Archive for the ‘ನೂರಾರು ನೋಟ’ Category
ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ
ನಮ್ಮ ಒಂದೇ ಚಿತ್ರ ನೂರಾರು ನೋಟಕ್ಕೆ ಈ ಬಾರಿ ಗುಲಾಬಿ ಟಾಕೀಸ್ ನ ಬಗ್ಗೆ ಬರೆದ ಸುಧನ್ನ ದೇರಾಜೆ ಅವರ ಬರಹವನ್ನು ಇಲ್ಲಿ ಹಾಕಲಾಗಿದೆ. ಒಂದೇ ಚಿತ್ರದ ಬಗೆಗಿನ ಹಲವಾರು ನೆಲೆಗಳನ್ನು ಒಂದೇ ಕಡೆ ಒದಗಿಸುವುದು ಸಾಂಗತ್ಯದ ಉದ್ದೇಶವೂ ಹೌದು. ಈ ನಿಟ್ಟಿನಲ್ಲಿ ಈ ಬರಹ, ಓದಿ ಹೇಳಿ.
ಇದು ಕಾಸರವಳ್ಳಿ ಟಾಕೀಸ್. ಈ ಬಾರಿ ಇಲ್ಲಿ ಅರಳಿರುವ ಗುಲಾಬಿಗೆ ಅತ್ತರಿನ ವಾಸನೆಯೂ ಇದೆ, ನೆತ್ತರಿನ ವಾಸನೆಯೂ ಇದೆ. ಅವುಗಳ ಮಧ್ಯೆ ಅಂಬಿಗರು ‘ಹುಟ್ಟು ಹಾಕುವ’ ಪ್ರಶ್ನೆಗಳಲ್ಲಿ ಮತ್ಸ್ಯಗಂಧಿಯರೂ ಇದ್ದಾರೆ. ಹಳೆಯ ಚಿತ್ರಗಳಿಗಿಂತ ವೇಗವಾದ ಗತಿಯಿದೆ. ಪಾತ್ರಧಾರಿಗಳು-ಜನರ ನಡುವಿನ ಭೇದವೇ ಪ್ರೇಕ್ಷಕರಿಗೆ ತಿಳಿಯದಷ್ಟು ಹೊರಾಂಗಣದಲ್ಲಿ ದೃಶ್ಯಗಳು ತನ್ಮಯವಾಗಿವೆ.
***
ಒಂದೊಂದೂ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಹೀಗೆ ತೋರಿಸುವುದು ಸುಲಭವಾಗಿದ್ದರೆ ಕನ್ನಡದ ಮತ್ತೊಬ್ಬ ನಿರ್ದೇಶಕನಾದರೂ ಅದನ್ನು ಮಾಡಬಹುದಾಗಿತ್ತು. ದರ್ಶನ್, ಗಣೇಶ್, ಉಪೇಂದ್ರ ಮತ್ತಿತರರ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಹಲವು ನಿರ್ದೇಶಕರಿಗೆ ಗೊತ್ತು. ಆದರೆ ಕತೆಯ ಇಮೇಜ್‌ಗೆ ಸರಿಯಾಗಿ ಸಿನಿಮಾ ಮಾಡುವುದು ಗಿರೀಶ್ ಕಾಸರವಳ್ಳಿಯವರಿಗೆ ಗೊತ್ತು . ‘ನೀವು ನೋಡಲಿ ಎಂದು ಸಿನಿಮಾ ಮಾಡುವುದಿಲ್ಲ, ಮಾಡುವುದು ಅನಿವಾರ್ಯ ಕರ್ಮ ಎನಗೆ ‘-ಎಂಬಂತಿರುತ್ತದೆ ಕಾಸರವಳ್ಳಿ ಧಾಟಿ ! ಆದರೆ ಅವರು ಹೋಗುತ್ತಾರೆ ಅದನ್ನು ದಾಟಿ. Read the rest of this entry »
ಮನಸ್ಸಿಗೆ ಮುದ ನೀಡಿದ “ಸೈಲೆನ್ಸ್”
ಇರಾನಿ ನಿರ್ದೇಶಕ ಮೊಹ್ಸಿನ್ ಮಕ್ಮಲ್ಬಫ್ ನ “ಸೈಲೆನ್ಸ್” ಚಿತ್ರದ ಬಗ್ಗೆ ರವಿರಾಜ್ ಗಲಗಲಿ ತಮ್ಮ ಮತ್ತೊಂದು ನೋಟ ಹರಿಸಿದ್ದಾರೆ. ಇದನ್ನು ನಮ್ಮ “ಒಂದೇ ಚಿತ್ರ : ನೂರಾರು ನೋಟ” ಅಂಕಣದಲ್ಲಿ ಪ್ರಕಟಿಸಲಾಗಿದೆ.
ಆತ ನೋಡುವುದಿಲ್ಲ, ಕೇಳುತ್ತಾನೆ, ಆತನಿಗೆ ಬಾಯಿ ಇದೆ, ಆದರೆ ಮಾತು ಕಡಿಮೆ. ಆತ ಸಂಗೀತದ ಪಂಡಿತನಲ್ಲ ಆದರೆ ಸಂಗೀತ ಟ್ಯೂನ್ ಮಾಡುವುದು ಗೊತ್ತು. ಆತನ ಒಳಗಣ್ಣು ಸದಾ ಜಾಗೃತ, ಆದರೆ ಹೊರಗಿನ ಕಣ್ಣಿಲ್ಲ.
ಕೆಂಪು ಬಣ್ಣದ ಚಂದದ ಹುಡುಗ ಖುರ್ಷಿದ್ ಕೈ ಮುಂದೆ ಹಿಡಿದು ಸಂಗೀತದತ್ತ ಕಿವಿಕೊಡುತ್ತಾನೆ. ಸೂಫಿ ಸಂಗೀತ, ನಾಯಿಯ ಬೊಗಳುವಿಕೆ, ಮನೆ ಮಾಲೀಕ ಬಾಗಿಲು ಬಡಿಯುವ ಸದ್ದು, ಪಾತ್ರೆ ತಯಾರಿಸುವಾಗ ಸುತ್ತಿಗೆಯಿಂದ ಬಡಿಯುವ ಶಬ್ದ…ಎಲ್ಲವೂ ಆತನಿಗೆ ಅಪ್ಯಾಯಮಾನ. ಪ್ರತಿ ಬಾರಿಯೂ ಹೊಸ ಥರ, ನವ ಬಗೆ. ಇಂತಹ ಖುರ್ಷಿದ್‌ನಿಗೆ ಸಂಗೀತಪ್ರೇಮಿ ಗೆಳತಿಯೂ ಉಂಟು.
ಖುರ್ಷಿದ್ ಎಡವಿದಾಗ ಕೈ ಹಿಡಿಯುವ, ಸಂಗೀತ ಉಪಕರಣಗಳ ತಯಾರಿಕೆ ಅಂಗಡಿಯಲ್ಲಿ ಈತನ ಟ್ಯೂನ್‌ಗಳಿಗೆ ನರ್ತಿಸುವವಳೂ ಇವಳೆ. ಇಂತಿಪ್ಪ ಖುರ್ಷಿದ್‌ನ ಜೀವನದ ಮನ ಮುಟ್ಟುವ ದೃಶ್ಯಗಳು ಹೀಗಿವೆ.
