದೇ ಒಂದು ದೃಶ್ಯವನ್ನೂ ಅನವಶ್ಯಕವಾಗಿ ಸೇರಿಸಿಲ್ಲ ಅನ್ನಿಸುತ್ತದೆ. ಹಾಡುಗಳು ಹಲವು ಬಾರಿ ಕೇಳುವಂತಿವೆ. ಅವು ಸಾಕಷ್ಟು ಜನಪ್ರಿಯವೂ ಆಗಿವೆ. ‘ಮರಜಾಂವಾ’, ‘ಕುಚ್ ಖಾಸ್ ಹೆ’, ‘ಫ್ಯಾಷನ್ ಕಾ ಜಲ್ವಾ’ ಹಾಡುಗಳು ಇಂದಿಗೂ ಕೇಳಬೇಕು ಎನಿಸುವಂಥವು. ಇಷ್ಟು ಹಾಡಿದ್ದರೂ ಒಂದೇ ಒಂದು ಡ್ಯಾನ್ಸ್ ಇಲ್ಲ!

ಚಿತ್ರ ನಾಯಕಿ ಮೇಘನಾ ಹಾಗೂ ಫ್ಯಾಷನ್ ಲೋಕದಲ್ಲೇ ಪರಿಚಯವಾದ ಗೆಳೆಯ ‘ಮಾನವ್’ ಜತೆ ಪ್ರೇಮ ಅಂಕುರಿಸುತ್ತದೆ. ಸಮಾಧಾನದ ಸಂಗತಿಯೆಂದರೆ ಅವರು ಒಂದು ಬಾರಿಯೂ ಹಾಡಿ ಕುಣಿಯುವುದಿಲ್ಲ. ಹಾಗೆ ಅವರು ಹಾಡದಿರುವುದರಿಂದ ಹೊತ್ತಲ್ಲದ ಹೊತ್ತಲ್ಲಿ, ಆಫ್ ಸೀಜನ್‌ನಲ್ಲಿ ಮಳೆಯೂ ಬರುವುದಿಲ್ಲ! ಇವರ ಪ್ರೇಮವನ್ನೇ ನೆಪವಾಗಿಸಿಕೊಂಡು ಈಗೀಗ ಮಹಾನಗರಗಳಲ್ಲಿ ರೂಢಿಗೆ ಬರುತ್ತಿರುವ ಲಿವಿಂಗ್ ಸಂಬಂಧದ ಝಲಕ್ ಒದಗಿಸಿದ್ದಾರೆ.

ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾಳ ಪ್ರತಿಸ್ಪರ್ಧಿ ಪಾತ್ರ ಮಾಡಿದ ಕಂಗನಾ ರಾವ್ ಇಷ್ಟವಾಗಬಹುದು. ಅವಳು ನಟಿಗಿಂತ ಹೆಚ್ಚಾಗಿ ಮಾಲ್ ಒಂದರಲ್ಲಿ ಆಕಸ್ಮಿಕವಾಗಿ ಕಂಡು, ಕಣ್ಸೆಳೆದು ಹೋದ ಹುಡುಗಿ ಅನ್ನಿಸಿಬಿಡುತ್ತಾಳೆ. ನಟನೆಯಲ್ಲಿ ಆಕೆ ಚೋಪ್ರಾಳನ್ನೂ ಹಿಂದಿಕ್ಕಿದ್ದಾಳೆ.

ಈಕೆಯ ಪಾತ್ರದ ಮೂಲಕ ನಿರ್ದೇಶಕ, ಕೆಟ್ಟ ಚಟಗಳಿಗೆ ಬಲಿಯಾದರೆ ಆಗುವ ಪರಿಣಾಮಗಳನ್ನು ಚಿತ್ರಿಸಿದ್ದಾರೆ. ನೀವು ಎಷ್ಟೇ ಉನ್ನತ ಸ್ಥಾನದಲ್ಲಿರಿ ಹಮ್ಮು ಬೆಳೆಸಿಕೊಂಡರೆ ಅಧಃಪತನಕ್ಕೆ ಹೆಚ್ಚು ದಿನ ಬೇಕಿಲ್ಲ ಎಂಬ ಸಂದೇಶವೂ ರವಾನೆಯಾಗಿದೆ. ಅದಕ್ಕೆ ನಾಯಕಿಯ ಪಾತ್ರದ ನಿರೂಪಣೆ.  ಹಾಗೆಯೇ ಫ್ಯಾಷನ್ ಪ್ರಪಂಚದ ಸಂಪಕ್ಷ, ಹೆಸರು ಎಲ್ಲವನ್ನೂ ಕಳೆದುಕೊಂಡ ನಾಯಕಿ ಒಂದು ವರ್ಷ ಬಿಟ್ಟು ಮರಳಿ ಅದೇ ಕ್ಷೇತ್ರಕ್ಕೆ ಬಂದು, ಮತ್ತೆ ಔನ್ನತ್ಯಕ್ಕೇರುವುದನ್ನು ತೋರಿಸುವ ಮೂಲಕ ಆಶಾವಾದವನ್ನು ಬಿತ್ತಿದ್ದಾರೆ. ಏನೇ ಆದರೂ ಜೀವನದಲ್ಲಿ ಎಲ್ಲ ಮುಗಿಯುವುದಿಲ್ಲ, ತಲೆ ಮೇಲೆ ಕೈ ಹೊತ್ತು ಕೂರುವ ಅಗತ್ಯವಿಲ್ಲ ಎಂಬ ಸಂದೇಶದ ಮೂಲಕ…

‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಕೆಲಸವು ಸಾಗದು ಮುಂದೆ’ ಎಂಬುದನ್ನು ನೆನಪಾಗುವುದು ಇಲ್ಲಿಯೇ. ನಾಯಕಿಯ ಅಪ್ಪನ ಪಾತ್ರದ ಮೂಲಕ ‘ಓಟದಲ್ಲಿ ಬಿದ್ದವನು ಸೋಲುವುದಿಲ್ಲ. ಬಿದ್ದೂ ಏಳದವನು ಮಾತ್ರ ಸೋಲುತ್ತಾನೆ’ ಎಂಬುದನ್ನು ಹೇಳಿಸಿ, ಪ್ರೇಕ್ಷಕರಿಗೂ ಸ್ಪೂರ್ತಿ ನೀಡಿದ್ದಾರೆ.

ಬಹುಶಃ ಭಂಡಾರ್ಕರ್ ಹೊರತುಪಡಿಸಿ ಮತ್ಯಾರೇ ಇದನ್ನು ನಿರ್ದೇಶಿಸಿದ್ದರೂ, ಅದರಲ್ಲಿ ಇನ್ನೊಂದಿಷ್ಟು ಅನಗತ್ಯ ಸೆಕ್ಸ್, ಮತ್ತೊಂದಿಷ್ಟು ಗ್ಲಾಮರ್, ಡ್ಯಾನ್ಸ್ ತುರುಕುತ್ತಿದ್ದರು. ಭಂಡಾರ್ಕರ್ ಮಾತ್ರ ಅತಿಯನ್ನು ತಿರಸ್ಕರಿಸುತ್ತಲೇ ಮಿತವಾದುದನ್ನು ಹೇಳಿ ಅರ್ಥ ತುಂಬಬಲ್ಲವರು. ಜತೆಗೆ ಕುಟುಂಬವಿಡೀ ಕೂತು ನೋಡಬಲ್ಲ ಚಿತ್ರವಾಗಿಸಬಲ್ಲವರು. 

ಈ ಚಿತ್ರದ ಯಶಸ್ಸಿನಲ್ಲಿ ಭಂಡಾರ್ಕರ್‌ಗೆ ಪೂರ್ಣ ಪಾಲು ಸಿಗದು. ಯಾಕೆಂದರೆ ಸ್ವಲ್ಪ ಪಾಲು ಹಾಡು ಬರೆದೆ ಇರ್ಫಾನ್ ಸಿದ್ದಿಕಿ, ಸಂದೀಪ್ ನಾಥ್, ಸಂಗೀತ ನೀಡಿದ ಸಲೀಂ-ಸುಲೇಮಾನ್‌ಗೆ ಸಲ್ಲಬೇಕು. ಸಿನಿಮಾದ ಕತೆ ಬರೆಯುವಲ್ಲೂ ಮಧುರ್ ಜತೆ ಅಜಯ್ ಮೋಂಗಾ-ಅನುರಾಧಾ ತಿವಾರಿ ಪಾಲುದಾರರು.

