ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ನಿಮ್ಮದೇ ಅಂಕಣ’ Category

ಅವರವರ ಸತ್ಯಗಳ ನಡುವೆ-ಬಿ.ಸುರೇಶರ ಬರಹ

with one comment

ನಿರಂಜನ್ ಕಗ್ಗೆರೆಯವರ ಬರಹದ ಹಿಂದೆಯೇ ಚಿತ್ರ ನಿರ್ದೇಶಕ ಬಿ. ಸುರೇಶರು ಬರೆದ ಬರಹವನ್ನು ಹಾಕಲಾಗಿದೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.

(ಗಿರೀಶ್ ಕಾಸರವಳ್ಳಿಯವರ “ನಾಯಿನೆರಳು’- ಒಂದು ನೋಟ)

“ಅವರವರ ಸತ್ಯ ಅವರವರಿಗೆ ಪಥ್ಯ’ ಅನ್ನುವ ಕೇಂದ್ರವನ್ನು ಇಟ್ಟುಕೊಂಡು ಕಥನವೊಂದನ್ನು ಕಟ್ಟುವ ಕೆಲಸವನ್ನು ಜಾಗತಿಕವಾಗಿ ಅನೇಕರು ಪ್ರಯತ್ನಿಸಿದ್ದಾರೆ. ಅಕಿರಾ ಕುರಾಸಾವಾನ “ರಾಷೋಮನ್’ನಂತಹ ಸಿನಿಮಾದಿಂದ ಹಿಡಿದು ಗಿರೀಶ್ ಕಾಸರವಳ್ಳಿಯವರು ಈಚೆಗೆ ಚಿತ್ರಿಸಿ, ಪ್ರಶಸ್ತಿಗಳ ಮಹಾಪೂರವನ್ನೇ ತನ್ನದಾಗಿಸಿಕೊಂಡಿರುವ “ನಾಯಿನೆರಳು’ವರೆಗೆ ಅನೇಕ ಕಥನಕಗಳು ಸಹೃದಯನ ಎದುರಿಗೆ ಈ ತತ್ವವನ್ನು ಇಟ್ಟಿವೆ. ಗಿರೀಶ್ ಕಾಸರವಳ್ಳಿಯವರ “ನಾಯಿನೆರಳು’ ನಮ್ಮೆಲ್ಲರ, ವಿಶೇಷವಾಗಿ ಸಿನಿಮಾ ಮತ್ತು ಸಾಹಿತ್ಯಾಸಕ್ತರ ಚರ್ಚೆಗೆ ಸಿಗುವುದು ವಿಭಿನ್ನ ಕಾರಣಕ್ಕೆ.