ಕಿವಿ ಕಣ್ಣಾದಾಗ
ಅದೊಂದು ದಿನ ಖುರ್ಷಿದ್ ಅವರಮ್ಮ ಮಾರ್ಕೆಟ್‌ನಲ್ಲಿ ಬ್ರೆಡ್ ತರಲು ಹೊರಟಿದ್ದಾರೆ. ಸಾಲುಗಟ್ಟಿ ನಿಂತಿರುವ ಹತ್ತಕ್ಕೂ ಹೆಚ್ಚು ಬಾಲಕಿಯರು ಬ್ರೆಡ್ ಮಾರಾಟಗಾರರು. ನನ್ನ ಬ್ರೆಡ್ ಚೆನ್ನಾಗಿದೆ, ನನ್ನ ಬ್ರೆಡ್ ಮೃದು, ನನ್ನದು ತಾಜಾ, ಎಲ್ಲಕ್ಕಿಂತ ನನ್ನದು ಒಳ್ಳೆಯದು. ಬಣ್ಣ ಬಣ್ಣದ ಇರಾನಿ ಪೋಷಾಕು ಹೊದ್ದ ಸುಕೋಮಲೆಯರ ಕೈಯಲ್ಲಿ ಮೃದುವಾದ ಬ್ರೆಡ್. ಹೇಗೆ ಆಯ್ಕೆ ಮಾಡುವುದು ? ಈ ಜವಾಬ್ದಾರಿ ಖುರ್ಷಿದ್‌ನದ್ದು. ಆದರೆ ಖುರ್ಷಿದ್ ಮನಸ್ಸು ಧ್ವನಿಯ ಮಾಧುರ್ಯಕ್ಕೆ ಮಾರು ಹೋಗುವುದು. ಹಾಗಾಗಿ ಎಲ್ಲ ಹುಡುಗಿಯರ ಕೈಲಿದ್ದ ಬ್ರೆಡ್ ಮೃದುವಾಗಿದ್ದರೂ ಧ್ವನಿ ಮಧುರವಾಗಿರುವ ಬಾಲಕಿ ಬ್ರೆಡ್ ಖರೀದಿಗೆ ಖುರ್ಷಿದ್ ಕ್ವಾಲಿಟಿ ಕಂಟ್ರೋಲ್ ಟೆಸ್ಟ್ ಮಾಡುತ್ತಾನೆ, ಈ ಬ್ರೆಡ್ ಮೃದುವಾಗಿಲ್ಲ ಎಂಬ ಅಮ್ಮನ ಆಕ್ಷೇಪಕ್ಕೆ ಹೌದು ಬ್ರೆಡ್ ಮೃದುವಾಗಿಲ್ಲ, ಆಧರೆ ಧ್ವನಿ ಮಧುರ, ಮಧುರ ಎನ್ನುತ್ತಾನೆ ಖುರ್ಷಿದ್. Read the rest of this entry »
ನೂರಾರು ನೋಟದಲ್ಲಿ “ಇಲ್ ಪೋಸ್ಟಿನೊ”
ನಮ್ಮ ಅಂಕಣ “ನೂರಾರು ನೋಟ”ಇಂಥ ವಿಶಿಷ್ಟವಾದದ್ದೇ. ಇಲ್ಲಿ ಒಂದೇ ಚಿತ್ರದ ಹಲವು ನೋಟಗಳನ್ನು ಹೇಳಬಹುದು. ಇದೇ ರೀತಿಯಲ್ಲಿ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ “ಇಲ್ ಪೋಸ್ಟಿನೊ” ಚಿತ್ರದ ಬಗ್ಗೆ ದೀಪಾ ಹಿರೇಗುತ್ತಿ ಬರೆದಿದ್ದಾರೆ. ದೀಪಾ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇಂಗ್ಲಿಷ್ ಉಪನ್ಯಾಸಕಿ.
ಕವಿ ತನ್ನ ಜತೆ ಎಲ್ಲರನ್ನೂ ಬೆಳೆಸ್ತಾನೆ ಅಂತಾರೆ. ನಿರ್ದೇಶಕ ಪಾತ್ರಧಾರಿಗಳು ಎಲ್ಲರೂ ತಾವೂ ಬೆಳೀತಾ ನಮ್ಮನ್ನೂ ಬೆಳೆಸ್ತಾರೆ ಅಂತ ತೀವ್ರವಾಗಿ ಅನ್ನಿಸೋ ಹಾಗೆ ಮಾಡೋ ಚಿತ್ರ ಇಲ್ ಪೋಸ್ಟಿನೋ. ಕವಿ ಸಹ್ರದಯತೆ, ರೂಪಕಗಳು ಮುಂತಾದ ಹತ್ತು ಹಲವು ಶಬ್ಡಗಳ ಒಣಚಚೆ೯ಯಲ್ಲಿ ಕವಿತೆಯನ್ನು ದಂತಗೋಪುರ ದಲ್ಲಿ ಪ್ರತಿಷ್ಠಾಪಿಸಿ ಜನಸಾಮಾನ್ಯನಿಂದ ದೂರವೇ ಉಳಿಸುವ ಸೋ ಕಾಲ್ಡ್ ಬುದ್ಧಿಜೀವಿಗಳು ಖಂಡಿತವಾಗಲೂ ನೋಡಲೇ ಬೇಕಾದ ಸಿನೆಮಾ ಇದು. ನಾನು ಈ ಫಿಲ್ಮ್ ಅನ್ನು ಎರಡು ಸಲ ನೋಡಿದೆ. And I fell in love with the movie.

ಕತೆ ನಡೆಯುವುದು ಇಟಲಿಯ ಸುಂದರವಾದ ಪುಟ್ಟ ದ್ವೀಪವೊಂದರಲ್ಲಿ . ಅಲ್ಲಿ ಎಲ್ಲರ ಜೀವನೋಪಾಯ ಮೀನುಗಾರಿಕೆ. ನಾಯಕ Mario Ruoppolo (Massimo Troisi) ಗೆ ಈ ಸಾಂಪ್ರದಾಯಿಕ ವೃತ್ತಿ ಇಷ್ಟವಿಲ್ಲ. ಅಮೆರಿಕ ಅವಕಾಶಗಳ ದೇಶ ಎಂದೆಲ್ಲ ತಂದೆಯ ಹತ್ತಿರ ಹೇಳುತ್ತಿರುತ್ತಾನೆ ನಿಧಾನವಾಗಿ ಸೂಪ್ ಸವಿಯುತ್ತ ಮುದ್ದು ಬರಿಸುವಷ್ಟು ನಿಲಿ೯ಪ್ತನೆನಿಸುವ ಅಪ್ಪನದೋ ಮಗನ ನಿರ್ಧಾರಕ್ಕೆ ಸಮ್ಮತಿ. ಅದೇ ಸಮಯದಲ್ಲಿ ಅಲ್ಲಿನ ಅಂಚೆ ಕಛೇರಿಯಲ್ಲಿ ತಾತ್ಕಾಲಿಕ ಅಂಚೆಯವನ ಕೆಲಸದ ಜಾಹೀರಾತನ್ನು ನೋಡುತ್ತಾನೆ. ಆ ಕೆಲಸದ ಏಕೈಕ ಕಂಡಿಶನ್ ಎಂದರೆ ಸೈಕಲ್ ಇರುವವರು ಮಾತ್ರ ಅಜಿ೯ ಹಾಕಬಹುದು . ಮಾರಿಯೋಗೆ ಕೆಲಸ ಸಿಗುತ್ತದೆ.