ಸಾಮಾನ್ಯವಾಗಿ ಭಂಡಾರ್ಕರ್ ಯಾವುದೇ ವಿಷಯದಲ್ಲಿ ಸಿನಿಮಾ ಮಾಡಿದರೂ ಆ ಕ್ಷೇತ್ರ ಒಳ-ಹೊರಗಳನ್ನು, ತಂತ್ರಗಳನ್ನು, ಹುಳುಕುಗಳನ್ನು ದಿಟ್ಟವಾಗಿ ಹೇಳುತ್ತಾರೆ. ಆ ಕ್ಷೇತ್ರದ ನಾವರಿಯದ ಮುಖ ಪರಿಚಯಿಸುತ್ತಾರೆ ಎಂಬ ಮಾತಿದೆ. ಅದು ಫ್ಯಾಶನ್‌ಗೂ ಅನ್ವಯ. ಇಷ್ಟಿದ್ದೂ ಈ ಸಿನಿಮಾವನ್ನು ಮತ್ತೆ ನೋಡಬೇಕು ಅನ್ನಿಸದು.

ಕಾರ್ಪೋರೇಟ್ : ಮಹೇಶರ ಫೇವರಿಟ್ !

with 2 comments

ಮಹೇಶ್ ಹೆಗಡೆ ಮತ್ತೊಮ್ಮೆ ಸಾಂಗತ್ಯಕ್ಕೆ ಬರೆದಿದ್ದಾರೆ. ತಮ್ಮ ನೆಚ್ಚಿನ “ಕಾರ್ಪೋರೇಟ್” ಸಿನಿಮಾದ ಬಗೆಗಿನ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ. ಇಲ್ಲಿ ಪ್ರಕಟವಾಗುತ್ತಿರುವ ಬರಹಗಳ ಕುರಿತ ಮುಂದಿನ ಚರ್ಚೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಸಿನಿಮಾಗಳ ಕುರಿತೇ ನಿಮ್ಮದೇ ಆದ ಹೊಸ ಒಳನೋಟಗಳ ಬರಹವಿದ್ದರೆ saangatya@gmailಗೆ ಕಳಿಸಿಕೊಡಿ.

*

He is a Star movie maker. ನಿರಂತರವಾಗಿ ಹೊಸತನ್ನು ಕೊಡುತ್ತಿರುವ ಒಬ್ಬ ವಿಶೇಷ ನಿರ್ದೇಶಕ. ಮತ್ತೆ ಮತ್ತೆ ಗೆಲುವು ತಂದುಕೊಂಡವ. ಅದು ‘ಮಧುರ್ ಭಂಡಾರ್ಕರ್’ ತಾಕತ್ತು. ನೋಡುವ ಮೊದಲೇ ನಿಮ್ಮನ್ನು ಸೆಳೆದುಬಿಡುವ ಕಲೆ ಅವರಲ್ಲಿದೆ. ಒಬ್ಬ ಅದೆಷ್ಟು ‘ಸ್ಟಾರು’ ಇದ್ಯೋ ಅಷ್ಟನ್ನೂ ಕೊಟ್ಬಿಡ್ತೀನಿ ಅನ್ನುವಂತೆ ತಮ್ಮ ಸಿನೆಮಾ ಮಾಡಿರ್ತಾರೆ. ಪ್ರತಿ ಬಾರಿಯೂ. ವಿಷಯದ ಆಯ್ಕೆಯ ಮಟ್ಟಿಗೆ ಭಂಡಾರ್ಕರ್ ಹಿಂದಿ ಸಿನೆಮಾ ಜಗತ್ತಿನ ನಿಜವಾದ ಹೀರೋ. ಮಸಾಲಾ ಜಗತ್ತಿಗೆ ‘ಮಸಾಲಾ’ ಚಿತ್ರಗಳನ್ನು ಕೊಟ್ಟರೂ ಅವರು ಇಷ್ಟವಾಗುವುದು ‘ಕಾರ್ಪೊರೇಟ್’ ನಂಥ ‘Thought Provoking’ ಸಿನೆಮಾ ನೀಡಿದ್ದಕ್ಕಾಗಿ. corporate-2

ಅವರು ತಮ್ಮ ಉಳಿದೆಲ್ಲ ಸಿನಿಮಾಗಳಿಗಿಂತ ವಿಭಿನ್ನ ಅಥವಾ ಬಾಲಿವುಡ್ ಇನ್ನೂ ಪ್ರಯತ್ನಿಸಿರದ ವಿಷಯದಲ್ಲಿ ಈ ಸಿನಿಮಾ ಮಾಡಿದ್ದು. ಸಾಮಾನ್ಯರಿಗೆ! ತಿಳಿದಿರದ ವಿಷಯವನ್ನು ತಂದು, ಸಿನಿಮಾ ಮಾಡುವ “ವಸ್ತು” ವೇ ಅಲ್ಲದ ಕಾರ್ಪೋರೇಟ್ ಜಗತ್ತಿನ – Pepsi-Coke-Pesticide ಅವ್ಯವಹಾರಗಳಿಗೆ ಸುಂದರ ರೂಪ ನೀಡಿ ಮತ್ತೆ ಗೆದ್ದದ್ದು. ನಿಜ, ನಾವಿನ್ನೂ ಕಲಿಯಬೇಕಾದ್ದು ಬಹಳಷ್ಟಿದೆ. ಈ ‘ಪಾನೀಯ’ ವಿಷಯ ಬಂದರೆ ಮಾತನಾಡಲು ಮುಗಿಯದಷ್ಟಿದೆ. ಸದ್ಯಕ್ಕೆ ವಿಷಯ ಅದಲ್ಲ, ಆ ಕುರಿತ ಕಾರ್ಪೋರೇಟ್ ನದ್ದು.

The Secret of Business is to Know what other person knows, and a little more.? ಸಾಮ್ರಾಜ್ಯಶಾಹಿ ಜನರ ಮಹತ್ವಾಕಾಂಕ್ಷಿ ಯುದ್ಧಭೂಮಿ ಈ ವ್ಯಾವಹಾರಿಕ ಜಗತ್ತು. ಮೋಸ ಮತ್ತು ಲಂಚಕೋರತನದ ಮನಸ್ಸುಗಳ ಪ್ರಪಂಚ. ಅಲ್ಲಿ ಚೌಕಟ್ಟುಗಳಿಲ್ಲ. ಹಾಗೆ ಹೇಳುತ್ತಾ ಸಾಗುತ್ತದೆ ಈ ಸಿನಿಮಾ, ಇಬ್ಬರು ಮಂಚೊಣಿಯಲ್ಲಿರುವ ಕಂಪನಿಯ ಒಡೆಯರನ್ನಿಟ್ಟುಕೊಂಡು. ಸೆಹಗಲ್ ಗ್ರೂಪ್ ಅಂತ ಒಂದು ಮಾರ್ವಾ ಇಂಟರ್ನ್ಯಾಶನಲ್ ಅಂತ ಇನ್ನೊಂದು. ಎರಡೂ ಒಂದೇ ಥರದ ವ್ಯವಹಾರದ ಮನೆಗಳು! ’Powerfull, Ambitious, relentless’.

ಮೆನನ್ ರಿತೇಶ್ ಪಾತ್ರಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತಾರೆ. ಆತ ಗೆಲುವು ಕಾಣದ, ಆದರೆ ಸೋಲನ್ನೊಪ್ಪದ ಕನಸುಗಾರನ ಪಾತ್ರಕ್ಕೆ ಹೇಳಿಮಾಡಿಸಿದ ಆಯ್ಕೆ. ಅಂತೆಯೇ ತನ್ನ ‘ಪ್ರೀತಿ’ಯನ್ನು ವಿಪರೀತವಾಗಿ ಹಚ್ಚಿಕೊಳ್ಳುವ ಪಾತ್ರಕ್ಕೂ. ಭಾವನೆಗಳನ್ನೂ, ಸಂದರ್ಭಗಳನ್ನೂ ಅಭಿವ್ಯಕ್ತಿಸುವ ಕೆಲ ಸನ್ನಿವೇಶಗಳಲ್ಲಿ ಅವರ ಅಭಿನಯ ವ್ಹಾ ಅನ್ನುವಷ್ಟು ಸುಂದರ. ‘Acted to Perfection’.