ಗಿರೀಶ್ ಕಾಸರವಳ್ಳಿಯವರು ತಯಾರಿಸುವ ಎಲ್ಲಾ ಚಿತ್ರಗಳೂ ಸಾಮಾನ್ಯವಾವಿ ಯಾವುದಾದರೂ ಒಂದು ಸಾಹಿತ್ಯ ಕೃತಿಯನ್ನ ಆಧರಿಸಿರುತ್ತವೆ. ಈ ಬಾರಿ ಚಿತ್ರ ತಯಾರಿಸಲು ಅವರು ಎಸ್.ಎಲ್.ಭೈರಪ್ಪನವರ “ನಾಯಿನೆರಳು’ ಕಾದಂಬರಿಯನ್ನ ಆಧರಿಸಿದ್ದಾರೆ. ಎಸ್.ಎಲ್.ಭೈರಪ್ಪನವರು ನಮ್ಮ ನಾಡಿನ ಅತ್ಯಂತ ಜನಪ್ರಿಯ ಮತ್ತು ಬಹುಚರ್ಚಿತ ಲೇಖಕರಲ್ಲಿ ಒಬ್ಬರು. ಅವರು ಬರೆದ ಕೃತಿಗಳು ಅನೇಕ ಭಾಷೆಗಳಿಗೆ ಅನುವಾದವಾಗಿ ಜಗತ್ತಿನಾದ್ಯಂತ ಓದುಗರನ್ನು ಪಡೆದಿವೆ. ಆದರೆ ಭೈರಪ್ಪನವರ ಕೃತಿಗಳಲ್ಲಿಯೇ ಅತ್ಯಂತ ತೆಳುವಾದ ಕೃತಿ “ನಾಯಿನೆರಳು’. ಈ ಕಾದಂಬರಿಯಲ್ಲಿ ಭೈರಪ್ಪನವರು ಪುನರ್ಜನ್ಮ ವೃತ್ತಾಂತವನ್ನು, ಕರ್ಮ ಸಿದ್ಧಾಂತವನ್ನು ಮತ್ತು ವ್ಯಕ್ತಿ ತಾನು ಮಾಡಿದ ತಪ್ಪಿಗೆ ತಾನೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂಬ ಭಾರತೀಯ ವೇದಾಂತದ ಒಂದು ಶಾಖೆಯ ವಿವರಗಳನ್ನು ಇಟ್ಟುಕೊಂಡು ಕಥನ ಹೆಣೆಯುತ್ತಾರೆ. ಆ ಕಾದಂಬರಿಯಲ್ಲಿ ಅಚ್ಚಣ್ಣಯ್ಯ ಎಂಬಾತ “ಮುನಿಯೊಬ್ಬನ ಕಮಂಡಲದಲ್ಲಿದ್ದ ಚಿನ್ನದನಾಣ್ಯವನ್ನು ಕದ್ದದ್ದೇ ತನ್ನ ಜೀವನದ ಎಲ್ಲಾ ಸಂಕಟಗಳಿಗೂ ಕಾರಣ’ ಎಂದುಕೊಳ್ಳುತ್ತಾನೆ. ಕದ್ದುದನ್ನು ಹಿಂದಿರುಗಿಸುವ ಮೂಲಕ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಹಾದಿಯಲ್ಲಿ ಅದೇ ಮುನಿಯೇ ತನ್ನ ಬೆಳೆದ ಮಗನ ಸಾವಿಗೆ ಕಾರಣ ಎಂತಲೂ, ಆ ಮಗನ ಪುನರ್ಜನ್ಮವಾಗಿರುವುದು ತನಗೆ ಬುದ್ಧಿ ಹೇಳುವುದಕ್ಕೆ ಎಂತಲೂ ಆತ ಭಾವಿಸುತ್ತಾನೆ. ಇಂತಹದೊಂದು ಕಥೆಯನ್ನು ಗಿರೀಶ್ ಕಾಸರವಳ್ಳಿಯವರಂತಹ ಸ್ತ್ರೀವಾದಿ ಚಿಂತಕರು ಹೇಗೆ ಚಿತ್ರಿಸುತ್ತಾರೆ ಮತ್ತು ಮೂಲಕಥೆಯಲ್ಲಿರುವ ಮೆಟಿರಿಯಲಿಸ್ಟಿಕ್ ವಾಸ್ತವವಾದಿಗಳು ಒಪ್ಪದ ವಿವರಗಳನ್ನು ಹೇಗೆ ದಕ್ಕಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅನೇಕರಿಗೆ ಇತ್ತು. ಜೊತೆಗೆ ಭೈರಪ್ಪನವರ ಕಾದಂಬರಿಯಲ್ಲಿ ಯಾವ ಹೆಣ್ಣು ಪಾತ್ರಕ್ಕೂ ಪ್ರಾಧಾನ್ಯ ಇಲ್ಲದೆ ಇರುವಾಗ ಗಿರೀಶರು ಹೇಗೆ ಪಿತೃಪ್ರಧಾನ ವ್ಯವಸ್ಥೆಯ ಕಥೆಯೊಂದನ್ನು ಮರುಜೋಡಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. Read the rest of this entry »