ಅಂಚೆಕಛೇರಿಯವರು ಈ ಹುದ್ದೆ ಸ್ರಷ್ಟಿಸಲು ಕಾರಣ ಖ್ಯಾತ ಕವಿ ಪಾಬ್ಲೊನೆರೂದ. ಚಿಲಿಯ ಈ ಕವಿ ಸ್ವದೇಶದಿಂದ ಬಹಿಷ್ಕ್ರತನಾಗಿ ಇಟಲಿಯ ಈ ದ್ವೀಪಕ್ಕೆ ಪತ್ನಿ (ಅಥವಾ ಪ್ರೇಯಸಿ) ಯೊಂದಿಗೆ ಬಂದಿರುತ್ತಾನೆ. ಆತನಿಗೆ ಬರುವ ಪತ್ರಗಳನ್ನು ತಲುಪಿಸುವುದೊಂದೇ ಮಾರಿಯೋನ ಕೆಲಸ. ಮಹಿಳೆಯರಿಂದಲೇ ಜಾಸ್ತಿ ಪತ್ರಗಳು ಬರುವ ವಿಷಯವನ್ನು ಬೆರಗಿನಿಂದ ನೋಡುತ್ತಲೇ ಮಾರಿಯೋನ ನೌಕರಿ ಶುರುವಾಗುತ್ತದೆ. ಅದೇ ಬೆರಗು ನೆರೂದನ ಕವಿತೆಗಳೆಡೆಗೆ ಮಾರಿಯೋನನ್ನು ಸೆಳೆಯುತ್ತದೆ ಇವನ ಮಗುವಿನಂತಹ ಮುಗ್ಧತೆಗೆ, ನೈಜ ಕೌತುಕಕ್ಕೆ ನೆರೂದ ಕೂಡ ಸೋಲುತ್ತಾನೆ. ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಇರುವಂತಹ ನಂಟಿನಂತೆ ಒಬ್ಬತೀರ ಸಾಮಾನ್ಯ ಮಾರಿಯೋಗೂ, ವಿಶ್ವವಿಖ್ಯಾತ ಕವಿ ನೆರೂದನಿಗೂ ಸ್ನೇಹ ಬೆಳೆಯುತ್ತದೆ. ಈ ಮಧ್ಯೆ Beatrice ಎಂಬ ಹುಡುಗಿಯೊಡನೆ ಮಾರಿಯೋನ ಪ್ರೇಮ. ಅದಕ್ಕೆ ನೆರೂದನ ಸಹಾಯ. ಅವರ ಮದುವೆಯ ದಿನವೆ ನೆರೂದನ ಮೇಲಿನ ಬಹಿಷ್ಕಾರ ರದ್ದಾಗಿ ವಾಪಸಾಗುವ ಸಿಹಿಸುದ್ದಿ. ನೆರೂದ ವಾಪಾಸಾಗುತ್ತಾನೆ ಅವನಿಂದ ಯಾವ ಸುದ್ದಿಯೂ ಬರುವುದಿಲ್ಲ. ನಾಲ್ಕಾರು ವರ್ಷಗಳ ನಂತರ ನೆರೂದ ಅಲ್ಲಿಗೆ ಬಂದಾಗ ಚಿಣ್ಣನೊಬ್ಬ ಎದುರುಗೊಳ್ಳುತ್ತಾನೆ. ಅವನೇ ಪಾಬ್ಲಿಟೋ, ಮಾರಿಯೋನ ಮಗ.

ಹುಟ್ಟುವುದಕ್ಕಿಂತಲೂ ಮೊದಲೇ ಕಮ್ಯುನಿಸ್ಟ್ ತತ್ವದಿಂದ ಆಕರ್ಷಿತನಾಗಿ ಸಭೆಯೊಂದರಲ್ಲಿ ಭಾಗವಹಿಸಲು ಹೋದ ಮಾರಿಯೂ ಸತ್ತ ಸುದ್ದಿಯನ್ನುಆಕೆ ಅರಹುತ್ತಾಳೆ .ಸಮುದ್ರ ತೀರದಲ್ಲಿ ಮ್ಲಾನವದನ ನೆರೂದ ತಮ್ಮ ಸ್ನೇಹವನ್ನು ನೆನಪಿಸಿಕೊಳ್ಳುವುದರೊಂದಿಗೆ ಸಿನಿಮಾ ಮುಗಿಯುತ್ತದೆ
Technology ಜತೆಗೆ ಕಲೆಯನ್ನು ಹದವಾಗಿ ಬೆರೆಸಲು ಬಲ್ಲ ನಿರ್ದೇಶಕನ ಚಿತ್ರ ಇದು .ಈ ಕತೆಯನ್ನು ಎಲ್ಲೂ ಅಂದಗೆಡಿಸದೆ ಸಹಜವಾಗಿ ಎರಡು ಗಂಟೆ ಹೇಳಿರುವ ನಿರ್ದೇಶಕನಿಗೆ ಥ್ಯಾಂಕ್ಸ್ ಹೇಳಲೇಬೇಕು. ಅರೆಬರೆ ವಿದ್ಯಾವಂತನೂ ಮುಗ್ಧ ಹಳ್ಳಿಗನೂ ಆಗಿರುವ ಯುವಕನ ಅಭಿನಯದಲ್ಲಿ Massimo troisi ಯದು ನೂರಕ್ಕೆ ಇನ್ನೂರು ಮಾರ್ಕ್ ಕೊಡಲೇಬೇಕಾದ ನಟನೆ . ಆ ಮುಗ್ಧತೆ, ಕೌತುಕ , ನಾಚಿಕೆ , ಬೆರಗು ಎಲ್ಲವನ್ನು ಅತ್ಯಂತ ಸಹಜವಾಗಿ ನಟಿಸಿರುವ ಈ ನಟ ಆ ಪಾತ್ರವೇ ಆಗಿದ್ದಾನೆ ಸೈಕಲ್ ಇರುವವರು ಕೆಲಸಕ್ಕೆ ಬೇಕೆಂಬ ಜಾಹಿರಾತು ನೋಡಿ ಸೈಕಲ್ ಅನ್ನು ಅಂಚೆಕಚೇರಿಯ ಒಳಗೇ ತೆಗೆದುಕೊಂಡು ಹೋಗುವುದರಿಂದ ಹಿಡಿದು ಕೊನೆಯವರೆಗೂ ಅವನ ಪಾತ್ರ ನಮ್ಮನ್ನು ಕಾಡುತ್ತದೆ .