ಸಹಜವಾಗಿ, ಸುಂದರವಾಗಿ ಎಲ್ಲೂ ಹಿಡಿತ ತಪ್ಪದಂತೆ ಆತ ನಿರ್ವಹಿಸಿದ ಕೆಲವು ಸನ್ನಿವೇಶಗಳಿವೆಯಲ್ಲ- ಭಾವನಾತ್ಮಕವಾದ, ಹತಾಶೆಯ, ಹುಚ್ಚುತನದ, ಸಿಟ್ಟಿನ ಸನ್ನಿವೇಶಗಳು- ಅಲ್ಲೆಲ್ಲಾ ಆತ ಅದ್ಭುತ ಅನ್ನಿಸುವಂತೆ ತನ್ನ ಕೌಶಲ್ಯವನ್ನು ತೋರಿದ್ದಾನೆ. Thanks to Kay Kay. He is Flawless. ‘ದೇವಯಾನಿ ಭಕ್ಷಿ’ಯಾಗಿ ಲಿಲ್ಲಿಟಿ ದುಬೆ ನಿರ್ವಹಿಸಿದ ಪತ್ರಕರ್ತೆಯ ಪಾತ್ರ ಕೆಲ ಉತ್ತಮ ಸನ್ನಿವೇಶಗಳ ನಿರ್ವಹಣೆಯ ಹೊಣೆ ಹೊತ್ತಿದ್ದು. ವೃತ್ತಿ, ವೃತ್ತಿಪರ ಲಾಭಗಳ ಮಧ್ಯೆ ಭಾವನೆಗಳಿಗೆ ಬೆಲೆಯಿಲ್ಲ ಅನ್ನಿಸುವಂತೆ ( ಆಕೆ ಕುಡಿಯುವ, ಕುಡಿದು ತನ್ನ ಚಾಲಕನ ಮುಂದೆ ಅಳುವ ಸನ್ನಿವೇಶ ನೋಡಿ/ನೆನಪಿಸಿಕೊಳ್ಳಿ) ಮಾಡುತ್ತದೆ ಕೆಲ ಸಮಯ. ಆಕೆಗೆ ಇನ್ನೂ ಒಳ್ಳೆಯ ಪಾತ್ರ ಸಿಗಬಹುದಿತ್ತು!. ಅಷ್ಟು ಬಿಟ್ಟರೆ, ಪ್ರತಿಯೊಬ್ಬರ ನಟನೆಯೂ ಸ್ಪಷ್ಟವಾಗಿ ನಿರೂಪಿಸಿದ್ದು, ಹೇಳುವುದಕ್ಕೇನೂ ಇಲ್ಲ ಆ ಕುರಿತು.

ಮೊದಲೇ ಹೇಳಿದಂತೆ ‘ಸೆಹಗಲ್ ಗ್ರೂಪ್’ನ ವಿನಯ್ ಸೆಹಗಲ್ (ರಜತ್ ಕಪೂರ್) ಹಾಗೂ ‘ಮಾರ್ವಾ’ದ ಧರ್ಮೇಶ್ ಮಾರ್ವಾ (ರಾಜ್ ಬಬ್ಬರ್) ನಡುವಿನ ಸಮರದಂತೆ ಚಿತ್ರಿಸಲ್ಪಟ್ಟ ‘ಕಾರ್ಪೊರೇಟ್’ ಅವರ ಜೊತೆ ಕೆಲಸ ಮಾಡುವ ಹಲವರನ್ನು ಒಳಗೊಂಡು ಸಾಗುತ್ತದೆ. ಅವರೊಳಗಿನ ಸ್ಪರ್ಧೆ, ಪರಿಧಿಯನ್ನು ದಾಟಿ ಬೆಳೆಯುವ ವ್ಯವಹಾರಕ್ಕೆ ತಕ್ಕಂತೆ ನಿರೂಪಿಸುತ್ತಾ ನಿರ್ದೇಶಕ ಸೇರಿಸಿದ ಮತ್ತೊಂದು ಪಾತ್ರ ‘ನಿಶಿ ಗಂಧಾ’.

ಬಿಪಾಶಾ ಬಸು ನಿರ್ವಸಿದ್ದು. (ಆಕೆಯ ಪಾತ್ರವನ್ನು ನೋಡಬೇಕೆಂಬ ಹಂಬಲ ನನಗೂ ಇತ್ತು ಬಿಡಿ). ಆಕೆಯ ಮೊದಲಿನ ಗ್ಲಾಮರಸ್ ರೋಲ್ ನೋಡಿದವರಿಗೆ ಇದು ವಿಭಿನ್ನ ಪಾತ್ರ. ಅಭಿನಯ ಕೂಡಾ ಚೆನ್ನಾಗಿದೆ/ಚೆನ್ನಾಗಿ ತೆಗೆದಿದ್ದಾರೆ.  ಪಾತ್ರಕ್ಕೆ ತಕ್ಕಂತೆ ಆಕೆ ಸಿನಿಮಾ ಕಟ್ಟಿಕೊಡುತ್ತಾಳೆ. ಮೊದಲರ್ಧದಲ್ಲಿ ಸ್ಪರ್ಧಾತ್ಮಕವೆನ್ನಿಸುವ ಅಭಿನಯ ನೀಡುವ ಆಕೆ, ನಂತರದಲ್ಲಿ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾಳೆ. ‘She is a Watchable Executive’.

ರಜತ್ ಕಪೂರ್ ತನ್ನ ಬುದ್ಧಿವಂತ ಇಂಡಸ್ಟ್ರಿಯಲಿಸ್ಟ್ ಪಾತ್ರಕ್ಕೆ ನ್ಯಾಯ ಒದಗಿಸಿದರೆ, ರಾಜ್ ಬಬ್ಬರ್ ತನ್ನ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ಸುಮ್ಮನಾಗಿದ್ದಾರೆ. ಲಂಚಕೋರ ಮಂತ್ರಿಯಾಗಿ ವಿನಯ್ ಆಪ್ಟೆ ಅಭಿನಯ ಸುಂದರ. ಸಂದೀಪ್ ಮೆಹ್ತಾ, ನೋಡಬೇಕಾದ ಪಾತ್ರ. ಸಿಕ್ಕ ಅವಕಾಶದಲ್ಲಿ ಸುಂದರ ಅಭಿನಯ. ಸಿ.ಇ.ಓ ರೂಪವನ್ನು ಸರಳವಾಗಿ ತೋರಿದ್ದಾನೆ. ಮೊದ ಮೊದಲು ಅಂತಹ ಛಾಪನ್ನೇನೂ ಮೂಡಿಸುವುದಿಲ್ಲ ಚಿತ್ರ.

ಅರ್ಧದಷ್ಟಾಗುವವರೆಗೆ ವಿಶೇಷವನ್ನೇನೂ ನೀಡದ ಮಧುರ್, ದ್ವಿತೀಯಾರ್ಧದಲ್ಲಿ ತನ್ನೆಲ್ಲಾ ಪರಿಶ್ರಮದೊಂದಿಗೆ ಕಥೆಯನ್ನು ತೆರೆದಿಡುತ್ತಾರೆ. ಆಗಲೇ ಚಿತ್ರ ಸಾಮಾನ್ಯರಿಗೆ ತೆರೆದುಕೊಳ್ಳುತ್ತಾ, ಸರಳವಾಗುತ್ತಾ ಸಾಗುವುದು. ಅಂತ್ಯದ ಕೆಲ ಬದಲಾವಣೆ, ಬ್ಯುಸಿನೆಸ್ ಟ್ರಿಕ್ಕುಗಳು ಬೆನ್ನು ಹುರಿಯಲ್ಲಿ ಛಳುಕು ಹುಟ್ಟಿಸುತ್ತವೆ. ಅನಿರೀಕ್ಷಿತ ಬದಲಾವಣೆಗಳು, ಸಿನಿಮಾದ ಅಂತ್ಯದವರೆಗೂ, ಯೋಚನೆಗೀಡುಮಾಡುತ್ತವೆ. ಒಂದು ಬದಿಯ ಕಾರ್ಪೊರೇಟ್ ಜಗತ್ತನ್ನು ಬೆತ್ತಲಾಗಿಸುತ್ತಾ ಹೋಗುತ್ತಾರೆ ಮಧುರ್.

ನಡುವೆ ಸಂಗೀತವಿದೆ. ಸಂಗೀತವಷ್ಟೆ ಇಲ್ಲ. ಹಾಡಿಗೂ ಕುಣಿತಕ್ಕೂ ತಕ್ಕುದಾದಲ್ಲದ ಈ ಸಿನಿಮಾಕ್ಕೆ ತಕ್ಕ ಸಂಗೀತ.  ಒಂದೆರಡು ಹಾಡುಗಳು ಸುಂದರವಾಗಿವೆ. ‘ಲಮ್ಹಾ ಲಮ್ಹಾ ಜಿಂದಗಿ ಹೈ’ ನೆನಪಿನಲ್ಲಿ ಉಳಿಯುವಂಥದ್ದು. ಸಂದರ್ಭೋಚಿತ ಹಾಡೂ ಸಹ. ಚಿತ್ರವನ್ನು ಮುಂದುವರಿಸುವ ಹಾಡೂ ಹೌದು. ಮನೋಜ್ ಮತ್ತು ಅಜಯ್ ಸಂಭಾಷಣೆ ಚೆಂದ. ‘They are Sharp’.