Written by saangatya

November 17, 2009 at 7:02 am

ಎಪ್ಪತ್ತರ ಬಾಲಿವುಡ್ ನ ಬಗ್ಗೆ ಒಂದಷ್ಟು ನೋಟ

with 11 comments

ನಿಮ್ಮದೇ ಅಂಕಣದಲ್ಲಿ ಪ್ರಕಟವಾಗಿರುವ “ಎಪ್ಪತ್ತರ ಬಾಲಿವುಡ್” ಬಗ್ಗೆ ಟೀನಾ ಶಶಿಕಾಂತ್ ಅವರು ಬರೆದ ಈ ಲೇಖನ ಹೊಸ ಚರ್ಚೆಯನ್ನು ಬೆಳೆಸುವಂತಿದೆ. ಇಂದಿನ ಬಾಲಿವುಡ್, ನಮ್ಮ ಸ್ಯಾಂಡಲ್ ವುಡ್ ಗಳನ್ನೆಲ್ಲಾ ಗಮನದಲ್ಲಿರಿಸಿಕೊಂಡು ಚರ್ಚೆ ನಡೆಸಬಹುದು. ನಿಮ್ಮ ಬರಹಗಳನ್ನು ಬರೆದುಕಳುಹಿಸಬಹುದು.

‘ಓಂ ಶಾಂತಿ ಓಂ’ ಈಗಾಗಲೆ ‘ಬ್ಲಾಕ್ ಬಸ್ಟರ್’ಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಶಾರುಖ್ ಖಾನನ ದೊಡ್ಡ ಕಾಲರಿನ ಚೆಕ್ಡ್ ಸೂಟುಗಳು, ಬೆಲ್ಬಾಟಂ ಪ್ಯಾಂಟುಗಳು ಮತ್ತು ಸೈಡ್ ಬರ್ನುಗಳು, ದೀಪಿಕಾಳ ಚಿತ್ರವಿಚಿತ್ರ ಬಣ್ಣಗಳ ಸಲ್ವಾರ್ ಸೂಟುಗಳು, ತಲೆಗೆ ಕಟ್ಟುವ ಸ್ಕಾರ್ಫುಗಳು ವಿಪರೀತ ಜನಪ್ರಿಯವಾಗತೊಡಗಿವೆ. ಎಪ್ಪತ್ತರ ದಶಕದ ಫ್ಯಾಶನ್ ವಾಪಾಸು ಬಂದಿದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಂದಿನ ಹದಿಹರೆಯದ ಹುಡುಗಹುಡುಗಿಯರಿಗೆ ಬಹುಶಃ ಏನೂ ಅರ್ಥವಾಗದೆ ಇರಬಹುದು. ಏನಿದು ಎಪ್ಪತ್ತರ ದಶಕ? ಏನಾಯಿತು ಆಗ? ನಿರ್ದೇಶಕಿ ಫರಾಖಾನ್ ಎಪ್ಪತ್ತರ ಬಾಲಿವುಡ್ ಅನ್ನು ಈಗ ವೈಭವೀಕರಿಸಿರುವುದು ಏಕೆ?
guddi
ಎಪ್ಪತ್ತರ ದಶಕ ಭಾರತೀಯ ಫಿಲ್ಮೀ ಜಗತ್ತಿನಲ್ಲಿ ಬಹಳ ಮುಖ್ಯವಾದ ಸಮಯ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಹೆಚ್ಚೂಕಡಮೆ ಒಂದೂವರೆ ದಶಕ ಕಳೆದುಹೋಗಿತ್ತು. ಉಪಖಂಡ ಭಾರತ, ಪಾಕಿಸ್ತಾನಗಳಾಗಿ ಒಡೆದುಹೋಗುವ ಸಮಯದಲ್ಲಿ ಲಕ್ಷೊಪಲಕ್ಷ ಜನರು ಸಾವುನೋವು ಅನುಭವಿಸಿದರು. ನೆಹರೂ ಯುಗ ಅರವತ್ತರ ದಶಕದಲ್ಲಿ ಮುಗಿದುಹೋಯಿತು. ಎಲ್ಲೆಡೆ ನಿರುದ್ಯೋಗ, ಬರ, ಬಡತನದಂಥ ಸಮಸ್ಯೆಗಳು ತಲೆಯೆತ್ತಿ ಹೆಡೆಯಾಡುತ್ತ ಇದ್ದವು. ಹೊಸ ನಾಯಕರು ರಾಜಕೀಯ ರಂಗದಲ್ಲಿ ಹೊಸಹೊಸ ಯೋಚನೆಗಳೊಡನೆ ನೆಲೆಯಾಗಲು ತೊಡಗಿದರು. ನಗರಜೀವನ ಹಾಗೂ ಮಧ್ಯಮವರ್ಗಕ್ಕೆ ಪ್ರಾಮುಖ್ಯತೆ ದೊರಕಲಾರಂಭಿಸಿತು. Read the rest of this entry »