ನೆರೂದ ಮತ್ತು ಮಾರಿಯೊನ ನಡುವೆ ಸ್ನೇಹ ನವಿರಾಗಿ ಅರಳುವ ರೀತಿ ಅನನ್ಯ . ಅ ಮಹಾನ್ ಕವಿಯ ಅಟೋಗ್ರಾಫ್ ಕೇಳಲು ಕನ್ನಡಿ ಮುಂದೆ ತಾಲೀಮು ನಡೆಸುವ ಮಾರಿಯೋನನ್ನು ನೋಡಿದರೆ ಪ್ರೀತಿ ಉಕ್ಕುತ್ತದೆ ನೆರೂದನ ಕವನಗಳನ್ನು ಓದಲು ಶುರುಮಾಡುವ ಮಾರಿಯೋ ರೂಪಕ ಅಂದರೇನು ಅಂತ ಕೇಳುತ್ತಾನೆ ಅದಕ್ಕೆ ನೆರೂದ ಆಕಾಶ ಆಳ್ತಿದೆ ಅಂದ್ರೇನು ಎಂದು ಪ್ರಶ್ನಿಸುತ್ತಾನೆ ಅದಕ್ಕೆ ಮಾರಿಯೊ ಮಳೆ ಎನ್ನುತ್ತಾನೆ ನೆರೂದ ಇದೇ ರೂಪಕ ಅನ್ನುತ್ತಾನೆ ಇದಿಷ್ಟು ಸುಲಭವಾ ? ಇದಕ್ಕೆ Metaphor ಎನ್ನುವ ಕಷ್ಟದ ಹೆಸರೇಕೆ ಎಂದು ಕೇಳುವ ಮಾರಿಯೋನ ಪ್ರಶ್ನೆಯಲ್ಲಿ ಬಹಳ ಅರ್ಥಗಳಿವೆ. ಇನ್ನೊಮ್ಮೆ ಯಾವುದೋ ಕವಿತೆಯ ಅರ್ಥ ಕೇಳಿದಾಗ ನೆರೂದ ಕವಿತೆ ವಿವರಣೆಯನ್ನು ಮೀರಿದ್ದು ಎನ್ನುತ್ತಾನೆ ಮಾರಿಯೋ ತಾನು ಕವಿಯಾಗುವ ಆಸೆ ವ್ಯಕ್ತಪಡಿಸುತ್ತಾ ಮಹಿಳೆಯರು ಮುಗಿಬೀಳುತ್ತಾರಲ್ಲ ಆ ಕಾರಣಕ್ಕೆ ಎನ್ನುತ್ತಾನೆ ಪೋಸ್ಟಮ್ಯಾನ್. ಹಾಗಿರೋದೇ original ಎನ್ನುತ್ತಾನೆ ನೆರೂದ
ರೂಪಕಗಳು ಮಾರಿಯೋನನ್ನು ಹಗಲಿರುಳು ಬೆಂಬತ್ತುತ್ತವೆ ಶಬ್ದಗಳು ಸಮುದ್ರದ ಮೇಲಿನ ದೋಣಿಯಂತೆ ಹೊಯ್ದಾಡುತ್ತವೆ ಎನ್ನುತ್ತಾನೆ ಮಾರಿಯೋ. ಅರೇ, ನೀನು ರೂಪಕವನ್ನು ಸ್ರಷ್ಟಿಸಿದೆ ಎಂದು ನೆರೂದ ಹೇಳಿದಾಗ ಮಾರಿಯೋ ನಾಚುತ್ತಾನೆ ಇಡೀ ಜಗತ್ತು ಯಾವುದಕ್ಕೆ ರೂಪಕ ಎಂದು ಮಾರಿಯೋ ಪ್ರಶ್ನಿಸಿದಾಗ ನೆರೂದನೂ ತಬ್ಬಿಬ್ಬಾಗುತ್ತಾನೆ ! ಪ್ರೇಯಸಿಗೋಸ್ಕರ ನನ್ನ ಕವಿತೆ ಏಕೆ ಕದ್ದಿದ್ದು ಎಂದು ನೆರೂದ ಕೇಳಿದಾಗ ಕವಿತೆ ಬರಿಯುವವರಿಗೆ ಸೇರಿದ್ದಲ್ಲ, ಅವಶ್ಯಕತೆ ಇರುವವರಿಗೆ ಸೇರಿದ್ದು ಎಂಬ universal truth ಅನ್ನು ( ಅದರ ಅರಿವಿಲ್ಲದೆ ) ಮಾರಿಯೋ ಹೇಳುತ್ತಾನೆ. ಆಗ ನೆರೂದ ಈ democratic idea ವನ್ನು ಪ್ರಶಂಸಿಸುತ್ತೇನೆ ಎನ್ನುವ ದೃಶ್ಯ ಪರಿಣಾಮಕಾರಿ.
ದ್ವೀಪವನ್ನು ಬಿಟ್ಟು ಹೋದ ಮೇಲೆ ನೆರೂದ ಎಲ್ಲಿಯೂ ತಮ್ಮ ಹೆಸರನ್ನು ಹೇಳಲೇ ಇಲ್ಲ ಎಂದು Beatrice ಳ ಆಂಟಿ ಹೇಳುವಾಗ. ಅವನು ನಮ್ಮನ್ನು ಏಕೆ ನೆನಪಿಸಬೇಕು ? ನಮ್ಮಂತಹ ಸಾಮಾನ್ಯರನ್ನು ಸ್ನೇಹಿತರಂತೆ ಕಂಡದ್ದು ಅವನ ದೊಡ್ಡಗುಣ ಎನ್ನುವ ಮಾರಿಯೋನ ವಾಸ್ತವದ ಅರಿವು ಮತ್ತು ನೆರೂದ ನನ್ನು ಮಿಸ್ ಮಾಡಿಕೊಳ್ಳುತ್ತಲೇ ಆ ಮಾತು ಹೇಳುವ ದ್ರಶ್ಯದಲ್ಲಂತೂ Troiisi ಯ ಮುಖಭಾವ ಅದ್ಭುತ.
ಇಡೀ ಚಿತ್ರ ಒಂದು ದ್ರಶ್ಯಕಾವ್ಯ. ಪ್ರತೀ ಶಾಟ್‌ಗಳು, ಸಂಭಾಷಣೆ ಎಲ್ಲವೂ ಎಲ್ಲ್ಲೂ ಹದ ತಪ್ಪಿಲ್ಲ. ನಿನ್ನ ದ್ವೀಪದ ವಿಶೇಷತೆ ಏನು ಎಂದು ನೆರೂದ ಕೇಳಿದಾಗ Beatrice Rousseu ಎಂದು ಪೆದ್ದುಪೆದ್ದಾಗಿ ಹೇಳಿ ಮುಗುಳ್ನಗು ಹೊಮ್ಮಿಸಿದ್ದ ಪ್ಯಾರ್ ಕಾ ಮಾರಾ ಮಾರಿಯೋ ನಂತರ ಸಮುದ್ರದ ಅಲೆ ಗಾಳಿ ಹಾಗು – ನೆರೂದನ ನೆನಪಿಗೆ ಹುಟ್ಟುವ ಮುಂಚೆಯೇ ಹೆಸರಿಟ್ಟ – ಪಾಬ್ಲಿಟೋನ ಹ್ರುದಯದ ಬಡಿತವನ್ನು Record ಮಾಡುವಾಗ ಮನಸನ್ನು ಆರ್ದ್ರಗೊಳಿಸುತ್ತಾನೆ. ಕೊನೆಯಂತೂ ಇದ್ದಕ್ಕಿದ್ದಂತೆ ಎದುರಾಗುವ ಆತನ ಸಾವು ಕಣ್ಣಂಚಿನಲ್ಲಿ ನಿರೂರಿಸುತ್ತದೆ. ಚಿತ್ರದುದ್ದಕ್ಕೂ ಬೆಳೆಯುತ್ತಲೇ ಹೋದ ಮಾರಿಯೋ ಹಾಗು ಅದಕ್ಕೆ ಸಾಕ್ಷಿಯಾಗಿ ಕಣ್ಣಲ್ಲೇ ಮೆಚ್ಚುಗೆ ಸೂಸುತ್ತ ನಿಂತ ನೆರೂದನ ಪಾತ್ರಗಳು ನನ್ನನ್ನು ಕಾಡುತ್ತಲೇ ಇವೆ. ಚಿತ್ರದ ಬಗ್ಗೆ ಎಷ್ಟು ಹೇಳಿದರೂ ಸುಂದರ ಮಾಲೆಯೊಂದರಲ್ಲಿರುವ ಬಿಡಿ ಹೂಗಳನ್ನು ವರ್ಣಿಸಿದಂತೆ. ಮಾಲೆಯ ಚೆಂದ ನೋಡಲು ಚಿತ್ರವನ್ನು ನೋಡಲೇಬೇಕು !