ಇಷ್ಟರ ಮಧ್ಯೆ ಸಮೀರ್ ದತ್ತಾನಿ, ಮಿನಿಶಾ ಲಂಬಾ, ಸುಮ್ಮನೆ ಬೊಂಬೆಗಳಂತೆ ಬಂದು ಹೋಗುತ್ತಾರೆ. ಅವರದ್ದು ಸುಮ್ಮನೆ ತೂರಿಸಿದ ಪಾತ್ರ ಅಂತ ಅನ್ನಿಸಿದರೂ ಆಶ್ಚರ್ಯವಿಲ್ಲ. ಪಾಯಲ್ ರಸ್ತೋಗಿ ಕಾಣಿಸಿಕೊಂಡು ಓಕೆ ಅನ್ನಿಸುತ್ತಾಳೆ. ಕೆಲವೊಮ್ಮೆ ಅನವಶ್ಯಕವಾದ ವಿಚಾರಗಳೂ ತೂರಿಕೊಂಡಿವೆ ಅನ್ನಿಸುತ್ತದೆ, ಕೆಲ ಪಾತ್ರಗಳಂತೆ. (ದ್ವಿತೀಯಾರ್ಧದ ಕೆಲ ಅನವಶ್ಯಕವೆನ್ನಿಸುವ ದೃಶ್ಯಗಳು).

 ’Honesty & Sinciarity’ಯಿಂದಾಗಿ ನೀವು ಏನೂ ಮಾಡಲಾಗದು ಅನ್ನುವ ಭಾವನೆಯನ್ನು ಬಿಟ್ಟು ಚಿತ್ರ ಮುಗಿಯುತ್ತದಾ ಅನ್ನುವ ಅನುಮಾನ ಸಹಜ. ಆದರೆ, ಇದು ಕಾರ್ಪೊರೇಟ್ ಜಗತ್ತಿನ ಕೇವಲ ಒಂದು ಮಗ್ಗುಲನ್ನು ಮಾತ್ರ ಹೇಳಿದೆ ಅನ್ನುವುದು ಅಂತ್ಯವನ್ನು ಅಷ್ಟೇನೂ ಋಣಾತ್ಮಕವಾಗಿ ಅರಿಯಬೇಕಿಲ್ಲ ಅನ್ನುವ ಸಮಾಧಾನವನ್ನು ಹೇಳುತ್ತದೆ. ಒಬ್ಬ ಬರಹಗಾರನಾಗಿ, ನಿರ್ದೇಶಕನಾಗಿ ಮಧುರ್ ಮತ್ತೊಂದು ಹೊಸ ದಾರಿ ಕಂಡುಕೊಂಡ ಚಿತ್ರ ಇದು.

ಕಾರ್ಪೊರೇಟ್ ಜಗತ್ತಿನ ಒಳ ಹೊರಗನ್ನು ತೋರಿಸುವುದರ ಜೊತೆಗೆ, ಭಾವನಾತ್ಮಕ ಎಳೆಯನ್ನೂ ಸುಂದರವಾಗಿ ನೀಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಮಧುರ್ ಇಷ್ಟವಾಗುವುದು ಅವರ ಹೊಸ ಧಾಟಿಯಿಂದಾಗಿ. ಒಂದೆರಡು ಋಣಾತ್ಮಕ ಅಂಶಗಳು ಹಾಗೆಯೆ ನಿರ್ಲಕ್ಷ್ಯಿಸಬಹುದಾದ್ದು.

ನೋಡಿದವರು ಮತ್ತೊಮ್ಮೆ ನೋಡಬಹುದಾದ ಚಿತ್ರ ಹಾಗಾಗಿಯೇ ಸಿಗುತ್ತೆ ಅಲ್ವಾ? ಮಧುರ್ ಗೆದ್ದದ್ದು ಖಂಡಿತ. ಒಬ್ಳು ಅಂದಿದ್ಲು, ಮೆನನ್ ಅದ್ಭುತ ನಟ, ನನಗೆ ಆತನ ಮೇಲೆ ಮನಸಾಗಿದೆ ಅಂತ. ನಕ್ಕು ಸುಮ್ಮನಾಗಿದ್ದೆ. ಆತ ಅದ್ಭುತವಾಗಿ ನಟಿಸಿದ್ದಾನೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆತನಿಗಾಗೇ ಸಿನಿಮಾ ನೋಡಬೇಕು.