Written by saangatya

September 21, 2009 at 10:25 am

ಅಂಚೆಯಣ್ಣ ನನ್ನನ್ನು ಕಾಡದೇ ಬಿಡಲಿಲ್ಲ !

with 3 comments

ಚೀನಾದ ದಿ ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ ಚಿತ್ರವನ್ನು ಇತ್ತೀಚೆಗೆ ನೋಡಿದ ಚೀ. ಜ. ರಾಜೀವ ತಮ್ಮ ನೋಟವನ್ನು ಹರಿಸಿದ್ದಾರೆ. ಅಂಚೆಯಣ್ಣ ಅವರೊಳಗೆ ತುಂಬಿಕೊಂಡನಂತೆ…ಓದಿ…ಹೇಳಿ.

ಸಾಮಾನ್ಯವಾಗಿ ಕಲಾತ್ಮಕ ಚಿತ್ರಗಳನ್ನು ನೋಡದೇ ಉಳಿಯುವ ಅಸಂಖ್ಯಾತ ಸಿನಿಮಾ ಪ್ರೇಮಿಗಳಲ್ಲಿ ನಾನೂ ಒಬ್ಬ. ಬೌದ್ಧಿಕವಾಗಿ ಭಾರವಾಗಿರುತ್ತವೆ; ನನ್ನಂಥ ಪಾಮರ ಸಿನಿಮಾ ವೀಕ್ಷಕನಿಗೆ ಅದು ಅರ್ಥವಾಗುವುದಿಲ್ಲ ಎಂಬುದು ನನ್ನ ಗ್ರಹಿಕೆ. ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ ಅವರ ಕೆಲವು ಚಿತ್ರಗಳನ್ನು ನೋಡಿದ ಬಳಿಕ, ನನ್ನ ಗ್ರಹಿಕೆ ಸತ್ಯ ಎನಿಸಿಬಿಟ್ಟಿದೆ.

ಇಂಥ ಪೂರ್ವಗ್ರಹವನ್ನು ಇಟ್ಟುಕೊಂಡೇ ಇತ್ತೀಚೆಗೆ ‘ದಿ ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್’ ಎಂಬ ಸಿನಿಮಾ ನೋಡಿದೆ. ಅದು ನನ್ನ ಇದುವರೆಗಿನ ಗ್ರಹಿಕೆಯನ್ನೇ ಸುಳ್ಳು ಮಾಡಿತು. ಸುಮಾರು ಒಂದೂವರೆ ಗಂಟೆಯ ಈ ಸಿನಿಮಾ- ಒಳ್ಳೆಯ ಕಾವ್ಯವೊಂದರ ಓದಿನ ಮುದ ನೀಡಿತು.postman in the mountains