ಮಸಕ್ಕಲಿ…ಬಗ್ಗೆ ಮತ್ತೊಂದು ಅನಿಸಿಕೆ
ಶಮ ಸಾಂಗತ್ಯ ಚಿತ್ರೋತ್ಸವದಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅವರು ಒಂದು ಸಿನಿಮಾ ಬಗ್ಗೆ ಬರೆಯುತ್ತಿರುವ ಮೊದಲನೇ ಬರಹ ಇದಂತೆ. ಹಾಗಾಗಿ ಇನ್ನಷ್ಟು ಬರಹಗಳು ಬರಲಿ ಎನ್ನುವ ಉದ್ದೇಶದಿಂದಲೇ “ಡೆಲ್ಲಿ 6′ ಸಿನಿಮಾ ಕುರಿತ ಅನಿಸಿಕೆ ಪ್ರಕಟಿಸಿದ್ದೇವೆ. ಅಭಿಪ್ರಾಯಗಳಿಗೆ ಸ್ವಾಗತ.
ಮಸಕ್ಕಲಿ..ಮಸಕ್ಕಲಿ.. ಮೌಲಾ..ಮೌಲಾ.. ದಂಥ ಹಾಡಿಲ್ಲದೇ ಹೋದಲ್ಲಿ ಇಷ್ಟು ಆಸೆಯಿಂದ ಬಂದು ಡಾಕ್ಯುಮೆಂಟರಿ ನೋಡುವುದಾಯ್ತಲ್ಲ ಎನಿಸುತ್ತಿತ್ತು.. ನಾವೂ ಮಂಗ ಆದೆವಲ್ಲ ಅನ್ನಿಸದೆ ಇರುತ್ತಿರಲಿಲ್ಲ. ಡೆಲ್ಲಿ 6 ಚಿತ್ರ ನೋಡಿ ಬಂದ ನಂತರ ಹೊಳೆದದ್ದಿಷ್ಟು…
ನಮ್ಮೆಲ್ಲರೊಳಗೂ ಒಂದು ಕರಿ ಬಂದರ್ ಇರುತ್ತೆ.. ಬೇರೆಯವರಿಗೆ ತೊಂದರೆ ಕೊಟ್ಟು ತಾನು ಖುಷಿ ಪಡುತ್ತಾ ಇರುತ್ತೆ. ಮೂಲಭೂತವಾಗಿ ನಮ್ಮೊಳಗೆ ಅಡಕವಾಗಿರುವ ಈ ಸ್ವಭಾವದ ಎಳೆಯ ಮೇಲೆ ಇಡೀ ಕಥೆ ಸಾಗುತ್ತದೆ. ಇದಕ್ಕೆ ಸಪೋಟರ್ು ಎಂಬಂತೆ ಹಿಂದೊಮ್ಮೆ ದೆಹಲಿಯಲ್ಲಿ ಆಗಿದ್ದ ಮಂಗನ ಕಾಟವನ್ನು ಇಲ್ಲೂ ಬಳಸಿಕೊಂಡಿದ್ದಾರೆ. ಅಭಿಷೇಕ್, ವಹೀದಾರಂಥ ಅಜ್ಜಿ ಮೊಮ್ಮಗ, ಅವರ ನಡುವಿನ ಅನುಪಮ ಭಾವ ಬಂಧ, ಜತೆಗೆ ಸೋನಂ ಕಪೂರ್ ಎಂಬ ಚಿನಕುರುಳಿಯನ್ನು ಆಯ್ಕೆ ಮಾಡಿಕೊಂಡು ಈ ಚಿತ್ರ ಒಂದು ಡಾಕ್ಯುಮೆಂಟರಿ ಆಗುವ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ರಾಕೇಶ್ ಮೆಹ್ರಾ. ಭಾರತೀಯ ಭಾವಸೂಕ್ಷ್ಮತೆ, ಕೋಮು ಸಂವೇದನೆ, ನಮ್ಮ ದೇಶದ ವಿಭಿನ್ನತೆ, ಜತೆಗೇ ತಳುಕು ಹಾಕಿಕೊಂಡಿರುವ ನಮ್ಮ ಸಂಸ್ಕೃತಿಯ ಅನನ್ಯತೆಗಳನ್ನು ಸುಂದರವಾಗಿ ಹೆಣೆದು ಚಂದದೊಂದು ಚಿತ್ರ ಮಾಡಿದ್ದಾರೆ.
ಅಜ್ಜಿಯ(ವಹೀದಾ) ಕೊನೆಗಾಲಕ್ಕೆ ನೆಮ್ಮದಿಗಾಗಿ ಆಕೆಯನ್ನು ಮೊಮ್ಮಗ(ಅಭಿಷೇಕ್) ದೆಹಲಿಗೆ ಕರ್ಕೊಂಡು ಬರ್ತಾನೆ. ಅವರು ಬಂದಾಗ ಇಲ್ಲಿ “ಕಾಲಾ ಬಂದರ್”ನದೇ ಕಾರುಬಾರು ನಡೆಯುತ್ತಿರುತ್ತದೆ. ಯಾರೋ ಕಿಡಿಗೇಡಿಗಳು ‘ಮಂಗ’ನ ಹೆಸರಿನಲ್ಲಿ ಜನರನ್ನು ಹೆದರಿಸುತ್ತಾ ಒಂದು ತೆರನಾದ ಮಾಸ್ ಹಿಪ್ನಾಟಿಸಂ ಸೃಷ್ಟಿ ಮಾಡಿರುತ್ತಾರೆ ಮತ್ತು ಅದೇ ಅವರ ಸಂತೋಷ. ಮೊಮ್ಮಗ ರೋಷನ್ಗೆ ಇದೆಲ್ಲಾ ಹಿಡಿಸದೆ ಮತ್ತೆ ವಿದೇಶಕ್ಕೆ ತೆರಳೋಣ ಎಂದಾಗ ಅಜ್ಜಿ ಒಪ್ಪದೆ ಆಕೆಗಾಗಿ ಇಲ್ಲೇ ಉಳಿಯುತ್ತಾನೆ. ಇದೆಲ್ಲದರ ಮಧ್ಯೆ “ಬಿಟ್ಟು”(ಸೋನಂ) ಪರಿಚಯವೂ ಆಗಿರುತ್ತದೆ ಮತ್ತು ಆಕೆ ಇವನಿಗೆ ಚೂರೂ ಮಾರುಹೋಗಿರುವುದಿಲ್ಲ!! ಟಿಪಿಕಲ್ ಭಾರತೀಯ ಮಧ್ಯಮ ವರ್ಗದ ಮನೋಭಾವದ ಅಪ್ಪನ ಮಗಳಾದ ಆಕೆಗೆ ಇಂಡಿಯನ್ ಐಡೋಲ್ ಆಗಿ ತನ್ನ ಐಡೆಂಟಿಟಿ ತೋರಿಸಿಕೊಳ್ಳುವ ಬಯಕೆಯಾದರೆ ಅವರಪ್ಪನಿಗೆ ಮಗಳ ಮದುವೆ ಮಾಡಿ ಜವಾಬ್ದಾರಿ ಕಳಕೊಳ್ಳುವ ತರಾತುರಿ.