ರಂಜಿತ್ ಬರೆದ “ಪೇಜ್ 3″

with 2 comments

ರಂಜಿತ್ ಅಡಿಗರು ನಮ್ಮ ಉತ್ಸವದಲ್ಲಿ ಪಾಲ್ಗೊಳ್ಳಲು “ಪೇಜ್ 3″ ಚಿತ್ರದ ಕುರಿತು ಬರಹ ಕಳಿಸಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ. ನಿಮ್ಮ ಬರಹಗಳನ್ನು saangatya@gmail.com ಗೆ ಕಳುಹಿಸಬಹುದು.
*
“ಕಿತನೇ ಅಜೀಬ್ ರಿಶ್ತೇ ಹೆ ಯಹಾನ್ ಪೇ…”
ಇದು ಮಧುರ್ ಭಂಡಾರ್ಕರ್ ರ “ಪೇಜ್ 3″ ಚಿತ್ರದ ಹಾಡೊಂದರ ಪಲ್ಲವಿ. ಪ್ರತ ಸಲವೂ ಒಂದು ವಿಶಿಷ್ಟವಾದ ಸಬ್ಜೆಕ್ಟ್ ನ್ನು ಆಯ್ದುಕೊಂಡು ನೋಡುಗರಿಗೆ ತೀವ್ರವಾದ ಶಾಕ್ ಗಳನ್ನು ಮೆಲುವಾಗಿ ನೀಡಿಕೊಂಡು ಹೋಗುವ ಚಿತ್ರಕತೆ ತಯಾರಿಸಿಕೊಂಡು ಬಡಿಸುವುದರಲ್ಲಿ ಮಧುರ್ ಸಿದ್ದಹಸ್ತರು.
page“ಪೇಜ್ 3″ ಬರುವ ಮೊದಲು ಚಾಂದಿನಿ ಬಾರ್ ದೊಡ್ಡ ಹಿಟ್ ಆಗಿತ್ತು. ಬಾರ್ ಹುಡುಗಿಯರ ಕುರಿತು ಇದ್ದ ಚಿತ್ರ ವಿಮರ್ಶಕರಿಂದಲೂ ಬಾಯಿ ತುಂಬಾ ಮೆಚ್ಚುಗೆ ಗಳಿಸಿತ್ತು..ಅದರ ನಂತರ ಬಂದ “ಸತ್ತಾ”, “ಆನ್” ಚಿತ್ರ ತಾರಾಗಣ ದೊಡ್ಡದಾಗಿದ್ದರೂ ಅಷ್ಟಾಗಿ ಬಾಕ್ಸ್ ಆಫೀಸ್ ಗಳಿಕೆ ಪಡೆಯಲಿಲ್ಲ. ತನ್ನ ಮ್ಯಾಜಿಕ್ ನ್ನು ಮರುಕಳಿಸಲು ಮಧುರ್ ಆಯ್ದುಕೊಂಡದ್ದು ಈ ಪೇಜ್ 3 ಸೆಲೆಬ್ರಿಟಿಗಳ ಡಾಂಭಿಕತೆಗಳ ಬಗ್ಗೆ. ಲೇಖನದ ಮೊದಲು ನೀಡಿದ್ದ ಪಲ್ಲವಿಯ ಸಾಲು ಹೇಳುವಂತೆ ಅಲ್ಲಿನ ವಿಚಿತ್ರ ಸಂಬಂಧಗಳ ಕುರಿತು ಮನಕಲಕುವಂತೆ ವಿವರಿಸುತ್ತದೆ.
ಕಥೆಯ ನಾಯಕಿ ಮಾಧವಿ ಶರ್ಮಾ( ಕೊಂಕಣಾ ಸೇನ್ ಶರ್ಮಾ) ಮುಂಬೈಗೆ ಬಂದು ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಗ್ಲಾಮರ್ ಲೋಕದ ಪಾರ್ಟಿಗಳು, ವ್ಯಕ್ತಿಗಳ ಬಗ್ಗೆ ವರದಿ ಕೊಡುವುದು ಆಕೆಯ ಕೆಲಸ. ಇದಕ್ಕೆ ಪತ್ರಿಕೆಯ ಸಂಪಾದಕರಾದ ದೀಪಕ್ ಸೂರಿ( ಬೋಮನ್ ಇರಾನಿ)ಯಿಂದ ಸಹಾಯ ದೊರೆಯುತ್ತಿರುತ್ತದೆ. ಮಾಧವಿ, ಪರ್ಲ್ ( ಸಂಧ್ಯಾ ಮೃದುಲ್) ಎಂಬ ಗಗನ ಸಖಿ ಜೊತೆ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿರುತ್ತಾಳೆ. ಹಳ್ಳಿಯಿಂದ ಬೆಳ್ಳಿತೆರೆಯ ನಾಯಕಿಯಾಗುವ ದೊಡ್ಡ ಕನಸುಗಳನ್ನು ಹೊತ್ತ ಗಾಯತ್ರಿ ಎಂಬ ಹುಡುಗಿಯೊಡನೆ ಪರಿಚಯ ಬೆಳೆದು ಆಕೆಗೆ ತನ್ನ ಮನೆಯಲ್ಲೇ ಉಳಿದುಕೊಳ್ಳುವಂತೆ ಸಹಾಯ ಮಾಡುತ್ತಾಳೆ.
ತನ್ನ ವೃತ್ತಿಯಲ್ಲಿ ಸೆಲೆಬ್ರಿಟಿಗಳ ಪೊಳ್ಳುತನ, ಮಾನಸಿಕ ದ್ವಂದ್ವತೆ, ಹೇಗಾದರೂ ಫೇಮಸ್ ಆಗಬೇಕೆಂಬ ಬಯಕೆ, ಹಿಪಾಕ್ರಸಿಗಳು ಇವೆಲ್ಲಾ ಅವಳಲ್ಲಿ ವಾಕರಿಕೆ ಹುಟ್ಟಿಸುತ್ತಿರುತ್ತದೆ. ಹೀಗಾಗಿ ಅವಳು ಸೀರಿಯಸ್ ಆದ, ಸಾಮಾಜಿಕ ವಿಷಯಗಳ ಬಗ್ಗೆ ವರದಿ ಕೊಡುವ ಸೆಕ್ಷನ್ ಗೆ ಬರುತ್ತಾಳೆ. ಅಲ್ಲಿ ವಿನಾಯಕ್ ಮಾನೆ(ಅತುಲ್ ಕುಲಕರ್ಣಿ) ಜತೆ ಕೆಲಸ ಮಾಡತೊಡಗುತ್ತಾಳೆ.
ಅಷ್ಟರಲ್ಲಿ ಪರ್ಲ್ ಉದ್ಯಮಿಯೊಬ್ಬನನ್ನು ಪ್ರೇಮಿಸಿ ಅಮೇರಿಕಾಕ್ಕೆ ಹೋಗುತ್ತಾಳೆ. ಗಾಯತ್ರಿ ನಾಯಕನೊಬ್ಬ ನಿಂದ ಮೋಸಹೋಗುತ್ತಾಳೆ. ಮಾಧವಿಗೆ ತನ್ನ ಪ್ರಿಯಕರ ಸಲಿಂಗಕಾಮಿ ಅನ್ನುವುದು ತಿಳಿದು ಆಘಾತಕ್ಕೊಳಗಾಗುತ್ತಾಳೆ.
ಸಮಾಜದ ಗಣ್ಯ ವ್ಯಕ್ತಿಯೊಬ್ಬ ಸಲಿಂಗಕಾಮದ ತೃಶೆಗಾಗಿ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ವಿಷಯದ ಜಾಡು ಹಿಡಿದು ಅದರ ಹಿಂದಿನ ಜಾಲವನ್ನು ಬಯಲುಗೊಳಿಸುವ ಸ್ಕೂಪ್ ವರದಿಯೊಂದನ್ನು ತಯಾರಿಸಿದರೆ ಸಂಪಾದಕ ಅದನ್ನು ಹಾಕಲು ನಿರಾಕರಿಸುತ್ತಾನೆ. ಆ ಗಣ್ಯವ್ಯಕ್ತಿ ಪತ್ರಿಕೆಗೆ ದೊಡ್ಡಮೊತ್ತದ ಜಾಹೀರಾತು ನೀಡುವವನಾಗಿರುವುದೇ ಕಾರಣ ಆಗಿರುತ್ತದೆ. ಇದಕ್ಕಾಗಿ ಆಕೆ ಕೆಲಸ ಕಳಕೊಳ್ಳುತ್ತಾಳೆ.
ಚಿತ್ರದ ಕೊನೆಯಲ್ಲಿ ಪಾರ್ಟಿಯೊಂದರಲ್ಲಿ ಗಾಯತ್ರಿಯ ಭೇಟಿಯಾಗುತ್ತದೆ. ಆಕೆ ನಾಯಕಿಯಾಗುವುದಕ್ಕಾಗಿ ನಿರ್ದೇಶಕನೊಡನೆ “ರಾಜಿ”ಯಾಗಿರುತ್ತಾಳೆ.
ಒಂದು ಘಂಟೆ ಮೂವತ್ತೊಂಬತ್ತು ನಿಮಿಷದ ಚಿತ್ರದಲ್ಲಿ ಮಧುರ್ ಬಹಳ ವಿಷಯಗಳನ್ನು ಸ್ಪರ್ಶಿಸುವುದಕ್ಕೆ ಹಾತೊರೆದಿದ್ದು ಕಂಡುಬರುತ್ತದೆ. ಸೆಲೆಬ್ರಿಟಿಗಳ ದ್ವಂದ್ವ, ಮೇಲ್ವರ್ಗದವರ ಮುಖವಾಡ, ಸಲಿಂಗ ಕಾಮ, ಪತ್ರಿಕೆಯ ಮೇಲೆ ಗಣ್ಯರ ಹಿಡಿತ, ಪತ್ರಿಕೋದ್ಯಮದ ನಿಸ್ಸಹಾಯಕತೆ, child abusing,  ಚಿತ್ರೋದ್ಯಮಕ್ಕೆ ಕಾಲಿಡಲು ಮಾಡಿಕೊಳ್ಳಬೇಕಾದ ರಾಜಿಗಳು, ರಾಜಕೀಯ ಹೀಗೆ ಬಹಳಷ್ಟು ವಿಷಯಗಳನ್ನು ನಗ್ನವಾಗಿ ಅನಾವರಣ ಮಾಡುತ್ತಾ ಸಾಗುತ್ತದೆ.
ಕೊಂಕಣಾಸೇನ್ ರಿಂದ ಅದ್ಭುತವಾಗಿ, ನ್ಯಾಚುರಲ್ ಆಗಿ ನಟನೆ ತೆಗೆಸಿದ್ದಾರೆ ಮಧುರ್. ವಿಕ್ರಮ್ ಸಲುಜಾ, ಬೋಮನ್ ಇರಾನಿ, ತಾರಾಸೇನ್, ಸಂಧ್ಯಾ ಮೃದುಲ್ ಎಲ್ಲರೂ ಪಕ್ವವಾಗಿ ನಟಿಸಿದ್ದಾರೆ. ಅತುಲ್ ಕುಲಕರ್ಣಿಯ ಪ್ರತಿಭೆಗೆ ತಕ್ಕ ಪಾತ್ರ ದೊರೆಯದೇ ಹೋಗಿದೆ ಈ ಚಿತ್ರದಲ್ಲಿ.
ಸುರೇಶ್ ಪೈ ರ ಸಂಕಲನ ಅಚ್ಚುಕಟ್ಟಾಗಿದೆ. ಶಾಮಿರ್ ಟಂಡನ್ ಮತ್ತು ರಾಜು ಸಿಂಗ್ ರ ಸಂಗೀತ ಕಿವಿಗಿಂಪು. ಮಧು ರಾವ್ ರ ಛಾಯಾಗ್ರಹಣ ಕಣ್ತಂಪು.
ಕೆಲವು ನಿರ್ದೇಶಕರು ತಮ್ಮ ಪ್ರತಿಭೆಯ ಉತ್ತುಂಗ ಸಮಯದಲ್ಲಿ ಅದ್ಭುತವಾದ ಚಿತ್ರ ನೀಡುತ್ತಾರೆ. ಮಧುರ್ ರೆಸ್ಯೂಮ್ ನಲ್ಲಿ “ಪೇಜ್ 3″ ಮೇಲಿನ ಸಾಲಿನಲ್ಲಿ ನಿಲ್ಲುತ್ತದೆ. ಜನರ ಪ್ರಶಂಸೆ, ವಿಮರ್ಶಕರ ಹೊಗಳಿಕೆ ಅಲ್ಲದೇ 2005 ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದಿದೆ “ಪೇಜ್ 3″.
*
ನಮ್ಮ ಉತ್ಸವದ ಬಗ್ಗೆ ಒಂದು ಅಂಶ ಸ್ಪಷ್ಟಪಡಿಸಬೇಕು. ಮಧುರ್ ಭಂಡಾರ್ಕರ್ ಅವರ ಎಲ್ಲ ಚಿತ್ರಗಳ ಪರಿಚಯ, ಮಾಹಿತಿ ಮೊದಲು ನೀಡಿ, ಆ ಚಿತ್ರಗಳ ಕುರಿತ ಪೂರ್ಣ ವಿಮರ್ಶೆಗಳನ್ನು ನಂತರ ಸವಿವರವಾಗಿ ಪ್ರಕಟಿಸುತ್ತೇವೆ. ಹಾಗಾಗಿ ಈಗ ಪ್ರಕಟಿಸುತ್ತಿರುವ ಬರಹಗಳು ಅಂಥದೊಂದು ವೇದಿಕೆಗೆ ಹುರುಪುಗೊಳಿಸುವ ಉದ್ದೇಶದ ಬರಹಗಳಷ್ಟೇ.