ಚೀನಾದ ಪರ್ವತದ ತಪ್ಪಲಿನಲ್ಲಿರುವ ಗ್ರಾಮಗಳಿಗೆ ಅಂಚೆ ವಿತರಿಸುವ ಅಪ್ಪ; ಒಲ್ಲದ ಮನಸ್ಸಿನಿಂದಲೇ ಅಪ್ಪನ ಕಾಯಕವನ್ನು ಮುಂದುವರಿಸುವ ಆತನ ಮಗ; ಸದಾ ಅಪ್ಪನೊಂದಿಗೆ ಅಂಚೆ ವಿತರಿಸಲು ಹೋಗುತ್ತಿದ್ದ ನಾಯಿ; ಅಂಚೆ ವಿತರಿಸಲು ಹೋಗುತ್ತಿದ್ದ ತನ್ನ ಗಂಡನನ್ನು ಮೂರು ತಿಂಗಳಿಗೊಮ್ಮೆ ನೋಡುತ್ತಿದ್ದ ಗೃಹಿಣಿ- ಸೇರಿ ನಾಲ್ಕು ಪ್ರಮುಖ ಪಾತ್ರಗಳನ್ನು ಹೊಂದಿರುವ ಒಂದೂವರೆ ಗಂಟೆಯ ಸಿನಿಮಾಗೆ – ಅಪ್ಪ ಮತ್ತು ಮಗನ ನಡುವಿನ ಸಂ‘ಷಣೆಯೇ ಜೀವಾಳ. ಅದೇ ಒಂದು ಕಾವ್ಯ. ಛಾಯಾಗ್ರಾಹಣ ಕಣ್ಣಿಗೆ ಮುದ ನೀಡುತ್ತದೆ. Read the rest of this entry »

ಕನ್ನಡ ಚಿತ್ರರಂಗದ ಚರ್ಚಿಸಬಾ(ಲಾ)ರದ ಸಂಗತಿ !

with 9 comments

ಕನ್ನಡ ಚಿತ್ರರಂಗದಲ್ಲಿ ಚರ್ಚಿಸಬಾರದ, ಚರ್ಚಿಸಲಾರದ ಹಾಗೂ ಚರ್ಚಿಸಿದರೆ ವ್ಯರ್ಥ ಎನಿಸುವಷ್ಟು ಹಲವು ಸಂಗತಿಗಳಿವೆ. ಅದರಲ್ಲಿ ಇದೂ ಒಂದು ಎನ್ನುತ್ತಾರೆ ನಿರಮಿತ್ರ. ನಿಮ್ಮದೇ ಅಂಕಣದ ಈ ಲೇಖನಕ್ಕೆ ನಿಮ್ಮ ದನಿಯನ್ನೂ ಕೂಡಿಸಬಹುದು.

ಇದು ಚರ್ಚಿಸುವ ಸಂಗತಿಯಲ್ಲ ಎಂಬುದು ಎಂದೋ ನಿರ್ಧಾರವಾಗಿರುವಂಥ ಸಂಗತಿ. ಯಾಕೆಂದರೆ ಇದರೊಳಗೆ ಚರ್ಚಿಸಲು ಯಾರೂ ಬರುವುದಿಲ್ಲ ಎಂಬ ಕಾರಣವೇ ಅದರ ಹಿನ್ನೆಲೆ. ಆದರೂ ಸುಮ್ಮನೆ ಹೀಗನಸಿದ್ದನ್ನು ಬರೆಯುತ್ತಿದ್ದೇನೆ. ಎಲ್ಲರೂ ಒಪ್ಪಬಹುದು, ಒಪ್ಪದಿರಬಹುದು. ನಮ್ಮ ಚಲನಚಿತ್ರರಂಗದ ಮಹಾಶಯರೂ ಹೀಗೆ ಮೂಗು ಮುರಿದು ಸುಮ್ಮನಿರಬಹುದು.

ಇತ್ತೀಚೆಗಷ್ಟೇ ಅರ್ಚನಾ ಹೆಬ್ಬಾರ್ ಅವರು, ಇತ್ತೀಚಿನ ಚಲನಚಿತ್ರ ಗೀತ ಸಾಹಿತ್ಯದ ಕುರಿತು ಬರೆದಿದ್ದರು. ಅದರಲ್ಲಿ ಬಹುಪಾಲು ಅಂಶಗಳಿಗೆ ನನ್ನದೂ ಸಹಮತವಿದೆ. ನನ್ನ ಚರ್ಚೆಯ ಅಂಶವೂ ಆ ನೆಲೆಯಲ್ಲೇ ಹುಟ್ಟಿಕೊಂಡಿದ್ದು, ಆದರೆ ಅದು ಚಲನಚಿತ್ರದ ಗುಣಮಟ್ಟದ ಕುರಿತಾದದ್ದು.