ಈ ಸಂದರ್ಭದಲ್ಲಿ ಆಕೆಗೆ ರೋಷನ್ನೊಳಗೊಬ್ಬ ಗೆಳೆಯ ಸಿಗುತ್ತಾನೆ ಮತ್ತು ಆತನೂ ವಿಭಿನ್ನ ಮನೋಭಾವದ ಈಕೆಗೆ ಸೋಲುತ್ತಾನೆ. ಅಷ್ಟರಲ್ಲಿ ಕಾಲಾ ಬಂದರ್ ನೆಪದಲ್ಲಿ ಹಿಂದು ಮುಸ್ಲಿಂ ಗಲಾಟೆ ಪ್ರಾರಂಭವಾಗುತ್ತದೆ. ಸೌಹಾರ್ದತೆ ತರಲು ಪ್ರಯತ್ನಿಸುವ ರೋಷನ್ ಎಲ್ಲರಿಂದ ಬೈಗುಳ ತಿನ್ನುತ್ತಾನೆ. ಈಗ ಅಜ್ಜಿಗೇ ವಿದೇಶಕ್ಕೆ ಹೋಗಬೇಕೆನಿಸುತ್ತದೆ. ಆದರೆ ಪ್ರಿಯತಮೆಯೂರು ದೆಹಲಿಯ ಸೆಳೆತ ಮೊಮ್ಮಗನನ್ನು ಕಟ್ಟಿ ಹಾಕಿದೆ. ಇಷ್ಟೆಲ್ಲ ಆಗುವಾಗ ತನ್ನ ಹುಡುಗಿ ಇಂಡಿಯನ್ ಐಡೋಲ್ ಆಗುವ ಹಂಬಲದಿಂದ ಅಲ್ಲಿನ ಖತರ್ನಾಕ್ ಫೋಟೋಗ್ರಾಫರ್ ಜತೆ ಮುಂಬೈಗೆ ಓಡಿ ಹೋಗುತ್ತಾಳೆಂಬುದು ಗೊತ್ತಾಗಿ ಆತಂಕವಾಗುತ್ತದೆ.
ಈಗ ತಾನು ಕಾಲಾ ಬಂದರ್ ಸೃಷ್ಟಿಸಿದ ಭಯದ ಅಡ್ವಾಂಟೇಜ್ ತೆಗೆದುಕೊಳ್ಳ ಬಯಸಿದ ಹುಡುಗ ಮಂಗನ ವೇಷದಲ್ಲಿ ಆಕೆಯನ್ನು ತಡೆಯಲು ಹೋಗುತ್ತಾನೆ. ಅದೇ ಸಮಯದಲ್ಲಿ ಮಂಗನನ್ನು ಹುಡುಕಿಕೊಂಡು ಬಂದವರ ಕೈಗೆ ಸಿಕ್ಕಿಬಿದ್ದು ಹೊಡೆತ ತಿನ್ನುತ್ತಾನೆ. ಆ ಕ್ಷಣದವರೆಗೂ ತಮ್ಮ ತಮ್ಮಲ್ಲಿ ಹೊಡೆದಾಡುತ್ತಿದ್ದ ಎರಡೂ ಕೋಮಿನವರು ತಮ್ಮ ಜೀವದ ಪ್ರಶ್ನೆ ಬಂದಾಗ ಧರ್ಮ ಮರೆತು ಒಂದಾಗುತ್ತಾರೆ. ಜಾತಿ ಧರ್ಮ ಬೇಧ ತೋರದೆ ಎಲ್ಲರನ್ನು ಪ್ರೀತಿಸಿದವನನ್ನು ಎರಡೂ ಧರ್ಮದವರು ಸೇರಿ ಸಾಯ ಹೊಡೆಯುತ್ತಾರೆ. ಅಲ್ಲಿಗೆ ಮನದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಪ ಆರುತ್ತದೆ. ಎಲ್ಲರೂ ತಣ್ಣಗಾಗುತ್ತಾರೆ.
ಸಾವರಿಯಾದಲ್ಲಿ ನೋಡಿದಾಗ ಏನೂ ಅನಿಸದ ಹುಡುಗಿ ಸೋನಂ ಇಲ್ಲಿ ಪೂರ್ತಿಯಾಗಿ ಮನತುಂಬಿಕೊಳ್ಳುತ್ತಾಳೆ. ಅಭಿಷೇಕ್ಗೂ ಫುಲ್ ಮಾರ್ಕ್ಸ್. ಪಾರಿವಾಳ ಚಂದ..ಚಂದ.. ವಹೀದಾ ಈಗಲೂ ಸೌಂದರ್ಯವತಿ… ಕಿತ್ತಾಡುತ್ತಲೇ ಇದ್ದರೂ ಅಂತರಂಗದಲ್ಲೆಲ್ಲೋ ಸಂಬಂಧವನ್ನು ಪೋಷಿಸುತ್ತಲೇ ಬರುವ ಅಣ್ಣ ತಮ್ಮ ನಾಗಿ ಓಂಪುರಿ ಮತ್ತು ಪವನ್ ಮಲ್ಹೋತ್ರಾ, ಅಸ್ಪೃಶ್ಯಳೆನಿಸಿಕೊಂಡರೂ ಸದಾ ಮಾನವೀಯವಾಗಿ ತುಡಿಯುವ ಪಾತ್ರದಲ್ಲಿ ದಿವ್ಯಾ ದತ್ತಾ, ಫ್ಯಾಮಿಲಿ ಫ್ರೆಂಡ್ ಆಗಿದ್ದು ನಿರಂತರ ಸ್ಪಂದಿಸುತ್ತ ಅವರ ಮನೆಯವನೇ ಆಗುವ ರಿಷಿ ಕಪೂರ್, ಅತುಲ್ ಕುಲಕರ್ಣಿ ಎಲ್ಲರೂ ತಮ್ಮ ಪಾತ್ರಕ್ಕೆ ಪೂರ್ಣ ಜೀವ ತುಂಬಿದ್ದಾರೆ.