“ಸತ್ತಾ” ಕುರಿತು ಟೀನಾರ ವಿಮರ್ಶೆ

with 4 comments

ಟೀನಾ ಶಶಿಕಾಂತ್ ಅವರು ಭಂಡಾರ್ಕರ್  ಅವರ “ಸತ್ತಾ” ಸಿನೆಮಾ ಕುರಿತು ವಿಮರ್ಶೆ ಬರೆದಿದ್ದಾರೆ. “ಸತ್ತಾ” ಮಧುರ್ ರೂಪಿಸಿದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು. ಮಹಿಳೆಯನ್ನೇ ಕೇಂದ್ರೀಕರಿಸಿದ ಈ ಚಿತ್ರದಲ್ಲಿ ನಟಿ ರವೀನಾ ಟಂಡನ್ ಹಾಗೂ ಅತುಲ್ ಕುಲಕರ್ಣಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಚಿತ್ರ ಬಿಡುಗಡೆಯಾದ ವರ್ಷ 2003.

*

‘ಸತ್ತಾ’ ಎಂದರೆ ಅಧಿಕಾರ.

ತನ್ನ ಮೊದಲ ಸಿನೆಮಾ ‘ಚಾಂದನೀ ಬಾರ್ ‘ ನಿಂದ ಎಲ್ಲರ ಗಮನ ಸೆಳೆದ ನಿರ್ದೇಶಕ ಮಧುರ್ ಭಂಡಾರ್ಕರ್ ತನ್ನ ಎರಡನೇ ಚಲನಚಿತ್ರಕ್ಕೆ ರಾಜಕೀಯವನ್ನು ವಸ್ತುವಾಗಿಸಿಕೊಂಡಿದ್ದು ಅದರಲ್ಲೂ ಮಹಿಳಾ ಕೇಂದ್ರೀಕೃತ ಕಥೆಯೊಂದನ್ನು ಆಯ್ದುಕೊಂಡಿದ್ದು ಎಲ್ಲರ ಹುಬ್ಬೇರಿಸಿತು. ಕಾರಣ ರಾಜಕೀಯವನ್ನು ವಸ್ತುವಾಗಿಸಿಕೊಂಡ ಹಲವಾರು ಸಿನೆಮಾಗಳು ಹಿಂದಿಯಲ್ಲಿ ನೂರಾರು ತಯಾರಾಗಿವೆ. ಮಹಿಳೆಯನ್ನು ಪ್ರಮುಖ ವಸ್ತುವಾಗಿಟ್ಟುಕೊಂಡು ಮಾಡಿದ ಸಿನೆಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುವುದಿಲ್ಲ ಅನ್ನುವದು ಸಿನಿಮಾ ರಂಗದಲ್ಲಿ ಪ್ರಚಲಿತ ವಿಷಯ. ಈ ಅಪವಾದವನ್ನು ಸುಳ್ಳು ಮಾಡದಲೆ ಈ ಚಲನಚಿತ್ರ ಸೋತೂ ಹೋಯಿತು. ಆದರೆ ಅನೇಕ ಸಿನಿಮಾಪ್ರಿಯರು ಇದನ್ನು ‘ಒಳ್ಳೆಯ’ ಸಿನೆಮಾಗಳ ಕ್ಯಾಟಗರಿಗೆ ಸೇರಿಸಿದರು.

satta6

 ಮಧುರ್ ಭಂಡಾರ್ಕರ್ ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳಲಿ, ಅದರ ಬಗ್ಗೆ ಆಸ್ಥೆಯಿಂದ ಸಂಶೋಧನೆ ಮಾಡಿ, ನೈಜತೆಯೊಡನೆ ಸಿನೆಮಾ ತಯಾರಿಸುತ್ತಾರೆ ಅನ್ನುವುದು ನಮಗೆ ಈಗಾಗಲೆ ತಿಳಿದಿರುವ ಮಾತು. ‘ಸತ್ತಾ’ ಬಗೆಗೂ ನಾವು ಇದೇ ಮಾತನ್ನು ಹೇಳಬಹುದು. ಭಾರತೀಯ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳ ಗುದ್ದಾಟ, ಹಿಪಾಕ್ರಸಿ, ಅಧಿಕಾರ ಲಾಲಸೆ ಮೊದಲಾದವುಗಳ ಬಗ್ಗೆ ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಚಿತ್ರ ಒಂದು ಕಮೆಂಟರಿ ಇದ್ದಹಾಗಿದೆ. ರಾಜಕೀಯದ ಬಗ್ಗೆ ದೂರ ನಿಂತು ಲೇವಡಿಮಾಡುವ ನಮ್ಮಂತಹ ಯುವಜನರಲ್ಲೊಬ್ಬಾಕೆ ಸ್ವತಹ ರಾಜಕೀಯಕ್ಕೆ ಕಾಲಿಟ್ಟಾಗ ಏನೇನು ಕಾಣಬರುತ್ತದೆ ಎನ್ನುವುದನ್ನು ನಿರ್ದೇಶಕ ಪರಿಣಾಮಕಾರಿಯಾಗಿ ತೋರಿಸಿಕೊಡುತ್ತಾರೆ. 

ನಾಯಕಿ ಅನುರಾಧಾ ಸೆಹಗಲ್ ಮಹತ್ವಾಕಾಂಕ್ಷೆಯ ಹೆಣ್ಣು. ಮಧ್ಯಮವರ್ಗದ ಪರಿವಾರಕ್ಕೆ ಸೇರಿದ ಅನುರಾಧಾಳಿಗೆ ರಾಜಕಾರಣಿಗಳನ್ನು ಕಂಡರಾಗದು. ತನ್ನ ಕೆಲಸದಲ್ಲಿ ಉನ್ನತ ಹುದ್ದೆ ಪಡೆದುಕೊಂಡು ಯಾರಾದರು ಸಿರಿವಂತ ಹುಡುಗನನ್ನು ಮದುವೆಯಾಗುವ ಕನಸು ಅನುರಾಧಾಳದು. ಅದಕ್ಕೆ ತಕ್ಕ್ಕ ಹಾಗೆ ರಾಜಕಾರಣಿ ಮಹೇಂದ್ರ ಚೌಹಾನನ ಮಗ ವಿವೇಕ್ ಚೌಹಾನ್ ಆಕೆಯಲ್ಲಿ ಅನುರಕ್ತನಾಗುತ್ತಾನೆ. ತನ್ನ ಬಯಕೆಗೆ ತಕ್ಕ ಜೋಡಿ ದೊರಕಿತೆನ್ನುವ ಸಂತಸದಲ್ಲಿ ಅನುರಾಧಾ ವಿವೇಕನನ್ನು ವರಿಸುತ್ತಾಳೆ. ಮದುವೆಯ ಮಾತುಕತೆಯ ಸಮಯದಲ್ಲಿಯೆ ಆಕೆಯ ತಾಯಿಯ ‘ಸಿಂಗಲ್ ಪೇರೆಂಟ್ ‘ ಸ್ಟೇಟಸ್ಸಿನ ಬಗ್ಗೆ ವಿವೇಕನ ಪರಿವಾರದಿಂದ ಪ್ರಶ್ನೆಗಳೇಳುತ್ತವೆ. ಮಣಿಯದ ಅನುರಾಧಾ ತನ್ನನ್ನು ತಂದೆಯ ಸಹಾಯವಿಲ್ಲದೆಯೆ ಬೆಳೆಸಿದ ತಾಯಿಯಿಂದಲೆ ಕನ್ಯಾದಾನ ಮಾಡಿಸಿಕೊಳ್ಳುತ್ತಾಳೆ.

 ಮದುವೆಯ ನಂತರ ಅನುರಾಧಾಳ ಕನಸುಗಳು ಒಂದೊಂದಾಗಿ ಕರಗತೊಡಗುತ್ತವೆ. ಪರಿವಾರಕ್ಕಾಗಿ ಆಕೆ ತನ್ನ ಕೆಲಸವನ್ನು ಬಿಡಬೇಕಾಗುತ್ತದೆ. ಆಕೆಯನ್ನು ಮನೆಯ ಅಲಂಕಾರಕ್ಕೆ ಹಾಗೂ ಹಾಸಿಗೆಗೆ ಸೀಮಿತವೆಂಬಂತೆ ಕಾಣುವ ವಿವೇಕನ ಇನ್ನೊಂದು ಮುಖದ ಪರಿಚಯ ಆಕೆಗೆ ಆಗತೊಡಗುತ್ತದೆ. ಅನುರಾಧಾಳ ಸ್ವಾಭಿಮಾನ ಆಕೆಯನ್ನು ವಿವೇಕನೆದುರು ನಿಂತು ಆತನನ್ನು ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ಇದನ್ನು ಸಹಿಸದ ವಿವೇಕ ಆಕೆಯನ್ನು ನಿಂದಿಸಲು ಆರಂಭಿಸುತ್ತಾನೆ. ಹೀಗೇ ಒಂದು ದಿನ ಗಂಡಹೆಂಡಿರ ನಡುವೆ ಜಗಳವಾದಾಗ ವಿವೇಕ ಕೋಪದಲ್ಲಿ ಗೆಳೆಯನ ಜತೆ ಒಂದು ಪಬ್ಬಿಗೆ ನುಗ್ಗುತ್ತಾನೆ. ಅಲ್ಲಿ ಸಮಯ ಮೀರಿತೆಂದು ಮದ್ಯ ನೀಡಲು ಒಲ್ಲೆನೆನುವ ಬಾರ್ ಮೆಯಿಡ್ ಮೇಲೆ ಕೋಪಗೊಂಡು ಆಕೆಯ ಮೇಲೆ ಗುಂಡುಹಾರಿಸುತ್ತಾನೆ. ಈ ಘಟನೆ ಜೆಸ್ಸಿಕಾ ಲಾಲ್ ಪ್ರಕರಣವನ್ನು ನೆನಪಿಸುತ್ತದೆ. ಮಹೇಂದ್ರ ಚೌಹಾನನ ನಂತರ ಪಕ್ಷದ ಯುವನಾಯಕನಾಗಬೇಕಾಗಿದ್ದ ವಿವೇಕ ಜೈಲುಕಂಬಿ ಎಣಿಸುವಂತಾಗುತ್ತದೆ.