ನನಗೆ ತೋರಿದಂತೆ ಇತ್ತೀಚೆಗೆ ಪ್ರಯೋಗಾತ್ಮಕ ನೆಲೆಯಲ್ಲಿ ಕನ್ನಡದಲ್ಲಿ ಸಿನಿಮಾ ಬಂದದ್ದೇ ಕಡಿಮೆ ಎನ್ನುವುದಕ್ಕಿಂತಲೂ ಇಲ್ಲ ಎಂದರೆ ಪರವಾಗಿಲ್ಲ. ಒಂದು ಸಂಪೂರ್ಣ ವಿಭಿನ್ನವಾದ ಚಿತ್ರಗಳನ್ನು ಕೊಟ್ಟಿದ್ದೇವೆ ಎನ್ನುವವರು ನಮ್ಮ ಎದುರಿಲ್ಲ. ಆ ಸಂಖ್ಯೆಯೂ ಕಾಣಸಿಗದು. ಒಂದುವೇಳೆ ಪ್ರಯೋಗಾತ್ಮಕ ಚಿತ್ರ ಬಂದಿದ್ದರೂ ವೃಥಾ ಶ್ರಮಿವಿಲ್ಲದೇ ಬಂದಿರಬೇಕು. ಯಾಕೆ ಹೀಗೆ ಎನ್ನುವುದೇ ತಿಳಿಯದ ಸಂಗತಿ. Read the rest of this entry »

Written by saangatya

July 13, 2009 at 9:31 am

ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ-ಸಂಗೀತದ ಅವನತಿಗೆ ನಾಂದಿಯೇ?

with 8 comments

ಅರ್ಚನಾ ಹೆಬ್ಬಾರ್ ತಮ್ಮ ಬ್ಲಾಗ್ ನಲ್ಲಿ ಬರೆದ ಈ ಲೇಖನ ಇಂದಿನ ಕನ್ನಡ ಚಿತ್ರರಂಗದ ಕುರಿತಾದದ್ದೇ. ಸಾಕಷ್ಟು ಚರ್ಚೆಗೆ ಯೋಗ್ಯವಾಗುವಂಥ ಸಂಗತಿಗಳನ್ನೇ ಇಲ್ಲಿ ಉಲ್ಲೇಖಿಸಿದ್ದಾರೆ. ಚಲನಚಿತ್ರಗಳ ಗೀತ ಸಾಹಿತ್ಯದಿಂದ ಹಿಡಿದು ಕಥಾವಸ್ತು ವರೆಗಿನ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಅಭಿಪ್ರಾಯಿಸುವ ಮೂಲಕ ಸಂವಾದವನ್ನು ಮುಂದುವರಿಸಬಹುದು.

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್  ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ‘ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.


ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )…ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ. ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು. Read the rest of this entry »

ಒಂದು ಚಿತ್ರ ನೋಡುವುದಾದರೂ ಹೇಗೆ ? ಯಾವ ರೀತಿ ?

with 4 comments

ಈ ಅಂಕಣದ ಹೆಸರೇ “ನಿಮ್ಮದೇ ಅಂಕಣ”. ಸಿನಿಮಾ, ಸಿನಿಮಾದ ಬಗೆಗಿನ ಅನುಭವ, ಸಿನಿಮಾ ಗ್ರಹಿಕೆ ಕುರಿತ ಅನಿಸಿಕೆ-ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಅತಿಥಿ ಅಂಕಣ. ಪ್ರತಿ ಬುಧವಾರ ಪ್ರಕಟವಾಗುವ ಈ ಅಂಕಣಕ್ಕೆ ಎಲ್ಲರಿಗೂ ಮುಕ್ತ-ಮುಕ್ತ-ಮುಕ್ತ. ನಿಮ್ಮ ಲೇಖನಗಳನ್ನು saangatya@gmail.com ಗೆ ಕಳಿಸಿ. ಅಂದ ಹಾಗೆ ಈ ವಾರ ಅತಿಥಿಯೊಬ್ಬರು ಬರೆದ ಲೇಖನ ಪ್ರಕಟಿಸಲಾಗಿದೆ.