ರಂಗ್ ದೇ ಬಸಂತಿಯ ಥರಾ ಇಲ್ಲಿ ಅಬ್ಬರವಿಲ್ಲ, ಅಂಥದ್ದೊಂದು ಕೆಚ್ಚು ಹೈಲೈಟ್ ಆಗುವುದಿಲ್ಲ; ಆದರೆ ಮೌನವಾಗಿಯೇ ದೇಶವನ್ನು ಒಂದು ಮಾಡುವ ತುಡಿತವನ್ನು ಅಭಿಷೇಕ್ ಬಚ್ಚನ್ ಎಂಬ ಚಿತ್ರಿಕೆಯ ಮೂಲಕ ಹೇಳುತ್ತಾ ಸಾಗುತ್ತಾರೆ ಮೆಹ್ರಾ. ಅದ್ಭುತ ಎಂಬಂತೇನಿಲ್ಲದಿದ್ರೂ ಒಂದು ಬಾರಿ ನೋಡಬಹುದಾದ ಚಿತ್ರ. ಪುರೊಸುತ್ತ್ತು ಮಾಡಿಕೊಂಡು ಚೆಂದದ ಸೋನಂ, ಅಭಿಷೇಕ್, ಪಾರಿವಾಳ, ವಹೀದಾ ನೋಡಲಿಕ್ಕಾದರೂ ಹೋಗಿ ಬನ್ನಿ….
ಸ್ಲಂಡಾಗ್ ಮಿಲಿಯೇನರ್…

ಜಗತ್ತನ್ನು ಪ್ರೀತಿಸಲು ಕಲಿಸುವ ಸಿನಿಮಾ
ಸಾಂಗತ್ಯದ ಹೊಸ ಅಂಕಣ “ಒಂದೇ ಚಿತ್ರ : ನೂರಾರು ನೋಟ” ಕ್ಕೆ ಮಹೇಶ್ ಹೆಗಡೆ ಅವರು ಬರೆದ ಇಟಾಲಿಯನ್ ಸಿನಿಮಾ “ಇಲ್ ಪೋಸ್ಟಿನೊ” ಬಗ್ಗೆ ಚೇತನಾ ತೀರ್ಥಹಳ್ಳಿಯವರು ತಮ್ಮ ನೋಟ ಹರಿಸಿದ್ದಾರೆ. ಚೇತನಾ ಬೆಂಗಳೂರಿನಲ್ಲಿ ಪತ್ರಕರ್ತೆ. ನೀವೂ ನಿಮ್ಮ ನೋಟಗಳನ್ನು www.saangatya@gmail.com ಗೆ ಬರೆದು ಕಳುಹಿಸಿ. ಭಿನ್ನ ಭಿನ್ನ ನೋಟಗಳು ಅರಳಲಿ. 
ಇಲ್ ಪೋಸ್ಟಿನೋ ಸಿನಿಮಾ ನೋಡುವ ಮೊದಲು ಇಂಥದೊಂದು ಕಾನ್ಸೆಪ್ಟ್ ಅನ್ನು ನಾನು ಊಹಿಸಿಯೂ ಇರಲಿಲ್ಲ.
ಈ ಸಿನಿಮಾ ನೇರವಾಗಿ ನನ್ನ ತಟ್ಟಿದ್ದು ಅದರ ನಿರೂಪಣೆ ಶೈಲಿ, ನಟನೆ ಮತ್ತು ಛಾಯಾಗ್ರಹಣದಿಂದ. ಆದರೆ ನನ್ನನ್ನು ಬೆರಗಿಗೆ ತಳ್ಳಿದ್ದು, ಮನುಷ್ಯನ ಸತ್ತ್ವವನ್ನೆ ಬದಲಾಯಿಸಿಬಿಡಬಹುದಾದ ಕಾವ್ಯದ ಶಕ್ತಿಯನ್ನು ಬಿಂಬಿಸುವ ಕಥಾ ಹಂದರ.
ಸುಮ್ಮನೆ ತನ್ನ ಪಾಡಿಗೆ ತಾನು ಬೆಸ್ತನ ಮಗನಾಗಿ ಬದುಕಿಬಿಡಬಹುದಾಗಿದ್ದ ಮಾರಿಯೋ ಕವಿಯಾಗಿ ಸಾಯುತ್ತಾನಲ್ಲ, ಅದರಲ್ಲೂ ಸಮಾಜವಾದಿ ಹೋರಾಟದೊಂದಿಗೆ ಗುರುತಿಸಿಕೊಂಡು, ತನ್ನನ್ನು ತಾನು ಕಮ್ಯುನಿಸ್ಟನೆಂದು ಕರೆದುಕೊಂಡು- ಕರೆಸಿಕೊಂಡು ಬದಲಾದ ವ್ಯಕ್ತಿತ್ವದೊಂದಿಗೆ ಸಾಯ್ತಾನಲ್ಲ, ಅದಕ್ಕೆ ಮೂಲ ಕಾರಣ- ಪ್ರೇರಣೆ ಪ್ಲಾಬ್ಲೋ ನೆರೂದನೆಂಬ ಕವಿ ಮತ್ತು ಕವಿತೆ.
ಮಾರಿಯೋ ಬೆಸ್ತನ ಮಗ. ಆದರೆ ಅವನಿಗೆ ತಾನೂ ಒಬ್ಬ ಬೆಸ್ತನಾಗಲು ಇಷ್ಟವಿಲ್ಲ. ಆ ಚಿಕ್ಕ ದ್ವೀಪದಲ್ಲಿ ಮೀನುಗಾರಿಕೆಯಲ್ಲದೆ ಬೇರೆ ಬದುಕಿಲ್ಲ. ಇಂತಹ ವ್ಯಕ್ತಿಗೆ ನೆರೂದನ ಬಗ್ಗೆ ಕುತೂಹಲ, ಆಕರ್ಷಣೆ ಬೆಳೆಯುವುದು- ಆತ ‘ಪ್ರೇಮ ಕವಿ’ ‘ಮಹಿಳೆಯರ ಕಣ್ಮಣಿ’ ಎಂದು ಅವನು ಕೇಳ್ಪಟ್ಟುದರಿಂದ. ಹೀಗಾಗಿಯೇ ಮಾರಿಯೋ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು ನೆರೂಡನ ಸಹಾಯ ಬೇಡುವ ಸಾಹಸ ಮಾಡುತ್ತಾನೆ.
ಹಾಗೆಂದು ಮಾರಿಯೋ ಅರಸಿಕನೇನಲ್ಲ. ಅವನಿಗೇ ತಿಳಿಯದಂತೆ ಅವನಲ್ಲಿಯೂ ಒಂದು ಭಾವದ ಒರತೆಯಿದೆ. ನೆರೂದ ಆ ದ್ವೀಪದಲ್ಲಿದ್ದಷ್ಟೂ ಕಾಲ ಒಳಗೇ ಸುಪ್ತವಾಗಿದ್ದ ಅದು, ಅವನು ಹೊದನಂತರ ಚಿಮ್ಮತೊಡಗುತ್ತದೆ. ದಿನವೂ ನೋಡುತ್ತಿದ್ದ ಕಡಲು, ಹೂವು, ಗಾಳಿಯ ಸದ್ದು ಇವೆಲ್ಲ ಅವನಿಗೆ ಸುಂದರವಾಗಿ ಕಾಣತೊಡಗುತ್ತವೆ. ಹೀಗೆ ಅದು ಹೊರಬರುವಂತೆ ಪ್ರಚೋದಿಸುವುದು ನೆರುದನ ಅಲ್ಪ ಕಾಲದ ಸಹವಾಸ.