 ಈಗ ಎಲ್ಲರ ದೃಷ್ಟಿ ಅನುರಾಧಾಳೆಡೆಗೆ ತಿರುಗುತ್ತದೆ. ಅತ್ತೆ ಮಾವಂದಿರಿಗೆ ಇಷ್ಟವಿಲ್ಲದಿದ್ದರೂ ಎಲ್ಲರ ಒತ್ತಡಕ್ಕೆ ಮಣಿದು ಅನುರಾಧಾ ವಿವೇಕನ ಸ್ಥಾನದಲ್ಲಿ ನಿಂತು ಚುನಾವಣೆ ಗೆಲ್ಲುತ್ತಾಳೆ. ಮೆಲ್ಲಮೆಲ್ಲಗೆ ರಾಜಕೀಯದಲ್ಲಿ ಪಳಗಲು ಆರಂಭಿಸುತ್ತಾಳೆ. ಆಕೆಯನ್ನು ಆರಂಭದಲ್ಲಿ ಸುಮ್ಮನೆ ಗಮನಿಸುವ ಪಕ್ಷದ ಹಿರಿಯ ನಾಯಕ ಯಶವಂತ ಆಕೆಗೆ ಸಹಾಯ ಮಾಡುತ್ತಾನೆ, ರಾಜಕೀಯ ಗುರುವಾಗುತ್ತಾನೆ. ತನ್ನ ಯಶಸ್ಸು ಸಹಿಸದೆ ಅವಮಾನಿಸಲೆತ್ನಿಸುವ ಅತ್ತೆಮಾವಂದಿರನ್ನು ಅನುರಾಧಾ ಎದುರಿಸಿ ತೊರೆದುಬರುತ್ತಾಳೆ. ರಾಜಕೀಯ ಕೊಂಚಕೊಂಚವಾಗಿ ಹೆಬ್ಬಾವಿನಂತೆ ಅನುರಾಧಾಳನ್ನು ನುಂಗಲು ತೊಡಗುತ್ತದೆ. ಎಲ್ಲವನ್ನು ಅಚ್ಚರಿಯಿಂದ ಗಮನಿಸುತ್ತಲೇ ಕಲಿಯುವ ಅನುರಾಧಾಳಿಗೆ ಯಶವಂತನೇ ಊರುಗೋಲು. ಈ ನಡುವೆ ಆಕೆಗೆ ಎದುರುನಿಲ್ಲುವ ಎಲ್ಲರನ್ನೂ ಯಶವಂತ ಒಬ್ಬೊಬ್ಬರನ್ನಾಗಿ ನಿವಾರಿಸುತ್ತಾನೆ. ಅನುರಾಧಾ ಹಾಗೂ ಯಶವಂತರಲ್ಲಿ ಪ್ರೀತಿ ಮೊಳೆಯುತ್ತದೆ.  

ಚುನಾವಣೆಯ ಸಂದರ್ಭ ಒದಗಿಬಂದಾಗ ಅನುರಾಧಾಳಿಗೆ ತಾನು ಸಿಲುಕಿಕೊಂಡ ಜಾಲ ಎಂತಹದು ಎಂದು ಅರಿವಾಗತೊಡಗುತ್ತದೆ. ಮುಖ್ಯಮಂತ್ರಿಸ್ಥಾನ ಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳ ಯಶವಂತ ಅನುರಾಧಾಳನ್ನು ತನ್ನ ರಾಜಕೀಯ ಲಾಲಸೆಗಾಗಿ ಬಳಸಿಕೊಳ್ಳುತ್ತಿರುವುದು, ತನ್ನ ಗಂಡ ವಿವೇಕನೇ ಸೇರಿದಂತೆ ಹಲವಾರು ಜನರ ವಿರೋಧಿಗಳ ಹತ್ಯೆಗೆ ಕಾರಣನಾಗಿರುವದು ತಿಳಿದುಬಂದಾಗ ಅನುರಾಧಾ ಬದಲಾಗುತ್ತಾಳೆ. ರಾಜಕೀಯದಲ್ಲಿ ಯಾರನ್ನೂ ನಂಬಕೂಡದೆಂಬ ಪಾಠ ಕಲಿತುಕೊಳ್ಳುತ್ತಾಳೆ. ಒಬ್ಬ ಮಾಮೂಲಿ ಹೆಣ್ಣಿನಿಂದ ನುರಿತ ರಾಜಕಾರಣಿಯಾಗಿ ಬದಲಾಗುತ್ತಾಳೆ. ಯಶವಂತನ ವಿಧಾನವನ್ನು ಅವನ ವಿರುದ್ಧವೇ ಪ್ರಯೋಗಿಸುತ್ತಾಳೆ. ಲಿಯಾಕತ್ ಅಲಿ ಬೇಗನಂತಹ ಕುಟಿಲನನ್ನೂ ಚತುರತೆಯಿಂದ ಬಗ್ಗುಬಡಿಯುತ್ತಾಳೆ. ತನಗೇ ರಾಜಕೀಯ ಪೀಠ ದೊರೆಯುವಾಗ ಅದನ್ನು ನಿರಾಕರಿಸಿ ‘ಕಿಂಗ್ ಮೇಕರ್ ‘ ಆಗುವ ನಿರ್ಧಾರ ಮಾಡುತ್ತಾಳೆ.

 ಎಲ್ಲ ರಾಜಕೀಯ ಸಿನೆಮಾಗಳಂತೆ ಈ ಸಿನೆಮಾ ಕೂಡ ಹಲವಾರು ಕ್ಲೀಷೆಗಳನ್ನೊಳಗೊಂಡಿದೆ.  ಆದರು ಪರಿಣಾಮಕಾರಿ ನಿರ್ದೇಶನ, ರವೀನಾ ಹಾಗೂ ಅತುಲ್ ಕುಲಕರ್ಣಿಯವರ ನಟನೆ, ಪೋಷಕಪಾತ್ರಗಳ ಉತ್ತಮ ನಿರ್ವಹಣೆಯಿಂದಾಗಿ ಸಿನೆಮಾ ಉತ್ತಮಗೊಂಡಿದೆ. ಭಂಡಾರ್ಕರರ ಎಲ್ಲ ಸಿನೆಮಾಗಳಂತೆ ಇಲ್ಲಿಯೂ ಕೂಡ ಮಹಿಳಾ ಪಾತ್ರಕ್ಕೆ ಪ್ರಾಮುಖ್ಯ ದಕ್ಕಿದೆ. ನೈಜ ಶೈಲಿ ಒಮ್ಮೊಮ್ಮೆ ಹೆಚ್ಚಾಯಿತೆನಿಸಿ ರಾಮ್ ಗೋಪಾಲ್ ವರ್ಮಾನ ನೆನಪು ಬರಿಸಿದರು ಹಿಡಿತ ತಪ್ಪದೆ ಸಾಗುತ್ತದೆ. ಕೊನೆಯಲ್ಲಿ ತನ್ನ ಬಲಹೀನತೆಗಳನ್ನು ತನ್ನ ಶಕ್ತಿಯಾಗಿಸಿಕೊಳ್ಳುವ ನಾಯಕಿಯ ಪಾತ್ರ ಮನಸ್ಸಿನಲ್ಲಿ ನಿಲ್ಲುತ್ತದೆ.