ಒಂದು ಚಿತ್ರ ನೋಡುವುದೆಂದರೆ ಹೇಗೆ ? ಯಾವ ರೀತಿ?
ಈ ಪ್ರಶ್ನೆಯನ್ನು ಇಟ್ಟುಕೊಂಡು ಹಲವು ದಿನಗಳಿಂದ ಉತ್ತರ ಹುಡುಕುತ್ತಿದ್ದೇನೆ. ನನಗೆ ಚಿತ್ರ ನೋಡುವ ಹುಚ್ಚು ಶುರುವಾಗಿದ್ದು ಇತ್ತೀಚೆಗೆ ಅಂದರೆ ನಾಲ್ಕೈದು ವರ್ಷಗಳಿಂದ. ಎಲ್ಲೋ ನೋಡಿದ ಒಂದು ಸಿನಿಮಾ (ಅದರ ಹಿಂದೆ ನೋಡುತ್ತಿಲ್ಲ ಎಂದಲ್ಲ ; ಸಿನಿಮಾ ಅರ್ಥವಾಗುತ್ತಿರಲಿಲ್ಲವೇನೋ) ನನ್ನನ್ನು ತೀವ್ರವಾಗಿ ಕಾಡಿಸಿತು. ಅದೆಂದರೆ “ಚಿಲ್ಡ್ರನ್ ಆಫ್ ಹೆವನ್’.

ಕ್ರಮೇಣ ನಾನು ಸಿನಿಮಾದೊಳಗಿನ ವರ್ತುಲಕ್ಕೆ ಸಿಲುಕಿದೆ. ಆದರೆ, ಅಂದಿನಿಂದ ಆರಂಭವಾದ ಈ ಚಿತ್ರ ಭಾಷೆಯನ್ನು ಅರಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆದೇ ಇದೆ, ನಿಂತಿಲ್ಲ.

ಚಿತ್ರ : ಪ್ರವೀಣ್ ಬಣಗಿ

ಚಿತ್ರ : ಪ್ರವೀಣ್ ಬಣಗಿ


ನನ್ನ ಅನುಮಾನ ಆರಂಭವಾಗುವುದು ಇಲ್ಲೇ. ಒಂದು ಸಿನಿಮಾದೊಳಗೆ ನಾನು ಪೂರ್ವಸಜ್ಜಿತನಾಗಿ ಒಳಗೊಳ್ಳಬೇಕೋ ? ಅಥವಾ ಆ ಸಿನಿಮಾವೇ ನಮ್ಮೊಳಗೆ ಇಣುಕುತ್ತದೋ ಎಂಬುದು. ಈ ಮಾತು ಹೇಳಲಿಕ್ಕೆ ನನ್ನೊಳಗಿನ ಅನುಮಾನವೇ ಕಾರಣ. ಎಷ್ಟೋ ಬಾರಿ, ಹೊಸದಾಗಿ ತಂದ ಡಿವಿಡಿ ಗಳನ್ನು ನೋಡುವ ಮುನ್ನ ಇಂಟರ್ ನೆಟ್‌ನಲ್ಲಿ ಅ ಬಗೆಗಿನ ಮಾಹಿತಿಗಳನ್ನೆಲ್ಲಾ ಓದಿ ಸಿನಿಮಾ ನೋಡುವುದು ನನ್ನ ಚಾಳಿಯಾಗಿತ್ತು. ಅದೊಂದು ಥರ ಪೂರ್ವ ಸಿದ್ಧತೆ. ಆಗ ಸಿನಿಮಾ ಹೆಚ್ಚು ಅರ್ಥವಾಗಬಹುದು ಎಂಬುದು ನನ್ನ ಲೆಕ್ಕಾಚಾರವಾಗಿತ್ತು. Read the rest of this entry »