ಕವಿಗಳು ಸಂವೇದನಾಶೀಲರು. ಅದಕ್ಕೇ, ಎಷ್ಟೇ ಬೇಡವೆಂದುಕೊಂಡರೂ ಸಾಮಾಜಿಕ ಚಳುವಳಿ, ಹೋರಾಟಗಳೊಂದಿಗೆ ಅವರ ನಂಟು. ನೆರೂದನದೂ ಅಷ್ಟೇ. ಅವನಿಂದ ಪ್ರಭಾವಿತನಾಗಿ ‘ಕವಿ’ಯಾಗುವ ಮಾರಿಯೋನದೂ ಅಷ್ಟೇ.
ಮಾರಿಯೋಗೆ ಉಪಮೆಗಳು ಗೊತ್ತಿಲ್ಲ. ವ್ಯಾಕರಣದ ಹಂಗಿಲ್ಲ. ಅವನೊಬ್ಬ ಭಾವುಕ. ಹಾಗೆಂದೇ ಕವಿಯಾದವನು.
ರಾಜಕಾರಣದ ವಿಷಯದಲ್ಲಿಯೂ ಅಷ್ಟೇ. ಅವನ ಜಗತ್ತು ತೀರ ಚಿಕ್ಕದು. ತನ್ನನ್ನು ತಾನು ಕಮ್ಯುನಿಸ್ಟನೆಂದು ಕರೆದುಕೊಳ್ಳುವುದರಲ್ಲಿ ಅವನಿಗೆ ಖುಷಿಯಿದೆಯೇ ಹೊರತು ಅವನಿಗೆ ಅದರ ಗಂಧಗಾಳಿಯೂ ಇಲ್ಲ. ಅವನು ಕವಿತೆ ಬರೆದು, ಅದನ್ನು ನೆರೂಡನಿಗೆ ಅರ್ಪಿಸಿ ಕಮ್ಯುನಿಸ್ಟ್ ಸಮ್ಮೇಳನವೊಂದರಲ್ಲಿ ಹಾಡಲು ಹೋಗುವುದು- ಅದರಿಂದ ನೆರೂದನಿಗೆ ಬಹಳ ಸಂತೋಷವಾಗಬಹುದು ಎನ್ನುವ ಕಾರಣಕ್ಕೇ ಹೊರತು, ಚಳುವಳಿಯಲ್ಲಿ ಪಾಲ್ಗೊಳ್ಳಬೇಕೆಂಬ ಸಹಜ ಬಯಕೆಯಿಂದಲ್ಲ.
ನೆರೂದನ ಕಾವ್ಯಕ್ಕೆ ತನ್ನ ಪ್ರೇಯಸಿಯನ್ನು ಒಲಿಸಿಕೊಡುವ ತಾಕತ್ತಿದೆ! ಅದು ಮಾರಿಯೋನ ಬೆರಗು. ಆದರೆ ತಾನು ಮಾತ್ರ ಅತಿಯಗಿ ಪ್ರೀತಿಸುತ್ತಿರುವೆನೆಂದುಕೊಂಡವಳಿಗಾಗಿ ಒಂದಕ್ಷರ ಬರೆಯಲಾರ. ಇಂತಹ ಮಾರಿಯೋ ನೆರೂಡನಿಗಾಗಿ ಕವಿತೆ ಬರೆಯುತ್ತಾನೆ. ಇದು, ಆ ಕವಿಯ ಆಕರ್ಷಣೆ ಮತ್ತು ಸ್ನೇಹದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.
ಮುಗ್ಧ ಮಾರಿಯೋನ ಸ್ನೇಹವಾದರೂ ಎಂಥದ್ದು? ಆತನಿಗೆ ತನ್ನ ದ್ವೀಪದಿಂದ ತೆರಳಿದ ನೆರೂಡಾ ತನ್ನನ್ನು ನೆನೆಸಿಕೊಳ್ಳಲಿಲ್ಲವೆಂಬ ಬೇಸರವೇ ಇಲ್ಲ. ಬದಲಿಗೆ, ತನ್ನ ಜಗತ್ತನ್ನು ಮತ್ತಷ್ಟು ಸುಂದರವಾಗಿ ನೋಡಲು ಕಲಿಸಿದವನ ಬಗೆಗೆ ಗೌರವವಿದೆ. ಹಾಗೆಂದೇ ತನ್ನ ಮಗನಿಗೆ ಪ್ಲಾಬ್ಲೆಟ್ಟೋ ಎಂದು ಹೆಸರಿಡುತ್ತಾನೆ. ಈ ಸ್ನೇಹದ ಬಗ್ಗೆ ಬರೆಯುತ್ತ ಹೋದರೆ ಅದು ಮತ್ತೊಂದೇ ಲೇಖನವಾದೀತು.
ನೋಡಿದ ಇಷ್ಟು ದಿನದ ನಂತರವೂ ನೆನೆಸಿಕೊಂಡಾಗಲೆಲ್ಲ ಕಾಡುವ ಈ ಸಿನಿಮಾ, ನಾನು ಈವರೆಗೆ ನೋಡಿದ ಅತ್ಯುತ್ತಮ ಸಿನಿಮಾಗಳಲ್ಲೊಂದು.
ಹೊಸ ಅಂಕಣ : “ಒಂದೇ ಚಿತ್ರ : ನೂರಾರು ನೋಟ”
ಸಾಂಗತ್ಯ ಆರಂಭಿಸಿರುವ ಹೊಸ ಅಂಕಣ ” ಒಂದೇ ಚಿತ್ರ : ನೂರಾರು ನೋಟ”. ಸಿನಿಮಾ ಯಾವಾಗಲೂ ಅರ್ಥವಾಗುವ ಬಗೆಯೇ ಹಾಗೆ. ನಮ್ಮ ಅನುಭವದೊಂದಿಗೆ ಅದು ಬೆರೆಯುತ್ತಾ ನಮ್ಮ ಭಾವಕೋಶಕ್ಕೆ, ಮನೋವಲಯದೊಳಗೆ ಸೇರುತ್ತಾ ಹೋಗುತ್ತದೆ. ಒಬ್ಬರಿಗೆ ಒಂದು ಬಗೆಯಲ್ಲಿ ಅರ್ಥವಾದರೆ, ಮತ್ತೊಬ್ಬರಿಗೆ ಮತ್ತೊಂದು ಬಗೆಯಲ್ಲಿ. ಅದ್ಯಾವುದೂ ಒಂದರ ವಿರುದ್ಧ ಮತ್ತೊಂದಲ್ಲ. ನೂರು ನೂರು ನೋಟ. ಮಹೇಶ್ ಹೆಗಡೆ “ಇಲ್ ಪೋಸ್ಟಿನೊ” ಚಿತ್ರದ ಬಗ್ಗೆ ಬರೆದಿದ್ದಾರೆ. ಅದನ್ನು ನೀವು ವೀಕ್ಷಿಸಿದ್ದರೆ ನಿಮ್ಮ ನೋಟವನ್ನು www.saangatya@gmail.com ಗೆ ಕಳುಹಿಸಿಕೊಡಿ.