Written by saangatya

February 13, 2009 at 11:28 am

ವೇಣು ಬರೆದ “ಟ್ರಾಫಿಕ್ ಸಿಗ್ನಲ್”

with 4 comments

ಬ್ಲಾಗಿಗ ವೇಣುವಿನೋದ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ನಾವು ನಿತ್ಯವೂ ನಿಂತು ಹೋಗುವ ಟ್ರಾಫಿಕ್ ಸಿಗ್ನಲ್ ನ ಕ್ಷಣಗಳನ್ನು ಕಟ್ಟಿಕೊಟ್ಟ ಭಂಡಾರ್ಕರ್ ರ “ಟ್ರಾಫಿಕ್ ಸಿಗ್ನಲ್” ಕುರಿತು ಅವರ ಅನಿಸಿಕೆ ಇಲ್ಲಿ ನೀಡಲಾಗಿದೆ. ಆದ್ದರಿಂದ ನೀವೂ ಕೆಲ ಕಾಲ ಇಲ್ಲಿ ನಿಂತು, ಓದಿ, ನಿಮ್ಮ ಅಭಿಪ್ರಾಯ ಹಾಕಿ ಮುಂದೆ ಹೋಗಿ…!

trafiic-signal

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿರುವಾಗ ರಸ್ತೆ ಪಕ್ಕದಿಂದ ಹುಟ್ಟಿಕೊಂಡು ಭಿಕ್ಷೆ ಕೇಳುತ್ತಾ, ಇಯರ್  ಬಡ್ಸ್ ಮಾರುತ್ತಾ ಬರುವವರನ್ನು ನೋಡಿದ್ದೇವೆಆದರೆ ಇವರ ಹಿಂದಿನ ಪ್ರಪಂಚಗಳು, ಅದರ ಇಕನಾಮಿಕ್ಸ್ ಸಾಮಾನ್ಯವಾಗಿ ಅರ್ಥವಾಗುವುದಿಲ್ಲ, ಅಥವಾ ನಮಗೆ ಬೇಕಿಲ್ಲ. 

ಮಧುರ್ಭಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್ ಸಿನಿಮಾ ಮಾಡಿದ್ದು ಒಂದು ಜಗತ್ತಿನ ಅನಾವರಣ.

ಟ್ರಾಫಿಕ್ ಸಿಗ್ನಲ್ ಒಂದನ್ನು ನಂಬಿಕೊಂಡು ಒಂದು ವರ್ಗದ ಜನರೇ ಬದುಕುತ್ತಿದ್ದಾರೆ ಎಂಬ ಸತ್ಯವನ್ನು ಮನಮುಟ್ಟುವಂತೆ ತೋರಿಸುತ್ತದೆ ಚಿತ್ರ. ಟ್ರಾಫಿಕ್ ಸಿಗ್ನಲ್ ಬದಲಾಗುವಷ್ಟರಲ್ಲೇ ತಮ್ಮ ವಹಿವಾಟು ಮುಗಿಸುವ ಡೆಡ್ಲೈನ್ ಇವರಿಗೆ 

ಮುಂಬೈನ ಟ್ರಾಫಿಕ್ ಸಿಗ್ನಲೊಂದನ್ನು ಆಧಾರವಾಗಿರಿಸಿ ಹೆಣೆದ ಚಿತ್ರ ಭಂಡಾರ್ಕರ್ಅವರ ಪೇಜ್ , ಕಾರ್ಪೊರೇಟ್ ಮಾದರಿಯಲ್ಲೇ ಸಮಾಜವೊಂದನ್ನು ಅನಾವರಣಗೊಳಿಸುವುದರತ್ತ ಗಮನ ಹರಿಸುತ್ತದೆ. ಯಾವುದೇ ಸಂದೇಶಗಳು ಇದರಲ್ಲಿಲ್ಲ. ಹಾಗಂತ ಸ್ಲಂಡಾಗ್ ಮಿಲಿಯನೇರ್ ರೀತಿಯಲ್ಲಿ ಸತ್ಯದ ವಿಲಕ್ಷಣತೆ ಇದರಲ್ಲಿಲ್ಲ.

ಪ್ರಮುಖ ಪಾತ್ರಗಳೂ 5-6 ಅಷ್ಟೇ. ಉಳಿದ ಪಾತ್ರಗಳೆಲ್ಲ ಸದ್ದಿಲ್ಲದೆ ತಮ್ಮಷ್ಟಕ್ಕೇ ಸರಿದು ಹೋಗುತ್ತವೆ. ವೇಶ್ಯೆಯ ಪಾತ್ರದಲ್ಲಿ ಕೊಂಕೊನಾ ಸೇನ್ ಶರ್ಮ, ಮಾದಕ ವ್ಯಸನಿಯಾಗಿ ರಣವೀರ್ಶೋರೆ, ಸ್ಥಳೀಯ ಡಾನ್ ಆಗಿ ಸುಧೀರ್ಮಿಶ್ರ, ಬೀದಿ ಬದಿಯಲ್ಲಿ ಡ್ರೆಸ್ ಮಾರುತ್ತಾ ಸಿಲ್ಸಿಲಾನ ಮನಸು ಕದಿಯುವ ಹುಡುಗಿ ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿದ್ದಾರೆ.  ಚಿತ್ರ ಎಂಟರ್ಟೈನಿಂಗ್ ಅಲ್ಲ ಎಂಬ ಕಾರಣಕ್ಕಾಗೋ ಏನೋ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ಪ್ರಾಯೋಗಿಕವಾಗಿ ಉತ್ತಮ ಪ್ರಯತ್ನ ಎಂಬ ಹೆಗ್ಗಳಿಕೆಯನ್ನಂತೂ ಪಡೆದುಕೊಂಡಿದೆ. 

ಟ್ರಾಫಿಕ್ ಸಿಗ್ನಲ್ನಿಂದಾಗಿಯೇ ಬದುಕು ರೂಪಿಸಿಕೊಂಡ ಜನ..ಅವರಿಗೊಬ್ಬ ಯುವ ಮುಂದಾಳು ಸಿಲ್ಸಿಲಾ(ಕುನಾಲ್ ಖೇಮು), ಇವರೆಲ್ಲರನ್ನೂ ಕುಣಿಸುವ ರಾಜಕಾರಣಿ-ಗೂಂಡಾ ಕೊಂಡಿ. ಸ್ಲಂಗಳಲ್ಲಿರುವವರ ಬದುಕು ಹಸನಾಗಲು, ಅವರಿಗೆ ನಾಯಕನಾದ ಸಿಲ್ಸಿಲಾ ಪ್ರಯತ್ನಿಸುತ್ತಾನೆ. ಅಷ್ಟರಲ್ಲೇ ಟ್ರಾಫಿಕ್ ಸಿಗ್ನಲ್ ತೆಗೆಸಿ ಹಾಕಿ ಫ್ಲೈಓವರ್ಹಾಕಿದರೆ ತಮಗೆ ಹೇಗೆ ಲಾಭ ಎನ್ನುವುದನ್ನು ಮೇಲೆ ಕುಳಿತವರು ನಿರ್ಧರಿಸುತ್ತಾರೆ. ಇದರ ಒಳಾರ್ಥಗಳನ್ನು ಜೀರ್ಣಿಸಿಕೊಳ್ಲುವುದು ನಾಯಕನಿಗೆ ಅಸಾಧ್ಯವಾಗುತ್ತದೆ. ಇದಕ್ಕೆ ಅಡ್ಡ ಬರುವ ಇಂಜಿನಿಯರ್ಒಬ್ಬ ವ್ಯವಸ್ಥೆಗೆ ಬಲಿಯಾಗುತ್ತಾನೆ, ಅದಕ್ಕೂ ನಾಯಕನೇ ತನಗೆ ಅರಿವಿಲ್ಲದಂತೆ ಕಾರಣನಾಗುತ್ತಾನೆ

ತಾನೇ ಬೆಳೆಸಿದ ಟ್ರಾಫಿಕ್ ಸಿಗ್ನಲ್, ಅದರ ಸುತ್ತಲಿನ ಬದುಕಿನ ಮೂಟೆ ಧರೆಗೆ ಉರುಳುವುದನ್ನು ಅಸಹಾಯಕನಾಗಿ ನೋಡುವ ಪರಿಸ್ಥಿತಿ. ಕಥೆಯಲ್ಲಿ ನಾಯಕನಾದರೂ ಇಡೀ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವುದಕ್ಕೆ ನಾಯಕನಿಂದ ಅಸಾಧ್ಯ ಎಂಬ ನೈಜತೆ ಚಿತ್ರದ ಕೊನೆಯಲ್ಲಿ ವ್ಯಕ್ತವಾಗುತ್ತದೆ. ಎಲ್ಲೂ ನಿಲ್ಲದ ಚಿತ್ರ ಅಂತ್ಯದಲ್ಲೂ ಪ್ರೇಕ್ಷಕರ ಮನಸ್ಸಿನೊಳಗೆ ಬಹು ಕಾಲ ಕಾಡುವ ಏನೋ ಅವ್ಯಕ್ತ ವೇದನೆಯನ್ನಷ್ಟೇ ಸೃಷ್ಟಿಸಿಹೋಗುತ್ತದೆ ಟ್ರಾಫಿಕ್ ಸಿಗ್ನಲ್.